ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಮ್ಮಿ

ವಿಕಿಸೋರ್ಸ್ದಿಂದ

ನಿಮ್ಮಿ ಹಿಂದಿ ಚಿತ್ರರಂಗದ ನಟಿ. ಆಗ್ರಾದಲ್ಲಿ ಗಾಯಕಿಯಾಗಿದ್ದ ಈಕೆಯ ಮೊದಲ ಹೆಸರು ನವಾಬ್ ಬೇಗಂ. 1949ರಲ್ಲಿ ರಾಜಕಪೂರನ ಬರಸಾತ್ ಚಿತ್ರದಲ್ಲಿ ಮೊದಲು ಕಾಣಿಸಿಕೊಂಡು ಪ್ರಥಮ ಚಿತ್ರದಿಂದಲೇ ಪ್ರಸಿದ್ಧಳಾದಳು. ರಾಜಮಕುಟ ಚಿತ್ರದಲ್ಲಿ ನಾನೂಭಾಯಿ ವಕೀಲ್ ಹಾಗೂ ಬೇದರ್ದ್ ಚಿತ್ರದಲ್ಲಿ ಕಿದಾರ್ ಶರ್ಮರಂಥ ಖ್ಯಾತ ನಿರ್ದೇಶಕರ ನೇತೃತ್ವದಲ್ಲಿ ಅಭಿನಯಿಸಿದಳು. ಶಹೀದ್ ಲತೀಫರ ಬುಜ್ ದಿಲ್ (1951) ಇವಳ ತಾರಾಜೀವನದ ಒಂದು ಮೈಲಿಗಲ್ಲು. ಶಕ್ತ ಅಭಿನಯಕಾರ ದಿಲೀಪ್ ಕುಮಾರ್‍ನೊಂದಿಗೆ ಇವಳೂ ನಟಿಸಿದ ಐದು ಚಿತ್ರಗಳು-ದೀದಾರ್ (1951) ಆನ್ (1952), ದಾಗ್ (1952), ಅಮರ್ (1954) ಹಾಗೂ ಉರನ್ ಖಟೋಲ (1955)-ಭಾರತೀಯ ಚಿತ್ರಾಭಿನಯ ಇತಿಹಾಸದಲ್ಲಿನ ಉಜ್ಜ್ವಲ ನಕ್ಷತ್ರಗಳು. ದೇವಾನಂದ್ ಜೊತೆಯ ಅಬ್‍ಶರ್(1953) ಹಾಗೂ ರಾಜಕುಮಾರ್ ಜೊತೆಯ ಮೆಹಮಾನ್ (1953) ಚಿತ್ರಗಳೂ ಸ್ಮರಣೀಯ. ಮೆಹಬೂಬ್‍ಖಾನರ ಆನ್‍ನಲ್ಲಿ ಇವಳ ಅಭಿನಯವನ್ನು ಕಂಡು ಅನೇಕ ವಿದೇಶಿ ಚಿತ್ರ ನಿರ್ಮಾಪಕರಿಂದ ನಿಮ್ಮಿಗೆ ಕರೆ ಬಂದಿತು.

ಸಿನಿಮಾ ಅಭಿನಯ ಕಲೆಯನ್ನು ಪ್ರಬುದ್ಧ ಮಟ್ಟಕ್ಕೇರಿಸಿದ ಕೆಲವೇ ನಟಿಯರಲ್ಲಿ ಒಬ್ಬಳಾದ ಇವಳದು ಯಾವ ಪಾತ್ರವನ್ನಾದರೂ ಲೀಲಾಜಾಲವಾಗಿ ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವ ಕೌಶಲ. ಹೆಸರಾಂತ ನಟನಟಿಯರೊಂದಿಗೆ ನಟಿಸುವಾಗ ಅವರನ್ನು ಮೀರಿಸುವ ಪ್ರತಿಭೆಯಿದ್ದ ಇವಳಿಗೆ ಇದೇ ಮುಳುವಾಯಿತು. ದೀದಾರ್‍ನಲ್ಲಿ (1951) ನರ್ಗಿಸಳಿಗೆ, ಚಾರ್‍ದಿಲ್ ಚಾರ್ ರಾಹೇಂನಲ್ಲಿ (1959) ಮೀನಾಕುಮಾರಿಗೆ ಅಮರ್‍ನಲ್ಲಿ (1954)ಮಧುಬಾಲಾ ಹಾಗೂ ದಿಲೀಪ್‍ಕುಮಾರ್‍ರಿಗೆ ಒಂದು ಕೈ ಮೇಲಾಗಿ ನಟಿಸಿದಳು. ನಟಪ್ರಾಮುಖ್ಯದ ಚಿತ್ರರಂಗದಲ್ಲಿ ವೃತ್ತಿದೋಷವೂ ಕಾರಣವಾಗಿ ಮಧ್ಯಮದರ್ಜೆಯ ಚಿತ್ರಗಳೇ ಇವಳ ಪಾಲಿಗೆ ಬರತೊಡಗಿದವು.

ದಕ್ಷಿಣ ಭಾರತದಿಂದ ನಿರ್ಮಾಣವಾದ ಕೆಲವು ಹಿಂದಿ ಚಿತ್ರಗಳಲ್ಲಿಯೂ ಈಕೆ ಅಭಿನಯಿಸಿದ್ದಾಳೆ. ನಾಯಕಿ ಪಾತ್ರದಲ್ಲಿ ಈಕೆ ಕಾಣಿಸಿಕೊಂಡ ಕಡೆಯ ಚಿತ್ರ ಅಂಗುಲೀಮಾಲ (1960). ಅರವತ್ತರ ದಶಕದಲ್ಲಿ ಎರಡನೆಯ ಸ್ಥಾನದ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಉತ್ತಮ ಅಭಿನಯವನ್ನೇ ನೀಡುತ್ತಿದ್ದಳು. ಮೇರೆ ಮೆಹಬೂಬ್(1963) ಇತ್ಯಾದಿ -1965ರಲ್ಲಿ ತೆರೆಕಂಡ ಆಕಾಶ್‍ದೀಪ್ ಇವಳ ಕೊನೆಯ ಚಿತ್ರ. ಅಪಾರ ಪ್ರಚಾರವನ್ನು ಪಡೆದುಕೊಂಡ ಇವಳ ಚಿತ್ರವೆಂದರೆ ಕೆ.ಅಸೀಫರು ಚಿತ್ರೀಕರಿಸಲು ಆರಂಭಿಸಿದ್ದು ಅಪೂರ್ಣವಾಗಿರುವ ಲವ್ ಅಂಡ್ ಗಾಡ್. ಈ ಚಿತ್ರದಲ್ಲಿ ಇವಳು ಲೈಲಾಳ ಪಾತ್ರವನ್ನು ವಹಿಸಿದ್ದಳು.

ತನ್ನ 16 ವರ್ಷಗಳ ತಾರಾಜೀವನದಲ್ಲಿ 44 ಚಿತ್ರಗಳಲ್ಲಿ ಈಕೆ ಅಭಿನಯಿಸಿದ್ದಾಳೆ. ಇವಳ ಇತರ ಮುಖ್ಯ ಚಿತ್ರಗಳೆಂದರೆ: ಜಲ್ತೆ ದೀಪ್(1950), ಸಾಜಾ (1951), ಆಂಧಿಯಾ (1952), ಕಸ್ತೂರಿ (1954), ಕುಂದನ್ ಜಾರ್ ಸೊಸೈಟಿ (1955), ಬಸಂತ ಬಜಾರ್ (1956), ಭಾಯಿ ಭಾಯಿ (1956), ಅಂಜಲಿ (1957), ಸೋನಿ ಮಹೀವಾಲ್ (1958), ಶಾಮ (1961). (ಎಸ್.ಎಸ್.ಎಂಯು.)