ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಮ್ಮಿದುಳು

ವಿಕಿಸೋರ್ಸ್ದಿಂದ

ನಿಮ್ಮಿದುಳು ಕೇಂದ್ರ ನರಮಂಡಲದಲ್ಲಿ ಒಂದು ಮುಖ್ಯ ಭಾಗ; ಪರ್ಯಾಯ ನಾಮ ಉಪಮಿದುಳು ಉಪಮಸ್ತಿಷ್ಕವೆಂಬ ಹೆಸರೂ ಉಂಟು (ಸೆರಿಬೆಲ್ಲಮ್). ತಲೆಬುರುಡೆಯ ಒಳಗೆ ಇದರ ನೆಲೆ. ಪ್ರಥಮತಃ ಐಚ್ಛಿಕಸ್ನಾಯುಗಳ ಚಟುವಟಿಕೆಗಳನ್ನು ಅವುಗಳ ಉದ್ದೇಶ ಕೈಗೂಡುವಂತೆ ಸಂಘಟಿಸುವ ಅಂಗವಿದು. ಇಂಥ ಅನುಕಲನಕ್ರಿಯೆ ಜಟಿಲವಾದದ್ದು. ಅದನ್ನು ನಿಮ್ಮಿದುಳು ಅತಿ ದಕ್ಷತೆಯಿಂದ ನಿರ್ವಹಿಸುವುದು. ಆದರ್ಶಗಣಕಕ್ಕೆ ಇದನ್ನು ಹೋಲಿಸಬಹುದು. ನಿಮ್ಮಿದುಳು ತಲೆಬುರುಡೆಯ ಹಿಂಭಾಗದಲ್ಲಿ ಮಿದುಳಿನ (ಸೆರಿಬ್ರಮ್ ಇದನ್ನು ಮಹಾಮಸ್ತಿಷ್ಕ ಎಂತಲೂ ಕರೆಯುತ್ತಾರೆ) ಹಿಂಭಾಗದ ಕೆಳಗೆ ಇದ್ದು ಮಿದುಳು ಕಾಂಡದ (ಬ್ರೆಯ್ನ್‍ಸ್ಟೆಮ್) ಬೆನ್ನೇರಿ ಕುಳಿತಂತೆ ಕಾಣುತ್ತದೆ. ವರ್ಮಿಸ್ (ಅಂದರೆ ಹುಳುವಿನ ಆಕಾರದ್ದು) ಎಂಬ ಇದರ ಮಧ್ಯಭಾಗ ಎರಡೂ ಬದಿಗೆ ಇರುವ ಅರ್ಧಗೋಳಗಳನ್ನು ಜೋಡಿಸುತ್ತದೆ.

ನಿಮ್ಮಿದುಳಿನ ಒಳಗೆ ಟಿಸಿಲೊಡೆದಂತೆ ಕಾಣುವ ಬಿಳಿದ್ರವ್ಯದ (ವೈಟ್ ಮ್ಯಾಟರ್) ತಿರುಳೂ ಇದನ್ನು ಆವರಿಸಿ ನಿಮ್ಮಿದುಳಿನ ಮೇಲ್ಮೈಯಾಗಿ ಬೂದುಬಣ್ಣದ ದ್ರವ್ಯದ (ಗ್ರೇಮ್ಯಾಟರ್) ರಗಟೆಯೂ (ಕಾರ್ಟೆಕ್ಸ್) ಇವೆ. ಬಿಳಿದ್ರವ್ಯದ ಆಳದಲ್ಲಿ ಎಡ ಬಲ ಒಂದೊಂದು ಕಡೆಯೂ ಬೂದು ಬಣ್ಣದ ದ್ರವ್ಯದಿಂದಾದ ನಾಲ್ಕು ಆಳನರಕೋಶ ಕೇಂದ್ರಗಳುಂಟು (ಡೀಪ್ ನ್ಯೂಕ್ಲಿಯೈ). ಬಿಳಿದ್ರವ್ಯದ ತಿರುಳು ನಿಮ್ಮಿದುಳಿನ ಬೇರೆ ಬೇರೆ ಭಾಗಗಳ ನಡುವೆ ಹಾಗೂ ಕೇಂದ್ರ ನರಮಂಡಲದ ಇನ್ನಿತರ ಭಾಗಗಳ ನಡುವೆ ಸಂಪರ್ಕ ಸಾಧಿಸುವ ನರತಂತುಗಳಿಂದ ಕೂಡಿದೆ. ನಿಮ್ಮಿದುಳಿನ ಮೇಲ್ಮೈಯಲ್ಲಿ ಕ್ರಮಬದ್ಧವಾದ ಮತ್ತು ಬಲುಮಟ್ಟಿಗೆ ಸಮಾಂತರವಾದ ಬಾಗಿದ ಮಡಿಕೆಗಳಿವೆ. ಈ ತೆರನಾದ ರಚನೆಯಿಂದ ಇದರ ಮೇಲ್ಮೈ ಸಲೆ ಅತಿಯಾಗಿ ವಿಸ್ತರಿಸಿದಂತಾಗಿದೆ. ನಿಮ್ಮಿದುಳಿನ ತೂಕ ಮಹಾಮಸ್ತಿಷ್ಕದ ತೂಕದ ಕೇವಲ 0.1ರಷ್ಟಿದ್ದರೂ ಅದರ ಮೇಲ್ಮೈ ಸಲೆ ಮಹಾಮಸ್ತಿಷ್ಕದ ಮೇಲ್ಮೈ ಸಲೆಯ 0.75ರಷ್ಟಿದೆ.

ಚಿತ್ರ-1

ನಿಮ್ಮಿದುಳನ್ನು ವರ್ಣನೆಯ ಸಲುವಾಗಿ ಬಗೆಬಗೆಯಾಗಿ ವಿಂಗಡಿಸಿದೆ. ಸ್ಥೂಲ ರಚನೆಗೆ ಅನುಸಾರವಾಗಿ ಇವು ಮುಂದಿನ, ನಡುವಿನ ಮತ್ತು ಹಿಂದಿನ ಹಾಲೆಗಳು (ಲೋಬ್ಸ್). ಪ್ರತಿಹಾಲೆಯೂ ಹಲವಾರು ಕಿರುಹಾಲೆಗಳಿಂದ (ಲಾಬ್ಯೂಲ್ಸ್) ಕೂಡಿದೆ. ಜೀವವಿಕಾಸದ ಇತಿಹಾಸಕ್ಕೆ ಅನುಗುಣವಾಗಿ ನಿಮ್ಮಿದುಳನ್ನು ಪುರಾತನ ಉಪಮಸ್ತಿಷ್ಕ (ಆರ್ಕಿ-), ಪೂರ್ವಿಕ ಉಪಮಸ್ತಿಷ್ಕ (ಪೇಲಿಯೊ-) ಹಾಗೂ ನವೀನ ಉಪಮಸ್ತಿಷ್ಕ (ನಿಯೋ-ಸೆರಿಬೆಲ್ಲಮ್) ಎಂಬ ಭಾಗಗಳಾಗಿ ವಿಭಾಗಿಸಿದೆ. ಕ್ರಿಯಾತ್ಮಕ ಸಂಪರ್ಕಗಳಿಗೆ ಅನುಸಾರವಾಗಿ ಮಧ್ಯಭಾಗ (ವರ್ಮಿಸ್), ಮಧ್ಯಾಂತರ ಭಾಗ (ಪಾರ್ಸ್ ಇಂಟರ್‍ಮೀಡಿಯ) ಮತ್ತು ಪಾಶ್ರ್ವಭಾಗ (ಪಾರ್ಸ್ ಲ್ಯಾಟರಾಲಿಸ್) ಎಂಬುದಾಗಿ ಗುರುತಿಸಿದೆ.

ನಿಮ್ಮಿದುಳು ಇಕ್ಕೆಲಗಳಲ್ಲಿಯೂ ಮೂರು ವೃಂತಗಳ (ಪಿಡನ್‍ಕಲ್ಸ್) ಮಿದುಳಿನ ಇತರ ಭಾಗಗಳಿಗೆ ಜೋಡಿಕೊಂಡಿದೆ. ಮೇಲಿನ (ಸುಪೀರಿಯರ್), ನಡುವಿನ (ಮಿಡ್ಲ್) ಹಾಗೂ ಕೆಳಗಿನ (ಇನ್‍ಫೀರಿಯರ್) ವೃಂತಗಳೆಂದು ಇವುಗಳ ಹೆಸರು. ನಿಮ್ಮಿದುಳಿಗೆ ಮಿದುಳು ಕಾಂಡದ ಮೂಲಕ ಮಿದುಳುಬಳ್ಳಿಯೊಡನೆಯೂ (ಸ್ಪೈನಲ್ ಕಾರ್ಡ್) ಸಂಪರ್ಕ ಉಂಟು.

ಚಿತ್ರ-2

ನಿಮ್ಮಿದುಳಿನ ರಗಟೆಯ ನರಕೋಶ ರಚನೆ: ಮಹಾಮಸ್ತಿಷ್ಕದ ರಚನೆಗೆ ವ್ಯತಿರಿಕ್ತವಾಗಿ ನಿಮ್ಮಿದುಳಿನ ರಗಟೆಗೆ ಗಣಕದಂತೆ ಜ್ಯಾಮಿತೀಯ ನಿಖರತೆಯುಳ್ಳ ಏಕಪ್ರಕಾರದ ರಚನೆ ಉಂಟು. ಇದರಲ್ಲಿ ಐದು ಬಗೆಯ ನರಕೋಶಗಳು ಮೂರು ಪದರಗಳಾಗಿ ಕ್ರಮಬದ್ಧವಾಗಿ ಅಣಿಗೊಳಿಸಲ್ಪಟ್ಟಿವೆ. ಹೊಪದರ ನಕ್ಷತ್ರಾಕಾರದ (ಸ್ಟೆಲ್ಲೇಟ್) ಮತ್ತು ಕುಕ್ಕೆಯಂಥ (ಬ್ಯಾಸ್ಕೆಟ್ ಸೆಲ್ಸ್) ನರಕೋಶಗಳನ್ನು ಒಳಗೊಂಡಿದೆ. ಒಳಪದರದಲ್ಲಿ ರವೆಕೋಶಗಳೂ (ಗ್ರ್ಯಾನ್ಯೂಲ್ ಸೆಲ್ಸ್) ಗಾಲ್ಗಿಯ ಕೋಶಗಳೂ ಇವೆ. ಇವೆರಡರ ನಡುವೆ ಪುರ್ಕಿನ್ಯೆ ಕೋಶಗಳ ಏಕಕೋಶಿಕ ನಡುಪದರವಿದೆ. ಮಾನವನ ನಿಮ್ಮಿದುಳಿನ ರಗಟೆಯಲ್ಲಿ ಸುಮಾರು 3,000 ಕೋಟಿ ರವೆಕೋಶಗಳೂ 20 ಕೋಟಿ ನಕ್ಷತ್ರಾಕಾರ ಮತ್ತು ಕುಕ್ಕೆ ಕೋಶಗಳೂ 3 ಕೋಟಿ ಪುರ್ಕಿನ್ಯೆ ಕೋಶಗಳು ಇವೆ ಎಂದು ಅಂದಾಜು.

ದೇಹದ ವಿವಿಧ ಭಾಗಗಳ ಸ್ನಾಯು, ಸ್ನಾಯುಹುರಿ (ಟೆಂಡನ್) ಮತ್ತು ಕೀಲುಗಳಲ್ಲಿರುವ ಜ್ಞಾನಗ್ರಾಹಿಗಳಿಂದ (ಸೆನ್ಸರಿ ರಿಸೆಪ್ಟರ್ಸ್) ಮತ್ತು ತ್ವಚೆ, ಚಕ್ಷು ಹಾಗೂ ಕರ್ಣ ಅಭಿಗ್ರಾಹಕಗಳಿಂದ ಒಳಕಿವಿಯ ನಡುವಿನ (ವೆಸ್ಟಿಬ್ಯೂಲ್) ಉಪಕರಣದಿಂದ ಮತ್ತು ಇತರ ಒಳಾಂಗ ಅಭಿಗ್ರಾಹಕಗಳಿಂದ ನರತಂತುಗಳು ಅನೇಕ ನರಪಥಗಳ ಮೂಲಕ ನಿಮ್ಮಿದುಳನ್ನು ತಲಪುತ್ತವೆ. ಇವುಗಳಿಂದ ದೇಹದ ಸ್ಥಾನವಿನ್ಯಾಸ, ಅಂಗಾಂಗಗಳ ಸ್ಥಿತಿ, ಅವುಗಳ ಪರಸ್ಪರ ಹಾಗೂ ಪರಿಸರದೊಡನೆ ಅವಕ್ಕೆ ಇರುವ ಸಂಬಂಧ ಮತ್ತು ಪ್ರಸ್ತುತ ನಡೆಯುತ್ತಿರುವ ಚಲನೆಗಳ ಬಗೆಗಿನ ವಿವರಗಳೂ ನಿಮ್ಮಿದುಳಿಗೆ ದೊರೆಯುವಂತಾಗಿದೆ. ಅಲ್ಲದೆ ಮಹಾಮಸ್ತಿಷ್ಕದ ಚಾಲಕರಗಟೆಯಿಂದ (ಮೋಟರ್ ಕಾರ್ಟೆಕ್ಸ್) ಚಾಲಕನರಗಳ ಮುಖಾಂತರ ಐಚ್ಛಿಕ ಸ್ನಾಯುಗಳಿಗೆ ತಲಪುವ ಆದೇಶದ ವಿವರಗಳೂ ನರಸೇತುವೆ ಹಾಗೂ ಕೆಳಗಿನ ಆಲಿವರಿ ನರಕೇಂದ್ರಗಳ ಮೂಲಕ ಹಾಯುವ ಅದೇ ನರಗಳ ಕವಲುಗಳ ಮುಖಾಂತರ ನಿಮ್ಮಿದುಳಿನ ಹೆಚ್ಚಿನ ಭಾಗಗಳಿಗೆ ತಲುಪುತ್ತದೆ. ಈ ಎಲ್ಲ ವಿವರಗಳ ಪರಿಜ್ಞಾನ ಸಂಗ್ರಹಣೆ ಹಾಗೂ ವಿಶ್ಲೇಷಣೆಗಳು ಚಲನನಿಯಂತ್ರಣೆಗೆ ಅಗತ್ಯವಾದ ಆಧಾರಗಳಾಗಿದ್ದು ಅಂತಿಮವಾಗಿ ಐಚ್ಛಿಕ ಚಲನ ನಿಯಂತ್ರಣ ಪ್ರೇರಣೆಗಳು ನಿಮ್ಮಿದುಳಿನ ಪುರ್ಕಿನ್ಯೆ ಕೋಶಗಳಲ್ಲಿ ಉದ್ಭವಿಸುತ್ತವೆ.

ನಿಮ್ಮಿದುಳಿನ ಪುರಾತನ ಭಾಗದಲ್ಲಿ ಉದ್ಭವವಾದ ಪ್ರೇರಣೆಗಳು ನೇರವಾಗಿ ಒಳಕಿವಿ ನಡುವಿನ ನರಕೋಶ ಕೇಂದ್ರಗಳಿಗೆ ಒಯ್ಯಲ್ಪಡುತ್ತವೆ.

ಚಿತ್ರ-3

ಉಳಿದ ಭಾಗಗಳಿಂದ ಉದ್ಭವವಾದವು ಮೊದಲು ಆಳ ನರಕೋಶ ಕೇಂದ್ರಗಳಿಗೆ ಒಯ್ಯಲ್ಪಟ್ಟು ಅಲ್ಲಿಂದ ಮುಂದೆ ಒಳಕಿವಿ ನಡುವಿನ ನರಕೇಂದ್ರ, ಮಿದುಳುಕಾಂಡದ ಜಾಲಂದ್ರರಚನೆ (ರೆಟಿಕ್ಯುಲರ್ ಫಾರ್ಮೇಶನ್) ಕೆಂಬಣ್ಣ ನರಕೇಂದ್ರ (ರೆಡ್ ನ್ಯೂಕ್ಲಿಯಸ್) ಇವುಗಳ ಮೂಲಕ ಮಿದುಳುಬಳ್ಳಿಯಲ್ಲಿರುವ ಚಾಲಕ ನರಕೋಶಗಳನ್ನು ತಲಪಿ ಕೊನೆಗೆ ದೇಹದ ಎಲ್ಲ ಐಚ್ಛಿಕ ಸ್ನಾಯುಗಳಿಗೂ ಸಾಗಿಸಲ್ಪಡುತ್ತದೆ. ಅಲ್ಲದೆ ತೆಲಮಸ್ಸಿನ ಮೂಲಕ ಈ ಪ್ರೇರಣೆಗಳು ಮಹಾಮಸ್ತಿಷ್ಕದ ಚಾಲಕರಗಟೆಯನ್ನೂ ತಲಪುವುವು.

ಈ ವಿವರಣೆಗಳಿಂದ ನಿಮ್ಮಿದುಳೂ ಮತ್ತು ಕೇಂದ್ರನರಮಂಡಲದ ಇತರ ಭಾಗಗಳ ನಡುವೆ ಒಂದರಿಂದೊಂದಕ್ಕೆ ಸುತ್ತಿಬರುವ ಮಂಡಲ (ಸಕ್ರ್ಯೂಟ್) ಏನೆಂಬುದು ವ್ಯಕ್ತವಾಗುವುದು. ಮಹಾಮಸ್ತಿಷ್ಕದೊಡನೆ ಇರುವ ಸಂಪರ್ಕದ ಮೂಲಕ ಸಂಕಲ್ಪಿಸಿದ ಚಲನೆಗಾಗಿ ಚಾಲಕರಗಟೆಯಿಂದ ಹೊರಟ ಆಜ್ಞೆಗಳ ವಿವರ ನಿಮ್ಮಿದುಳಿಗೆ ಬರುತ್ತದೆ. ಇದೇ ಆಜ್ಞೆಯಂತೆ ಪ್ರಸ್ತುತ ವಿಕಸಿತವಾಗುತ್ತಿರುವ ಚಲನೆಯ ವಿವರ ನಿಮ್ಮಿದುಳಿಗೆ ಮಿದುಳುಬಳ್ಳಿಯೊಡನೆ ಇರುವ ಸಂಪರ್ಕದ ಮೂಲಕ ಒದಗುತ್ತದೆ. ವಿಕಸಿಸುತ್ತಿರುವ ಚಲನೆಯನ್ನು ಸಂಕಲ್ಪಿತ ಚಲನೆಯೊಂದಿಗೆ ಹೋಲಿಸಿ ಕುಂದುಗಳು ಏನಾದರೂ ಇದ್ದು ಚಲನೆಯ ವೇಗ, ಬಲ, ದಿಕ್ಕು, ವ್ಯಾಪ್ತಿ ಇವುಗಳ ವ್ಯತ್ಯಾಸದಿಂದ ಸಂಕಲ್ಪಚಲನೆ ಸಿದ್ಧಿಸುವಂತಿಲ್ಲದಿದ್ದರೆ ತಿದ್ದುವ ಸಂಕೇತಗಳನ್ನು ನಿಮ್ಮಿದುಳು ಚಾಲಕರಗಟೆ ಮತ್ತು ಮಿದುಳುಬಳ್ಳಿ ಎರಡು ಕಡೆಗೂ ಕಳುಹಿಸುತ್ತದೆ. ಇದು ಲಂಬಿತವಾದ ಒಂದು ನರಸಂಬಂಧಿತ ಅನೈಚ್ಛಿಕಕ್ರಿಯಾರೂಪದಂತಿದ್ದು (ರಿಫ್ಲೆಕ್ಸ್ ಆ್ಯಕ್ಷನ್) ಐಚ್ಛಿಕಸ್ನಾಯುಗಳ ಚಲನೆಗೇ ಅಲ್ಲದೆ ಅವುಗಳ ನಿರಂತರ ಬಿಗಿತದ ಹದಕ್ಕೂ (ಟೋನ್) ಕಾರಣವಾಗಿ ಸ್ವನಿಯಂತ್ರಿತ ಚಲನೆ ಸಾರ್ಥಕವಾಗುವಂತೆ ಮಾಡುವುದು. ಒಟ್ಟಿನಲ್ಲಿ ನಿಮ್ಮಿದುಳಿನ ಕಾರ್ಯವಿಧಾನವನ್ನು ಸಂಕ್ಷೇಪವಾಗಿ ಹೇಳಬೇಕೆಂದರೆ ಇದು ಗುರಿಯನ್ನು ಗುರುತಿಸುವ ಕ್ಷಿಪಣಿಯನ್ನು ನಿಯಂತ್ರಿಸುವ ಸಾಧನದಂತೆ ಕೆಲಸವೆಸಗುತ್ತದೆ. ಆದರೆ ಇದಕ್ಕಾಗಿ ಒಂದೇ ರೀತಿಯ ಸಂಕೇತವನ್ನು ಕಳುಹಿಸುವುದಕ್ಕೆ ಬದಲಾಗಿ ನಿಮ್ಮಿದುಳು ಅನೇಕ ವಿಧವಾದ ಹಾಗೂ ಕ್ರಮಾನುಸಾರವಾದ ತಿದ್ದುಪಡಿ ಸಂಕೇತಗಳನ್ನು ಒಂದೇ ಸಮನೆ ಒದಗಿಸುವುದು. ಮಹಾಮಸ್ತಿಷ್ಕದ ನಿಯಂತ್ರಣಕ್ಕೆ ವಿರುದ್ಧವಾಗಿ ನಿಮ್ಮಿದುಳು ದೇಹದ ಅದೇ ಬದಿಯ ಸ್ನಾಯುಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.

ನಿಮ್ಮಿದುಳಿನ ಕಾರ್ಯಗಳನ್ನು ಈ ಮುಂದಿನಂತೆ ಪಟ್ಟಿಮಾಡಬಹುದು. ಐಚ್ಛಿಕ ಸ್ನಾಯುವಿನ ಹದವನ್ನು ಆವಶ್ಯಕತೆಗೆ ತಕ್ಕಂತೆ ಸರಿಹೊಂದಿಸಿ ಮೈ ನಿಲವನ್ನು (ಮಾನವನಲ್ಲಿ ನೆಟ್ಟ ನಿಲವು) ಸಮತೋಲನದಿಂದ ಕಾಪಾಡಲು ಸಹಾಯ ಮಾಡುತ್ತದೆ. ಇತರ ಸಮತೋಲಕ ಪ್ರೇರಣೆಗಳನ್ನು ಸಂಯೋಜಿಸಿ ಅವೆಲ್ಲ ಸಫಲವಾಗುವಂತೆ ಮಾಡುವ ಮಹತ್ತ್ವದ ಪಾತ್ರವನ್ನು ವಹಿಸುತ್ತದೆ. ಸ್ವತಃ ಚಲನೆಯನ್ನು ಪ್ರೇರೇಪಿಸುವುದಿಲ್ಲವಾದರೂ ಚಾಲಕರಗಟೆಯಿಂದ ಪ್ರೇರೇಪಿಸಲ್ಪಟ್ಟ ಚಲನಕ್ರಿಯೆಗಳ ಮೇಲ್ವಿಚಾರಣೆಮಾಡಿ ಅವನ್ನು ತಿದ್ದಿ ಅವು ಸುಗಮವಾಗಿಯೂ ನಯವಾಗಿಯೂ ಸಂಕಲ್ಪಿತ ದಿಕ್ಕಿನಲ್ಲಿ ಸರಿಯಾದ ವೇಗದಲ್ಲಿ ಸರಿಯಾದ ಮಟ್ಟಿಗೆ ಮಾತ್ರ ನಡೆಯುವಂತೆ ಮಾಡುತ್ತದೆ.

ಅಭ್ಯಾಸ ಕುಶಲತೆಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ನಮ್ಮ ಪರಿಪಾಠದ ಅನೇಕ ಚಲನವಲನಗಳು ಸುಪ್ತಪ್ರಜ್ಞೆಯ (ಸಬ್‍ಕಾನ್ಷಸ್) ಮಟ್ಟದಲ್ಲಿಯೇ ನೆರವೇರುವಂತೆ ಮಾಡಿ ಮನಸ್ಸಿನ ಏಕಾಗ್ರತೆಯ ಭಾರವನ್ನು ಬಲುಮಟ್ಟಿಗೆ ನಿವಾರಿಸುತ್ತದೆ. ದೇಹದ ನಿಲುವಿಗೆ ಸಂಬಂಧಿಸಿದ ಅನೇಕ ಅನೈಚ್ಛಿಕ ಸುಪ್ತಪ್ರಜ್ಞಿತ ಚಲನೆಗಳನ್ನು ನಿಯಂತ್ರಿಸುತ್ತದೆ.

ನಿಮ್ಮಿದುಳಿನ ರೋಗಗಳು: ಇವುಗಳ ಪೈಕಿ ಕೆಲವು ಆಜನ್ಮವಾದ ನ್ಯೂನಾತಿರೇಕಗಳಿಂದ ಬರಬಹುದು. ಸಾಮಾನ್ಯವಾಗಿ ಉರಿಊತ, ಏಡಿಗಂತಿ ಪೆಟ್ಟು, ಬಿಳಿಹೊದ್ದಿಕೆಯ ನಾಶ (ಡಿಮೈಯಲಿನೇಷನ್) ,ರಕ್ತ ಹೆಪ್ಪುಗಟ್ಟುವಿಕೆಯಿಂದ ಅಥವಾ ರಕ್ತನಾಳಗಳ ರೋಗದಿಂದ ಸರಿಯಾಗಿ ರಕ್ತಪೂರೈಕೆ ಆಗದಿರುವಿಕೆ, ತಲೆ ಬುರುಡೆಯ ವೈಪರೀತ್ಯಗಳು ಇವು ನಿಮ್ಮಿದುಳಿನ ರೋಗಕ್ಕೆ ಕಾರಣಗಳು. ಪ್ರತಿರೋಧಕ ಚುಚ್ಚುಮದ್ದಿನ ಬಳಕೆಯ ಬಳಿಕ ಕೆಲವು ಸಲ ನಿಮ್ಮಿದುಳಿನ ರೋಗ ಸಂಭವಿಸಬಹುದು. ನಿಮ್ಮಿದುಳಿನ ರೋಗಗಳ ಲಕ್ಷಣಗಳು ಮೂಲತಃ ಏಕರೂಪವಾಗಿದ್ದರೂ ಅವು ರೋಗದ ಕಾರಣ, ವ್ಯಾಪ್ತಿ ಹಾಗೂ ಬೆಳೆವಣಿಗೆಯ ವೇಗಗಳನ್ನು ಅವಲಂಬಿಸಿರುವವು. ನಿಮ್ಮಿದುಳು ರಗಟೆಯ ನಾಶದಿಂದ ಉಂಟಾಗುವ ಕಾರ್ಯಹಾನಿ ಕೆಲವು ಸಂದರ್ಭಗಳಲ್ಲಿ ನಿಮ್ಮಿದುಳಿನ ಆಳನರಕೇಂದ್ರಗಳು ನಷ್ಟವಾದ ಕಾರ್ಯಗಳನ್ನು ವಹಿಸುವುದರಿಂದ ಸ್ವಲ್ಪ ಮಟ್ಟಿಗೆ ಪರಿಹರಿಸಲ್ಪಡುತ್ತವೆ. ಆದರೆ ನರಕೇಂದ್ರಗಳೇ ನಾಶವಾದಾಗ ಉಂಟಾಗುವ ಕಾರ್ಯಹಾನಿ ಶಾಶ್ವತ. ನಿಮ್ಮಿದುಳಿನ ಯಾವುದೇ ಒಂದು ಬದಿ ರೋಗಪೀಡಿತವಾಗಿದ್ದರೆ ರೋಗಲಕ್ಷಣಗಳು ದೇಹದ ಅದೇ ಬದಿಯಲ್ಲಿ ಕಾಣಿಸಿಕೊಳ್ಳುತ್ತದೆ.

ನಿಮ್ಮಿದುಳಿನ ರೋಗಪೀಡಿತ ಮನುಷ್ಯನ ಸ್ನಾಯುಗಳು ಸ್ವಾಭಾವಿಕ ಬಿಗಿತವನ್ನು ಕಳೆದುಕೊಂಡು ಸಡಿಲಸಡಿಲಾಗಿರುತ್ತದೆ. ರೋಗಪೀಡಿತರಿಗೆ ಮೈ ಬಾಗಿದ್ದು ಹೆಗಲುತಗ್ಗಿ ನಿಲುವು ಅಸಹಜವಾಗಿರುವುದು. ದೇಹದ ಅಂಗಗಳನ್ನು ಉದ್ದೇಶಪಟ್ಟು ಖಚಿತ ಭಂಗಿಯಲ್ಲಿ ನಿಲ್ಲಿಸಲು ಅಸಾಧ್ಯ. ಬವಳಿಬಂದಂತಾಗುವುದು ಸಾಮಾನ್ಯ. ಕಣ್ಣುತೆರೆದೇ ಇದ್ದರೂ ರೋಗಪೀಡಿತರಿಗೆ ಪದೇ ಪದೇ ಬೀಳುವ ಪ್ರವೃತ್ತಿ ಇರುವುದರಿಂದ ದೇಹದ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟ. ಸ್ನಾಯುಗಳು ಬಲಹೀನವಾಗಿದ್ದು ಬೇಗ ದಣಿವು ಉಂಟಾಗುತ್ತದೆ. ಸ್ನಾಯುಚಟುವಟಿಕೆಗಳು ತಾಳತಪ್ಪಿದಂತಾಗಿ ಚಲನೆಗಳೂ ಕ್ರಮಗೆಟ್ಟು ಅವ್ಯವಸ್ಥಿತವಾಗಿರುತ್ತವೆ. ಇಂಥ ಸ್ಥಿತಿಗೆ ಅಟಾಕ್ಸಿಯ ಎಂದು ಹೆಸರು. ಚಲನೆಯ ಅಸಂಘಟಿತ ಸ್ಥಿತಿಯನ್ನು ಹಲವಾರು ರೀತಿಗಳಲ್ಲಿ ತಪಾಸಣೆ ಮಾಡಬಹುದು: 1. ಉದ್ದೇಶದಂತೆ ಚಲನೆಯನ್ನು ಆರಂಭಿಸುವುದೂ ಮುಗಿಸುವುದೂ ಕಷ್ಟ. ಗುರಿಯನ್ನು ಮೀರಿ ಚಲನೆ ಮುಂದುವರಿಯಬಹುದು (ಪಾಸ್ಟ್ ಪಾಯಿಂಟಿಂಗ್); ಇಲ್ಲವೇ ಮುಂಚೆಯೇ ನಿಂತುಹೋಗಬಹುದು (ಅಳತೆಗೊರೆ;ಡಿಸ್‍ಮೆಟ್ರಿಯ). 2. ಗುರಿ ಹತ್ತಿರಬಂದಂತೆ ಅವಯವ ಒರಟಾದ ರೀತಿಯಲ್ಲಿ ಅದಿರತೊಡಗುವುದು (ಉದ್ದೇಶ ಕಂಪನ; ಇಂಟೆನ್ಷನ್ ಟ್ರೆಮರ್). 3. ಪರ್ಯಾಯ (ಅದಲು ಬದಲು) ಚಲನೆಗಳನ್ನು ಪದೇ ಪದೇ ತ್ವರಿತವಾಗಿ ಹಾಗೂ ಕ್ರಮವಾಗಿ ಮಾಡುವುದು ಅಸಾಧ್ಯ (ಏಡೈಯೊಡೋಕೋಕೈನೆಸಿಸ್). 4. ಚಲನೆಗಳು ಸುಗಮವಾಗಿ ಸಾಗದೆ ಬೇರೆ ಬೇರೆ ಕೀಲುಗಳ ಮಟ್ಟದಲ್ಲಿ ಪ್ರತ್ಯೇಕಿಸಿದಂತಾಗುತ್ತವೆ (ಡಿಕಾಂಪೊಸಿಷನ್ ಆಫ್ ಮೂವ್‍ಮೆಂಟ್ಸ್). 5. ಪ್ರತಿರೋಧ ವಿಲಂಬದಿಂದ ನಿರಂಕುಶವಾಗಿ ಪುಟಿದಂತೆ ಸ್ಫೋಟಕವಾಗಿರುವುದು (ರಿಬೌಂಡ್ ಫಿನಾಮನನ್). 6. ಎರಡು ಕಣ್ಣುಗಳ ಚಲನೆ ಒಂದಕ್ಕೊಂದು ಹೊಂದಿಕೊಂಡಿರುವುದಿಲ್ಲ (ಡಿಫೆಕ್ಟಿವ್ ಕಾನ್‍ಜುಗೇಟ್ ಮೂವ್‍ಮೆಂಟ್). ಕಣ್ಣುಗುಡ್ಡೆಗಳು ಕಿಂಚಿತ್ತಾಗಿ ಸದಾ ಆ ಕಡೆ ಚಲಿಸುತ್ತಲೇ ಇರುತ್ತವೆ (ನಿಸ್ಟಾಗ್ಮಸ್). 7. ಧ್ವನಿ ಸ್ಫೋಟಕವಾಗಿ ಮಾತುಗಳು ಅಸ್ಪಷ್ಟವಾಗುತ್ತವೆ. (ಎಕ್ಸ್‍ಪ್ಲೋಸಿವ್ ಸ್ಪೀಚ್). 8. ನಡಿಗೆ ಅಡ್ಡಡ್ಡವಾಗಿಯೂ ಕಣ್ಣುತೆರೆದೇ ಇದ್ದರೂ ತತ್ತರಿಸುವಂತೆಯೂ ಇರುತ್ತದೆ (ಬ್ರಾಡ್‍ಬೇಸ್ಡ್ ಸ್ಟ್ಯಾಗರಿಂಗ್ ಗೆಯ್ಟ್). (ಎಸ್.ಬಿ.ಕೆ.ಯು.)