ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿರಾಶಾವಾದ

ವಿಕಿಸೋರ್ಸ್ದಿಂದ

ನಿರಾಶಾವಾದ

ನಿರಾಶಾವಾದ (ಪೆಸಮಿಸಂ) ಎಂಬುದು ಆಶಾವಾದ (ನೋಡಿ- ಆಶಾವಾದ) ಎಂಬುದಕ್ಕೆ ವಿರುದ್ಧವಾದ ಭಾವನೆ ಹಾಗೂ ತಾತ್ತ್ವಿಕ ದೃಷ್ಟಿ. ಮತ್ರ್ಯ ಲೋಕದ ಜೀವನ ಕಷ್ಟತಮವಾದುದು, ದುರಂತವಾದುದು ಎಂಬ ಭಾವನೆ ನಿರಾಶಾವಾದಕ್ಕೆ ಕಾರಣ. ಇಂಥ ಒಂದು ಮಾನಸಿಕ ಪ್ರವೃತ್ತಿ ಬೆಳೆದು ಬಂದು ಅದೂ ಒಂದು ತತ್ತ್ವಶಾಸ್ತ್ರವೆನ್ನುವಷ್ಟರ ಮಟ್ಟಿಗೆ ಚರ್ಚೆಗೊಳಗಾಗಿದೆ. ಭಾರತೀಯರಿಗಿಂತ ಇಲ್ಲಿಗೆ ಎರಡು-ಮೂರು ಶತಮಾನಗಳ ಹಿಂದಿನ ಕೆಲವು ಐರೋಪ್ಯ ಚಿಂತನಕಾರರ ಬರೆವಣಿಗೆಗಳಲ್ಲಿ ಈ ತತ್ತ್ವ ಹೆಚ್ಚಿನ ಪರಿಮಾಣದಲ್ಲಿ ಕಂಡುಬರುತ್ತದೆ. ಶೀತೋಷ್ಣ, ಸುಖದುಃಖ, ಜಯಾಜಯ, ಲಾಭಾಲಾಭಾಗಳಂತೆ ಆಶಾವಾದ ನಿರಾಶಾವಾದವೂ ಒಂದು ದ್ವಂದ್ವ. ಆದ್ದರಿಂದ ಒಂದರ ಅರಿವಿಗೆ ಇನ್ನೊಂದರ ಅರಿವೂ ಅನಿವಾರ್ಯ. ಎರಡರ ತುಲನಾತ್ಮಕ ಅಧ್ಯಯನವೂ ಅಗತ್ಯ.

ಆಶೆ ವಿಕಾಸದ ಅಡಿಗಲ್ಲು ಎಂಬುದನ್ನು ಜ್ಞಾನವಿಜ್ಞಾನಗಳೆರಡೂ ಒಪ್ಪುತ್ತವೆ. ಇಲ್ಲಿಯ ಜೀವನದಲ್ಲಿ ಸುಖ, ಸಂತೋಷ, ನಲಿವು, ಮಾಧುರ್ಯ ತುಂಬಿದೆಯೆಂಬುದನ್ನು ಮನಗಂಡವರಲ್ಲಿ ಮೊದಲಿಗರು ಭಾರತೀಯರೆಂಬುದಕ್ಕೆ ವೇದಗಳ ಗ್ರಾಂಥಿಕ ಸಾಕ್ಷಿಯಿದೆ. ನೂರು ಶರದೃತುಗಳ ಆಯುಸ್ಸು, ಐಶ್ವರ್ಯ, ಸಂತಾನ, ವೀರ್ಯ, ಜಯ ಮತ್ತು ಶತ್ರುನಾಶವನ್ನೇ ವೈದಿಕ ಆರ್ಯರು ಕೇಳಿದ್ದು. ಅವರಿಗೆ ಸ್ವರ್ಗಮೋಕ್ಷಗಳಲ್ಲಿ ಅಷ್ಟಾಗಿ ನಂಬಿಕೆ ಇರಲಿಲ್ಲ. ಮುಂದೆ ಉಪನಿಷತ್ತುಗಳ ಕಾಲದಲ್ಲಿ ಈ ವಿಶ್ವವೆಲ್ಲವೂ ಬ್ರಹ್ಮಮಯವೆಂಬ (ಸರ್ವಂ ಖುಲು ಇದಂ ಬ್ರಹ್ಮ) ಭಾವನೆ ಬೆಳೆದು ವ್ಯಕ್ತ ಪ್ರಪಂಚವೂ ಅಲ್ಲಿ ಸುಖವೂ ನಾಳೆ ಮಾತ್ರ ನಿಲ್ಲತಕ್ಕದ್ದು (ಶ್ವೋಭಾವ) ಅಥವಾ ನಾಳೆಗಿಲ್ಲ (ನಶ್ವರ) ಎಂಬ ಭಾವನೆ ಬೆಳೆಯಿತು. ವ್ಯಕ್ತ ಪ್ರಪಂಚ ಅವ್ಯಕ್ತದ ಛಾಯೆಯಾಯಿತು. ಇಲ್ಲಿಯ ಒಂದು ಹುಲ್ಲುಕಡ್ಡಿಯೂ ಅನಿರ್ವಚನೀಯವಾದ ಮಹಾಶಕ್ತಿಯೊಂದರ ಇಚ್ಛೆಯಿಲ್ಲದೆ ಅಲುಗಾಡದಾಯಿತು (ತೃಣಂ ಅಪಿ ನ ಚಲತಿ ತೇನ ವಿನಾ). ಯಾಜ್ಞವಲ್ಕ್ಯರ ಇಬ್ಬರು ಪತ್ನಿಯರಲ್ಲಿ ಮೈತ್ರೇಯಿ ಎಂಬಾಕೆಗೆ ಈ ಲೋಕದ ವಸ್ತು ಒಡವೆ ಆಸ್ತಿಪಾಸ್ತಿಗಳೆಲ್ಲ ಬೇಕೆನಿಸಲಿಲ್ಲ.

ಈ ಪರ್ವಕಾಲದಲ್ಲಿ ಗೌತಮ ಬುದ್ಧ ವರ್ಧಮಾನ ಮಹಾವೀರರ ಉದಯವಾಯಿತು. ಈ ಲೋಕದ ಜೀವನವೇ ದುಃಖಮಯ. ಇದಕ್ಕೆ ಆಶೆ ಕಾರಣ. ಆದ್ದರಿಂದ ಆಶೆಯನ್ನು ಬಿಡಬೇಕೆನ್ನುವ ಮಹಾ ಆಂದೋಳನವೇ ನಡೆಯಿತು. ಆಶೆಯ ಸಂಪೂರ್ಣ ಪರಿತ್ಯಾಗಕ್ಕೆ ನೀತಿಯ ನೆಲಗಟ್ಟು ಸಿದ್ಧವಾಯಿತು. ಸಂತಾನದ ಸೂತ್ರವನ್ನು ಕತ್ತರಿಸಬೇಡ ಎಂಬ ವೈದಿಕ ಶಾಸನಕ್ಕೆ ವಿರುದ್ಧವಾಗಿ ನಿಷ್ಠುರ ಬ್ರಹ್ಮಚರ್ಯ, ದಿಗಂಬರತ್ವ, ಅಪರಿಗ್ರಹಗಳಿಗೆ ಪ್ರೋತ್ಸಾಹ ಸಿಕ್ಕಿತು. ವೈದಿಕ ಯುಗದ ಆಶಾವಾದವನ್ನು ವೇದೋತ್ತರ ಯುಗದ ನಿರಾಶಾವಾದ ಜಯಪ್ರದವಾಗಿ ಸೆಣಸುವಂತಾಯಿತು. ಆದರೆ ಈ ಹೊಸ ಪ್ರವಾಹ ಸಹ ಆಶಾವಾದವನ್ನೇ ಮುಂದಿಟ್ಟು ಇಹದಲ್ಲಿಲ್ಲದಿದ್ದರೂ ಪರದಲ್ಲಿಯಾದರೂ ಸುಖದ ಕಲ್ಪನೆಗೆ ಇಂಬುಗೊಡದಿರಲಿಲ್ಲ.

ಮುಂದೆ ಬಂದ ಷಡ್ದರ್ಶನಯುಗ ವೈದಿಕ ಯುಗದ ಪ್ರಖರ ಆಶಾವಾದ ಮತ್ತು ಉಪನಿಷತ್ತುಗಳ ಕಾಲದ ಹಿತಮಿತವಾದ ಆಶಾವಾದಗಳನ್ನು ಜನಾದರಣೀಯ ಮಾಡಿ ಪರಲೋಕದಲ್ಲಿ ಹೆಚ್ಚು ಆಸ್ಥೆ ತಳೆಯುವಂಥ ಆಶಾವಾದವನ್ನು ಪ್ರಚುರಪಡಿಸಿತು. ಜೀವನ ನಿರಂತರ ಪ್ರವಾಹ. ಜೀವಿಗೆ ಆದಿಭೌತಿಕ, ಆಧ್ಯಾತ್ಮಿಕ, ಆದಿದೈವಿಕ ತಾಪತ್ರಯಗಳು ಸ್ವಾಭಾವಿಕ. ಅವನ್ನು ಎದುರಿಸಬೇಕದರೆ ಅಸ್ತಿತ್ವದ ತಾತ್ತ್ವಿಕ ವಿಮರ್ಶೆ ಅಗತ್ಯ. ಈ ಲೋಕ ಜೀವಿಯ ಕರ್ಮಭೂಮಿ. ಜನ್ಮಮೃತ್ಯುವೆಂಬುದೊಂದು ಚಕ್ರ. ಇಲ್ಲಿ ಕರ್ಮಫಲವನ್ನು ಕಳೆದುಕೊಂಡು ತನ್ಮೂಲಕ ಜನ್ಮಾಂತರವನ್ನು ತಪ್ಪಿಸಿಕೊಂಡು ಏಕದಲ್ಲಿ ಐಕ್ಯವಾಗಬೇಕು. ಬಂಧ ತಾತ್ಕಾಲಿಕ, ಮೋಕ್ಷ ಕೈವಲ್ಯ ಸಾಯುಜ್ಯ ನಿತ್ಯ. ಆದ್ದರಿಂದ ಇಹಜೀವನದಲ್ಲಿ ಬರುವ ಭೌತಿಕ ಉತ್ಪಾತಗಳು, ರೋಗರುಜಿನಗಳು, ಕಟ್ಟಕಡೆಯ ದುರಂತವಾದ ಮರಣ-ಇವಕ್ಕೆ ಹೆದರಬೇಕಾಗಿಲ್ಲ. ಈ ವಾದವನ್ನು ಆಸ್ತಿಕ ದರ್ಶನಗಳು ಮುಂದಿಟ್ಟವು. ಆದರೂ ಭಾರತೀಯ ದರ್ಶನದ ಬಲವೆಲ್ಲ ಈ ಲೋಕದ ಜೀವನದ ಬಗೆಗಿನ ವೈರಾಗ್ಯದ ಕಡೆಗೆ. ಇದು ಭಾರತೀಯರ ಲೌಕಿಕಾಭಿವೃದ್ಧಿಗೆ ಒಂದು ರೀತಿಯ ಆತಂಕವೆನ್ನಲೇಬೇಕು. ಅಲ್ಪತೃಪ್ತಿಯೆಂಬುದು ನಿರಾಶಾವಾದದ ಇನ್ನೊಂದು ಬಣ್ಣವೆನ್ನಬೇಕಾಗುತ್ತದೆ.

ಲೋಕಾಯತವಾದಿಯದ ಚಾರ್ವಾಕ ಮತವನ್ನು ಎಲ್ಲ ಆಸ್ತಿಕ ದರ್ಶನಗಳೂ ಖಂಡಿಸಿವೆ. ಆದರೆ ಅದು ಮಾತ್ರ ಇರುವ ತನಕ ಸುಖವಾಗಿ ಬದುಕಬೇಕು. ಸಾಲ ಮಾಡಿಯಾದರೂ ತುಪ್ಪವನ್ನು ಕುಡಿಯಬೇಕು (ಯಾವಜ್ಜೀವಂ ಸುಖಂ ಜೀವೇತ್, ಋಣಂ ಕೃತ್ವಾ ಘೃತಂ ಪಿಬೇತ್) ಎಂಬ ಅತಿರೇಕದ ಆಶಾವಾದವನ್ನೇನೋ ಮುಂದೊಡ್ಡಿತಾದರೂ ಸಾಮೂಹಿಕವಾದ ಸಾಮರಸ್ಯದ ಜೀವನದಲ್ಲಿ ಅನೀತಿ ತಲೆಹಾಕಲು ಅವಕಾಶವಾಗಿ ಇನ್ನೊಬ್ಬರ ಆಸ್ತಿಗೆ ಆಸೆ ಪಡಬೇಡ (ಮಾಗೃಧಃ ಕಸ್ಯಸ್ವಿತ್ ಧನಂ) ಎಂಬ ಉಪನಿಷತ್ ಸಂದೇಶಕ್ಕೆ ವಿರುದ್ಧವಾದೀತೆಂದೋ ಏನೋ ಪರಲೋಕದ ಸಚ್ಚಿದಾನಂದ ಸುಖದಲ್ಲಿ ಆಶೆಯಿಟ್ಟ ಆಸ್ತಿಕ ಪಂಥಗಳು ಅದನ್ನು ಬೆಳೆಯಗೊಡಲಿಲ್ಲ.

ಪಾಶ್ಚಾತ್ಯರಲ್ಲಿ ನಿರಾಶಾವಾದ ಬೆಳೆದು ಸ್ಪಷ್ಟವಾಗಿ ಕಾಣಬರುವುದು ಇತ್ತೀಚೆಗೆ. ಪ್ರಾಚೀನ ಗ್ರೀಸ್ ದೇಶದ ದಾರ್ಶನಿಕರಲ್ಲಾಗಲೀ ಬೈಬಲ್ಲು ಮುಂತಾದ ಧಾರ್ಮಿಕ ಗ್ರಂಥಗಳಲ್ಲಾಗಲೀ ಇದನ್ನು ನಾವು ಸ್ಪಷ್ಟವಾಗಿ ಕಾಣಲಾಗುವುದಿಲ್ಲ. ಮಹಮ್ಮದೀಯ ಧರ್ಮದಲ್ಲೂ ಇಲ್ಲಿಯ ಜೀವನದಲ್ಲಿ ವಿಶ್ವಾಸ, ಪರಲೋಕದ ಅಸ್ತಿತ್ವದಲ್ಲಿ ಆಸ್ಥೆ ಕಂಡುಬರುತ್ತದೆ. ಆದರೆ ಅತಿ ಆಶೆಗೆ ಎಲ್ಲ ಧಾರ್ಮಿಕ ಪಂಥಗಳೂ ಅಂಕುಶವನ್ನಿಡಲೇಬೇಕೆನ್ನುತ್ತದೆ.

ಸುಮಾರು ಎರಡು ಮೂರು ಶತಮಾನಗಳಿಂದೀಚೆಗೆ ಪಾಶ್ಚಾತ್ಯರಲ್ಲಿ ಕೆಲವರು ಅವರಲ್ಲೂ ಮುಖ್ಯವಾಗಿ ಷೋಪೆನ್ ಹೌರ್ ಮತ್ತು ಹಾರ್ಟ್‍ಮನ್ ಮುಂತಾದವರು ಆಶಾವಾದ ನಿರಾಶಾವಾದ ಬಗೆಗೆ ಸಮೀಕ್ಷೆ ನಡೆಸಿದ್ದಾರೆ. ಈ ಲೋಕ ದುಃಖಮಯ. ಇದರ ಹೊರಗೆ ಇದ್ದರೇ ಚೆನ್ನ ಎಂದವರೂ ಇದ್ದಾರೆ. ಷೋಪೆನ್ ಹೌರನಂಥ ಲೋಕಾಯತವಾದಿಯೂ ಭಾರತೀಯ ವೇದಾಂತ ದೃಷ್ಟಿಗೆ ಮಾರುಹೋಗಿದ್ದಾರೆ.

ವಸ್ತುತಃ ನಿರಾಶಾವಾದ ವ್ಯಕ್ತಿಗತವಾದುದು ಹಾಗೂ ಸಾಂದರ್ಭಿಕವಾದುದು. ಸನ್ನಿವೇಶದ ಒತ್ತಡಕ್ಕೆ ಪಕ್ಕಾಗಿ ಇದು ಆಗ್ಗಾಗ್ಗೆ ತಲೆಯೆತ್ತುತ್ತದೆ. ಆರು ಹಿತವರು ನಿನಗೆ ಈ ಮೂವರೊಳಗೆ, ನಾರಿಯೋ ಧಾರಿಣೀಯೋ ಬಲುಧನದ ಸಿರಿಯೋ ಎಂದು ಹೆಣ್ಣು ಹೊನ್ನು ಮಣ್ಣುಗಳನ್ನು ಸಮೀಕರಿಸಿದ ಭಾರತೀಯ ದೃಷ್ಟಿ ಈಸಬೇಕು ಇದ್ದು ಜೈಸಬೇಕು ಎಂದದ್ದೂ ಉಂಟು. ಆದ್ದರಿಂದ ನಿರಾಶಾವಾದವನ್ನು ವೈಯಕ್ತಿಕ ಮನೋಭಾವದ ವರ್ತುಲಕ್ಕೆ ಸೀಮಿತಗೊಳಸಿದರೆ ಕ್ಷೇಮ. ಅದು ಎಂದೂ ಸಾರ್ವತ್ರಿಕವಾದವಾಗದು, ಸಮಷ್ಟಿಗೊಪ್ಪುವ ದರ್ಶನವಾಗಲಾರದು. ನಿರಾಶಾವಾದ ಪ್ರಕೃತಿಯ ಮೂಲೋದ್ದೇಶವಾದ ಆಶಾವಾದಕ್ಕೆ ಜಯಪ್ರದ ಸವಾಲಾಗಲಾರದು. (ಸಿ.ಜಿ.ಪಿ.)