ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿವಾರಕ ಶಿಕ್ಷಣ

ವಿಕಿಸೋರ್ಸ್ದಿಂದ

ನಿವಾರಕ ಶಿಕ್ಷಣ - ವಿದ್ಯಾರ್ಥಿಯ ಕಲಿಯುವ ಸಾಮಥ್ರ್ಯ ಕೆಳಮಟ್ಟದ್ದಲ್ಲದಿದ್ದರೂ ಅವನ ಶಿಕ್ಷಣಾಭಿವೃದ್ಧಿಯಲ್ಲಿ ಕಂಡುಬರುವ ಕೊರತೆಗೆ ಅವನಲ್ಲಿ ಕಂಡುಬರುವ ಹಲವು ವಿಶಿಷ್ಟವೂ ಪ್ರತ್ಯೇಕವೂ ಆದ ದೌರ್ಬಲ್ಯಗಳು ಕಾರಣವೆನಿಸಿರುತ್ತವೆ. ಅಂಥ ದೌರ್ಬಲ್ಯಗಳನ್ನು ನಿವಾರಿಸಿ ಅವನ ಶಿಕ್ಷಣ ಸಾಮಾನ್ಯ ವಿದ್ಯಾರ್ಥಿಗಳ ಶಿಕ್ಷಣದಂತೆ ಪ್ರಗತಿ ಹೊಂದಿ ಮುಂದುವರಿಯಲು ಅನುವು ಮಾಡಿಕೊಡುವ ವಿಶೇಷ ಕಾರ್ಯಕ್ರಮಕ್ಕೆ ನಿವಾರಕ ಶಿಕ್ಷಣ ಎನ್ನುವರು.

ನಿವಾರಕ ಶಿಕ್ಷಣ ಸಾಮಾನ್ಯ ಶಿಕ್ಷಣದ ಅಬಿಭಾಜ್ಯ ಅಂಗವೆಂದು ಪರಿಗಣಿಸಲ್ಪಟ್ಟಿದೆ. ಇಂಥ ಕಾರ್ಯಕ್ರಮ ನೈದಾನಿಕ ಆಧಾರ ಕಲ್ಪನೆಯ ನೇರ ಪರಿಣಾಮ ಆಗಿರಬೇಕು. ಸುಧಾರಣಾತ್ಮಕ ಯೋಜನೆಯಲ್ಲಿ ಪರ್ಯಾವಸಾನಗೊಳ್ಳದ ನೈದಾನಿಕ ಕ್ರಮಗಳು ಅಧ್ಯಾಪಕನ ದೃಷ್ಟಿಯಿಂದ ಅರ್ಥಶೂನ್ಯ.

ನಿವಾರಕ ಶಿಕ್ಷಣ ನಿರ್ದಿಷ್ಟವೂ ನಿಷ್ಕøಷ್ಟವೂ ಆಗಿರಬೇಕು. ಇದರ ಪರಿಣಾಮವಾಗಿ ವಿದ್ಯಾರ್ಥಿ ತನ್ನ ವಿಶಿಷ್ಟ ದೌರ್ಬಲ್ಯಗಳನ್ನು ಸ್ವಪ್ರಯತ್ನದಿಂದ ಸರಿಪಡಿಸಿಕೊಳ್ಳುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ನಿವಾರಕ ಶಿಕ್ಷಣ ಚರಿತ್ರೆ ಸಾಹಿತ್ಯ ಮುಂತಾದ ವಿಷಯ ಪ್ರಧಾನ ಚಟುವಟಿಕೆಗಳಿಗಿಂತ ದೈಹಿಕ ಶಿಕ್ಷಣ, ಗಣಿತ, ಭಾಷೆ ಮುಂತಾದ ಕೌಶಲ ಪ್ರಧಾನ ಚಟುವಟಿಕೆಗಳಲ್ಲಿ ಹೆಚ್ಚು ಯಶಸ್ಸನ್ನು ಗಳಿಸುತ್ತದೆ. ಕೌಶಲ ಪ್ರಧಾನ ಚಟುವಟಿಕೆಗಳಲ್ಲಿ ನೈದಾನಿಕ ತಂತ್ರಗಳು ಹೆಚ್ಚು ವಸ್ತುನಿಷ್ಠವಾಗಿರುವುದೇ ಇದಕ್ಕೆ ಕಾರಣವಿರಬಹುದು. ನಿವಾರಕ ಶಿಕ್ಷಣ ಕೆಲವು ವ್ಯಕ್ತಿಗಳಿಗೆ ಮಾತ್ರ ಅಗತ್ಯವೆನಿಸುವಂತೆ ಇಡೀ ತರಗತಿಗೆ, ತರಗತಿಯ ಒಂದು ಭಾಗಕ್ಕೆ ಅಗತ್ಯವೆನಿಸಬಹುದು.

ನಿವಾರಕ ಶಿಕ್ಷಣವನ್ನು ಆರಂಭಿಸುವ ಮುನ್ನ ತರಗತಿಯ ಯಾವ ವಿದ್ಯಾರ್ಥಿಗಳು ಯಾವ ವ್ಯಾಸಂಗ ವಿಷಯದಲ್ಲಿ ಇತರರೊಡನೆ ಸರಿದೂಗದವರಾಗಿರುವರೆಂಬುದನ್ನು ಸಾಮಾನ್ಯ ನಿವೃತ್ತಿ ಪರೀಕ್ಷೆಗಳಿಂದ (ಅಚೀವ್‍ಮೆಂಟ್ ಟೆಸ್ಟ್) ನಿರ್ಧರಿಸಬೇಕು. ಅನಂತರ ಆಯಾ ವ್ಯಾಸಂಗ ವಿಷಯದಲ್ಲಿ ಒಂದೇ ರೀತಿಯ ತಪ್ಪು ಮಾಡಿದವರನ್ನೆಲ್ಲ ಒಂದು ನಿವಾರಕ ವರ್ಗವಾಗಿ ವಿಂಗಡಿಸಿಕೊಳ್ಳಬೇಕು. ಇದು ನಿವಾರಕ ಶಿಕ್ಷಣಕ್ಕೆ ನಡೆಯಬೇಕಾದ ಪೂರ್ವಭಾವಿ ಕಾರ್ಯ.

ಆಯಾ ದೌರ್ಬಲ್ಯದ ನಿವಾರಣೆಗೆ ಅತ್ಯಂತ ಸೂಕ್ತ ವಿಧಾನದಲ್ಲಿ ಬೋಧಿಸುವುದು ನಿವಾರಕ ಶಿಕ್ಷಣದ ಒಂದು ವೈಶಿಷ್ಟ್ಯ. ಇದರಿಂದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿ ವರ್ಗದ ಶಿಕ್ಷಣದಲ್ಲಿ ತತ್‍ಕ್ಷಣದ ಪ್ರಗತಿ ಕಂಡುಬರುತ್ತದೆ. ಅನಂತರ ಅವರು ಸಾಮಾನ್ಯ ವಿದ್ಯಾರ್ಥಿಗಳ ಮಟ್ಟದಲ್ಲಿ ಶಿಕ್ಷಣವನ್ನು ಮುಂದುವರಿಸಲು ಶಕ್ತರಾಗುತ್ತಾರೆ.

ನಿವಾರಕ ಶಿಕ್ಷಣದ ವಿಧಾನಗಳು: ಕೆಲವು ವಿಧಾನಗಳನ್ನು ಉಪಾಧ್ಯಾಯರು ದಿನನಿತ್ಯದ ತರಗತಿ ಸನ್ನಿವೇಶದಲ್ಲಿ ಉಪಯೋಗಿಸಬಹುದು. ವಿದ್ಯಾರ್ಥಿಗಳ ಬರೆವಣಿಗೆಯ ಪುಸ್ತಕಗಳನ್ನು ಎಚ್ಚರಿಕೆಯಿಂದ ವೀಕ್ಷಿಸಿದರೆ ಕಾಗುಣಿತದ ದೋಷ, ವಾಕ್ಯರಚನಾ ಸಾಮಥ್ರ್ಯದ ಅಭಾವ ಮುಂತಾದ ವಿಶಿಷ್ಟ ದೌರ್ಬಲ್ಯಗಳನ್ನು ಪತ್ತೆಹಚ್ಚಬಹುದು. ಸರಿಯಾದ ಲೇಖನ ಅಭ್ಯಾಸ ಮಾಡಿಕೊಳ್ಳುವಂತೆ ಮಾರ್ಗದರ್ಶನ ನೀಡುವುದೇ ಇಂಥ ಸಂದರ್ಭದಲ್ಲಿ ನಿವಾರಕ ಶಿಕ್ಷಣವೆನಿಸುತ್ತದೆ. ಭೂಗೋಳದ ಸಣ್ಣ ಪರೀಕ್ಷೆ ಮಕ್ಕಳಲ್ಲಿ ಭೂಪಟವನ್ನು ಸರಿಯಾಗಿ ವ್ಯಾಖ್ಯೆ ಮಾಡುವ ಕೌಶಲ ಬೆಳೆದಿಲ್ಲವೆಂಬುದನ್ನು ತೋರಿಸಿಕೊಡಬಹುದು. ಅಥವಾ ಅವರು ದೋಷಪೂರಿತ ಭೌಗೋಳಿಕ ಪರಿಕಲ್ಪನೆ ಬೆಳೆಸಿಕೊಂಡಿರುವುದನ್ನು ಸೂಚಿಸಬಹುದು. ಆಗ ಭೂಪಟ ಓದುವ ತರಬೇತಿ ಕೊಡುವುದೂ ಭೌಗೋಳಿಕ ಪರಿಕಲ್ಪನೆಗಳನ್ನು ವಿಶೇಷವಾಗಿ ಬೋಧಿಸುವುದೂ ನಿವಾರಕ ಶಿಕ್ಷಣವೆನಿಸುತ್ತದೆ. ಹೀಗಾಗಿ ನಿಧಾನ ಹಾಗೂ ನಿವಾರಕ ಶಿಕ್ಷಣ ವಿಧಾನಗಳು ಹೆಚ್ಚು ವ್ಯಾಪಕತೆಯುಳ್ಳದ್ದಾಗಿವೆ.

ಪ್ರಾರಂಭದಲ್ಲಿ ಇವು ಒಬ್ಬ ವಿದ್ಯಾರ್ಥಿಯ ಅಥವಾ ಒಂದು ತರಗತಿಯ ಮೌಖಿಕ ಹಾಗೂ ಬರವಣಿಗೆಯ ಕಾರ್ಯವನ್ನು ಜಾಗರೂಕತೆಯಿಂದ ವೀಕ್ಷಿಸುವುದಾಗಿರಬಹುದು. ಅವಶ್ಯಕತೆ ಬಿದ್ದಲ್ಲಿ ಮನೋವ್ಶೆಜ್ಞಾನಿಕ ಪರೀಕ್ಷೆಗಳನ್ನೂ ಬಳಸಬೇಕಾಗುವುದು. ಎಲ್ಲ ರೀತಿಯ ನಿವಾರಕ ಶಿಕ್ಷಣಕ್ಕೂ ಮೊದಲು ವಿದ್ಯಾರ್ಥಿಗಳಲ್ಲಿರಬಹುದಾದ ದೈಹಿಕ ನ್ಯೂನತೆಗಳನ್ನು ಸರಿಪಡಿಸಬೇಕಾಗುತ್ತದೆ. ಚಾಕ್ಷುಷ ಹಾಗೂ ಶ್ರವಣ ನ್ಯೂನತೆಗಳು, ಅಂತಃಸ್ರಾವೀಗ್ರಂಥಿಗಳ ಅಸಮರ್ಪಕ ಕಾರ್ಯ, ಅಪೌಷ್ಟಿಕತೆಯ ಪ್ರಭಾವ, ಮಾನಸಿಕ ಹಾಗೂ ದೈಹಿಕ ಆಯಾಸ-ಇವುಗಳ ದೋಷಗಳಿಗೆ ಲಭ್ಯವಿರುವ ನಿವಾರಣೋಪಾಯಗಳನ್ನು ಸೂಚಿಸಬೇಕಾಗುವುದು. ಇವುಗಳಲ್ಲದೆ ಕಲಿಕೆಯ ವಿಷಯದ ಬಗ್ಗೆ ದೋಷಪೂರ್ಣ ಮಾನಸಿಕ ಅಭಿವೃದ್ಧಿಯೂ ದೌರ್ಬಲ್ಯಕ್ಕೆ ಕಾರಣವಾಗಿರಬಹುದು. ತರಗತಿಯ ಪಾಠಗಳಿಂದ ಪ್ರಯೋಜನ ಪಡೆಯಲು ಅಸಮರ್ಥರಾಗುವುದು ದೋಷಪೂರಿತ ಪಠ್ಯವಸ್ತು ಮತ್ತು ಬೋಧನಕ್ರಮಗಳೂ, ವಿದ್ಯಾರ್ಥಿ-ಅಧ್ಯಾಪಕರ ಮಧ್ಯೆ ಸಾಮರಸ್ಯವಿಲ್ಲದಿರುವುದು, ಹಿತಕರವಲ್ಲದ ಪರಿಸರ-ಇವೂ ಅಂಥ ಪ್ರಗತಿರಹಿತ ಶಿಕ್ಷಣಕ್ಕೆ ಕಾರಣವೆನಿಸಿರಬಹುದು. ಆದ್ದರಿಂದ ಅವುಗಳ ನಿವಾರಣೆಯೂ ನಿವಾರಕ ಶಿಕ್ಷಣದಲ್ಲಿ ಸೇರುತ್ತದೆ.

ಈಚೆಗೆ ನೈದಾನಿಕ ಹಾಗೂ ನಿವಾರಕ ಶಿಕ್ಷಣದ ತಂತ್ರಗಳು ತೀರ ಜಟಿಲವಾಗುತ್ತಿದೆ. ಮನೋವಿಜ್ಞಾನ ಪ್ರಯೋಗಶಾಲೆಯಲ್ಲಿ ಕೀಮೋಗ್ರಾಫ್, ಚಲನಚಿತ್ರ ಬಿಂಬಗ್ರಾಹಿ, ಡಿಕ್ಟಫೋನ್, ಶ್ರವಣಮಾಪಕ, ಸ್ನಾಯು ಶಕ್ತಿಮಾಪಕ ಮುಂತಾದ ಉಪಕರಣಗಳ ಬಳಕೆ ಹೆಸರಾಂತ ಸಂಸ್ಥೆಗಳಲ್ಲಿ ಹೆಚ್ಚುತ್ತಿದೆ.

ನಿವಾರಕ ಶಿಕ್ಷಣವನ್ನು ವ್ಶೆದ್ಯಚಿಕಿತ್ಸೆಗೆ ಹೋಲಿಸಬಹುದು. ಔಷಧೋಪಚಾರ ಅಗತ್ಯವಾದರೂ ಅದು ಸದಾ ಕಾಲಕ್ಕೂ ಅಲ್ಲ. ರೋಗನಿವಾರಣೆಯಾದೊಡನೆ ಔಷಧ ಸೇವನೆಯೂ ನಿಲ್ಲಬೇಕು. ಹಾಗೆಯೇ ದೌರ್ಬಲ್ಯಗಳ ನಿವಾರಣೆಯೊಡನೆ ವಿಶಿಷ್ಟ ಶಿಕ್ಷಣವೂ ನಿಲ್ಲಬೇಕು. (ಬಿ.ಕೆ.ಎನ್.)