ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಶ್ಚಲ ಜನಸಮಷ್ಟಿ

ವಿಕಿಸೋರ್ಸ್ದಿಂದ

ನಿಶ್ಚಲ ಜನಸಮಷ್ಟಿ - ಜನಸಂಖ್ಯೆ ಮತ್ತು ಮರಣಸಂಖ್ಯೆಯ ಪ್ರಮಾಣದಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ಭಾವಿಸಿ ನಿರ್ಮಿಸಿದ ಜನಸಂಖ್ಯಾ ಮಾದರಿ (ಸ್ಟೇಶನರಿ ಪಾಪ್ಯುಲೇಷನ್). ಜನಸಂಖ್ಯೆಯ ಮತ್ರ್ಯತ್ವವನ್ನು (ಮಟ್ರ್ಯಾಲಿಟಿ) ಸಾಮಾನ್ಯವಾಗಿ ಆಯುರ್ದಾಯ ಕೋಷ್ಟಕದ (ಲೈಫ್ ಟೇಬಲ್) ಮೂಲಕ ಪಡೆಯಲಾಗುವುದು. ಒಂದೇ ಕಾಲದಲ್ಲಿ ಹುಟ್ಟಿದ ಗುಂಪೊಂದರಲ್ಲಿ ಪ್ರತಿ ವರ್ಷವೂ ಸತ್ತವರ ಸಂಖ್ಯೆಯನ್ನು ಗುರುತಿಸಿ ಕಾಲಾನುಕ್ರಮವಾಗಿ ಅದರ ಕೊನೆಯ ವ್ಯಕ್ತಿ ಸಾಯುವ ತನಕವೂ ಜನಸಂಖ್ಯೆ ಹಾಗೂ ಇದರಿಂದ ಪ್ರತಿವರ್ಷ ಸಾವಿನ ಪರಿಣಾಮವಾಗಿ ಕಡಿಮೆಯಾದ ಸಂಖ್ಯೆ ಎರಡನ್ನೂ ನಿರೂಪಿಸಲಾಗುವುದು. ಕೇವಲ ಕಾಲ್ಪನಿಕ ಗುಂಪಿನ ಮೇಲೆ ಆಧರಿತವಾದ ಈ ಕೋಷ್ಟಕ ಒಂದು ರೀತಿಯಲ್ಲಿ ಕೃತಕವಾಗಿ ಕಾಣುತ್ತದೆ. ಹೀಗೆ ರಚಿತವಾದ ಆಯುರ್ದಾಯ ಕೋಷ್ಟಕ ಕಾಲ್ಪನಿಕ ಗುಂಪಿನ ಜೀವನ ಚರಿತ್ರೆ ಎಂದೇ ಭಾವಿಸಬಹುದು. ಪ್ರತಿ ವಯೋಸಮೂಹದಲ್ಲಿ ಮರಣ ಸಂಖ್ಯೆ ನಿರ್ದಿಷ್ಟ ಪ್ರಮಾಣದಲ್ಲಿರುವುದೆಂದು ಭಾವಿಸಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಆಯುರ್ದಾಯ ಕೋಷ್ಟಕಗಳನ್ನು ಪ್ರತ್ಯೇಕವಾಗಿ ರಚಿಸಲಾಗುತ್ತದೆ.

ಈ ಕೋಷ್ಠಕದ ಐಘಿ ಅಥವಾ ಟಿಐಘಿ ನೀಟಸಾಲು ಪ್ರತಿವಯೋಗುಂಪಿನಲ್ಲಿ ಇರುವ ಸರಾಸರಿ ಜನಸಂಖ್ಯೆಯನ್ನು ತೋರಿಸುವುದು. ಈ ನೀಟಸಾಲಿನಲ್ಲಿ ಇರುವ ಪ್ರತಿ ವಯೋಗುಂಪಿನ ಶೇಕಡಾವಾರು ಜನಸಂಖ್ಯೆಯ ವಿತರಣೆ, ಹೆಚ್ಚು ಕಡಿಮೆ ಜನಗಣತಿಯಿಂದ ತಯಾರಾದ ಒಂದು ನಿರ್ದಿಷ್ಟ ಜನಸಂಖ್ಯೆಯ ಶೇಕಡಾವಾರು ಜನಸಂಖ್ಯೆಯ ವಿತರಣೆಯನ್ನೇ ಹೋಲುತ್ತದೆ. ಕೋಷ್ಟಕವನ್ನು ನಿರ್ಮಿಸುವಾಗ ಪ್ರತಿ ವಯೋಮಿತಿಯಲ್ಲೂ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮರಣ ಸಂಖ್ಯೆ ಇರುವುದೆಂದು ಅಭಿಪ್ರಾಯಪಟ್ಟದ್ದಾಗ್ಯೂ ಅದೇ ಪ್ರಮಾಣದ ಮರಣ ಸಂಖ್ಯೆ ಕೋಷ್ಟಕ ನಿರ್ಮಿಸಲು ಈ ಗುಂಪನ್ನು ಯಾವ ಜನಸಂಖ್ಯೆಯಿಂದ ಆಯಲಾಗಿದೆಯೋ ಅದಕ್ಕೂ ಅನ್ವಯವಾಗುವುದೆಂದು ಭಾವಿಸಬಹುದು. ಇದೇ ರೀತಿ ಜನಸಂಖ್ಯೆಯ ಪ್ರಮಾಣವೂ ಒಂದು ನಿರ್ದಿಷ್ಟ ಸಂಖ್ಯೆಯಲ್ಲಿಯೇ ಪ್ರತಿ ವರ್ಷವೂ ಇರುವುದೆಂದು ಭಾವಿಸುವುದಾದರೆ, ಪ್ರತಿವಯೋಗುಂಪಿನಲ್ಲಿಯ ಜನಸಂಖ್ಯೆ ವರ್ಷವರ್ಷವೂ ನಿಶ್ಚಲವಾಗಿರುತ್ತದೆ. ಹಾಗೇ ಜೀವಿತ ವ್ಯಕ್ತಿ-ವರ್ಷಗಳ (ಪರ್ಸನ್-ಇಯರ್ಸ್ ಲಿವ್ಡ್) ಸಂಖ್ಯೆಯೂ ಮೂಲ ಆಯುರ್ದಾಯ ಕೋಷ್ಟಕದಲ್ಲಿ ಇದ್ದಂತೆಯೇ ಇರುತ್ತದೆ.

ಹೀಗೆ ಸತತವಾಗಿ ಜನಸಂಖ್ಯೆ ಹಾಗೂ ಮರಣ ಸಂಖ್ಯೆಯ ಪ್ರಮಾಣದಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ಭಾವಿಸಿ ನಿರ್ಮಿಸಿದ ಜನಸಂಖ್ಯೆಯ ಮಾದರಿಯೇ ನಿಶ್ಚಲ ಜನಸಮಷ್ಟಿ. ಈ ರೀತಿಯ ಅವಾಸ್ತವ ನಿಯಮಗಳಿಂದ ರಚಿಸಿದ ಮಾದರಿಗಳ ಉಪಯುಕ್ತತೆ ಕಡಿಮೆ ಎಂದೇ ಹೇಳಬೇಕು. ಅದರಲ್ಲೂ ವಿಶೇಷತಃ ಇಲ್ಲಿ, ಸ್ವಾಭಾವಿಕ ಸಂಖ್ಯಾಭಿವೃದ್ಧಿಯನ್ನು (ಸಾವು ಮತ್ತು ಹುಟ್ಟಿನ ವ್ಯತ್ಯಾಸ) ಸೊನ್ನೆ ಎಂದು ಭಾವಿಸಲಾಗಿದೆ. ಜೊತೆ ಜೊತೆಗೆ ಮರಣಸಂಖ್ಯೆಯನ್ನು ಆಯುರ್ದಾಯ ಕೋಷ್ಟಕದ ವಿನ್ಯಾಸದಿಂದ ನಿರ್ಧರಿಸಲಾಗಿದೆ. ಮೇಲಾಗಿ ಜನಸಂಖ್ಯೆಯನ್ನು ಒಂದೇ ನಿರ್ದಿಷ್ಟ ಸಂಖ್ಯೆಯೆಂದು ಭಾವಿಸಲಾಗಿದೆ. ಹಾಗೆಯೇ ಅಸಂಸ್ಕರಿತ ಮರಣ ಸಂಖ್ಯಾಪ್ರಮಾಣವನ್ನು ಅಸಂಸ್ಕರಿತ ಜನನ ಸಂಖ್ಯಾ ಪ್ರಮಾಣದೊಂದಿಗೆ ಸಮ ಎಂದು ಭಾವಿಸಲಾಗಿದೆ. ಈ ಕಾರಣಗಳಿಂದ ನಿಶ್ಚಲ ಜನಸಮಷ್ಟಿಯ ಮಾದರಿ ಸಹಜವಾಗಿ ಕಾಣಿಸುವುದಿಲ್ಲ. ಅದರೂ ಈ ನಿಶ್ಚಿತ ಸ್ಥಿತಿಗಳಿದ್ದಲ್ಲಿ ಜನಸಂಖ್ಯೆಯ ಪರಿ, ವಿನ್ಯಾಸ ಹೇಗಿರುವುವೆಂಬುದನ್ನು ಅರಿಯಲು ಇದು ಸಹಾಯಕಾರಿ. ಅಲ್ಲದೆ ಜನಸಂಖ್ಯೆಯ ಗಾತ್ರವೂ ಹೇಗಿರುವುದೆಂಬುದನ್ನು ತಿಳಿಯಲು ಸಾಧ್ಯವಾಗುವುದು. (ಜಿ.ಎಂ.ಯು.)