ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಷೇಚನ

ವಿಕಿಸೋರ್ಸ್ದಿಂದ

ನಿಷೇಚನ - ಗಂಡಿನಿಂದ ಬರುವ ವೀರ್ಯಾಣು ಮತ್ತು ಹೆಣ್ಣಿನಿಂದ ಬರುವ ಅಂಡ ಇವುಗಳ ಸಂಯೋಗ ಅಥವಾ ಕೂಡುವಿಕೆಯೇ ನಿಷೇಚನ (ಫರ್ಟಿಲೈಸೇಷನ್). ಸಾಮಾನ್ಯವಾಗಿ ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಹೊಸಜೀವಿಯ ಉದಯ ಆಗುವುದು ನಿಷೇಚನಕ್ಕೊಳಗಾದ ಅಂಡದಿಂದ. ನಿಷೇಚಿತ ಅಂಡಕ್ಕೆ ಯುಗ್ಮಜ (ಜೆóೈಗೋಟ್) ಎಂದು ಹೆಸರು.

ನಿಷೇಚನದಿಂದ ಎರಡು ಮುಖ್ಯಕಾರ್ಯಗಳು ನಡೆಯುತ್ತವೆ. ಮೊದಲನೆಯದಾಗಿ ವೀರ್ಯಾಣು ಅಂಡವನ್ನು ಮುಂದಿನ ಬೆಳವಣಿಗೆಗೆ ಪ್ರಚೋದಿಸುತ್ತವೆ. ಎರಡನೆಯದಾಗಿ ತಾಯಿ ಮತ್ತು ತಂದೆಯಿಂದ ಬರುವ ಅನುವಂಶಿಕ ಗುಣಗಳ ಸಮ್ಮಿಳನ ಹೊಸ ಜೀವಿಯಲ್ಲಾಗುತ್ತದೆ. ವೀರ್ಯಾಣು ಅಂಡವನ್ನು ಪ್ರಚೋದಿಸುವ ಕಾರ್ಯ ಒಂದು ರಾಸಾಯನಿಕ ಕ್ರಿಯೆ. ಇದು ಅಂಡದ ಮೇಲ್ಮೈ ಮತ್ತು ಕೋಶರಸದಲ್ಲಿ ವ್ಯತ್ಯಾಸಗಳನ್ನು ಉಂಟುಮಾಡುತ್ತದೆ. ಅನುವಂಶೀಯ ಗುಣಗಳ ಮಿಳನ ಅಂಡ ಮತ್ತು ಪುರುಷಾಣುಗಳ ಕ್ರೋಮೋಸೋಮುಗಳಿಂದ ನೆರವೇರುತ್ತದೆ.

ಅಂಡಗಳು ಅಂಡಾಶಯದಲ್ಲಿ ಉತ್ಪತ್ತಿಯಾಗುವುವು ಮತ್ತು ಇವು ದೊಡ್ಡಕೋಶಗಳಾಗಿರುತ್ತವೆ. ಪ್ರತಿಯೊಂದರಲ್ಲೂ ನ್ಯೂಕ್ಲಿಯಸ್ ಮತ್ತು ಕೋಶದ್ರವ್ಯ (ಸೈಟೋಪ್ಲಾಸಮ್) ಉಂಟು. ಕೋಶದ್ರವ್ಯ ಕೋಶಪೊರೆಯೊಳಗಿದ್ದು ದ್ರವರೂಪದಲ್ಲಿರುವ ಮಾತೃಕೆಯನ್ನು ಪಡೆದಿರುತ್ತವೆ. ಇದರಲ್ಲಿ ಬೆಳೆಯುವ ಭ್ರೂಣಕ್ಕೆ ಆಹಾರ ಒದಗಿಸುವ ಭಂಡಾರ (ಯೋಕ್), ವಸ್ತುಗಳು ಮತ್ತು ಅನೇಕ ರಾಸಾಯನಿಕ ಪದಾರ್ಥಗಳು ಅಡಗಿರುವುವು ಹಾಗೂ ಅವು ವಿವಿಧ ಆಕಾರ, ಗಾತ್ರ, ತೂಕಗಳಲ್ಲಿ ವ್ಯತ್ಯಾಸ ತೋರುವುವು. ಕೋಶದ್ರವ್ಯದಲ್ಲಿರುವ ನ್ಯೂಕ್ಲಿಯಸ್‍ಗೆ ಸ್ವತಂತ್ರವಾದ ಪೊರೆಯುಂಟು. ಕೋಶಕೇಂದ್ರವು ಸಾಮಾನ್ಯವಾಗಿ ಗುಂಡಗೆ ಚಂಡಿನಂತೆ ಇರುತ್ತದೆ. ಇದರೊಳಗಿರುವ ಕೋಶಕೇಂದ್ರ ನಿರ್ದಿಷ್ಟಾಕೃತಿಯ ವರ್ಣತಂತುಗಳಾಗಿ ರೂಪುಗೊಳ್ಳುವ ವರ್ಣಗ್ರಾಹಕ ವಸ್ತುವನ್ನು ಹೊಂದಿರುತ್ತದೆ. ಈ ವರ್ಣತಂತುಗಳಲ್ಲಿ ತಾಯಿಯಿಂದ ಬರುವ ವಂಶವಾಹಿಗಳಿವೆ. ಪ್ರತಿಯೊಂದು ಪ್ರಾಣಿ ಮತ್ತು ಸಸ್ಯದಲ್ಲಿ ಒಂದು ನಿಗದಿತ ಸಂಖ್ಯೆಯ ವರ್ಣತಂತುಗಳುಂಟು. ವೀರ್ಯಾಣುಗಳು ವಿಶಿಷ್ಟ ರೀತಿಯ ಸಣ್ಣಕೋಶಗಳು. ಸಾಮಾನ್ಯವಾಗಿ ಇವಕ್ಕೆ ಅಂಡವನ್ನು ಹುಡುಕಿಕೊಂಡು ಹೋಗಿ ಅದಕ್ಕೆ ತಾವಾಗಿಯೆ ಅಂಟಿಕೊಳ್ಳುವ ಸಾಮಥ್ರ್ಯ ಉಂಟು. ಅಂಡಾಶಯದಲ್ಲಿ ಮಾತೃಕೋಶಗಳಿಂದ ಹೇಗೆ ಅಂಡಗಳು ಉತ್ಪತ್ತಿಯಾಗುತ್ತವೆಯೋ ಅಂತೆಯೇ ವೀರ್ಯಾಣುಗಳು ಪುರುಷನ ವೃಷಣಗಳಲ್ಲಿ ಉತ್ಪತ್ತಿಯಾಗುತ್ತವೆ. ಆದರೆ ಅಂಡ ಬಲಿತಂತೆಲ್ಲ ಹೆಚ್ಚು ವ್ಯತ್ಯಾಸಗಳಿಲ್ಲದೆ ಗಾತ್ರದಲ್ಲಿ ಮಾತ್ರ ಬಹಳ ದೊಡ್ಡದಾಗುತ್ತ ಹೋದರೆ ವೀರ್ಯಾಣು ಸಣ್ಣದಾಗಿದ್ದು ಬಹಳ ತೊಡಕಿನ ರಚನೆಯನ್ನು ತೋರುತ್ತದೆ. ವಿವಿಧ ಪ್ರಾಣಿಗಳ ವೀರ್ಯಾಣುಗಳ ರೂಪ ಮತ್ತು ಆಕೃತಿಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಆದರೆ ಅತಿ ಸಾಮಾನ್ಯ ವೀರ್ಯಾಣು ಎಂದರೆ ಚಲನಶಕ್ತಿಯುಳ್ಳದ್ದು. ಇದಕ್ಕೆ ತಲೆಯ ಭಾಗ, ಮಧ್ಯಭಾಗ ಮತ್ತು ಬಾಲದ ಭಾಗ ಎಂದು ಮೂರು ಭಾಗಗಳಿರುತ್ತವೆ.

ತಲೆಯ ಭಾಗ: ಈ ಭಾಗದಲ್ಲಿ ಬೆಳವಣಿಗೆ ಹೊಂದಿದ ಅಂಡದಲ್ಲಿ ಯಾವ ಅಗುಣಿತ ಸಂಖ್ಯೆಯ ವರ್ಣತಂತುಗಳಿರುತ್ತವೆಯೋ ಅದೇ ಸಂಖ್ಯೆಯ ವರ್ಣತಂತುಗಳ ಗುಂಪಿರುತ್ತದೆ. ಮಧ್ಯದ ಭಾಗ: ಈ ಭಾಗದಲ್ಲಿ ಕೇಂದ್ರಕಾಯಗಳು, ಮೈಟೋಕಾಂಡ್ರಿಯ ಮುಂತಾದವು ಇರುತ್ತವೆ.

ಬಾಲದ ಭಾಗ: ವೀರ್ಯಾಣುಗಳ ಉದ್ದವಾದ ಬಾಲ ಚಲನಶಕ್ತಿಯುಳ್ಳದ್ದಾಗಿದ್ದು ವೀರ್ಯಾಣುಗಳ ಚಲನೆಗೆ ಅನುಕೂಲ ಮಾಡಿಕೊಡುತ್ತದೆ. ಆದರೆ ಏಡಿಗಳ ವೀರ್ಯಾಣುಗಳಲ್ಲಿ ಬಾಲವೇ ಇರುವುದಿಲ್ಲ. ಆದರೆ ಇವುಗಳಲ್ಲಿರುವ ಚೂಪಾದ ಆಕೃತಿಗಳು ಅಂಡಗಳ ಕಡೆ ನಿಧಾನವಾಗಿ ಚಲಿಸಲು ಅನುಕೂಲ ಮಾಡಿಕೊಟ್ಟಿವೆ.

ನಿಷೇಚನ ನಿಜಕ್ಕೂ ಪ್ರಕೃತಿಯ ಆಶ್ಚರ್ಯಕರ ವಿಷಯಗಳಲ್ಲೊಂದು. ಇಲ್ಲಿ ಗಂಡು ಮತ್ತು ಹೆಣ್ಣಿನಿಂದ ಬರುವ ವರ್ಣತಂತುಗಳು ಸೇರುವುದರಿಂದ ಪ್ರತಿ ಮುಂದಿನ ಪೀಳಿಗೆಯಲ್ಲಿ ವರ್ಣತಂತುಗಳ ಸಂಖ್ಯೆ ಇಮ್ಮಡಿಸಲು ಅವಕಾಶವಿದೆ. ಹೀಗಾಗುವುದನ್ನು ತಡೆಯಲೆಂದೇ ಜೀವಿಗಳಲ್ಲಿ ಸಂಖ್ಯಾ ಕ್ಷೀಣ ವಿಭಜನೆ ಅಥವಾ ಮಿಯಾಸಿಸ್ ಎಂಬ ವಿಶೇಷ ರೀತಿಯ ಕೋಶವಿಭಜನೆ ಕಂಡುಬರುತ್ತದೆ. ನಿಷೇಚನಕ್ಕೆ ಸಿದ್ಧವಾಗಿರುವ ಸಂಯೋಗಿ ಜೀವಕಣಗಳಲ್ಲಿ ಇತರ ದೈಹಿಕಕೋಶಗಳಲ್ಲಿರುವ ವರ್ಣತಂತುಗಳ ಸಂಖ್ಯೆಯ ಅರ್ಧದಷ್ಟು ಮಾತ್ರ ಇರುತ್ತವೆ. ನಿಷೇಚನದಲ್ಲಿ ಅಂಡ ಮತ್ತು ವೀರ್ಯಾಣುಗಳ ಸಂಯೋಗದಿಂದ ಜೀವಿಯ ವರ್ಣತಂತುಗಳ ದ್ವಿಗುಣಿತ ಸಂಖ್ಯೆ (ಡಿಪ್ಲಾಯ್ಡ್ ಸಂಖ್ಯೆ) ಪುನಃ ಸ್ಥಾಪಿತವಾಗುತ್ತದೆ. ಮಾನವ ಮತ್ತು ಇತರ ಅನೇಕ ಪ್ರಾಣಿಗಳಲ್ಲಿ ನಿಷೇಚನವಾದಾಗಲೇ ವೀರ್ಯಾಣುವಿನಿಂದ ಮುಂದೆ ಹುಟ್ಟುವ ಜೀವಿಯ ಲಿಂಗದ ನಿರ್ಧಾರವಾಗುತ್ತದೆ. ಏಕೆಂದರೆ ಇಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳಲ್ಲಿ ಅರ್ಧಭಾಗ ವೀರ್ಯಾಣುಗಳು ಇನ್ನರ್ಧ ಭಾಗದಿಂದ ಲಿಂಗನಿರ್ಧಾರಕ ವರ್ಣತಂತುವಿನಿಂದ ವ್ಯತ್ಯಾಸ ತೋರುತ್ತದೆ. (ಮಾನವನ ವೀರ್ಯಾಣುಗಳಲ್ಲಿ ಸುಮಾರು ಅರ್ಧದಷ್ಟು ವರ್ಣತಂತುವನ್ನು ಘಿ ಪಡೆದಿವೆಯಾದರೆ ಇನ್ನರ್ಧದಷ್ಟು ಙ ವರ್ಣತಂತುವನ್ನು ಪಡೆದಿವೆ). ಇದಕ್ಕೆ ವ್ಯತಿರಿಕ್ತವಾದ ಸಂಗತಿ ಚಿಟ್ಟೆ, ಪತಂಗ ಮತ್ತು ಹಕ್ಕಿಗಳಲ್ಲಿ ಕಾಣುತ್ತದೆ. ಈ ಜೀವಿಗಳಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳೆಲ್ಲವೂ ಒಂದೇ ರೀತಿಯವಾಗಿರುತ್ತವೆ. ಆದರೆ, ಅಂಡಗಳಲ್ಲಿ ಮಾತ್ರ ಒಂದು ವರ್ಣತಂತುವಿನ ವ್ಯತ್ಯಾಸವಿದ್ದು ಅಂಡಗಳು ಎರಡು ವಿಧವಾಗಿರುತ್ತವೆ. ಇಲ್ಲಿ ಮುಂದಿನ ಸಂತತಿಯ ಲಿಂಗವನ್ನು ನಿಷೇಚನೆಯ ಕಾಲದಲ್ಲಿ ಅಂಡ ನಿರ್ಧರಿಸುತ್ತದೆ.

ಬಹಳ ಸರಳರೀತಿಯ ನಿಷೇಚನೆಯನ್ನು ಕಡಲ ಕುಡಿಕೆ, ಕೆಲವು ಮೃದ್ವಂಗಿಗಳು ಮತ್ತು ಹುಳುಗಳಲ್ಲಿ ಕಾಣಬಹುದು. ಇವುಗಳಲ್ಲಿ ಅಂಡ ಮತ್ತು ವೀರ್ಯಾಣುಗಳು ಬಲಿತಮೇಲೆ ನೀರಿನಲ್ಲಿ ವಿಸರ್ಜಿತವಾಗುವುವು. ಇಲ್ಲಿ ಅಂಡ ಮತ್ತು ವೀರ್ಯಾಣುಗಳ ಸೇರುವಿಕೆ ಆಕಸ್ಮಿಕ ಪ್ರಸಂಗವಾದ್ದರಿಂದ ಇವು ಲಕ್ಷಾಂತರ ಅಂಡ ಹಾಗೂ ವೀರ್ಯಾಣುಗಳನ್ನು ಉತ್ಪತ್ತಿಮಾಡುತ್ತವೆ.

ಕಪ್ಪೆಗಳ ಸಂಭೋಗಕಾಲದಲ್ಲಿ ಗಂಡು ಹೆಣ್ಣನ್ನು ತಬ್ಬಿಕೊಂಡಿದ್ದು ಹೆಣ್ಣಿನಿಂದ ಹೊರಬಂದ ಅಂಡಗಳ ಮೇಲೆ ಗಂಡುಕಪ್ಪೆ ವೀರ್ಯದ್ರವ ಸುರಿಸುತ್ತದೆ. ಆದ್ದರಿಂದ ಇಲ್ಲಿ ನಿಷೇಚನ ಪ್ರಾಣಿಯ ಶರೀರದ ಹೊರಗಡೆ ಅಂದರೆ ನೀರಿನಲ್ಲಿ ನಡೆಯುತ್ತದೆ. ಆದರೆ ಸಸ್ತನಿ ಮತ್ತಿತರ ಮೇಲ್ಮಟ್ಟದ ಪ್ರಾಣಿವರ್ಗದಲ್ಲಿ ಅಂಡಗಳು ಹೆಣ್ಣಿನ ಶರೀರದೊಳಗೆ, ಅಂದರೆ ಅವು ಅಂಡಾಶಯದಿಂದ ಹೊರಗೆ ಬರುವ ದಾರಿಯಲ್ಲಿ ನಿಷೇಚಿತಗೊಳ್ಳುವುವು. ಇಲ್ಲಿ ಉತ್ಪತ್ತಿಯಾಗುವ ಅಂಡಗಳ ಸಂಖ್ಯೆಯೂ ಕಡಿಮೆ. ಕೆಲವು ಪ್ರಾಣಿಗಳ ಮೊಟ್ಟೆಗಳು (ಉದಾ: ಪಕ್ಷಿಗಳು) ನಿಷೇಚನೆಗೊಂಡ ಮೇಲೆಯೇ ಹೊರ ಇಡಲ್ಪಡುತ್ತವೆ. ಇದರಿಂದ ಮೊಟ್ಟೆಯೊಡೆಯುವುದಕ್ಕೆ ಮುಂಚೆಯೇ ಭ್ರೂಣ ಸ್ವತಂತ್ರಜೀವಿಯಂತೆ ಬೆಳೆಯಬೇಕಾಗುತ್ತದೆ. ಆದ್ದರಿಂದಲೇ ಬೆಳೆಯುವ ಭ್ರೂಣಕ್ಕೆ ಆಹಾರವಾಗಿರಲೆಂದು ಹೆಚ್ಚು ಭಂಡಾರ (ಯೋಕ್) ಶೇಖರವಾಗಿರುತ್ತದೆ. ಕೋಳಿಯ ಮೊಟ್ಟೆಯಲ್ಲಿ ಸಣ್ಣ ಭ್ರೂಣ ಬಿಳಿಯ ಬಣ್ಣದ ಹಾಗೂ ಅರ್ಧಚಂದ್ರಾಕೃತಿಯ ವಸ್ತುವಿನಂತೆ ಇದ್ದು ಬಂಡಾರದ ಮೇಲ್ಭಾಗದಲ್ಲಿರುತ್ತದೆ. ಮೊಟ್ಟೆಯ ಮಿಕ್ಕೆಲ್ಲ ಭಾಗ ಪೋಷಕವಸ್ತುಗಳಾದ ಬಂಡಾರದಿಂದ ತುಂಬಿರುತ್ತದೆ.

ಮಾನವ ಮತ್ತಿತರ ಅನೇಕ ಸ್ತನಿಗಳಲ್ಲಿ ಎಳೆಯ ಭ್ರೂಣ ತಾಯಿಯ ಗರ್ಭದಲ್ಲಿನ ಗರ್ಭವೇಷ್ಟನ (ಪ್ಲಸೆಂಟ) ಎಂಬ ಅಂಗಾಂಶಕ್ಕೆ ಸೇರಿಕೊಂಡಿದ್ದು ತಾಯಿಯಿಂದ ಪೋಷಿತವಾಗುತ್ತದೆ. ಆದ್ದರಿಂದ ಇಂಥ ಜೀವಿಗಳ ಅಂಡಗಳಲ್ಲಿ ಹೆಚ್ಚು ಪೋಷಕ ವಸ್ತುಗಳು ಶೇಖರವಾಗಿರುವುದು ಆವಶ್ಯಕವಲ್ಲ.

ಸ್ತನಿಗಳ ಶರೀರದೊಳಕ್ಕೆ ವೀರ್ಯಾಣುಗಳನ್ನು ಕೃತಕವಾಗಿ ಒಂದು ನಳಿಕೆಯ ಮೂಲಕ ಕಳಿಸಬಹುದು. ಇವು ಅಂಡಗಳನ್ನು ನಿಷೇಚನಗೊಳಿಸುವುದರಲ್ಲಿ ಸಮರ್ಥವಾಗಿರುತ್ತವೆ. ಇಂಥ ಪ್ರಯೋಗಗಳಿಗೆ ಕೃತಕ ವೀರ್ಯ ಪ್ರಯೋಗಗಳು ಎಂದು ಹೆಸರು. ಕುದುರೆ, ಹಸು, ಕುರಿ, ನಾಯಿ, ಮತ್ತಿತರ ಪ್ರಾಣಿಗಳಲ್ಲಿ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಒಳ್ಳೆಯ ತಳಿಯ ಗೂಳಿಯಿಂದ ವೀರ್ಯಾಣುಗಳನ್ನು ತೆಗೆದು ಶುಷ್ಕ ಮಂಜುಗೆಡ್ಡೆಯ ಜೊತೆ ಇರಿಸಿ ಹಸುಗಳ ನಿಷೇಚನೆಗೆ ಬಳಸಬಹುದು. ಕೆಲವು ಗೂಳಿಗಳ ವೀರ್ಯಾಣುಗಳನ್ನು ಈ ರೀತಿ 4 ವರ್ಷಗಳ ಕಾಲ ಶೈತ್ಯದಲ್ಲಿ ಹೆಪ್ಪುಗಟ್ಟಿಸಿ ಇಟ್ಟಿದ್ದು ಅವುಗಳ ನಿಷೇಚನ ಸಾಮಥ್ರ್ಯ ಹಾಳಾಗದೆ ಇನ್ನೂ ಇರುವುದನ್ನು ಕಂಡುಕೊಳ್ಳಲಾಗಿದೆ. ಇದೇ ರೀತಿ ಮಾನವನ ವೀರ್ಯಾಣುಗಳನ್ನೂ ಕೂಡ ಮೂರು ತಿಂಗಳುಕಾಲ ಶೈತ್ಯದಲ್ಲಿ ಹೆಪ್ಪುಗಟ್ಟಿಸಿ ಇಟ್ಟಿರಬಹುದೆನ್ನಲಾಗಿದೆ.

ಅಂಡದೊಳಗೆ ವೀರ್ಯಾಣು ಪ್ರವೇಶಿಸುವ ವಿಧಾನ, ಅಂಡದಲ್ಲಿ ನ್ಯೂಕ್ಲಿಯಸ್ಸುಗಳ ಚಲನೆ, ನಿಷೇಚನ ಶಂಕು, ನಿಷೇಚನ ಪೊರೆ, ಬಹುರೇತಸ್ವ (ಪಾಲಿಸ್ಪರ್ಮಿ) ಮತ್ತು ವಿಶೇಷವಾಗಿ ಕಿಣ್ವಗಳ ಪ್ರಭಾವದಿಂದ ನಿಷೇಚನ ಕಾಲದಲ್ಲಿ ಮತ್ತು ನಿಷೇಚಿತವಾದ ಮೇಲೆ ಆಗುವ ರಾಸಾಯನಿಕ ವ್ಯತ್ಯಾಸಗಳ ಕುರಿತು ಅಧ್ಯಯನಗಳು ಮುಂದುವರಿದಿವೆ. ಈ ಅಧ್ಯಯನಗಳ ಅನೇಕ ವಿಷಯಗಳಲ್ಲಿ ಇನ್ನೂ ಒಮ್ಮತಾಭಿಪ್ರಾಯ ಮೂಡಿಲ್ಲವಾದ್ದರಿಂದ ನಿಷೇಚನೆಯ ಅನೇಕ ವಿವರಗಳ ಬಗ್ಗೆ, ಮುಖ್ಯವಾಗಿ ರಾಸಾಯನಿಕ ಬದಲಾವಣೆಗಳು ಮುಂತಾದವುಗಳ ವಿಷಯವಾಗಿ ಇನ್ನೂ ನಿಶ್ಚಿತ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿಲ್ಲ.

ಮೆಟeóÉೂೀವ ಗುಂಪಿನ ಎಲ್ಲ ಪ್ರಾಣಿಗಳಲ್ಲೂ ನಿಷೇಚನೆಯ ವಿಧಾನ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ವೀರ್ಯಾಣು ಅಂಡದೊಡನೆ ಸಂಯೋಗ ಹೊಂದುತ್ತದೆ. ಇದನ್ನು ಸಂಯೋಗಿ ಜೀವಕಣ ಸಂಯೋಗ (ಸಿಂಗಮಿ) ಎಂದು ಕರೆಯುತ್ತಾರೆ. ಇಂತಹ ಸಂಯೋಗ ನಡೆಯುವಾಗ ತಂದೆ ಹಾಗೂ ತಾಯಿಯ ನ್ಯೂಕ್ಲಿಯಸುಗಳ ಸಂಯೋಗವೂ (ಕೇರಿಯಾಗಮಿ) ಮತ್ತು ಕೋಶರಸ ಸಂಯೋಗವೂ (ಪ್ಲಾಸ್ಮೊಗಮಿ) ನಡೆಯುವವು. ನಿಷೇಚನೆಯ ಪರಿಣಾಮಗಳು ಬರಿಯ ಪರಿವರ್ಧನೆಗೆ ಮಾತ್ರ ಸೀಮಿತವಾಗಿಲ್ಲದೆ ಅನುವಂಶೀಯ ಗುಣಗಳ ಸಂಗಮವೂ ಆಗಿರುತ್ತದೆ. ನಿಷೇಚಿತ ಅಂಡ (ಸಂಯುಕ್ತ ಜೀವಕಣ-eóÉೈಗೋಟ್) ಕೋಶ ವಿಭಜನೆಯ ಮೂಲಕ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಉದ್ಭವಿಸುವ ಹೊಸ ಜೀವಿಯು ಆದಿ ನ್ಯೂಕ್ಲಿಯಸುಗಳ (ಪ್ರೋನ್ಯೂಕ್ಲಿಯೈ) ಕ್ರೋಮೋಸೋಮುಗಳ ಮುಖಾಂತರ ಬಂದ ಆನುವಂಶಿಕ ಗುಣಗಳನ್ನು ಪಡೆದಿರುತ್ತದೆ.

ಸಂಯೋಗಿ ಜೀವಕಣಗಳ (ಗೆಮೀಟ್ಸ್) ಸಂಯೋಗ ಶಾಶ್ವತವಾಗಿರಬಹುದು ಇಲ್ಲವೇ ತಾತ್ಕಾಲಿಕವಾದ್ದದ್ದಾಗಿರಬಹುದು. (ಅನುಬದ್ಧ ಸಂಯೋಗ-ಕಾಂಜುಗೇಷನ್). ಸಾಮಾನ್ಯವಾಗಿ ಗಾತ್ರ ಮತ್ತು ಆಕೃತಿಗಳಲ್ಲಿ ವ್ಯತ್ಯಾಸ ತೋರುವ ಎರಡು ತೆರನ ಲೈಂಗಿಕ ಸಂಯೋಗಿ ಜೀವಕಣಗಳು ಇರುವವು. ಇಂತಹ ಸಂಯೋಗಿ ಜೀವಕಣಗಳ ಸಂಯೋಗಕ್ಕೆ ಅಸಮ ಸಂಯೋಗಿ ಜೀವಕಣ ಸಂಯೋಗ (ಅನೈಸೋಗಮಿ) ಎಂದು ಹೆಸರು. ಇದಕ್ಕೆ ವ್ಯತಿರಿಕ್ತವಾದ್ದದ್ದೆಂದರೆ, ವಿವಿಧ ಲಿಂಗಗಳ ಎರಡು ಸಂಯೋಗಿ ಜೀವಕಣಗಳೂ ಒಂದೇ ರೀತಿಯ ಆಕಾರ ಗಾತ್ರಗಳನ್ನು ಹೊಂದಿರುವುದು. (ಎರಡರ ಆಂತರಿಕ ರಚನೆ ಮತ್ತು ರಾಸಾಯನಿಕ ಗುಣಗಳಲ್ಲಿ ವ್ಯತ್ಯಾಸ ಇದ್ದರೂ ಕೂಡ). ಇಂಥ ಸಂಯೋಗಿ ಜೀವಕಣಗಳ ಸಂಯೋಗವನ್ನು ಸಮ ಸಂಯೋಗಿ ಜೀವಕಣ ಸಂಯೋಗ (ಐಸೋಗಮಿ) ಎಂದು ಕರೆಯಬಹುದು. ಇನ್ನೊಂದು ವಿಶೇಷ ರೀತಿಯ ಸಂಯೋಗ ಎಂದರೆ, ಸ್ವಸಂಯೋಗ (ಆಟೋಗಮಿ). ಈ ವಿಧಾನದಲ್ಲಿ ಎರಡು ವ್ಯಕ್ತಿಗಳ ಸಂಯೋಗವಾಗದೇ ನ್ಯೂಕ್ಲಿಯಸ್ಸಿನ ಪುನರ್ನಿರ್ಮಾಣ ನಡೆಯುತ್ತದೆ. ಇಲ್ಲಿ ಎರಡು ಮರಿ ನ್ಯೂಕ್ಲಿಯಸುಗಳು ಒಂದೇ ಕೋಶದಲ್ಲಿ ಸಂಯೋಗಗೊಂಡಿರುತ್ತವೆ. ಆದ್ದರಿಂದ ಸ್ವಸಂಯೋಗ ವಿಧಾನವನ್ನು ಒಂದು ರೀತಿಯ ಆಂತರಿಕ ಸ್ವನಿಷೇಚನ (ಇಂಟರ್‍ನಲ್ ಸೆಲ್ಫ್‍ಫರ್ಟಿಲೈಸೇಷನ್) ಎಂದು ಕರೆದರೂ ತಪ್ಪಾಗಲಾರದು.

ನಿಷೇಚನೆಯ ಸಮಸ್ಯೆಗಳನ್ನು ತಿಳಿಯುವಾಗ ಸಂಯೋಗಿ ಜೀವಕಣಗಳಲ್ಲಿ ನಿಷೇಚನಕ್ಕೆ ಸಿದ್ಧವಾಗುವ ಮೊದಲು ಆಗುವ ಬದಲಾವಣೆಗಳ ಬಗ್ಗೆ ಅಂದರೆ ವೀರ್ಯಾಣುವು ಅಂಡಕ್ಕೆ ಅಂಟಿಕೊಳ್ಳುವ ರೀತಿಯನ್ನು ನಿಯಂತ್ರಿಸುವ ವಿಧಾನಗಳು ಸಂಯೋಗಿಜೀವಕಣಗಳು ಬೆಳೆದು ಬಲಿಯುವಿಕೆ ಮುಂತಾದ ವಿಷಯಗಳನ್ನೂ ತಿಳಿದುಕೊಳ್ಳುವುದು ಅವಶ್ಯಕ. ನೈಸರ್ಗಿಕ ಪಿತೃರಹಿತ ಜನನ (ನ್ಯಾಚುರಲ್ ಪಾರ್ತೆನೊಜೆನಿಸಿಸ್) ಸಾಮಥ್ರ್ಯ ಇಲ್ಲದ ಎಲ್ಲ ಅಂಡಗಳಲ್ಲೂ ಶೀಘ್ರವಾಗಿಯೊ ಇಲ್ಲವೆ ತಡವಾಗಿಯೋ ಮುಂದಿನ ಬೆಳವಣಿಗೆಯನ್ನು ತಡೆಹಿಡಿಯುವಂತೆ ಕೆಲವು ಅಡಚಣೆಗಳುಂಟಾಗುತ್ತವೆ. ನಿಷೇಚನಕ್ಕೆ ಒಳಪಡುವ ಎಲ್ಲ ಅಂಡಗಳಲ್ಲೂ ಬಲಿಯುವುದಕ್ಕೆ ಸ್ವಲ್ಪ ಮೊದಲು ವೀರ್ಯಾಣುವಿನ ಪ್ರವೇಶವಾದಾಗ ಅಂಡ ಬಲಿಯುವಿಕೆಗೆ ಇದ್ದ ಅಡಚಣೆ ನಿವಾರಣೆಗೊಂಡು ನ್ಯೂಕ್ಲಿಯಸ್ ಸಂಯೋಗ (ಕೇರಿಯಾಗಮಿ) ನಡೆಯುವುದಕ್ಕೆ ಮೊದಲೇ ಅಂಡದ ಬಲಿಯುವಿಕೆ ಪೂರ್ತಿಯಾಗಿರುತ್ತದೆ.

ಕೆಳವರ್ಗದ ಸಸ್ಯಗಳಾದ ಜರೀಗಿಡ, ಮಾಸ್ ಮುಂತಾದವುಗಳಲ್ಲಿ ಸಸ್ಯದ ಹೆಣ್ಣು ಜನನಾಂಗವಾದ ಆರ್ಕಿಗೋನಿಯವು ಕೆಲವು ರಾಸಾಯನಿಕ ಪದಾರ್ಥಗಳನ್ನು ಉತ್ಪತ್ತಿ ಮಾಡುತ್ತವೆ. ಈ ವಸ್ತುಗಳು ಗಂಡು ಸಂಯೋಗಿಜೀವಕಣಗಳನ್ನು ತಮ್ಮೆಡೆಗೆ ಆಕರ್ಷಿಸುವ ಸಾಮಥ್ರ್ಯವನ್ನು ಪಡೆದಿರುವುವು. ಈ ಆಕರ್ಷಣೆಗೆ ಕೀಮೋಟ್ಯಾಕ್ಸಿಸ್ ಎಂದು ಹೆಸರು. ಈ ರೀತಿಯ ರಾಸಾಯನಿಕ ಆಕರ್ಷಣೆ ಎಲ್ಲ ಪ್ರಾಣಿಗಳಲ್ಲಿ ಕಂಡುಬರದಿದ್ದರೂ ಕೆಲವು ಪ್ರಾಣಿಗಳಲ್ಲಿ ಸಂಯೋಗಿಜೀವಕಣದ ಮೇಲೆ ತಮ್ಮ ಪ್ರಭಾವವನ್ನು ಬೀರುವುದು ಕಂಡುಬಂದಿದೆ. ಸ್ಪಷ್ಟವಾಗಿ ಹೇಳುವುದಾದರೆ ವೀರ್ಯಾಣುವಿನ ಚಟುವಟಿಕೆಯ ಫಲವಾಗಿ ಪ್ರತಿಬಂಧಕ ಕಿಣ್ವ ಸಂಕೀರ್ಣದಿಂದ (ಇನ್ಹಿಬಿಟರ್ ಎಂಜೈಮ್ ಕಾಂಪ್ಲೆಕ್ಸ್) ಬಿಡುಗಡೆಯಾಗುವ ಕಿಣ್ವಗಳು ನಿಷೇಚನವನ್ನು ಚುರುಕುಗೊಳಿಸುತ್ತವೆ.

ನಿಷೇಚನದಲ್ಲಿ ನಾವು ಎರಡು ಮುಖ್ಯ ಘಟ್ಟಗಳನ್ನು ಕಾಣಬಹುದು. ಮೊದಲನೆಯ ಘಟ್ಟದಲ್ಲಿ ಅಂಡದ ಹೊರಭಾಗಕ್ಕೆ ವೀರ್ಯಾಣು ಅಂಟಿಕೊಳ್ಳುವುದು ಮತ್ತು ಇದರಿಂದ ಅಂಡದ ಮುಂದಿನ ಬೆಳವಣಿಗೆಗೆ ಬೇಕಾದ ರಾಸಾಯನಿಕ ಪ್ರತಿಕ್ರಿಯೆಗಳು ನಡೆಯುವುದು. ಎರಡನೆಯ ಘಟ್ಟ ವೀರ್ಯಾಣು ಅಂಡವನ್ನು ಪ್ರವೇಶಿಸಿದ ಕೂಡಲೇ ಪ್ರಾರಂಭವಾಗಿ ಸಂಯೋಗಿಜೀವಕಣಗಳ ನ್ಯೂಕ್ಲಿಯಸುಗಳ ಸಂಯೋಗವಾದ ಮೇಲೆ ಇಲ್ಲವೇ ಪರಸ್ಪರ ಎದುರಾಗಿ ಕಲೆತಾಗ ಮುಗಿಯುತ್ತದೆ. ಮೊದಲನೆಯ ಘಟ್ಟ ನೈಸರ್ಗಿಕವಾಗಿ ಇಲ್ಲವೇ ಕೃತಕವಾಗಿ ಎರಡನೆಯ ಘಟ್ಟದಿಂದ ಬೇರೆಯಾಗಬಹುದು. ಇಂಥ ಸನ್ನಿವೇಶಗಳಲ್ಲಿ ಪ್ರಚೋದಿಸಲ್ಪಟ್ಟ ಅಂಡ ತಂದೆಯ ಕ್ರೋಮೊಸೋಮುಗಳಿಲ್ಲದೆ ಬೆಳೆಯುತ್ತದೆ. ಈ ವಿದ್ಯಮಾನಕ್ಕೆ ಸೂಡೋಗಮಿ ಎಂದು ಹೆಸರು.

ಸೂಡೋಗೆಮಿಯನ್ನು ಕೃತಕವಾಗಿ ಅಸಮರೂಪಿ ವೀರ್ಯಪ್ರಯೋಗದಿಂದ ಅಥವಾ ಸಮರೂಪಿ ವೀರ್ಯಪ್ರಯೋಗದಿಂದ ಉಂಟುಮಾಡಬಹುದು.

ಅಂಡದೊಡನೆ ವೀರ್ಯಾಣುವಿನ ಮೊದಲ ಯಶಸ್ವೀ ಸಂಘರ್ಷಣೆ ಅಂಡದ ಹೊರಮೈಯಲ್ಲಿ ಅನೇಕ ಪ್ರತಿಕ್ರಿಯೆಗಳನ್ನುಂಟುಮಾಡಿ ಪ್ರಚೋದನೆಯ ಮೊದಲ ಚಿಹ್ನೆಯನ್ನು ಎಸಗುತ್ತದೆ. ಈ ಬದಲಾವಣೆಗಳನ್ನೆಲ್ಲ ಸಂಕ್ಷೇಪವಾಗಿ ವಿವರಿಸಲು ಕಡಲ ಮುಳ್ಳುಗೊಂಡೆಯ (ಸೀ ಅರ್ಚಿನ್) ಅಂಡ ಸರಿಯಾದ ಉದಾಹರಣೆಯಾಗಿದೆ. ಈ ಪ್ರಾಣಿಯಲ್ಲಿ ಬಲಿತ ಅಂಡಗಳು ಸಮುದ್ರದ ನೀರಿಗೆ ಬಿಡುಗಡೆಯಾಗುವುವು. ಈ ಅಂಡಗಳಿಗೆ ಅಂಬಲಿಯಂಥ (ಜೆಲಿ) ಹೊರಕವಚವುಂಟು. ಇದು ನಿಧಾನವಾಗಿ ಕರಗಿ, ಅಂಡ ಮತ್ತು ವೀರ್ಯಾಣುಗಳು ಒಂದನ್ನೊಂದು ಕಲೆಯುವಂತೆ ಮಾಡುವ ಮತ್ತು ಒಮ್ಮೊಮ್ಮೆ ಸಮರೂಪಿ ವೀರ್ಯಾಣುಗಳು ಮತ್ತೆ ಅಂಟಿಕೊಳ್ಳುವಂತೆ ಮಾಡುವ ಫರ್ಟಿಲೈಸಿನ್ ಎಂಬ ವಸ್ತುವನ್ನು ಬಿಡುಗಡೆ ಮಾಡುತ್ತದೆ. ಅಂಡದ ಹೊರಭಾಗ ವೈಟ್‍ಲೈನ್ ಪೊರೆಯಿಂದ ಆವೃತವಾಗಿದೆ. ಇದರ ಕೆಳಗೆ ಹೊರಮೈ ಚುಕ್ಕೆಗಳಿರುತ್ತವೆ (ಕಾರ್ಟಿಕಲ್ ಗ್ರಾನ್ಯೂಲ್ಸ್). ನಿಷೇಚನೆಗೊಳಿಸುವ ವೀರ್ಯಾಣು ಅಂಬಲಿಕವಚದ ಮುಖಾಂತರ ಹಾಯುತ್ತದೆ. ಅಂಡದೊಂದಿಗೆ ಇದರ ಪ್ರತಿಕ್ರಿಯೆಯೆಂದರೆ ಇದರ ತಲೆಯ ಅಕ್ರೋಸೋಮಿನಿಂದು ಒಂದು ಸೂಕ್ಷ್ಮ ದಂಡ ರೂಪುಗೊಳ್ಳುವುದು. ಈ ದಂಡ ಅಂಡಕ್ಕೆ ಬಲವಾಗಿ ಅಂಟಿಕೊಳ್ಳುವುದು. ಈಗ ಅಂಡದ ಕೋಶರಸ ನಿಧಾನವಾಗಿ ವೀರ್ಯಾಣುವನ್ನು ಒಳಕ್ಕೆ ತೆಗೆದುಕೊಳ್ಳುತ್ತದೆ. ವೀರ್ಯಾಣುವಿನ ಪ್ರಭಾವದಿಂದ ಅಂಡದ ಮೇಲ್ಮೈಪದರದಲ್ಲಿ (ಕಾರ್ಟಿಕಲ್ ಜೋನ್) ಸ್ಥಳೀಯ ಬದಲಾವಣೆಯಾಗಿ ಅದರ ಪ್ರಭಾವ ವೀರ್ಯಾಣು ಅಂಟಿಕೊಂಡ ಸ್ಥಳದಿಂದ ತೊಡಗಿ ಅಂಡದ ಸುತ್ತ ಹರಡಿಕೊಳ್ಳುತ್ತದೆ. ಅನಂತರ ಅಂಡದ ಹೊರಮೈ ಚುಕ್ಕೆಗಳು ಒಡೆದು ಅವುಗಳ ಪದಾರ್ಥದ ಸ್ವಲ್ಪ ಭಾಗ ವೈಟಲೈನ್ ಪೊರೆಯೊಂದಿಗೆ ಸೇರಿಹೋಗಿ ಅದು ಅಂಡದ ಹೊರಭಾಗದಿಂದ ಎತ್ತಲ್ಪಟ್ಟು ಹೊಸದಾದ ನಿಷೇಚನ ಪೊರೆಯ ಉಗಮಕ್ಕೆ ನಾಂದಿಯಾಗುತ್ತದೆ. ಈ ಪೊರೆಯ ಕೆಳಗಿನ ಜಾಗದಲ್ಲಿ ದ್ರವ ಪದಾರ್ಥ ಸೇರಿಕೊಂಡು ಅಂಡದ ಹೊರಭಾಗದಲ್ಲಿ ಒಂದು ತೆಳುವಾದ ಪೊರೆ ಉಂಟಾಗುತ್ತದೆ. ವೀರ್ಯಾಣುವನ್ನು ಒಳಕ್ಕೆ ತೆಗೆದುಕೊಂಡ ಅನಂತರ ಅದರ ಕೇಂದ್ರ ಕಾಯಗಳು ಅಂಡಕ್ಕೆ ವೀರ್ಯಾಣುನಕ್ಷತ್ರಗಳನ್ನು (ಸ್ಪರ್ಮಾಸ್ಟರ್ಸ್) ಒದಗಿಸಿಕೊಡುತ್ತದೆ. ಈಗ ಹೆಣ್ಣು ಪ್ರೋನ್ಯೂಕ್ಲಿಯಸ್ ಗಂಡು ಪ್ರೋನ್ಯೂಕ್ಲಿಯಸ್ಸಿನ ಕಡೆಗೆ ಚಲಿಸಿ ಅದರೊಡನೆ ಸಂಯೋಗ ಹೊಂದುತ್ತದೆ. ಇವೆರಡರ ಸಂಯೋಗದಿಂದ ಉಂಟಾಗುವ ದೊಡ್ಡ ನ್ಯೂಕ್ಲಿಯಸ್ ಅಂಡದ ಮಧ್ಯಭಾಗಕ್ಕೆ ಬಂದು ಮೈಟಾಸಿಸ್ ಮೂಲಕ ವಿಭಜನೆಯಾಗಲು ಪ್ರಾರಂಭಿಸುತ್ತದೆ. ಅಂಡದ ಹೊರಮೈಯಲ್ಲಿ ಪ್ರಾರಂಭವಾದ ಬದಲಾವಣೆಗಳು ಕೋಶರಸದ ಒಳಭಾಗದಲ್ಲೆಲ್ಲ ತಮ್ಮ ಪ್ರಭಾವ ಪರಿಣಾಮಗಳನ್ನು ತೋರುವುವು. ಅಂಡದ ಆಕಾರ, ಸ್ನಿಗ್ಧತೆ, ವ್ಯಾಪ್ಯತೆ, ಪ್ರೋಟೀನ್ ಕರಗುವಿಕೆ ಮತ್ತು ಜೈವಿಕ ಕ್ರಿಯೆಗಳ ಮೇಲೆ ನಿಷೇಚನ ಬೀರಬಹುದಾದ ಪ್ರಭಾವಗಳು ಇನ್ನೂ ಲಂಬಿತ ಸಂಶೋಧನೆಗಳ ವಿಷಯಗಳಾಗಿವೆ.

ಸಾಮಾನ್ಯವಾಗಿ ಒಂದು ವೀರ್ಯಾಣು ಒಂದು ಅಂಡವನ್ನು ನಿಷೇಚಿಸುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ವೀರ್ಯಾಣುಗಳು ನಿಷೇಚನದಲ್ಲಿ ಭಾಗವಹಿಸಿದರೆ ಪರಿವರ್ಧನೆಗೆ ಭಂಗ ಬರುತ್ತದೆ. ಇದಕ್ಕೆ ಬಹುರೇತಸ್ವ (ಪಾಲಿಸ್ಪರ್ಮಿ) ಎಂದು ಹೆಸರು. ಪ್ರಾಣಿಗಳ ಕೆಲವು ಪ್ರಭೇದಗಳಲ್ಲಿ ಅನೇಕ ವೀರ್ಯಾಣುಗಳು ಅಂಡಪ್ರವೇಶ ಪಡೆದರೂ ಒಂದೇ ಒಂದು ಗಂಡುಪ್ರೋನ್ಯೂಕ್ಲಿಯಸ್ ಮಾತ್ರ ಹೆಣ್ಣಿನದರೊಡನೆ ಸಂಯೋಗ ಹೊಂದುತ್ತದೆ. ಉಳಿದವೆಲ್ಲ ನಶಿಸಿಹೋಗುತ್ತವೆ. ನಿಷೇಚನವಾದ ಕೂಡಲೆ ಅಂಡ ಈ ಬಹುರೇತಸ್ವದಿಂದ ರಕ್ಷಣೆ ಪಡೆಯಲು ಅನೇಕ ಅಡೆತಡೆಗಳನ್ನಿಟ್ಟುಕೊಂಡಿರುತ್ತದೆ. ಆದರೆ ಈ ಅಡೆತಡೆಗಳನ್ನು ಉಂಟುಮಾಡುವ ಕ್ರಿಯೆಯ ಹಿಂದಿನ ವಿಷಯಗಳ ಬಗ್ಗೆ ಇನ್ನೂ ಪೂರ್ಣವಾಗಿ ಅರಿಯಲಾಗಿಲ್ಲ.

ರನ್‍ಸ್ಟ್ರಾನ್ ಎಂಬಾತನ ಪ್ರಕಾರ ಬಹುರೇತಸ್ವದ ವಿರುದ್ಧ ಜೀವಿಗಳಲ್ಲಿ ಹಲವು ತೆರನ ರಕ್ಷಣೆ (ಮಲ್ಟಿಪಲ್ ಇನ್ಷೂರೆನ್ಸ್) ಇರುತ್ತದೆ. ಈ ಕ್ರಿಯೆಯಲ್ಲಿ ತೆಳುಪೊರೆಗಳು (ಹಯಲೈನ್ ಮೆಂಬ್ರೇನ್ಸ್) ಮತ್ತು ಅಂಬಲಿಪದರಗಳೂ (ಜೆಲಿ ಲೇಯರ್ಸ್) ಪಾತ್ರ ವಹಿಸುವುವು. ಕಡಲಮುಳ್ಳುಗೊಂಡೆಯ ಮೊಟ್ಟೆಯಲ್ಲಿ ಈ ತರಹದ ಸಂಪೂರ್ಣ ರಕ್ಷಣೆ ಉತ್ತಮವಾಗಿ ದೊರೆಯಬೇಕಾದಲ್ಲಿ 80 ಸೆಕೆಂಡುಗಳು ಬೇಕಾಗುತ್ತವೆ. ಆದರೆ ವೀರ್ಯಾಣು ತನಗೆ ಅಂಟಿಕೊಂಡ ಕೆಲವು ಸೆಕೆಂಡುಗಳಲ್ಲೇ ಅಂಡ ತನ್ನ ರಕ್ಷಣಾ ಶಕ್ತಿಯನ್ನು ಸ್ವಲ್ಪ ಬೆಳೆಸಿಕೊಂಡಿರುತ್ತವೆ. ಬಹುಶಃ ತನಗೆ ಅಂಟಿಕೊಂಡಿರುವ ಅನೇಕ ವೀರ್ಯಾಣುಗಳಲ್ಲಿ ಯಾವ ವೀರ್ಯಾಣು ತನ್ನ ಪರಿವರ್ಧನೆಗೆ ಕಾರಣವಾಗಬೇಕು ಮತ್ತು ಯಾವ ವೀರ್ಯಾಣುವನ್ನು ಒಳಗೆ ತೆಗೆದುಕೊಳ್ಳಬೇಕು ಎಂಬುದನ್ನು ಅಂಡವೇ ನಿರ್ಧರಿಸಿಕೊಳ್ಳಬಹುದು. ಹೆಣ್ಣಿನ ದೈಹಿಕ ಅಂಗಾಂಶಗಳನ್ನು ಬೇಧಿಸಿಕೊಂಡು ವೀರ್ಯಾಣುಗಳು ನುಗ್ಗುತ್ತವೆ ಎಂಬುದನ್ನು ಆಧಾರಸಹಿತ ಮಂಡಿಸಿದ ಅನಂತರ ಅವುಗಳ ಆನುವಂಶಿಕ ಪರಿಣಾಮಗಳ ಬಗ್ಗೆ ಭಾವಿಸಿಕೊಳ್ಳಲಾಯಿತು. ಆದರೆ ಈ ವೀರ್ಯಾಣುಗಳನ್ನು ಅಂದರೆ ಹೆಣ್ಣಿನ ದೈಹಿಕ ಅಂಗಾಂಶದಲ್ಲಿರುವುದನ್ನು ಆರ್ಟಿಫ್ಯಾಕ್ಟ್ಸ್ (ಸಾಭಾವಿಕಜನ್ಯವಲ್ಲದ ವಸ್ತುಗಳು) ಎಂದು ಕರೆಯುತ್ತಾರೆ. ನಿಷೇಚನದಲ್ಲಿ ಭಾಗವಹಿಸದಿರುವ ವೀರ್ಯಾಣುಗಳು ಹೆಣ್ಣಿನ ಸಂತಾನನಳಿಕೆಯಲ್ಲಿ ಭಕ್ಷಣಗೊಳಗಾಗುತ್ತವೆ ಎಂಬುದರ ಬಗ್ಗೆ ಆಧಾರಗಳಂತೂ ಸಾಕಷ್ಟಿವೆ. (ಎಂ.ಆರ್.ಆರ್.ಎಸ್.)