ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೀರಾಮೆ
ನೀರಾಮೆ ಸರೀಸೃಪ ವರ್ಗದ ಕೀಲೋನಿಯ ಗಣಕ್ಕೆ ಸೇರಿದ ಜಲವಾಸಿ ಪ್ರಾಣಿ (ಟರ್ಟ್‍ಲ್). ಈ ಪ್ರಾಣಿಯನ್ನು ಅದರ ಚಿಪ್ಪಿನಿಂದ ಸುಲಭವಾಗಿ ಗುರುತಿಸಬಹುದು. ನೀರಾಮೆ ಗಾತ್ರದಲ್ಲಿ ದೊಡ್ಡದು; ಇದರ ಉದ್ದ 30 ಸೆಂಮೀ. ಇರುವುದುಂಟು. ತೂಕ 45 ಕೆಜಿ. ನೀರಾಮೆ ದೀರ್ಘಾಯುವೂ ಹೌದು. ಮಾರಿಷಸ್‍ನ ನೀರಾಮೆಯೊಂದು ಸುಮಾರು 152 ವರ್ಷ ಬದುಕಿತ್ತೆನ್ನಲಾಗಿದೆ. ಕ್ಯಾಲಿಫೋರ್ನಿಯದ ಮೃಗಾಲಯ ಒಂದರಲ್ಲಿ ಸುಮಾರು 100 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಗಲಾಪಗಸ್ ದ್ವೀಪದ ನೀರಾಮೆ ಇದೆ. ನೀರಾಮೆಯ ದೇಹರಚನೆ ಹೆಚ್ಚುಕಡಿಮೆ ಆಮೆಯದರಂತೆಯೇ ಇದೆ. ಆದರೆ ಆಮೆಗೂ ನೀರಾಮೆಗೂ ವ್ಯತ್ಯಾಸಗಳಿಲ್ಲದಿಲ್ಲ. ಆಮೆಯ ಬೆರಳುಗಳು ಬಿಡಿಯಾಗಿವೆಯಾದರೆ ನೀರಾಮೆಯ ಬೆರಳುಗಳು ಕೂಡಿಕೊಂಡು ಹುಟ್ಟುಗಳಂತೆ ಚಪ್ಪಟೆಯಾಗಿದ್ದು ಈಜಲು ಸಹಕಾರಿಯಾಗಿದೆ.
ನೀರಾಮೆ ಸಸ್ಯಾಹಾರಿ ಇಲ್ಲವೆ ಮಾಂಸಾಹಾರಿ ಆಗಿರಬಹುದು. ಕೆಲವಂತೂ ಸರ್ವ ಭಕ್ಷಕಗಳು. ಆದರೆ ನೀರಾಮೆಗಳ ವಿಚಿತ್ರಲಕ್ಷಣವೆಂದರೆ ಅವಕ್ಕೇ ಹಲ್ಲುಗಳೇ ಇಲ್ಲದಿರುವುದು. ಆದರೆ ದವಡೆಗಳ ಅಂಚುಗಳಲ್ಲಿ ಚೂಪಾದ ಏಣುಗಳು ಇವೆ. ಇವುಗಳ ಮೇಲೆ ಗಟ್ಟಿಯಾದ ಕೊಂಬಿನ ಕೊಕ್ಕಿದೆ. ನೀರಾಮೆಗಳ ಚಯಾಪಚಯ ಕ್ರಿಯೆಗಳ ಗತಿ ಬಲು ನಿಧಾನ. ಆದರೂ ಆಮೆಗಳಿಗಿಂತ ನೀರಾಮೆಗಳೂ ಹೆಚ್ಚು ಚಟುವಟಿಕೆಯಿಂದಿರುತ್ತವೆ. ನೀರಾಮೆಯ ಕ್ಲೋಯಕ ರಂಧ್ರ ಉದ್ದ ಸೀಳಿಕೆಯಂತಿದೆ. ನೀರಾಮೆ ತನ್ನ ಎಲ್ಲ ಚಟುವಟಿಕೆಗಳನ್ನು ನೀರಲ್ಲೇ ನಡೆಸಿದರೂ ಮೊಟ್ಟೆ ಇಡಲು ತೀರ ಪ್ರದೇಶಗಳಿಗೆ ಬರುತ್ತವೆ. ಬಾಲ ಹಾಗೂ ಕಾಲುಗಳ ಸಹಾಯದಿಂದ ಬಿಲಗಳನ್ನು ರಚಿಸಿ, ಮೊಟ್ಟೆಗಳನ್ನು ಇಟ್ಟು ಅವುಗಳ ಸುಳಿವು ಕಾಣದ ಹಾಗೆ ಮಣ್ಣಿನಿಂದ ಮುಚ್ಚಿ ಜೋಪಾನ ಮಾಡುತ್ತದೆ. (ಎಂ.ಎನ್.ವಿಐ.)