ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೆಬುಕಡ್ನೆಜ಼ರ್
ಗೋಚರ
ನೆಬುಕಡ್ನೆಜರ್ - ಬ್ಯಾಬಿಲಾನಿನ ಇಬ್ಬರು ದೊರೆಗಳ ಹೆಸರು. 1ನೆಯ ನೆಬುಕಡ್ನೆಜûರ್ ಕ್ರಿ.ಪೂ. 1145-1123ರಲ್ಲಿ ದೊರೆಯಾಗಿದ್ದ. ಈತ ಇಸಿನ್ ವಂಶದವನು. ಇವನು ಈಲಮ್ ಮತ್ತು ಅಸ್ಸಿರಿಯಗಳ ಮೇಲೆ ಯುದ್ಧ ಮಾಡಿದ.
2ನೆಯ ನೆಬುಕಡ್ನೆಜûರ್ ಕಾಲ್ಡಿಯನ್ ದೊರೆ. ಕ್ರಿ.ಪೂ. 605-562ರಲ್ಲಿ ಬ್ಯಾಬಿಲಾನನ್ನಾಳಿದ. ಈತ ನ್ಯಾಬೊಪೊಲ್ಯಾಸರನ ಮಗ. ಈಜಿಪ್ಟಿನ 2ನೆಯ ನೀರೋ ದೊರೆಯ ಮೇಲೆ ದಂಡಯಾತ್ರೆ ಮಾಡಲು ತಂದೆ ಈತನನ್ನು ಕಳುಹಿಸಿದ್ದ (ಕ್ರಿ.ಪೂ. 610) ಕ್ರಿ.ಪೂ. 605ರಲ್ಲಿ ಈತ ನೀರೋನನ್ನು ಸೋಲಿಸಿದ. ಕ್ರಿ.ಪೂ. 597ರಲ್ಲಿ ಇವನು ಜೆರುಸಲೆಮ್ ಅನ್ನು ಹಿಡಿದುಕೊಂಡು ಪ್ಯಾಲಸ್ಟೀನನ್ನು ಗೆದ್ದ. ದೊರೆ ಜಿಹಾಯಿ ಯಕಿಮ್ ಮತ್ತು ಇನ್ನೂ ಹಲವು ಯೆಹೂದ್ಯರನ್ನು ಸೆರೆಹಿಡಿದು ಬ್ಯಾಬಿಲಾನಿಗೆ ಕರೆತಂದ. ತನ್ನ ಅಧೀನನಾದ ಜೆóಡಿಕಿಯನನ್ನು ಅಲ್ಲಿಗೆ ದೊರೆಯಾಗಿ ನೇಮಿಸಿದ. ಆತ ದಂಗೆಯೆದ್ದಾಗ (ಕ್ರಿ.ಪೂ. 588) ಜೆರುಸಲೆಮ್‍ಗೆ ಸುಮಾರು 16 ತಿಂಗಳುಗಳ ಕಾಲ ಮುತ್ತಿಗೆ ಹಾಕಿದ. ಅದು ನಾಶವಾಯಿತು. ಈತ ಟೈರ್ ನಗರಕ್ಕೆ (ಈಗಿನ ದಕ್ಷಿಣ ಲೆಬನನ್‍ನಲ್ಲಿ ಮೆಡಿಟರೇನಿಯನ್ ತೀರದಲ್ಲಿರುವ ನಗರ) 13 ವರ್ಷಗಳ ಕಾಲ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡ. ಈಜಿಪ್ಟಿನ ಮೇಲೆ ಕ್ರಿ.ಪೂ. 568ರಲ್ಲಿ ಯುದ್ಧ ಮಾಡಿದ. ಬ್ಯಾಬಿಲಾನ್ ಮತ್ತು ಇತರ ನಗರಗಳನ್ನು ಪುನರ್ನಿರ್ಮಿಸಿದ್ದು ಈತನ ದೊಡ್ಡ ಕೆಲಸ. ಬ್ಯಾಬಿಲಾನಿನಲ್ಲಿ ಬೇರೆ ಬೇರೆ ದೇವತೆಗಳಿಗೆ ಅನೇಕ ದೇವಾಲಯಗಳು ಕಟ್ಟಲ್ಪಟ್ಟವು. ನಗರದ ಭದ್ರತೆಗಾಗಿ ಸುತ್ತಲೂ ಬಲವಾದ ಕೋಟೆಗಳೂ ಅವುಗಳ ಸುತ್ತ ಕಂದಕವೂ ನಿರ್ಮಿತವಾದವು. ಯುಫ್ರೇಟಿಸ್ ನದಿಗೆ ಇಟ್ಟಿಗೆಯ ದಡವನ್ನು ಕಟ್ಟಲಾಯಿತು. ರಾಜಧಾನಿಯ ಬಳಿ ಭಾರಿ ಜಲಾಶಯವೊಂದು ನಿರ್ಮಾಣವಾಯಿತು. ಅದಕ್ಕೆ ತೋಡಲಾದ ಅನೇಕ ಕಾಲುವೆಗಳಿಂದ ನೀರಾವರಿ ಸೌಲಭ್ಯ ಏರ್ಪಟ್ಟು ವ್ಯವಸಾಯಕ್ಕೆ ಪ್ರೋತ್ಸಾಹ ಲಭಿಸಿತು. ಇವನು ಪ್ರಜಾಹಿತೈಷಿಯಾಗಿದ್ದ. ಕಾಲ್ಡಿಯನ್ ದೊರೆಗಳ ಪೈಕಿ ಇವನು ಅತ್ಯಂತ ಶ್ರೇಷ್ಠನೆಂದು ಹೆಸರಾಗಿದ್ದಾನೆ. ಇವನ ಅನಂತರ ಈತನ ಮಗ ಈವಿಲ್ ಮಿರೋಡಾಕ್ ಸಿಂಹಾಸನವನ್ನೇರಿದ. (ಎ.ಎಚ್.ಎಸ್.)