ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೆಲ್ಸನ್ ನದಿ
ನೆಲ್ಸನ್ ನದಿ - ಕೆನಡ ದೇಶದಲ್ಲಿದೆ. ಉತ್ತರ ಮ್ಯಾನಿಟೋಬದ ಅತ್ಯಂತ ದೊಡ್ಡ ನದಿ. ವಿನಿಪೆಗ್ ಸರೋವರದಲ್ಲಿ ಉಗಮಿಸಿ ಪೋರ್ಟ್ ನೆಲ್ಸನ್ ಬಳಿಯಲ್ಲಿ ಹಡ್ಸನ್ ಕೊಲ್ಲಿಯನ್ನು ಸೇರುತ್ತದೆ. ವಿನಿಷೆಗ್ ಸರೋವರ ಸ್ಯಾಸ್‍ಕಚೆವನ್, ರಾಕೀ ಪರ್ವತದ ಪೂರ್ವ ಬಯಲು, ಅಮೆರಿಕ ಸಂಯುಕ್ತ ಸಂಸ್ಥಾನಗಳ ಉತ್ತರ ಭಾಗದಿಂದ ಬರುವ ರೆಡ್ ರಿವರ್, ವಿನಿಪೆಗ್ ಹಾಗೂ ಇಂಗ್ಲಿಷ್ ನದಿಗಳು, ಪಶ್ಚಿಮ ಆಂಟೇರಿಯೊ ಅರಣ್ಯ ಪ್ರದೇಶಗಳು-ಇವುಗಳ ನೀರನ್ನು ಹಡ್ಸನ್ ಕೊಲ್ಲಿಗೆ ಅಂತಿಮವಾಗಿ ತಲುಪಿಸುವ ನದಿ ಇದು. ಇದರ ಜಲಾನಯನ ಪ್ರದೇಶದ ಒಟ್ಟು ವಿಸ್ತೀರ್ಣ 11,50.000 ಚ. ಕಿಮೀ. ಇದು ಸಮುದ್ರಕ್ಕೆ ಸಾಗಿಸುವ ನೀರಿನ ಗಾತ್ರ ಅಗಾಧ. ಇದರ ಪಾತ್ರ ಆಳ, ಪ್ರವಾಹದ ವೇಗ ಅಧಿಕ. 644 ಕಿಮೀ. ಉದ್ದದ ಈ ನದಿಯಲ್ಲಿ ಸುಮಾರು 80 ಕಿಮೀ. ದೂರ ನೌಕಾಯಾನಯೋಗ್ಯವಾಗಿದೆ. ಹರಿವಿನಲ್ಲಿ ಇದು ಒಟ್ಟು 217ಮೀ.ಗಳಷ್ಟು ಕೆಳಕ್ಕೆ ಇಳಿಯುತ್ತದೆ. ಅದರಿಂದಾಗಿ ಈ ನದಿಯ ಗತಿಯಲ್ಲಿ ಹಲವಾರು ಇಳಿಜಾರು ಪ್ರವಾಹಗಳೂ ಜಲಪಾತಗಳೂ ಇವೆ. ಬೋ ಮತ್ತು ಸ್ಯಾಸ್‍ಕಚೆವನ್ ನದಿಗಳೂ ಸೇರಿ ಕೆನೆಡಿಯನ್ ರಾಕಿಯ ವರೆಗೆ ಒಟ್ಟು 2,560 ಕಿಮೀ. ಜಲಮಾರ್ಗ ಆಗಿದೆ. 1612ರಲ್ಲಿ ಇಂಗ್ಲಿಷ್ ಅನ್ವೇಷಕ ಸರ್ ತಾಮಸ್ ಬಟನ್ ಈ ನದಿಯನ್ನು ಕಂಡು ಇದಕ್ಕೆ ತನ್ನ ನೌಕಾ ಯಜಮಾನನಾದ ನೆಲ್ಸನನ ಹೆಸರನ್ನಿಟ್ಟ. ಬಹಳ ಕಾಲದಿಂದ ಇದು ತುಪ್ಪಳು ವ್ಯಾಪಾರದ ಮಾರ್ಗವಾಗಿದೆ. ಕೆನಡ ರಾಷ್ಟ್ರೀಯ ರೈಲ್ವೆಯ ಶಾಖಾ ಮಾರ್ಗವೊಂದು ಮ್ಯಾನ್‍ಹಾಟನ್‍ಗೆ ಚರ್ಚಿಲ್‍ಗೆ ಬಹುತೇಕ ಈ ನದಿಯ ಬಳಿಯಲ್ಲೇ ಸಾಗುತ್ತದೆ. ನೆಲ್ಸನನ ಪ್ರಮುಖ ಉಪನದಿಯಾದ ಬನ್ರ್ಟ್‍ವುಡ್‍ನ ದಡದ ಮೇಲಿರುವ ತಾಮ್ಸನ್ನಿನ ನಿಕಲ್ ಗಣಿಗೆ ಆಗತ್ಯವಾದ ವಿದ್ಯುತ್ತನ್ನು ಗ್ರಾಂಡ್ ರ್ಯಾಪಿಡ್ಸ್‍ನ ಕೆಲ್ಸಿ ಕಟ್ಟೆಯ ಬಳಿ ಉತ್ಪಾದಿಸಲಾಗುತ್ತದೆ. (ಎಸ್.ಎಸ್.ಎಂ.ಯು.)