ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೆಸ್ಟರ್
ನೆಸ್ಟರ್ - ಸಿಟ್ಟಾಸಿಫಾರ್‍ಮಿಸ್ ಉಪವರ್ಗ, ಸಿಟ್ಟಾಸಿಡೀ ಕುಟುಂಬ ನೆಸ್ಟೊರಿನೀ ಉಪ ಕುಟುಂಬಕ್ಕೆ ಸೇರಿದ ಮೋಹಕವರ್ಣಗಳ ಹಕ್ಕಿಗಳಿಗಿರುವ ಸಾಮಾನ್ಯ ಹೆಸರು. ಗಿಳಿಗಳಿಗೂ ಇವಕ್ಕೂ ಹತ್ತಿರ ಸಂಬಂಧ ಉಂಟು. ಇದಕ್ಕೆ ದಪ್ಪ ತಲೆ, ಗಿಡ್ಡ ಕತ್ತು, ಬಲವಾದ ಗಟ್ಟಿಯಾದ ಕೊಕ್ಕು, ಪುಷ್ಪವಾದ ಕಾಲುಗಳಿವೆ. ಇವುಗಳಲ್ಲಿ 3 ಪ್ರಭೇದಗಳುಂಟು-ನೆಸ್ಟರ್ ಮೆರಿಡಿಯೊನೇಲಿಸ್ (ಕಾಕಾ), ನೆಸ್ಟರ್ ಪ್ರೊಡಕ್ಟಸ್, ನೆಸ್ಟರ್ ನೊಟಾಬಿಲಿಸ್ (ಕೀಯಾ).
ಇವುಗಳಲ್ಲಿ ಮೊದಲಿನ ಎರಡು ಪ್ರಭೇದಗಳು 19ನೆಯ ಶತಮಾನದ ಮಧ್ಯಕಾಲದಲ್ಲಿ ನಿರ್ವಂಶವಾದವು ಎನ್ನಲಾಗಿದೆ. ಈಗ ನೆಸ್ಟರ್ ನೊಟಾಬಿಲಿಸ್ ಎಂಬುದು ಮಾತ್ರ ಉಳಿದಿದೆ. ಇದಕ್ಕೆ ಕೀಯಾ ಎಂಬ ಸಾಮಾನ್ಯ ಹೆಸರುಂಟು. ಇದು ನ್ಯೂಜಿóಲೆಂಡಿನ ನಿವಾಸಿ. ಅಲ್ಲಿನ ಪರ್ವತ ಪ್ರದೇಶಗಳಲ್ಲಿ ಇದು ಅಲ್ಪ ಸಂಖ್ಯೆಯ ಗುಂಪುಗಳಲ್ಲಿ ಕಂಡುಬರುತ್ತದೆ.
ಕಾಗೆಯ ಗಾತ್ರವಿರುವ ಇದು ದೂರದಿಂದ ವೀಕ್ಷಿಸುವವರಿಗೆ ಹದ್ದಿನಂತೆ ಕಾಣುತ್ತದೆ. ಇದರ ಉದ್ದ ಸುಮಾರು 50 ಸೆಂಮೀ.; ಬಣ್ಣ ಕಂದುಮಿಶ್ರಿತ ಹಸುರು ಇದಕ್ಕೆ ಕಪ್ಪು ಬಣ್ಣದ ಪಟ್ಟೆಯಿರುವ ಹಸುರು ಬಣ್ಣದ ಬಾಲ ಉಂಟು. ಇದು ಮಿಶ್ರಾಹಾರಿ; ಹುಳುಗಳು, ಕೀಟಗಳು, ಹೂವಿನ ಮಕರಂದ, ಹಣ್ಣುಹಂಪಲು ಇತ್ಯಾದಿಗಳನ್ನು ತಿಂದು ಬದುಕುತ್ತದೆ. ಅಲ್ಲದೆ ಕುರಿಗಳ ಬೆನ್ನಿನ ಮೇಲೆ ವಾಸಿಸುವ ಹಲತರದ ಪರೋಪಜೀವಿಗಳನ್ನು ಹೆಕ್ಕಿ ತಿನ್ನುವ ಆಭ್ಯಾಸವೂ ಇದಕ್ಕೆ ಇದೆ. ಹಾಗೆ ತಿನ್ನುವಾಗ ಕುರಿಗಳಮಾಂಸದ ರುಚಿಯನ್ನು ಇದು ಸವಿಯುವುದುಂಟು. ನ್ಯೂಜಿóಲೆಂಡಿನ ಕುರುಬರು ಕೀಯಾ ತಮ್ಮ ಕುರಿಗಳ ಬೆನ್ನನ್ನು ಕೊರೆದು ಕೊಬ್ಬನ್ನು ತಿನ್ನುತ್ತದೆ ಎಂಬ ಭಾವನೆ ತಳೆದು ಇವನ್ನು ಕೊಲ್ಲುವುದಿದೆ. 1886ರ ಕಾಲದಲ್ಲಿ ಪ್ರತಿ ಕೀಯಾವನ್ನು ಕೊಂದವರಿಗೆ 1 ಪೌಂಡು ಬಹುಮಾನವನ್ನು ಕೊಡಲಾಗುತ್ತಿತ್ತು. ಇಂದು ಕೂಡ ಕೀಯಾಗಳನ್ನು ಕೊಂದವರಿಗೆ, ಕುರಿಪಾಲಕರು ಬಹುಮಾನವನ್ನು ಕೊಡುತ್ತಾರಂತೆ. ಇದರಿಂದಾಗಿ ಈ ಅಪೂರ್ವ ಗಿಳಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತ ಬರುತ್ತಿದೆ. ಜಾಕ್‍ಸನ್ ಎಂಬಾತ ಕೀಯಾಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾನೆ. ಆತನ ವರದಿಯಂತೆ, ಕೆಲವೊಮ್ಮೆ ಮುದಿ ವಯಸ್ಸಿನ ಗಂಡು ಕೀಯಾ ಕುರಿಗಳ ಬೆನ್ನು ಕೊರೆಯುವ ಹವ್ಯಾಸಕ್ಕೆ ಇಳಿಯುವುದಿದೆಯಂತೆ. ಇದನ್ನು ನೋಡಿದ ಇತರ ಕೀಯಾಗಳು ಕುರಿ ಹತ್ಯಾಕಾರ್ಯಕ್ಕೆ ಇಳಿಯುತ್ತವಂತೆ.
ಕೀಯಾ ಸಾಮಾನ್ಯವಾಗಿ ಮರದ ಇಲ್ಲವೇ ಬಂಡೆಕಲ್ಲುಗಳ ಪೊಟರೆಗಳಲ್ಲಿ ಗೂಡನ್ನು ಕಟ್ಟಿ ಜೀವಿಸುತ್ತದೆ. ಒಮ್ಮೆ ಕಟ್ಟಿದ ಗೂಡನ್ನು ಸಾಮಾನ್ಯವಾಗಿ ತನ್ನ ಜೀವನ ಪರ್ಯಂತ ಉಪಯೋಗಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ 2-4 ಮೊಟ್ಟೆಯಿಡುತ್ತದೆ. ಹೆಣ್ಣು ಹಕ್ಕಿ ಮಾತ್ರ ಮೊಟ್ಟೆಗಳಿಗೆ ಒಂದು ತಿಂಗಳ ಕಾಲ ಕಾವು ಕೊಡಲು ಕುಳಿತುಕೊಳ್ಳುವುದಲ್ಲದೆ ಮರಿಗಳನ್ನು ಬಹಳ ಪ್ರೀತಿಯಿಂದ ಪೋಷಿಸುತ್ತದೆ. ಆಹಾರವನ್ನು ನುಂಗಿ ಅರೆಜೀರ್ಣಿಸಿ, ಮರಿಗಳಿಗೆ ಉಣ್ಣಿಸುತ್ತದೆ. (ಬಿ.ಆರ್.ಸಿ.ಆರ್.) (ಪರಿಷ್ಕರಣೆ : ಕೆ ಎಸ್ ನವೀನ್)