ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೆಹರೂ, ಜವಾಹರಲಾಲ್

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ನೆಹರೂ, ಜವಾಹರಲಾಲ್ 1889-1964. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ, 1889ರ ನವೆಂಬರ್ 14ರಂದು ಅಲಹಾಬಾದಿನಲ್ಲಿ ಜನಿಸಿದರು. ತಂದೆ ಮೋತಿಲಾಲ್ ನೆಹರೂ, ತಾಯಿ ಸ್ವರೂಪರಾಣಿ. ಅವರದು ಕಾಶ್ಮೀರೀ ಬ್ರಾಹ್ಮಣ ಮನೆತನ. ಮೋತಿಲಾಲರು ಯಶಸ್ವಿ ನ್ಯಾಯವಾದಿಯಾಗಿ ಅಪಾರ ಹಣಗಳಿಸಿದ್ದರು. ಅವರಿಗೆ ಸಮಾಜದಲ್ಲಿ ಗೌರವದ ಸ್ಥಾನವಿತ್ತು. ಪಾಶ್ಚಾತ್ಯರ ಆಚಾರ ವಿಚಾರ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದ ಮೋತಿಲಾಲರಿಗೆ ತಮ್ಮ ಮಗನೂ ತಮ್ಮಂತೆಯೇ ಆಗಬೇಕೆಂಬುದು ಬಯಕೆಯಾಗಿತ್ತು. ಇತರ ಹುಡುಗರ ಸಂಪರ್ಕ ಮಗನಿಗೆ ಒಳಿತಲ್ಲವೆಂದು ಭಾವಿಸಿದ ಅವರು ಮಗನನ್ನು ಶಾಲೆಗೆ ಕಳಿಸದೆ ಮನೆಯಲ್ಲೇ ಅವರಿಗೆ ಖಾಸಗಿಯಾಗಿ ಶಿಕ್ಷಣ ಕೊಡಿಸಿದರು. ಐರೋಪ್ಯ ಸಂಸ್ಕøತಿಯ ಪರಿಚಯ ಜವಾಹರಲಾಲರಿಗೆ ಚಿಕ್ಕಂದಿನಿಂದಲೇ ಆಯಿತು.

ಜವಾಹರರಿಗೆ ಹತ್ತು ವರ್ಷಗಳು ತುಂಬಿದಾಗ ಮೋತಿಲಾಲರು ಅರಮನೆಯಂತಿದ್ದ ಅನಂದಭವನಕ್ಕೆ ವಾಸವನ್ನು ಬದಲಾಯಿಸಿದರು. ದೊಡ್ಡ ತೋಟ, ಎರಡು ಈಜುಕೊಳಗಳೂ ಸೇರಿದಂತೆ ಆಧುನಿಕ ಸೌಕರ್ಯಗಳೆಲ್ಲ ಅಲ್ಲಿದ್ದುವು. ಜವಾಹರರು ಈಜುವುದು, ಕುದುರೆಸವಾರಿ, ಕ್ರಿಕೆಟ್ ಮೊದಲಾದ ವಿನೋದಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಜವಾಹರಲಾಲರಿಗೆ 11 ವರ್ಷಗಳು ತುಂಬಿದಾಗ ತಂಗಿ ವಿಜಯಲಕ್ಷ್ಮಿ ಪಂಡಿತ್ ಹುಟ್ಟಿದರು. ಜವಾಹರರು ಓರಗೆಯವರ ಜೊತೆಯಲ್ಲಿ ಬೆಳೆಯದಿದ್ದರಿಂದ ಅವರ ಬಾಲ್ಯ ಒಂಟಿಯಾಗಿತ್ತು. ಇದೊಂದನ್ನು ಬಿಟ್ಟರೆ ಅವರಿಗೆ ಯಾವ ಕೊರತೆಯೂ ಇರಲಿಲ್ಲ. ತಮಗೆ ಸಂಬಂಧಿಸಿದ ಯಾವ ವಿಷಯದಲ್ಲೂ ಅವರು ತೀರ್ಮಾನ ತೆಗೆದುಕೊಳ್ಳಬೇಕಾಗಿರಲಿಲ್ಲ. ತಂದೆಯೇ ಅದನ್ನು ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಅವರು ದೊಡ್ಡವರಾಗಿ ರಾಷ್ಟ್ರದ ನಾಯಕರಾದ ಬಳಿಕವೂ ಲಕ್ಷಾವಧೀ ಜನರ ಮಧ್ಯದಲ್ಲಿದ್ದಾಗಲೂ ಒಂಟಿತನ ಅವರನ್ನು ಕಾಡುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಅವರು ಅನಿರ್ಧಾರ ಮತ್ತು ಶಂಕೆಗಳ ನಡುವೆ ಡೋಲಾಯ ಮಾನರಾಗಿರುತ್ತಿದ್ದರು ಎನ್ನಲಾಗಿದೆ.

ಮೋತಿಲಾಲರ ಆಪ್ತಸ್ನೇಹಿತರಲ್ಲೊಬ್ಬರಾಗಿದ್ದ ಮುನ್ಷಿ ಮುಬಾರಕ್ ಎಂಬವರು ಜವಾಹರರಿಗೆ ಬಾಲ್ಯದಲ್ಲಿ ತೀರ ಹತ್ತಿರದವರಾಗಿದ್ದರು. ಅವರು ಕತೆಗಳನ್ನು ಹೇಳಿ ಜವಾಹರರನ್ನು ವಿನೋದಪಡಿಸುತ್ತಿದ್ದರು. ಈ ಅವಧಿಯಲ್ಲಿ ಜವಾಹರರ ಮನಸ್ಸಿನ ಮೇಲೆ ಬಲವಾದ ಪ್ರಭಾವ ಬೀರಿದವರೆಂದರೆ ಫರ್ಡಿನೆಂಟ್ ಟಿ. ಬ್ರೂಕ್ಸ್, ಥಿಯೊಸೊಫಿಸ್ಟರೂ ಆನಿಬೆಸೆಂಟರ ಅನುಯಾಯಿಯೂ ಐರಿಷರೂ ಆಗಿದ್ದ ಅವರು, ಜವಾಹರರಿಗೆ ಸುಮಾರು ಮೂರು ವರ್ಷಗಳ ಕಾಲ ಶಿಕ್ಷಕರಾಗಿದ್ದರು. ಜವಾಹರರಲ್ಲಿ ಓದುವ ಅಭಿರುಚಿ ಬೆಳೆದದ್ದು ಬ್ರೂಕ್ಸರಿಂದ. ಜವಾಹರಲಾಲರು ಸ್ಕಾಟ್, ಡಿಕನ್ಸ್, ತ್ಯಾಕರೆ, ವೆಲ್ಸ್ ಮತ್ತು ಮಾರ್ಕ್ ಟ್ವೇನರ ಕೃತಿಗಳನ್ನೂ ಶೆರ್ಲಾಕ್ ಹೋಮ್ಸ್ ಕತೆಗಳನ್ನೂ ಲೂಯಿ ಕೆರೋಲನ ಕೃತಿಯನ್ನೂ ಓದಿ ಸಂತೋಷ ಅನುಭವಿಸುತ್ತಿದ್ದರು. ಅವರಿಗೆ ಕವಿತೆಯಲ್ಲಿ ಆಸಕ್ತಿಯುಂಟಾಗುವುದಕ್ಕೂ ಬ್ರೂಕ್ಸ್ ಕಾರಣ. ಅವರು ವಿಜ್ಞಾನದ ರಹಸ್ಯಗಳಿಂದ ಪುಲಕಿತರಾಗುತ್ತಿದ್ದರು. ಬ್ರೂಕ್ಸರೊಡನೆ, ಅವರೇ ಕಟ್ಟಿದ ಪ್ರಯೋಗಶಾಲೆಯಲ್ಲಿ ಜವಾಹರರು ಬಳಹಷ್ಟು ಸಮಯ ಕಳೆಯುತ್ತಿದ್ದರು. ತಾಯಿ ಸ್ವರೂಪರಾಣಿಯ ಸ್ತ್ರೀಸಹಜವಾದ ಮೃದು ಹಿನ್ನೆಲೆ ಇತ್ತಾದರೂ ವಾತ್ಸಲ್ಯ, ದರ್ಪ, ಗಾಂಭೀರ್ಯ, ಪ್ರತಿಷ್ಠೆ ಹಾಗೂ ಕೆಲಮಟ್ಟಿಗೆ ಸಿಡುಕುಗಳಿಂದ ಕೂಡಿದ ತಂದೆಯ ನಿಯಮ ಛಾಯೆ ಅವರ ಬಾಲ್ಯವನ್ನು ಅವರಿಸಿತ್ತು.

ಮಗನ ಭವಿತವ್ಯವನ್ನು ಕುರಿತು ಬಹಳವಾಗಿ ಚಿಂತಿಸುತ್ತಿದ್ದ ಮೋತಿಲಾಲರು ಮಗನನ್ನು ಪ್ರತ್ಯೇಕ ಬ್ರಿಟಿಷ್ ಶಾಲೆಗೆ ಕಳಿಸಬಯಸಿದರು. ತಮ್ಮ ಪ್ರಭಾವಿ ಆಂಗ್ಲ ಮಿತ್ರರ ಸಹಾಯದಿಂದ ಅವರಿಗೆ ಹ್ಯಾರೋ ಶಾಲೆಯಲ್ಲಿ ಪ್ರವೇಶ ದೊರಕಿಸಲು ಸಮರ್ಥರಾದರು. ಇನ್ನೂ ಹದಿನೈದು ತುಂಬಿರದ ಮಗನನ್ನು ಸ್ವತಃ ಇಂಗ್ಲೆಂಡಿಗೆ ಕೊಂಡೊಯ್ದು ಶಾಲೆಗೆ ಸೇರಿಸಿದರು. ಜವಾಹರರು ಎರಡು ವರ್ಷ ಅಲ್ಲಿ ಶಿಕ್ಷಣ ಪಡೆದರು. ಅಲ್ಲೂ ಅವರಿಗೆ ಸಂಕೋಚ ಸ್ವಭಾವವಿದ್ದುದರಿಂದ, ಅವರು ಆಟಗಳಲ್ಲಿ ಹಾಗೂ ಸ್ವಯಂಸೇವಕ ದಳದಲ್ಲಿ ಭಾಗವಹಿಸಿದ್ದು ವಿನಾ ಮತ್ತಾವ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲುಗೊಳ್ಳಲಿಲ್ಲ. 1907ರಲ್ಲಿ ಜವಾಹರರು ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜನ್ನು ಪ್ರವೇಶಿಸಿ 1910ರಲ್ಲಿ ರಸಾಯನಶಾಸ್ತ್ರ. ಭೂವಿಜ್ಞಾನ ಮತ್ತು ಸಸ್ಯಶಾಸ್ತ್ರಗಳಲ್ಲಿ ಟ್ರೈಪಾಸ್ ದೊರಕಿಸಿಕೊಂಡು ಹೊರಬಿದ್ದರು. ಆ ಸಮಯದಲ್ಲಿ ಅವರು ಸಾಹಿತ್ಯ ಮತ್ತು ರಾಜಕೀಯ ಗ್ರಂಥಗಳನ್ನು ಓದುತ್ತಿದ್ದರು. ಆಧುನಿಕ ಅರ್ಥಶಾಸ್ತ್ರದ ತತ್ತ್ವಗಳ ಪರಿಚಯ ಮಾಡಿಕೊಂಡರು. ಸಮಾಜವಾದದಲ್ಲಿ ಆಸಕ್ತಿ ತಳೆದರು. ಮುಂದೆ ಅವರು ತಂದೆಯ ಬಯಕೆಯಂತೆ ಲಂಡನ್ನಿನ ಇನ್ನರ್ ಟೆಂಪಲನ್ನು ಸೇರಿದರು. ಆಗ ಅವರಿಗೆ ಬೇಕಾದಷ್ಟು ಬಿಡುವಿದ್ದುದರಿಂದ ಲಂಡನ್ನಿನ ಸಾಮಾಜಿಕ ಜೀವನದಲ್ಲಿ ಪಾಲುಗೊಳ್ಳುವುದು ಸಾಧ್ಯವಾಯಿತು. ಆಗ ಅವರು ಅನೇಕ ನಾಟಕ, ನೃತ್ಯರೂಪಕಗಳನ್ನು ನೋಡಿದರು. 1912ರಲ್ಲಿ ಅವರಿಗೆ ಬ್ಯಾರಿಸ್ಟರ್ ಪದವಿ ದೊರೆಯಿತು. ಭಾರತಕ್ಕೆ ಮರಳಿದಾಗ ಸ್ವಪ್ರತಿಷ್ಠೆಯವರಾಗಿದ್ದು ಭಾರತೀಯರಿಗಿಂತಲೂ ಆಂಗ್ಲ ಗೃಹಸ್ಥರನ್ನೇ ಹೆಚ್ಚಾಗಿ ಹೋಲುತ್ತಿದ್ದರು. 1916ರ ಫೆಬ್ರುವರಿ 8ರಂದು ತಂದೆತಾಯಿಯರು ಆರಿಸಿದ, 17 ವರ್ಷ ವಯಸ್ಸಿನ ಕಮಲಾ ಅವರೊಂದಿಗೆ ಅವರ ವಿವಾಹವಾಯಿತು. ಕಮಲಾ, ಕೌಲ್ ಕುಟುಂಬಕ್ಕೆ ಸೇರಿದವರು. 1917ರ ನವೆಂಬರ್ 19ರಂದು ಅವರ ಏಕಮಾತ್ರ ಸಂತಾನ ಇಂದಿರಾ ಜನಿಸಿದರು. ಕಮಲಾ ನೆಹರು ಆರೋಗ್ಯಭಾಗ್ಯ ಪಡೆದುಬಂದಿರಲಿಲ್ಲ. 1936ರಲ್ಲಿ, ಅಕಾಲಿಕವಾಗಿ ಯೂರೋಪಿನಲ್ಲಿ ಅವರ ಅವಸಾನವಾಯಿತು.

ಜವಾಹರರು ರಾಜಕೀಯದಲ್ಲಿ ಆಸಕ್ತಿ ತಾಳಿದ್ದರಾದರೂ ಅವರು ಅದರಲ್ಲಿ ಧುಮುಕಿದ್ದು ಅರೆಮನಸ್ಸಿನಿಂದ, ಸಾರ್ವಜನಿಕ ಜೀವನದಲ್ಲಿ ಅವರು ಕಾಲಿಟ್ಟಿದ್ದು ಸ್ವಪ್ರೇರಣೆಗಿಂತಲೂ ಹೆಚ್ಚಾಗಿ ಪರಿಸ್ಥಿತಿಯಿಂದಾಗಿ. ಭಾರತಕ್ಕೆ ಮರಳಿದ ಅನಂತರ ಅವರು ಶ್ರದ್ಧೆಯಿಂದಲೇ ತಂದೆಯೊಡನೆ ನ್ಯಾಯವಾದಿಯ ವೃತ್ತಿ ಕೈಗೊಂಡರಾದರೂ ನ್ಯಾಯಾಲಯದ ವಾತಾವರಣ ಅವರಿಗೆ ಬೌದ್ಧಿಕ ಉತ್ತೇಜನ ನೀಡುವಂಥದಾಗಿರಲಿಲ್ಲ. ನ್ಯಾಯವಾದಿಯ ಜೀವನ ಅವರಿಗೆ ಸಪ್ಟೆಯಾಗಿತ್ತು. ಅವರ ಗಮನ ರಾಜಕಾರಣ ದತ್ತ ಹರಿಯತೊಡಗಿತ್ತು. ಸಂಯುಕ್ತ ಪ್ರಾಂತ್ಯದ (ಈಗಿನ ಉತ್ತರ ಪ್ರದೇಶ) ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಅವರು ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 1915ರಲ್ಲಿ ಅಲಹಾಬಾದಿನಲ್ಲಿ ನಡೆದ ಒಂದು ಸಭೆಯಲ್ಲಿ ಅವರು ತಮ್ಮ ಮೊತ್ತ ಮೊದಲಿನ ಸಾರ್ವಜನಿಕ ಭಾಷಣ ಮಾಡಿದರು. 1916ರಲ್ಲಿ ಪ್ರಥಮ ಬಾರಿಗೆ ಲಖನೌ ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಅವರ ಮತ್ತು ಮಹಾತ್ಮ ಗಾಂಧಿಯವರ ಭೇಟಿಯಾಯಿತು. 1915ರಲ್ಲಿ ಮದನಮೋಹನ ಮಾಲವೀಯರು ಸಂಯುಕ್ತ ಪ್ರಾಂತ್ಯದ ರೈತರ ಸ್ಥಿತಿಯ ಸುಧಾರಣೆಗಾಗಿ ಸ್ಥಾಪಿಸಿದ ಕಿಸಾನ್ ಸಭಾ ಅವರ ಗಮನ ಸೆಳೆಯಿತು. 1918ರಲ್ಲಿ ಜವಾಹರರು ಆ ಸಭೆಯ ಉಪಾಧ್ಯಕ್ಷರಾದರು. ರೈತರು ನಿರ್ಭಯವಾಗಿ ತಮ್ಮ ಹಕ್ಕುಬಾಧ್ಯತೆಗಳಿಗಾಗಿ ಹೋರಾಡಿ ತಮ್ಮ ಸ್ಥಿತಿಯನ್ನು ಸುಧಾರಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತ ಅವರು ಔಧ್‍ನಲ್ಲೆಲ್ಲ ಸುತ್ತಾಡಿದರು. ರೈತರೊಡನೆ ಪಡೆದ ಸಂಪರ್ಕ ಅವರ ಜೀವನ ಕ್ರಮವನ್ನು ಬದಲಾಯಿಸಿತು. ಅವರು ವಿದೇಶೀ ಉಡುಪನ್ನು ತ್ಯಜಿಸಿದರು. ಕಾಲ್ನಡಿಗೆಯಲ್ಲಿ, ಕೆಲವು ಸಲ ಬರಿಗಾಲಿನಲ್ಲಿ, ಹಳ್ಳಿಗಳಲ್ಲಿ ಸುತ್ತಾಡತೊಡಗಿದರು. ರೈತರು ನೀಡಿದ ಆಹಾರವನ್ನೇ ತಿಂದು ಅವರು ಗುಡಿಸಲುಗಳಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದರು. ಪಾಶ್ಚಾತ್ಯ ಜೀವನಕ್ಕೆ ಅಂಟಿಕೊಂಡಿದ್ದ ತಂದೆ ಇದನ್ನು ಸಹಿಸಲಿಲ್ಲ. ಜವಾಹರಲಾಲರು ರೈತರೊಡನೆ ಬೆರೆತು ಅವರ ಕಷ್ಟಗಳಲ್ಲಿ ಪಾಲುಗೊಳ್ಳುವುದು ಮೋತಿಲಾಲರಿಗೆ ಕ್ಲೇಶದಾಯಕವಾಯಿತು. ರೈತರ ಚಳವಳಿಯಲ್ಲಿ ಭಾಗವಹಿಸುವುದನ್ನು ಮೋತಿಲಾರರು ಒಪ್ಪಿದ್ದರಾದರೂ ತೀವ್ರ ಮಾರ್ಗಗಳನ್ನು ಅನುಸರಿಸಬಾರದೆಂದು ಮಗನಿಗೆ ಸಲಹೆ ನೀಡಿದರು. ಆದರೆ ದಾರಿದ್ರ್ಯ ದುಃಖಗಳನ್ನು ಕಣ್ಣಾರೆ ಕಂಡಿದ್ದ ಜವಾಹರರಿಗೆ ಸೌಮ್ಯ ಮಾರ್ಗಗಳಿಂದ ಸಮಾಧಾನವಾಗುವಂತಿರಲಿಲ್ಲ. ಅವರಿಗೆ ವಾದವಿವಾದಗಳಿಗಿಂತ ಮುಖ್ಯವಾಗಿ ಕ್ರಿಯೆ ಬೇಕಾಗಿತ್ತು. ಇದೇ ಸಮಯಕ್ಕೆ ಭಾರತದ ರಾಜಕೀಯ ರಂಗವನ್ನು ಪ್ರವೇಶಿಸಿದ ಗಾಂಧಿಯವರು ಜನತೆಯ ಕಷ್ಟನಿವಾರಣೆಯೇ ತಮ್ಮ ಧ್ಯೇಯವೆಂದು ಸಾರಿದರು. ಅವರು ಹೋರಾಟಕ್ಕೆ ಕರೆಯಿತ್ತರು. ಇದು ಜವಾಹರರಿಗೆ ಹಿಡಿಸಿತು. ಜಹಾಹರಲಾಲರು ಗಾಂಧೀಜಿಯ ಅಸಹಕಾರ ಚಳವಳಿಯಲ್ಲಿ ಧುಮುಕಿ ಅದರಲ್ಲಿ ಪೂರ್ಣವಾಗಿ ಭಾಗವಹಿಸಿದರು. ಆ ಸಮಯದಲ್ಲಿ ದೇಶದಲ್ಲಿ ರೌಲಟ್ ಕಾಯಿದೆಯ ವಿರುದ್ಧ ಆಂದೋಲನ ನಡೆಯುತ್ತಿತ್ತು. ಜವಾಹರರು 1919ರ ಏಪ್ರಿಲ್ 6ರಂದು ಭಾರತಾದ್ಯಂತ ಹರತಾಳಗಳನ್ನು ವ್ಯವಸ್ಥೆಗೊಳಿಸುವುದರಲ್ಲಿ ನಿರತರಾದರು. ಅಮೃತಸರದ ಜಲಿಯನ್‍ವಾಲಾಬಾಗ್‍ನಲ್ಲಿ ಭೀಕರ ಹತ್ಯೆ, ಪಂಜಾಬಿನಲ್ಲಿ ಸೈನ್ಯಾಡಳಿತದ ಕ್ರೌರ್ಯ ನಡೆದವು. ಇದರಿಂದ ರೋಸಿದ ಜವಾಹರರು ಅಸಹಕಾರ ಚಳವಳಿಯಲ್ಲಿ ಹೆಚ್ಚು ಹೆಚ್ಚಾಗಿ ಸೇರಿಕೊಂಡರು. ಮಗನಿಂದ ಪ್ರಭಾವಿತರಾದ ಮೋತಿಲಾಲರು ತಮ್ಮ ವೃತ್ತಿಯನ್ನು ಬಿಟ್ಟುಕೊಟ್ಟರು. ಜವಾಹರರು ಬ್ರಿಟಿಷ್ ಆಳ್ವಿಕೆಯ ಪೂರ್ಣವಿರೋಧಿಗಳಾದರು. 1920ರಿಂದ 1945ರವರೆಗಿನ ಅವಧಿಯಲ್ಲಿ ಅವರು ಮತ್ತೆಮತ್ತೆ ಜೈಲುವಾಸವನ್ನು ಅನುಭವಿಸಿದರು. 1942ರ ಆಗಸ್ಟ್ 8ರಂದು ಅವರನ್ನು ಬಂಧಿಸಿ ಅಹ್ಮದ್‍ನಗರ ಕೋಟೆಯಲ್ಲಿ ಇಡಲಾಗಿತ್ತು. ಇದು ನೆಹರೂ ಅವರ ಅತಿ ತುರಂಗವಾಸ. ಒಟ್ಟು 9 ಸಲ ಅವರು ದಸ್ತಗಿರಿಯಾಗಿ ಬಂಧನದಲ್ಲಿದ್ದರು.

ಜವಾಹರಲಾಲರು 1923ರಲ್ಲಿ ಅಲಹಾಬಾದ್ ನಗರಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು. 1923-1925 ಮತ್ತು 1927-1929ರಲ್ಲಿ ಅವರು ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿದ್ದರು. 1929ರಲ್ಲಿ ಅದರ ಲಾಹೋರ್ ಅಧಿವೇಶನದ ಅಧ್ಯಕ್ಷರಾಗಿ ಚುನಾಯಿತರಾದರು ಪೂರ್ಣ ಸ್ವರಾಜ್ಯವೇ ಭಾರತದ ಗುರಿಯೆಂದು ಕಾಂಗ್ರೆಸ್ ಸಾರಿತು. ಸ್ವಾತಂತ್ರ್ಯ ಬರುವವರೆಗೆ ಅವರು ಐದು ಸಲ ಕಾಂಗ್ರೆಸ್ಸಿನ ಅಧ್ಯಕ್ಷತೆ ವಹಿಸಿದರು. ಸ್ವಾತಂತ್ರ್ಯಾನಂತರ 1951ರಿಂದ 1954ರವರೆಗೆ ಮೂರು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರು ವಿವಿಧ ಸಂಸ್ಥೆಗಳಲ್ಲಿ ವಹಿಸಿಕೊಂಡ ಕಾರ್ಯದರ್ಶಿತ್ವ ಹಾಗೂ ಅಧ್ಯಕ್ಷಸ್ಥಾನಗಳು ಹಲವಾರು. 1946ರಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ಗವರ್ನರ್-ಜನರಲ್ ಮಂಡಲಿಯ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರರನ್ನಾಗಿ ನಾಮಕರಣ ಮಾಡಿತು. ದೇಶಕ್ಕೆ ಸ್ವಾತಂತ್ರ್ಯ ಬಂದಂದಿನಿಂದ (1947 ಆಗಸ್ಟ್ 15) ತಮ್ಮ ಕೊನೆಯವರೆಗೂ ಅವರು ಭಾರತದ ಪ್ರಧಾನಿಯಾಗಿದ್ದರು. 1962ರಲ್ಲಿ ಭಾರತದ ಗಡಿಯ ಮೇಲೆ ಚೀನೀ ಆಕ್ರಮಣ ನಡೆದಾಗ ಜವಾಹರಲಾರರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟಾಯಿತು. 1964ರ ಮೇ 27ರಂದು ಅವರು ಹೃದಯಾಘಾತದಿಂದ ನವದೆಹಲಿಯಲ್ಲಿ ತೀರಿಕೊಂಡರು.

ಗಾಂಧೀಜಿಯಿಂದ ಜವಾಹರರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ದೊರೆತುವಾದರೂ ಅನೇಕ ಮೂಲ ಸಮಸ್ಯೆಗಳ ಬಗೆಗೆ ಅವರಿಬ್ಬರಲ್ಲಿ ಭಿನ್ನಾಭಿಪ್ರಾಯಗಳಿದ್ದುವು. ಬಹಿರಂಗವಾಗಿ ಒಬ್ಬರನ್ನೊಬ್ಬರು ವಿರೋಧಿಸಿದ ಪ್ರಸಂಗಗಳು ಇಲ್ಲದಿಲ್ಲ. ಆದರೆ ಅದರಿಂದ ಪರಸ್ಪರ ಗೌರವ ಪ್ರೀತಿವಿಶ್ವಾಸಗಳು ಎಂದೂ ಕಡಿಮೆಯಾಗಲಿಲ್ಲ. ಕಾಂಗ್ರೆಸ್ಸಿನ ಅನೇಕ ಕಾರ್ಯಕ್ರಮಗಳಿಗೆ ಜವಾಹರರೇ ಪೀಠಿಕೆ ಹಾಕಿದ್ದರು. ಅವರ ಕೈಯಲ್ಲಿ ಭಾರತದ ಭವಿಷ್ಯ ಸುರಕ್ಷಿತವಾಗಿರುವುದೆಂದು ಗಾಂಧೀಜಿಗೆ ಪೂರ್ಣ ವಿಶ್ವಾಸ ಇದ್ದದ್ದರಿಂದ ಅವರನ್ನು ಗಾಂಧಿಯವರ ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ನೇಮಿಸಿದರು.

ಜವಾಹರರು ವ್ಯಾಪಕವಾಗಿ ವಿಶ್ವಸಂಚಾರ ಮಾಡಿದವರಲ್ಲೊಬ್ಬರು. 1926ರಲ್ಲಿ ಅವರು ತಮ್ಮ ಅಸ್ವಸ್ಥಪತ್ನಿಯನ್ನು ಚಿಕಿತ್ಸೆಗಾಗಿ ವೆನಿಸ್ಸಿಗೆ ಕರೆದುಕೊಂಡು ಹೋಗಿದ್ದರು. 1938ರಲ್ಲಿ ಯೂರೋಪಿನ ಪ್ರವಾಸ ಮಾಡಿದರು. ಸ್ವಾತಂತ್ರ್ಯ ಪ್ರಾಪ್ತವಾದ ಮೇಲೆ ಏಷ್ಯ, ಯೂರೋಪ್, ಆಫ್ರಿಕ ಮತ್ತು ಅಮೆರಿಕ ಖಂಡಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದರು. ಪ್ರತಿವರ್ಷ ಲಂಡನ್ನಿನಲ್ಲಿ ಜರುಗುತ್ತಿದ್ದ ಕಾಮನ್‍ವೆಲ್ತ್ ಪ್ರಧಾನಿಗಳ ಸಮ್ಮೇಳನದಲ್ಲಿ ಸಾಮಾನ್ಯವಾಗಿ ಹಾಜರಿರುತ್ತಿದ್ದರು.

ಜವಾಹರರು ಭಾರತಕ್ಕೆ ಪ್ರಪಂಚದಲ್ಲಿ ಮಹತ್ತ್ವದ ಸ್ಥಾನ ಒದಗಿಸಿಕೊಟ್ಟರು. ಅವರು ವಿಶ್ವದ ಪ್ರಮುಖ ನಾಯಕರಲ್ಲೊಬ್ಬರಾಗಿದ್ದರು. ಅವರು ಭಾರತದ ವಿದೇಶಾಂಗ ನೀತಿಯ ಶಿಲ್ಪಿ. ರಾಜರ ಮತ್ತು ನಿರಂಕುಶ ಪ್ರಭುಗಳ ಬಗ್ಗೆ ಅವರಿಗೆ ಪ್ರೀತಿಗೌರವಗಳಿರಲಿಲ್ಲ. ಮೂವತ್ತರ ದಶಕದಲ್ಲಿ ಅವರ ಒಲವು ಅಬಿಸೀನಿಯ ಮತ್ತು ಸ್ಪೇನ್ ಪ್ರಜಾಪ್ರಭುತ್ವಗಳತ್ತ ಇತ್ತು. ಒಮ್ಮೆ ಅವರು ಐರೋಪ್ಯ ಪ್ರವಾಸ ಕೈಗೊಂಡಿದ್ದಾಗ ಇಟಲಿಯ ಸರ್ವಾಧಿಕಾರಿ ಮುಸ್ಸೊಲೀನಿ ಅವರನ್ನು ಕಾಣಬಯಸಿದ. ಆದರೆ ಪ್ರಜಾಪ್ರಭುತ್ವವಾದಿ ಜವಾಹರರು ಆತನ ಆಮಂತ್ರಣವನ್ನು ನಿರಾಕರಿಸಿದರು. ಭಾರತದ ಅಲಿಪ್ತ ನೀತಿಗೆ ಅವರೇ ಕಾರಣರು. ಪ್ರಪಂಚದಲ್ಲಿ ಅಲಿಪ್ತ ರಾಷ್ಟ್ರಗಳ ಸಂಘಟನೆಯಾಗಲು ಇದು ಪೀಠಿಕೆಯಾಯಿತು. ಅವರು ಸ್ವಭಾವತಃ ಯುದ್ಧವಿರೋಧಿ, ಶಾಂತಿಸಾಧಕ. ವಿಶ್ವಭಾೃತೃತ್ವದಲ್ಲಿ ಅವರಿಗೆ ಅಚಲವಿಶ್ವಾಸವಿತ್ತು. ಅಂತರ ರಾಷ್ಟ್ರೀಯ ಕಲಹಗಳು ಪರಸ್ಪರ ವಿಚಾರವಿನಿಮಯ ಮತ್ತು ಸಂಧಾನಗಳಿಂದ, ಮತ್ತು ಅವು ವಿಫಲವಾದಲ್ಲಿ ಮಧ್ಯಸ್ಥಿಕೆಯಿಂದ ಇತ್ಯರ್ಥವಾಗಬೇಕೆಂಬುದು ಅವರ ಮತವಾಗಿತ್ತು. ಇದಕ್ಕಾಗಿ ಅವರು ವಿಶ್ವಸಂಸ್ಥೆಯ ನಿಯತ ಪ್ರತಿಪಾದಕರಾಗಿದ್ದರು. ವಸಾಹತುಶಾಹಿಗೆ ಅವರ ಪೂರ್ಣ ವಿರೋಧವಿತ್ತು. ಅದಕ್ಕೆ ಒಳಗಾದ ದೇಶಗಳ ಬಗ್ಗೆ ಅವರಿಗೆ ಸಹಾನುಭೂತಿಯಿತ್ತು. ಕ್ರೌರ್ಯ ದಬ್ಬಾಳಿಕೆಗಳು ಪ್ರಪಂಚದ ಯಾವುದೇ ಭಾಗದಲ್ಲಿ ನಡೆಯುತ್ತಿದ್ದರೂ ಅವರು ಅವಕ್ಕೆ ತಮ್ಮ ತೀವ್ರ ವಿರೋಧ ಪ್ರಕಟಿಸುತ್ತಿದ್ದರು.

ಜವಾಹರರು ಮಹಾನ್ ಪ್ರಜಾಪ್ರಭುತ್ವ ವಾದಿಗಳಾಗಿದ್ದರು. ಅವರು ಬಯಸಿದ್ದರೆ ಭಾರತದ ಸರ್ವಾಧಿಕಾರಿಯಾಗಲು ಯಾವ ಅಡ್ಡಿ ಆತಂಕಗಳೂ ಇರಲಿಲ್ಲ. ಗಾಂಧೀಜಿಯವರನ್ನು ಬಿಟ್ಟರೆ ಆವರೇ ದೇಶದಲ್ಲಿ ಅತ್ಯಂತ ಹೆಚ್ಚಿನ ಜನಪ್ರಿಯ ವ್ಯಕ್ತಿಯಾಗಿದ್ದರು. ಅವರಷ್ಟು ಪ್ರಭಾವಶಾಲಿ ನಾಯಕರು ಇನ್ನಾರೂ ಇರಲಿಲ್ಲ. ಆದರೂ ಅವರೆಂದೂ ಸರ್ವಾಧಿಕಾರವನ್ನು ಬಯಸಲಿಲ್ಲ. ತಾವು ಜನಪ್ರಿಯರಾಗಿದ್ದರೂ ಸರ್ವಾಧಿಕಾರವನ್ನು ಬಯಸಲಿಲ್ಲ. ತಾವು ಜನಪ್ರಿಯರಾಗಿದ್ದರೂ ಕಾಂಗ್ರೆಸ್ ಸಮಿತಿಯ ಬಹುಮತದ ನಿರ್ಣಯಕ್ಕೆ ಅವರು ಬಾಗುತ್ತಿದ್ದರು. ಸಂಸ್ಥೆಯಲ್ಲಿ ಅವರಿಗೆ ಅಪಾರ ನಿಷ್ಠೆಯಿತ್ತು. ಹದಿನೇಳು ವರ್ಷಗಳ ಕಾಲ ಪ್ರಧಾನಿಯಾಗಿದ್ದರೂ ಅಧಿಕಾರದಲ್ಲಿ ಮುಂದುವರಿಯುವ ನಿಮಿತ್ತ ಅವರೆಂದೂ ಕಾಂಗ್ರೆಸ್ಸಿನ ಕಾರ್ಯಕ್ರಮಗಳಿಗೆ ವಿರುದ್ಧವಾದ ಕಾರ್ಯಕ್ರಮಗಳನ್ನು ಹೊಂದಿದ್ದ ಪಕ್ಷಗಳ ಅಥವಾ ವ್ಯಕ್ತಿಗಳ ಸಹಕಾರ ಬಯಸಲಿಲ್ಲ. ಅವರ ಸಂಪುಟದ ಸದಸ್ಯರಲ್ಲಿ ಅವರ ಸಮಾಜವಾದಿ ಆರ್ಥಿಕ ಕಾರ್ಯಕ್ರಮ ಮತ್ತು ನೀತಿಗಳ ಬಗ್ಗೆ ಭಿನ್ನಾಭಿಪ್ರಾಯ ತಾಳಿದವರಿದ್ದರು. ಇದು ಅವರಿಗೂ ತಿಳಿದಿತ್ತು. ಆದರೂ ಅವರು ಎಲ್ಲರನ್ನೂ ವಿಶ್ವಾಸ ಆದರಗಳಿಂದ ಕಾಣುತ್ತಿದ್ದರು. ಅವರು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಎಂದೂ ಯತ್ನಿಸಲಿಲ್ಲ. ರಾಜಕೀಯ ಪಕ್ಷಗಳು ಚುನಾವಣೆಗಳನ್ನು ಜನಪ್ರಿಯತೆಯ ಮೂಲಕ ಗೆಲ್ಲಬೇಕೇ ಹೊರತು ಹಣ, ದಬ್ಬಾಳಿಕೆ, ಕಪಟಗಳಿಂದ ಅಲ್ಲವೆಂಬುದು ಅವರ ಮತವಾಗಿತ್ತು. ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸಿ ಅವುಗಳ ಬಗ್ಗೆ ಕೂಲಂಕಷ ವಿಚಾರಮಾಡುತ್ತಿದ್ದರೇ ವಿನಾ ಅವನ್ನೆಂದೂ ಒಮ್ಮೆಲೇ ತಳ್ಳಿ ಹಾಕುತ್ತಿರಲಿಲ್ಲ. ಅವರಲ್ಲಿ ಅಪಾರ ಮಾನವೀಯತೆಯಿತ್ತು. ಇತರ ಕುಂದುಕೊರತೆಗಳನ್ನು, ತಪ್ಪುಗಳನ್ನು ಕ್ಷಮಿಸುವ ಉದಾರಗುಣ ಅವರಿಗಿತ್ತು. ತಮ್ಮನ್ನು ನಂಬಿದವರ ಮತ್ತು ತಾವು ನಂಬಿದವರ ಕೈಬಿಡುವುದು ಅವರಿಗೆ ಕಷ್ಟಪ್ರಾಯವಾಗುತ್ತಿತ್ತು. ಚೀನದೊಡನೆ ಗಡಿಯುದ್ಧದ ಅನಂತರ, ಆ ಕಾಲಕ್ಕೆ ರಕ್ಷಣಾಮಂತ್ರಿಯಾಗಿದ್ದ ಕೃಷ್ಣ ಮೆನನ್ನರನ್ನು ಮಂತ್ರಿಮಂಡಲದಿಂದ ಉಚ್ಚಾಟನೆ ಮಾಡಬೇಕೆಂದು ಎಲ್ಲ ದಿಕ್ಕುಗಳಿಂದಲೂ ಒತ್ತಾಯ ಬಂದರೂ ಪ್ರಥಮದಲ್ಲಿ ಅದಕ್ಕೆ ಅವರು ಮಣಿಯಲಿಲ್ಲ. ಆದರೆ ಕೊನೆಗೆ ಒಪ್ಪಲೇಬೇಕಾಯಿತು.

ಜವಾಹರರು ವ್ಯಕ್ತಿಸ್ವಾತಂತ್ರ್ಯ ಮತ್ತು ಗೌರವಗಳ ಬಗ್ಗೆ ಕಟ್ಟುನಿಟ್ಟಾದ ನಿಷ್ಠೆಯುಳ್ಳವರಾಗಿದ್ದರು. ಸಂವಿಧಾನದಲ್ಲಿ ಹೇಳಲಾಗಿದ್ದ ಮೂಲಭೂತ ಹಕ್ಕುಗಳ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ಅವರಿಗೆ ವಿಶೇಷ ಮನ್ನಣೆಯಿತ್ತು. ಅವನ್ನು ಮೊಟಕುಗೊಳಿಸುವ ಯಾವುದೇ ಕ್ರಮವನ್ನೂ ಅವರು ಕೈಗೊಳ್ಳಲಿಲ್ಲ.

ಸ್ವಾತಂತ್ರ್ಯದೊಡನೆ ಸಮಾಜವಾದವನ್ನೂ ಅವರು ಬಯಸಿದ್ದರು. ಸಮಾಜವಾದಿ ಸಿದ್ಧಾಂತ ಅವರ ವಿಚಾರ ಮತ್ತು ಕಾರ್ಯಕ್ರಮಗಳಿಗೆ ಅಡಿಗಲ್ಲಾಗಿತ್ತು. ಅವರಿಗೆ ಸಮಾಜವಾದ ಕೇವಲ ಆರ್ಥಿಕ ಸಿದ್ಧಾಂತವಾಗಿರದೆ ಮನಃಪೂರ್ವಕವಾಗಿ ಸ್ವಾಗತಿಸಬೇಕಾದ ಅತ್ಯಂತ ಮುಖ್ಯ ಆವಶ್ಯಕತೆಯೆನಿಸಿತ್ತು. ಸಾಮಾಜಿಕ ನ್ಯಾಯದಲ್ಲಿ ಅವರಿಗೆ ತುಂಬ ಆಸಕ್ತಿಯಿತ್ತು. ಮಾನವೀಯ ಕ್ಲೇಶಗಳ ಬಗ್ಗೆ ಅವರ ದೃಷ್ಟಿಕೋನ ಬೌದ್ಧಿಕವಾಗಿರದೆ ಭಾವನಾಪ್ರಧಾನವಾಗಿತ್ತು. ಅವರು ಬಯಸುತ್ತಿದ್ದುದು ಪ್ರಜಾಸತ್ತಾತ್ಮಕ ಸಮಾಜವಾದ. ಪ್ರಜಾಪ್ರಭುತ್ವದ ಸಂಸ್ಥೆಗಳ ಮೂಲಕ ಸಾಮಾಜಿಕ ಪರಿವರ್ತನೆ ಆಗಬೇಕೆನ್ನುತ್ತಿದ್ದರು. ಅದಕ್ಕಾಗಿ ಬಲಾತ್ಕಾರ ಪ್ರಯೋಗಿಸಲು ಅವರು ಇಷ್ಟಪಡಲಿಲ್ಲ. ಬಲವಂತದ ಕ್ರಮಗಳು ಬೇಕಾದ ಪರಿಣಾಮಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಒದಗಿಸಬಲ್ಲವಾದರೂ ಅವು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆಂದು ಅವನ್ನು ವಿರೋಧಿಸುತ್ತಿದ್ದರು. ಅವರು ಸುಧಾರಕರಾಗಿದ್ದರೇ ವಿನಾ ಕ್ರಾಂತಿವಾದಿಯಾಗಿರಲಿಲ್ಲ. ಜವಾಹರರು ಪತ್ರಿಕಾಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತಿದ್ದರು. ಪತ್ರಿಕಾ ಸ್ವಾತಂತ್ರ್ಯ ಅವರಿಗೆ ಕೇವಲ ಧ್ಯೇಯವಚನವಾಗಿರದೆ ಪ್ರಜಾಪ್ರಭುತ್ವದ ಕಾರ್ಯಗತಿಯ ಸಂಕೇತವಾಗಿತ್ತು. ಪತ್ರಿಕೆಗಳು ತಳೆಯುತ್ತಿದ್ದ ಧೋರಣೆ ಒಮ್ಮೊಮ್ಮೆ ಅಪಾಯಕರವಾಗಿದೆ ಎಂಬ ತೀರ್ಮಾನಕ್ಕೆ ಸರ್ಕಾರ ಬಂದರೂ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು ಸರಿಯಲ್ಲವೆಂಬ ಅವರು ಅಭಿಪ್ರಾಯ ತಳೆದಿದ್ದರು. ಸ್ವಾತಂತ್ರ್ಯವನ್ನು ಆಕ್ರಮವಾಗಿ ಬಳಸುವ ಸಾಧ್ಯತೆಯಿದ್ದರೂ ಹತ್ತಿಕ್ಕಲಾದ, ಇಲ್ಲವೇ ನಿಯಂತ್ರಿಸಲಾದ ಪತ್ರಿಕೆಗಳಿಗಿಂತ ಸ್ವತಂತ್ರಪತ್ರಿಕೆಗಳನ್ನೇ ತಾವು ಹೆಚ್ಚು ಇಷ್ಟ ಪಡುವುದಾಗಿ ಹೇಳುತ್ತಿದ್ದರು.

ಭಾರತದ ಆರ್ಥಿಕ ಅಭಿವೃದ್ಧಿ ಆರ್ಥಿಕ ಯೋಜನೆಯಿಂದ ಮಾತ್ರ ಸಾಧ್ಯ ಎಂದು ಅವರು ನಂಬಿದ್ದರು. ಅವರ ದೃಷ್ಟಿಯಲ್ಲಿ ಅರ್ಥಿಕ ಯೋಜನೆ ಸಾಮಾಜಿಕ ನ್ಯಾಯವನ್ನು ದೊರಕಿಸುವುದಕ್ಕೆ ಮುಖ್ಯ ಸಾಧನವಾಗಿತ್ತು. ಯೋಜನಾ ಆಯೋಗವನ್ನು ನೇಮಿಸಿದ್ದು ಮತ್ತು ಪ್ರಜಾಪ್ರಭುತ್ವದ ಯೋಜನೆಗೆ ಅವಶ್ಯವಾದ ವ್ಯವಸ್ಥೆಯನ್ನು ಯೋಜಿಸಿದ್ದು-ಇವು ಭಾರತವನ್ನು ಆಧುನಿಕ ರಾಷ್ಟವಾಗಿ ಮಾರ್ಪಡಿಸುವುದಕ್ಕೆ ಅವರು ಕೈಗೊಂಡ ಪ್ರಥಮ ಕ್ರಮಗಳು. ಯೋಜನೆಯ ರಚನೆ, ವಿಧಾನ ಮತ್ತು ಧ್ಯೇಯಗಳ ಬಗ್ಗೆ ಅವರು ನಿಶ್ಚಿತ ಅಭಿಪ್ರಾಯಗಳನ್ನು ತಳೆದಿದ್ದರು. ಇವು ಮೊದಲಿನ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರತಿಬಿಂಬಿತವಾದುವು. ಈ ಪಂಚವಾರ್ಷಿಕ ಯೋಜನೆಗಳು ವಿಶಾಲ ಭಾರತವನ್ನು ಉನ್ನತ ಮಟ್ಟಕ್ಕೆ ಏರಿಸುವುವೆಂದು ಅವರು ಕನಸು ಕಾಣುತ್ತಿದ್ದರು.

ಗಾಂಧೀಜಿಯವರು ಪ್ರತಿಪಾದಿಸಿದ ಗುಡಿಸಿಲು ಕೈಗಾರಿಕೆಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಅವರು ಕಡೆಗಣಿಸಲಿಲ್ಲ. ಅವರ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರವಿದ್ಯೆಗಳ ಪ್ರಗತಿಯಾಯಿತು. ರಾಷ್ಟ್ರೀಯ ವೈಜ್ಞಾನಿಕ ಪ್ರಯೋಗಶಾಲೆಗಳ ಸ್ಥಾಪನೆಯಾಯಿತು. ಅಳತೆ, ತೂಕ ಮತ್ತು ನಾಣ್ಯಗಳ ದಶಮಾಂಶ ಪದ್ಧತಿ ಜಾರಿಯಲ್ಲಿ ಬಂತು. ಉಕ್ಕಿನ ಕಾರ್ಖಾನೆಗಳು ಅಸ್ತಿತ್ವಕ್ಕೆ ಬಂದುವು. ವಿದ್ಯುತ್ತಿನ ಉತ್ಪಾದನೆ ಮತ್ತು ನೀರಾವರಿಗಾಗಿ ದೊಡ್ಡ ಅಣೆಕಟ್ಟೆಗಳ ನಿರ್ಮಾಣವಾಯಿತು. ಇವನ್ನು ಭಾರತದ ನೂತನ ದೇವಾಲಯಗಳು. ರಾಷ್ಟ್ರೀಯ ಯಾತ್ರಾಸ್ಥಳಗಳು ಎಂದು ಕರೆದರು.

ಜವಾಹರರದು ಆಧುನಿಕ ದೃಷ್ಟಿ; ಅವರು ಸ್ವತಂತ್ರ ಸಮಾಜದ ಪ್ರತಿಪಾದಕರು. ಜಾತೀಯತೆ. ಸಂಕುಚಿತ ರಾಷ್ಟ್ರೀಯತೆ, ದೃಷ್ಟಿವಿಶಾಲತೆಯಿಲ್ಲದ ಸ್ವಭಾಷಾಪ್ರೇಮ ಇವು ಅವರಿಗೆ ಸೇರುತ್ತಿರಲಿಲ್ಲ. ಧರ್ಮಾಂಧತೆಯನ್ನು ದ್ವೇಷಿಸುತ್ತಿದ್ದರು. ಅವರಿಗೆ ಹಿಂದುಳಿದ ಹಾಗೂ ಶೋಷಿತ ವರ್ಗಗಳ ಬಗ್ಗೆ ಅಪಾರ ಸಹಾನುಭೂತಿಯಿತ್ತು. ಸ್ವತಂತ್ರ ಸಮಾಜಕ್ಕೆ ವಿರುದ್ಧವಾಗಿದ್ದ ಜಾತೀಯತೆಯನ್ನು ನಿವಾರಿಸಲು ಯತ್ನಿಸಿರಾದರೂ ಅವರಿಗೆ ಅದರಲ್ಲಿ ಯಶಸ್ಸು ದೊರೆಯಲಿಲ್ಲ. ಅವರಿಗೆ ಅಸಾಧಾರಣವಾದ ಇತಿಹಾಸಪ್ರಜ್ಞೆಯಿತ್ತು. ಬುದ್ಧ, ಅಶೋಕರನ್ನು ಮೆಚ್ಚಿದ್ದರು. ಕಲೆ ಸಾಹಿತ್ಯಗಳಲ್ಲಿ ವಿಶೇಷ ಆಸಕ್ತಿಯಿತ್ತು. ನಾಟಕಕಾರ ಬರ್ನಾರ್ಡ್ ಷಾ ಮತ್ತು ತತ್ತ್ವವೇತ್ತ ಬಟ್ರ್ರಂಡ್ ರಸಲ್ ಅವರ ಮಿತ್ರರಾಗಿದ್ದರು. ಅವರು ಇಂಗ್ಲಿಷಿನಲ್ಲಿ ಪರಿಣಾಮಕಾರಿ ಲೇಖಕ. ಒಂಬತ್ತು ಸಾರಿ ಸೆರೆಮನೆ ಸೇರಿದ್ದ ಅವರು ಅಲ್ಲಿ ಸಮಯವನ್ನು ಬರೆವಣಿಗೆ ಮತ್ತು ಅಧ್ಯಯನಗಳಿಗೆ ಉಪಯೋಗಿಸಿಕೊಂಡರು. ಅವರು ಮುಖ್ಯವಾಗಿ ಬುದ್ಧಿಜೀವಿ. ವಿಚಾರವೇತ್ತ. ದೊಡ್ಡ ವಾಗ್ಮಿಯಾಗಿರಲಿಲ್ಲ. ಸಾಮಾನ್ಯವಾಗಿ ಪೂರ್ವಸಿದ್ದತೆಯಿಲ್ಲದೆಯೇ ಭಾಷಣ ಮಾಡುತ್ತಿದ್ದರು. ಅದು ಶ್ರೋತೃಗಳೊಡನೆ ಸಲಿಗೆಯ ಮಾತುಕತೆಯಂತಿರುತ್ತಿತ್ತು. ಎಲ್ಲಿ ಹೋದರೂ, ಎಷ್ಟು ಸಲ ಭೇಟಿ ನೀಡಿದರೂ ಅವರ ದರ್ಶನ ಪಡೆಯಲು, ಅವರ ಭಾಷಣಗಳನ್ನು ಕೇಳಲು ಲಕ್ಷಗಟ್ಟಲೆ ಜನರು ಸೇರುತ್ತಿದ್ದರು.

ಜವಾಹರರು ಆದರ್ಶ ಸಂಸದೀಯಪಟು. ಮೊದಲಿನಿಂದ ಕೊನೆಯವರೆಗೂ ಪ್ರಧಾನಿ ಹಾಗೂ ಕಾಂಗ್ರೆಸ್ ಪಕ್ಷದನಾಯಕರಾಗಿದ್ದ ಅವರ ಮತ್ತು ಇತರ ಸಂಸತ್ ಸದಸ್ಯರ ವ್ಯಕ್ತಿತ್ವಗಳಲ್ಲಿ ಬಹಳ ಅಂತರವಿತ್ತು. ಪಕ್ಷ ಪ್ರದೇಶಗಳ ನಿರ್ಬಂಧಗಳನ್ನು ಮೀರಿದ್ದ ಅವರು ರಾಷ್ಟ್ರದ ವಕ್ತಾರರಾಗಿದ್ದರು; ಸಂಸತ್ತಿನಲ್ಲಿ ಚರ್ಚೆ ಕಹಿಯಾದಾಗ ವಿರೋಧಪಕ್ಷಗಳ ಸದಸ್ಯನೂ ಅವರನ್ನು ಅವಲಂಬಿಸುತ್ತಿದ್ದುದುಂಟು. ಅವರ ಭಾಷಣವಿದ್ದಾಗ ಸಂಸತ್ತಿನ ಸಾರ್ವಜನಿಕ ಮೊಗಸಾಲೆಗಳು ತುಂಬಿರುತ್ತಿದ್ದುವು. ಸಂಸತ್ತಿನ ಹಿಂದಿನ ಅನುಭವವಿಲ್ಲದಿದ್ದರೂ ಶೀಘ್ರಕಾಲದಲ್ಲಿ ನುರಿತ ಸಭಾಸದರಾದರು. ಚರ್ಚೆಯಲ್ಲಿ ಪ್ರವೇಶಿಸಿದಾಗ ಸಭಾಗೃಹ ಅವರ ಪೂರ್ಣ ಹಿಡಿತಕ್ಕೊಳಗಾಗುತ್ತಿತ್ತು. ವಾಗ್ಮಿತೆಗಿಂತಲೂ ವ್ಯಕ್ತಿತ್ವವೇ ಇದಕ್ಕೆ ಹೆಚ್ಚಿನ ಕಾರಣವಾಗಿತ್ತು. ವ್ಯಂಗ್ಯ, ಚತುರೋಕ್ತಿಗಳನ್ನು ಪರಿಣಾಮಕಾರಿಯಾಗಿ ಬಳಸಬಲ್ಲವರಾಗಿದ್ದರು.

ಮನಶ್ಶಾಸ್ತ್ರವನ್ನು ಅರಿತಿದ್ದ ಅವರು ತಮ್ಮವಾದಗಳು ಅವಶ್ಯಕ ಪರಿಣಾವನ್ನುಂಟು ಮಾಡುತ್ತಿಲ್ಲವೆಂದು ತಿಳಿದುಬಂದಾಗ ಭಾವೋದ್ರಿಕ್ತರಾಗಿ, ಆತುರ ಅಸಹನೆಗಳನ್ನು ವ್ಯಕ್ತಪಡಿಸುತ್ತಿದ್ದುಂಟು. ಅನೇಕ ವೇಳೆ ಆ ವಿಧಾನ ಪರಿಣಾಮಕಾರಿಯಾಗುತ್ತಿತ್ತು. ಸದಸ್ಯರ ಹಕ್ಕು ಬಾಧ್ಯತೆಗಳ ಅರಿವು ಅವರಿಗಿತ್ತಾದ್ದರಿಂದ ಅವನ್ನು ಕಾಪಾಡಲು ವಿಶೇಷ ಆಸಕ್ತಿ ವಹಿಸಿ ಸಂಸತ್ತಿನ ಗೌರವ ಪ್ರತಿಷ್ಠೆಗಳನ್ನು ಕಾಪಾಡಿಕೊಂಡು ಬಂದರು. ಪ್ರಧಾನಿಯಾಗಿದ್ದಾಗ ವಿದೇಶ ವ್ಯವಹಾರ, ಪರಮಾಣುಶಕ್ತಿ ಆಯೋಗಗಳೇ ಅಲ್ಲದೆ ರಕ್ಷಣೆ, ವಿತ್ತ ಮೊದಲಾದ ಇಲಾಖೆಗಳನ್ನೂ ಸ್ವಲ್ಪಕಾಲ ನಿರ್ವಹಿಸಿದರು. ಯೋಜನಾ ಆಯೋಗದ ಅಧ್ಯಕ್ಷರೂ ಆಗಿದ್ದರು. (ಜಿ.ಕೆ.ಯು.)

ಮಕ್ಕಳೆಂದರೆ ಅವರಿಗೆ ಅತೀವ ಪ್ರೇಮ. ಮಕ್ಕಳ ಜೊತೆಗಿರುವುದು, ಅವರೊಡನೆ ಮಾತನಾಡುವುದು, ಎಲ್ಲಕ್ಕೂ ಹೆಚ್ಚಾಗಿ ಅವರೊಡನೆ ಆಟವಾಡುವುದು ತಮಗೆ ಇಷ್ಟವೆಂದು ಜವಾಹರರು ಹೇಳುತ್ತಿದ್ದರು. ನಿಸರ್ಗಪ್ರಿಯರಾಗಿದ್ದ ಅವರಿಗೆ ಬೆಟ್ಟ ಏರುವುದು, ಗಿರಿಕಂದರಗಳಲ್ಲಿ ಅಲೆಯುವುದು ಇಷ್ಟವಾದ ಹವ್ಯಾಸಗಳಾಗಿದ್ದುವು.

ಅವರನ್ನು ಮತ್ತು ಅವರ ಧೋರಣೆ ಆಡಳಿತನೀತಿಗಳನ್ನು ದೂರುವವರು ಇಲ್ಲದಿಲ್ಲ. ಅವರು ವ್ಯಕ್ತಿಗಳ ದಕ್ಷ ಪರೀಕ್ಷಕರಾಗಿರಲಿಲ್ಲವೆನ್ನುವವರಿದ್ದಾರೆ. ಮೂವತ್ತರ ದಶಕದಲ್ಲಿ ಜಯಪ್ರಕಾಶ ನಾರಾಯಣ, ರಾಮಮನೋಹರ ಲೋಹಿಯ ಮುಂತಾದ ಅನೇಕ ತೀವ್ರಗಾಮಿ ಯುವಕರು ಅವರೊಡನಿದ್ದರು. ಆದರೆ ಕ್ರಮೇಣ ಅವರೆಲ್ಲರೂ ನೆಹರೂ ಅವರನ್ನು ಬಿಟ್ಟರಲ್ಲದೆ ಅವರಲ್ಲನೇಕರು ಜವಾಹರರನ್ನು ಟೀಕಿಸುತ್ತಿದ್ದರು. ಪ್ರಥಮ ಭಾರತೀಯ ಗವರ್ನರ್-ಜನರಲ್ ಸಿ. ರಾಜಗೋಪಾಲಾಚಾರಿಯವರೊಂದಿಗೆ ಅವರ ಮೈತ್ರಿ ಬಹಳ ಕಾಲ ಬಾಳಲಿಲ್ಲ. ಪ್ರಥಮ ಅಧ್ಯಕ್ಷ ಬಾಬು ರಾಜೇಂದ್ರಪ್ರಸಾದರೊಡನೆ ಅವರ ಸಂಬಂಧ ತೃಪ್ತಿಕರವಾಗಿರಲಿಲ್ಲ. ಅವರ ಮಂತ್ರಿಮಂಡಲದಿಂದ ಹೊರಬಿದ್ದ ಡಾ. ಅಂಬೇಡ್ಕರ್ ಮುಂತಾದ ಅನೇಕ ಸಹೊದ್ಯೋಗಿಗಳು ಅವರ ನಿರಂಕುಶಾಧಿಕಾರದ ವಿಧಾನ, ಅವರು ಮಂತ್ರಿಮಂಡಲದ ಸದಸ್ಯರನ್ನು ನಡೆಸಿಕೊಳ್ಳುತ್ತಿದ್ದ ಬಗೆ ಇವನ್ನು ಕಟುವಾಗಿ ಟೀಕಿಸಿದ್ದಾರೆ. ಕೊನೆಕೊನೆಗೆ ಜವಾಹರಲಾಲರನ್ನು ಕೇವಲ ಸ್ತುತಿಪಾಠಕರ ಗುಂಪೊಂದು ಸುತ್ತುವರಿದಿತ್ತು ಎನ್ನುವವರುಂಟು. ಗಂಭೀರ ಸಮಸ್ಯೆಗಳು ತಲೆದೋರಿದಾಗ ಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳಲು ಜವಾಹರರು ಅಸಮರ್ಥರಾಗಿದ್ದರು ಎನ್ನುವುದಕ್ಕೆ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಎದುರಿಗೆ ಒಯ್ದದ್ದನ್ನು ಉದಾಹರಿಸಲಾಗುತ್ತದೆ. ತಮ್ಮ ಅದೂರ ದೃಷ್ಟಿ ಮತ್ತು ಹಟಮಾರಿತನಗಳಿಂದಾಗಿ ಜಿನ್ನಾ ಮತ್ತು ಉಳಿದ ಮುಸ್ಲಿಮ್ ಲೀಗ್ ಸದಸ್ಯರನ್ನು ಅವರು ಒಲಿಸಿಕೊಳ್ಳಲಾಗದೆ ಹೋದರು. ಅದರಿಂದ ಲೀಗಿಗೆ ಕಾಂಗ್ರೆಸ್ಸಿನಲ್ಲಿ ವಿಶ್ವಾಸ ಅಳಿದು ಭಾರತ ಇಬ್ಭಾಗವಾಗುವದಕ್ಕೆ ಹಾದಿಯಾಯಿತು ಎಂದು ಆಕ್ಷೇಪಿಸುವವರೂ ಇದ್ದಾರೆ. ಟಿಬೆಟ್ಟಿನ ಸಮಸ್ಯೆ ವಿಶ್ವಸಂಸ್ಥೆಯ ಎದುರಿಗೆ ಬಂದಾಗ ಭಾರತ ಅನುಸರಿಸಿದ ನಿಲುಮೆಯಿಂದಾಗಿ ವಿಶ್ವಸಂಸ್ಥೆ ಆ ಸಮಸ್ಯೆಗೆ ಸಾಕಷ್ಟು ಗಮನ ಕೊಡಲಿಲ್ಲ.

ಅದರಿಂದ ಚೀನ ಟಿಬೆಟ್ಟನ್ನು ಆಕ್ರಮಿಸಿಕೊಂಡಿತಲ್ಲದೆ ಭಾರತದ ಮೇಲೂ ಆಕ್ರಮಣ ನಡೆಸುವಂತಾಯಿತು. ಭಾರತ ಶಾಂತಿಯನ್ನು ಪಾಲಿಸಿಕೊಂಡು ಬಂದಲ್ಲಿ ಉಳಿದ ರಾಷ್ಟ್ರಗಳು ಅದನ್ನು ಆಕ್ರಮಿಸಲಾರವು ಎಂದು ಭಾವಿಸಿ ರಕ್ಷಣಾ ಸಿದ್ಧತೆಯನ್ನು ಅವರು ಕಡೆಗಣಿಸಿದ್ದರಿಂದ 1962ರಲ್ಲಿ ಚೀನದೊಡನೆ ನಡೆದ ಗಡಿಯುದ್ಧ ಭಾರತಕ್ಕೆ ಅಪಮಾನಕರವಾಗಿ ಅಂತ್ಯಗೊಂಡಿತು ಎನ್ನಲಾಗಿದೆ. ಅವರ ಅಲಿಪ್ತ ನೀತಿ ದೋಷರಹಿತವಾಗಿರಲಿಲ್ಲ. ಕೊನೆಯವರೆಗೂ ಇಸ್ರೇಲಿನ ವಿರುದ್ಧ ಅರಬ್ ದೇಶಗಳನ್ನು ಅವರು ಬೆಂಬಲಿಸಿದರು. ರಷ್ಯ ಹಂಗೇರಿಯನ್ನು ಆಕ್ರಮಿಸಿದಾಗ ಜವಾಹರಲಾಲರ ಹೇಳಿಕೆಗಳು ಅಸಂಬದ್ಧವಾಗಿದ್ದುವು. ಚೀನ ಭಾರತದ ಮೇಲೆ ಆಕ್ರಮಣ ಮಾಡಿದ ಅನಂತರವೂ ಅವರು ವಿಶ್ವಸಂಸ್ಥೆಯಲ್ಲಿ ಚೀನದ ಸದಸ್ಯತ್ವವನ್ನು ಪ್ರತಿಪಾದಿಸಿದ್ದು ಸರಿಯಲ್ಲ ಎನ್ನುವವರಿದ್ದಾರೆ. ಅವರ ಪಂಚವಾರ್ಷಿಕ ಯೋಜನೆಗಳೂ ಟೀಕೆಗೆ ಒಳಗಾಗಿವೆ. ಆಹಾರ ಧಾನ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಅಮದು ಮಾಡಿಕೊಳ್ಳಬೇಕಾಗುವ ಭಾರತದಂಥ ದೇಶದ ಕೃಷಿಯನ್ನು ಕಡೆಗಣಿಸಿ ಪ್ರತಿಷ್ಠೆಯ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಎಡೆಗೊಟ್ಟದ್ದರಿಂದ ಬಡತನ ನಿರುದ್ಯೋಗಗಳು ಹೆಚ್ಚಿದುವು ಎನ್ನಲಾಗಿದೆ. ಈ ಟೀಕೆಗಳ ಬಗ್ಗೆ ನಿರ್ಣಯ ನುಡಿಯುವುದು ಇತಿಹಾಸಕ್ಕೆ ಮಾತ್ರ ಸಾಧ್ಯ. ಆದರೆ ತಮ್ಮ ಕಾರ್ಯನೀತಿಗಳು, ತಾವು ತಳೆದ ಧೋರಣೆ ನಿಲುಮೆಗಳು ಭಾರತದ ಹಿತಕ್ಕೆ ಅವಶ್ಯವೆಂದು ಅವರು ಪೂರ್ಣವಾಗಿ ನಂಬಿದ್ದರು.

ಜವಾಹರರು ಉದ್ದಾಮ ವ್ಯಕ್ತಿಯಾಗಿದ್ದರು. ಭಾರತದ, ಪ್ರಪಂಚದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾದ್ದು.

(ಜಿ.ಕೆ.ಯು.; ಎಂ.ವಿ.ಎಸ್.ಆರ್.) ನೆಹರೂ ಸಾಹಿತ್ಯ: ಜವಾಹರಲಾಲ್ ನೆಹರೂ ಅವರಿಗೆ ಓದು ಬರೆಹಗಳಲ್ಲಿ ಆಸಕ್ತಿ ತೀವ್ರವಾಗಿದ್ದರೂ ಅವರಿಗೆ ಸ್ವಾತಂತ್ರಕ್ಕಾಗಿ ನಡೆಸುತ್ತಿದ್ದ ಹೋರಾಟದ ಮಧ್ಯೆ ಬಿಡುವಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಸಂಬಂಧದಲ್ಲಿ ಅವರು ಸೆರೆಮನೆಗೆ ಹೋಗುವ ಪ್ರಸಂಗ ಆಗಾಗ್ಗೆ ಬರುತ್ತಿತ್ತು. ಒಟ್ಟು ಸುಮಾರು ಒಂಬತ್ತು ವರ್ಷಗಳ ಕಾಲ ಅವರು ಸೆರೆಮನೆಯ ವಾಸ ಅನುಭವಿಸಿದರು. ಹೀಗೆ ಬಲವಂತವಾಗಿ ದೊರೆತ ವಿರಾಮವನ್ನು ಇವರು ಆಳವಾದ ಚಿಂತನೆಗೂ ಗ್ರಂಥರಚನೆಗೂ ಬಳಸಿದರು. ಅವರು ಹೇಗೆ ಕಾರ್ಯಶೀಲರೋ ಹಾಗೆಯೇ ಚಿಂತನಶೀಲರೂ ಆಗಿದ್ದರು. ತಮ್ಮ ಚಿಂತನೆಗಳನ್ನು ಬರೆದಿಡುವುದರಲ್ಲಿ ಅವರಿಗೆ ನೆಮ್ಮದಿ ದೊರಕುವುದರ ಜೊತೆಗೆ ವಿಚಾರಸ್ಪಷ್ಟತೆಗೂ ಆತ್ಮಶೋಧನೆಗೂ ಅವಕಾಶವಾಯಿತು. 1947ರಲ್ಲಿ ಸ್ವತಂತ್ರ ಭಾರತದ ಪ್ರಧಾನಿಯಾದ ಮೇಲೆ ಅವರ ಕಾಲವೆಲ್ಲ ಆಡಳಿತ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲೂ ದೇಶದ ನಾನಾ ಸಮಸ್ಯೆಗಳನ್ನು ಪರಿಹರಿಸುವುದರಲ್ಲೂ ಕಳೆಯಿತು. ಆಗ ಬರೆಯುವುದಕ್ಕಂತೂ ವಿರಾಮವಿರಲಿಲ್ಲ. ಆಗಾಗ್ಗೆ ಅವರು ಮಾಡಿದ ಭಾಷಣಗಳು, ಬರೆದ ಲೇಖನಗಳನ್ನೇ ನೆಹರೂ ಸಾಹಿತ್ಯದ ಅಂಗವೆಂದು ಭಾವಿಸಬಹುದು. ಅವರು ಬರೆದ ಪತ್ರಗಳು ಕೂಡ ನೆಹರೂ ಸಾಹಿತ್ಯದಲ್ಲಿ ಅಡಕವಾಗಿವೆ. ತಮ್ಮ ಬದುಕು, ದೇಶದ ನಾನಾ ಸಮಸ್ಯೆಗಳು, ಜನಜೀವನ ವಿಶಾಲ ಜಗತ್ತಿನ ಘಟನೆಗಳು-ಇವುಗಳ ಬಗ್ಗೆ ಆಳವಾಗಿ ಆಲೋಚಿಸಿ ಅವರು ರಚಿಸಿದ ಕೃತಿಗಳು ಉತ್ತಮ ಸಾಹಿತ್ಯವೆನಿಸಿವೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ವಿವರಿಸುವುದು, ಮಾನವನ ಸಂತತ ವಿಕಾಸವನ್ನು ಗುರುತಿಸುವುದು ಹಾಗೂ ಭಾರತದ ಸಂಸ್ಕøತಿಯ ಜೀವಾಳವನ್ನು ಶೋಧಿಸುವುದು ಮೊದಲಾದುವೇ ಅವರ ಬರೆಹಗಳ ಮೂಲ ಪ್ರೇರಣೆ.

ಸೆರೆಮನೆಯಲ್ಲಿ ಒಂಟಿಯಾಗಿದ್ದಾಗ ಮಗಳಿಗೆ ತಮ್ಮ ಯೋಗಕ್ಷೇಮದ ಬಗ್ಗೆ ತಿಳಿಸುವುದಲ್ಲದೆ, ವಿಶಾಲ ಜಗತ್ತಿನ ಚರಿತ್ರೆಯನ್ನೂ ಸರಳ ಸುಂದರ ಶೈಲಿಯಲ್ಲಿ ಅವರು ವಿವರಿಸಿದರು. ಎನ್ ಆಟೋ ಬಯಾಗ್ರಫಿ (1935), ಗ್ಲಿಂಪ್ಸಸ್ ಆಫ್ ವಲ್ರ್ಡ್ ಹಿಸ್ಟರಿ (1939), ದಿ ಡಿಸ್ಕವರಿ ಆಫ್ ಇಂಡಿಯ (1946) ಎಂಬ ಮುಖ್ಯ ಕೃತಿಗಳನ್ನು ಇವರು ರಚಿಸಿದ್ದು ಸೆರೆಮನೆಯ ವಾಸದ ವಿರಾಮದಲ್ಲಿ.

ಸೋವಿಯೆತ್ ರಷ್ಯ (1929): ನೆಹರೂ ಸೋವಿಯತ್ ಕ್ರಾಂತಿಯ ಹತ್ತನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾಸ್ಕೋಗೆ ಭೇಟಿಯಿತ್ತರು. ಸೋವಿಯತ್ ದೇಶದ ಕ್ರಾಂತಿ ಮತ್ತು ಸಾಧನೆಗಳನ್ನು ಕುರಿತು ಅವರು ಉತ್ಸಾಹದಿಂದ ಬರೆದ ಕೃತಿಯಿದು. ರಷ್ಯನರ ಸಾಧನೆಗಳಿಂದ ನೆಹರೂ ಅವರು ಪಡೆದ ಸ್ಫೂರ್ತಿ ಮತ್ತು ಆನಂದೋತ್ಸಾಹಗಳು ಇಲ್ಲಿ ಕಂಡುಬರುತ್ತವೆ. ಲೆನಿನ್ನನ ಮಹಾ ನಾಯಕತ್ವವನ್ನು ಮುಕ್ತಕಂಠದಿಂದ ಅವರು ಇಲ್ಲಿ ಕೊಂಡಾಡಿದ್ದಾರೆ. ಸೋವಿಯತ್ ಕ್ರಾಂತಿ ಪ್ರಪಂಚದ ಇತಿಹಾಸದಲ್ಲಿ ಒಂದು ಮಹತ್ತ್ವಪೂರ್ಣ ಘಟನೆಯೆಂದೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಜನರಿಗೆ ಇದು ಸ್ಫೂರ್ತಿ ನೀಡಿದ್ದಲ್ಲದೆ ಹೊಸ ಆಶಾಜ್ಯೋತಿಯನ್ನು ಬೆಳಗಿತು ಎಂದು ನೆಹರೂ ಅಭಿಪ್ರಾಯಪಟ್ಟಿದ್ದಾರೆ. ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್ (1930): ಮಗಳು ಇಂದಿರಾ ಪ್ರಿಯದರ್ಶಿನಿಗೆ ಹತ್ತು ವರ್ಷವಾಗಿದ್ದಾಗ ನೆಹರೂ ಬರೆದ ಪತ್ರಗಳಿವು. ಇಲ್ಲಿ ಒಟ್ಟು ಮೂವತ್ತು ಪತ್ರಗಳಿವೆ. ಪುರಾತನ ಮಾನವನ ಇತಿಹಾಸವನ್ನು ತುಂಬ ಸುಲಭವಾದ ರೀತಿಯಲ್ಲಿ ವಿವರಿಸುವ ಪ್ರಯತ್ನ ಇಲ್ಲಿದೆ. ಮಾನವನ ನಿರಂತರ ಹೋರಾಟದ ಫಲವಾಗಿ ಪ್ರಾಚೀನ ನಾಗರಿಕತೆ ಈ ಮಟ್ಟಕ್ಕೆ ಮುಟ್ಟಿದೆ ಎಂಬ ವಿಷಯವನ್ನು ಹೇಳಿ ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಇರುವ ಸಂಬಂಧವನ್ನು ಇಲ್ಲಿ ವಿವರಿಸಲಾಗಿದೆ. ಮುಖ್ಯವಾಗಿ ಇವು ಮಕ್ಕಳಿಗೋಸ್ಕರ ಬರೆದ ಪತ್ರಗಳು. ನಾಗರೀಕತೆ ಎಷ್ಟು ಪುರಾತನವಾದುದು ಎಂಬುದನ್ನು ಎಳೆಯ ಮಕ್ಕಳಿಗೂ ಮನದಟ್ಟು ಮಾಡುವಂತೆ ಸ್ವಾರಸ್ಯವಾಗಿ ಈ ಪತ್ರಗಳು ರಚನೆಗೊಂಡಿವೆ.

ಎನ್ ಆಟೋ ಬಯಾಗ್ರಫಿ (1935): ನೆಹರೂ ತಮ್ಮ ಆತ್ಮಚರಿತ್ರೆಯನ್ನೂ ಅಲ್ಮೋರಾದ ಕೇಂದ್ರ ಸೆರೆಮನೆಯಲ್ಲಿ ಬರೆದು ಮುಗಿಸಿದರು. ನೆಹರೂ ತಮ್ಮ ಜೀವನದ ಕಥೆಯ ಜೊತೆಗೆ ಇಲ್ಲಿ ನಮ್ಮ ದೇಶದ ಸ್ವಾತಂತ್ರ್ಯದ ಹೋರಾಟದ ಕಥೆಯನ್ನೂ ಬಣ್ಣಿಸಿದ್ದಾರೆ. ಈ ಹೋರಾಟದಲ್ಲಿ ನೆಹರೂ ಅವರದೇ ಅಗ್ರಪಾತ್ರ ಆಗಿರುವುದು ಈ ಕಥನದ ವೈಶಿಷ್ಟ್ಯ. ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಮೋತಿಲಾಲರ ಏಕಮಾತ್ರ ಮುದ್ದುಮಗನಾಗಿ ಬೆಳೆದು ಇಂಗ್ಲೆಂಡ್‍ನ ಸ್ವತಂತ್ರ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡಿ, ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಹಿಂತಿರುಗಿದ್ದು, ತಮ್ಮ ದೇಶಬಾಂಧವರು ಗುಲಾಮಗಿರಿಯಲ್ಲಿ ತೊಳಲುತ್ತಿದ್ದುದು. ಇದರಿಂದ ತುಂಬ ವ್ಯಥೆಪಟ್ಟ ತರುಣ ನೆಹರೂ, ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯದ ಹೋರಾಟದಲ್ಲಿ ಧುಮುಕಿದ್ದು. ಆಮೇಲೆ ಜೇಲು ಹಕ್ಕಿಯಾಗಿ ಸೆರೆಮನೆಯ ಒಳಗೂ ಹೊರಗೂ-ಇರುತ್ತಿದ್ದುದು, ಗಾಂಧೀಜಿಯವರ ವ್ಯಕ್ತಿತ್ವ, ನಿಃಸ್ಪøಹತೆ ಮತ್ತು ಅಸದೃಶ ನಾಯಕತ್ವ ನೆಹರೂ ಅವರ ಮೇಲೆ ಬೀರಿದ್ದು. ಹೀಗೆ ಇಲ್ಲಿ ಅನೇಕ ಹೃದಯಸ್ಪರ್ಶಿ ಘಟನೆಗಳ ವಿವರಗಳಿವೆ. ಗಾಂಧೀಜಿಗೂ ನೆಹರೂ ಅವರಿಗೂ ಇದ್ದ ಮನೋಧರ್ಮ ವ್ಯತ್ಯಾಸ, ಅಭಿಪ್ರಾಯಭೇದಗಳ ಪ್ರಸ್ತಾಪವೂ ಇಲ್ಲಿವೆ. ಗಾಂಧೀಜಿ ಮುಖ್ಯವಾಗಿ ಧಾರ್ಮಿಕ ವ್ಯಕ್ತಿ. ನೆಹರೂ ಆಧುನಿಕ ಹಾಗೂ ವೈಜ್ಞಾನಿಕ ದೃಷ್ಟಿ ತಳೆದ ಕ್ರಾಂತಿಕಾರಿ. ಅವರಿಬ್ಬರ ನಡುವೆ ಅತ್ಯಂತ ವಾತ್ಸಲ್ಯಮಯವಾದ ಸಂಬಂಧ ಬೆಳೆಯಿತು. ಗಾಂಧೀಜಿಯ ಬಗ್ಗೆ ನೆಹರೂ ಕೊಟ್ಟಿರುವ ನುಡಿಚಿತ್ರ ಮನೋಹರವಾಗಿದೆ. ಭಿಕ್ಷೆಯ ರಾಜಕೀಯದಿಂದ ಕಾರ್ಯೋನ್ಮುಖ ರಾಜಕೀಯಕ್ಕೆ ಜನತೆಯನ್ನು ಕೊಂಡೊಯ್ದ ಗಾಂಧೀಜಿಯ ವ್ಯಕ್ತಿತ್ವವನ್ನು ಮನಸಾರ ಕೊಂಡಾಡಿದ್ದಾರೆ. ತಮ್ಮ ತಂದೆ ಮೋತಿಲಾಲರು ತೀರಿ ಕೊಂಡಾಗ ಗಾಂಧೀಜಿ ತಮ್ಮ ಜೊತೆಯಲ್ಲಿದ್ದುದು ಎಷ್ಟು ಶಾಂತಿಯನ್ನು ಕೊಟ್ಟಿತು ಎಂಬುದನ್ನು ತಿಳಿಸಿದ್ದಾರೆ.

ತಂದೆ ಮೋತಿಲಾಲರ ಸಿಂಹಸದೃಶ ವ್ಯಕ್ತಿತ್ವ ಹಾಗೂ ತಾಯಿ ಸ್ವರೂಪರಾಣಿಯ ಕೋಮಲ ಸ್ವಭಾವದ ಚಿತ್ರ ಇಲ್ಲಿವೆ. ಕಮಲಾದೇವಿಯೊಡನೆ ವಿಜೃಂಭಣೆಯ ವಿವಾಹ; ಪದೇ ಪದೇ ಜೇಲಿಗೆ ಹೋಗುವುದರಿಂದ ಬಂದ ವಿರಹದ ಯಾತನೆ, ಈ ದುಃಖವನ್ನೆಲ್ಲ ಬದಿಗೊತ್ತುವ ದೇಶಪ್ರೇಮ ಮತ್ತು ತ್ಯಾಗ; ತಂದೆ ತಾಯಿ ತಂಗಿಯರು ಹೆಂಡತಿ ಎಲ್ಲರೂ ಪೋಲೀಸರ ದೌರ್ಜನ್ಯವನ್ನು ಎದುರಿಸುವ ಕೆಚ್ಚು-ಇವುಗಳ ವರ್ಣನೆ ಮನಮುಟ್ಟುವಂತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಸ್ತ್ರೀಯರು, ಕಾರ್ಮಿಕರು, ಶ್ರಮಜೀವಿಗಳು ವಿದ್ಯಾರ್ಥಿಗಳು, ಈ ಹೋರಾಟದಲ್ಲಿ ವಹಿಸಿದ ಪಾತ್ರದ ವಿವರ ಉಚಿತವಾಗಿದೆ. ಇದಲ್ಲದೆ ಕೆಲವು ಪ್ರಕರಣಗಳು, ವ್ಯಕ್ತಿಚಿತ್ರಗಳು ಮೋಹಕವಾಗಿವೆ. ನೆಹರೂ ರಾಜಕೀಯದ ಮಧ್ಯೆ ನಿಸರ್ಗವನ್ನು ಮರೆತವರಲ್ಲ. ಸೆರೆಮನೆಯಲ್ಲಿದ್ದಾಗ ಆಕಾಶದಲ್ಲಿ ತೇಲಾಡುತ್ತಿದ್ದ ಮೊಡಗಳನ್ನು ನೋಡಿ ಆನಂದಿಸುತ್ತಿದ್ದರು. ಅಲ್ಲದೆ ಕಾಶ್ಮೀರದ ಕಣಿವೆ, ಹಿಮಾಲಯದ ಭವ್ಯ ಸೌಂದರ್ಯದ ವರ್ಣನೆಗಳು ನೆಹರು ಅವರ ನಿಸರ್ಗ ಸೌಂದರ್ಯದೃಷ್ಟಿಗೆ ಸಾಕ್ಷಿಯಾಗಿವೆ. ರಾಜಕೀಯ ಜೀವನದ ಗೊಂದಲದಲ್ಲೇ ಬಹುಕಾಲ ಕಳೆಯುತ್ತಿದ್ದರೂ ಅವರ ಸೌಂದರ್ಯ ಪ್ರಜ್ಞೆ ಹಾಗು ಕಲಾಭಿಜ್ಞತೆ ಎಷ್ಟು ಸೂಕ್ಷ್ಮವಾಗಿತ್ತು ಎನ್ನುವುದಕ್ಕೆ ಅನೇಕ ನಿದರ್ಶನಗಳು ಇಲ್ಲಿ ದೊರೆಯುತ್ತವೆ. ತಮ್ಮ ಒಡನಾಡಿಗರೊಡನೆ ಸಮರಸವಾಗಿ ಬೆರೆತು ಭಾರತದ ಸ್ವಾತಂತ್ರ್ಯ ಸಾಧನೆಯ ಹಿರಿಯ ಧ್ಯೇಯಕ್ಕಾಗಿ ನಿರ್ಮಲವಾದ ಅಂತಃಕರಣದಿಂದ ಹೋರಾಡಿದ್ದರ ವಿವರಗಳನ್ನು ನಾವು ಇಲ್ಲಿ ಕಾಣುತ್ತೇವೆ. ಈ ಆತ್ಮಚರಿತ್ರೆಯಲ್ಲಿ ಭಾರತದ ಜನತೆಯ ಸುಖದುಃಖಗಳಲ್ಲಿ ನೆಹರೂ ತಮ್ಮ ವ್ಯಕ್ತಿತ್ವವನ್ನು ಹೇಗೆ ಲೀನಗೊಳಿಸಿದರು ಎಂಬುದರ ಕಥೆ ಇದೆ. ಒಂದು ದೇಶದ ಹೋರಾಟದ ಹಿನ್ನೆಲೆಯಲ್ಲಿ ಬೆಳೆದಿರುವ ಒಬ್ಬ ಸ್ವಾತಂತ್ರ್ಯಯೋಧನ ಚೇತನ ಹೇಗೆ ಬೆಳೆಯಿತು ಎಂಬುದರ ಕಥೆ ಅಪೂರ್ವವಾದದ್ದು. ಆದ್ದರಿಂದ ಈ ಆತ್ಮಚರಿತ್ರೆಗೆ ಒಂದು ವಿಶೇಷ ಮಾನ್ಯತೆ ಸಲ್ಲುತ್ತದೆ. ಇದು ವಸ್ತು ಮತ್ತು ಶೈಲಿಯ ದೃಷ್ಟಿಯಿಂದಲೂ ಖ್ಯಾತಿಪಡೆದಿದೆ. ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವಪಡೆದ ಕೆಲವೇ ಲೇಖಕರಲ್ಲಿ ನೆಹರು ಸಹ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ಕೃತಿಗಳೆಲ್ಲ ಅವರ ಆತ್ಮಚರಿತ್ರೆಗೆ ಆಗ್ರಸ್ಥಾನ ಸಲ್ಲುತ್ತದೆ. ಅಲ್ಲದೆ ಭಾರತದ ಸ್ವಾತಂತ್ರ್ಯ ಕಥೆಯನ್ನು ಜಗತ್ತು ಆರ್ಥ ಮಾಡಿಕೊಂಡಿದ್ದು ಈ ಆತ್ಮಚರಿತ್ರೆಯ ಮೂಲಕವೇ. ಅವರ ಖಾಸಗಿ ಜೀವನಕ್ಕಿಂತ ಅವರ ರಾಜಕೀಯ ಚಟುವಟಿಕೆಗಳು, ಆರ್ಥಿಕ ಚಿಂತನೆಗಳು, ಸಾಮಾಜಿಕ ಕಾಳಜಿಗಳು ಇಲ್ಲಿ ಬರುತ್ತವೆ. ಗಾಂಧೀಜಿಯ ಆತ್ಮಚರಿತ್ರೆಗೆ ಸರಿದೂಗಿ ನಿಲ್ಲುವಂಥ ಈ ಕೃತಿ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ಗ್ಲಿಂಪ್ಸಸ್ ಆಫ್ ವಲ್ರ್ಡ್ ಹಿಸ್ಟರಿ (1939); ಸೆರೆಮನೆಯಿಂದ ಮಗಳಿಗೆ ಬರೆದ ಪತ್ರಗಳು ಈ ಗ್ರಂಥದ ವಸ್ತು. ಒಟ್ಟು 196 ಪತ್ರಗಳಿವೆ. ಇವು ಪ್ರಪಂಚದ ಇತಿಹಾಸದ ಇಣುಕು ನೋಟಗಳು. ಇಡೀ ಮಾನವ ಇತಿಹಾಸದ ವಿಹಂಗಮ ನೋಟ ಇಲ್ಲಿದೆ. ಇತಿಹಾಸದಲ್ಲಿ ಮೊದಲಿನಿಂದಲೂ ನೆಹರು ಅವರಿಗೆ ಆಸಕ್ತಿ ಇತ್ತು. ಮಾನವನ ಸಾಧನೆಗಳನ್ನೂ ನಾಗರೀಕತೆಯ ಬೆಳೆವಣಿಗೆಯನ್ನೂ ಒಂದು ಸಮಗ್ರ ದೃಷ್ಟಿಯಿಂದ ವಿವೇಚಿಸಿರುವುದು ಇದರ ಮಹತ್ತ್ವ. ಪುಸ್ತಕಗಳ ಸಹಾಯವಿಲ್ಲದೆ ಸೆರೆಮನೆಯ ವಾತಾವರಣದಲ್ಲಿ ಬರೆದದ್ದಂತೂ ವಿಶೇಷವೇ ಸರಿ. ಅನೇಕರು ಈ ಗ್ರಂಥವನ್ನು ಎಚ್.ಜಿ.ವೆಲ್ಸ್ ಅವರ ಎನ್‍ಔಟ್‍ಲೈನ್ ಆಫ್ ವಲ್ರ್ಡ್ ಹಿಸ್ಟರಿಗೆ ಸಮನೆಂದು ಭಾವಿಸುತ್ತಾರೆ. ಇಲ್ಲಿ ನೆಹರೂ ಅವರ ಸ್ವಂತ ಚಿಂತನೆಗಳು, ನಂಬಿಕೆಗಳು ಪ್ರತಿಬಿಂಬಿತವಾಗಿವೆ. ಮಗಳಿಗೆ ಮಾನವ ಚರಿತ್ರೆಯನ್ನು ಹೇಳುವ ನಿಮಿತ್ತ ಮಾಡಿಕೊಂಡು ಇಡೀ ಮಾನವ ಚರಿತ್ರೆಯನ್ನೇ ಬರೆದಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಇತಿಹಾಸ ನಿರ್ಮಾಪಕರಾಗಿದ್ದ ನೆಹರೂ ಮಾನವ ಚರಿತ್ರೆಯನ್ನು ವಿವರಿಸಿರುವುದರಲ್ಲಿ ವಿಶಿಷ್ಟವಾದ ಔಚಿತ್ಯವಿದೆ.

ಅನೇಕರು ರೋಮನ್ ಮತ್ತು ಗ್ರೀಕ್ ನಾಗರಿಕತೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ಪಾಶ್ಚಾತ್ಯ ನಾಗರಿಕತೆಗಳಿಗೇ ಹೆಚ್ಚು ಮಹತ್ತ್ವ ನೀಡುವ ಈ ದೃಷ್ಟಿಯ ಕೊರತೆಯನ್ನು ಮನಗಂಡ ನೆಹರೂ ಲೋಕದ ಇತರ ಭಾಗಗಳಲ್ಲಿ ಅಂದರೆ ಈಜಿಪ್ಟ್, ಚೀನ, ಭಾರತ ಮೊದಲಾದ ಕಡೆ ಬೆಳೆದುಬಂದ ನಾಗರಿಕತೆಗಳನ್ನು ಇಲ್ಲಿ ವಿವರಿಸಿದ್ದಾರೆ. ಚರಿತ್ರೆ ಎಂದರೆ ರಾಜಮಹಾರಾಜರ ಕಥೆಯಲ್ಲ, ಯುದ್ಧಗಳ ವರದಿಯಲ್ಲ, ಜನ ಸಾಮಾನ್ಯರ ನಿತ್ಯಜೀವನದ ಹೋರಾಟ. ಅಂತೆಯೇ ತತ್ತ್ವಜ್ಞಾನಿಗಳು, ವಿಜ್ಞಾನಿಗಳು, ಮಾನವತಾವಾದಿಗಳು ಲೋಕದ ಪ್ರಗತಿಗೆ ಸಲ್ಲಿಸಿರುವ ಸೇವೆ ಮಹತ್ತರವಾದುದು ಎಂಬುದನ್ನು ನೆಹರೂ ಅವರಷ್ಟು ಚೆನ್ನಾಗಿ ಅರಿತಿದ್ದವರು ವಿರಳ. ಅಂದು ಭಾರತದ ಸ್ವಾತಂತ್ರ್ಯ ನಮ್ಮ ಗುರಿಯಾಗಿದ್ದರೂ ಮಾನವ ಜನಾಂಗದ ಕಲ್ಯಾಣ ಅದಕ್ಕಿಂತ ಮಿಗಿಲಾದುದು. ಭಾರತದ ಸ್ವಾತಂತ್ರ್ಯ ಹೋರಾಟ ಪ್ರಪಂಚದಲ್ಲಿ ಸತತವಾಗಿ ನಡೆದು ಬಂದಿರುವ ಹೋರಾಟದ ಭಾಗ. ನೆಹರೂ ಅವರಿಗೆ ನಾನಾ ದೇಶಗಳ ಹಾಗೂ ನಾಯಕರೊಡನೆ ಇದ್ದ ನಿಕಟ ಪರಿಚಯದಿಂದ ಬಂದು ಅನುಭವ ಮತ್ತು ಜ್ಞಾನ ಅವರ ಇತಿಹಾಸದ ಕಥನಕ್ಕೆ ಒಳನೋಟವನ್ನು ಕೊಟ್ಟಿದೆ. ಸಾಮಾನ್ಯ ಇತಿಹಾಸಕಾರರಂತೆ ನೆಹರೂ ಅವರು ಈ ಚರಿತ್ರೆಯನ್ನು ಪಠ್ಯ ಪುಸ್ತಕದಂತೆ ನೀರಸವಾಗಿ ಬರೆದಿಲ್ಲ. ವಿದ್ವತ್ತಿನ ದೃಷ್ಟಿಯಿಂದ ಈ ಕೃತಿ ಪ್ರೌಢ ಗ್ರಂಥವಲ್ಲ. ಆದರೆ ಅದರ ಸೊಗಸು ಇರುವುದು ಇವರ ಕಥನಕುಶಲತೆಯಲ್ಲಿ, ಸಮಗ್ರದೃಷ್ಟಿಯಲ್ಲಿ ಮತ್ತು ಸರಳಶೈಲಿಯಲ್ಲಿ. ಒಬ್ಬ ಸಾಮಾನ್ಯ ಓದುಗ ಸಹ ಕಾದಂಬರಿಯಂತೆ ಸ್ವಾರಸ್ಯವಾಗಿರುವ ಈ ಕೃತಿಯನ್ನು ಓದಿ ಆನಂದಿಸಬಹುದು. ಪ್ರೀತಿಯ ಮಗಳಿಗೆ ಬರೆದ ಪತ್ರಗಳಾದ್ದರಿಂದ ಇವು ಸಹಜವಾಗಿ ಆತ್ಮೀಯತೆಯಿಂದ ಕೂಡಿವೆ. ಇತಿಹಾಸವನ್ನು ಬಣ್ಣಿಸಿರುವ ರೀತಿ ವಸ್ತುನಿಷ್ಠವಲ್ಲವೆಂದು ನೆಹರೂ ಅವರಿಗೆ ಗೊತ್ತು. ಅಲ್ಲಲ್ಲಿ ಪುನರಾವರ್ತನಗಳೂ ಇವೆ. ಇದು ವಿದ್ವಾಂಸರನ್ನು ತಲೆದೂಗಿಸುವ ಪಾಂಡಿತ್ಯಪೂರ್ಣ ಗ್ರಂಥವಲ್ಲ. ಆದರೆ ನೆಹರೂ ಅವರಿಗೆ ಇದರ ಇತಿಹಾಸಪ್ರಜ್ಞೆ, ವಿಶಾಲದೃಷ್ಟಿ, ಒಳಹೊಕ್ಕು ನೋಡುವ ಶಕ್ತಿಯನ್ನು ನಾವು ಅನೇಕ ಇತಿಹಾಸಕಾರರಲ್ಲಿ ಕಾಣುವುದಿಲ್ಲ. ಅನೇಕ ಕಡೆ ತಮ್ಮ ಸ್ವಂತ ಅನಿಸಿಕೆಗಳನ್ನೂ ಅಭಿಪ್ರಾಯಗಳನ್ನೂ ತುಸು ಬಿರುಸಾಗಿಯೇ ಹೇಳಿದ್ದಾರೆ. ನೆಹರು ಈ ಪತ್ರಗಳನ್ನು ಬರೆದದ್ದು ಸೆರೆಮನೆಯಲ್ಲಿದ್ದಾಗ; ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ದಿ ಡಿಸ್ಕವರಿ ಆಫ್ ಇಂಡಿಯ (1946): 1942ರ ಕ್ವಿಟ್ ಇಂಡಿಯ ಚಳವಳಿಯ ಕಾಲದಲ್ಲಿ ನೆಹರೂ ಅಹಮದ್‍ನಗರದ ಸೆರೆಮನೆಯಲ್ಲಿದ್ದಾಗ ರಚಿಸಿದ ಕೃತಿ. ಭಾರತಕ್ಕೆ ಒಂದು ಆರ್ಷೇಯ ಸಂಸ್ಕøತಿ ಮತ್ತು ಪರಂಪರೆ ಇದೆ. ಅದು ಸಾವಿರಾರು ವರ್ಷಗಳಿಂದ ಜೀವಂತವಾಗಿ ಉಳಿದಿರುವ ಗುಟ್ಟೇನು, ಅದರ ಸತ್ತ್ವವೇನು ಎಂಬುದನ್ನು ಕಂಡುಹಿಡಿಯಲು ನೆಹರೂ ಇಲ್ಲಿ ಪ್ರಯತ್ನಿಸಿದ್ದಾರೆ. ಇದು ಭಾರತದ ಚರಿತ್ರೆ ಮತ್ತು ಸಂಸ್ಕøತಿಯ ಶೋಧನೆ ಮಾಡುವ ಸಾಹಸ. ಸ್ವಯಂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನೆಹರೂ ಭಾರತದ ಇತಿಹಾಸ, ಪರಂಪರೆಗಳನ್ನು ಕುರಿತು ಬರೆದಿರುವುದು ಇದರ ವೈಶಿಷ್ಟ್ಯ. ಖ್ಯಾತ ಇತಿಹಾಸಕಾರ ಕೆ.ಎಂ. ಪಣಿಕ್ಕರ್ ಹೇಳಿರುವ ಹಾಗೆ ಈ ಕೃತಿ ಭಾರತದ ಜನತೆಯ ಕಥೆಗಳನ್ನು ಹೇಳುವ ಮೊದಲ ಸಾಹಸ. ಪ್ರಾಚೀನ ಕಾಲದಿಂದ ಇಂದಿನವರೆಗೂ ನಡೆದು ಬಂದಿರುವ ಭಾರತದ ಕಥೆಯನ್ನು ಯಾರೂ ಇಷ್ಟು ಹೃದಯಂಗಮವಾಗಿ ಹಾಗೂ ವಿಮರ್ಶಾತ್ಮಕವಾಗಿ ಬರೆದಿಲ್ಲ. ಈ ಕೃತಿ ನಿಜವಾದ ಅರ್ಥದಲ್ಲಿ ಇತಿಹಾಸ ಎಂದು ಅನೇಕ ವಿದ್ವಾಂಸರ ಅಭಿಪ್ರಾಯ.

ಎರಡನೆಯ ಮಹಾಯುದ್ಧ ನಡೆಯುತ್ತಿದ್ದಾಗ ಅವರು ಈ ಕೃತಿಯನ್ನು ಬರೆದದ್ದು. ಆಗ ಬಂಗಾಳದಲ್ಲಿ ಭೀಕರ ಕ್ಷಾಮ ತಾಂಡವವಾಡುತ್ತಿತ್ತು. ಅದನ್ನು ನೆನೆಸಿಕೊಂಡು ಅವರು ಮಮ್ಮಲ ಮರುಗಿದರು. ತಾವು ಜೇಲಿನ ಹೊರಗಿದ್ದಿದ್ದರೆ ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಭಾಗಿಯಾಗಬಹುದಿತ್ತು. ಆದರೀಗ ಜೇಲಿನಲ್ಲಿ ಬಂದಿ. ಅವರಿಗೆ ಮೊದಲಿನಿಂದಲೂ ಮತಾಚರಣೆಯಲ್ಲಿ ಆಸಕ್ತಿ ಇರಲಿಲ್ಲ. ಅಂಧಶ್ರದ್ದೆ ಮತ್ತು ಮೂಢನಂಬಿಕೆಗಳಿಂದಲೇ ಹೆಚ್ಚಾಗಿ ಕೂಡಿರುವ ಮತಾಚರಣೆಗಳನ್ನು ಕಂಡು ಅವರು ಬೇಸತ್ತರು. ವಿಜ್ಞಾನದ ಮೂಲಕವೇ ಮಾನವನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ನಂಬಿದ್ದರಾದರೂ ಮಾನವನ ಸ್ವಭಾವದಲ್ಲಿ ಅಡಗಿರುವ ಒಂದು ಅಗತ್ಯವನ್ನು ಪೂರೈಸಲು ಧರ್ಮಕ್ಕೆ ಮಾತ್ರ ಸಾಧ್ಯವೆಂದು ಕೂಡ ಅವರು ಮನಗಂಡಿದ್ದರು. ಕಾರ್ಲ್ ಮಾಕ್ರ್ಸ್‍ನ ಸಿದ್ಧಾಂತ ಅವರಿಗೆ ಬಹು ಮಟ್ಟಿಗೆ ಒಪ್ಪಿಗೆಯಾಗಿತ್ತು. ಆದರೂ ಯಾವೊಂದು ಸಿದ್ಧಾಂತಕ್ಕೂ ಅವರು ಕಟ್ಟು ಬೀಳಲಿಲ್ಲ. ಬದುಕು ಸಂಕೀರ್ಣ. ಅದರಲ್ಲಿ ನಿಗೂಢವಾದದ್ದು ಬೇಕಾದಷ್ಟಿದೆ. ಅದರ ಬಗ್ಗೆ ಶ್ರದ್ದೆ ಇರಬೇಕು ಎಂದು ಅವರು ನಂಬಿದ್ದರು. ಕ್ರಿಯೆ ಮತ್ತು ಚಿಂತನೆಗಳ ಮಧುರ ಸಮ್ಮಿಳನವನ್ನು ಸಾಧಿಸಬೇಕೆಂಬುದು ಅವರ ಬಯಕೆಯಾಗಿತ್ತು. ಪ್ರೀತಿಯ ಮಡದಿ ಕಮಲಾದೇವಿ ದೂರದ ಸ್ವಿಟ್ಜರ್‍ಲೆಂಡ್‍ನಲ್ಲಿ ಮರಣ ಹೊಂದಿದ ಸನ್ನಿವೇಶವನ್ನು ಕುರಿತು ಚಿಂತಿಸುತ್ತ ದಾಂಪತ್ಯಜೀವನದ ಆದರ್ಶದ ಬಗ್ಗೆ ಅವರು ಯೋಚಿಸಿದ್ದಾರೆ. ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳುವುದು ಬಹು ಕಷ್ಟವೆಂದೂ ಕಮಲಾದೇವಿಯನ್ನು ಪತಿಯಾಗಿ ತಾವು ಅರ್ಥಮಾಡಿಕೊಂಡಿರಲಿಲ್ಲವೆಂದೂ ಹೇಳಿದ್ದಾರೆ.

ಭಾರತದ ಶಕ್ತಿದೌರ್ಬಲ್ಯಗಳ ಬಗ್ಗೆ ಚಿಂತಿಸುತ್ತ ಭಾರತೀಯರು ಸಾಹಸಶೀಲರಾದಾಗ ಪ್ರಗತಿ ಹೊಂದಿದರೆಂದೂ ಜಡರಾದಾಗ ಹಿಂದೆ ಬಿದ್ದರೆಂದೂ ತಿಳಿಸುತ್ತಾರೆ. ಭಾಷೆ, ಉಡುಗೆತೊಡುಗೆ, ಜೀವನದ ರೀತಿನೀತಿಗಳ ದೃಷ್ಟಿಯಿಂದ ದೇಶದಲ್ಲಿ ಎಷ್ಟೇ ವೈವಿಧ್ಯವಿದ್ದರೂ ಅದರ ಹಿಂದೆ ಗಾಢವಾದ ಐಕ್ಯತೆ ಇರುವುದನ್ನು ಮನಗಂಡಿದ್ದಾರೆ. ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಧಾರ್ಮಿಕ ದೃಷ್ಟಿ, ಪರಂಪರಾಗತ ನಂಬಿಕೆಗಳ ಮತ್ತು ವೇದಾಂತ ಮನೋಧರ್ಮದ ಹೊಳಹುಗಳನ್ನಿಲ್ಲಿ ಕಾಣಬಹುದು. ಸಿಂಧೂ ಕಣಿವೆಯ ನಾಗರಿಕತೆಯಿಂದ ತೊಡಗಿ ವೇದ, ಉಪನಿಷತ್ತು, ಭಗವದ್ಗೀತೆಗಳನ್ನು ಇಲ್ಲಿ ವಿಮರ್ಶಿಸಲಾಗಿದೆ. ಪರಲೋಕದ ಚಿಂತನೆಯಲ್ಲಿ ಮಗ್ನರಾಗಿ ಭಾರತೀಯರು ಈ ಲೋಕವನ್ನು ಉಪೇಕ್ಷೆಮಾಡಿದರು ಎಂಬ ಕಲ್ಪನೆ ತಪ್ಪೆಂದು ನೆಹರೂ ಅವರ ಅಭಿಪ್ರಾಯ. ಮಹಾವೀರ ಮತ್ತು ಬುದ್ದರ ಜೀವನ ಮತ್ತು ಬೋಧನೆಗಳನ್ನು ವಿವರಿಸುತ್ತ ಬುದ್ದನ ಜೀವನ ತಮ್ಮ ಮೇಲೆ ಮಹತ್ಪರಿಣಾಮ ಬೀರಿತೆಂದು ತಿಳಿಸುತ್ತಾರೆ. ಭಾರತ ನೂರಾರು ವರ್ಷಗಳ ಹಿಂದೆಯೇ ಇರಾನ್, ಗ್ರೀಸ್, ಚೀನ, ಶ್ರೀಲಂಕ ಮುಂತಾದ ದೇಶಗಳೊಡನೆ ಸಂಪರ್ಕವನ್ನು ಇಟ್ಟುಕೊಂಡಿತ್ತು ಎಂಬ ವಿಷಯವನ್ನು ತಿಳಿಸುತ್ತಾರೆ. ಕಲೆ, ನಾಟಕ, ಗಣಿತಶಾಸ್ತ್ರ ಮುಂತಾದ ವಿಷಯಗಳಲ್ಲಿ ಭಾರತ ಒಳ್ಳೆಯ ಸಾಧನೆಗಳನ್ನು ಮಾಡಿತು ಎಂಬುದನ್ನೂ ಪ್ರಸ್ತಾಪಿಸಿದ್ದಾರೆ. ರಾಷ್ಟ್ರೀಯತೆಯ ಕಲ್ಪನೆ ಹೇಗೂ ಸಮನ್ವಯದೃಷ್ಟಿ ಹೇಗೆ ಬೆಳೆದುಬಂದಿದೆ ಎಂಬುದನ್ನು ತಿಳಿಸಿದ್ದಾರೆ. ಬ್ರಿಟಿಷರ ಆಳ್ವಿಕೆ, ರಾಷ್ಟ್ರೀಯತೆಗೂ ಸಾಮ್ರಾಜ್ಯಶಾಹಿಗೂ ನಡುವಿನ ಘರ್ಷಣೆ, ಎರಡನೆಯ ಮಹಾಯುದ್ಧದ ಪರಿಣಾಮ, ಭಾರತ ನಡೆಸಿದ ಅಹಿಂಸಾತ್ಮಕ ಸ್ವಾತಂತ್ರ್ಯಹೋರಾಟ ಮುಂತಾದ ವಿಷಯಗಳನ್ನು ವಿವರವಾಗಿ ಪ್ರಸ್ತಾಪಿಸಿದ್ದಾರೆ.

ಗಾಂಧೀಜಿಯ ನಾಯಕತ್ವದಲ್ಲಿ ಭಾರತದ ರಾಜಕೀಯ ಸ್ವರೂಪ ಪೂರ್ಣವಾಗಿ ಬದಲಾಯಿಸಿದ ವಿಷಯ ಬರೆಯುತ್ತ ಅವರ ಮೋಹಕ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಗಾಂಧೀಜಿ ಭಾರತದ ರಾಜಕೀಯಕ್ಕೆ ಪ್ರವೇಶಿಸಿದಾಗ ಒಂದು ಹೊಸ ಗಾಳಿಯೇ ಬೀಸಿದಂತಾಯಿತು. ಗಾಂಧೀಜಿ ಧೈರ್ಯ ಮತ್ತು ನಿರ್ಭಯತೆಯ ಸಂದೇಶವನ್ನು ಸಾರಿ ಜನತೆಗೆ ಸ್ವಾತಂತ್ರ್ಯದೀಕ್ಷೆಯನ್ನೇ ಕೊಟ್ಟರು. ಹಾಗೆಯೇ ಭಾರತೀಯ ಸಂಸ್ಕøತಿಗೆ ಕವಿ ರವೀಂದ್ರರು ಹಿರಿಯ ಸೇವೆಸಲ್ಲಿಸಿದರು. ಸತ್ಯಾರಾಧಕ ಗಾಂಧೀಜಿ, ಸೌಂದರ್ಯಾರಾಧಕ ರವೀಂದ್ರರು ಭಾರತೀಯ ಸಂಸ್ಕøತಿಯ ಎರಡು ಮುಖಗಳು. ಈ ಮಹಾಪುರುಷರ ಮೂಲಕ ಭಾರತ ಲೋಕಮನ್ನಣೆಯನ್ನು ಪಡೆಯಿತು ಎಂದು ನೆಹರೂ ಬರೆದಿದ್ದಾರೆ.

ಈ ಕೃತಿ ನಮ್ಮ ದೇಶದ ಇತಿಹಾಸಕ್ಕೆ ಒಂದು ಅಪೂರ್ವ ಕಾಣಿಕೆಯಾಗಿದೆ. ದಿ ಯೂನಿಟಿ ಆಫ್ ಇಂಡಿಯ (1941) : ಇಂಡಿಯ ಅಂಡ್ ದಿ ವಲ್ರ್ಡ್ (1936), ಏಟೀನ್ ಮನ್ತ್ಸ್ ಇನ್ ಇಂಡಿಯ (1938), ಚೈನ, ಸ್ಪೇನ್ ಅಂಡ್ ದಿ ವಾರ್ ಎಂಬ ಮೂರು ಕೃತಿಗಳ ಸಂಕಲನವಿದು. ಎರಡನೆಯ ಮಹಾಯುದ್ಧದ ಕಾರ್ಮೋಡಗಳು ಕವಿದಿದ್ದ ದಿನಗಳಲ್ಲಿ ನೆಹರೂ ಅಂತರರಾಷ್ಟ್ರೀಯ ಘಟನೆಗಳ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ. ಭಾರತ ಸ್ವತಂತ್ರವಾದರೆ ಮಾತ್ರ ಲೋಕದ ಹಿತಕ್ಕಾಗಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಅದು ಯಶಸ್ವಿಯಾಗಿ ಹೋರಾಡಬಲ್ಲುದು ಎಂಬುದು ನೆಹರೂ ಅವರ ನಂಬಿಕೆ. ಯೂರೋಪಿಗೆ ಭೇಟಿ ಕೊಟ್ಟಾಗ ಅಲ್ಲಿಯ ಯುದ್ಧಸಿದ್ಧತೆಗಳ ವಾತಾವರಣವನ್ನು ನೋಡಿ ನೆಹರೂ ಕಳವಳಪಟ್ಟರು. ನಾಟ್ಸಿ ಮತ್ತು ಫ್ಯಾಸಿಸ್ಟ್ ಶಕ್ತಿಗಳು ಪ್ರಬಲವಾಗಿರುವುದನ್ನು ಕಂಡು ಅವನ್ನು ಹತ್ತಿಕ್ಕುವುದಕ್ಕೆ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳೂ ಒಟ್ಟಾಗಬೇಕೆಂದರು. ಸ್ಪೇನಿನಲ್ಲಿ ನಡೆಯುತ್ತಿದ್ದ ಅಂತರ್ಯುದ್ಧದಲ್ಲಿ ಅವರ ಸಹಾನುಭೂತಿ ಫ್ಯಾಸಿಸಮ್ ವಿರುದ್ಧ ನಡೆಯುತ್ತಿದ್ದ ಹೋರಾಟದ ಕಡೆಗೆ. ಅಂದಿನ ವಿದ್ಯಮಾನಗಳನ್ನು ಗಮನಿಸಿ ದೊಡ್ಡ ಕ್ರಾಂತಿ ಉಂಟಾಗಬಹುದೆಂದು ಸೂಚಿಸಿದರು. ಇಡೀ ಪ್ರಪಂಚ ಹೀಗೆ ಯುದ್ಧದ ಅಂಚಿನಲ್ಲಿ ತಲ್ಲಣಗೊಳ್ಳುತ್ತಿದ್ದಾಗ ನೆಹರೂ ಈ ಕೃತಿಗಳನ್ನು ರಚಿಸಿದರು. ಇವುಗಳಲ್ಲಿ ಅವರ ರಾಜಕೀಯ ಜಾಗೃತಿ, ಸೂಕ್ಷ್ಮವಿವೇಚನೆ, ಫ್ಯಾಸಿಸಮನ್ನು ದಮನಗೊಳಿಸುವ ಧೀರಸಂಕಲ್ಪ ಕಂಡುಬರುತ್ತವೆ.

ಭಾಷಣಗಳು ಮತ್ತು ಲೇಖನಗಳು : 1947 ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯಪಡೆದಾಗ ನೆಹರೂ ಪ್ರಧಾನಿಯಾಗಿ ಆಡಳಿತಸೂತ್ರ ವಹಿಸಿಕೊಂಡರು. ತಮ್ಮ ಗುರುತರವಾದ ಜವಾಬ್ದಾರಿಯ ಮಧ್ಯೆ ಇವರಿಗೆ ಗ್ರಂಥರಚನೆಗೆ ವಿರಾಮವಿರಲಿಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಇವರು ಮಾಡಿದ ಭಾಷಣಗಳು, ಬರೆದ ಬಿಡಿಲೇಖನಗಳು ಸ್ವತಂತ್ರ್ಯ ಭಾರತದ ನಿರ್ಮಾಣ ಮತ್ತು ಏಳಿಗೆಗೆ ಸಂಬಂಧಪಟ್ಟ ನಾನಾ ವಿಷಯಗಳ ಬಗ್ಗೆ ಅವರ ವಿಚಾರಗಳನ್ನು ಒಳಗೊಂಡಿದೆ. ಇವು ಒಬ್ಬ ಬರೀ ರಾಜಕಾರಣಿಯ ನುಡಿಗಳಲ್ಲ. ಪ್ರತಿಯೊಂದು ಸಮಸ್ಯೆಯನ್ನು ಪರಿಶೀಲಿಸುವಾಗಲೂ ನೆಹರೂ ತೋರಿರುವ ವಿಶಾಲದೃಷ್ಟಿ ನಿಜಕ್ಕೂ ಪ್ರಶಂಸನೀಯ. ವಿಜ್ಞಾನ, ಸಾಹಿತ್ಯ, ಕಲೆ ಮೊದಲಾದ ವಿಷಯಗಳನ್ನು ಕುರಿತೂ ಇವರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಭಾರತೀಯರು ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಮನೋಧರ್ಮ ಬೆಳೆದಷ್ಟೂ ಭಾರತ ಆಧುನಿಕವಾಗುತ್ತದೆ. ಸ್ವಾತಂತ್ರ್ಯ, ಸಮಾಜವಾದ, ಜಾತ್ಯತೀತತೆ-ಇವು ಅವರು ಪ್ರತಿಪಾದಿಸಿದ ಮುಖ್ಯತತ್ತ್ವಗಳು. ಇವುಗಳ ಆಧಾರದ ಮೇಲೆ ಸ್ವತಂತ್ರ ಭಾರತವನ್ನು ಕಟ್ಟಬೇಕೆಂಬುದು ಅವರ ಧೋರಣೆಯಾಗಿತ್ತು. ವಿಜ್ಞಾನ ಮತ್ತು ಆಧ್ಯಾತ್ಮಗಳ ಸಮನ್ವಯದಿಂದ ಭಾರತಕ್ಕೂ ವಿಶಾಲ ಪ್ರಪಂಚಕ್ಕೂ ಶ್ರೇಯಸ್ಸೆಂದು ಅವರು ನಂಬಿದ್ದರು.

ಎ ಬಂಚ್ ಅಫ್ ಓಲ್ಡ್ ಲೆಟರ್ಸ್ : ನೆಹರೂಗೆ ಬರೆದ ಪತ್ರಗಳು ಮತ್ತು ಅವರೇ ಬರೆದ ಕೆಲವು ಪತ್ರಗಳು ಇದರಲ್ಲಿವೆ. ಮೊದಲನೆಯ ಪತ್ರ 1917ರಷ್ಟು ಹಿಂದಿನದು, ಕೊನೆಯ ಪತ್ರ 1948ರದ್ದು. ಹೀಗೆ ಮೂವತ್ತೊಂದು ವರ್ಷಗಳ ಅವಧಿಗೆ ಸಂಬಂಧಪಟ್ಟ ಈ ಪತ್ರಗಳಲ್ಲಿ ಭಾರತದ ಆಗುಹೋಗುಗಳ ಬಗ್ಗೆ ವಿಚಾರ ವಿನಿಮಯವಿದೆ. ಗಾಂಧೀಜಿ, ಮೋತಿಲಾಲ್, ರಾಜೇಂದ್ರ ಪ್ರಸಾದ್ ಮುಂತಾದ ನಾಯಕರು ನೆಹರೂಗೆ ಬರೆದ ಪತ್ರಗಳು ಇಲ್ಲಿ ಅಡಕವಾಗಿವೆ. ನೆಹರೂ ಅವರ ಉಯಿಲು : ತಾವು ಬರೆದಿಟ್ಟ ತಮ್ಮ ಉಯಿಲಿನಲ್ಲಿ ನೆಹರೂ ಅವರ ದೇಶಪ್ರೇಮ ಪರಾಕಾಷ್ಠೆಯನ್ನು ಮುಟ್ಟಿದೆ. ತಾವು ತೀರಿಕೊಂಡ ಮೇಲೆ ತಮ್ಮ ದೇಹದ ಭಸ್ಮವನ್ನು ಭಾರತದ ಎಲ್ಲ ನದಿಗಳಲ್ಲೂ ವಿಸರ್ಜನೆ ಮಾಡಬೇಕೆಂದು, ಹೊಲಗದ್ದೆಗಳ ಮೇಲೆ ಸಿಂಪಡಿಸಬೇಕೆಂದು ತಮ್ಮ ಹೃದಯದ ಬಯಕೆಯನ್ನು ಅವರು ವ್ಯಕ್ತಪಡಿಸಿದರು. ಹೀಗೆ ಭಾರತದ ಪವಿತ್ರ ನೆಲ, ಜಲ, ಗಾಳಿಗಳಲ್ಲಿ ಲೀನವಾಗಬೇಕೆಂಬ ಇವರ ಉತ್ಕಟ ಹಂಬಲವನ್ನು ಈ ಪತ್ರದಲ್ಲಿ ಕಾಣಬಹುದು. ಈ ಉಯಿಲು ಅವರ ಬದುಕಿಗೂ ಕೃತಿಗಳಿಗೂ ಪರಿಸಮಾಪ್ತಿಯಂತಿದೆ.

ನೆಹರೂ ಕುರಿತ ಸಾಹಿತ್ಯ : ನೆಹರೂ ಅವರ ಜೀವನ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಕುರಿತು ಅನೇಕ ಕೃತಿಗಳು ಪ್ರಕಟಗೊಂಡಿವೆ. ಇವುಗಳಲ್ಲಿ ಕೆಲವು ವಿಮರ್ಶಾತ್ಮಕವಾಗಿವೆ. ಉಳಿದವು ವಿವರಣಾತ್ಮಕವಾಗಿವೆ. ನೆಹರೂ ರಚಿಸಿದ ಮುಖ್ಯ ಗ್ರಂಥಗಳೆಲ್ಲ ಭಾರತದ ನಾನಾ ಭಾಷೆಗಳಿಗೆ ಅನುವಾದಗೊಂಡಿವೆ. ಇವೆಲ್ಲವನ್ನೂ ನೆಹರೂ ಸಾಹಿತ್ಯ ಎಂದೇ ಪರಿಗಣಿಸಬಹುದು.

ನೆಹರೂ ಅವರ ಬರವಣಿಗೆಗಳು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ, ನೆಹರೂ ಭಾರತದ ಸಾರ್ವಜನಿಕ ಜೀವನದ ಒಬ್ಬ ಶ್ರೇಷ್ಠ ಕಲಾವಿದ. ರಾಜಕೀಯದಲ್ಲಿ ಮುಳುಗಿ, ಉಳಿದೆಲ್ಲವನ್ನೂ ಮರೆತಂಥ ವ್ಯಕ್ತಿಯಲ್ಲ. ಬದುಕಿನ ಬಗ್ಗೆ ಪೂರ್ಣದೃಷ್ಟಿಯನ್ನು ಬೆಳೆಸಿಕೊಂಡಿದ್ದ ಮಹಾವ್ಯಕ್ತಿ. ಒಟ್ಟಾರೆ ಅವರ ಗ್ರಂಥಗಳನ್ನು ಪರಿಶೀಲಿಸಿದಾಗ ನಮಗೆ ಮೆಚ್ಚಿಗೆಯಾಗುವುದು ಅವರ ಇತಿಹಾಸಪ್ರಜ್ಞೆ, ಕಲಾಭಿಜ್ಞತೆ, ನಿಸರ್ಗಪ್ರೇಮ, ಸಾಹಸಶೀಲತೆ, ಆಧುನಿಕ ಮನೋಧರ್ಮ ಹಾಗೂ ಸ್ವಾತಂತ್ರ್ಯಪ್ರೇಮ ಮತ್ತು ಕೆಚ್ಚು. ಅವರು ಕೊಟ್ಟಿರುವ ಮಹಾಪುರುಷರ ನುಡಿ ಚಿತ್ರಗಳು, ಪ್ರಕೃತಿವರ್ಣನೆಗಳು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತಿವೆ. ಇವರ ಲಲಿತವಾದ ಶೈಲಿ ಇವರ ಕೃತಿಗಳಿಗೆ ವಿಶೇಷವಾದ ಸೊಬಗನ್ನು ಕೊಟ್ಟಿದೆ. ಅವರ ಓದುಬರೆಹಗಳು ಸೆರೆಮನೆಯ ದಿನಗಳಲ್ಲಿ ಕಾಲವನ್ನು ಉಪಯುಕ್ತವಾಗಿ ಕಳೆಯಲು ಸಹಾಯ ಮಾಡಿದವು. ಇವುಗಳಲ್ಲಿ ಕಂಡುಬರುವ ನೆಹರೂ ಭಾರತಕ್ಕಾಗಿ ನಿರ್ಮಲ ಅಂತಃಕರಣದಿಂದ ದುಡಿದ ದೇಶಪ್ರೇಮಿಯಷ್ಟೇ ಅಲ್ಲ; ಮಾನವಕೋಟಿಯ ಹಿತಸಾಧನೆಗೆ ಹೋರಾಡಿದ ಮಹಾನ್ ಮಾನವತಾವಾದಿ. (ಎಚ್.ಜಿ.ಎಸ್.ಆರ್.)