ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಗ್ರೋಸ್ ಆಕ್ಸಿಡೆಂಟಾಲ್

ವಿಕಿಸೋರ್ಸ್ದಿಂದ

ನೇಗ್ರೋಸ್ ಆಕ್ಸಿಡೆಂಟಾಲ್ - ಫಿಲಿಪೀನ್ಸ್‍ನ ನೇಗ್ರೋಸ್ ದ್ವೀಪದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ ಒಂದು ಪ್ರಾಂತ್ಯ. ಇದು ಪನೈ ದ್ವೀಪಕ್ಕೆ ಅಭಿಮುಖವಾಗಿದೆ. ಇವೆರಡೂ ಪ್ರದೇಶಗಳು ಗೀಮರಾಸ್ ಜಲಸಂಧಿಯಿಂದ ಪ್ರತ್ಯೇಕಗೊಂಡಿವೆ. ವಿಸ್ತೀರ್ಣ 7,926 ಚ.ಕಿಮೀ. ಜನಸಂಖ್ಯೆ 15,89,153(1970). ಇಲ್ಲಿ ಜ್ವಾಲಾಮುಖಿಯಿಂದ ಹೊರಬಿದ್ದ ಪದಾರ್ಥಗಳಿಂದ ನಿರ್ಮಿತವಾದ ವಿಶಾಲವಾದ ತೀರಪ್ರದೇಶವಿದೆ. ಪ್ರಾಂತ್ಯದ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಸಣ್ಣಸಣ್ಣ ಗುಡ್ಡಗಳಿವೆ. ದಕ್ಷಿಣ ಭಾಗದಲ್ಲಿ ಹುಲ್ಲುಗಾವಲಿನಿಂದ ಕೂಡಿದ ವಿಶಾಲವಾದ ಬಯಲು ಇದೆ. ಪೂರ್ವಗಡಿಯಲ್ಲಿರುವ 2,460 ಮೀ. ಎತ್ತರದ ಅಗ್ನಿಪರ್ವತ ಕಾನ್‍ಲವಾನ್. ಈ ಪ್ರಾಂತ್ಯ ಫಿಲಿಪೀನ್ಸ್ ರಾಜ್ಯದಲ್ಲೇ ಅತ್ಯಂತ ಹೆಚ್ಚು ಸಂಪದ್ಭರಿತವಾದ್ದು. ರಾಜಕಾರಣದಲ್ಲೂ ಇದು ಅತ್ಯಂತ ಪ್ರಭಾವಯುತವಾಗಿದೆ. ಇದರ ಆದಾಯದಲ್ಲಿ ಬಹು ಪಾಲು ಬರುವುದು ಸಕ್ಕರೆಯಿಂದ. ಫಿಲಿಪೀನ್ಸ್‍ನಲ್ಲಿ ಉತ್ಪಾದನೆಯಾಗುವ ಸಕ್ಕರೆಯಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಇಲ್ಲಿ ಉತ್ಪಾದನೆ ಯಾಗುತ್ತದೆ. ಇಲ್ಲಿ ಸಕ್ಕರೆಯನ್ನು ತಯಾರಿಸುವ ಅನೇಕ ಅಧುನಿಕ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಗೆ ಪನೈ ದ್ವೀಪದ ಈಲವೀಲೋ ಪ್ರಾಂತ್ಯದಿಂದ ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ವಲಸೆ ಬರುತ್ತಾರೆ. ಹಿಮುಗಾಯನ್ ನದಿಯ ದಂಡೆಯ ಮೇಲಿನ ಫ್ಯಾಬ್ರಿಕದಲ್ಲಿ ಆಧುನಿಕವಾದ ಮರ ಕಾರ್ಖಾನೆಯಿದೆ. ಎಸ್ಕಲಾಂಟೀ ಬಳಿಯಲ್ಲಿ ಕಲ್ಲಿದ್ದಲು ನಿಕ್ಷೇಪವುಂಟು. ಸಕ್ಕರೆ, ಚೌಬೀನೆ ಅಲ್ಲದೆ ಇತರ ಪ್ರಮುಖ ಉತ್ಪನ್ನಗಳು ತೆಂಗು, ಬತ್ತ ಮತ್ತು ಮುಸುಕಿನ ಜೋಳ. ವಾಯವ್ಯ ತೀರದಲ್ಲಿರುವ ಬಾಕೋಲಾಡ್ ಈ ಪ್ರಾಂತ್ಯದ ರಾಜಧಾನಿ. ಜನಸಂಖ್ಯೆ 1,65,000 (1970). ಇತರ ಪ್ರಮುಖ ಪಟ್ಟಣಗಳು ಲಾ ಕೊರ್ಲೋಟ(79,300), ಸ್ಯಾನ್ ಕಾರ್ಲಸ್ (1,74,800), ಬಾಗೋ (81,900), ಸಿಲೈ (1,65,600), ಕ್ಯಾದೀತ್ (1,25,500), ಕಾಲಟಾವ (89,700) ಮತ್ತು ಕಾಂಬಾಂಕಾಲನ್ (81,100). (ಜೆ.ಎಸ್.ಎಸ್.)