ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಗ್ರೋಸ್ ಓರಿಯೆಂಟಾಲ್

ವಿಕಿಸೋರ್ಸ್ದಿಂದ

ನೇಗ್ರೋಸ್ ಓರಿಯೆಂಟಾಲ್ - ಫಿಲಿಪೀನ್ಸ್ ದೇಶದ ಒಂದು ಪ್ರಾಂತ್ಯ. ನೇಗ್ರೋಸ್ ದ್ವೀಪದ ಪೂರ್ವದ ಭಾಗಗಳನ್ನೊಳಗೊಂಡಿದೆ. ಇದರ ನೈಋತ್ಯದಲ್ಲಿ ಸೂಲೂ ಸಮುದ್ರವಿದೆ. ಇದಕ್ಕೂ ಸೇಬೂ ದ್ವೀಪಕ್ಕೂ ನಡುವೆ ಟ್ಯಾನನ್ ಜಲ ಸಂಧಿಯಿದೆ. ವಿಸ್ತೀರ್ಣ 5,746 ಚ.ಕಿಮೀ. ಜನಸಂಖ್ಯೆ 7,15,240 (1970). ಈ ಪ್ರಾಂತ್ಯ ಗಂಡ್ಡಗಾಡುಗಳಿಂದ ಕೂಡಿದ್ದು, ಪೂರ್ವಭಾಗ ಮಾತ್ರ ಫಲವತ್ತಾಗಿದೆ. ಇಲ್ಲಿಯ ಪ್ರಮುಖ ಉತ್ಪನ್ನಗಳು ಮುಸುಕಿನ ಜೋಳ, ಬತ್ತ, ಕಬ್ಬು ಮತ್ತು ತೆಂಗು. ಇಲ್ಲಿ ಬೆತ್ತ ಮತ್ತು ಬೊಂಬೂ ಹೆಚ್ಚಾಗಿ ಬೆಳೆಯುತ್ತವೆ. ಮರದ ದಿಮ್ಮಿಗಳನ್ನು ಇಲ್ಲಿಂದ ಜಪಾನಿಗೆ ಹಡಗುಗಳಲ್ಲಿ ಸಾಗಿಸಲಾಗುತ್ತದೆ. ಇಲ್ಲಿಯ ನೆಲದ ಸೇ. 25ಕ್ಕೂ ಹೆಚ್ಚು ಭಾಗ ಅರಣ್ಯಾವೃತ. ಬೇಯವಾನ್, ಲಾ ಲಿಬರ್ಟಾಡ್ ಮತ್ತು ಟಾಂಜೇಯಲ್ಲಿ ಮರ ಕೊಯ್ಯುವ ಕಾರ್ಖಾನೆಗಳಿವೆ.

ನೇಗ್ರೋಸ್ ಓರಿಯೆಂಟಾಲ್‍ನ ಮುಖ್ಯ ಪಟ್ಟಣ ಡೂಮಗೇಟೇ. ಇದು ಪ್ರಾಂತ್ಯದ ಆಗ್ನೇಯ ಭಾಗದಲ್ಲಿ, ಉಪಪ್ರಾಂತ್ಯವಾದ ಸೀಕಿಹೋರ್ ದ್ವೀಪಕ್ಕೆ ಎದುರಾಗಿ ಇದೆ. ಡೂಮಗೇಟಿಯ ಜನಸಂಖ್ಯೆ 49,600 (1970 ಅಂ.) ಈ ಪ್ರಾಂತ್ಯದ ಏಕೈಕ ಸಕ್ಕರೆ ಕಾರ್ಖಾನೆ ಇರುವುದು ಬಾಯೀಸ್‍ನಲ್ಲಿ (47,000). ಇಲ್ಲಿ ಮದ್ಯಸಾರ ಮತ್ತು ಕಾಗದ ಕಾರ್ಖಾನೆಗಳೂ ಇವೆ. ಕರಾವಳಿ ಹೆದ್ದಾರಿಯೊಂದು ಈ ಪ್ರಾಂತ್ಯದ ಪ್ರಮುಖ ಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. (ಜೆ.ಎಸ್.ಎಸ್.)