ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇತ್ರದ್ರವ

ವಿಕಿಸೋರ್ಸ್ದಿಂದ

ನೇತ್ರದ್ರವ - ಕಣ್ಣಿನ ಕರಿ ಗುಡ್ಡೆಗೂ (ಪಾರದರ್ಶಕ ಪಟಲ, ಕಾರ್ನಿಯ) ಮಸೂರಕ್ಕೂ ನಡುವೆ ಇರುವ ಸ್ಥಳವನ್ನು ತುಂಬಿಕೊಂಡಿರುವ ಸ್ವಚ್ಛ ನೀರಿನಂತಿರುವ ವಿಶೇಷ ದ್ರವ (ಏಕ್ವಿಯಸ್ ಹ್ಯೂಮರ್). ದೃಷ್ಟಿ ಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕಣ್ಣಿನ ಮುಂದಿನಿಂದ ಹಿಂದಕ್ಕೆ ಹೀಗಿವೆ : ನೇತ್ರದ್ರವ, ಮಸೂರ ಮತ್ತು ಕಾಚಿದ್ರವ (ವಿಟ್ರಿಯಸ್). ಕರಿಯ ಗುಡ್ಡೆಗೂ ಮಸೂರಕ್ಕೂ ನಡುವೆ ಇರುವ ಸ್ಥಳವನ್ನು ಪಾಪೆಪೊರೆ ಮುಂದಿನ ಮತ್ತು ಹಿಂದಿನ ಕೋಣೆಗಳಾಗಿ ವಿಭಜಿಸುತ್ತದೆ. ಪೊರೆಯ ಮಧ್ಯದಲ್ಲಿರುವ ರಂಧ್ರವೇ ಪಾಪೆ. ಮುಂದಿನ ಕೋಣೆಗೂ ಹಿಂದಿನ ಕೋಣೆಗೂ ಪಾಪೆಯ ಮೂಲಕ ಸಂಪರ್ಕವಿರುವುದು ವ್ಯಕ್ತ. ನೇತ್ರದ್ರವ ತಿಳಿನೀರಿನಂತೆ ಸ್ವಚ್ಛವಾದ ದ್ರವ. ಕಣ್ಣಿನಲ್ಲಿ ಇದು ಸುಮಾರು 1/3 ಮಿಲ್‍ನಷ್ಟಿದೆ. ಸಾಮಾನ್ಯವಾಗಿ ಹಿಂದಿನ ಕೋಣೆಯಲ್ಲಿ 57 ಘನ ಮಿಮೀ ಮತ್ತು ಮುಂದಿನ ಕೋಣೆಯಲ್ಲಿ 275 ಘನ ಮಿಮೀ ಇರುವುದು. ಮುಂದಿನ ಕೋಣೆಯ ಮಧ್ಯಭಾಗದ ಅಳ 2.5ರಿಂದ 3 ಮಿಮೀ. ಈ ಅಳ ಕಣ್ಣಿನ ರಚನೆಗೂ ವಯಸ್ಸಿಗೂ ಅನುಗುಣವಾಗಿರುವುದೇ ಅಲ್ಲದೆ ದೃಷ್ಟಿದೋಷ ಸ್ಥಿತಿಗಳಲ್ಲೂ ಹೆಚ್ಚುಕಡಿಮೆ ಆಗಿರುತ್ತದೆ. ತುಂಬ ಎಳೆವಯಸ್ಸಿನವರ ಅಂತೆಯೇ ವಯಸ್ಸಾದವರ ಕಣ್ಣಿನಲ್ಲಿ ಇದರ ಆಳ ಬಲು ಕಡಿಮೆ. 100 ಮಿಲ್‍ನೇತ್ರದಲ್ಲಿ 1.08 ಗ್ರಾಮ್‍ಗಳಷ್ಟು ಘನದ್ರವ್ಯ ಇರುವುದು. ಮಿಕ್ಕಿದ್ದು ನೀರು. ನೀರಿನಲ್ಲಿ ವಿಲೀನವಾಗಿರುವ ಫಟಕಗಳೇ ಅಧಿಕ. ಮುಖ್ಯವಾದವು ಈ ಮುಂದಿನವು: 100 ಮಿಲ್ ನೇತ್ರದ್ರವದಲ್ಲಿ ಸಾರಜನಕ 0.02 ಗ್ರಾಮ್, ಅಮೈನೊ ಆಮ್ಲಗಳು 70 ಮಿಲಿ ಗ್ರಾಮ್. ಈತನಕ 19 ಬಗೆಯ ಅಮೈನೊ ಆಮ್ಲಗಳು ಈ ದ್ರವದಲ್ಲಿರುವುದನ್ನು ತೋರಿಸಲಾಗಿದೆ. ಅಲ್ಲದೆ ಅಸ್ಕಾರ್ಬಿಕ್ ಆಮ್ಲ, ಲ್ಯಾಕ್ಟಿಕ್ ಆಮ್ಲ, ಯೂರಿಕ್ ಆಮ್ಲ, ಹಯಲ್ಯೂರಾನಿಕ್ ಆಮ್ಲ, ಕಾರ್ಬಾನಿಕ್ ಆಮ್ಲ, ಸಕ್ಕರೆ, ಅಕಾರ್ಬನಿಕ ವಿದ್ಯುದ್ವಾಹಿ ಕಣಗಳಾದ (ಅಯಾನುಗಳಾದ) ಸೋಡಿಯಮ್, ಪೊಟ್ಯಾಸಿಯಮ್, ಕ್ಲೋರೈಡ್, ಸಲ್ಛೇಟ್ ಫಾಸ್ಛೆಟುಗಳೂ ಹಿಸ್ಟಮಿನೇಸ್, ಗ್ಲೂಕೋಸ್-6-ಫಾಸ್ಛೇಟ್ ಡಿ ಹೈಡ್ರಾಜಿನೇಸ್, ಲ್ಯಾಕ್ಟಿಕ್ ಮತ್ತು ಮ್ಯಾಲಿಕ್ ಡಿ ಹೈಡ್ರಾಜಿನೇಸ್, ಸಸಾರಜನಕ ಜೀರ್ಣಕ ಕಿಣ್ವ ಇವೇ ಮೊದಲಾದ ಅಂಶಗಳೂ ನೇತ್ರದ್ರವದಲ್ಲಿವೆ.

ನೇತ್ರದ್ರವದ ಸೂಕ್ಷ್ಮಾಭಿಸರಣ ಒತ್ತಡ (ಅಸ್ಮಾಟಿಕ್ ಪ್ರೆಶರ್) ಪ್ಲಾಸ್ಮ ದ್ರವದ ಸೂಕ್ಷ್ಮಾಭಿಸರಣ ಒತ್ತಡಕ್ಕಿಂತ ಬಲು ಪಾಲು ಜಾಸ್ತಿ ಉಂಟು. ಇದರ ಶ್ಯಾನತೆ (ವಿಸ್ಕಾಸಿಟಿ) 1.025ರಿಂದ 1.1 ; ರಿಫ್ರೇಕ್ಷಣಾಂಕ 1.336 ; ಮೇಲ್ಮೈಕರ್ಷಣ (ಸರ್ಫೇಸ್ ಟೆನ್‍ಷನ್) 180ಅ ಯಲ್ಲಿ 1 ಚಸೆಂಮೀಗೆ 73 ಡೈನುಗಳು.

ಕರಿಗುಡ್ಡೆ (ಕಾರ್ನಿಯ) ಮತ್ತು ಮಸೂರದ ಅಹಾರ ಪೂರೈಕೆ, ಇವುಗಳ ಅಂತರ್ದಹನ ಕ್ರಿಯೆ, ಕಣ್ಣಿನ ಒಳಗಿನ ಒತ್ತಡ ಮಟ್ಟವನ್ನು ಸಮತೋಲದಲ್ಲಿ ಇಡುವುದು ಮತ್ತು ಕಣ್ಣಿನ ಸಹಜ ಅಕಾರವನ್ನು ಕಾಪಾಡುವುದು-ಈ ಕ್ರಿಯೆಗಳಿಗೆ ನೇತ್ರದ್ರವ ಬಲು ಮುಖ್ಯ. ಇದರ ಉತ್ಪತ್ತಿಗೆ ಕಣ್ಣೊಳಗಿನ ಲೋಮನಾಳಗಳ ರಕ್ತವೇ ಮೂಲ. ಕಣ್ಣಿನ ಸಿಲಿಯರಿ ಚಾಚುಗಳ ಮೇಲೆ ಪ್ರೆರೆಯ ಕೋಶಗಳ ಸ್ರವನ ಚಟುವಟಿಕೆಯಿಂದ ನೇತ್ರದ್ರವ ಉತ್ಪತ್ತಿಯಾಗುವುದು. ಅದರೆ ದ್ರವದ ಕೆಲವು ಘಟಕಗಳು ವಿಸರಣೆಯಂಥ (ಡಿಪ್ಯೂಷನ್) ಸರಳ ಕ್ರಮಗಳಿಂದ ಪರಿಣಮಿಸಿದವು ಎಂದೂ ತೋರಿಸಲಾಗಿದೆ. ಸೋಡಿಯಮ್, ಕ್ಲೋರೈಡ್, ಅಸ್ಕಾರ್ಬಿಕ್ ಆಮ್ಲ, ಹಯಲ್ಯೂರಾನಿಕ್ ಆಮ್ಲ ಇವನ್ನು ಕೋಶಗಳು ಸ್ರವಿಸುತ್ತವೆ. ಈ ಸ್ರವನದಿಂದಾಗಿ ನೇತ್ರದ್ರವದ ಸೂಕ್ಷ್ಮಾಭಿಸರಣ ಒತ್ತಡ ರಕ್ತದ್ರವದ ಸೂಕ್ಷ್ಮಾಭಿಸರಣ ಒತ್ತಡಕ್ಕಿಂತ ಜಾಸ್ತಿ ಇರುವುದು. ಹೀಗೆ ದ್ರವ ಹಿಂದಿನ ಕೋಣೆಯಲ್ಲಿ ಉತ್ಪತ್ತಿಯಾಗಿ ಅಲ್ಲಿಂದ ಮುಂದಿನ ಕೋಣೆಗೆ ಪಾಪೆಯ ಮೂಲಕ ಹರಿದು ಬರುತ್ತದೆ. ಇಲ್ಲಿಂದ ಕೋಣೆಯ ಪರಿಧಿಯ ಸಂಧಿಯಲ್ಲಿರುವ (ಫಿಲ್ರೇಷನ್ ಅ್ಯಂಗಲ್) ತಂತಿ ಬಲೆ ಮತ್ತು ನಾಳಗಳ ಜಾಲದ ಮೂಲಕ ಶ್ಲೆಮ್ಮನ ನಾಲೆ ಎಂಬ ಅಭಿದಮನಿಯನ್ನು ಸೇರಿ ರಕ್ತಗತವಾಗುವುದು. ಇದು ನೇತ್ರದ್ರವದ ಸಹಜ ಪರಿಚಲನಕ್ರಮ.

ತಂತಿಬಲೆಯ ಹಂತದಲ್ಲಿ ನೇತ್ರದ್ರವ ರಕ್ತಗತವಾಗುವುದಕ್ಕೆ ತಡೆ ಉಂಟಾದಾಗ ಕಣ್ಣಿನ ಒಳ ಒತ್ತಡ ಜಾಸ್ತಿ ಆಗುವುದು. ನೈಜ ಕ್ರಿಯಾಕಾಲದಲ್ಲಿ ಕಣ್ಣಿನಲ್ಲಿ ಮಿನಿಟಿಗೆ 2.75 ಘನ ಮಿಮೀನಷ್ಟು ನೇತ್ರದ್ರವ ಉತ್ಪತ್ತಿ ಆಗಿ ರಕ್ತಗತವಾಗುತ್ತಿರುತ್ತದೆ. ಅಂದರೆ ಕಣ್ಣಿನಲ್ಲಿರುವ ಒಟ್ಟು ನೇತ್ರದ್ರವದಲ್ಲಿ ಸುಮಾರು ನೂರನೆಯ ಒಂದಂಶದಷ್ಟು ದ್ರವ ಪ್ರತಿ ಮಿನಿಟೂ ದೂಡಲ್ಪಟ್ಟು ಅಷ್ಟೇ ಉತ್ಪತ್ತಿಯಾಗುತ್ತಲೂ ಇರುವುದು. ಉತ್ಪತ್ತಿ ಮತ್ತು ಹೊರದೂಡುವಿಕೆ ಹೊಂದಾಣಿಕೆಯಾಗಿ ನಡೆಯುವುದರಿಂದ ಕಣ್ಣಿನ ಒತ್ತಡ ಸಮತೋಲದಲ್ಲಿ ಇರುವುದು ಸಾಧ್ಯ. ಈ ಕಾರ್ಯ ಸರಿಯಾಗಿ ನಡೆಯದಿದ್ದಲ್ಲಿ ಒತ್ತಡ ಹೆಚ್ಚು ಅಥವಾ ಕಡಿಮೆ ಆಗಿ ಅದರ ಕೆಟ್ಟ ಪರಿಣಾಮಗಳು ಕಣ್ಣಿನ ಮೇಲೆ ಅರ್ಥಾತ್ ದೃಷ್ಟಿಕ್ರಿಯೆಯ ಮೇಲೆ ಉಂಟಾಗುವುದು ನಿಶ್ಚಯ.

ಕಣ್ಣಿನ ಒಳಗಿನ ಅಧಿಕ ಒತ್ತಡ ಸ್ಥಿತಿಗೆ ಗ್ಲಾಕೋಮ ಎಂದು ಹೆಸರು. ಇದರಲ್ಲಿ ಎರಡು ವಿಧಗಳಿವೆ. ಪ್ರಾಥಮಿಕ (ಪ್ರೈಮರಿ) ಗ್ಲಾಕೋಮ ಮತ್ತು ಅನುಷಂಗಿಕ (ಸೆಕಂಡರಿ) ಗ್ಲಾಕೋಮ. ಪ್ರಾಥಮಿಕ ಗ್ಲಾಕೋಮದಲ್ಲಿ ಮತ್ತೆರಡು ಪ್ರಭೇದಗಳಿವೆ. ಒಂದರಲ್ಲಿ ಮುಂದಿನ ಕೋಣೆಯ ಸಂಧಿಸ್ಥಾನ ಬಹಳ ಕಿರಿದಾಗಿ ನೇತ್ರದ್ರವದ ಹೊರ ದೂಡುವಿಕೆ ಸರಿಯಾಗಿ ನಡೆಯುವುದಿಲ್ಲ. ಸಾಮಾನ್ಯವಾಗಿ ಇಂಥ ಕಣ್ಣಿನಲ್ಲಿ ಇದ್ದಕ್ಕಿದ್ದಂತೆ ಒತ್ತಡ ಜಾಸ್ತಿ ಆಗುತ್ತದೆ. ಕಣ್ಣು ಕೆಂಪಾಗುವಿಕೆ, ತಲೆನೋವು, ಕಣ್ಣು ಬಹಳ ನೋಯುವುದು, ನೋವಿನಿಂದ ವಾಂತಿ ಜ್ವರ, ದೃಷ್ಟಿ ಜಾಗ್ರತೆ ಮಸಕಾಗುವುದು_ಅದರ ಲಕ್ಷಣಗಳು. ಈ ಸ್ಥಿತಿ ಕಣ್ಣಿನ ತುರ್ತು ಪರಿಸ್ಥಿತಿಯಲ್ಲೆಂದು. ಇದಕ್ಕೆ ತತ್‍ಕ್ಷಣ ಚಿಕಿತ್ಸೆ ಮಾಡಬೇಕಾಗುವುದು. ಎರಡನೆಯ ವಿಧದ ಪ್ರಾಥಮಿಕ ಗ್ಲಾಕೋಮವನ್ನು ದೀರ್ಘಕಾಲೀನ ಎಂದೂ ಕರೆಯುವರು. ಇದರಲ್ಲಿ ಬಾಧೆ ಕೊಡುವ ಯಾವ ಲಕ್ಷಣವೂ ಬಲುಕಾಲ ತೋರದಿರುವುದರಿಂದ ಲಕ್ಷ್ಯಕ್ಕೇ ಬರದೆ ಬಹುಮಂದಿ ಕೊನೆಗೆ ಕುರುಡಾಗಿ ಹೋಗುವರು. ಇದರಲ್ಲಿ ಕಣ್ಣಿನ ಒತ್ತಡ ಹೆಚ್ಚಿದ್ದರೂ ತಲೆನೋವಾಗಲಿ ಕಣ್ಣು ಕೆಂಪಾಗುವುದಾಗಲಿ ಕಾಣಿಸವು. ಈಚಿನ ದಿನಗಳಲ್ಲೂ ದೀರ್ಘ ಗ್ಲಾಕೋಮದ ಕಾರಣಗಳು ಸರಿಯಾಗಿ ವ್ಯಕ್ತಪಟ್ಟಿಲ್ಲವಾಗಿ ಈ ರೋಗ ಬರದಂತೆ ತಡೆಯುವ ಮತ್ತು ಪೂರ್ಣ ಗುಣ ಮಾಡುವ ಯಾವ ನಿಶ್ಚಿತ ಉಪಾಯವೂ ತಿಳಿದಿಲ್ಲ. ಅದರೆ ಕಣ್ಣಿನ ಒಳ ಒತ್ತಡ ಮಾಪನದಿಂದ ಈ ರೋಗ ಇರುವುದನ್ನು ತಿಳಿದು ಔಷಧ ಮತ್ತು ಶಸû್ರಚಿಕಿತ್ಸೆಯಿಂದ ಕಣ್ಣಿನ ಒತ್ತಡವನ್ನು ಸಹಜ ಮಟ್ಟದಲ್ಲಿಡಲು ಸಾಧ್ಯ. ಅನುಷಂಗಿಕ ಅಥವಾ ಅನ್ಯಕಾರಣಜನಿತ ಗ್ಲಾಕೋಮದಲ್ಲಿ ಒತ್ತಡದ ಹೆಚ್ಚುವಿಕೆಗೆ ಬೇರೆ ರೋಗಸ್ಥಿತಿಗಳು ಕಾರಣವಾಗಿರುತ್ತವೆ. ಅ ಮೂಲ ಕಾರಣಗಳನ್ನು ತಕ್ಕ ಚಿಕಿತ್ಸೆ ಯಿಂದ ನಿರ್ಮೂಲಿಸಿದರೆ ಒತ್ತಡ ಯಥಾಪ್ರಾಕಾರ ಸಹಜಮಟ್ಟಕ್ಕೆ ಬರುವುದು.

ಕೆಲವು ವೇಳೆ ನೇತ್ರದ್ರವ ರಕ್ತದ್ರವದಂತೆಯೇ (ಪ್ಲಾಸ್ಮ) ಇರುವುದು. ಅದಕ್ಕೆ ಪ್ಲಾಸ್ಮಾಯ್ಡ್ ಎಕ್ವಿಯಸ್ ಎಂದು ಹೆಸರು. ರಕ್ತದ್ರವವನ್ನು ಹೋಲುವ ನೇತ್ರದ್ರವ ಹೊರಕೋಣೆಯ ತೆರೆಯುವಿಕೆಯಿಂದ, ಪಾಪೆಪೊರೆ ಮತ್ತು ಸಿಲಿಯರಿಚಾಚುಗಳ ಮೇಲು ಪೊರೆಯ ಊತದಿಂದ, ಕಣ್ಣಿಗೆ ಏಟು ಬೀಳುವುದರಿಂದ ಮತ್ತು ಕಣ್ಣಿನ ರಕ್ತ ಧಮನಿಗಳ ಉಬ್ಬುವಿಕೆಯಿಂದ ತಾತ್ಕಾಲಿಕವಾಗಿ ಉಂಟಾಗುತ್ತದೆ. ಈ ಪ್ಲಾಸ್ಮಾಯಿಡ್ ನೇತ್ರದ್ರವದಲ್ಲಿ ಸಾರಜನಕ, ಸ್ವಾಭಾವಿಕ ಪ್ರತಿರೋಧಕಗಳು, ಫೈಬ್ರಿನೋಜನ್, ಸಕ್ಕರೆ, ಯೂರಿಯ ಮತ್ತು ಲವಣಗಳು ರಕ್ತದಲ್ಲಿರುವ ಪ್ರಮಾಣದಂತೆ ಇರುವುವು. ತಾತ್ಕಾಲಿಕವಾಗಿ ಒತ್ತಡ ಜಾಸ್ತಿ ಆಗುವ ಸಂಭವವುಂಟು ಮತ್ತು ಅದರ ಸ್ವಚ್ಛತೆ ಕಡಿಮೆಯಾಗಿ ದೃಷ್ಟಿಮಾಂದ್ಯ ಉಂಟಾಗುವುದು. (ಎಸ್.ಎಚ್.ಎ.ಎನ್.)