ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಪಲ್ಸ್‌

ವಿಕಿಸೋರ್ಸ್ದಿಂದ

ನೇಪಲ್ಸ್ ಇಟಾಲಿಯನ್ ಭಾಷೆಯಲ್ಲಿ ನಾಪಲೀ ಎಂದು ಕರೆಯಲಾಗುವ ಈ ನಗರ ಇಟಲಿಯ ಪ್ರಮುಖ ಬಂದರು ; ಬೌದ್ಧಿಕ, ಔದ್ಯಮಿಕ ಹಾಗೂ ಹಣಕಾಸು ಕೇಂದ್ರ. ಇಟಲಿ ಪರ್ಯಾಯದ್ವೀಪದ ಪಶ್ಚಿಮ ತೀರದಲ್ಲಿದೆ. ಇದು ನೇಪಲ್ಸ್ ಕೊಲ್ಲಿಯ ಉತ್ತರ ಭಾಗದಲ್ಲಿ ರೋಮ್ ನಗರದ ಆಗ್ನೇಯಕ್ಕೆ ಸುಮಾರು 190 ಕಿಮೀ. ದೂರದಲ್ಲಿದೆ. ಜನಸಂಖ್ಯೆ 12,24,274 (1974). ಪಶ್ಚಿಮದ ವೆಸೂವಿಯಸ್ ಹಾಗೂ ಪೂರ್ವದ ಕಾಂಪೀ ಫ್ಲೇಗ್ರೇಯೀ ಅಗ್ನಿಪರ್ವತಗಳ ನಡುವೆ ಸುಂದರವಾದ ಕೊಲ್ಲಿಯ ಸುತ್ತಲೂ ಈ ನಗರವನ್ನು ಕಟ್ಟಲಾಗಿದೆ. ಗುಡ್ಡಗಳ ಮೇಲೂ ನಗರ ಹಬ್ಬಿದೆ. ಟಿರೀನಿಯನ್ ಸಮುದ್ರದಲ್ಲಿರುವ ಈ ಕೊಲ್ಲಿಯ ಬಾಯಿಯ ಅಗಲ ಸುಮಾರು 29 ಕಿಮೀ. ಇದರ ಪಶ್ಚಿಮದಲ್ಲಿ ಇಸ್ಕಿಯ ಹಾಗೂ ಪೂರ್ವದಲ್ಲಿ ಕ್ಯಾಪ್ರೀ ದ್ವೀಪಗಳಿವೆ. ನೇಪಲ್ಸ್ ಯೂರೋಪಿನ ಮಹಾ ಮಾಯಾ ಪಟ್ಟಣವೆಂದು ಹೆಸರಾಗಿದೆ. ನೇಪಲ್ಸ್ ನಗರವನ್ನು ನೋಡಿ ಸಾಯಿ ಎಂಬುದು ಒಂದು ಹಳೆಯ ಮಾತು. ಬಹುರಾಷ್ಟ್ರೀಯವಾದ ಸಂಸ್ಕ್ರತಿ ವೈವಿಧ್ಯವುಳ್ಳ, ವಿವಿಧ ಸ್ತರಗಳ ಪರಂಪರೆಯಿಂದ ಕೂಡಿದ ನಗರವಿದು. ಇಲ್ಲಿಯ ಬೀದಿಗಳೂ ಕಟ್ಟಡಗಳೂ ಸಾಮಾಜಿಕ ಚರ್ಯೆಗಳೂ ರೂಢಿ ಸಂಪ್ರದಾಯಗಳೂ ಈ ಅಂಶವನ್ನು ಎತ್ತಿ ಸಾರುತ್ತವೆ. ಇದರ ವರ್ತಮಾನದ ಬದುಕಿನ ಪ್ರತಿಯೊಂದು ಘಟ್ಟದಲ್ಲೂ ಭೂತಕಾಲದ ಬದುಕು ಎದ್ದು ಕಾಣುತ್ತದೆ. ಈ ನಗರದ ಇಂದಿನ ಬದುಕಿಗೆ ಇದರ ಇತಿಹಾಸವೇ ದಿಗ್ದರ್ಶಕ. (ಜೆ.ಎಸ್.ಎಸ್.)

ಇತಿಹಾಸ: ಪ್ರಾಚೀನ ಪಾರ್ತೆನೋಪ್ ನಗರವಿದ್ದ ಸ್ಥಳದಲ್ಲೇ ಈ ನಗರವನ್ನು ಕಟ್ಟಲಾಗಿದ್ದರಿಂದ ಇದಕ್ಕೆ ನಿಯಾಪಲೀಸ್ ಅಥವಾ ಹೊಸ ಪಟ್ಟಣ ಎಂದು ಹೆಸರು ಬಂತು. ಇದನ್ನು ಕ್ರಿ.ಪೂ. 600ರ ಸುಮಾರಿಗೆ ಪ್ರಾಚೀನ ಗ್ರೀಕ್ ವಲಸೆಗಾರರು ಕಟ್ಟಿದರೆಂದು ಹೇಳಲಾಗಿದೆ. ಕ್ರಿ.ಪೂ. 326ರ ಇದನ್ನು ರೋಮನರು ವಶಪಡಿಸಿಕೊಂಡರು. ರೋಮನ್ ಸಾಮ್ರಾಜ್ಯದ ಅಧೀನದಲ್ಲಿದ್ದ ಕಾಲದಲ್ಲಿ ಈ ನಗರದಲ್ಲಿ ದೇವಾಲಯಗಳು, ವ್ಯಾಯಾಮಶಾಲೆಗಳು, ಸ್ನಾನಗೃಹಗಳು ವರ್ತುಲ ಕ್ರೀಡಾ ರಂಗಗಳು ಮತ್ತು ಅಖಾಡಗಳು ನಿರ್ಮಿತವಾದುವು. ಖ್ಯಾತ ರೋಮನ್ ತತ್ವಜ್ಞಾನಿ ಸಿಸೆರೋನ ಕಾಲದಲ್ಲಿ ಅನೇಕ ಜನ ಶ್ರೀಮಂತರು ಇಲ್ಲಿ ನೆಲಸಿದರು. ಇಲ್ಲಿಯ ಗ್ರೀಕ್ ಜೀವನ ವಿಧಾನ ಅವರನ್ನು ಆಕರ್ಷಿಸಿತು. ಇದು ಅನೇಕ ಚಕ್ರವರ್ತಿಗಳ ಮತ್ತು ಕವಿಗಳ ವಾಸಸ್ಥಾನವಾಗಿತ್ತು.

ರೋಮನ್ ಸಾಮ್ರಾಜ್ಯದ ಪತನವಾದ ಅನಂತರ ನಗರ ಅನುಕ್ರಮವಾಗಿ ಆಸ್ಛ್ರೊಗಾತ್, ಬಿಜಾಂಟೀನ್ ಮತ್ತು ಮುಸ್ಲಿಮ್ ರಾಜ್ಯಗಳ ಅಧೀನದಲ್ಲಿದ್ದು 1139ರಲ್ಲಿ ನಾರ್ಮನರ ರಾಜ್ಯವಾದ ಸಿಸಿಲಿಯ ವಶವಾಯಿತು. ಆ ಕಾಲದಲ್ಲಿ ಇಲ್ಲಿಯ ಬೌದ್ಧಿಕ ವಾತಾವರಣ ಹಾಗೂ ಸಂಪದಭಿವೃದ್ಧಿ ಕುಂಠಿತವಾಯಿತು. 1282ರ ಅನಂತರ ಸಿಸಿಲಿಯನ್ನು ಆರೆಗಾನ್ ರಾಜ್ಯ ವಶಪಡಿಸಿಕೊಂಡ ಮೇಲೆ 1435ರ ವರೆಗೆ ಇದು ಆಂಜಿವಿನ್ ಮನೆತನದ ಅಧೀನದಲ್ಲಿತ್ತು. 1442ರಲ್ಲಿ ಇದು ಮತ್ತೆ ಆರೆಗಾನಿನ ಅಲ್ಫಾನ್ಸೋನ ಅಧೀನದಲ್ಲಿದ್ದ ಸಿಸಿಲಿ ರಾಜ್ಯದೊಂದಿಗೆ ವಿಲೀನ ಹೊಂದಿತು. 1503ರಿಂದ 1704ರ ವರೆಗೆ ಇದು ಸ್ಪ್ಯಾನಿಷ್ ಹ್ಯಾಬ್ಸ್‍ಬರ್ಗರ ಅಧೀನದಲ್ಲಿ ಅವರ ಮಾಂಡಲಿಕರ ಆಳ್ವಿಕೆಗೆ ಒಳಪಟ್ಟಿತ್ತು. ಆ ಕಾಲದಲ್ಲಿ ನಗರ ಸಾಕಷ್ಟು ಅಭಿವೃದ್ಧಿಹೊಂದಿತು. 1735ರಲ್ಲಿ ಬೂರ್ಬಾನ್ ಮನೆತನದ ಅಧೀನದಲ್ಲಿ ಸಿಸಿಲಿಯ ರಾಜಧಾನಿಯಾಗಿತ್ತು. ಬೂಬಾ ನಿನ ಚಾಲ್ರ್ಸ್ ಈ ನಗರವನ್ನು ಅಂದಗೊಳಿಸಿದ. 1799ರಲ್ಲಿ ಅವನ ಮಗ ಫರ್ಡಿನೆಂಡನನ್ನು ಫ್ರೆಂಚ್ ಕ್ರಾಂತಿಕಾರಿ ಸೈನ್ಯ ಪದಚ್ಯುತಗೊಳಿಸಿ ಪಾರ್ತೆನೋಪಿಯನ್ ಗಣರಾಜ್ಯವನ್ನು ಸ್ಥಾಪಿಸಿದಾಗ ನೇಪಲ್ಸ್ ಅದರ ರಾಜಧಾನಿಯಾಗಿತ್ತು. ಆದರೆ 1815ರಲ್ಲಿ ಫರ್ಡಿನೆಂಡ್ ಮತ್ತೆ ಸಿಸಿಲಿಯ ದೊರೆಯಾದ. 1860ರಲ್ಲಿ ಇದು ಇಟಲಿ ಸಾಮ್ರಾಜ್ಯದ ಭಾಗವಾಯಿತು. ಎರಡನೆಯ ಮಹಾಯುದ್ದದಲ್ಲಿ ಈ ನಗರ ವಿಮಾನ ದಾಳಿಗೆ ತುತ್ತಾಗಿ ಬಹಳ ನಷ್ಟ ಹೊಂದಿತು. ಅನಂತರ ಇದನ್ನು ಪುನಃ ನಿರ್ಮಿಸಲಾಯಿತು. (ಜಿ.ಆರ್.ಕೆ.; ಜೆ.ಎಸ್.ಎಸ್.)

ಇಂದಿನ ನಗರ: ನೇಪಲ್ಸ್ ನಗರವನ್ನು ವೀಕ್ಷಕರು ಒಂದು ದೊಡ್ಡ ರಂಗ ಭೂಮಿಯೆಂದು ಬಣ್ಣಿಸಿದ್ದಾರೆ. ಸುಂದರವಾದ ವೆಸೂವಿಯಸ್ ಮತ್ತು ಕೊಲ್ಲಿಯ ಹಿನ್ನೆಲೆಯಲ್ಲಿ ಕಟ್ಟಲಾಗಿರುವ ಈ ನಗರ ಅರಮನೆಗಳಿಂದಲೂ ಚರ್ಚುಗಳಿಂದಲೂ ಕೂಡಿದೆ. ಇಲ್ಲಿಯ ಇಕ್ಕಟ್ಟಾದ ಬೀದಿಗಳು ಅನೇಕ ಸಲ ಮೆಟ್ಟಲುಗಳಾಗಿ ಪರಿವರ್ತನೆ ಹೊಂದಿ ಗುಡ್ಡಗಳ ಮಧ್ಯೆ ಹಾದುಹೋಗುತ್ತವೆ. 20ನೆಯ ಶತಮಾನದ ಮಧ್ಯಭಾಗದ ವರೆಗೆ ಜನರಲ್ಲಿ ಹೆಚ್ಚು ಭಾಗ ಬಡವರೇ ಆಗಿದ್ದು ಅವರಲ್ಲಿ ಅಪರಾಧಿ ಪ್ರವೃತ್ತಿ ಹೆಚ್ಚಾಗಿತ್ತು. 1770ರ ವರೆಗೆ ಇಲ್ಲಿ ಕೊಲೆಗಳು ಬಹಳ ಹೆಚ್ಚಾಗಿದ್ದುವು. ಆ ವರ್ಷ ಫಾದರ್ ರೋಕೋ ಎಂಬ ಪಾದ್ರಿಯ ಪ್ರಯತ್ನದಿಂದಾಗಿ ನೂರಾರು ಬೀದಿ ದೀಪಗಳನ್ನು ಹಾಕಿದ ಮೇಲೆ ಕೊಲೆಗಳು ಕಡಿಮೆ ಯಾದುವು. ಜನರ ನಿರುದ್ಯೋಗ ಸ್ಥಿತಿ ಈಗ ಕಡಿಮೆಯಾಗಿ ಜೀವನ ಮಟ್ಟ ಸುಧಾರಿಸಿದೆ. ಇಲ್ಲಿಯ ಜನರಲ್ಲಿ ನಿಯಮಗಳನ್ನು ಉಲ್ಲಂಘಿಸುವ ಪ್ರವೃತ್ತಿ ಹೆಚ್ಚಾಗಿದೆ. ಇಲ್ಲಿ ಜನಸಂದಣಿ ದಟ್ಟವಾಗಿದ್ದರೂ ಇಲ್ಲಿಯ ಜನ ಅದಕ್ಕೆ ಒಗ್ಗಿಹೋಗಿದ್ದಾರೆ.

ನಗರದಲ್ಲಿ ಅನೇಕ ಮಾನವ ನಿರ್ಮಿತ ಸುರಂಗಗಳುಂಟು. ಹಲವಾರು ಸುರಂಗಗಳು ರೋಮನ್ನರಿಂದ ನಿರ್ಮಿತವಾದವು. ಎರಡನೆಯ ಮಹಾಯುದ್ದದ ಕಾಲದಲ್ಲಿ ಇವು ಜನರನ್ನು ಬಾಂಬು ದಾಳಿಯಿಂದ ರಕ್ಷಿಸುವುದರಲ್ಲಿ ನೆರವಾದುವು. ಸುರಂಗಗಳು ಆಗಾಗ ಕುಸಿದುಹೋಗಿ ಮನೆಗಳು ಉರುಳಿ ರಸ್ತೆಗಳಲ್ಲಿ ದೊಡ್ಡ ಕುಳಿಗಳಾಗಿ ಹಾನಿಯಾಗುತ್ತಿರುವುದುಂಟು. ಸೇಂಟ್ ಜೆನ್ನಾರೊ ಮತ್ತು ಸೇಂಟ್ ಗಾಡಿಯೇನೋ ಸಮಾಧಿ ಸುರಂಗಗಳಲ್ಲಿ ಭಿತ್ತಿಚಿತ್ರಗಳೂ ಕೆತ್ತನೆಗಳೂ ಇವೆ. ಪಾಸಿಲಿಪೊ ಬೆಟ್ಟದ ಅಡಿಯಲ್ಲಿ ಸಾಗುವ ಸುರಂಗಮಾರ್ಗ ಪ್ರಸಿದ್ದವಾದ್ದು.

ಬಂದರಿನಿಂದ ನಗರಕ್ಕೆ ಬರುವ ಹಾದಿಯಲ್ಲಿ 914 ಮೀ. ಉದ್ದದ ವಿಲ ಕಮ್ಯೂ ನೇಲ್ ಎಂಬ ಸಾರ್ವಜನಿಕ ಉದ್ಯಾನವಿದೆ. ನಗರದಲ್ಲಿ ಮಧ್ಯಯುಗದ ಐದು ದುರ್ಗಗಳಿವೆ. ವೊಮೆರೊದಲ್ಲಿ 1229ರಲ್ಲಿ ಆಚಿಜೂವಿನ ರಾಬರ್ಟ್ ದೊರೆ ಕಟ್ಟಿಸಿದ ದುರ್ಗವನ್ನು ಸ್ಪೇನಿಗರು 1537ರಲ್ಲಿ ಅರು ಮೊನೆಯ ನಕ್ಷತ್ರದ ಮಾದರಿಯಲ್ಲಿ ಪುನಃ ನಿರ್ಮಾಣ ಮಾಡಿದರು. ಕ್ಯಾಸೆಲ್ ಸೇಂಟ್ ಎಲ್ಮೋ ಎಂದು ಹೆಸರಾದ ಈ ದೊಡ್ಡ ಕಲ್ಲುಕಟ್ಟಡ ಅನೇಕ ಶತಮಾನಗಳ ವರೆಗೆ ನೇಪಲ್ಸಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದರ ಪಕ್ಕದಲ್ಲಿ 14ನೆಯ ಶತಮಾನದಲ್ಲಿ ಕ್ರೈಸ್ತ ಸಂನ್ಯಾಸಿ ಮಠವಾಗಿ ಕಟ್ಟಲಾದ ಮ್ಯೂಸಿಯೊ ಡಿ ನಾಸ್ ಮಾರ್ಟಿನೋ ಎಂಬ ಕಟ್ಟಡವಿದೆ. ಇಲ್ಲಿ ನಗರದ ವಸ್ತುಸಂಗ್ರಹಾಲಯವಿದೆ. ಇಲ್ಲಿಯ ಮತ್ತೊಂದು ದುರ್ಗವನ್ನು ನಾರ್ಮನರು 12ನೆಯ ಶತಮಾನದಲ್ಲಿ ಕಟ್ಟಿದರು. 13ನೆಯ ಶತಮಾನದಲ್ಲಿ ಆಂಜಿ ವಿನ್ ದೊರೆಗಳು ಇದನ್ನು ವಿಸ್ತರಿಸಿ ಅಂದಗೊಳಿಸಿದರು. ಈಗ ದೊಡ್ಡ ಕಟ್ಟಡದಲ್ಲಿ ಸೈನಿಕ ಠಾಣ್ಯವಿದೆ. ಕ್ಯಾಸಲ್ ನೋವೋ ಇಲ್ಲಿಯ ಇನ್ನೊಂದು ದುರ್ಗ. ಇದನ್ನು ಆಂಜೂವಿನ 1ನೆಯ ರಾಬರ್ಟ್ ದೊರೆ 1279-82ರಲ್ಲಿ ಕಟ್ಟಿಸಿದ. ಇದನ್ನು ಮ್ಯಾಸ್ಕಿಯೋ ಆಂಜಿಯಾನೊ ಎಂದು ಕರೆಯಲಾಗುತ್ತದೆ. ಇಲ್ಲಿ ಆರೆಗಾನಿನ ಮೊದಲನೆಯ ಅಲ್ಛಾನ್ಸೊ ದೊರೆ 15ನೆಯ ಶತಮಾನದ ಮಧ್ಯಭಾಗದಲ್ಲಿ ಅಮೃತ ಶಿಲೆಯ ಕೆತ್ತನೆ ಕೆಲಸವಿರುವ ಸುಂದರವಾದ ಕಮಾನುದ್ವಾರವನ್ನು ನಿರ್ಮಿಸಿದ. ಇಲ್ಲಿಯ ಭೋಜನ ಶಾಲೆ ಈಗ ನೇಪಲ್ಸ್ ಪುರಸಭೆಯ ಸಭಾಂಗಣವಾಗಿದೆ. ಇದರ ಮುಂಭಾಗದಲ್ಲಿ ನೇಪಲ್ಸಿನ 4ನೆಯ ಫರ್ಡಿನೆಂಡ್ ದೊರೆ ತನ್ನ ಮಂತ್ರಿಗಳ ಕಚೇರಿಗಾಗಿ 1819ರಲ್ಲಿ ನಿರ್ಮಿಸಿದ ಪಿಯಾeóï ಮುನಿಸಿಪಿಯೋ ಎಂಬ ಕಟ್ಟಡವಿದೆ. ಈಗ ಇಲ್ಲಿ ಪುರಸಭೆಯ ಆಡಳಿತ ಕಛೇರಿ ಇದೆ. ನೇಪಲ್ಸಿನ ರಾಷ್ಟ್ರೀಯ ಗ್ರಂಥಾಲಯ ಪ್ಯಾಲೇಸೋ ರಿಯೇಲ್‍ನಲ್ಲಿದೆ. 1752ರಲ್ಲಿ ಹಕ್ರ್ಯುಲೇನಿಯಮ್‍ನಲ್ಲಿ ದೊರೆತ ಪ್ಯಾಪಿರಸ್ ಅಲ್ಲದೆ ಇನ್ನೂ ಅನೇಕ ಅಪೂರ್ವ ಗ್ರಂಥಗಳು ಈ ಗ್ರಂಥಾಲಯದಲ್ಲಿವೆ. ಇಲ್ಲಿರುವ ಮ್ಯೂಸಿಯೊ ಅರ್ಕಿಯೊಲಾಜಿಕೊ ನ್ಯಾಷನೇಲ್‍ನಲ್ಲಿ ರಾಜಮನೆತನಗಳ ಅಪೂರ್ವವಸ್ತುಗಳೂ ಹಕ್ರ್ಯುಲೇನಿಯಮ್ ಪಾಂಪೇ ಮೊದಲಾದ ಕಡೆಗಳಲ್ಲಿ ಸಿಕ್ಕ ಅನೇಕ ವಸ್ತುಗಳೂ ಇವೆ. ಈ ಕಟ್ಟಡವನ್ನು 1586ರಲ್ಲಿ ಅಶ್ವಸೈನ್ಯದ ಬ್ಯಾರಕ್ಕಿಗಾಗಿ ಕಟ್ಟಲಾಗಿದ್ದು 1790ರಲ್ಲಿ ರಾಜಮನೆತನಕ್ಕೆ ಸಂಬಂಧಿಸಿದ ವಸ್ತುಗಳನ್ನಿಡಲು ವಿಸ್ತರಿಸಲಾಯಿತು. ನಗರದಲ್ಲಿ 50ಕ್ಕೂ ಹೆಚ್ಚು ಚರ್ಚುಗಳೂ ಸುಮಾರು 100 ಅರಮನೆಗಳೂ ಇವೆ. ಇಲ್ಲಿಯ ವಿಶ್ವವಿದ್ಯಾಲಯವನ್ನು 1224ರಲ್ಲಿ 2ನೆಯ ಫ್ರೆಡರಿಕ್ ಚಕ್ರವರ್ತಿ ಸ್ಥಾಪಿಸಿದ. ಇಲ್ಲಿ 3,000 ಅಧ್ಯಾಪಕರೂ ಸುಮಾರು 40,000 ವಿದ್ಯಾರ್ಥಿಗಳೂ ಇದ್ದಾರೆ.

ಕೈಗಾರಿಕೆಗಳು: ಬೂರ್ಬನರ ಕಾಲದಲ್ಲಿ ಇಲ್ಲಿ ಕೈಗಾರಿಕೆಗಳು ಪ್ರಾರಂಭವಾದುವು. 1740ರಲ್ಲಿ ಇಲ್ಲಿ ಪಿಂಗಾಣಿ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಅನಂತರ ರೇಷ್ಮೆ ಹಾಗೂ ಇತರ ಬಟ್ಟೆಗಳ ಉದ್ಯಮಗಳು ಅಭಿವೃದ್ಧಿಹೊಂದಿದುವು. 1826ರಲ್ಲಿ ಬಂದರಿನ ಪುನರ್ನಿರ್ಮಾಣ ಕಾರ್ಯ ಕೈಗೊಳ್ಳಲಾಯಿತು. 1839ರಲ್ಲಿ ನೇಪಲ್ಸಿನಿಂದ ಪೋಟಿಕಿಗೆ 8 ಕಿಮೀ. ಉದ್ದದ, ಇಟಲಿಯಲ್ಲೇ ಮೊದಲನೆಯದಾದ ರೈಲು, ಮಾರ್ಗವನ್ನು ನಿರ್ಮಿಸಲಾಯಿತು. ಉಕ್ಕಿನ ಕಾರ್ಖಾನೆಯನ್ನು 19ನೆಯ ಶತಮಾನದಲ್ಲೇ ಪ್ರಾರಂಭಿಸಿದರೂ ಅದರ ಉತ್ಪಾದನೆ ಗಣನೀಯವಾಗಿ ಹೆಚ್ಚಿದ್ದು 1970ರ ದಶಕದಲ್ಲಿ. ಇಲ್ಲಿ ಕಂಡುಬರುವ ಕೈಗಾರಿಕಾಭಿವೃದ್ಧಿಗೆ ರಾಷ್ಟ್ರದ ಯೋಜನಾ ಕ್ರಮಗಳು, ಹಣಕಾಸಿನ ವ್ಯವಸ್ಥೆ, ಹಾಗೂ ಸರ್ಕಾರದ ಆಧೀನದ ಕಂಪನಿಗಳು ಕಾರಣವೆನ್ನಬಹುದು. ಹೊಸ ರಸ್ತೆಗಳ ನಿರ್ಮಾಣ, ಬಂದರಿನ ಅಭಿವೃದ್ದಿ, ಆಧುನಿಕ ಸಾರಿಗೆ ಸಂಪರ್ಕ ವ್ಯವಸ್ಥೆ ಹಾಗೂ ಶಕ್ತಿಯ ಉತ್ಪಾದನೆ ಇವುಗಳಿಂದ ಈ ಪ್ರದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. ಪ್ರವಾಸೋದ್ಯಮ 1960ರ ದಶಕದಲ್ಲಿ ಬೆಳೆಯಿತು. ಇಲ್ಲಿಯ ಕೈಗಾರಿಕೆಗಳಲ್ಲಿ ಪ್ರಮುಖವಾದವು ಬಟ್ಟೆ, ಉಕ್ಕು, ಹಡಗು, ರೈಲ್ವೆ ಎಂಜಿನ್, ಎಲೆಕ್ಟ್ರಾನಿಕ್ಸ್, ಆಹಾರ ಸಂಸ್ಕರಣ ಮತ್ತು ತೈಲಶುದ್ಧೀಕರಣ. (ಜೆ.ಎಸ್.ಎಸ್.)