ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಪಿಯರ್, ಚಾಲ್ರ್ಸ್‌ ಜೇಮ್ಸ್‌

ವಿಕಿಸೋರ್ಸ್ದಿಂದ

ನೇಪಿಯರ್, ಚಾಲ್ರ್ಸ್ ಜೇಮ್ಸ್ 1782-1853. ಬ್ರಿಟಿಷ್ ಯೋಧ, ಅಡಳಿತಗಾರ, ಸಾಮ್ರಾಜ್ಯ ಶಾಹಿಯ ಸೇವಕ, ಕರ್ನಲ್ ಜಾರ್ಜ್‍ನೇಪಿಯರ್ ಮತ್ತು ಬನ್‍ಬರಿ ಇವರ ಮೊದಲನೆಯ ಮಗ. 1782ರ ಆಗಸ್ಟ್ 10ರಂದು ಲಂಡನ್ನಿನಲ್ಲಿ ಜನಿಸಿದ. ಈತ ತನ್ನ ರಕ್ತ ಸಂಬಂಧಿ ಚಾಲ್ರ್ಸ್ ಜೇಮ್ಸ್ ಫಾಕ್ಸನ ಸಹಾಯದಿಂದ 18ನೆಯ ವಯಸಿನಲ್ಲೆ (1806) ಸೈನ್ಯಾಧಿಕಾರಿಯಾದ. ನೆಪೋಲಿಯನ್ನನ ಫ್ರಾನ್ಸಿನ ವಿರುದ್ಧ ನಡೆದ ಐಬೀರಿಯನ್ ಪರ್ಯಾಯದ್ವೀಪ ಯದ್ಧದಲ್ಲೂ 1812ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ವಿರುದ್ಧ ನಡೆದ ಯುದ್ಧದಲ್ಲೂ ಈತ ಭಾಗವಹಿಸಿದ್ದ. ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಯಾಗಬೇಕೆಂಬ ಚಳವಳಿ ಹಿಂಸಾತ್ಮಕವಾಗಿ ತಿರುಗಬಹುದಾದ ಅಪಾಯ ತಲೆದೋರಿದಾಗ ಈತ ಉತ್ತರ ಇಂಗ್ಲೆಂಡಿನಲ್ಲಿ ಸೇನಾಧಿಪತ್ಯ ನಿರ್ವಹಿಸಿ. ಕೈಗಾರಿಕಾ ಕಾರ್ಮಿಕರ ವಿಚಾರದಲ್ಲಿ ಸಹಾನುಭೂತಿ ತೋರುವುದರೊಂದಿಗೆ ಕಾನೂನು ಮತ್ತು ಶಿಸ್ತುಪಾಲನೆಗೂ ವಿಶೇಷ ಗಮನ ನೀಡಿ ಎರಡು ವರ್ಷಗಳ ಕಾಲ ಪರಿಸ್ಥಿತಿಯನ್ನು ಹಿಡಿತದಲ್ಲಿಟ್ಟಿದ್ದ.

ನೇಪಿಯರ್ 1841ರಲ್ಲಿ ಭಾರತ ಸೇನೆಯಲ್ಲಿ ಅಧಿಕಾರಿಯಾದ. 1842ರಲ್ಲಿ ಇವನಿಗೆ ಸಿಂಧ್‍ನ ಸೇನಾಧಿಪತ್ಯ ವಹಿಸಲಾಯಿತು. ಭಾರತದ ವ್ಯವಹಾರಜಾÐನ ಅಥವಾ ಭಾಷೆಯ ಅನುಭವವಿಲ್ಲದಿದ್ದರೂ ಕುತಂತ್ರ ಇವನಿಗೆ ನೆರವಾಗಿ ನಿಂತಿತು. ಲಾರ್ಡ್ ಎಲ್‍ನ್‍ಬರೊ ಅಗ ಭಾರತದ ಗವರ್ನರ್-ಜನರಲ್ ಆಗಿದ್ದ. ಸಿಂಧಿನ ಅಮೀರರೊಂದಿಗೆ ಯುದ್ಧ ಮಾಡಬೇಕಾಗುವಂಥ ಪರಿಸ್ಥಿತಿಯನ್ನು ನೇಪಿಯರ್ ಕಲ್ಪಿಸಿದ. 1843ರಲ್ಲಿ ಮಿಯಾನಿ ಮತ್ತು ಡಾಬೋಗಳಲ್ಲಿ ನಡೆದ ಕದನಗಳಲ್ಲಿ ಇವನಿಗೆ ಜಯ ಲಭಿಸಿತು. ಇದರ ಫಲವೆಂದರೆ ಸಿಂಧ್ ಪ್ರಾಂತ್ಯದ ಗವರ್ನರ್ ಅಗಿ ಈತನ ನೇಮಕ. ತನ್ನ ಅಧಿಕಾರದ ಕಾಲದಲ್ಲಿ ಈತ ಅಲ್ಲಿ ಪೋಲೀಸ್ ಪಡೆಯನ್ನು ಕಟ್ಟಿದ. ವ್ಯಾಪಾರ ಬೆಳೆಸಿದ. ಕರಾಚಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಯ ಕೆಲಸ ಅರಂಭವಾಯಿತು. ಸಿಂಧಿನ ಉತ್ತರದ ಗಡಿಯ ಕಡೆಯಿಂದ ದಾಳಿ ಮಾಡುತ್ತಿದ್ದ ಗುಡ್ಡ ಗಾಡು ಜನರ ಹಾವಳಿಯನ್ನು ಇವನು ಅಡಗಿಸಿದ.

1847ರಲ್ಲಿ ನೇಪಿಯರ್ ಇಂಗ್ಲೆಂಡಿಗೆ ಹಿಂದಿರುಗಿದನಾದರೂ 1849ರಲ್ಲಿ ಮತ್ತೆ ಭಾರತಕ್ಕೆ ಬಂದ. ಎರಡನೆಯ ಸಿಖ್ ಯುದ್ಧದಲ್ಲಿ (1848-49) ಬ್ರಿಟಿಷ್ ಸೇನೆಯ ಮಹಾದಂಡನಾಯಕನಾಗಿ ಇವನನ್ನು ನೇಮಕ ಮಾಡಲಾಗಿತ್ತು. ಆದರೆ ಈತ ಭಾರತಕ್ಕೆ ಬರುವ ವೇಳೆಗೆ ಈ ಯುದ್ಧ ಕೊನೆಗೊಂಡಿತ್ತು. ಗವರ್ನರ್-ಜನರಲ್ ಆಗಿದ್ದ ಲಾರ್ಡ್ ಡಾಲ್‍ಹೌಸಿಯೊಂದಿಗೆ ವಿರಸ ಕಟ್ಟಿಕೊಂಡು ಈತ 1851ರಲ್ಲಿ ಭಾರತವನ್ನು ಬಿಟ್ಟು ಸ್ವದೇಶಕ್ಕೆ ತರಳಿದ. 1853ರ ಅಗಸ್ಟ್ 29ರಂದು ಇವನು ತೀರಿಕೊಂಡ. (ಎಂ.ಎನ್.ಎನ್.)