ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಬಿಸ್

ವಿಕಿಸೋರ್ಸ್ದಿಂದ

ನೇಬಿಸ್ ಗ್ರೀಸಿನ ಪ್ರಾಚೀನ ನಗರ ರಾಜ್ಯಗಳಲ್ಲೊಂದಾದ ಸ್ವತಂತ್ರ ಸ್ಪಾರ್ಟದ ಕೊನೆಯ ದೊರೆ (ಕ್ರಿ. ಪೂ. 207-192). ಈತ ಈ ರಾಜ್ಯವನ್ನಾಳಿದ 4ನೆಯ ಏಜಿಸ್ ಮತ್ತು 3ನೆಯ ಕ್ಲಿಯಾಮಿನೀಸರ ಕ್ರಾಂತಿಕಾರಿ ಪರಂಪರೆಯನ್ನು ಮುಂದುವರಿಸಿದ. ಋಣ ಪರಿಹಾರ ಭೂಮಿಯ ಹಂಚಿಕೆ. ವೈಯಕ್ತಿಕ ಆಸ್ತಿಯ ನಿಯಂತ್ರಣ, ಗುಲಾಮ ವಿಮೋಚನೆ-ಇವು ಈತ ತಂದ ಸಾಮಾಜಿಕ ಕ್ರಮಗಳು. ಇವುಗಳ ಪೈಕಿ ಕೊನೆಯ ಎರಡು ಕ್ರಮಗಳಲ್ಲಿ ಹೆಚ್ಚಿನ ಯಶಸ್ಸು ದೊರಕಿತು. ಇವನನ್ನು ಕುರಿತ ಪ್ರಾಚೀನ ಬರವಣಿಗೆಗಳು ಪೂರ್ವಗ್ರಹಪೂರಿತವಾಗಿರುವುದರಿಂದ ಇವನು ಜಾರಿಗೆ ತಂದ ಕಾರ್ಯಕ್ರಮಗಳನ್ನು ಕುರಿತ ವಿವರಣೆಗಳು ಅಸ್ಪಷ್ಟವಾಗಿವೆ. ಸಮಕಾಲೀನ ಗ್ರೀಕ್ ಇತಿಹಾಸಕಾರ ಪಾಲಿಬಿಯಸ್ ಇವನ್ನು ಕ್ರೂರಿ. ರಾಕ್ಷಸ ಎಂದು ಚಿತ್ರಿಸಿದ್ದಾನೆ. ಆದರೆ ಈ ಅಭಿಪ್ರಾಯವನ್ನು ಆಧುನಿಕ ವಿದ್ವಾಂಸರು ಅನುಮೋದಿಸಿಲ್ಲ. ಇವನು ಕಠಿಣ ಕ್ರಮಗಳನ್ನು ಜಾರಿಗೆ ತಂದು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಲು ಯತ್ನಿಸಿದ್ದರಿಂದ ಇವನನ್ನು ತೆಗಳಿರಬಹುದೆನ್ನಲಾಗಿದೆ.

ರೋಮಿಗೂ ಮ್ಯಾಸಿಡೋನಿಯದ 5ನೆಯ ಫಿಲಿಪನಿಗೂ ದೀರ್ಘ ಹೋರಾಟ ನಡೆಯುತ್ತಿದ್ದಾಗ ನೇಬಿಸ್ ಕೌಶಲದಿಂದ ತನ್ನ ಅಧಿಕಾರವನ್ನು ಕಾಪಾಡಿಕೊಂಡ. ಇವೆರಡು ದೇಶಗಳ ನಡುವೆ ಫಿನಿಸೀ ಶಾಂತಿ ಒಪ್ಪಂದ (ಕ್ರಿ. ಪೂ. 205) ಏರ್ಪಟ್ಟ ಮೇಲೆ ನೇಬಿಸ್ ಅಕೀಯನ್ ಕೂಟದ ವಿರುದ್ಧ ಯುದ್ಧ ಮಾಡಿದ. ಕೂಟದ ದಂಡ ನಾಯಕ ಫಿಲೊಫೀಮೆನ್ ಇವನಿಂದ ಮೆಸೀನೀಯನ್ನು ಕಸಿದುಕೊಂಡ. ಅನಂತರ ಮ್ಯಾಸಿಡೋನಿಯದ 5ನೆಯ ಫಿಲಿಫ್ ಲಕೋನಿಯ ಪ್ರದೇಶದ ಸ್ಯಾಟೆಟಸ್‍ನಲ್ಲಿ ಇವನನ್ನು ಸೋಲಿಸಿದ. ಫಿಲಿಪ್ ರೋಮಿನೊಂದಿಗೆ ಯುದ್ಧದಲ್ಲಿ ನಿರತನಾಗಿದ್ದಾಗ. ಕ್ರಿ.ಪೂ. 197ರಲ್ಲಿ ನೇಬಿಸ್ ಅವನಿಂದ ಆರ್ಗೋಸನ್ನು ವಶಪಡಿಸಿಕೊಂಡು ರೋಮಿನ ದಂಡನಾಯಕ ಪ್ಲಾಮಿನಿಸನೊಡನೆ ಒಪ್ಪಂದ ಮಾಡಿಕೊಂಡು ಅದನ್ನು ತನ್ನಲ್ಲೇ ಉಳಿಸಿಕೊಂಡ. ಆರ್ಗೋಸಿಗೂ ಇವನು ಸಾಮಾಜಿಕ ಕಾರ್ಯಕ್ರಮಗಳನ್ನು ವಿಸ್ತರಿಸಿದ. ಕ್ರಿ.ಪೂ. 195ರಲ್ಲಿ ಪ್ಲಾಮಿನಿನಸ್ ಫಿಲಿಪನನ್ನು ಸೋಲಿಸಿದ ಮೇಲೆ ಗ್ರೀಕ್ ರಾಜ್ಯಗಳ ಕಡೆ ಗಮನ ಹರಿಸಿದ. ಆಗ ನೇಬಿಸ್ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಿ 10,000 ಸ್ಟಾರ್ಟನ್ ಸೈನಿಕರನ್ನು ಸಂಘಟಸಿ ರೋಮಿನ ಸೈನ್ಯವನ್ನು ಎದುರಿಸಿದ. ಆದರೆ ಕೊನೆಗೆ ಇವನು ಸೋತು ಸಂಧಿಮಾಡಿಕೊಂಡು ಆರ್ಗೋಸ್ ಮತ್ತು ಕೆಲವು ಬಂದರುಗಳನ್ನು ಬಿಟ್ಟು ಕೊಡಬೇಕಾಯಿತು. ಆದರೆ ಈ ಯುದ್ಧದಿಂದ ಸ್ಪಾರ್ಟದ ಆಂತರಿಕ ಆಡಳಿತದ ಮೇಲೆ ಯಾವ ಪರಿಣಾಮವೂ ಉಂಟಾಗಲಿಲ್ಲ. ಕ್ರಿ. ಪೂ. 194ರಲ್ಲಿ ರೋಮನರು ಗ್ರೀಸಿನಿಂದ ಹಿಂದಿರುಗಿದರು. ಕಳೆದುಹೋಗಿದ್ದ ಪ್ರದೇಶವನ್ನು ಹಿಂದಕ್ಕೆ ಪಡೆಯಲು ನೇಬಿಸ್ ಯತ್ನಿಸಿದ. ಆದರೆ ಇವನ್ನು ಹಳೆಯ ವೈರಿಗಳಾದ ಅಕೀಯನರು ಫಿಲೊಫೀಮನನ ನಾಯಕತ್ವದಲ್ಲಿ ಸಂಪೂರ್ಣವಾಗಿ ಸೋಲಿಸಿದರು. ಕೊನೆಗೆ ಈಟೋಲಿಯನರು ನೇಬಿಸನನ್ನು ಕೊಲೆಮಾಡಿ ತಾತ್ಕಾಲಿಕವಾಗಿ ಸ್ಪಾರ್ಟವನ್ನು ಆಕ್ರಮಿಸಿಕೊಂಡರು. (ಎಂ.ಜಿ.)