ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಮಣ್ಣ

ವಿಕಿಸೋರ್ಸ್ದಿಂದ

"ನೇಮಣ್ಣಕವಿ : - (೧೫೫೯) 16ನೆಯ ಶತಮಾನದ ಜೈನಕವಿ. ಜ್ಞಾನಭಾಸ್ಕರ ಚರಿತೆ ಮತ್ತು ಸುವಿಚಾರಚರಿತೆ ಎಂಬ ಎರಡು ಕನ್ನಡ ಕೃತಿಗಳ ಕರ್ತೃ, ಸಮಡೊಳ್ಳಿಪುರದ ಜಿನಸೇನರ ಪ್ರಶಿಷ್ಯ ಹಾಗೂ ಶೀಲಾಬ್ಧಿಯ ಶಿಷ್ಯ. ತುಳುರಾಜ್ಯದ ಬಿದರೆಯ ದೊಡ್ಡ ಬಸದಿಯನ್ನು ಉದ್ದರಿಸಿದ ಶ್ರಾವಕರ ಬಳಿ ದೀಕ್ಷೆ ಪಡೆದ. ಅನಂತರ ತನ್ನೆರಡು ಸಾಂಗತ್ಯ ಕೃತಿಗಳನ್ನು ರಚಿಸಿದ. 1559ರಲ್ಲಿ ರಚಿತವಾದ ಜ್ಞಾನಭಾಸ್ಕರ ಚರಿತೆ 133 ಪದ್ಯಗಳಿಂದ ಕೂಡಿದ ಚಿಕ್ಕ ಗ್ರಂಥ. ಇದರಲ್ಲಿ ಜೈನತತ್ತ್ವ. ಧ್ಯಾನ, ತಪ ಮೊದಲಾದ ಆಧ್ಯಾತ್ಮ ವಿಚಾರಗಳಿವೆ. ಇದನ್ನು ಕಾರ್ಕಳದ ಬೊಮ್ಮರಾಜನ ಬಸದಿಯಲ್ಲಿ ರಚಿಸಿದುದಾಗಿ ಕವಿ ಹೇಳಿಕೊಂಡಿದ್ದಾನೆ. ಇಲ್ಲಿ ಬಿದರೆಯ ನೇಮಣ್ಣ ಎಂದು ತನ್ನ ಹೆಸರಿನ ಜೊತೆ ಊರನ್ನೂ ತಿಳಿಸಿದ್ದಾನೆ. ಈತ ಬ್ರಹ್ಮಚಾರಿಯಾಗಿದ್ದನೆಂಬ ವಿಚಾರವೂ ಇಲ್ಲಿ ತಿಳಿಯಬರುತ್ತದೆ. ಗ್ರಂಥದಲ್ಲಿ 12 ಸಂಧಿಗಳೂ ಸಾವಿರಕ್ಕೂ ಹೆಚ್ಚು ಪದ್ಯಗಳೂ ಇವೆ. ಶ್ರಾವಕ-ಮುನಿ ಧರ್ಮಗಳು. ವಿವಿಧ ವ್ರತಗಳು, ಚತುರ್ಗತಿಗಳು, ಸ್ವರ್ಗ-ನರಕ, ಲೋಕವಿಚಾರ, ಸ್ವರ್ಗಗಳ ಸುಖದ ನರಕಗಳ ದುಃಖದ ವಿವರಣೆ, ಆತ್ಮತತ್ತ್ವ, ಶ್ರಾವಕರ ಹನ್ನೊಂದು ನೆಲೆಗಳು, ಮೋಕ್ಷಸುಖಿದ ವರ್ಣನೆ-ಮೊದಲಾದ ಜೈನತತ್ತ್ವ ವಿಚಾರಗಳು ಇದರಲ್ಲಿ ಪ್ರತಿಪಾದಿತವಾಗಿವೆ. ಕಥೆಯೊಂದಿಗೆ ಧರ್ಮವನ್ನು ಹೇಳುವ ರೀತಿಯಿಂದ ಬೇರೆಯಾಗಿ ಶುದ್ಧಧರ್ಮವನ್ನೇ ಹೇಳುವ ಗ್ರಂಥವನ್ನು ರಚಿಸಿದ ಕವಿಗಳಲ್ಲಿ ಈ ಕವಿ 16ನೆಯ ಶತಮಾನದಲ್ಲಿ ಮುಖ್ಯವಾಗಿ ಕಾಣುತ್ತಾನೆ. ಇವನ ಎರಡೂ ಗ್ರಂಥಗಳಲ್ಲಿ ಶುದ್ಧ ಧಾರ್ಮಿಕ ವಿಚಾರಗಳೇ ಪ್ರತಿಪಾದಿತವಾಗಿವೆ. ಆದರು ಉಪಮೆಗಳಿಂದ ಕೂಡಿ ಕಾವ್ಯಾಂಶಗಳನ್ನೊಳಗೊಂಡಿರುವುದರಿಂದ ಹಾಗೂ ಭಾಷೆಯ ಸರಳತೆಯಿಂದ ಅಸ್ವಾದ್ಯವಾಗಿವೆ. (ಎಸ್‍ಎಚ್.ಸಿ.)