ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಮಿಯರ್, ಲೂಯಿಸ್ ಬರ್ನ್‌ಸ್ಟೀನ್

ವಿಕಿಸೋರ್ಸ್ದಿಂದ

ನೇಮಿಯರ್, ಲೂಯಿಸ್ ಬರ್ನ್‍ಸ್ಟೀನ್ 1888-1960. ಬ್ರಿಟಿಷ್ ಇತಿಹಾಸಕಾರ. 18ನೆಯ ಶತಮಾನಕ್ಕೆ ಸಂಬಂಧಿಸಿದಂತೆ ಇವರು ನಡೆಸಿದ ಸಂಶೋಧನೆಗಳು ಗಮನಾರ್ಹವಾದಂಥವು. ಜನನ 1888ರ ಜೂನ್ 27ರಂದು, ಪೋಲೆಂಡಿನಲ್ಲಿ, ಲೂಕೂಫ್ ಬಳಿಯಲ್ಲಿ. ಇವರು 1906ರಲ್ಲಿ ಇಂಗ್ಲೆಂಡಿಗೆ ಬಂದ ನೆಲಸಿ ಆಕ್ಸ್‍ಫರ್ಡಿನ ಬ್ಯಾಲಿಯೋಲ್ ಕಾಲೇಜನ್ನು ಸೇರಿದರು. ಒಂದನೆಯ ಮಹಾಯುದ್ಧಕ್ಕೆ ಮುಂಚೆ ಇವರು ಬ್ರಿಟಿಷ್ ಪ್ರಜೆತನ ಪಡೆದರು. ಸೈನ್ಯ ಸೇರಿ ಯುದ್ಧದಲ್ಲಿ ಭಾಗವಹಿಸಿ ಅನಂತರ 1920ರ ವರೆಗೆ ವಿದೇಶಾಂಗ ಕಛೇರಿಯಲ್ಲಿ ಸೇವೆ ಸಲ್ಲಿಸಿದರು. ಆಕ್ಸ್‍ಫರ್ಡಿನಲ್ಲಿ ಅಧ್ಯಾಪಕ ಹುದ್ದೆಯನ್ನು ಪಡೆಯಲು ವಿಫಲರಾದ್ದರಿಂದ ವ್ಯಾಪಾರವನ್ನು ಆರಂಭಿಸಿದರು. ಅದನ್ನೂ ತ್ಯಜಿಸಿ ಕೊನೆಗೆ ಇತಿಹಾಸ ಸಂಶೋಧನೆಯತ್ತ ಸಂಪೂರ್ಣ ಗಮನ ಹರಿಸಿ ಯಶಸ್ವಿಯಾದರು. 18ನೆಯ ಶತಮಾನದ ಇಂಗ್ಲೆಂಡಿನ ರಾಜಕೀಯ ಇತಿಹಾಸದ ಅಧ್ಯಯನ ನಡೆಸಿದವರಲ್ಲಿ ಇವರು ಮೊದಲಿಗರು. ಸಮಕಾಲೀನ ಮತ್ತು ಐತಿಹಾಸಿಕ ವಿಷಯಗಳ ಮೇಲೆ ಅನೇಕ ಪ್ರಬುದ್ಧ ಲೇಖನಗಳನ್ನೂ ದೀರ್ಘ ಪ್ರಬಂಧಗಳನ್ನೂ ಪ್ರಕಟಿಸಿದರು.

1929ರಲ್ಲಿ ಇವರು ಪ್ರಕಟಿಸಿದ ದಿ ಸ್ಟ್ರಕ್ಚರ್ ಆಫ್ ಪಾಲಿಟಕ್ಸ್ ಅಟ್ ದಿ ಆಕ್ಸೆಷನ್ ಆಫ್ ಜಾರ್ಜ್ III ಎಂಬ ಕೃತಿ 18ನೆಯ ಶತಮಾನದ ಇತಿಹಾಸಶಾಸ್ತ್ರದಲ್ಲಿ ಕ್ರಾಂತಿಯನ್ನೆಬ್ಬಿಸಿತು. ಇದು ಇವರ ಅತ್ಯಂತ ಗಮನಾರ್ಹ ಕೃತಿಯೆಂದು ಇಂದಿಗೂ ಭಾವಿಸಲಾಗಿದೆ. ಇತಿಹಾಸದ ಅಲ್ಪ ಅವಧಿಯೊಂದನ್ನು ಕುರಿತಂತೆ ಇವರು ಅಗಾಧವಾದ ಸಂಶೋಧನೆ ನಡೆಸಿ, ಜನರು ರಾಜಕಾರಣವನ್ನು ಪ್ರವೇಶಿಸುವುದರ ಹಿಂದಿನ ಉದ್ದೇಶವನ್ನು ತೋರಿಸಲು ಯತ್ನಿಸಿದರು. 1931-1953ರಲ್ಲಿ ಇವರು ಮ್ಯಾಂಚೆಸ್ಟರಿನಲ್ಲಿ ಆಧುನಿಕ ಇತಿಹಾಸ ಪ್ರಾಧ್ಯಾಪಕರಾಗಿದ್ದರು. 1848: ದಿ ರೆವಲ್ಯೂಷನ್ ಆಫ್ ದಿ ಇಂಟೆಲೆಕ್ಚುಯಲ್ಸ್ (1946). ಡಿಪ್ಲೊಮ್ಯಾಟಿಕ್ ಪ್ರಿಲೂಡ್. 1938-39 (1948)-ಇವು ಇವರ ಎರಡು ಪ್ರಮುಖ ಕೃತಿಗಳು. ಇವರ ಸಂಪಾದಕತ್ವದಲ್ಲಿ ಪಾರ್ಲಿಮೆಂಟನ ಅಧಿಕೃತ ಇತಿಹಾಸ ರಚನೆಯ ಕಾರ್ಯಾ ಆರಂಭವಾಗಿ, ಇದರ ಮೊದಲನೆಯ ಭಾಗ (ದಿ ಹೌಸ್ ಆಫ್ ಕಾಮನ್ಸ್ 1745-90) 1964ರಲ್ಲಿ ಪ್ರಕಟವಾಯಿತು.

18ನೆಯ ಶತಮಾನದ ಪಾರ್ಲಿಮೆಂಟಿನ ಇತಿಹಾಸವನ್ನು ಇವರು ಕೇವಲ ಪಕ್ಷ ಮತ್ತು ತತ್ತ್ವಗಳ ದೃಷ್ಟಿಯಿಂದ ನೋಡದೆ ಅವುಗಳ ಪ್ರೇರಕಶಕ್ತಿಗಳನ್ನು ಅರಿಯಲು ಯತ್ನಿಸಿದರು. ಇವರು ಮಾನವಶಾಸ್ತ್ರದಿಂದ ಆಕರ್ಷಿತರಾಗಿದ್ದರು. ಇತಿಹಾಸದ ಮೂಲಭೂತ ಅಂಶ ಗುಂಪುಮನೋಭಾವ ಎಂಬುದಾಗಿ ಭಾವಿಸಿದರು. ಇವರ ವಿಚಾರಧಾರೆಗಳಿಂದ ಅನೇಕ ಮಂದಿ ಪ್ರಭಾವಿತರಾದರು. ಆದರೆ ಕೆಲವು ಇತಿಹಾಸಕಾರರು ಇವರ ವಿಧಾನವನ್ನು ವಿರೋಧಿಸಿದ್ದಾರೆ. ರಾಜಕಾರಣದ ಕಾರ್ಯವಿಧಾನಕ್ಕೆ ಇವರು ವಿಶೇಷ ಗಮನ ನೀಡಿ, ಇತಿಹಾಸ ಮತ್ತು ಸಮಾಜದಲ್ಲಿಯ ತರ್ಕದೂರವಾದ ಅಂಶಗಳತ್ತ ಗಮನಹರಿಸದೆ ಹೋದರೆಂದು ಅವರು ಆಕ್ಷೇಪಿಸಿದ್ದಾರೆ. ನೇಮಿಯರ್ 1948ರಲ್ಲಿ ಬ್ಯಾಲಿಯೋಲಿನ ಗೌರವ ಫೆಲೊ ಆದರು. 1952ರಲ್ಲಿ ಇವರಿಗೆ ನೈಟ್ ಪದವಿ ದೊರಕಿತು. ಸರ್ ಲೂಯಿಸ್ ಬರ್ನ್‍ಸ್ಟೀನ್ ನೇಮಿಯರ್ ತೀರಿಕೊಂಡದ್ದು 1960ರ ಆಗಸ್ಟ್ 19ರಂದು, ಲಂಡನ್ನಿನಲ್ಲಿ. (ಎಂ.ಜಿ.)