ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇಮೀ

ವಿಕಿಸೋರ್ಸ್ದಿಂದ

ನೇಮೀ - ಮಧ್ಯ ಇಟಲಿಯ ಲಾಟ್ನೀಯೋ ಪ್ರದೇಶದ ಒಂದು ಸರೋವರ ನಂದಿಹೋಗಿರುವ ಆಲ್ಬನ್ ಜ್ವಾಲಾಮುಖಿಯ ಕುಳಿಯ ಹೊರ ಸುತ್ತಿನಲ್ಲಿ, ರೋಮಿಗೆ 24 ಕಿಮೀ. ಈಶಾನ್ಯದಲ್ಲಿ ಉ.ಅ. 41ಂ43' ಮತ್ತು ಪೂ.ರೇ 12ಂ42' ಮೇಲೆ ಇದೆ. ಇದರ ಸುತ್ತಳತೆ ಸುಮಾರು 6 ಕಿಮೀ., ಆಳ ಸುಮಾರು 34 ಕಿಮೀ. ಈ ಸುಂದರ ಸರೋವರನ್ನು ಆಲ್ಬನ್ ಬೆಟ್ಟದ ರತ್ನ ಎಂದು ಕರೆಯುತ್ತಿದ್ದರು. ಲ್ಯಾಟಿನ್ ಕವಿಗಳು ಇದನ್ನು ಡಯಾನ ದೇವತೆಯ ಕನ್ನಡಿ ಎಂದು ಹಾಡಿದ್ದಾರೆ. ಇದರ ಈಶಾನ್ಯ ದಂಡೆಯ ಮೇಲೆ ನೇಮೀ ಗ್ರಾಮದ ಹತ್ತಿರ ಡಯಾನ ದೇವಾಲಯವಿತ್ತು. ಈ ದೇವತೆಗೆ ನರಬಲಿಯನ್ನು ಕೊಡಲಾಗುತ್ತಿತ್ತು. ಪೂಜಾರಿಯನ್ನು ಕಿಂಗ್ ಆಫ್ ದಿ ಗ್ರೋವ್ಸ್ (ತೋಪುಗಳ ರಾಜ) ಎಂದು ಕರೆಯುತ್ತಿದ್ದರು. ಇದು ಈ ಪ್ರದೇಶದ (ಲೇಷಿಯಮ್) ಅತ್ಯಂತ ಶ್ರೀಮಂತ ದೇವಾಲಯಗಳಲ್ಲೊಂದಾಗಿತ್ತು. ಇದರಿಂದ ಕ್ರಿ.ಪೂ. 31ರಲ್ಲಿ ಆಕ್ಟೇವಿಯನ್ ಸಾಲ ಪಡೆದಿದ್ದ.

ಸರೋವರದ ಪಶ್ಚಿಮ ಭಾಗದಲ್ಲಿ ಎರಡು ಹಡುಗುಗಳು ಮುಳುಗಿ ಹೋಗಿದ್ದುದು ಬಹುಕಾಲದಿಂದಲೂ ತಿಳಿದಿತ್ತು 1895ರಲ್ಲಿ ಅವುಗಳಿಂದ ಅನೇಕ ಅಮೂಲ್ಯ ವಸ್ತುಗಳನ್ನು ಹೊರದೆಗೆಯಲಾಯಿತು. 1920ರಲ್ಲಿ ಈ ಸರೋವರದ ನೀರಿನ ಮಟ್ಟವನ್ನು ಇಳಿಸಿದಾಗ ಆ ಹಡಗುಗಳು ಕಂಡುವು. ಅವು ರೋಮನ್ ಸಾಮ್ರಜ್ಯದ ಕಾಲದವು. ಅವುಗಳಿಂದ ತೆಗೆಯಲಾದ ಅನೇಕ ವಸ್ತುಗಳನ್ನು ರೋಮಿನ ವಸ್ತುಸಂಗ್ರಹಾಲಯಲ್ಲಿ ಇಡಲಾಗಿದೆ. ಎರಡನೆಯ ಮಹಾಯುದ್ಧದಲ್ಲಿ ಹಿಮ್ಮೆಟ್ಟುತ್ತಿದ್ದ ಜರ್ಮನರು 1944ರ ಮೇ 31ರಂದು ಆ ಹಡುಗಳನ್ನು ಸುಟ್ಟುಹಾಕಿದರು. (ಜಿ.ಕೆಯು.)