ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇರಳೆ

ವಿಕಿಸೋರ್ಸ್ದಿಂದ

ನೇರಳೆ ಮಿರ್ಟೇಸೀ ಕುಟುಂಬಕ್ಕೆ ಸೇರಿದ ಒಂದು ಬೃಹತ್‍ವೃಕ್ಷ. (ಬ್ಲ್ಯಾಕ್ ಪ್ಲಮ್). ವೈಜ್ಞಾನಿಕ ಹೆಸರು ಸಿಜೀಜಿಯಮ್ ಕ್ಯೂಮಿನೈ ಅಥವಾ ಯೂಜಿನಿಯ ಜಾಂಬೊಲೇನ. ಜಂಬುನೇರಳೆ ಪರ್ಯಾಯನಾಮ. ಭಾರತ, ಬರ್ಮ, ಶ್ರೀಲಂಕಾ, ಆಸ್ಟ್ರೇಲಿಯದ ದಕ್ಷಿಣ ಪ್ರಾಂತ್ಯಗಳಲ್ಲೆಲ್ಲ ಇದನ್ನು ಕಾಣಬಹುದು. ಭಾರತದಲ್ಲಿ ಹಿಮಾಲಯ ಪರ್ವತ ಪ್ರದೇಶಗಳಿಂದ ಹಿಡಿದು ದಕ್ಷಿಣ ಭಾರತದವರೆಗೂ ಬೆಂಗಾಡುಗಳನ್ನುಳಿದು ಬಯಲು ಹಾಗೂ 2,000 ಮೀ. ಎತ್ತರ ಮೀರದ ಬೆಟ್ಟ ಸೀಮೆಗಳಲ್ಲಿ ಇದರ ಬೆಳೆ ಇದೆ. ಇದು ಪ್ರಮುಖವಾಗಿ ತೇವಪೂರಿತ ಪರ್ಣಪಾತಿ ಮರಗಳ ಕಾಡುಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣದ ಮರ. ನೀರಿನ ಕಾಲುವೆಗಳ ಅಂಚುಗಳಲ್ಲಿಯೂ ಸಾಮಾನ್ಯವಾಗಿ ಬೆಳೆಯುತ್ತದೆ. ಅಲ್ಲದೆ ಇದರ ಹಣ್ಣುಗಳಿಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳನ್ನಾಗಿ ನೆಡುತ್ತಾರೆ. ಕರಾವಳಿ ಪ್ರದೇಶಗಳ ಮರಳಿನಲ್ಲೂ ಬೆಳೆಸುವುದಿದೆ.

ನೇರಳೆಹಣ್ಣಿನ ಮರ 10-20 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಉದ್ದ 8 ರಿಂದ 20 ಸೆಂಮೀ. ಎಲೆಯ ಅಂಚು ಅಖಂಡ; ಮೇಲ್ಮೈ ನಯವಾಗಿದ್ದು ಹೊಳೆಯುತ್ತದೆ. ಹೂಗೊಂಚಲು ಮಧ್ಯಾರಂಭಿ ಮಾದರಿಯದು. ಹೂಗಳು ಚಿಕ್ಕವು, ಮಾಸಲು ಬಿಳಿ ಬಣ್ಣದವು. ಪುಷ್ಪಪಾತ್ರೆ ಆಲಿಕೆಯಾಕಾರದ್ದು. ಪುಷ್ಪ ಪತ್ರಗಳ ಸಂಖ್ಯೆ 4 ರಿಂದ 5. ಪುಷ್ಪದಳಗಳ ಸಂಖ್ಯೆಯೂ 4 ಅಥವಾ 5 ಇವೆಲ್ಲವೂ ಒಟ್ಟು ಸೇರಿ ಟೋಪಿಯಾಕಾರದ ರಚನೆಯಾಗಿ ಹೂ ಅರಳುವಾಗ ಕೆಳಕ್ಕೆ ಬೀಳುತ್ತದೆ. ಕೇಸರಗಳು ಅನೇಕ; ಬಿಡಿಬಿಡಿಂiÀೂಗಿವೆ. ಮೊಗ್ಗಿನಲ್ಲಿ ಕೇಸರದಂಡಗಳೆಲ್ಲ ಒಳಕ್ಕೆ ಬಾಗಿರುತ್ತದೆ. ಅಂಡಾಶಯ ಎರಡು ಕೋಣೆಗಳುಳ್ಳದ್ದು. ಫಲ ಒಂದೇ ಬೀಜವುಳ್ಳ ಬೆರಿ ಮಾದರಿಯದು. ಕಾಯಿಗಳು ಹಸಿರು ಬಣ್ಣದವು. ಮಾಗುತ್ತ ಬಂದಂತೆ ನೇರಳೆ ಬಣ್ಣಕ್ಕೆ ತಿರುಗುವವು. ಹಣ್ಣನ್ನು ತಿಂದ ಕೆಲವು ಗಂಟೆಗಳವರೆಗೆ ನೇರಳೆ ಬಣ್ಣ ನಾಲಗೆಯಲ್ಲಿ ಉಳಿದಿರುತ್ತದೆ.

ನೇರಳೆಹಣ್ಣಿನ ತೊಗಟೆ, ಹಣ್ಣು ಮತ್ತು ಬೀಜಗಳಿಗೆ ಔಷಧೀಯ ಪ್ರಾಮುಖ್ಯವುಂಟು. ತೊಗಟೆ ಪ್ರತಿಬಂಧಕ ಗುಣವುಳ್ಳದ್ದು. ಇದರ ರಸವನ್ನು ದೀರ್ಘಾವಧಿಯ ಅತಿಸಾರ ಮತ್ತು ಆಮಶಂಕೆಗೆ ಔಷಧಿಯನ್ನಾಗಿ ಉಪಯೋಗಿಸುತ್ತಾರೆ. ತೊಗಟೆಯ ಚೂರ್ಣವನ್ನು ಮೊಸರಿನಲ್ಲಿ ಬೆರೆಸಿ ಅತಿಋತುಸ್ರಾವಕ್ಕೆ ಕೊಡುವುದಿದೆ. ವಸಡುಗಳು ಊದಿದ್ದರೆ ಬಾಯಿ ಹುಣ್ಣಾಗಿದ್ದರೆ ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸುವುದುಂಟು. ಗಂಟಲು ನೋವು, ಬ್ರಾಂಕೈಟಿಸ್, ಗೂರಲು, ಉಬ್ಬಸ ಕಾಯಿಲೆಗಳಲ್ಲೂ ನೇರಳೆಹಣ್ಣಿನ ಉಪಯೋಗ ಇದೆ. ಇದು ರಕ್ತ ಶುದ್ಧಿಕಾರಕವೂ ಹೌದು. ಚೆನ್ನಾಗಿ ಮಾಗಿದ ಹಣ್ಣು ಪ್ರತಿಬಂಧಕ ಮತ್ತು ಜಠರೋತ್ತೇಜಕ. ಅಂತೆಯೇ ಪಚನಕಾರಿ ಮತ್ತು ಮೂತ್ರಸ್ರಾವ ಉತ್ತೇಜಕವೂ ಹೌದು. ಅತಿಸಾರ ಮತ್ತು ಗುಲ್ಮದ ಊತಕ್ಕೆ ಹಣ್ಣಿನ ರಸ ಒಳ್ಳೆಯ ಔಷಧಿ. ನೇರಳೆಹಣ್ಣಿನ ರಸ ಒಂದು ಮಧುರವಾದ ತಂಪು ಪಾನೀಯ. ಬೀಜಗಳನ್ನು ಸಿಹಿಮೂತ್ರ ರೋಗಿಗಳು ಉಪಯೋಗಿಸಿದರೆ ಸಕ್ಕರೆಯ ಪ್ರಮಾಣ ಬೇಗನೆ ಕಡಿಮೆಯಾಗುತ್ತದೆ. (ಎಸ್.ಡಿ.ಕೆ.; ಎಂ.ಎಚ್.ಎಂ.) ಪರಿಷ್ಕರಣೆ : ಹರೀಶ್ ಭಟ್