ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಜೀರಿಯ

ವಿಕಿಸೋರ್ಸ್ದಿಂದ

ನೈಜೀರಿಯ - ಪಶ್ಚಿಮ ಆಫ್ರಿಕದಲ್ಲಿರುವ ಒಂದು ಗಣರಾಜ್ಯ. ನೈಜೀರಿಯ ಸಂಯುಕ್ತ ಗಣರಾಜ್ಯ. ನೈಜೀರಿಯ ಸಂಯುಕ್ತ ಗಣರಾಜ್ಯ ಎಂಬುದು ಇದರ ಅಧಿಕೃತ ಹೆಸರು. ಇದರ ಉತ್ತರ ಮತ್ತು ವಾಯವ್ಯದಲ್ಲಿ ನೈಜರ್ ಗಣರಾಜ್ಯ, ಈಶಾನ್ಯದಲ್ಲಿ ಚಾಡ್ ಸರೋವರ, ಪೂರ್ವದಲ್ಲಿ ಕ್ಯಾಮೆರೂನ್ ಗಣರಾಜ್ಯ, ದಕ್ಷಿಣದಲ್ಲಿ ಗಿನೀಖಾರಿ, ಪಶ್ಷಿಮದಲ್ಲಿ ದಹೋಮೇ ಗಣರಾಜ್ಯ ಇವೆ. ಇದು ಆಫ್ರಿಕದಲ್ಲಿ 13ನೆಯ ಅತಿ ದೊಡ್ಡ ದೇಶ. ಸ್ಥೂಲವಾಗಿ ಉ.ಅ.4(-14( ಮತ್ತು ಪೂ.ರೇ. 3(-14( ನಡುವೆ ದಕ್ಷಿಣೋತ್ತರವಾಗಿ ಸುಮಾರು 1,050ಕಿಮೀ. ಮತ್ತು ಪೂರ್ವ ಪಶ್ಚಿಮವಾಗಿ ಸು.1,120ಕಿಮೀ. ಹಬ್ಬಿರುವ ಈ ದೇಶದ ದಕ್ಷಿಣ ಕರಾವಳಿಯ ಉದ್ದ ಸು.800ಕಿಮೀ. ನೈಜೀರಿಯದ ವಿಸ್ತಿರ್ಣ 9,23,773ಚ.ಕಿ.ಮೀ. ಜನಸಂಖ್ಯೆ ಸುಮಾರು 6,78,28,000(1971 ಅಂ.) ಆಫ್ರಿಕದ ದೇಶಗಳ ಪೈಕಿ ಅತಿ ಹೆಚ್ಚಿನ ಜನಸಂಖ್ಯೆ ಇರುವ ದೇಶ ಇದು. ರಾಜಧಾನಿ ಲೇಗಾಸ್. (ವಿ.ಜಿ.ಕೆ.)

ಭೌತಿಕ ಭೂವಿವರಣೆ

ಭೂವಿಜ್ಞಾನ: ನೈಜೀರಿಯದ ಶಿಲಾಸ್ತೋಮಗಳನ್ನು ಪ್ರೀಕೇಂಬ್ರಿಯನ್ ಕ್ರಿಟೇಷಿಯಸ್ ಮತ್ತು ಟರ್ಷಯರಿ ಕಲ್ಪದಲ್ಲಿ ಸೇರಿಸಬಹುದು. ಪ್ರೀಕೆಂಬ್ರಿಯನ್ ಶಿಲಾಸ್ತೋಮ ನೈಜೀರಿಯದ ಬಹುಭಾಗವನ್ನು ಆಕ್ರಮಿಸುತ್ತದೆ. ಇದರಲ್ಲಿ ನೈಸ್ ಮಿಗ್ಮಟೈಟ್, ಬೆಸಾಲ್ಟ್ ಮತ್ತು ಗ್ರಾನೈಟ್ ಶಿಲೆಗಳಿವೆ. ಆಗ್ನೇಯ ನೈಜೀರಿಯದಲ್ಲಿ ಇವನ್ನು ಕಾಣಬಹುದು. ಶಾಖ ಮತ್ತು ಒತ್ತಡಗಳಿಂದ ಈ ಶಿಲೆಗಳು ರೊಪಾಂತರಗೊಂಡಿವೆ. ಪ್ರಮುಖವಾಗಿ ಇವು ಮಲ್ಲಮ್ ಟಾಂಕೊ, ಸಾಂಡೊ ಮತ್ತು ಮಾಯಿಕಾವೋಂಗ್ ಪ್ರದೇಶಗಳಲ್ಲಿ ಸ್ಫುಟವಾಗಿ ಹೊರಹೊಮ್ಮಿದೆ. ಕ್ರಟೇಷಸ್ ಮತ್ತು ಟರ್ಷಿಯರಿ ಯುಗದ ಶಿಲೆಗಳಲ್ಲಿ ಜಲಶಿಲೆಗಳು ಮತ್ತು ಲಾವಾರಸ ಘನೀಭವಿಸಿದುದರಿಂದ ಆದ ಶಿಲೆಗಳು ಸೇರಿವೆ. ಪ್ರೀಕೇಂಬ್ರಿಯನ್ ಶಿಲೆಗಳಿಗೆ ಹೋಲಿಸಿದರೆ ಕ್ರಿಟೇಷನ್ ಹಾಗೂ ಟರ್ಷಿಯರಿ ಯುಗದ ಶಲೆಗಳು ವಿರಳವಾಗಿದ್ದು ಹಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಪ್ರೀಕೇಂಬ್ರಿಯನ್ ಶಿಲೆಗಳಲ್ಲಿ ತವರ ಮತ್ತು ಕೊಲಂಬೈಟ್ ಹೇರಳವಾಗಿ ದೊರಕುತ್ತವೆ. ಟರ್ಷಿಯರಿ ಯುಗದ ಜಲಜ ಶಲೆಗಳಲ್ಲಿ ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಹಾಗೂ ಕಲ್ಲಿದ್ದಲ ನಿಕ್ಷೇಪಗಳು ಬೀಳುವ ಅರಣ್ಯ ಪ್ರದೇಶದ ಮಣ್ಣು ಹಾಗೂ ತೀರ ಪ್ರದೇಶದ ಲ್ಯಾಟರೈಟ್ ಮಣ್ಣು ಫಲವತ್ತಾಗಿವೆ. (ಟಿ.ಆರ್.ಎಸ್.ಎಂ.)

ಮೇಲ್ಮೈ ಲಕ್ಷಣ: ನೈಜೀರಿಯ ದಕ್ಷಿಣದ ಕರಾವಳಿಯ ಉದ್ದಕ್ಕೂ 16-96ಕಿಮೀ. ಅಗಲದ ತಗ್ಗಾದ ನೆಲವಿದೆ. ಜವುಗಿನಿಂದ ಕೂಡಿದ ಈ ಪ್ರದೇಶ ಗುಲ್ಮ ವೃಕ್ಷಗಳಿಂದ ಆವೃತವಾದ್ದು. ನೈಜರ್ ನದಿಯ ಮುಖಜಭೂಮಿಯ ಕವಲುಗಳೂ ಇತರ ಹಲವಾರು ಸಣ್ಣ ನದಿಗಳೂ ಕೊರಕಲುಗಳೂ ಇದನ್ನು ಅಲ್ಲಲ್ಲಿ ಕತ್ತರಿಸುತ್ತವೆ. ಈ ನೆಲದ ಉತ್ತರಕ್ಕೆ 80-160ಕಿಮೀ. ಅಗಲದ ಪ್ರದೇಶ ಅಲೆಯಲೆಯಾಗಿ ಏರಿ ತಗ್ಗುವ ನೆಲ. ಇಲ್ಲಿ ಉಷ್ಣವಲಯದ ಮಳೆಗಾಡುಗಳಿವೆ. ಇದರಿಂದಾಚೆಗೆ ನೆಲ ಏರುತ್ತ ಹೋಗುತ್ತದೆ. ಈ ಪ್ರದೇಶದ ಸರಾಸರಿ ಎತ್ತರ 610ಮೀ. ಆದರೆ ಪೂರ್ವದಲ್ಲಿ ಇದು ಸುಮಾರು 1.829ಮೀ. ವರೆಗೂ ಏರುತ್ತದೆ. ಇಲ್ಲಿಯ ಸಸ್ಯ ಸವಾನಾ ಹುಲ್ಲುಗಾಡಾಗಿ ವ್ಯತ್ಯಾಸ ಹೊಂದುತ್ತದೆ. ಉತ್ತರದಲ್ಲಿ ಸಹರಾಮರುಭೂಮಿಯ ದಕ್ಷಿಣದ ಅಂಚಿನ ವರೆಗೂ ನೈಜೀರಿಯ ಹಬ್ಬಿದೆ.

ನೈಜೀರಿಯ ಮುಖ್ಯನದಿ ನೈಜರ್. ಇದು ಆಫ್ರಿಕದ ಮೂರನೆಯ ದೊಡ್ಡ ನದಿ. ಇದು ಈಶಾನ್ಯ ಭಾಗದಲ್ಲಿ ನೈಜೀರಿಯವನ್ನು ಪ್ರವೇಶಿಸಿ ದಕ್ಷಿಣಾಭಿಮುಖವಾಗಿ ಹರಿದು, ತನ್ನ ಮುಖ್ಯ ಉಪನದಿಯಾದ ಬೇನ್ವೇಯನ್ನು ಲಕೋಜ ಪಟ್ಟಣದ ಬಳಿ ಕೂಡಿ ಕೊಂಡು ದಕ್ಷಿಣ ದಿಕ್ಕಿನಲ್ಲಿ ಮುಂದುವರಿದು ಮುಖಜಭೂಮಿಯಲ್ಲಿ ಹಲವಾರು ಕವಲುಗಳಾಗಿ ಒಡೆದು ಗಿನೀಖಾರಿಯಲ್ಲಿ ಸಮುದ್ರವನ್ನು ಸೇರುತ್ತದೆ. ನೈಜರ್‍ನ ಇತರ ಮುಖ್ಯ ಉಪನದಿಗಳು ಸೋಕಟೋ ಮತ್ತು ಕಡೂನ. ನೈಜರ್ ನದಿಯ ಜಲಾನಯನ ಭೂಮಿ ದಕ್ಷಿಣದ ಕಡೆಗೆ ಇಳಿಜಾರಾಗಿದೆ, ಮಧ್ಯದ ಪ್ರಸ್ಥಭೂಮಿಯಿಂದ ಉತ್ತರ ಮತ್ತು ಪೂರ್ವದ ಕಡೆಗೆ ಹರಿಯುವ ನದಿಗಳು ಚಾಡ್ ಸರೋವರವನ್ನು ಸೇರುತ್ತವೆ.

ವಾಯುಗುಣ: ನೈಜೀರಿಯ ಸಂಪೂರ್ಣವಾಗಿ ಉಷ್ಣವಲಯದಲ್ಲಿದ್ದರೂ ಅಲ್ಲಿಯ ವಿವಿಧ ಪ್ರದೇಶಗಳ ವಾಯುಗುಣದಲ್ಲಿ ವ್ಯತ್ಯಾಸಗಳಿವೆ. ಸಮುದ್ರತೀರದ ಬಳಿ ಋತುಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. 32(ಛಿ ಗಿಂತ ಹೆಚ್ಚಿನ ಉಷ್ಣತೆ ಬಲು ಅಪರೂಪ. ಆದರೆ ವಾತಾವರಣದಲ್ಲಿ ತೇವ ಹೆಚ್ಚಾಗಿರುತ್ತದೆ. ರಾತ್ರಿ ಹೆಚ್ಚು ಸೆಕೆ. ಒಳನಾಡಿನಲ್ಲಿ ಏಪ್ರಿಲ್‍ನಿಂದ ಅಕ್ಟೋಬರ್ ವರೆಗೆ ಮಳೆಗಾಲ. ಆಗ ಉಷ್ಣತೆ ಕಡಿಮೆ ಇರುತ್ತವೆ. ನವೆಂಬರಿನಿಂದ ಮಾರ್ಚವರೆಗೆ ಶುಷ್ಕ ಹವೆ ಇರುತ್ತದೆ. ನಡುಹಗಲಿನ ಉಷ್ಣತೆ 38(ಛಿನ್ನೂ ಮೀರುವುದುಂಟು. ಆದರೆ ರಾತ್ರಿ ತಂಪಾಗಿರುತ್ತದೆ. ಜಾಸ್ ಪ್ರಸ್ಥಭೂಮಿಯ ಮೇಲೆ ಉಷ್ಣತೆ ಸಾಮಾನ್ಯವಾಗಿ ಹದವಾಗಿರುತ್ತದೆ.

ಕರಾವಳಿಯಲ್ಲಿಯ ಸರಾಸರಿ ಮಳೆ ಪಶ್ಚಿಮದಲ್ಲಿ 1,778 ಮಿಮೀ. ಗಳಿಂದ ಪೂರ್ವದ ಕೆಲವು ಭಾಗಗಳಲ್ಲಿ 4,318ಮಿಮೀ. ವರೆಗೆ ವ್ಯತ್ಯಾಸವಾಗುತ್ತದೆ; ಮಧ್ಯನೈಜೀರಿಯದಲ್ಲಿ 1,270ಮಿಮೀ.ಗಳಿಗೂ ಅತ್ಯಂತ ಉತ್ತರದಲ್ಲಿ 1,270ಮಿಮೀ. ಗಳಿಗೂ ಕಡಿಮೆಯಾಗುತ್ತದೆ.

ನೈಜೀರಿಯದ ಮೇಲೆ ಪ್ರಭಾವ ಬೀರುವ ಮಾರುತಗಳು ಎರಡು. ಈಶಾನ್ಯದಿಂದ ಬೀಸುವ ಮಾರುತ ಬಿಸಿಯಾಗಿಯೂ ಶುಷ್ಕವಾಗಿಯೂ ಇರುತ್ತದೆ. ಇದು ಮರುಭೂಮಿಯಿಂದ ಕೆಂಪನೆಯ ದೂಳನ್ನು ಹೊತ್ತು ತರುತ್ತದೆ. ಇದರಿಂದ ಹಗಲು ಬಿಸಿ ಹೆಚ್ಚು ; ರಾತ್ರಿ ತಂಪಾಗಿರುತ್ತದೆ. ನೈಋತ್ಯದಿಂದ ಬೀಸುವ ಮಾರುತ ಮೋಡದಿಂದ ಕೂಡಿದ್ದು ಮಳೆ ಸುರಿಸುತ್ತದೆ. ಸಸ್ಯಪ್ರಾಣಿವರ್ಗ: ನೈಜೀರಿಯದ ವಾಯುಗುಣವಿಭಾಗಗಳಿಗೆ ಅನುಗುಣವಾಗಿ ಅಲ್ಲಿಯ ಸಸ್ಯವರ್ಗದ ವಿಂಗಡಣೆಯಾಗಿದೆ. ಜವುಗಿನಲ್ಲೂ ಅಧಿಕ ಮಳೆಯಾಗುವಲ್ಲೂ ಬೆಳೆಯುವ ಸಸ್ಯಗಳು ಒಂದು ವಿಧ. ಸವಾನ ಹುಲ್ಲುಗಾಡು ಇನ್ನೊಂದು ಬಗ್ಗೆ. ಕರಾವಳಿಯಲ್ಲಿ ಗುಲ್ಮವೃಕ್ಷಗಳು ಬೆಳೆಯುತ್ತವೆ. ಸ್ವಲ್ಪ ಹಿಂಬದಿಗೆ ಹೆಚ್ಚು ತೇವದಲ್ಲಿ ತಾಳೆ, ಅಬೂರ ಮತ್ತು ಮಹಾಗನಿ ಮರಗಳ ಕಾಡುಗಳಿವೆ. ಇದಕ್ಕೂ ಉತ್ತರದಲ್ಲಿ ಮಳೆಗಾಡುಗಳಿವೆ. ಇವುಗಳದು ಸುಮಾರು 128ಕಿಮೀ. ಅಗಲದ ಒಂದು ಪಟ್ಟೆ. ಇಲ್ಲಿ ಸುಮಾರು 60ಮೀ. ಗಳಷ್ಟು ಎತ್ತರಕ್ಕೆ ಬೆಳೆಯುವ ಮರಗಳುಂಟು. ಆಫ್ರಿಕದ ಮಹಾಗನಿ, ಇರೋಕೊ, ಆಫ್ರಿಕದ ಅಕ್ರೋಟು ಇವು ಇಲ್ಲಿಯ ಮುಖ್ಯ ಮರಗಳು. ಇನ್ನೂ ಒಳಗಿನ ಪ್ರದೇಶದಲ್ಲಿ ಎತ್ತರದ ಹುಲ್ಲೂಕುಳ್ಳಾದ ಪರ್ಣಪಾತಿ ಮರಗಳೂ ಇವೆ. ಇದು ಸವಾನಾ ಹುಲ್ಲುಗಾಡು ಪ್ರದೇಶ.


ಮಳೆಗಾಡಿನ ಪ್ರದೇಶದಲ್ಲಿ ದೊಡ್ಡ ಮೃಗಗಳಿಲ್ಲ. ಗೊರಿಲ್ಲಾ, ಚಿಂಪಾಂಜಿ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಬಬೂನ್, ಕೋತಿ ಇವೂ ಹೆಚ್ಚು ಸಂಖ್ಯೆಗಳಲ್ಲಿಲ್ಲ. ಮೊಸಳೆ, ಹಲ್ಲಿ, ಹಾವು ಮುಂತಾದ ಸರೀಸೃಪಗಳು ಅಧಿಕವಾಗಿವೆ. ಅನೇಕ ಬಗೆಯ ಚಿಗರಿಗಳು ಇವೆ. ನೀರಾನೆ, ಆನೆ, ಜಿರಾಫೆ, ಸಿಂಹ-ಇವು ಅಲ್ಲಲ್ಲಿ ಇವೆ. ಇವುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಚಿರತೆ, ಕಿರುಬ, ಕಾಡುಬೆಕ್ಕು ಹೆಚ್ಚು ಸಾಮಾನ್ಯ. ನೈಜೀರಿಯದಲ್ಲಿ ಪಕ್ಷಿಗಳು ಹೆಚ್ಚಾಗಿವೆ.

ಜನಜೀವನ

ಜನ - ಇಲ್ಲಿಯ ಪ್ರಧಾನ ಬುಡಕಟ್ಟು ಪಶ್ಚಿಮ ಆಫ್ರಿಕದ ನೀಗ್ರೋ. ಇತರ ಬುಡಕಟ್ಟುಗಳೊಂದಿಗೆ ನೀಗ್ರೋಗಳ ಸಾಂಕರ್ಯವಾಗಿದ್ದಾಗ್ಯೂ ನೀಗ್ರೋ ಲಕ್ಷಣಗಳೇ ವಿಶೇಷವಾಗಿ ಕಂಡುಬರುತ್ತವೆ. ಆಗ್ನೇಯ ಅರಣ್ಯಪ್ರದೇಶದಲ್ಲಿ ಶುದ್ದ ನೀಗ್ರೋ ಬುಡಕಟ್ಟನ್ನು ಕಾಣಬಹುದು. ಆದರೆ ನೈಜೀರಿಯದ ಬಹುಭಾಗದ ಜನರದು ನೀಗ್ರೋ ಮೂಲಲಕ್ಷಣವಾಗಿದೆ. ಮೆಡಿಟರೇನಿಯನ್ ಮೂಲದ ಫುಲಾನಿ ಎಂಬುದು ನೀಗ್ರೇತರ ಬುಡಕಟ್ಟು. ಈ ಬುಡಕಟ್ಟಿನವರು ಉತ್ತರದಲ್ಲಿ ಹರಡಿದ್ದಾರಾದರೂ ನೀಗ್ರೋಗಳೊಂದಿಗೆ ಬೆರೆತುಹೋಗಿದ್ದಾರೆ. ಸೆಮೆಟಿಕ್ ಷುವಾ ಅರಬರದು ಇನ್ನೊಂದು ಬುಡಕಟ್ಟು. ಇವರು ಈಶಾನ್ಯ ತುದಿಯಲ್ಲಿ ಚಾಡ್ ಸರೋವರದ ಪ್ರದೇಶಕ್ಕೆ ಸೀಮಿತಗೊಂಡಿದ್ದಾರೆ.

ಜನಾಂಗೀಯವಾಗಿ ಇಲ್ಲಿಯ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಪಶ್ಚಿಮದ ಮತ್ತು ಮಧ್ಯಪಶ್ಚಿಮದ ರಾಜ್ಯಗಳಲ್ಲಿ ಯೆರುಬಗಳು ಪ್ರಧಾನ. ಇಬೊಗಳು ಹಿಂದೆ ದೇಶಾದ್ಯಂತ ಇದ್ದರು. ಈಗ ಇವರು ಆಗ್ನೇಯ ಮತ್ತು ಪೂರ್ವಮಧ್ಯ ರಾಜ್ಯಗಳಲ್ಲಿದ್ದಾರೆ. ವಾಯುವ್ಯ, ಉತ್ತರಮಧ್ಯ, ಈಶಾನ್ಯರಾಜ್ಯಗಳಲ್ಲೂ ಕ್ವಾರ, ಕಾನೋ ಮತ್ತು ಬೇನ್ವೇ-ಪ್ಲೇಟೋ ರಾಜ್ಯಗಳಲ್ಲೂ ಇರುವ ಗುಂಪು ಹಾವುಸಗಳದು. ಇತರ ಗುಂಪುಗಳು ಇಡೊ, ಇಬಿಬಿಯೊ, ಇಜಾವ್, ಪುಲಾನಿ, ಕಾವೂರಿ, ನುಪೆ ಮತ್ತು ಟಿವ್. ನೈಜೀರಿಯದಲ್ಲಿರುವ 250 ಭಾಷಾಗುಂಪುಗಳ ಪೈಕಿ 14ನ್ನು ಬಿಟ್ಟು ಉಳಿದವೆಲ್ಲ ಉತ್ತರದಲ್ಲಿವೆ.

ಭಾಷೆ: ನೈಜೀರಿಯದ ಅಧಿಕೃತ ಭಾಷೆ ಇಂಗ್ಲಿಷ್. 250 ದೇಶಿಯ ನುಡಿಗಳಲ್ಲಿ ಹಾವುಸ ಪ್ರಧಾನ. ಇದು ಉತ್ತರ ನೈಜೀರಿಯದ ಸೇ. 40ಕ್ಕಿಂತ ಹೆಚ್ಚಿನ ಜನರ ತಾಯಿನುಡಿ. ಅಲ್ಲಿ ಇದೂ ಅಧಿಕೃತಿ ಭಾಷೆ.

ಧರ್ಮ: ರಾಜ್ಯದ ಆರು ಉತ್ತರ ರಾಜ್ಯಗಳಲ್ಲಿಯ ಜನರ ಮೂರನೆಯ ಎರಡಷ್ಟು ಮಂದಿ ಮುಸ್ಲಿಮರು. ಲೇಗಾಸ್, ಮಧ್ಯ ಪಶ್ಚಿಮ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಕ್ರೈಸ್ತರೂ ಮೂಸ್ಲಿಮರೂ ಸರ್ವಚೇತನವಾದಿಗಳೂ ಹೆಚ್ಚು ಕಡಿಮೆ ಸಮಸಮವಾಗಿ ಇದ್ದಾರೆ. ಪೂರ್ವ ಮಧ್ಯ. ಆಗ್ನೇಯ ಮತ್ತು ರಿವರ್ಸ್ ರಾಜ್ಯಗಳಲ್ಲಿ ಮುಸ್ಲಿಮರು, ಪ್ರಧಾನ. ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಸೇ. 44ರಷ್ಟು ಮಂದಿ ಕ್ರೈಸ್ತರು ಸೇ,22 ಕ್ರೈಸ್ತರು, ಉಳಿದವರು ಸರ್ವಚೇತನವಾದಿಗಳು. (ವಿ.ಜಿ.ಕೆ.)

ಇತಿಹಾಸ

ರಾಜ್ಯಕ್ಕೆ ಅದರ ಪ್ರಧಾನ ನದಿ ನೈಜರ್‍ನಿಂದ ನೈಜೀರಿಯ ಎಂಬ ಹೆಸರು ಬಂದಿದೆ. ರಾಜ್ಯದ ಆದಿವಾಸಿಗಳು ಸಹಾರಾ ಮರುಭೂಮಿಯನ್ನು ದಾಟಿ ವಲಸೆ ಬಂದವರು. ಉತ್ತರ ನೈಜೀರಿಯಕ್ಕೆ ಕಾರವಾನ್ ದಾರಿಗಳ ಮೂಲಕ ಈಜಿಪ್ಟ್ ಮತ್ತು ಅರಬ್ಬಿ ರಾಜ್ಯಗಳೊಂದಿಗೆ ವ್ಯಾಪಾರ ಹಾಗೂ ಸಾಂಸ್ಕøತಿಕ ಸಂಪರ್ಕವಿತ್ತು. ಇದರಿಂದ ಇಸ್ಲಾಂ ಮತಪ್ರಚಾರವಾಯಿತು. ರಾಜ್ಯದ ಪಶ್ಚಿಮದ ಕಡೆಯ ಹಾವುಸ ಬಣರಾಜ್ಯಗಳು ಹಾಗೂ ದಕ್ಷಿಣದ ಯೊರುಬ ರಾಜ್ಯ ಬಹಳ ಪ್ರಾಚೀನವಾದವು. ಯೊರುಬದ ಬೆನಿನ್ ಪ್ರದೇಶಕ್ಕೆ ಪೋರ್ಚುಗೀಸರು 1489ರಲ್ಲೂ ಇಂಗ್ಲಿಷರು 1553ರಲ್ಲೂ ಬಂದು ನೆಲೆಸಿದರು. 17 ಮತ್ತು 18ನೆಯ ಶತಮಾನಗಳಲ್ಲಿ ನೈಜಿರೀಯಾದ ಮುಖ್ಯ ಘಟನೆಗಳೆಂದರೆ ಯುದ್ಧ, ರಾಜಕೀಯ ಜಗಳ, ಕ್ಷಾಮ ಮತ್ತು ಗುಲಾಮರ ಮಾರಾಟ. ಆ ವೇಳೆಗೆ ನೈಜೀರಿಯದ ಬಗ್ಗೆ ಬ್ರಿಟಿಷರ ಆಸಕ್ತಿ ಹೆಚ್ಚಿತು. ವ್ಯಾಪಾರದ ಉದ್ದೇಶದಿಂದ ಇಲ್ಲಿ ಭೂಪರಿಶೋಧನೆ ನೆಡೆಯಿತು. ಮುಂಗೋಪಾರ್ಕ 1796ರಲ್ಲಿ ನೈಜರ್ ನದಿಯನ್ನು ತಲುಪಿದ: ಕ್ಲ್ಯಾಪರ್‍ಸನ್ 1823ರಲ್ಲಿ ಸೋಕೋಟೋ ಪ್ರಾಂತ್ಯವನ್ನು ಪರಿಶೋಧಿಸಿದ. ರಿಚರ್ಡ ಮತ್ತು ಜಾನ್ ಲ್ಯಾಂಡರ್ ನೈಜರ್ ನದಿಯ ಉಗಮ ಸ್ಥಾನವನ್ನು ಕಂಡುಹಿಡಿದರು (1830). 1807ರಲ್ಲಿ ಬ್ರಿಟಿಷರು ಗುಲಾಮರ ಮಾರಾಟವನ್ನು ನಿಷೇಧಿಸಿದ್ದರಿಂದ ಭೂಪರಿಶೋಧನೆ ಹಾಗೂ ವ್ಯಾಪಾರಕ್ಕೆ ಅನುಕೂಲವಾಯಿತು. 19ನೆಯ ಶತಮಾನದ ಮಧ್ಯದ ಹೊತ್ತಿಗೆ ಕ್ರೈಸ್ತಮತ ಪ್ರಚಾರಕರು ಇಲ್ಲಿ ಪ್ರಚಾರಕಾರ್ಯನಿರತರಾದರು. ಈ ಮಧ್ಯೆ ನೈಲ್ ನದಿಯ ಉತ್ತರ ಭಾಗದ ಫುಲಾನಿ ಬಣ ನೈಜೀರಿಯಾದ ಹಾವುಸ ಬಣರಾಜ್ಯಗಳ ಮೇಲೆ ದಾಳಿ ನಡೆಸಿ ಭೂಮಿಯನ್ನು ಆಕ್ರಮಿಸಿಕೊಂಡಿತು. 1861ರಲ್ಲಿ ಬ್ರಿಟಿಷರು ಸ್ಥಳೀಯ ಬಣನಾಯಕನೊಬ್ಬನಿಂದ ಲೇಗಾಸ್ ಪ್ರದೇಶವನ್ನು ಕೊಂಡು, 1866ರ ಹೊತ್ತಿಗೆ ಅದನ್ನು ಸಿಯೆರ ಲಿಯೋನ್ ಸರ್ಕಾರದ ಆಡಳಿತಕ್ಕೆ ಒಳಪಡಿಸಿದರು. ತರುವಾಯ ಅದು ಗೋಲ್ಡ್ ಕೋಸ್ಟಿನ ಭಾಗವಾಯಿತು. 1885ರಲ್ಲಿ ನಡೆದ ಬರ್ಲಿನ್ ಸಮ್ಮೇಳನದಲ್ಲಿ ಅದು ಬ್ರಿಟಿಷ್ ರಕ್ಷಿತ ರಾಜ್ಯವೆಂದು ಅಂಗೀಕೃತವಾಯಿತು. ಮೊದಲು ಆಯಿಲ್ ರಿವರ್ಸ ಪ್ರೊಟಿಕ್ಟೊರೇಟ್ ಎಂದೂ ತರುವಾಯ ನೈಜರ್ ಕೋಸ್ಟ್ ಪ್ರೊ ಪ್ರೊಟೆಕ್ಟೊರೇಟ್ ಎಂದೂ ಹೆಸರು ತಳೆದಿದ್ದ ದಕ್ಷಿಣ ನೈಜೀರಿಯದ ಉತ್ತರ ಭಾಗ 1900ರಲ್ಲಿ ಬ್ರಿಟಿಷರ ವಶವಾಗಿತ್ತು. 1914ರಲ್ಲಿ ಉತ್ತರ ಮತ್ತು ದಕ್ಷಿಣ ನೈಜೀರಿಯಗಳನ್ನು ಒಟ್ಟುಗೂಡಿಸಿ ನೈಜೀರಿಯ ವಸಾಹತು ಹಾಗೂ ರಕ್ಷಿತ ರಾಜ್ಯ ಸ್ಥಾಪಿಸಲಾಯಿತು.

ಎರಡನೆಯ ಮಹಾಯುದ್ಧದ ತರುವಾಯ ಸ್ವಾತಂತ್ರ್ಯಕ್ಕಾಗಿ ನೈಜೀರಿಯನರು ಚಳವಳಿ ನಡೆಸಿದರು. 1946-1951ರಲ್ಲಿ ನೈಜೀರಿಯಕ್ಕೆ ಮೊದಲು ಪ್ರಜಾಪ್ರಾತಿನಿಧ್ಯ ಸರ್ಕಾರವನ್ನೂ ಅನಂತರ ಜವಾಬ್ದಾರಿ ಸರ್ಕಾರವನ್ನೂ ನೀಡಲಾಯಿತು. 1946ರಲ್ಲಿ ಮೊಟ್ಟ ಮೊದಲ ಬಾರಿಗೆ ಒಕ್ಕೂಟ ಸರ್ಕಾರ ಜಾರಿಗೆ ಬಂತು. ನೈಜೀರಿಯದ ಉತ್ತರ, ಪೂರ್ವ ಮತ್ತು ಪಶ್ಚಿಮ ಪ್ರದೇಶಗಳನ್ನು ರಚಿಸಲಾಯಿತು. ಹಿಂದಿನ ಕ್ಯಾಮರೂನ್ ನ್ಯಾಸಾಡಳಿತ ಪ್ರದೇಶದ ಉತ್ತರ ಭಾಗದ ಆಡಳಿತವನ್ನು 1961ರವರೆಗೆ ಉತ್ತರ ಪ್ರದೇಶ ವಹಿಸಿಕೊಂಡಿತ್ತು. ಆ ವರ್ಷ ಪ್ರಜಾನಿರ್ಣಯದ ಪ್ರಕಾರ ಆ ಭಾಗ ನೈಜೀರಿಯದ ಉತ್ತರ ಪ್ರದೇಶಕ್ಕೆ ಸೇರಿತು. ಈಗಿನ ಮಧ್ಯ ಪಶ್ಚಿಮ ಪ್ರದೇಶ 1963ರಲ್ಲಿ ಒಕ್ಕೂಟದ ಪಶ್ಚಿಮ ಪ್ರದೇಶದ ಒಂದು ಭಾಗದಲ್ಲಿ ಸೃಷ್ಟಿಯಾಯಿತು. 1957ರಲ್ಲಿ ನೈಜೀರಿಯ ಒಕ್ಕೂಟದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳಿಗೂ 1959ರಲ್ಲಿ ಉತ್ತರ ಪ್ರದೇಶಕ್ಕೂ ಪ್ರಾದೇಶಿಕ ಸ್ವಯಮಾಡಳಿತ ಲಭಿಸಿತು. 1960ರಲ್ಲಿ ನೈಜೀರಿಯ ಒಕ್ಕೂಟಕ್ಕೆ ಪೂರ್ಣ ಸ್ವಾತಂತ್ರ್ಯ ದೊರಕಿತು. (ಕೆ.ಆರ್.ಬಿ.)

ನೈಜೀರಿಯ ಅಕ್ಟೋಬರ್ 1963ರಲ್ಲಿ ಗಣರಾಜ್ಯವಾಯಿತು. ಅದು ಕಾಮನ್‍ವೆಲ್ತ್ ಸದಸ್ಯತ್ವವನ್ನು ಮುಂದುವರಿಸಿಕೊಂಡು ಬರುತ್ತಿದೆ. 1966ರ ಜನವರಿಯಲ್ಲಿ ಕ್ಷಿಪ್ರಕ್ರಾಂತಿ ನಡೆದು ಇಬ್ಬರು ಪ್ರಾದೇಶಿಕ ಮಂತ್ರಿಗಳು ಹಾಗು ಒಕ್ಕೂಟದ ಮಂತ್ರಿ ಅಲ್ಹಾಜಿ ಸರ್ ಅಬುಬಾಕರ್ ತಫೇವಾ ಬೆಲೇವಾ ಕೊಲೆಯಾದರು. ಲಷ್ಕರಿ ಆಡಳಿತ ಪ್ರಾರಂಭವಾಯಿತು. ಸೈನ್ಯಾಧಿಕಾರಿ ಮೇಜರ್ ಜನರಲ್ ಔನ್ಸನ್ ಆಗುಯಿ ಇರೋನ್ಸಿ ರಾಜ್ಯದ ಒಕ್ಕೂಟ ರಚನೆಯನ್ನು ರದ್ದುಮಾಡಿ ಏಕಘಟಕ ರಾಜ್ಯವನ್ನು ಸ್ಥಾಪಿಸಿದರು. ಇದರಿಂದ ಆಂತರಿಕ ಕೋಮುವಾರು ಗಲಭೆಗಳೆದ್ದು ಕೇಂದ್ರಾಡಳಿತ ಹದಗೆಟ್ಟಿತು. ಜುಲೈ 1966ರಲ್ಲಿ ಜನರಲ್ ಆಗುಯಿ ಇರೋನ್ಸಿ ಕೊಲೆಯಾದರು. ಅವರ ತರುವಾಯ ಮಿಲಿಟರಿ ಅಧಿಕಾರಿ ಲೆಫ್ಟಿನಂಟ್ ಕರ್ನಲ್ (ತರುವಾಯ ಜನರಲ್) ಯೂರೂಬ ಗೋವನ್ ಆಡಳಿತಸೂತ್ರಗಳನ್ನು ವಹಿಸಿಕೊಂಡು ಒಕ್ಕೂಟ ರಾಜ್ಯವ್ಯವಸ್ಥೆಯನ್ನು ಪುನಃ ಸ್ಥಾಪಿಸಿದರು.

1967ರಲ್ಲಿ ಒಕ್ಕೂಟ ಸರ್ಕಾರಕ್ಕೂ ಪೂರ್ವ ಪ್ರದೇಶದ ಮಿಲಿಟರಿ ಗವರ್ನರ್ ಲೆಫ್ಟೆನೆಂಟ್ ಕರ್ನಲ್ ಚುಕ್‍ವುಯಿಮಕ ಒಡುಮೆಗುವು ಒಜುಕ್ವುವಿಗೂ ಭಿನ್ನಾಭಿಪ್ರಾಯ ಉಂಟಾಯಿತು. ಅದೇ ವರ್ಷ ಒಜುಕ್ವು ಪೂರ್ವಪ್ರದೇಶವನ್ನು ಒಕ್ಕೂಟದಿಂದ ಪ್ರತ್ಯೇಕಿಸಿ ಬೀಯಾಫ್ರ ಗಣರಾಜ್ಯವನ್ನು ಸ್ಥಾಪಿಸಿದರು. 1967ರ ಜುಲೈಯಲ್ಲಿ ಒಕ್ಕೂಟ ಸರ್ಕಾರಕ್ಕೂ ಬೀಯಾಫ್ರ ಗಣರಾಜ್ಯಕ್ಕೂ ಯುದ್ಧ ಪ್ರಾರಂಭವಾಗಿ 1970ರ ಜನವರಿಯ ವರೆಗೆ ನಡೆಯಿತು. ಕೊನೆಗೆ ಒಜುಕ್ಕು ಐವರಿ ಕೋಸ್ಟ್ ಕಡೆ ಹೊರಟು ಹೋದ್ದರಿಂದ ನೈಜೀರಿಯ ಒಕ್ಕೂಟಕ್ಕೆ ಬೀಯಾಫ್ರ ಶರಣಾಗತವಾಯಿತು. ಈ ಮಧ್ಯೆ ರಾಜ್ಯದ 4 ಪ್ರಾಂತ್ಯಗಳು ರದ್ದುಗೊಂಡು ಅವುಗಳಿಗೆ ಪ್ರತಿಯಾಗಿ 12 ರಾಜ್ಯಗಳು ಸ್ಥಾಪಿತವಾದುವು.

1975 ರ ಕ್ಷಿಪ್ರಕ್ರಾಂತಿಯಲ್ಲಿ ಜನರಲ್ ಗೋವಾನರಿಂದ ಬ್ರಿಗೇಡಿಯರ್ ಮಹಮ್ಮದರಿಗೆ ಸೈನಿಕ ಆಡಳಿತದ ನಾಯಕತ್ವ ವರ್ಗಾಯಿಸಲ್ಪಟ್ಟಿತು. (ವಿ.ಜಿ.ಕೆ.) ಸಂವಿಧಾನ ಮತ್ತು ಆಡಳಿತ

ಸಂವಿಧಾನ: 1967ರ ಮಾರ್ಚ 17ರ ಘೋಷಣೆಯ ಪ್ರಕಾರ ವಿಧಾಯಕ ಹಾಗೂ ಆಡಳಿತಧಿಕಾರಗಳು ಸರ್ವೋನ್ನತ ಸೈನಿಕ ಮಂಡಲಿಯಲ್ಲಿ ನಿಹಿತವಾಗಿವೆ. ಸೈನ್ಯದ ಪ್ರಮುಖ ಅಧಿಕಾರಿ ಈ ಮಂಡಲಿಯ ಅಧ್ಯಕ್ಷ. ಈತ ರಾಷ್ಟ್ರಪತಿ. ನೈಜೀರಿಯ ಒಕ್ಕೂಟದ 12 ರಾಜ್ಯಗಳ ಸೈನಿಕ ರಾಜ್ಯಪಾಲರು ಹಾಗು ಪೊಲೀಸ್ ಇಲಾಖೆಯ ಮಹಾ ನಿರೀಕ್ಷಕ ಇವರು ಮಂಡಲಿಯ ಸದಸ್ಯರು. ಸೈನಿಕ ರಾಜ್ಯಪಾಲರು ತಮ್ಮ ತಮ್ಮ ರಾಜ್ಯಗಳಲ್ಲಿ ವಿಧಾಯಕ ಹಾತೂ ಆಡಳಿತ ಅಧಿಕಾರ ಹೊಂದಿದ್ದಾರೆ. ಮಂಡಲಿಗೆ ವಿಧಾನ ಸಭೆಯನ್ನು ರಚಿಸುವ, ಅಧಿನಿಯಮಗಳನ್ನು ರದ್ದುಗೊಳಿಸುವ ಅಧಿಕಾರವಿದೆ. ಸರ್ವೋನ್ನತ ಸೈನಿಕ ಮಂಡಲಿ ಒಕ್ಕೂಟದ ಆಡಳಿತ ಮಂಡಲಿಗೆ ಅಧಿಕಾರಗಳನ್ನು ವಹಿಸಬಹುದು. ಈ ಆಡಳಿತ ಮಂಡಲಿಯಲ್ಲಿ ಒಕ್ಕೂಟ ರಾಜ್ಯಗಳ ಸೈನಿಕ ಮತ್ತು ಸಿವಿಲ್ ಕಮಿಷನರುಗಳು ಹಾಗೂ ಸೈನ್ಯದ ಪ್ರತಿನಿಧಿಗಳು ಇರುತ್ತಾರೆ. ರಾಜ್ಯಗಳ ಮಂತ್ರಿಮಂಡಲಗಳಲ್ಲಿ ಮಂತ್ರಿಗಳ ಸಂಖ್ಯೆ 8-10. ಮಂತ್ರಿಮಂಡಲಕ್ಕೆ ಕಮಿಷನರ್ ಪ್ರಮುಖ ರಾಜ್ಯಪಾಲ ಇದರ ಅಧ್ಯಕ್ಷ.

ರಾಜ್ಯಗಳು: 1967ರಲ್ಲಿ ಸರ್ವೋನ್ನತ ಸೈನಿಕ ಮಂಡಲಿ ನೈಜೀರಿಯ ಒಕ್ಕೂಟದ 4 ಪ್ರಾತ್ಯಗಳನ್ನು ರದ್ದುಮಾಡಿ, 12ರಾಜ್ಯಗಳನ್ನು ಸ್ಥಾಪಿಸಿತು. ಉತ್ತರ ಪ್ರದೇಶದಲ್ಲಿ 6 ರಾಜ್ಯಗಳು, ಪೂರ್ವಪ್ರದೇಶದಲ್ಲಿ 3 ರಾಜ್ಯಗಳು, ಪಶ್ಚಿಮದಲ್ಲಿ 2ರಾಜ್ಯಗಳು ಇವೆ. ಪಶ್ಚಿಮ-ಮಧ್ಯ ಪ್ರದೇಶ ಹಿಂದಿನ ಗಡಿಗಳನ್ನು ಉಳಿಸಿಕೊಂಡು ಪಶ್ಚಿಮ-ಮಧ್ಯ ರಾಜ್ಯವಾಗಿದೆ. ನ್ಯಾಯಪಾಲನೆ: ಒಕ್ಕೂಟದ ಸರ್ವೋಚ್ಚ ನ್ಯಾಯಲಯ ಅಪೀಲುಗಳನ್ನು ವಿಚಾರಿಸುತ್ತದೆ. ದಂಡ ನ್ಯಾಯಾಲಯಗಳ ಮತ್ತು ಸ್ಥಳೀಯ ಬಣ ನ್ಯಾಯಾಲಯಗಳ ತೀರ್ಪುಗಳ ವಿರುದ್ಧ ಸಲ್ಲಿಸಲಾಗುವ ಅಪೀಲುಗಳನ್ನು ಉಚ್ಚ ನ್ಯಾಯಾಲಯಗಳು ವಿಚಾರಿಸುತ್ತವೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ರಾಷ್ಟ್ರಪತಿ ನೇಮಿಸುತ್ತಾನೆ. ರಾಜ್ಯಗಳ ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳನ್ನು ಆಯಾ ರಾಜ್ಯಗಳ ರಾಜ್ಯಪಾಲರು ನೇಮಿಸುತ್ತಾರೆ.

ದಂಡ ನ್ಯಾಯಲಯಗಳಿಗೆ ಸಿವಿಲ್ ಮತ್ತು ಕ್ರೆಮಿನಲ್ ಮೊಕದ್ದಮೆಗಳ ವಿಚಾರಣೆಮಾಡುವ ಅಧಿಕಾರವಿದೆ. ಸ್ಥಳೀಯ ಬಣಗಳ ರೂಢಿ ಹಾಗೂ ನ್ಯಾಯ ಪದ್ದತಿಗಳ ಪ್ರಕಾರ ಮೊಕದ್ದಮೆಗಳನ್ನು ವಿಚಾರಿಸುವ ಸ್ಥಳೀಯ ನ್ಯಾಯಲಯಗಳು ದೇಶಾದ್ಯಂತ ಇವೆ. (ಕೆ.ವಿ.ವಿ.)

ಆರ್ಥಿಕತೆ

ಕೃಷಿ: ನೈಜೀರಿಯ ವ್ಯವಸಾಯಪ್ರಧಾನ ದೇಶ. ಮುಖ್ಯ ಬೆಳೆಗಳು ಬತ್ತ, ಮುಸುಕಿನಜೋಳ, ಸೋರ್ಗಮ್, ಗೆಣಸು, ಸುವರ್ಣಗೆಡ್ಡೆ, ಯಾಮ್, ನೆಲಗಡಲೆ, ಹತ್ತಿ, ತೆಂಗು, ಕಬ್ಬು, ಕೋಕೋ, ರಬ್ಬರ್, ಬಾಳೆ ಮತ್ತು ನಿಂಬೆ ಜಾತಿಯ ಹಣ್ಣುಗಳು.

ದನ ಮತ್ತು ಕುರಿಗಳ ಸಾಕಣೆ ವ್ಯಾಪಕವಾಗಿದೆ. ಮೀನುಗಾರಿಕೆ ಬೆಳೆದಿದೆ ಕರಾವಳಿಯಲ್ಲಿ ಹಾಗು ಒಳನಾಡಿನಲ್ಲಿ ಮೀನುಗಾರಿಕೆ ಒಂದು ಮುಖ್ಯ ಕಸುಬು.

ಅರಣ್ಯ: ದಕ್ಷಿಣದ ಅರಣ್ಯ ಭಾಗಗಳನ್ನು ಕಡಿದು ವ್ಯವಸಾಯಕ್ಕೆ ತಂದಿದ್ದಾರೆ. ಚೌಬೀನೆಗೆ ಯೋಗ್ಯವಾದ ಮರಗಳು ಹೆಚ್ಚಾಗಿವೆ. ರಾಜ್ಯದ ಮುಕ್ಕಾಲು ಭಾಗ ಹುಲ್ಲುಗಾಡು.

ಕೈಗಾರಿಕೆ: ಸಿಮೆಂಟ್, ಹತ್ತಿ, ಬಟ್ಟೆ, ಗಾಜು ಮತ್ತು ಅಲ್ಯೂಮಿನಿಯಂ ಸಾಮಾನುಗಳು, ಸಿಗರೇಟ್, ಚರ್ಮಹದಗಾರಿಕೆ, ಹಡಗು ತಯಾರಿಕೆ, ಚೌಬೀನೆ ಇವುಗಳ ಕಾರ್ಖನೆಗಳಿವೆ. ಹೈನುಗಾರಿಕೆಯೂ ಒಂದು ಉದ್ಯಮ.

ಖನಿಜಗಳು: ಪೆಟ್ರೋಲಿಯಂ, ತವರ ಮತ್ತು ಕೊಲಂಬೈಟ್ ಮುಖ್ಯ ಖನಿಜಗಳು. ನೈಜೀರಿಯದ ನಿರ್ಯಾತದ ಒಟ್ಟು ಮೌಲ್ಯದಲ್ಲಿ ಸುಮಾರು ಅರ್ಧದಷ್ಟು ಪೆಟ್ರೋಲಿಯಂ ನಿಯರ್ತದಿಂದ ಬರುತ್ತದೆ. ಪಶ್ಚಿಮ ಆಫ್ರಿಕದಲ್ಲಿ ಕಲ್ಲಿದ್ದಲು ಉತ್ಪಾದಿಸುವ ದೇಶ ಇದೊಂದೇ.

ನಾಣ್ಯ: 1973ರಲ್ಲಿ ನೈಜೀರಿಯದಲ್ಲಿ ದಶಮಾಂಶ ನಾಣ್ಯಪದ್ಧತಿ ರೂಢಿಗೆ ಬಂತು. ಇಲ್ಲಿಯ ನಾಣ್ಯ ನೈರ. ಇದನ್ನು 100ಕೋಬೊಗಳಾಗಿ ವಿಂಗಡಿಸಲಾಗಿದೆ.

ಸಾರಿಗೆ: ನೈಜೀರಿಯ ರೈಲ್ವೆ ಕಾರ್ಪೊರೇಷನ್ 1955ರಲ್ಲಿ ಸ್ಥಾಪಿಸವಾಯಿತು. ಲೇಗಾಸ್-ಮೈದುಗರಿ, ಪೋರ್ಟ ಹಾರ್‍ಕೋರ್ಟ-ಡೀಪ್‍ವಾಟರ್ ಕ್ವೇ ಇವು ಮುಖ್ಯಮಾರ್ಗಗಳು. ಇವಕ್ಕೆ ಹಲವು ಶಾಖೆಗಳಿವೆ. ದೇಶದಲ್ಲಿರುವ ಒಟ್ಟು ರೈಲುಮಾರ್ಗಗಳ ಉದ್ದ 3,504 ಕಿಮೀ. (1975). ಮೋಟಾರು ರಸ್ತೆಗಳ ಉದ್ದ 88,000ಕಿಮೀ. ನೈಜೀರಿಯದ ನದೀಮಾರ್ಗಗಳು ಸುಮಾರು 20,000ಕಿಮಿ. ದೇಶದ ಪ್ರಮುಖ ರೇವುಗಳು ಲೇಗಾಸ್ ಮತ್ತು ಪೋರ್ಟ ಹಾರ್ಕೋರ್ಟ್. ಯೂರೋಪ್, ಅಮೇರಿಕ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ದೂರಪ್ರಾಚ್ಯ ಮೊದಲಾದ ಕಡೆಗಳಿಗೆ ಜಹಜುಗಳು ಹೋಗಿಬರುತ್ತವೆ. ಒಳನಾಡಿನ ರೇವುಗಳ ಪೈಕಿ ನೈಜರ್ ನದಿಯ ಮೇಲೆ ಇರುವ ಬುರುಟು. ಮತ್ತು ವಾರಿ ನದಿಯ ಮೇಲಿನ ವಾರಿ ಮುಖ್ಯವಾದುವು. ಒಳನಾಡಿನ ವಿಮಾನಯಾನವನ್ನು ನೈಜೀರಿಯ ಏರ್ವೇಸ್ ಸಂಸ್ಥೆ ನಿರ್ವಹಿಸುತ್ತದೆ. ಉತ್ತರ ಆಫ್ರಿಕ, ಘಾನ, ಸಿಯೆರ ಲಿಯೋನ್, ಗ್ಯಾಂಬಿಯ, ಐವರಿಕೋಸ್ಟ್, ಲೆಬನನ್, ಲೈಬೀರಿಯ, ಕ್ಯಾಮರೂನ್, ಮೊದಲಾದ ಕಡೆಗಳಿಗೆ ವಿಮಾನಗಳು ಹೋಗಿಬರುತ್ತವೆ. ರಾಜ್ಯದಲ್ಲಿ ಒಟ್ಟು 18 ವಿಮಾನ ನಿಲ್ದಾಣಗಳಿವೆ. ನೈಜೀರಿಯ ಒಕ್ಕೂಟದ ಪ್ರತಿ ರಾಜ್ಯದ ಆಡಳಿತಕೇಂದ್ರದಲ್ಲೂ ಒಂದು ವಿಮಾನ ನಿಲ್ದಾಣವಿದೆ. ಲೇಗಾಸ್ ಮತ್ತು ಕಾನೋದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ.

ನಗರಗಳು: ನೈಜೀರಿಯದ ರಾಜಧಾನಿ ಲೇಗಾಸ್. ಇದರ ಜನಸಂಖ್ಯೆ 8,75,417 (1970 ಅಂ.). ಇತರ ಕೆಲವು ಪ್ರಮುಖ ನಗರಗಳು ಇಬಾಡನ್ (7,45,756.). ಆಗ್ಬಮೋಷೋ (3,80,239), ಕಾನೋ (3,51,175), ಔಷಾಗ್ಬೋ (2,48,394), ಈಲರೀನ್ (2,47,896). ಆಬೀಯೋಕಟ (2,22,630.) ಮತ್ತು ಪೋರ್ಟ ಹಾರ್ಕೊರ್ಟ (2,13,433).

ಶಿಕ್ಷಣ ಪದ್ಧತಿ - ಭಾರತ ಮತ್ತು ನೈಜೀರಿಯ ಎರಡು ಬೇರೆ ಬೇರೆ ಖಂಡಗಳಲ್ಲಿದ್ದರೂ ಅವೆರಡರ ಶಿಕ್ಷಣ ಪದ್ಧತಿಗಳೂ ಬಹುಮಟ್ಟಿಗೆ ಏಕರೀತಿಯವಾಗಿದೆ. ಅವೆರಡು ದೇಶಗಳೂ ದೀರ್ಘಕಾಲ ಬ್ರಿಟಿಷರ ಆಳ್ವಿಕೆಗೊಳಪಟ್ಟಿದ್ದು ಅಲ್ಲಿನ ಶಿಕ್ಷಣಪದ್ದತಿಯನ್ನು ಎರಡು ದೇಶಗಳಲ್ಲೂ ನೆಲೆಗೊಳಿಸಿದ್ದೇ ಇದಕ್ಕೆ ಮುಖ್ಯ ಕಾರಣ. ಸ್ವಾತಂತ್ಯ್ರಾನಂತರ ಅವೆರೆಡು ದೇಶಗಳು ತಮ್ಮ ಜನತೆಯ ಅವಶ್ಯಕತೆಗೆ ಅನುಗುಣವಾಗುವಂತೆ ಅದನ್ನು ಮಾರ್ಪಡಿಸಲು ಯತ್ನಿಸಿದ್ದರೂ ಅದು ಇಂದಿಗೂ ಬ್ರಿಟಿಷರು ಸ್ಥಾಪಿಸಿದ ಚೌಕಟ್ಟಿನಲ್ಲೇ ಮುಂದುವರಿಯುತ್ತಿದೆ.

ಶಿಕ್ಷಣದ ರಚನಾವ್ಯವಸ್ಥೆ: ನೈಜೀರಿಯದಲ್ಲಿನ ಶಿಕ್ಷಣ ಭಾರತದಲ್ಲಿರುವಂತೆ ನಾಲ್ಕು ಹಂತಗಳಲ್ಲಿ ವ್ಯವಸ್ಥೆಗೊಂಡಿದೆ. ಪ್ರಾಥಮಿಕ ಶಾಲೆ, ಉನ್ನತ ಪ್ರೌಢಶಾಲೆ ಮತ್ತು ವಿಶ್ವವಿದ್ಯಾಲಯ ಇವೇ ಆ ನಾಲ್ಕು ಹಂತಗಳು. ಪ್ರೌಢಶಾಲಾಮಟ್ಟದಲ್ಲೂ ವಿಶ್ವವಿದ್ಯಾಲಯದ ಮಟ್ಟದಲ್ಲೂ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳಿವೆ. ಕೃಷಿ, ವಾಣಿಜ್ಯ ಹಾಗೂ ಕೈಗಾರಿಕಾ ಶಾಲೆಗಳೂ ವೃತ್ತಿ ಅಥವಾ ಉದ್ಯೋಗಪ್ರದ ಶಿಕ್ಷಣವೀಯುವ ಮಾಡರ್ನ್ ಪ್ರೌಢಶಾಲೆಗಳೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳೂ ಇವೆ. 1960ರಿಂದ ಈಚೆಗೆ ಗ್ರಾಮರ್ ಸೆಕೆಂಡರಿ ಶಾಲೆಗಳಲ್ಲೂ ತಾಂತ್ರಿಕ ಶಿಕ್ಷಣಕ್ಕೆ ವ್ಯವಸ್ಥೆಗೊಳಿಸಲಾಗಿದೆ; ವಿಶ್ವವಿದ್ಯಾಲಯದಲ್ಲಿ ಸಾಂಸ್ರøತಿಕ ಶಿಕ್ಷಣದ ಜೊತೆಗೆ ಉನ್ನತ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ಅಗತ್ಯವೆನಿಸುವ ಎಲ್ಲ ಮಟ್ಟದ ತಾಂತ್ರಿಕ ಜನಬಲವನ್ನು ಸಿದ್ಧಪಡಿಸುವ ಯೋಜನೆಯ ಅಂಗವಾಗಿ ಈ ಸುಧಾರಣೆಗಳನ್ನು ಮಾಡಲಾಗಿದೆ.

ಶಿಕ್ಷಣದ ಆಡಳಿತ: ಹನ್ನೆರಡು ರಾಜ್ಯಗಳ ಒಕ್ಕೂಟವಾದ ನೈಜೀರಿಯದಲ್ಲಿ ಶಿಕ್ಷಣದ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಂಯುಕ್ತ ಹೊಣೆಗಾರಿದೆ ಸೇರಿದೆ. 1958ರ ರಾಜ್ಯಾಂಗ ರಚನೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಅಂದು ಅಸ್ತಿತ್ವದಲ್ಲಿದ್ದ ಪ್ರಾದೇಶಿಕ ಸರ್ಕಾರಗಳಿಗೆ ವಹಿಸಲಾಗಿತ್ತು. 1978ರ ರಾಜ್ಯಂಗರಚನೆಯಲ್ಲಿ ಆ 12ಪ್ರದೇಶಗಳು ಹನ್ನೆರಡು ರಾಜ್ಯಗಳಾಗಿ ಪರಿವರ್ತನೆಯಾಗಿ ಆ ಹೊಣೆಗಾರಿಕೆ ರಾಜ್ಯಸರ್ಕಾರಗಳಿಗೆ ವರ್ಗಾವಣೆಯಾಯಿತು. ಆ ವೇಳೆಗೆ ಪ್ರೌಢಶಿಕ್ಷಣ ಕೇಂದ್ರ ಮತ್ತು ಸರ್ಕಾರಗಳ ಸಹವರ್ತಿ (ಕನ್‍ಕರೆಂಟ್) ಹೊಣೆಗಾರಿಕೆಗೆ ಸೇರಿಹೋಗಿತ್ತು. ಅಧ್ಯಾಪಕರ ಪ್ರಶಿಕ್ಷಣ, ಸಂಬಳಸಾರಿಗೆಗಳ ನಿಷ್ಕರ್ಷೆ ರಾಜ್ಯ ಸರ್ಕಾರಕ್ಕೆ ಸೇರಿದೆ. ಪಠ್ಯಕ್ರಮ, ಶುಲ್ಕ, ಪ್ರವೇಶನಿಯಮಗಳು, ಪ್ರಾಥಮಿಕ ಶಾಲಾಶಿಕ್ಷಣದ ಅನಂತರದ ಸಾರ್ವತ್ರಿಕ ಪರೀಕ್ಷೆ ನಡೆಸುವುದು, ಶಾಲಾತನಿಖೆ, ಖಾಸಗಿ ಶಾಲೆಗಳಿಗೆ ಕೊಡಬೇಕಾದ ಅನುದಾನದ ನಿಷ್ಕರ್ಷೆ, ಕೇಂದ್ರೀಯ ಪ್ರೌಢಶಾಲೆಗಳನ್ನುಳಿದು ಮಿಕ್ಕೆಲ್ಲ ಶಾಲೆಗಳ ಅಧ್ಯಾಪಕರ ನೇಮಕ-ಇವೂ ರಾಜ್ಯ ಸರ್ಕಾರಕ್ಕೆ ಸೇರಿದೆ. ಪಶ್ಚಿಮ ಆಫ್ರಿಕದ ಪರೀಕ್ಷಾಮಂಡಲಿ ಶಾಲೆಗಳ ಹಾಗೂ ಸಿವಿಲ್ ಸರ್ವಿಸ್ ಪರೀಕ್ಷೆಗಳ ಪಠ್ಯ ಕ್ರಮವನ್ನು ನಿರ್ದೇಶಿಸುತ್ತದೆ. ರಾಜ್ಯಸರ್ಕಾರಗಳು ಪ್ರೌಢಶಾಲೆಯ ಪಠ್ಯ ವಿಷಯಗಳನ್ನು ಗೊತ್ತುಮಾಡುತ್ತದೆ. ಈ ಕಾರ್ಯವನ್ನು ಶಿಕ್ಷಣ ಸಚಿವಾಲಯ ಅಥವಾ ಶಿಕ್ಷಣ ಸಮಾಜಾಭಿವೃದ್ಧಿ ಸಚಿವಾಲಯ (ಪಶ್ಚಿಮ ರಾಜ್ಯಗಳಲ್ಲಿ) ನಿರ್ವಹಿಸುತ್ತದೆ. ಈ ಸಚಿವಾಲಯಗಳಲ್ಲಿ ಶಿಕ್ಷಣದ ಬೇರೆ ಬೇರೆ ಮಟ್ಟಗಳ ಮೇಲ್ವಿಚಾರಣೆಗಾಗಿ ಬೇರೆ ಬೇರೆ ವಿಷಯಗಳ ತನಿಖಾಧಿಕಾರಿಗಳನ್ನು (ಇನ್‍ಸ್ಪೆಕ್ಟರ್) ನೇಮಿಸಿಕೊಳ್ಳಲಾಗಿದೆ. ಕೇಂದ್ರಸಚಿವಾಲಯ ರಾಜ್ಯಗಳ ಶಿಕ್ಷಣದಲ್ಲಿ ಸಮನ್ವಯವನ್ನು ಸಾಧಿಸುವ ಹಾಗೂ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಂಡು ಬರುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತದೆ. ಜೊತೆಗೆ ಶಿಕ್ಷಣಕ್ಕಾಗಿ ವಿದೇಶೀ ನೆರವನ್ನು ದೊರಕಿಸಿಕೊಳ್ಳುವ ಮತ್ತು ಯುನೆಸ್ಕೊ ಸಂಸ್ಥೆಯೊಡನೆ ಸಹಕರಿಸಿ ಕೆಲಸ ಮಾಡುವ ಹೊಣೆಯನ್ನೂ ನಿರ್ವಹಿಸುತ್ತದೆ. ಅದು ತನ್ನ ಈ ಹೊಣೆಗಾರಿಕೆಯನ್ನು ಸಲಹಾ ಮಂಡಲಿಗಳ ಮೂಲಕ ನಿರ್ವಹಿಸುತ್ತದೆ. ಆ ಮಂಡಲಿಗಳಲ್ಲಿ ಕೇಂದ್ರದ ಪ್ರತಿನಿಧಿಗಳಂತೆ ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳ ಹಾಗೂ ವೃತ್ತಿಸಂಸ್ಥೆಗಳ ಪ್ರತಿನಿಧಿಗಳೂ ಇರುತ್ತಾರೆ.

ಮೊದಮೊದಲು ಉನ್ನತಶಿಕ್ಷಣದ ಹೊಣೆಗಾರಿಕೆ ಕೇಂದ್ರಸರ್ಕಾರಕ್ಕೆ ಸೇರಿತ್ತು. ಈಚೆಗೆ ರಾಜ್ಯಸರ್ಕಾರಗಳೂ ಅದರಲ್ಲಿ ಸಹಭಾಗಿಯಾಗುತ್ತಿವೆ. ಅಲ್ಲಿರುವ 5 ಸರ್ಕಾರಿ ವಿಶ್ವವಿದ್ಯಾಲಯಗಳು ರಾಜ್ಯ ಅಥವಾ ಕೇಂದ್ರ ಸರ್ಕಾರದ-ಶಾಸನದ ಮೂಲಕ ಸ್ಥಾಪಿಸಲಾಗಿದ್ದು ಅವೆಲ್ಲ ಬಹುಮಟ್ಟಿನ ಸ್ವಾಯತ್ತತೆಯನ್ನು ಪಡೆದುಕೊಂಡಿವೆ. ಅವು ನಿರ್ವಹಿಸಬೇಕಾದ ಹಿರಿಯ ಜವಾಬ್ದಾರಿಯ ಸಲುವಾಗಿ ಅವು ರಾಜ್ಯದ ಅಥವಾ ಕೇಂದ್ರದ ಮಂತ್ರಿಗಳಿಗೆ ಹೊಣೆಗಾರರಾಗಿರುವ ಬದಲು ರಾಜ್ಯದ ಅಥವಾ ಕೇಂದ್ರದ ಗವರ್ನರ್ ಅಧ್ಯಕ್ಷರಿಗೆ ಹೊಣೆಗಾರರಾಗಿರುತ್ತವೆ. 1962ರಲ್ಲಿ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಆಯೋಗ ರಚನೆಯಾಗಿ ಅ ಮಟ್ಟದ ಶಿಕ್ಷಣದಲ್ಲಿ ಸಮನ್ವಯವನ್ನು ಸಾಧಿಸುವ ಹಾಗೂ ಅವಕ್ಕೆ ಕೇಂದ್ರದ ಹಣವನ್ನು ಅನುದಾನವಾಗಿ ಹಂಚುವ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಈ ಆಯೋಗ ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಅಡ್ಡಿ ಆತಂಕಗಳನ್ನೊಡ್ಡಿ ನಿಯಂತ್ರಿಸುವುದರ ಬದಲು ಅವುಗಳ ಕಾರ್ಯದಲ್ಲಿ ಸಮೀಕರಣವೇರ್ಪಡಿಸಲು ಪ್ರಯತ್ನಿಸುತ್ತದೆ. ಆದ್ದರಿಂದ ವಿಶ್ವವಿದ್ಯಾಲಯಗಳು ತಾವು ರಚಿಸಿಕೊಳ್ಳುವ ಆಡಳಿತಮಂಡಲಿ, ವಿದ್ಯಾಪರಿಷತ್ತು, ಸಂಕಾಯಗಳು (ಫ್ಯಾಕಲ್ಟೀ) ಮುಂತಾದವುಗಳ ಸಹಾಯದಿಂದ ಅವು ತಮ್ಮ ಆಡಳಿತವನ್ನು ತಾನೇ ನಿರ್ದೇಶಿಸಿಕೊಳ್ಳುತ್ತಿವೆ.

ಹಣಕಾಸು: ರಾಷ್ಟ್ರ ಶಿಕ್ಷಣ ಸೇವಾಕಾರ್ಯಕ್ಕೆ ತನ್ನ ಒಟ್ಟು ಆದಾಯದ ಸೇ. 5ರಷ್ಟನ್ನು ಖರ್ಚುಮಾಡುತ್ತದೆ. ತಗಲುವ ವೆಚ್ಚದ 2/3 ಭಾಗವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಹಿಸಿಕೊಳ್ಳುತ್ತವೆ. ಮಿಕ್ಕ 1/3 ಭಾಗದಷ್ಟನ್ನು ದಾನ, ದತ್ತಿ, ಕೊಡುಗೆ ಮುಂತಾದವುಗಳಿಂದ ಬರುವ ಆದಾಯ ಮತ್ತು ಶುಲ್ಕದಿಂದ ತುಂಬಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಶುಲ್ಕವನ್ನು ವಿಧಿಸಲಾಗಿದೆ. ಪ್ರೌಢ ಮತ್ತು ಉನ್ನತ ಶಿಕ್ಷಣಕ್ಕೆ ಎಲ್ಲ ರಾಜ್ಯಗಳಲ್ಲೂ ಶುಲ್ಕವನ್ನು ವಿಧಿಸಿದೆ. ಬಡವಿದ್ಯಾರ್ಥಿಗಳಿಗೆ ಉದಾರವಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಶಿಕ್ಷಣದ ಚಾಲ್ತಿ ವೆಚ್ಚದ ಸೇ. 6ರಷ್ಟನ್ನು ಮಾತ್ರ ಸ್ಥಳೀಯ ಪ್ರಾಧಿಕಾರಗಳು ವಹಿಸಿಕೊಂಡಿವೆ. ಶಿಕ್ಷಣದ ಮೂಲ ಬಂಡವಾಳ ರೂಪದ (ಕ್ಯಾಪಿಟಲ್ ಕಾಸ್ಟ್) ವೆಚ್ಚವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರ ವಹಿಸುತ್ತದೆ. ಪೂರ್ವಪ್ರದೇಶ ರಾಜ್ಯಗಳಲ್ಲಿ ಸ್ಥಳೀಯ ಸಮಾಜದವರೇ ಕಟ್ಟಡಗಳನ್ನು ನಿರ್ಮಿಸಬೇಕಾಗಿದ್ದರೂ ಉತ್ತರ ಪ್ರದೇಶದ ರಾಜ್ಯಗಳಲ್ಲಿ ಸರ್ಕಾರದ ವೆಚ್ಚದಿಂದಲೇ ನಿರ್ಮಿಸಲಾಗುತ್ತಿದೆ. ಆ ರಾಜ್ಯಗಳಲ್ಲಿ ಶಿಕ್ಷಣಪ್ರಗತಿ ಅದರಲ್ಲೂ ವಿದ್ಯಾರ್ಥಿಸೇರ್ಪಡೆ ತೀರ ಹಿಂದಿರುವುದರಿಂದ ಸರ್ಕಾರ ಈ ನೀತಿಯನ್ನು ಅನುಸರಿಸುತ್ತಿದೆ.

ಶಿಕ್ಷಣ ನೈಜೀರಿಯದಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರದ ಹೊಣೆಗಾರಿಕೆಯಾಗಿದ್ದರೂ ಶಾಲೆಗಳನ್ನು ಮತೀಯ ಸಂಸ್ಥೆಗಳೂ ಖಾಸಗಿ ಸಂಘಗಳೂ ಸ್ಥಳೀಯ ಪ್ರಾಧಿಕಾರಗಳೂ ನಡೆಸುತ್ತವೆ. ಸರ್ಕಾರ ಮತೀಯ ಸಂಸ್ಥೆಗಳಿಗೂ ಖಾಸಗಿ ಸಂಘಗಳಿಗೂ ಚಾಲ್ತಿ ವೆಚ್ಚದ 2/3 ಭಾಗವನ್ನು ಅನುದಾನವಾಗಿ ನೀಡುತ್ತದೆ. ಸ್ಥಳೀಯ ಪ್ರಾಧಿಕಾರಿಗಳಿಗೆ ಇನ್ನೂ ಸೇ. 15ರಷ್ಟನ್ನು ಹೆಚ್ಚಾಗಿ ನೀಡುತ್ತದೆ.

1967 ರಾಜ್ಯಶಾಸನದ ಪ್ರಕಾರ ಉತ್ತರದ ರಾಜ್ಯಗಳ ಪ್ರಾಥಮಿಕ ಶಾಲೆಗಳ ಹೊಣೆಗಾರಿಕೆಯನ್ನು ಸ್ಥಳೀಯ ಪ್ರಾಧಿಕಾರಕ್ಕೆ ವರ್ಗಾಯಿಸಲಾಯಿತು. ಅದೇ ವರ್ಷ ಪೂರ್ವ ನೈಜೀರಿಯದ ಜಿಲ್ಲೆಗಳಲ್ಲಿ ಜಿಲ್ಲಾ ಪರಿಷತ್ತುಗಳನ್ನು ಸ್ಥಾಪಿಸಿ ಸ್ಥಳೀಯ ಉಪಕ್ರಮಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಯಿತು. ಪ್ರೌಢಶಾಲೆಗಳನ್ನು ಮತೀಯ ಸಂಸ್ಥೆಗಳು ನಡೆಸುತ್ತಿವೆ. ಆದರೆ ಉತ್ತರ ನೈಜೀರಿಯದಲ್ಲಿ ಅವು ಮುಸ್ಲಿಮೇತರ ಹಾಗೂ ಉತ್ತರ ರಾಜ್ಯಗಳವರಲ್ಲದ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಆದ್ದರಿಂದ ಸರ್ಕಾರ ಮುಸ್ಲಿಮರಿಗೂ ಉತ್ತರದವರಿಗೂ ಅಲ್ಲಿ ಶಾಲೆಗಳನ್ನು ನಡೆಸುತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಸರ್ಕಾರದ ಮತ್ತು ಮತೀಯ ಸಂಸ್ಥೆಗಳ ಪ್ರೌಢಶಾಲೆಗಳ ಜೊತೆಗೆ ಸಮಾಜದ ಮತ್ತು ಖಾಸಗಿ ಒಡೆತನಗಳ ಶಾಲೆಗಳು ಯುದ್ಧಾನಂತರದ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಆರಂಭವಾಗಿದೆ.

ಪಠ್ಯವಿಷಯ ಮತ್ತು ಬೋಧನ ಕ್ರಮ: ಪಠ್ಯವಿಷಯ, ಪಠ್ಯಪುಸ್ತಕ ಮತ್ತು ಬೋಧನಕ್ರಮ-ಇವನ್ನು ಸರ್ಕಾರವೇ ಗೊತ್ತುಮಾಡಿ ಪರೀಕ್ಷೆಗಳನ್ನು ನಡೆಸುವುದರಿಂದ ದೇಶಾದ್ಯಂತ ಏಕರೂಪದ ವ್ಯವಸ್ಥೆಯನ್ನೂ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಅವಕಾಶವಾಗಿದೆ.

ಪ್ರಾಥಮಿಕ ಶಿಕ್ಷಣ ರಾಜ್ಯ ಸರ್ಕಾರಕ್ಕೆ ಸೇರಿರುವುದರಿಂದ ಪಠ್ಯವಸ್ತು ಮತ್ತು ಕಾರ್ಯಕ್ರಮಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ವ್ಯಕ್ತಪಡಿಸುತ್ತವೆ. ಅದರೆ ಶಿಕ್ಷಣದ ಕಾಲಾವಧಿ, ಸೇರ್ಪಡೆಯ ವಯಸ್ಸು ಮುಂತಾದ ವಿಷಯಗಳಲ್ಲಿ ಏಕರೂಪವನ್ನು ಸಾಧಿಸಲಾಗಿದೆ. ಮಕ್ಕಳು ಆರುವರ್ಷವಾಗಿರುವಾಗ ಶಾಲೆಗೆ ಸೇರಬೇಕು. ಅದಕ್ಕೂ ಹೆಚ್ಚು ವಯಸ್ಸಾಗಿದ್ದರೆ ಶಾಲೆಗೆ ಸೇರಿಸಲು ನಿರಾಕರಿಸುವರು. ಅಲ್ಲಿ ಅವರು ಆರು ವರ್ಷಗಳ ಕಾಲ ಶಿಕ್ಷಣ ಪಡೆಯುವರು. ಮೊದಲ 2-3 ವರ್ಷದ ತರಗತಿಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬೋಧನಮಾಧ್ಯಮವಾಗಿ ಬಳಸಲಾಗುತ್ತಿದೆ. 4ನೆಯ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಬಳಸುವರು. ರಾಷ್ಟ್ರದ ಎಲ್ಲ ಶಾಲೆಗಳಲ್ಲೂ ಇಂಗ್ಲಿಷ್ ಪ್ರಾಥಮಿಕ ಶಾಲೆಯ ಆರಂಭದಿಂದಲೇ ಒಂದು ಬೋಧನ ವಿಷಯವಾಗಿ ಆರಂಭಿಸುವರು. ಅನಂತರವೂ ಅದರ ವ್ಯಾಸಂಗಕ್ಕೆ ಆದ್ಯತೆ ನೀಡುವರು. ಅಂಕಗಣಿತದ ವ್ಯಾಸಂಗಕ್ಕೂ ಅಷ್ಟೇ ಗಮನ ಕೊಡಲಾಗುತ್ತಿದೆ. ಧಾರ್ಮಿಕ ಶಿಕ್ಷಣ, ಮಾತೃಭಾಷೆ, ಚಿತ್ರಲೇಖನ, ಬರೆವಣಿಗೆ, ಪ್ರಕೃತಿಪಾಠ. ದೈಹಿಕ ಶಿಕ್ಷಣ. ಆರೋಗ್ಯಪಾಠ, ಚರಿತ್ರೆ, ಭೂಗೋಳ (ಕೆಲವು ಕಡೆ), ಪೌರ ಶಿಕ್ಷಣ ಮತ್ತು ವಿಜ್ಞಾನ-ಇವು ಪಠ್ಯಕ್ರಮದಲ್ಲಿ ಸೇರಿರುವ ಇತರ ವಿಷಯಗಳು. ಪ್ರಾಥಮಿಕ ಶಾಲೆಯ ಕೊನೆಯಲ್ಲಿ ನಡೆಯುವ ಸಾರ್ವತ್ರಿಕ ಪರೀಕ್ಷೆಯೊಂದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರವನ್ನು ನೀಡಲಾಗುವುದು.

ಬೋಧನೆ ಪ್ರಾಥಮಿಕ ಶಾಲೆಯಲ್ಲಿ ಅಷ್ಟು ಪರಿಣಾಮಕಾರಿಯಾಗಿಲ್ಲವೆಂದೂ ಅದ ತೀರ ಯಾಂತ್ರಿಕ ಕ್ರಿಯೆಯಾಗಿ ಪರಿಣಮಿಸುತ್ತಿದೆಯೆಂದೂ ಟೀಕಿಸಲಾಗುತ್ತಿದೆ. ಈ ಪರಿಸ್ಥಿತಿಗೆ ಅಲ್ಲಿ ಅಸ್ತಿತ್ವದಲ್ಲಿರುವ ಹಳೆಯದೂ ಎಲ್ಲರಿಗೂ ಒಂದು ರೀತಿಯದೂ ಆದ ಪಠ್ಯಕ್ರಮ, ಅದನ್ನು ಆಧರಿಸಿ ಬರೆದಿರುವ ಪಠ್ಯಪುಸ್ತಕಗಳು, ಕೇಂದ್ರದಿಂದ ರಚಿಸುವ ಪ್ರಶ್ನೆಪತ್ರಿಕೆಗಳು, ಒಳ್ಳೆಯ ತರಬೇತಿಲ್ಲದ ಹಾಗೂ ತೀರ ಕನಿಷ್ಟ ಸಾಂಸ್ಕøತಿಕ ಶಿಕ್ಷಣ ಪಡೆದ ಅಧ್ಯಾಪಕರೂ ತೀರ ಆರಂಭದಲ್ಲೆ ಅನ್ಯಭಾಷೆಯೊಂದನ್ನು ಆರಂಭಿಸುವುದೂ ವೈವಿಧ್ಯಪೂರ್ಣ ವಾಚನ ಗ್ರಂಥಗಳ ಅಭಾವ, ಅರ್ಥಮಾಡಿಕೊಳ್ಳಲಾರದ ಭಾಷೆಯೊಂದರ ಬೋಧನ ಮಾಧ್ಯಮ ಹಾಗೂ ಬಡತನದ ದೆಸೆಯಿಂದ ಪುಸ್ತಕಗಳನ್ನು ಕೊಳ್ಳದ ವಿದ್ಯಾರ್ಥಿಗಳು-ಇವೆಲ್ಲ ಕಾರಣವೆಂದು ಹೇಳಲಾಗಿದೆ. ಬೋಧನಕ್ರಮ ಬಹುಮಟ್ಟಿಗೆ ಅಧ್ಯಾಪಕರು ಬರೆಸುವ ಟಿಪ್ಪಣಿಗಳನ್ನು ವಿದ್ಯಾರ್ಥಿಗಳ ಹೃದ್ಗತಮಾಡಿಕೊಂಡು ಬರುವ ಹಳೆಯ ಪದ್ಥತಿಯದ್ದಾಗಿದೆ. ಪಾಠೋಪಕರಣಗಳ ಬಳಕೆ ಅಷ್ಟಾಗಿ ಪ್ರಚಾರದಲ್ಲಿಲ್ಲ. ಈಚೆಗೆ ಅಧ್ಯಾಪಕರ ಸಿದ್ಧತೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವುದೂ ತಕ್ಕಮಟ್ಟಿಗೆ ಶಾಲೆಗಳಿಗೆ ಪಾಠೋಪಕರಣಗಳನ್ನು ಒದಗಿಸುವುದೊ ಆರಂಭವಾಗಿ ಬೋಧನೆಯ ಮಟ್ಟ ಉತ್ತಮಗೊಳ್ಳುತ್ತ ಬರುತ್ತಿದೆ.

ಪ್ರೌಢಶಾಲೆಯಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಉತ್ತಮವೆಂದು ಹೇಳಬಹುದು. ಅಲ್ಲೂ ಮಾಮೂಲು ಪಠ್ಯಕ್ರಮ, ಕೇಂದ್ರ ಪರೀಕ್ಷಾ ಪದ್ಧತಿ ಮುಂತಾದ ಅಂಶಗಳಿದ್ದರೂ ಅನೇಕ ಖಾಸಗಿ ಪ್ರೌಢಶಾಲೆಗಳ ಅಧ್ಯಾಪಕರು ಉತ್ತಮ ಶಿಕ್ಷಣ ಮತ್ತು ವೃತ್ತಿಸಿದ್ಧತೆ ಪಡೆದವರಾಗಿದ್ದು, ಆಧುನಿಕ ಬೋಧನ ಕ್ರಮವನ್ನು ಅರಿತವರಾಗಿರುತ್ತಾರೆ. ಹಾಗೂ ಆ ಶಾಲೆಗಳಿಗೆ ಪ್ರಾಥಮಿಕ ಶಾಲೆಯಿಂದ ಬರತಕ್ಕ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ. ಗ್ರಾಮರ್ ಸೆಕೆಂಡರಿ ಶಾಲೆಗಳು ಪ್ರವೇಶ ಪರೀಕ್ಷೆಯೊಂದನ್ನು ಏರ್ಪಡಿಸಿ ವೈಯುಕ್ತಿಕವಾಗಿ ಅಭ್ಯರ್ಥಿಗಳನ್ನು ಭೇಟಿಮಾಡಿ ಪ್ರವೇಶಾವಕಾಶ ನೀಡುವ ಪದ್ಧತಿಯಿರುವುದರಿಂದ ಉತ್ತಮ ವಿದ್ಯಾರ್ಥಿಗಳು ಮಾತ್ರ ಅಲ್ಲಿಗೆ ಸೇರುವ ಅವಕಾಶ ಕಲ್ಪನೆಯಾಗಿದೆ. ಜೊತೆಗೆ ಪ್ರೌಢಶಾಲೆಗಳು ಬೇರೆ ಬೇರೆ ಆಡಳಿತ ವರ್ಗಕ್ಕೆ ಸೇರಿದ್ದು ಅವುಗಳ ಆಡಳಿತ, ಬೋಧನೆಯ ಮಟ್ಟ, ಪಾಠೋಪಕರಣಗಳ ಬಳಕೆ, ಬೋಧನಕ್ರಮ-ಇವುಗಳಲ್ಲಿ ವೈವಿಧ್ಯಕ್ಕೆ ಅವಕಾಶವಿರುತ್ತದೆ. ಪ್ರೌಢಶಿಕ್ಷಣ ಪಡೆದವರಿಗೆ ವೆಸ್ಟ್ ಆಫ್ರಿಕನ್ ಪರೀಕ್ಷಾ ಮಂಡಲಿ ಅಂತಿಮ ಪರೀಕ್ಷೆ ನಡೆಸುವುದರಿಂದ ಹಾಗೂ ಅದರಲ್ಲಿ ಉತ್ತೀರ್ಣರಾದವರಿಗೆ ಸರ್ಕಾರದ ಉದ್ಯೋಗಗಳು ದೊರೆಯುವುದರಿಂದ ವಿದ್ಯಾರ್ಥಿಗಳು ಅದು ಗೊತ್ತುಮಾಡುವ ಪರೀಕ್ಷಾ ವಿಷಯಗಳನ್ನು ಆಸಕ್ತಿಯಿಂದ ಓದುವರು. ಅದು ನಡೆಸುವ ಪರೀಕ್ಷೆ ಇಂಗ್ಲೆಂಡಿನಲ್ಲಿ ಪ್ರಚಾರದಲ್ಲಿರುವ ಪರೀಕ್ಷಾ ಪದ್ಥತಿಯನ್ನು ಹೋಲುವುದಾಗಿದ್ದು ಅದು ಗೊತ್ತುಮಾಡುವ ಭಾಷೆ. ಇತಿಹಾಸ, ಸಾಹಿತ್ಯ ವಿಜ್ಞಾನ-ಇವುಗಳಲ್ಲಿ ಸ್ಥಳೀಯ ಅಂಗಗಳಿಗೆ ಪ್ರಾಧಾನ್ಯವಿತ್ತಿರುವುದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ವ್ಯಾಸಂಗ ಮಾಡುವರು. ಈ ಮಂಡಲಿ ನಡೆಸುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 7-8 ವಿಷಯಗಳಲ್ಲಿ ಪರೀಕ್ಷೆಗೆ ಕೂಡುವರು. ಅವುಗಳಲ್ಲಿ 6 ವಿಷಯಗಳಲ್ಲಾದರೂ ಉತ್ತೀರ್ಣರಾದವರಿಗೆ ಅರ್ಹತಾಪತ್ರ ದೊರಕುವುದು. ಇಂಗ್ಲಿಷ್ ಭಾಷೆ, ಮತಧರ್ಮ, ಜೀವವಿಜ್ಞಾನ, ಚರಿತ್ರೆ, ಸಾಹಿತ್ಯ, ಗಣಿತ, ರಸಾಯನಶಾಸ್ತ್ರ, ಭೂಗೋಳ ಆರೋಗ್ಯಶಾಸ್ತ್ರ, ನೈಜೀರಿಯದ ಒಂದು ರಾಷ್ಟ್ರೀಯ ಭಾಷೆಯಾದ ಯಾರೂಬ್ಬ, ಇಂಗ್ಲಿಷ್ ಮಾತುಗಾರಿಕೆ, ಆಧಿಕಗಣಿತ, ಇಬೋ ಎಂಬ ಮತ್ತೊಂದು ನೈಜೀರಿಯನ್ ಭಾಷೆ-ಲ್ಯಾಟಿನ್. ಫ್ರೆಂಚ್, ಸಾಮಾನ್ಯ ವಿಜ್ಞಾನ, ವಾಣಿಜ್ಯ ವಿದ್ಯೆ-ಇವು ವಿದ್ಯಾರ್ಥಿಗಳೀಗೆ ಅವರೋಧಿ ಅನುಕ್ರಮದಲ್ಲಿ ಪ್ರಿಯವೆನಿಸಿರುವ ಪರೀಕ್ಷಾವಿಷಯಗಳು. ಉತ್ತರದ ರಾಜ್ಯಗಳಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿದ್ದರೂ ಅವರಲ್ಲಿ ಶಿಕ್ಷಣ ತೀರ ಹಿಂದುಳಿದಿದೆ. ಅವರ ಮಾತೃಭಾಷೆಯಾದ ಹಾಸ ಭಾಷೆಯನ್ನು ಈ ಪರೀಕ್ಷೆಗೆ ಆರಿಸಿಕೊಳ್ಳುವವರು ತೀರ ಅಪರೂಪ. 1965ರಲ್ಲಿ ಒಟ್ಟು 54,000 ಮಂದಿ ಭಾಷೆ ಮತ್ತು ಸಮಾಜವಿಜ್ಞಾನಗಳಲ್ಲೂ 32,000 ಮಂದಿ ಶುದ್ಧ ಮತ್ತು ಅನ್ವಯಿಕ ವಿಜ್ಞಾನಗಳಲ್ಲೂ ಕೇವಲ 2,000 ತಾಂತ್ರಿಕ ಮತ್ತು ಔದ್ಯೋಗಿಕ ವಿಷಯಗಳಲ್ಲೂ ಪರೀಕ್ಷೆಗೆ ಕುಳಿತಿದ್ದರು. ಸರ್ಕಾರ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಲು ಪ್ರಯತ್ನಿಸಿದರೂ ಆ ಮುಖವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಕಷ್ಟವಾಗುತ್ತಿರುವುದೇ ಈ ಪರಿಸ್ಥಿತಿಗೆ ಕಾರಣ

ಮೇಲೆ ಸೂಚಿಸಿದ ಪರೀಕ್ಷಾ ಮಂಡಲಿ ಉನ್ನತ ಪ್ರೌಢಶಾಲೆಯ ಪರೀಕ್ಷೆಯನ್ನೂ ನಡೆಸುತ್ತದೆ. ಕೆಲವು ಗ್ರಾಮರ್ ಸೆಕೆಂಡರಿ ಶಾಲೆಗಳು ಎರಡು ವರ್ಷದ ಆ ಮಟ್ಟದ ತರಗತಿಗಳನ್ನು ನಡೆಸುತ್ತವೆ. ಅಲ್ಲಿನ ಬೋಧನ ಕ್ರಮ ಹೆಚ್ಚು ಪರಿಣಾಮಕಾರಿಯಾಗಿರುವ್ಯದೆಂದು ಭಾವಿಸಲಾಗಿದೆ.

ವಿಶ್ವವಿದ್ಯಾಲಯದ ಶಿಕ್ಷಣ: 1932ರಲ್ಲಿ ನ್ಶೆಜೀರಿಯದಲ್ಲಿ ಉನ್ನತ ಶಿಕ್ಷಣ ಲೇಗಾಸ್‍ನಲ್ಲಿ ಯಾಬಾ ಹೈಯರ್ ಕಾಲೇಜ್ ಎಂಬ ಸಂಸ್ಥೆಯ ಉದ್ಘಾಟನೆಯಿಂದ ಆರಂಭವಾಯಿತೆನ್ನಬಹುದು. ಆಗ ಅದು ಯಾವ ಪದವಿ ಪರೀಕ್ಷೆಗೂ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿರಲಿಲ್ಲ. ಸೆಕೆಂಡರಿ ಶಿಕ್ಷಣ ಮುಗಿಸಿದವರಿಗೆ ವೈದ್ಯ, ಕೃಷಿ, ಶಿಕ್ಷಣ-ಈ ಕ್ಷೇತ್ರಗಳಲ್ಲಿ ತರಬೇತು ನೀಡುತ್ತಿತ್ತು. ಅನಂತರ ಅದು 1938ರಲ್ಲಿ ಅಬಡಾನ್ ನಗರಕ್ಕೆ ವರ್ಗವಾಗಿ ಅಬಡಾನ್ ವಿಶ್ವವಿದ್ಯಾಲಯದ ಕಾಲೇಜಾಗಿ ರೂಪುಗೊಂಡು ಲಂಡನ್ ವಿಶ್ವವಿದ್ಯಾಲಯದ ಅಂಗೀಕಾರವನ್ನು ಪಡೆದು ಅಲ್ಲಿನ ಪರೀಕ್ಷೆಗೆ ಬಾಹ್ಯ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾದ ಇನ್ನು ಮೂರು ಕಾಲೇಜುಗಳು ಕಲಾಶಾಸ್ತ್ರ, ವಿಜ್ಞಾನಶಾಸ್ತ್ರ ಮತ್ತು ತಾಂತ್ರಿಕ ವಿದ್ಯೆಗಳಲ್ಲಿ ಶಿಕ್ಷಣವೀಯುತ್ತಿದ್ದುವು. ಪೂರ್ವನೈಜೀರಿಯದ ಸರ್ಕಾರ ಸ್ವಾತಂತ್ರ್ಯ ಬರುವ ಮುನ್ನ ನಸೂಕದಲ್ಲಿ ನೈಜೀರಿಯ ವಿಶ್ವವಿದ್ಯಾಲಯವನ್ನು ಆರಂಭಿಸಿತು. ಸ್ವಾತಂತ್ರ್ಯದ ಉದಯದೊಡನೆ ಉನ್ನತ ಶಿಕ್ಷಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಯುಕ್ತ ಹೊಣೆಗಾರಿಕೆ ಬಂತು. 1963ರಲ್ಲಿ ಅಬಡಾನ್ ವಿಶ್ವವಿದ್ಯಾಲಯ ಸ್ವತಂತ್ರ ಅಸ್ತಿತ್ವ ಪಡೆಯಿತು. ಅನಂತರ ಕೇಂದ್ರ ಸರ್ಕಾರ ಲೇಗಾಸ್ ವಿಶ್ವವಿದ್ಯಾಲಯವನ್ನೂ ರಾಜ್ಯ ಸರ್ಕಾರಗಳು ನೈಜೀರಿಯ ವಿಶ್ವವಿದ್ಯಾಲಯವನ್ನೂ (ನಸೂಕದಲ್ಲಿ), ಉತ್ತರದಲ್ಲಿ ಅಹ್ಮದ್ ಬೆಲ್ಲೊ ವಿಶ್ವವಿದ್ಯಾಲಯವನ್ನೂ ಪಶ್ಚಿಮದಲ್ಲಿ ಇಫೇ ವಿಶ್ವವಿದ್ಯಾಲಯವನ್ನೂ ಆರಂಭಿಸಿದುವು.

ಈಚೆಗೆ ನೈಜೀರಿಯದ ಉನ್ನತ ಶಿಕ್ಷಣ ತೀವ್ರಗತಿಯಲ್ಲಿ ವಿಸ್ತರಿಸುತ್ತಿದೆ. 1960ರ ದಶಕದಲ್ಲಿ 7,000 ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದರು. ಇಲ್ಲಿನ ಐದು ವಿಶ್ವವಿದ್ಯಾಲಯಗಳಲ್ಲಿ ಒಂದೊಂದೂ ತನ್ನದೇ ಆದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಅಬಡಾನ್ ವಿಶ್ವವಿದ್ಯಾಲಯ ಲಂಡನ್ ವಿಶ್ವವಿದ್ಯಾಲಯದ ಮಾದರಿಯಲ್ಲಿ ಆರಂಭವಾಗಿದ್ದು ಅದರ ಉನ್ನತ ಶಿಕ್ಷಣದ ಮಟ್ಟವನ್ನು ಕಾಪಾಡಿಕೊಂಡು ಬರುತ್ತಿದೆ. ನೈಜೀರಿಯ ವಿಶ್ವವಿದ್ಯಾಲಯ ಅಮೆರಿಕದ ಧನಸಹಾಯದಿಂದ ಅಲ್ಲಿನ ಲ್ಯಾಂಡ್ ಗ್ರಾಂಟ್ ಕಾಲೇಜಿನ ಮಾದರಿಯಲ್ಲಿ ಆರಂಭವಾಗಿ, ಮುಖ್ಯವಾಗಿ ಉದ್ಯೋಗಮುಖವಾಗಿ ಕೆಲಸಮಾಡುತ್ತಿದೆ. ಇನ್ನುಳಿದ ಮೂರು ವಿಶ್ವವಿದ್ಯಾಲಯಗಳಿಗೂ ಮಧ್ಯಸ್ಥವೆನ್ನಬಹುದಾದ ಕಾರ್ಯಕ್ರಮವನ್ನು ಹೊಂದಿವೆ.

ಇತರ ಶಿಕ್ಷಣ ಸಂಸ್ಥೆಗಳು: ಉದ್ಯೋಗಶಿಕ್ಷಣ ಬಹುಮಟ್ಟಿಗೆ ಸಾಂಪ್ರದಾಯಿಕ ರೀತಿಯ ಉಮೇದುವಾರಿ ಪದ್ಧತಿಯಲ್ಲಿ ನಡೆಯುತ್ತಿದೆ; ಕೆಲವು ವೃತ್ತಿಸಂಘಗಳು ಅಭ್ಯರ್ಥಿಗಳನ್ನು ಸೇರಿಸಿಕೊಂಡು ಅವರಿಗೆ ವೃತ್ತಿಯಲ್ಲೇ (ಅನ್ ದಿ ಜಾಬ್) ತರಬೇತು ನೀಡುತ್ತಿವೆ. ಸರ್ಕಾರವೂ ಕೆಲವು ಔದ್ಯೋಗಿಕ ಸಂಸ್ಥೆಗಳೂ ವ್ಯವಸ್ಥಿತ ರೀತಿಯ ಔದ್ಯೋಗಿಕ ಶಿಕ್ಷಣಕ್ಕೆ ಏರ್ಪಾಡುಮಾಡಿವೆ. ಆ ಸಂಸ್ಥೆಗಳ ವಿದ್ಯಾರ್ಥಿಗಳು ಇಂಗ್ಲೆಂಡ್ ನಡೆಸುವ ಬಾಹ್ಯ ಪರೀಕ್ಷೆಗಳಿಗೆ ಕೂಡುವರು.

ತೀರ ಉತ್ತರದಲ್ಲಿರುವ ಅಮಿರೆಟ್ ಪ್ರಾಂತ್ಯಗಳಲ್ಲಿ ಅನೇಕ ಸಹಸ್ರ ಖಾಸಗಿ ಕೊರಾನ್ ಪಾಠಶಾಲೆಗಳಿದ್ದು, ಅಲ್ಲಿ 6 ಲಕ್ಷ ಮಂದಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲಾ ಶಿಕ್ಷಣ ಪಡೆಯಲಾಗದಿದ್ದವರು ಪತ್ರಮುಖೇನ ಶಿಕ್ಷಣವನ್ನು ಪಡೆದು ಇಂಗ್ಲೆಂಡು ನಡೆಸುವ ಪರೀಕ್ಷೆಗಳಿಗೆ ಖಾಸಗಿ ವಿದ್ಯಾರ್ಥಿಗಳಾಗಿ ಕುಳಿತು ಉತ್ತೀರ್ಣರಾಗಿ ಸರ್ಕಾರದ ಕೆಲಸಗಳಿಗೆ ಸೇರುತ್ತಾರೆ. ಅದೇ ಸೌಲಭ್ಯವನ್ನು ಬಳಸಿಕೊಂಡು ವಿಶ್ವವಿದ್ಯಾಲಯಕ್ಕೂ ಪ್ರವೇಶವಕಾಶವನ್ನು ಪಡೆದುಕೊಳ್ಳುತ್ತಾರೆ. 1960ರಲ್ಲಿ 32,000 ಮಂದಿ ಈ ಸೌಲಭ್ಯವನ್ನು ಬಳಸಿಕೊಂಡಿರುವುದು ಕಂಡು ಬರುತ್ತದೆ.

ಸಮಸ್ಯೆಗಳು: ನೈಜೀರಿಯದ ಬೇರೆ ಬೇರೆ ಪ್ರದೇಶಗಳಲ್ಲಿ ಹಾಗೂ ಪ್ರತಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಶಿಕ್ಷಣಸೌಲಭ್ಯ ಸಮಾನವಾಗಿಲ್ಲ. ಉತ್ತರದ ರಾಜ್ಯಗಳಲ್ಲಿ ಶಿಕ್ಷಣಪ್ರಗತಿ ಅಷ್ಟಾಗಿ ಅಗಿಲ್ಲ. ಮೊದಲು ಪಾದ್ರಿಗಳು ದಕ್ಷಿಣದಲ್ಲಿ ಶಾಲೆಗಳನ್ನು ಆರಂಭಿಸಿ ಅಲ್ಲಿನ ಜನರಿಗೆ ಶಿಕ್ಷಣದಲ್ಲಿ ಅಸಕ್ತಿ ಮೂಡಿಸಿದರು. ಮೇಲಾಗಿ ಅಂದಿನ ಸರ್ಕಾರ ಅದರ ಚಟುವಟಿಕೆಯನ್ನು ಉತ್ತರಕ್ಕೆ ವಿಸ್ತರಿಸಿದಂತೆ ತಡೆಯಾಜ್ಞೆ ನೀಡಿತ್ತು. ಇದರಿಂದ ದಕ್ಷಿಣದವರೇ ಹೆಚ್ಚು ವಿದ್ಯಾವಂತರಾಗಿ ಅವರಿಗೇ ಸರ್ಕಾರದ ಸ್ಥಾನಮಾನಗಳು ದೊರಕುವಂತಾಗಿದೆ. ಉತ್ತರದಲ್ಲಿ ಶಾಲಾ ವಯಸ್ಸಿನ ಮಕ್ಕಳಲ್ಲಿ ಸೇ. 11 ರಿಂದ 5.5 ರಷ್ಟು ಮಕ್ಕಳು ಮಾತ್ರ ಶಾಲೆಗೆ ಸೇರಿದ್ದಾರೆ. ಈ ರೀತಿಯ ಶಿಕ್ಷಣಸೌಲಭ್ಯದ ಹಾಗೂ ಅದರೊಡನೆ ಹೆಣೆದುಕೊಂಡಿರುವ ಆರ್ಥಿಕ ಮಟ್ಟದ ಅಸಮಾನತೆಯ ಫಲವಾಗಿ ನೈಜೀರಿಯದಲ್ಲಿ ಅಂದಿಗಂದಿಗೆ ಸಾಮಾಜಿಕ ಕ್ಷೋಭೆಗಳು ಕಾಣಿಸಿಕೊಳ್ಳುತ್ತಿವೆ. 1967ರಲ್ಲಿ ಅಲ್ಲಿ ಉದ್ಭವಿಸಿದ ಅಂತರ್ಯುದ್ಧಕ್ಕೂ ಈ ಅಸಮಾನತೆಯೇ ಕಾರಣವೆಂದು ಸೂಚಿಸಲಾಗಿದೆ. ಈ ಅಸಮಾನತೆಯನ್ನು ನಿವಾರಿಸಲು ಅಗತ್ಯವಾದಂತೆ ಶಿಕ್ಷಣ ಸೌಲಭ್ಯವನ್ನು ವಿಸ್ತರಿಸುವ ಯತ್ನ ನಡೆದಿದ್ದರೂ ಅಷ್ಟಾಗಿ ಫಕಕಾರಿಯಾಗಿಲ್ಲವೆಂದೇ ಹೇಳಬೇಕು.

ಶಿಕ್ಷಣದಲ್ಲಿ ಆಧಿಕ ಅಪವ್ಯಯ: ನೈಜೀರಿಯದಲ್ಲಿ ಆಧುನಿಕ ಶಿಕ್ಷಣ ಸುಮಾರು ಒಂದು ಶತಮಾನದ ಹಿಂದೆಯೇ ಆರಂಭವಾಗಿದ್ದರೂ 1960ರ ವರೆಗೆ ಅಷ್ಟಾಗಿ ವಿಸ್ತರಿಸಿರಲಿಲ್ಲ. ಸ್ವಾತಂತ್ರ್ಯಾನಂತರ ನೂತನ ಉತ್ಸಾಹವೇನೋ ಮೂಡಿತು. 1950ರಲ್ಲಿ ಪ್ರಾಥಮಿಕ ಶಾಲೆಗೆ ಕೇವಲ 10 ಲಕ್ಷ ಮಂದಿ ಸೇರಿದ್ದರು. 1960ರಲ್ಲಿ ಆ ಸಂಖ್ಯೆ 30 ಲಕ್ಷಕ್ಕೆ ಏರಿತು. ಇದೇ ಪ್ರಮಾಣದಲ್ಲಿ ಪ್ರೌಢಶಾಲೆಗಳ ಸಂಖ್ಯೆಯೂ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ಹೆಚ್ಚಿದುವು. ಆದರೆ ಪ್ರಾಥಮಿಕ ಶಾಲೆಗೆ ಸೇರಿದ ಅನೇಕ ವಿದ್ಯಾರ್ಥಿಗಳು ಆ ಶಿಕ್ಷಣವನ್ನು ಮುಗಿಸದೆಯೇ ಶಾಲೆಯನ್ನು ಬಿಟ್ಟು ಬಿಡುವರು. ಅಲ್ಲಿಗೆ ಸೇರಿದ 6 ಲಕ್ಷ ಮಂದಿಯಲ್ಲಿ ಕೇವಲ 2 ಲಕ್ಷ ಮಂದಿ ಪ್ರೌಢ ಶಾಲೆಗೆ ಸೇರುವರು. ಅವರಲ್ಲಿ ಕೇವಲ 50,000 ಮಂದಿ ಪ್ರೌಢಶಾಲೆಯ ಶಿಕ್ಷಣ ಮುಗಿಸುವರು. ಅವರಲ್ಲಿ ಕೇವಲ 5,000 ಮಂದಿ ಮಾತ್ರ ವಿಶ್ವವಿದ್ಯಾಲಯದ ಶಿಕ್ಷಣ ಮುಗಿಸುವರು. ಈ ಅಗಾಧವಾದ ಅಪವ್ಯಯ ಅಲ್ಲಿನ ಶಿಕ್ಷಣದ ಬಹು ದೊಡ್ಡ ಸಮಸ್ಯೆಯಾಗಿದೆ.

ಆಧ್ಯಾಪಕರ ಶಿಕ್ಷಣ: ನೈಜೀರಿಯದ ಶಿಕ್ಷಣದಲ್ಲಿ ದಕ್ಷತೆಯ ಅಭಾವಕ್ಕೆ ಅಧ್ಯಾಪಕರಿಗೆ ತಕ್ಕಷ್ಟು ಶಿಕ್ಷಣ ತರಬೇತಿಲ್ಲದಿರುವುದೂ ಸಮಾಜದಲ್ಲಿ ಅವರಿಗೆ ಅಷ್ಟಾಗಿ ಗೌರವಸ್ಥಾನವಿಲ್ಲದಿರುವುದೂ ಅವರಿಗೆ ಇತರ ಉದ್ಯೋಗಗಳಿಗಿಂತ ಕಡಿಮೆ ಸಂಬಳ ದೊರಕುತ್ತಿರುವುದೂ ಕಾರಣವೆಂದು ಸೂಚಿಸಲಾಗಿದೆ. ಪ್ರಾಥಮಿಕ ಶಾಲೆಯ ಶಿಕ್ಷಣ ಮುಗಿಸಿದವರು ಕೇವಲ ಎರಡು ವರ್ಷದ ಶಿಕ್ಷಣ ತರಬೇತು ಪಡೆದು ಅಲ್ಲಿಗೇ ಶಿಕ್ಷಕರಾಗುತ್ತಿರುವರು. ಈಚೆಗೆ ಅವರ ಸಾಂಸ್ಕøತಿಕ ಶಿಕ್ಷಣವನ್ನು ಹೆಚ್ಚಿಸಿ ವೃತ್ತಿ ಶಿಕ್ಷಣವನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸುವ ಕಾರ್ಯ ನಡೆದಿದೆ. ಆದರೆ ಸೇ. 60ಕ್ಕಿಂತ ಹೆಚ್ಚು ಮಂದಿ ಕಡಿಮೆ ಶಿಕ್ಷಣ ಪಡೆದವರು ಅಧ್ಯಾಪಕರಾಗಿ ಇಂದಿಗೂ ಮುಂದುವರಿಯುತ್ತಿರುವರು.

ಪ್ರೌಢಶಾಲೆಗಳಲ್ಲಿ ಪದವೀಧರರು ಅಧ್ಯಾಪಕ ವೃತ್ತಿಗೆ ಸೇರಬೇಕೆಂಬ ಕಾನೂನು ಮಾಡಿದ್ದರೂ ಅವರಿಗೆ ಉತ್ತಮ ಸಂಬಳಸಾರಿಗೆಗಳನ್ನು ಗೊತ್ತುಮಾಡಿಲ್ಲ. ಆದ್ದರಿಂದ ಬೇರೆ ಕೆಲಸ ಸಿಕ್ಕಿದೊಡನೆ ಅಲ್ಲಿನ ಅಧ್ಯಾಪಕರು ಬಿಟ್ಟು ಹೋಗುತ್ತಿರುವರು. ಗಣಿತ, ವಿಜ್ಞಾನ, ತಾಂತ್ರಿಕ ವಿಷಯ ಮುಂತಾದವುಗಳ ಬೋಧನೆಗೆ ತಕ್ಕ ಅಧ್ಯಾಪಕರು ಸಿಕ್ಕುವುದು ಕಷ್ಟ. ಜೊತೆಗೆ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ತಕ್ಕಷ್ಟು ಅಡಳಿತ ಕಾರ್ಯಗಳಲ್ಲಿ ತರಬೇತಿರುವುದಿಲ್ಲ. ಇವೆಲ್ಲ ಕಾರಣಗಳಿಂದ ಅಲ್ಲಿನ ಶಿಕ್ಷಣದಲ್ಲಿ ಅದಕ್ಷತೆ ಮೂಡಿಕೊಂಡಿದೆಯೆಂದು ಹೇಳುವುದುಂಟು. (ಎನ್.ಎಸ್.ವಿ.)