ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಟ್ರೊಗ್ಲಿಸರಿನ್

ವಿಕಿಸೋರ್ಸ್ದಿಂದ

ನೈಟ್ರೊಗ್ಲಿಸರಿನ್ - ತೀವ್ರ ಎದೆನೋವು ಉಂಟಾಗುವ ಆಂಜೈನ ಪೆಕ್ಟೊರಿಸ್ ಎಂಬ ಹೃದ್ರೋಗ ಸ್ಥಿತಿಯಲ್ಲಿ ಬಲು ಪರಿಣಾಮಕಾರಿಯಾಗಿ ವರ್ತಿಸುವ ರಾಸಾಯನಿಕ. ವಾಸ್ತವವಾಗಿ ರಾಸಾಯನಿಕ ರಚನೆಯ ಪ್ರಕಾರ ಈ ವಸ್ತು ಗ್ಲಿಸರಾಲ್ ಟ್ರೈನೈಟ್ರೈಟ್. ಇದು ನೈಟ್ರೈಟ್ ಅಂಶವೇ ಎದೆನೋವು ನಿಲ್ಲುವಂತೆ ಮಾಡುವ ಘಟಕ. ನೈಟ್ರೈಟ್ ಘಟಕ ಅನೈಚ್ಛಿಕ ಸ್ನಾಯುಗಳ ಅದರಲ್ಲೂ ರಕ್ತನಾಳಗಳ ಅನೈಚ್ಛಿಕ ಸ್ನಾಯುಗಳ ವ್ಯಾಕೋಚನವನ್ನು ಉಂಟುಮಾಡುವುದು ತಿಳಿದಿದೆ. ಸಾಕಷ್ಟು ರಕ್ತಪೂರೈಕೆ ಆಗದೆ ಗುಂಡಿಗೆ ಸ್ನಾಯುವಿಗೆ ತಕ್ಕಷ್ಟು ಆಕ್ಸಿಜನ್ ಒದಗದಾಗ ಆಂಜೈನಪೆಕ್ಟೊರಿಸ್ ಎಂಬ ಎದೆನೋವು ತಲೆದೋರುತ್ತದೆ. ಆಂಜೈನದಿಂದ ನರಳುವ ವ್ಯಕ್ತಿಯಲ್ಲಿ ಗುಂಡಿಗೆಯ ಕೆಲವು ಅಪಧಮನಿಗಳ ಒಳವ್ಯಾಸ ಕಿರಿದಾಗುತ್ತದೆ. ಅವುಗಳಲ್ಲಿ ರಕ್ತದ ಸುಲಭ ಪ್ರವಾಹಕ್ಕೆ ಆಗ ಅಡಚಣೆ ಆಗಿ ವಿಶ್ರಾಂತಸ್ಥಿತಿಯಲ್ಲಿ ಕೂಡ ಆಂಜೈನ ರೋಗಿಗಳಲ್ಲಿ ಗುಂಡಿಗೆಯ ಆಕ್ಸಿಜನ್ ಪೂರೈಕೆ ಅದರ ಕನಿಷ್ಠ ಆವಶ್ಯಕತೆಗೆ ತಕ್ಕಷ್ಟು ಮಾತ್ರ ಆಗುವಂತಿರುತ್ತದೆ. ಯಾರಿಗಾದರೂ ಯಾವುದೇ ರೀತಿಯ ದೈಹಿಕ ಶ್ರಮವಾದಾಗ ಗುಂಡಿಗೆಯ ರಕ್ತಪೂರೈಕೆ ಅಧಿಕಗೊಂಡು ಆಕ್ಸಿಜನ್ ಪೂರೈಕೆ ಅಧಿಕಗೊಳ್ಳಬೇಕಾದುದು ಅಗತ್ಯವಾದಂತೆ ಆಂಜೈನ ರೋಗಿಗಳಲ್ಲಿಯೂ ಅಗತ್ಯ. ಆದರೆ ಮೇಲೆ ಹೇಳಿದಂತೆ ಅಪಧಮನಿಗಳಲ್ಲಿ ಸುಲಭ ರಕ್ತಪ್ರವಾಹಕ್ಕೆ ಅಡಚಣೆ ಉಂಟಾಗುವುದರಿಂದದ ದೈಹಿಕ ಶ್ರಮ ಸಂದರ್ಭಗಳಲ್ಲಿ ಆಂಜೈನ ರೋಗಿಗಳಲ್ಲಿ ಆಕ್ಸಿಜನ್ ಅಗತ್ಯಕ್ಕೆ ಧಕ್ಕೆ ಉಂಟಾಗುವುದು ಸಹಜ. ಎಂದೇ ಅಂಥ ಸಂದರ್ಭಗಳಲ್ಲಿ ತೀವ್ರ ಎದೆ ನೋವು ಕಾಣಿಸಿಕೊಳ್ಳುವುದಾಗಿದೆ. ನೈಟ್ರೊಗ್ಲಿಸರಿನ್ ಸೇವನೆಯಿಂದ ಗುಂಡಿಗೆಯ ಅಪಧಮನಿಗಳ ಸ್ನಾಯುಗಳು ವ್ಯಾಕೋಚಿಸಿ ಅಪಧಮನಿಗಳು ಹಿಗ್ಗುವುದರಿಂದ ಅವುಗಳಲ್ಲಿ ರಕ್ತಪ್ರವಾಹಕ್ಕೆ ಅಡಚಣೆ ತಗ್ಗಿ ಗುಂಡಿಗೆಗೆ ತಕ್ಕಷ್ಟು ರಕ್ತ ಅರ್ಥಾತ್ ಆಕ್ಸಿಜನ್ ಒದಗುವಂತಾಗಿ ಎದೆನೋವು ನಿಲ್ಲುತ್ತದೆ. ವಾಸ್ತವವಾಗಿ ಇಂಥ ಔಷಧೋಪಚಾರಕ್ಕಾಗಿ ಪ್ರಯೋಗಿಸಿದ ಪ್ರಥಮ ನೈಟ್ರೈಟ್ ಅಂದರೆ ನೈಟ್ರೊಗ್ಲಿಸರಿನ್ ಮಾತ್ರೆಗಳನ್ನು ದಿನಕ್ಕೆ ಎರಡರಂತೆ ಸೇವಿಸಬಹುದು. ಆದರೆ ಸಾಮಾನ್ಯ ಪ್ರಯೋಗವೆಂದರೆ 0.2-0.3 ಮಿಲಿಗ್ರಾಮ್. ನೈಟ್ರೊಗ್ಲಿಸರಿನ್ ಮಾತ್ರೆಗಳನ್ನು ನಾಲಗೆಯ ಕೆಳಕ್ಕೆ ಒತ್ತರಿಸಿ ಇಟ್ಟುಕೊಂಡು ಅದು ಅಲ್ಲೆ ನಿಧಾನವಾಗಿ ವಿಲೀನವಾಗಿ ರಕ್ತಗತವಾಗುವಂತೆ ಮಾಡುವುದು.

ದೇಹದ ಇತರೆಡೆ ಅನೈಚ್ಛಿಕ ಸ್ನಾಯುಗಳ ವ್ಯಾಕೋಚನಕ್ರಿಯೆಯ ಅನುಕೂಲತೆಯನ್ನು ಪಡೆಯುವುದಕ್ಕಾಗಿಯೂ ನೈಟ್ರೊಗ್ಲಿಸರಿನ್ನನ್ನು ಬಳಸಬಹುದು. ಆಸ್ತಮದಲ್ಲಿ ಉಸಿರುನಾಳಗಳ ಸ್ನಾಯುಗಳ ವ್ಯಾಕೋಚನಕ್ಕಾಗಿಯೂ ಉದರಶೂಲೆಯಲ್ಲಿ ಜಠರ ಕರುಳು ಪಿತ್ತನಾಳಗಳ ಸ್ನಾಯುಗಳ ವ್ಯಾಕೋಚನಕ್ಕಾಗಿಯೂ ನೈಟ್ರೊಗ್ಲಿಸರಿನ್ನನ್ನು ಬಳಸಬಹುದು. ಆದರೆ ಇದಕ್ಕಿಂತ ತೀವ್ರವಾಗಿ ಕೆಲಸ ಮಾಡುವ ಔಷಧ ವಸ್ತುಗಳಿರುವುದರಿಂದ ಮೇಲಿನ ಸಂದರ್ಭಗಳಲ್ಲಿ ನೈಟ್ರೊಗ್ಲಿಸರಿನ್ನಿನ ಬಳಕೆ ಅಪರೂಪವೆಂದರೂ ಇದು ಆಂಜೈನಕ್ಕೆ ರಾಮಬಾಣವೇ ಸರಿ. ಇದರ ದೀರ್ಘಕಾಲಿಕ ಬಳಕೆಯಿಂದ ಗುಂಡಿಗೆಯ ಒಂದು ಅಪಧಮನಿಯ ಕವಲುಗಳು ಇನ್ನೊಂದು ಅಪಧಮನಿಯ ಕವಲುಗಳೊಡನೆ ಕೂಡಿಕೊಳ್ಳುವಂತಾಗುವುದೂ ತಿಳಿದಿದೆ. ಇದೂ ಆಂಜೈನ ರೋಗಿಗಳಿಗೆ ತುಂಬ ಅನುಕೂಲವಾದ ಪರಿಣಾಮ. ನೈಟ್ರೊಗ್ಲಿಸರಿನ್ ಮುಲಾಮನ್ನು ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮದ ಅಡಿಯಲ್ಲಿರುವ ಅಪಧಮನಿಗಳು ಹಿಗ್ಗಿ ದೇಹದ ಆ ಭಾಗದ ರಕ್ತಪೂರೈಕೆ ಉತ್ತಮಗೊಳ್ಳುತ್ತದೆ. ರೇನಾಡಿನ ರೋಗವಿರುವವರಲ್ಲಿ ಕೈಗಳ ರಕ್ತಪೂರೈಕೆಯನ್ನು ಉತ್ತಮಗೊಳಿಸಿ ನೋವು ತಗ್ಗಿಸಿ ಕೈಗಳನ್ನು ಕ್ರಿಯಾಶೀಲವಾಗಿಸಲು ನೈಟ್ರೊಗ್ಲಿಸರಿನ್ ಮುಲಾಮನ್ನು ಬಳಸುವುದಿದೆ.

ನೈಟ್ರೊಗ್ಲಿಸರಿನ್ನಿನಿಂದ ದೇಹದ ಬಹುಭಾಗಗಳಲ್ಲಿ ರಕ್ತನಾಳಗಳು ವ್ಯಾಕೋಚಿಸುವುದರಿಂದ ದೇಹದ ರಕ್ತದ ಒತ್ತಡ ಕಡಿಮೆ ಆಗುವ ಸಂಭವ ಇದೆ. ಇದರಿಂದ ನೈಟ್ರೊಗ್ಲಿಸರಿನ್ ತೆಗೆದುಕೊಂಡ ಕೆಲ ಮಿನಿಟುಗಳು ಕಳೆಯುವ ತನಕ ಎದ್ದುನಿಂತು ಓಡಾಡುವುದು ಕ್ಷೇಮವಲ್ಲ. ರಕ್ತದ ಒತ್ತಡ ತಗ್ಗುವುದರಿಂದ ಮಿದುಳಿನ ರಕ್ತಪೂರೈಕೆಗೆ ಭಾಗಶಃ ಕೊರತೆ ಉಂಟಾಗಿ ಜ್ಞಾನ ತಪ್ಪಿ ಬಿದ್ದುಬಿಡಬಹುದು. ಇಂಥ ಸಂಭವ ಅದೇ ಕಾಲದಲ್ಲಿ ಮದ್ಯಪಾನ ಮಾಡಿದವರಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ನೈಟ್ರೊಗ್ಲಿಸರಿನ್ ಸೇವಿಸುವಾಗ ಮದ್ಯಪಾನವನ್ನು ನಿಷೇಧಿಸುವುದು ಒಳ್ಳೆಯದನ್ನಿಸಿದೆ. ಅಧಿಕ ನೈಟ್ರೊಗ್ಲಿಸರಿನ್ ಸೇವನೆಯಿಂದ ರಕ್ತದ ಹೀಮೊಗ್ಲೋಬಿನ್, ಮೆತ್ ಹೀಮೊಗ್ಲೋಬಿನ್ ಎಂಬ ವಸ್ತುವಾಗಿ ಪರಿವರ್ತಿತವಾಗಬಹುದು. ಇದರಿಂದ ರಕ್ತದ ಆಕ್ಸಿಜನ್ ವಾಹಕತೆಗೆ ಧಕ್ಕೆ ಉಂಟಾಗುತ್ತದೆ. ಆದರೆ ಆಂಜೈನರೋಗಿಗಳು ಬಳಸುವಷ್ಟು ಮತ್ತು ಬಳಸುವಂತೆ ನೈಟ್ರೊಗ್ಲಿಸರನ್ನನ್ನು ಬಳಸಿದಾಗ ಈ ದುಷ್ಪರಿಣಾಮ ಸಾಮಾನ್ಯವಾಗಿ ಕಂಡುಬರದು. (ಎಸ್.ಆರ್.ಆರ್.)