ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಟ್ರೊಸೆಲ್ಯುಲೋಸ್

ವಿಕಿಸೋರ್ಸ್ದಿಂದ

ನೈಟ್ರೊಸೆಲ್ಯುಲೋಸ್ ಹತ್ತಿಯ ಸೆಲ್ಯುಲೋಸ್ ಮೇಲೆ ಸಲ್ಫ್ಯೂರಿಕ್ ಆಮ್ಲೃ ಮತ್ತು ನೈಟ್ರಿಕ್ ಆಮ್ಲಗಳು ಮಿಶ್ರಣದ ಕ್ರಿಯೆ ನಡೆದಾಗ ದೊರೆಯುವ ಉತ್ಪನ್ನ. ರಾಸಾಯನಿಕ ಕ್ರಿಯೆ ನಡೆಯುವಾಗ ಆಮ್ಲದ ಸಾರತೆ ಮತ್ತು ಕ್ರಿಯಾಕಾಲ ಇವನ್ನು ಅನುಸರಿಸಿ ವಿವಿಧ ಬಗೆಯ ನೈಟ್ರೇಟುಗಳು ಉತ್ಪತ್ತಿಯಾಗುತ್ತವೆ. ಸಾರ ನೈಟ್ರಕ್ ಆಮ್ಲವನ್ನು ಉಪಯೋಗಿಸುವುದರಿಂದ ಸೆಲ್ಯುಲೋಸ್ ಹೆಕ್ಸನೈಟ್ರೇಟ್ ಅಥವಾ ತುಪಾಕಿಮದ್ದು ತಯಾರಾಗುತ್ತದೆ. ಹೀಗಲ್ಲದೆ ಸಾರರಿಕ್ತ ಆಮ್ಲವನ್ನು ಉಪಯೋಗಿಸಿದಲ್ಲಿ ಸಿಡಿಯುವ ಗುಣವಿರದ ಟೆಟ್ರನೈಟ್ರೇಟ್, ಪೆಂಟನೈಟ್ರೇಟುಗಳ ಮಿಶ್ರಣಗಳ ಉತ್ಪತ್ತಿಯಾಗಿ ಬಟ್ಟೆ ತಯಾರಿಸಲು ಉಪಯೋಗವಾಗುತ್ತವೆ.

ಹತ್ತಿಯ ಚೂರುಗಳನ್ನು ಕಾಸ್ಟಿಕ್ಕಿನಲ್ಲಿ ಕುದಿಸಿದಾಗ ಅವುಗಳಲ್ಲಿಯ ಎಣ್ಣೆ ತೆಗೆಯಲ್ಪಡುತ್ತದೆ. ಯಾವ ರೀತಿಯ ಬಣ್ಣವೂ ಬೇಡವಾಗಿದ್ದರೆ ಅವನ್ನು ಚಲುವೆ ಮಾಡಬಹುದು. ಸಾಧಾರಣವಾಗಿ 14.5 ಕೆ.ಜಿ. ಹತ್ತಿಯನ್ನು ಸುಮಾರು 680 ಕೆಜಿ ಮಿಶ್ರ ಆಮ್ಲದಲ್ಲಿ ನೈಟ್ರೋಷನ್ ಕ್ರಿಯೆಗೆ ಒಳಪಡಿಸುತ್ತಾರೆ. ಇದರಲ್ಲಿ ಸಾಧಾರಣವಾಗಿ ಒಂದೇ ಮಾದರಿಯ ನೈಟ್ರೊಸೆಲ್ಯುಲೋಸ್ ಉತ್ಪತ್ತಿ ಆಗುವುದಿಲ್ಲ. ಪರಮಾಣುವಿನಲ್ಲಿ ಬೇರೆ ಬೇರೆ ಬಗೆಯ ಸಂಖ್ಯೆಯುಳ್ಳ ನೈಟ್ರೇಟ್ ಗುಂಪುಗಳ ಮಾಲೆಯೇ ರಚನೆ ಆಗುತ್ತದೆ. ಸುಮಾರು 15 ಮಿನಿಟುಗಳ ತರುವಾಯ ಹತ್ತಿಯಲ್ಲಿಯ ಆಮ್ಲವನ್ನು ಅಪಕೇಂದ್ರಕಗಳ ಸಹಾಯದಿಂದ ತೆಗೆದು ಚೆನ್ನಾಗಿ ಬಡಿದು ಸಾರರಿಕ್ತ ಪ್ರತ್ಯಾಮ್ಲಗಳ ನೀರಿನಲ್ಲಿ ಚೆನ್ನಾಗಿ ಕುದಿಸುತ್ತಾರೆ. ಕೊನೆಗೆ ಇದನ್ನು ಆಲ್ಕೊಹಾಲಿನಲ್ಲಿ ಸುಮಾರು 135 ಕೆಜಿ ಒತ್ತಡಕ್ಕೆ ಒಳಪಡಿಸಿದಾಗ ಪುಡಿಹತ್ತಿಯಂಥ ನೈಟ್ರೊಸೆಲ್ಯುಲೋಸ್ ಉತ್ಪತ್ತಿ ಅಗುತ್ತದೆ.

ಷಾರ್ಡೋನೇ (1839-1924) ಎಂಬ ವಿಜ್ಞಾನಿ ತನ್ನ ಜೀವಮಾನವೆಲ್ಲ ಪ್ರಯತ್ನಿಸಿ ನೈಟ್ರೊಸೆಲ್ಯುಲೋಸನ್ನು ತಯಾರಿಸಿದ. ಹತ್ತಿಯನ್ನು ಎಂದಿನಂತೆ ಮಿಶ್ರ ಆಮ್ಲಗಳಲ್ಲಿ ಬೆರೆಸಿ ನೈಟ್ರೊಸೆಲ್ಯುಲೋಸನ್ನು ತಯಾರಿಸಿ ಅದನ್ನು ಈಥರ್ ಮತ್ತು ಆಲ್ಕೊಹಾಲ್ ಮಿಶ್ರಣದಲ್ಲಿ ವಿಲೀನಿಸಬೇಕು. ಈ ಮಿಶ್ರಣವನ್ನು ವಾಯುವಿನಲ್ಲಿ ನೂತಾಗ ಈಥರ್ ಮತ್ತು ಆಲ್ಕೊಹಾಲುಗಳು ಆವಿಯಾಗಿ ಬೇರ್ಪಟ್ಟು ನೈಟ್ರೊಸೆಲ್ಯುಲೋಸಿನ ಎಳೆಗಳು ವಾಯುವಿನಲ್ಲಿ ಘನೀಭವಿಸುತ್ತವೆ. ನೈಟ್ರೊಸೆಲ್ಯುಲೋಸ್ ಅತಿ ಜಾಗ್ರತೆ ಹತ್ತಿಕೊಂಡು ಉರಿಯಬಲ್ಲದು. ಹೀಗಾಗಿ ದಿನನಿತ್ಯದ ಬಳೆಕೆಯಲ್ಲಿ ಇದು ಅಪಾಯಕಾರಿ. ಎಂದೇ ವ್ಯಾಪಾರೀ ಉಪಯೋಗ ವಲಯಗಳಲ್ಲಿ ಇದರ ಉಪಯೋಗ ಕಡಿಮೆಯಾಗುತ್ತ ಬಂದಿದೆ. ಕೆಲವು ಕಾಲ ಇದನ್ನು ಕೃತಕ ರೇಷ್ಮೆಯಂತೆ ಉಪಯೋಗಿಸಲಾಗುತ್ತಿತ್ತು. ಆದರೆ ಇದಕ್ಕಿಂತ ಗುಣಮಟ್ಟದಲ್ಲಿ ಅಧಿಕವಾದ ವಿಸ್ಕೋಸ್ ಮತ್ತು ಕ್ಯುಪ್ರಮೋನಿಯಮ್ ಕೃತಕರೇಷ್ಮಗಳ ಮುಂದೆ ನೈಟ್ರೊಸೆಲ್ಯುಲೋಸ್ ಈಗ ಹಿಂದೆ ಸರಿದಿದೆ. (ಕೆ.ಬಿ.ಸಿ.)