ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಡ, ಯೂಜೀನ್ ಎ

ವಿಕಿಸೋರ್ಸ್ದಿಂದ

ನೈಡ, ಯೂಜೀನ್ ಎ - ಅಮೆರಿಕೆಯ ರಚನಾಪಂಥಕ್ಕೆ (ಸ್ಟ್ರಕ್ಚರಲಿಸಂ) ಸೇರಿದ ಒಬ್ಬ ಹೆಸರಾಂತ ಭಾಷಾಶಾಸ್ತ್ರಜ್ಞ. ಭಾಷಾಶಾಸ್ತ್ರ ಹಾಗೂ ಭಾಷಾಂತರಕ್ಕೆ ಸಂಬಂಧಪಟ್ಟಂತೆ ಕೆಲವು ಕೃತಿಗಳನ್ನು ರಚಿಸಿದ್ದಾನೆ. ಆಕ್ಲಹಾಮಾದಲ್ಲಿ ಹುಟ್ಟಿದ ಈತ ಲಾಸ್ ಏಂಜಲಿಸ್‍ನಲ್ಲಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಅಧ್ಯಯನ ನಡೆಸಿ ಅನಂತರ ದಕ್ಷಿಣ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯವನ್ನು ಸೇರಿದ. ಮಿಶಿಗನ್ ವಿಶ್ವವಿದ್ಯಾಲಯದಿಂದ 1943ರಲ್ಲಿ ಎ ಸಿನಾಪ್ಪಿಸ್ ಆಫ್ ಇಂಗ್ಲಿಷ್ ಸಿಂಟ್ಯಾಕ್ಸ್ ಎಂಬ ಪ್ರೌಢ ಪ್ರಬಂಧಕ್ಕಾಗಿ ಪಿ.ಎಚ್.ಡಿ. ಪದವಿ ಪಡೆದ.

ಕೆಲವು ಕಾಲ ಈತ ಭಾಷಾಶಾಸ್ತ್ರದ ಸಮ್ಮರ್ ಇನ್‍ಸ್ಟಿಟ್ಯೂಟಿನೊಡನೆ ಸಂಬಂಧವನ್ನು ಪಡೆದಿದ್ದು, 1943ರಿಂದೀಚೆಗೆ ಅಮೆರಿಕನ್ ಬೈಬಲ್ ಸೊಸೈಟಿಯ ಭಾಷಾಂತರ ವಿಭಾಗದ ಕಾರ್ಯದರ್ಶಿಯಾಗಿ ಕೆಲಸ ಮಾಡತೊಡಗಿದ. ಈ ಸಮಯದಲ್ಲಿ ವ್ಯಾಪಕವಾಗಿ ಪ್ರವಾಸ ಕೈಗೊಂಡು ಅನೇಕ ಆದಿಮ ಭಾಷೆಗಳನ್ನು ಕುರಿತು ಭಾಷಾಶಾಸ್ತ್ರೀಯ ಅಧ್ಯಯನ ನಡೆಸಿದ.

ತನ್ನ ಪ್ರೌಢ ಪ್ರಬಂಧದಲ್ಲಿ ಈತ ಇಂಗ್ಲಿಷ್ ವಾಕ್ಯರಚನಾ ವಿಶ್ಲೇಷಣೆ ಮಾಡುವಲ್ಲಿ ಲೇಖಕನ ಸ್ವಂತ ನುಡಿಯಲ್ಲಿಯೆ ಕಂಡುಬರುವ ವಾಕ್ಯರಚನಾ ಸಮಸ್ಯೆಗಳಿಗೆ ವರ್ಣನಾತ್ಮಕ ತಂತ್ರಗಳನ್ನು ಅನ್ವಯಿಸುವುದು ಹೇಗೆಂಬುದನ್ನು ತೋರಿಸಿಕೊಡುವ ತನ್ನ ಉದ್ದೇಶವನ್ನು ವ್ಯಕ್ತಪಡಿಸಿದ್ದಾನೆ. ಹಾಗೆಯೇ ಕ್ರಮ, ಆಯ್ಕೆ, ಅಳವಡಿಕೆ ಮತ್ತು ಧ್ವನ್ಯಾತ್ಮಕ ಬದಲಾವಣೆಗಳಿಗೆ ಸಂಬಂಧಪಟ್ಟ ಟ್ಯಾಕ್ಸೀಮುಗಳನ್ನಾಧರಿಸಿ ಟ್ಯಾಗ್ಮೀಮು ರಚನೆಯ ಹಿನ್ನೆಲೆಯಲ್ಲಿ ಭಾಷೆಯ ಸ್ಥೂಲ ವಿನ್ಯಾಸದ ರೂಪರೇಖೆಗಳನ್ನು ತೋರಿಸಲು ಪ್ರಯತ್ನಪಟ್ಟಿದ್ದಾನೆ.

ಆದಿಮ ಭಾಷೆಗಳ ವಾಕ್ಯರಚನಾ ವಿಶ್ಲೇಷಣೆ ಮಾಡಲು ಅರ್ಥತತ್ತ್ವಗಳನ್ನು ಹೇಗೆ ಬಳಸಬಹುದೆಂಬ ಬಗ್ಗೆ ನೈಡ ವಿಶೇಷ ಆಸಕ್ತಿಯಿಂದ ವಿಚಾರ ಮಾಡುತ್ತಿದ್ದುದರಿಂದ ಈ ರೀತಿಯ ಅಧ್ಯಯನದೆಡೆಗೆ ಈತನ ಒಲವು ಮೂಡಿತು. ಭಾಷೆಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಭಾಷಿಕವಲ್ಲದ ಅಂಶಗಳನ್ನು ಸೇರಿಸದೆ ಹೇಗೆ ಉಕ್ತಿಗಳನ್ನು ಬರೆಯಬಹುದೆಂಬ ಬಗ್ಗೆ ನೈಡ ಕಳಕಳಿತೋರಿದ್ದಾನೆ. ಭಾಷೆಯೊಂದರ ಎಲ್ಲ ಅಂಶಗಳೂ ವಿಶ್ಲೇಷಣೆಯಲ್ಲಿ ಒಂದಕ್ಕೊಂದಕ್ಕೆ ಸಂಗತವಾಗಿರುತ್ತವೆಂದು ಆತನ ಅಭಿಪ್ರಾಯ. ಇಂದು ಅರ್ಥವಿಜ್ಞಾನದಲ್ಲಿ ಸಾಕಷ್ಟು ಇತ್ತೀಚಿನ ಬೆಳೆವಣಿಗೆಗಳು ಕಂಡು ಬಂದಿದ್ದರೂ ನೈಡನ ಕೊಡುಗೆ ಭಾಷಾಶಾಸ್ತ್ರಕ್ಕೆ ಗಮನಾರ್ಹವಾದುದು.

ಸಪೀರ್, ಬ್ಲೂಮ್ ಫೀಲ್ಡ್‍ರಂತೆ ನೈಡ ಸಹ ವರ್ಣನಾತ್ಮಕ ಭಾಷಾಶಾಸ್ತ್ರದ ಬಗ್ಗೆ ಕೆಲಸ ಮಾಡುತ್ತಿದ್ದರೂ ಭಾಷೆಯನ್ನು ರಚನೆಗಳ ಸಮೂಹವೆಂದೆ ಪರಿಗಣಿಸಿದ. ವಾಸ್ತವವಾಗಿ ರಚನಾಪಂಥದವರ ವರ್ಣನಾತ್ಮಕ ಪದವಾದ ರಾಚನಿಕೆ ಎಂಬ ಪದಕ್ಕೆ ವಿರೋಧವಾಗಿರಲಿಲ್ಲ. ವಿಧಾಯಕ ಅಥವಾ ಐತಿಹಾಸಿಕ ಎಂಬ ಪದಕ್ಕೆ ಮಾತ್ರ ಅದು ವಿರೋಧವಾಗಿತ್ತಷ್ಟೆ. ವರ್ಣನಾತ್ಮಕ ಭಾಷಾಶಾಸ್ತ್ರದ ಸಿದ್ಧಾಂತ ಮತ್ತು ತಂತ್ರಗಳನ್ನು ಸಂಕೇತಗಳಲ್ಲಿ ಅಭಿವ್ಯಕ್ತಿಗೊಳಿಸಿ ಸೂತ್ರೀಕರಿಸಿದ ಸಪೀರನ ಅನಂತರ ನೈಡ ಮತ್ತು ಪೈಕ್ ಅದನ್ನು ಮುಂದುವರಿಸಿಕೊಂಡು ಹೋದರು. ಈ ಇಬ್ಬರೂ ಬೇರೆ ಬೇರೆ ಬೈಬಲ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಅವರನ್ನು ಬ್ಲೂಮ್ ಫೀಲ್ಡ್‍ನ ಅನುಯಾಯಿಗಳಲ್ಲಿ ಎಡಪಕ್ಷದವರೆಂದು ಕೆಲವರು ಕರೆದಿರಬಹುದಾದರೂ ಅವರಿಬ್ಬರಲ್ಲಿ ಕೆಲವು ವ್ಯತ್ಯಾಸಗಳಿವೆ.

ಮಾರ್ಫಾಲಜಿ (1946-49), ಲಿಂಗ್ವಿಸ್ಟಿಕ್ ಇಂಟರ್ ಲ್ಯೂಡ್ಸ್ (1947), ಬೈಬಲ್ ಟ್ರಾನ್ಸ್‍ಲೇಟಿಂಗ್ (1947), ಲರ್ನಿಂಗ್ ಎ ಫಾರಿನ್ ಲ್ಯಾಂಗ್ವೇಜ್ : ಎ ಹ್ಯಾಂಡ್ ಬುಕ್ ಪ್ರಿಪೇರ್ಡ್ ಎಸ್ಟೆಷಲಿ ಫಾರ್ ಮಿಷನರೀಸ್ (1957), ಎ ಸಿನಾಪ್ಸಿಸ್ ಆಫ್ ಇಂಗ್ಲಿಷ್ ಸಿಂಟ್ಯಾಕ್ಸ್ (1960-66), ಟುವಡ್ರ್ಸ್ ಎ ಸೈನ್ಸ್ ಆಫ್ ಟ್ರಾನ್ಸ್‍ಲೇಟಿಂಗ್ (1964), ದಿ ತಿಯರಿ ಅಂಡ್ ಪ್ರಾಕ್ಟಿಸ್ ಆಫ್ ಟ್ರಾನ್ಸ್‍ಲೇಟಿಂಗ್ (ಚಾಲ್ರ್ಸ್‍ನೊಡನೆ) (1969) ಕಾಂಪೊನೆನ್ಷಿಯಲ್ ಅನ್ಯಾಲಿಸಿಸ್ ಆಫ್ ಮೀನಿಂಗ್ (1975) ಇವು ಈತನ ಕೆಲವು ಕೃತಿಗಳು. (ಎಸ್.ಎಲ್.ಎ.)