ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈತಿಕತೆ

ವಿಕಿಸೋರ್ಸ್ದಿಂದ

ನೈತಿಕತೆ - ಸಂಘಜೀವಿಯಾದ ಮಾನವ ಇತರರೊಡನೆ ನಡೆಸಬೇಕಾದ ವ್ಯವಹಾರದಲ್ಲಿ ಅನುಸರಿಸಬೇಕಾದ ರೀತಿನೀತಿಗಳಿಗೆ ಈ ಹೆಸರಿದೆ (ಮೊರ್ಯಾಲಿಟಿ). ಹೇಗೆ ನಡೆದುಕೊಂಡರೆ ಸರಿ, ಹೇಗೆ ನಡೆದುಕೊಂಡರೆ ತಪ್ಪು ಅನ್ನುವುದನ್ನು ಸಮಾಜ ಸಂಪ್ರದಾಯಗಳು ನಿರ್ಣಯಿಸುತ್ತವೆ. ಸದಾಚಾರವಾವುದು ಎನ್ನುವುದನ್ನು ಸಾಮುದಾಯಿಕವಾಗಿ ಒಂದು ಸಮಾಜ ಒಪ್ಪಿಕೊಂಡಾಗ ಅದು ವ್ಯಕ್ತಿ ಜೀವನವನ್ನು ವಿಮರ್ಶೆಮಾಡಲು ಅವಶ್ಯವಾದ ಆಳತೆಗೋಲನ್ನು ಒದಗಿಸಿಕೊಡುತ್ತದೆ. ಸಮಾಜ ಅಂಗೀಕರಿಸುವ ಪ್ರಮಾಣದ ಸಹಾಯದಿಂದ ಸರಿ ತಪ್ಪು, ನೀತಿ ಅನೀತಿ, ಸದಾಚಾರ ದುರಾಚಾರ, ಪಾಪ, ಪುಣ್ಯ, ಸೌಜನ್ಯ ಎಂಬುವು ನಿರ್ಣಯಿಸಲ್ಪಡುತ್ತವೆ.

ದಾನಧರ್ಮ : ಸಂಘದಲ್ಲಿ ಇತರರೊಡನೆ ನಾವು ಬಾಳುವಾಗ ಪರಸ್ಪರಾವಲಂಬನೆ ಆಗತ್ಯ. ನನ್ನಂತೆಯೇ ಇತರರು. ನನ್ನ ಕಷ್ಟಸುಖಗಳಂತೆಯೇ ಅವರ ಕಷ್ಟಸುಖ, ನನ್ನ ಕಷ್ಟದಲ್ಲಿ ಇತರರು ನನಗೆ ಸಹಾಯ ಹಸ್ತವನ್ನು ನೀಡಬೇಕೆಂದು ನಾನು ಹೇಗೆ ಬಯಸುವುದು ಸಹಜವೋ ಹಾಗೆಯೇ ನಾನು ಸಹಾಯ ಮಾಡಬೇಕೆಂದು ಇತರರು ನಿರೀಕ್ಷಿಸುವುದು ಸಹಜ. ನನ್ನಲ್ಲಿರುವುದನ್ನು ಇತರರೊಡನೆ ಹಂಚಿಕೊಳ್ಳುವುದಕ್ಕೆ ದಾನಧರ್ಮವೆಂದು ಹೆಸರು. ಈ ದಾನಧರ್ಮದ ಆಧಾರ ದಯೆ ಸಹಾನುಭೂತಿಗಳು. ಇದು ಮಾನವನ ಸದ್ಗುಣಗಳಲ್ಲಿ ಒಂದು ಪ್ರಧಾನವಾದ ಗುಣ. ಎಲ್ಲ ಧರ್ಮಗಳೂ ಇದನ್ನು ಕೊಂಡಾಡುತ್ತವೆ. ಇದು ಮಾನವ ಪ್ರೇಮದ ಒಂದು ಗುರುತು.

ರೂಢನೀತಿ : ಪ್ರತಿಯೊಂದು ಸಮಾಜದಲ್ಲಿಯೂ ಅದರ ಸದಸ್ಯರು ಅನುಸರಿಸಬೇಕಾದ ರೂಢನೀತಿ ಒಂದಿರುತ್ತದೆ. ಇದು ಪರಂಪರಾಗತರಾಗಿ ಬಂದು ನೀತಿ. ಈ ನೀತಿಯನ್ನು ಅನುಸರಿಸುವಾಗ ಇದನ್ನು ನಾವೇಕೆ ಅನುಸರಿಸಬೇಕೆಂದು ಯಾರೂ ಕೇಳುವುದಿಲ್ಲ. ರೂಢಿ ಎಂದು ಇದನ್ನು ಅನುಮೋದಿಸುತ್ತಾರೆ, ಅನುಸರಿಸುತ್ತಾರೆ. ಇದೊಂದು ಎಲ್ಲರೂ ಅನುಸರಿಸಬೇಕಾದ ಸಂಪ್ರದಾಯವಾಗುತ್ತದೆ. ಬಹು ಜನರು ಸಂಪ್ರದಾಯವಿದ್ಧರಾಗಿಯೇ ಇದನ್ನು ಅನುಸರಿಸುತ್ತ ಹೋಗುತ್ತಾರೆ. ಇದನ್ನು ಅನುಸರಿಸುವುದು ಸಮಾಜದ ಹಿತಕ್ಕಾಗಿ ಎಂದು ಎಲ್ಲರೂ ಸಹಜವಾಗಿ ನಂಬಿ ನಡೆಯುತ್ತಾರೆ. ಇದಕ್ಕೆ ವಿರೋಧವಾಗಿ ನಡೆಯತಕ್ಕವರನ್ನು ವ್ರಾತ್ಯರೆಂದು ಸಮಾಜ ಗಣಿಸುತ್ತದೆ. ರೂಢ ನೀತಿಯಲ್ಲಿ ನೈತಿಕತೆಯ ಅಂಶಗಳು ಅನೇಕವಿರುತ್ತವೆ. ಅವುಗಳಲ್ಲಿ ಕೆಲವು ಅಂಶಗಳು ನಿಜವಾದ ಧರ್ಮಕ್ಕೆ ಸರಿಹೊಂದದೇ ಇದ್ದರೂ ಪದ್ಧತಿ, ಸಂಪ್ರದಾಯ ಎನ್ನುವ ಮಾತ್ರದಿಂದಲೇ ಜನ ಅವನ್ನು ಅನುಸರಿಸಿಕೊಂಡು ಹೋಗುವ ಪರಿಸ್ಥಿತಿ ಪ್ರಾಪ್ತವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಇದನ್ನು ಎದುರಿಸಿ ನಡೆಯುವವರು ಕ್ರಾಂತಿಕಾರರೆಂದೆನಿಸಿಕೊಳ್ಳುತ್ತಾರೆ. ಸಂಪ್ರದಾಯಬದ್ಧರ ಕ್ರೋಧಕ್ಕೆ ಒಳಗಾಗುತ್ತಾರೆ. ರೂಢನೀತಿಯಿಂದ ಮಾತ್ರದಿಂದಲೇ ಒಂದು ಆಚಾರ ಧರ್ಮವೆಂದು ಗಣಿಸಲು ಎಲ್ಲ ಸಂದರ್ಭಗಳಲ್ಲೂ ಸಾಧ್ಯವಾಗುವುದಿಲ್ಲ.

ನೈತಿಕತೆಯ ಇತಿಹಾಸ : ಮಾನವ ಸಮಾಜದಲ್ಲಿ ಅನೇಕ ವಿಷಯಗಳಲ್ಲಿ ಕ್ರಮ ವಿಕಾಸವನ್ನು ಕಾಣುತ್ತೇವೆ. ಸನ್ನಿವೇಶಗಳು ಬದಲಾದಂತೆಲ್ಲ ಸಮಾಜ ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತ ಹೋಗುತ್ತದೆ. ಈ ಕ್ರಮವಿಕಾಸ ನೈತಿಕತೆಗೂ ಅನ್ವಯಿಸುತ್ತದೆ. ನೈತಿಕತೆಯ ಇತಿಹಾಸದಲ್ಲಿ ಮುಖ್ಯವಾಗಿ ಎರಡು ಘಟ್ಟಗಳನ್ನು ಕಾಣುತ್ತೇವೆ. ಒಂದು ರೂಢ ನೀತಿಯ ಘಟ್ಟ ಮತ್ತೊಂದು ವಿಮರ್ಶಿತ ನೀತಿಯ ಘಟ್ಟ. ಮೊದಲಿನ ಘಟ್ಟದಲ್ಲಿ ವಿಚಾರ ಮಾಡದೆ ಒಂದು ನೀತಿಯನ್ನು ಮಾನವರು ಅನುಸರಿಸುತ್ತಾರೆ. ಮತ್ತೊಂದು ಘಟ್ಟದಲ್ಲಿ ತಮ್ಮ ಆಚಾರವನ್ನು ಕುರಿತು ವಿಚಾರ ಮಾಡಲು ತೊಡಗುತ್ತಾರೆ. ಮೊದಲಿನ ಘಟ್ಟ ಕೇವಲ ಅವಿಚಾರಾತ್ಮಕವಾದದ್ದು ಅಂಧಾನುಕರಣಯುಳ್ಳದ್ದು. ಎರಡನೆಯದು ವಿಚಾರಾತ್ಮಕವಾದದ್ದು.

ನೈತಿಕತೆ ಮತ್ತು ನೀತಿಶಾಸ್ತ್ರ : ನೈತಿಕತೆ ಬಾಳಿನಲ್ಲಿ ಆಚಾರದಲ್ಲಿ ಕಾಣುವ ಒಂದು ಅಂಶ. ಅದು ವಾಸ್ತವ ಸ್ಥಿತಿಗೆ ಸಂಬಂಧಪಟ್ಟದ್ದು. ನೈತಿಕತೆಯನ್ನು ಕುರಿತು ನಾವು ವಿಚಾರಮಾಡಲು ತೊಡಗಿದಾಗ ಆ ವಿಚಾರ ಶಾಸ್ತ್ರೀಯವಾಗುತ್ತದೆ. ಈ ವಿಚಾರಕ್ಕಾಗಿಯೇ ಮೀಸಲಿಟ್ಟ ಒಂದು ಶಾಸ್ತ್ರವಾಗಿ ಪರಿಣಮಿಸುತ್ತದೆ. ಈ ವ್ಯವಸ್ಥಿತ ಶಾಸ್ತ್ರವನ್ನೂ ನೀತಿಶಾಸ್ತ್ರ (ನೋಡಿ- ನೀತಿಶಾಸ್ತ್ರ) ಧರ್ಮಶಾಸ್ತ್ರ ಎಂದು ಕರೆಯುವಾಡಿಕೆ ಇದೆ. ಈ ಶಾಸ್ತ್ರ ಆಚಾರದ ಆಧಾರವಾದ ವಿಚಾರವನ್ನು ತತ್ತ್ವಗಳನ್ನು ಮುಂದಿಡುತ್ತದೆ. ಆಚಾರದಲ್ಲಿ ಅನ್ವಯಿಸುವ ನಿಯಮಗಳನ್ನು ಹೊರಗೆಡವುತ್ತದೆ. ಇದು ನೈತಿಕತೆಯ ಜಿಜ್ಞಾಸೆ. ಈ ಜಿಜ್ಞಾಸೆಯನ್ನು ಪಾಶ್ಚಾತ್ಯ ವಾಙ್ಮಯದಲ್ಲಿ ಎತಿಕ್ಸ್ ಎಂದು ಕರೆಯುತ್ತಾರೆ.

ನೈತಿಕತೆ ಮತ್ತು ಕಾನೂನು : ನೈತಿಕತೆ ಮಾನವ ಮನಃಪೂರ್ವಕವಾಗಿ ಅಂಗೀಕರಿಸಿ ಒಪ್ಪಿಕೊಂಡು ಸ್ವಯಂಸ್ಫೂರ್ತಿಯಿಂದ ನಡೆದುಕೊಳ್ಳುವ ರೀತಿನೀತಿ. ಈ ನೈತಿಕತೆಯಲ್ಲಿ ವಿಧಿನಿಷೇಧಗಳಿವೆ. ಕಾರ್ಯ ಮತ್ತು ಆಕಾರ್ಯ ಅನ್ನುವ ವ್ಯತ್ಯಾಸಗಳಿವೆ. ವಿಧಿ ಎಂದರೆ ಅನುಸರಿಸತಕ್ಕದ್ದು. ನಿಷೇಧ ಎನ್ನುವದು ಅನುಸರಿಸದೇ ಬಿಡತಕ್ಕದ್ದು. ವಿಧಿಯಂತೆ ನಡೆದುಕೊಂಡರೆ ಒಳ್ಳೆಯವನೆನಿಸಿಕೊಳ್ಳುತ್ತಾನೆ. ನಿಷೇಧಿಸಿದ್ದನ್ನು ಮಾಡಿದರೆ ಪಾಪಕರ್ಮಿ ಎನಿಸಿಕೊಳ್ಳುತ್ತಾನೆ. ಸಮಾಜಗಳು ತಾವು ವಿಧಿಸಿದಂತೆ ನಡೆದುಕೊಳ್ಳದವರನ್ನು ಸರಿಯಾಗಿ ನಡೆದುಕೊಳ್ಳುವಂತೆ ಪ್ರೇರೇಪಿಸುವ ಸಲುವಾಗಿ ಕೆಲವು ಕಾನೂನು ಕಟ್ಟಳೆಗಳನ್ನು ವಿಧಿಸುತ್ತವೆ. ಈ ಕಾನೂನು ಕಟ್ಟಳೆಗಳನ್ನು ಜನ ತಾವಾಗಿಯೇ ಏರ್ಪಡಿಸಿಕೊಂಡಿರುವ ಸಂಘಸಂಸ್ಥೆಗಳ ಮೂಲಕ, ನ್ಯಾಯಸ್ಥಾನಗಳ ಮೂಲಕ ಜಾರಿಗೆ ತರುವಂತೆ ಒತ್ತಾಯಪಡಿಸಲೂಬಹುದು. ಇದು ಕಾಯದೆ, ಕಾನೂನುಗಳ ಕೆಲಸ. ಇದು ಮಾನವಜೀವನದ ಬಹಿವ್ರ್ಯಾಪ್ತಿಗೆ ಸೇರಿದ ಅಂಶ. ಅದರೆ ನೈತಿಕತೆಯ ಉಗಮ ಅಂತರಂಗಕ್ಕೆ ಸಂಬಂಧಪಟ್ಟದ್ದು.

ನೀತಿಧರ್ಮ ಮತ್ತು ಮತಧರ್ಮ : ಅನೇಕ ಸಮಾಜಗಳಲ್ಲಿ, ಧರ್ಮಾಧರ್ಮದ ವಿವೇಚನೆಯ ಆಧಾರ ಮತಧರ್ಮ ಅಂಗೀಕರಿಸಿರುವ ಶಾಸ್ತ್ರವೇ ಎಂಬ ನಂಬಿಕೆ ಇದೆ. ಧರ್ಮಾಧರ್ಮ ನಿರ್ಣಯವನ್ನು ಸಮಾಜ ಅಂಗೀಕರಿಸಿರುವ ಶಾಸ್ತ್ರದ ಮೂಲಕವಾಗಿ ಮಾತ್ರ ಮಾಡಲು ಸಾಧ್ಯವೆಂಬುದು ಈ ಸಮಾಜಗಳು ಅಂಗೀಕರಿಸಿರುವ ತತ್ತ್ವ. ಧರ್ಮಾಧರ್ಮ ನಿರ್ಣಯದ ಆಧಾರ ಶ್ರುತಿ ಎಂಬ ನಂಬಿಕೆ ಅನೇಕ ಸಮಾಜಗಳಲ್ಲಿ ಕಂಡುಬರುತ್ತದೆ. ಹಿಂದುಗಳಿಗೆ ವೇದ, ಕ್ರೈಸ್ತರಿಗೆ ಬೈಬಲ್, ಇಸ್ಲಾಮ್ ಧರ್ಮದವರಿಗೆ ಕೊರನ್ ಮತ್ತೆ ಇತರ ಧರ್ಮಗಳವರಿಗೆ ಆಯಾಯ ಧರ್ಮದ ಪ್ರವಾದಿಗಳ ಮೂಲಕವಾಗಿ ಗೋಚರದ ತತ್ತ್ವಗಳು-ಇವೇ ನೀತಿ ಅನೀತಿ, ಧರ್ಮ ಅಧರ್ಮ, ಪಾಪ ಪುಣ್ಯ ಇಂಥ ವಿವೇಚನೆಗೆ ಆಧಾರವೆಂದು ಭಾವಿಸುವುದನ್ನು ಕಾಣುತ್ತೇವೆ. ಇದು ನೀತಿಧರ್ಮಕ್ಕೂ ಮತಧರ್ಮಕ್ಕೂ ಇರುವ ಸಂಬಂಧ. ನೈತಿಕತೆ ಮತ್ತು ಸಾಮಾಜಿಕ ನಿಯಂತ್ರಣ : ನೈತಿಕತೆ ವ್ಯಕ್ತಿ ಜೀವನದಲ್ಲಿ ಎಷ್ಟು ಅಗತ್ಯವೋ ಅಷ್ಟೇ ಸಾಮಾಜಿಕ ಜೀವನದಲ್ಲಿ ಅಗತ್ಯವೆಂಬುದನ್ನು ಸಮಾಜ ಶಾಸ್ತ್ರಜ್ಞರು ಮನಗಂಡಿದ್ದಾರೆ. ಸಾಮಾಜಿಕ ವಿಷಯಗಳಲ್ಲಿ ವ್ಯಕ್ತಿಗಳು ಸದಾಚಾರ ಸಂಪನ್ನರಾಗಲು. ಹಾಗಾಗುವುದರಿಂದ ಸಮಾಜದಲ್ಲಿ ಸಮುದಾಯ ಹಿತಸಾಧನೆ ಪ್ರಾಪ್ತವಾಗಲು ಅವರು ನೀತಿನಿಯಮಗಳಿಗೆ ಬದ್ಧರಾಗಿ ಬಾಳುವುದು ಅವಶ್ಯಕ. ಸಾಮಾಜಿಕ ಹಿತಕ್ಕೆ ಧಕ್ಕೆ ತರುವಂಥ ರೀತಿಯಲ್ಲಿ ವ್ಯಕ್ತಿಗಳು ನಡೆದುಕೊಳ್ಳದಿರಲು ಅವರಿಗೆ ನೈತಿಕತೆಯ ಪ್ರೇರಣೆ ತುಂಬ ಅಗತ್ಯವೆಂದೂ ನೀತಿನಿಯಮಗಳಿಗೆ ಒಂದು ಮುಖ್ಯ ಪ್ರಯೋಜನ ಸಾಮಾಜಿಕ ನಿಯಂತ್ರಣವೆಂಬುದನ್ನೂ ಸಮಾಜವಿಜ್ಞಾನದ ಪ್ರತಿಪಾದಕರು ಭಾವಿಸುತ್ತಾರೆ.

ನೀತಿಸಂಹಿತೆಗಳು : ಸಮಾಜದ ಸದಸ್ಯರಾದ ವ್ಯಕ್ತಿಗಳು ನೀತಿನಿಯಮಗಳಿಗೆ ಬದ್ಧರಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಅವರಿಗೆ ಸ್ಪಷ್ಟ ಸೂಚನೆ ಕೊಡುವಂಥ ಶ್ರುತಿವಾಕ್ಯಗಳು, ಶಿಷ್ಟರ ಶ್ರೇಷ್ಟರ ಮಹಾನುಭಾವರ ಆದೇಶಗಳು ಒಂದು ವ್ಯವಸ್ಥಿತ ರೂಪವನ್ನು ತಾಳಿದಾಗ ಅವನ್ನು ನೀತಿಸಂಹಿತೆಗಳು ಎಂದು ಕರೆಯುತ್ತೇವೆ. ಇಂಥ ನೀತಿಸಂಹಿತೆಗಳನ್ನು ಎಲ್ಲ ದೇಶದ ಧರ್ಮಗಳಲ್ಲಿಯೂ ಸಂಘ ಸಮಾಜಗಳಲ್ಲಿಯೂ ಕಾಣುತ್ತೇವೆ. ಇವನ್ನು ಪ್ರಧಾನ ಸದ್ಗುಣಗಳು ಎಂದು ಧರ್ಮಗಳಲ್ಲಿ ಕರೆದಿದೆ. ಉದಾಹರಣೆಗೆ ಕ್ರೈಸ್ತಧರ್ಮದ ಫೇತ್, ಹೋಪ್ ಮತ್ತು ಚಾರಿಟಿ ಆ ಧರ್ಮದ ನೀತಿಸಂಹಿತೆ. ಅದರ ಸತ್‍ಶ್ರದ್ಧೆ, ಸದಾಶಯ ಮತ್ತು ಸಹಾನುಭೂತಿ ಇವು. ಹಿಂದೂಧರ್ಮ, ಬೌದ್ಧಧರ್ಮ ಮತ್ತು ಜೈನಧರ್ಮಗಳಿಗೆ ಸಮಾಜವಾದ ನೀತಿಸಂಹಿತೆಗಳೆಂದರೆ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಮ ಮತ್ತು ಅಪರಿಗ್ರಹ. ಈ ನೀತಿನಿಯಮಗಳನ್ನು ವಿಸ್ತಾರವಾಗಿ ವಿವರಿಸುವ ಸಂಹಿತೆಗಳಿಗೆ ಧರ್ಮಶಾಸ್ರಗಳು ಎಂಬ ಹೆಸರು ಬಂದಿದೆ.

ನೈತಿಕತೆಯ ಆದರ್ಶಗಳು : ನೈತಿಕತೆ ಕೇವಲ ಶಾಸ್ತ್ರದ ಮಾತಾಗಿ ಉಳಿದರೆ ಅದು ವ್ಯಕ್ತಿಗಳ ಮೇಲೆ ಹೆಚ್ಚು ಪ್ರಭಾವ ಬೀರಲಾರದು. ಅದರ ಸಲುವಾಗಿ ನೀತಿನಿಯಮಗಳನ್ನು ನೇರವಾಗಿ ತಮ್ಮ ನಡೆನುಡಿಯಲ್ಲಿ ಯಾರು ಅನುಷ್ಠಾನಕ್ಕೆ ತಂದುಕೊಂಡು ಜಗತ್ತಿಗೆ ಆದರ್ಶವಾಗಿ ಬಾಳುತ್ತಾರೆಯೋ ಅಂಥವರನ್ನು ಲೋಕ ಅನುಕರಣ ಮಾಡಲು ಸುಲಭವಾಗುವುದೆಂಬ ನಂಬಿಕೆಯನ್ನು ಎಲ್ಲ ಸಮಾಜಗಳಲ್ಲಿಯೂ ಕಾಣುತ್ತೇವೆ. ಉದಾಹರಣೆಗೆ ಯೇಸುಕ್ರಿಸ್ತ ತಾನು ಬೋಧಿಸಿದ ಜೀವನದ ನೀತಿನಿಯಮಗಳಿಗೆ ತಾನೇ ಆದರ್ಶವಾಗಿದ್ದ. ಹಿಂದೂ ಧರ್ಮದಲ್ಲಿ ರಾಮ ವಿಗ್ರಹವಾನ್ ಧರ್ಮವೆಂದು ಖ್ಯಾತಿಗೊಂಡ. ಬೌದ್ಧರಿಗೆ ಗೌತಮ ಬುದ್ಧ ಇಂಥ ಆದರ್ಶವಾದ. ಜೈನರಿಗೆ ತೀರ್ಥಂಕರು ಆದರ್ಶರಾದರು. ಜರತುಷ್ಟ್ರನ ಪಂಥದವರಿಗೆ ಜರತುಷ್ಟ್ರವೇ ಧರ್ಮದ ಆದರ್ಶವಾದ. ಇಸ್ಲಾಮ್ ಧರ್ಮದ ಅನುಯಾಯಿಗಳಿಗೆ ಮಹಮ್ಮದ್ ಪೈಗಂಬರ್ ಆದರ್ಶನಾದ.

ವೃತ್ತಿ ನೀತಿ : ಒಂದು ಸಮಾಜದ ಅವಶ್ಯಕತೆಗಳನ್ನು ಪೂರೈಸಲು ವಿವಿಧ ವೃತ್ತಿಗಳೂ ಆ ವೃತ್ತಿಗಳನ್ನು ಅವಲಂಬಿಸುವವರೂ ಅಗತ್ಯ ಆಯಾ ವೃತ್ತಿಯನ್ನು ಅವಲಂಬಿಸುವವರು ಅದಕ್ಕೆ ತಕ್ಕ ಗುಣಕರ್ಮಗಳಲ್ಲಿ ದಕ್ಷತೆ ಪಡೆದವರಾಗಿರಬೇಕು. ಒಂದೊಂದು ವೃತ್ತಿಗೂ ಅನುಗುಣವಾದ ನೀತಿನಿಯಮಗಳಿರುತ್ತವೆ. ಈ ನೀತಿನಿಯಮಗಳನ್ನು ಸ್ವಧರ್ಮ ಎಂದು ಕರೆಯಬಹುದು. ಪ್ರತಿ ವ್ಯಕ್ತಿಯೂ ಸಮಾಜದಲ್ಲಿ ಒಂದು ಸ್ಥಾನ ಗಳಿಸಿರುತ್ತಾನೆ. ಆ ಸ್ಥಾನಕ್ಕೆ ತಕ್ಕ ಮಾನ ಅವನದಾಗಿರುತ್ತದೆ. ಅದಕ್ಕೆ ತಕ್ಕ ಹೊಣೆಗಾರಿಕೆಗೂ ಆತ ಬದ್ಧ. ತಾನು ಅವಲಂಬಿಸಿರುವ ವೃತ್ತಿಯನ್ನು ಅನುಸರಿಸುವುದರಲ್ಲಿ ಸಮಾಜಕ್ಕೆ ಅಹಿತವಾಗದ ರೀತಿಯಲ್ಲಿ ಅವನು ನಡೆಯಬೇಕಾಗುತ್ತದೆ. ಈ ರೀತಿಯ ಹೊಣೆಗಾರಿಕೆ ಅವನವನ ವಿಶಿಷ್ಟವಾದ ಧರ್ಮ, ಸ್ವಧರ್ಮಾಚರಣೆ ಅನ್ನುವುದು ವೃತ್ತಿನೀತಿಯ ಆಧಾರ. (ಎಂ.ವೈ.)