ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈತಿಕ ಶಿಕ್ಷಣ

ವಿಕಿಸೋರ್ಸ್ದಿಂದ

ನೈತಿಕ ಶಿಕ್ಷಣ - ಸಮಾಜ, ಜನಾಂಗ ಅಥವಾ ರಾಷ್ಟ್ರ ಎತ್ತಿಹಿಡಿದಿರುವ ಆದರ್ಶ ಮೌಲ್ಯಾದಿಗಳಿಗೆ ಅನುಗುಣವಾಗಿ ವ್ಯಕ್ತಿಯ ನಡೆ ನುಡಿ ಮತ್ತು ಮನೋಭಾವಗಳನ್ನು ರೂಪಿಸಲು ನೆರವಾಗುವಂತೆ ಯುಕ್ತ ರೀತಿಯ ಕಾರ್ಯಕ್ರಮಗಳ ಮೂಲಕ ವ್ಯವಸ್ಥೆಗೊಂಡಿರುವ ಶಿಕ್ಷಣ. ನಿರ್ದಿಷ್ಟ ಧರ್ಮವೊಂದನ್ನು ಅಧಿಕೃತವಾಗಿ ಅನುಸರಿಸುತ್ತಿರುವ ರಾಷ್ಟ್ರದಲ್ಲಿ ಇದು ಧಾರ್ಮಿಕ ಶಿಕ್ಷಣದ ಸ್ವರೂಪವನ್ನು ತಾಳುತ್ತದೆ. ಮಿಕ್ಕ ರಾಷ್ಟ್ರಗಳಲ್ಲಿ ಚಾರಿತ್ರ್ಯ ಶಿಕ್ಷಣ ಅಥವಾ ಪೌರಶಿಕ್ಷಣದ ಸ್ವರೂಪವನ್ನು ತಾಳುತ್ತದೆ. ಐತಿಹಾಸಿಕವಾಗಿ ಎಲ್ಲ ರಾಷ್ಟ್ರಗಳಲ್ಲೂ ನೈತಿಕಶಿಕ್ಷಣ ಹಿಂದಿನಿಂದಲೂ ಶಿಕ್ಷಣದ ಅವಿಭಾಜ್ಯ ಅಂಗವಾಗಿ ನಡೆದುಕೊಂಡು ಬಂದಿದೆ. ಜನತೆಯಲ್ಲಿ ಮತದ ಅಥವಾ ಧರ್ಮದ ಅಭಿಮಾನ ಹೆಚ್ಚಿದಂತೆ ಅದು ಧಾರ್ಮಿಕ ಶಿಕ್ಷಣದ ಸ್ವರೂಪವನ್ನು ತಾಳುತ್ತ ಬಂತು. ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಶಾಲಾ ಕಾಲೇಜುಗಳಲ್ಲಿ ವಿವಿಧ ಮತ ಅಥವಾ ಧರ್ಮಗಳಿಗೆ ಸೇರಿದ ಕುಟುಂಬಗಳಿಂದ ಬರತಕ್ಕ ಮಕ್ಕಳಿರುವುದರಿಂದ ಯಾವ ಒಂದು ಮತದ ಧರ್ಮವನ್ನು ಭೋಧಿಸಿದರೂ ಇತರ ಮತದವರಿಗೆ ಅದು ಸಹ್ಯವೆನಿಸುತ್ತಿರಲಿಲ್ಲ. ಈ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲ ಮತಗಳಿಗೂ ಮೂಲಭೂತವೆನ್ನಬಹುದಾದ ತತ್ತ್ವ ಸಿದ್ಧಾಂತಗಳನ್ನು ಆರಿಸಿ ಬೋಧಿಸುವ ಯತ್ನ ನಡೆಯಿತು. ಅದರೆ ಅದು ಯಾವೊಂದು ಮತದವರಿಗೂ ಆಸಕ್ತಿ ಮೂಡಿಸದಾಯಿತು. ಆಗ ಕೇವಲ ಉತ್ತಮ ಜೀವನಕ್ಕೆ ನೆರವಾಗತಕ್ಕ ಮೌಲ್ಯಗಳನ್ನು ಆಧರಿಸಿದಂತೆ ನಡೆನುಡಿ ಮನೋಭಾವ ಮುಂತಾದ ಜೀವನವಿಧಾನಗಳನ್ನು ಮಕ್ಕಳಲ್ಲಿ ರೂಢಿಸುವ ಯತ್ನ ನಡೆದು ಆ ಕಾರ್ಯಕ್ರಮ ನೈತಿಕ ಶಿಕ್ಷಣವೆಂಬ ಹೆಸರಿನಿಂದ ಪ್ರಚಾರಕ್ಕೆ ಬಂತು. ಅನಂತರ ಅದನ್ನು ಬೋಧಿಸುವ ಪ್ರತ್ಯಕ್ಷ ವಿಧಾನ ಉತ್ತಮಬೋಧನ ಕ್ರಮವೆಂದು ಕೆಲವೆಡೆ ಆಚರಣೆಗೆ ಬಂತು. ಅದರಿಂದ ಮಕ್ಕಳು ಕೇವಲ ನೀತಿಶಾಸ್ತ್ರಕ್ಕೆ ಸಂಬಂಧಿಸಿದ ಭಾಷೆಯನ್ನು ಕಲಿಯುತ್ತಿದ್ದರೇ ಹೊರತು ನೀತಿವಂತರಾಗಲಾರರೆಂಬ ಟೀಕೆ ಆರಂಭವಾಯಿತು. ಮಕ್ಕಳಿಗೆ ಪರೋಕ್ಷ ನೈತಿಕ ಶಿಕ್ಷಣ ಪರಿಣಾಮಕಾರಿಯಾಗಬಲ್ಲವೆಂಬ ಅಭಿಪ್ರಾಯಕ್ಕೆ ಮನ್ನಣೆ ದೊರೆತು ಅದಕ್ಕಾಗಿ ಪ್ರತ್ಯೇಕ ಕಾಲವನ್ನು ಗೊತ್ತುಮಾಡದೆ ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲೂ ಅದನ್ನು ಪ್ರಾಸಂಗಿಕವಾಗಿ ಬೋಧಿಸುವ ಪ್ರಯತ್ನನಡೆಯಿತು. ಆಗ ನೈತಿಕ ಶಿಕ್ಷಣದ ಹೊಣೆ ಯಾವೊಬ್ಬ ನಿರ್ದಿಷ್ಟ ಅಧ್ಯಾಪಕನಿಗೂ ಸೇರದಿದ್ದು ಆ ಕಾರ್ಯಕ್ರಮ ಅತಂತ್ರಕ್ಕೀಡಾಯಿತು. ಈ ಗೊಂದಲದಲ್ಲಿ ಅನೇಕ ದೇಶಗಳು ನೈತಿಕ ಶಿಕ್ಷಣವನ್ನು ಶಾಲಾ ಕಾರ್ಯಕ್ರಮದಿಂದ ಪೂರ್ಣವಾಗಿ ಹೊರಗೆ ಹಾಕಿದವು.

ಭಾರತೀಯ ವಿದ್ಯಾರಂಗದಲ್ಲಿ ನೈತಿಕ ಶಿಕ್ಷಣ : ಸ್ವಾತಂತ್ರ್ಯಾನಂತರದ ಶಿಕ್ಷಣದ ಪುನರ್‍ವ್ಯವಸ್ಥೆಯಲ್ಲಿ ಭಾರತ ಮಕ್ಕಳ ಹಾಗೂ ಯುವಜನರ ಶಿಕ್ಷಣ ಯೋಜನೆಯಲ್ಲಿ ನೈತಿಕ ಶಿಕ್ಷಣಕ್ಕೆ ಪ್ರಾಧಾನ್ಯವಿತ್ತಿದೆ. ಶಿಕ್ಷಣವನ್ನು ನವೀಕರಿಸುವಾಗ ಮಕ್ಕಳೂ ಯುವಕರೂ ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಅದನ್ನು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರುವಂತೆ ಮಾಡುವುದರ ಅಗತ್ಯವನ್ನು ಮನಗಂಡುಕೊಂಡಿದೆ. ವಿಜ್ಞಾನ ಮತ್ತು ತಾಂತ್ರಿಕ ಜ್ಞಾನಕ್ಕೇ ಪ್ರಾಧಾನ್ಯವಿರುವ ಶಿಕ್ಷಣದ ಫಲವಾಗಿ ಕಿರಿಯರಲ್ಲಿ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳ ಬಗ್ಗೆ ಉದಾಸೀನಭಾವ ಮೂಡಿಕೊಂಡು ಮುಂದೆ ಜೀವನದಲ್ಲಿ ತೀವ್ರ ರೀತಿಯ ಸಾಮಾಜಿಕ ಸಮಸ್ಯೆಗಳು ತಲೆದೋರುವುದನ್ನು ಅರಿತು ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಶಾಸ್ತ್ರಗಳ ಜ್ಞಾನ ಮತ್ತು ಕೌಶಲ್ಯಗಳಂತೆ ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಮೌಲ್ಯ ಮತ್ತು ದೃಷ್ಟಿಧ್ಯೇಯಗಳಿಗೂ ಶಿಕ್ಷಣ ಕಾರ್ಯಕ್ರಮಗಳಲ್ಲಿ ಅವಕಾಶವಿರಬೇಕೆಂಬ ಅಂಶವನ್ನು ಎತ್ತಿಹಿಡಿದಿದೆ. ಭಾರತ ಸರ್ಕಾರ ನೇಮಿಸಿದ ವಿಶ್ವವಿದ್ಯಾಲಯದ ಪುನರ್‍ವ್ಯವಸ್ಥೆಯ ಆಯೋಗ (1948) ಆ ಬಗ್ಗೆ ನಿರ್ದಿಷ್ಟ ಸಲಹೆಗಳನ್ನು ಮಂಡಿಸಿತು. ಹಾಗೆಯೇ 1953ರಲ್ಲಿ ಸೆಕೆಂಡಿರಿ ಶಿಕ್ಷಣ ಆಯೋಗವೂ 1959ರಲ್ಲಿ ಕೇಂದ್ರ ಶಿಕ್ಷಣ ಮಂಡಲಿ ರಚಿಸಿದ ಶ್ರೀಪ್ರಕಾಶಂ ಸಮಿತಿಯೂ ನಿರ್ದಿಷ್ಟ ಸಲಹೆಗಳನ್ನು ಮಂಡಿಸಿದುವು. ನೂತನ ಸಮಾಜ ರಚನೆಯ ಹೊಣೆಯನ್ನು ಹೊತ್ತು ಕಾರ್ಯನಿರತವಾಗಿರುವ ಭಾರತ ಆಧ್ಯಾತ್ಮಿಕ ಮೌಲ್ಯಗಳ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ತಮ್ಮ ಜೀವನವನ್ನು ರೂಪಿಸಿಕೊಂಡು ತಾವು ಸಮಾಜದ ಇತರರೊಡನೆಯೂ ಪರಮಾತ್ಮನೊಡನೆಯೂ ಹೊಂದಿರಬೇಕಾದ ಸಂಬಂಧವನ್ನು ಅರಿತು ಅದರಂತೆ ನಡೆದುಕೊಳ್ಳಬಲ್ಲ ಜನರ ಅಗತ್ಯವನ್ನು ಕಂಡು ಕೊಂಡು ಆ ಮುಖವಾಗಿ ಶಿಕ್ಷಣ ಯಂತ್ರವನ್ನು ಪುನರ್ರಚಿಸುವ ಕಾರ್ಯದಲ್ಲಿ ತೊಡಗಿದೆ. ಅದಕ್ಕಾಗಿ ಶಾಲಾ ಕಾಲೇಜುಗಳ ಮಟ್ಟದಲ್ಲಿ ಆಚರಣೆಗೆ ಬರುತ್ತಿರುವ ನೈತಿಕ ಶಿಕ್ಷಣದ ಸ್ವರೂಪವನ್ನೂ ಅದಕ್ಕೆ ಅನುಸರಿಸಲಾಗುತ್ತಿರುವ ವಿಧಾನವನ್ನೂ ಮುಂದೆ ಪರಿಶೀಲಿಸಿದೆ. (ಎಂ.ಎ.ಎಸ್.ಐ.)

ಶಾಲೆಗಳಲ್ಲಿ ನೈತಿಕ ಶಿಕ್ಷಣ : ಶಾಲೆಯ ತರಗತಿಗಳಲ್ಲಿ ನೇರವಾಗಿ ನೈತಿಕ ಶಿಕ್ಷಣ ಕೊಡಲು ಪ್ರಯತ್ನಗಳು ನಡೆದಿವೆ. 1959ರಲ್ಲಿ ಕೇಂದ್ರ ಶಿಕ್ಷಣ ಮಂಡಲಿ ನೇಮಿಸಿದ ಶ್ರೀಪ್ರಕಾಶಂ ಸಮಿತಿ ಅದಕ್ಕಾಗಿ ಪ್ರತ್ಯೇಕವಾಗಿ ವಾರಕ್ಕೆ ಒಂದು ಅಥವಾ ಎರಡು ಗಂಟೆಗಳ ಕಾಲವನ್ನು ವೇಳಾಪಟ್ಟಿಯಲ್ಲಿ ಮೀಸಲಿಡಬೇಕೆಂದು ಸೂಚಿಸಿದೆ. ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ಧರ್ಮಗಳ ಸಂಸ್ಥಾಪಕರ ಜೀವನದಿಂದ ಆಯ್ದ ಕಥೆಗಳನ್ನೂ ಪ್ರೌಢಶಾಲೆಯಲ್ಲಿ ವಿವಿಧ ಮತಧರ್ಮಗಳಿಗೆ ಆಧಾರವಾಗಿರುವ ಹಲವು ಮುಖ್ಯ ನೀತಿನಿಯಮಗಳನ್ನು ಸರ್ವಧರ್ಮಸಮನ್ವಯ ದೃಷ್ಟಿಯಿಂದ ಆರಿಸಿಕೊಂಡು ಅವನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಮಕ್ಕಳಿಗೆ ತಿಳಿಸಿ ಅವರ ಮನಸ್ಸಿನ ಮೇಲೆ ಉತ್ತಮ ಪರಿಣಾಮವನ್ನುಂಟು ಮಾಡುವ ಅಗತ್ಯವನ್ನು ಸೂಚಿಸಿದೆ. ಈಸೋಪನ ಕಥೆಗಳು. ಪಂಚತಂತ್ರ ಮತ್ತು ಇತರ ಪುರಾಣೇತಿಹಾಸಗಳಿಂದ ಆಯ್ದ ನೀತಿ ಕಥೆಗಳು ಈ ಕಾರ್ಯಕ್ಕೆ ಉತ್ತಮ ಸಾಧನವಾಗಬಲ್ಲವು. ಮುಂದೆ ವಿದ್ಯಾರ್ಥಿಗಳು ಮೇಲಿನ ತರಗತಿಗಳಿಗೆ ಬಂದಾಗ ಅವರಿಗೆ ನೇರವಾಗಿ ಮಹಾವಾಕ್ಯಗಳ ಮೂಲಕ ನೀತಿನಿಯಮಗಳ ಪರಿಚಯ ಮಾಡಿಕೊಡಬಹುದು. ಈ ವಾಕ್ಯಗಳನ್ನು ವಿಶ್ವದ ನಾನಾ ಭಾಷೆಗಳ ಸಾಹಿತ್ಯದಿಂದಲೂ ಕವಿವಾಣಿಯಿಂದಲೂ ಸಾಧುಸಂತರ ಮತ್ತು ಮಹಾತ್ಮರ ಸಂದೇಶಗಳಿಂದಲೂ ಆರಿಸಿಕೊಳ್ಳಬಹುದು. ಇದರೊಡನೆ ಶಾಲೆಯ ನಾನಾ ವಿಧವಾದ ಪಠ್ಯೇತರ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರದಿಂದ ನಡೆಸಿ ಶಾಲೆಯ ವಾತಾವರಣದಲ್ಲಿ ನೈತಿಕ ಜೀವನದ ಸನ್ನಿವೇಶಗಳನ್ನು ಕಲ್ಪಿಸಿ, ಅನುಭವಜನ್ಯ ನೈತಿಕ ಶಿಕ್ಷಣ ನೀಡಬಹುದು. ಇಡೀ ಶಾಲೆಯ ವಾತಾವರಣ ನೀತಿಯುತ ಶಿಸ್ತಿನ ಜೀವನಕ್ಕೆ ಸ್ವಂಯಪ್ರೇರಕ ಶಕ್ತಿಯಾಗಬೇಕು. ಮತಬೋಧನೆಯೂ ಕೆಲವು ಸಂದರ್ಭಗಳಲ್ಲಿ ನೈತಿಕ ಶಿಕ್ಷಣಕ್ಕೆ ಪ್ರೇರಕ ಶಕ್ತಿಯಾಗಬಲ್ಲುದು. ವಿಶ್ವದ ಎಲ್ಲ ಮುಖ್ಯ ಮತಗಳ ತಳಹದಿ ಎನಿಸುವ ಉದಾತ್ತತತ್ತ್ವಗಳನ್ನು ಆಯಾ ಮತಧರ್ಮಗಳ ಸಂಸ್ಥಾಪಕರ ಮತ್ತು ಮಹಾತ್ಮರ ಜೀವನ ಪರಿಚಯದ ಆಧಾರದ ಮೇಲೆ ಪರಿಚಯ ಮಾಡಿಕೊಟ್ಟಾಗ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವೂ ನೈತಿಕ ಶಿಕ್ಷಣವಾಗಿ ಪರಿಣಮಿಸಬಲ್ಲದು.

ಶಾಲೆಯ ಆದರ್ಶಯುತ ನೈತಿಕ ವಾತಾವರಣ ಕಲ್ಪನೆಗೆ ಅಧ್ಯಾಪಕರ ವ್ಯಕ್ತಿತ್ವ ಮತ್ತು ನಡತೆ ಆಧಾರವೆನಿಸುತ್ತವೆ. ಅವರು ತಮ್ಮ ವೈಯಕ್ತಿಕ ಮತ್ತು ಸಾಂಘಿಕ ಜೀವನದ ಉದಾಹರಣೆಯ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಸ್ಪೂರ್ತಿಯನ್ನೂ ಮಾರ್ಗದರ್ಶನವನ್ನೂ ನೀಡಬಲ್ಲರು.

ಶಾಲೆಗಳು ಸಮಾಜ ಜೀವನದ ಪ್ರಗತಿ ಸಾಧನೆಯ ಅಡಿಗಲ್ಲು. ಶಾಲೆಗಳಲ್ಲಿ ಉತ್ತಮ ನೈತಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆತಲ್ಲಿ ಮುಂದಿನ ಜನಾಂಗದ ನೈತಿಕಮಟ್ಟವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ನಮ್ಮ ಸಮಾಜದಲ್ಲಿ ತಲೆದೋರಿರುವ ಅನೇಕ ಭ್ರಷ್ಟಾಚಾರಗಳಿಗೆ ಸಂಬಂಧಿಸಿದ ಸನ್ನಿವೇಶಗಳನ್ನು ವಿಮರ್ಶಿಸಿದಾಗ ಈ ಅವಶ್ಯಕತೆ ವ್ಯಕ್ತಪಡುತ್ತದೆ. ಉನ್ನತ ವಿದ್ಯಾಸಂಸ್ಥೆಗಳಲ್ಲಿ ನೈತಿಕ ಶಿಕ್ಷಣ : ವಿಶ್ವವಿದ್ಯಾಲಯದ ಮಟ್ಟದಲ್ಲಿ ನೈತಿಕ ಶಿಕ್ಷಣ ಸದ್ಯದಲ್ಲಿ ಬಹುಮಟ್ಟಿಗೆ ಇಲ್ಲವಾಗಿದೆ. ಇದರ ಫಲವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವ ವಹಿಸುವ ವ್ಯಕ್ತಿಗಳು ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ಮೌಲ್ಯಗಳಿಗೆ ಅಷ್ಟಾಗಿ ಗಮನ ಕೊಡದಿರುವುದು ಕಂಡುಬರುತ್ತದೆ. ಈ ಪರಿಸ್ಥಿತಿಯನ್ನು ಆರಿತ ಕೊಠಾರಿ ಶಿಕ್ಷಣ ಆಯೋಗ 1966ರಲ್ಲಿ ಆ ಮಟ್ಟದಲ್ಲಿ ನೈತಿಕ ಶಿಕ್ಷಣಕ್ಕೆ ಆಗತ್ಯವಾಗಿ ಗಮನ ಕೊಡಬೇಕಾದ ಅಂಶವನ್ನು ತಮ್ಮ ವರದಿಯಲ್ಲಿ ಸೂಚಿಸಿದೆ. ಅದು ಶ್ರೀಪ್ರಕಾಶಂ ಸಮಿತಿ ಮತ್ತು ರಾಧಾಕೃಷ್ಣನ್ ವಿಶ್ವವಿದ್ಯಾಲಯದ ಶಿಕ್ಷಣ ಆಯೋಗ ಸೂಚಿಸಿರುವ ಆಧ್ಯಾತ್ಮಕ ಅಂಶಗಳನ್ನು ಒಪ್ಪಿಕೊಂಡು ಮೂರು ವರ್ಷದ ಪದವಿಯ ಮೊದಲನೆಯ ತರಗತಿಯಲ್ಲಿ ಪ್ರಪಂಚದ ಪ್ರಮುಖ ಧರ್ಮಗಳ ಅಚಾರ್ಯರ ಜೀವನ ಚರಿತ್ರೆಯನ್ನೂ ಎರಡನೆಯ ವರ್ಷದಲ್ಲಿ ಆಯಾ ಧರ್ಮದಲ್ಲಿನ ವಿಶ್ವಮಾನ್ಯತೆಯನ್ನು ಪಡೆಯಬಲ್ಲ ತತ್ತ್ವಗಳನ್ನೂ ಮೂರನೆಯ ತರಗತಿಯಲ್ಲಿ ಎಲ್ಲ ಮತಧರ್ಮಗಳಿಗೂ ಮೂಲಭೂತವೆನಿಸಬಲ್ಲ ಆದರ್ಶಮೌಲ್ಯಾದಿಗಳನ್ನೂ ಅಭ್ಯಸಿಸಲು ನೆರವಾಗುವಂತೆ ಪಠ್ಯಕ್ರಮವನ್ನು ರೂಪಿಸಬೇಕೆಂದು ಸೂಚಿಸಿದೆ. ಜೊತೆಗೆ ಸಾಧ್ಯವಾದೆಡೆಗಳಲ್ಲಿ ಧ್ಯಾನಯೋಗಕ್ಕೂ (ಟ್ರಾನ್ಸೆಂಡೆಂಟಲ್ ಮೆಡಿಟೇಷನ್) ಅವಕಾಶ ಕಲ್ಪಿಸಬೇಕಾಗಿ ಸಲಹೆ ಮಾಡಿದೆ.

ಯುವಜನರಲ್ಲಿ ಆದರ್ಶ ಮೌಲ್ಯಾದಿಗಳನ್ನು ಬೆಳೆಸುವ ಕಾರ್ಯದಲ್ಲಿ ಭಾರತದ ಸಂಸ್ಕøತಿ ಸಂಪ್ರದಾಯಗಳಿಂದಲೂ ಇತರ ದೇಶಗಳ ಸಂಸ್ಕøತಿ ಸಂಪ್ರದಾಯಗಳಿಂದಲೂ ಅವನ್ನು ಆಯ್ದುಕೊಳ್ಳಬೇಕೆಂದು ಕೊಠಾರಿ ಶಿಕ್ಷಣ ಆಯೋಗ ಸೂಚಿಸಿದೆ. ಆಧುನಿಕ ಜೀವನದ ದೃಷ್ಟಿಗೆ ಪೋಷಕವೆನಿಸಬಲ್ಲ ಅಂಶಗಳು ಭಾರತೀಯ ಧರ್ಮಸಂಸ್ಕøತಿಗಳಲ್ಲಿ ಬೇಕಾದ ಹಾಗೆ ಅಡಗಿವೆ. ಸಾಮಾಜಿಕ ಸೇವೆ, ಮಾನವನ ಭವಿತವ್ಯದಲ್ಲಿ ನಂಬಿಕೆ, ಸತ್ಯ, ನಿಷ್ಠೆ, ತ್ಯಾಗ, ಅಹಿಂಸಾಮಾರ್ಗ ಇಂಥ ಮೌಲ್ಯಗಳು ನಮ್ಮ ಸಂಸ್ಕøತಿಯ ಅಡಿಗಲ್ಲಾಗಿರುವ ಅಂಶವನ್ನು ಸ್ಪಷ್ಟಪಡಿಸಿ, ರಾಜಾರಾಮ ಮೋಹನರಾಯ್, ಗಾಂಧೀಜಿ, ನೆಹರೂ, ಠಾಕೂರ್, ಅರವಿಂದ ಘೋಷ್, ರಾಮಕೃಷ್ಣ ಪರಮಹಂಸ, ವಿವೇಕಾನಂದ. ಮುಂತಾದವರ ವಾಣಿಯಲ್ಲಿ ಯುವಜನರು ತಮ್ಮ ಜೀವನಧ್ಯೇಯವನ್ನು ರೂಪಿಸಿಕೊಳ್ಳಲು ನೆರವಾಗಬಲ್ಲ ಅಂಶಗಳನ್ನು ಆ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳಬಹುದೆಂದು ಸೂಚಿಸಿದೆ. (ನೋಡಿ- ಚಾರಿತ್ರ್ಯ-ಶಿಕ್ಷಣ) * ನೈದಾನಿಕ ಪರೀಕ್ಷಣ : ಮಗುವಿನ ಸರ್ವತೋಮುಖ ಬೆಳೆವಣಿಗೆಯ ದಿಶೆಯಲ್ಲಿ ಶಿಕ್ಷಣದ ಪ್ರತಿಹಂತದಲ್ಲೂ ವಿದ್ಯಾರ್ಥಿಗಳಿಗಿರುವ ಸಾಮಥ್ರ್ಯ ಮತ್ತು ವಿಶಿಷ್ಟ ದೌರ್ಬಲ್ಯಗಳನ್ನು ತಿಳಿದು ನಿರ್ದಿಷ್ಟ ವಿಷಯಾಂಶದಲ್ಲಿರುವ ಅವರ ದೌರ್ಬಲ್ಯಗಳ ಆಧಾರದ ಮೇಲೆ ಅವರಿಗೆ ಅಗತ್ಯವೆನಿಸುವಂತೆ ಮಾರ್ಗದರ್ಶನ ಮಾಡಲು ಸಹಾಯಕವಾಗುವ ಪರೀಕ್ಷಣ (ಡಯಾಗ್ನೋಸ್ಟಿಕ್ ಟೆಸ್ಟ್). ನೈದಾನಿಕ ಪರೀಕ್ಷಣಗಳ ರಚನೆಯಲ್ಲಿ ಹಲವು ಹಂತಗಳಿರುತ್ತವೆ : 1 ಕಲಿಕೆಯ ಅನುಭವದ ಜ್ಞಾನ ಮತ್ತು ಕೌಶಲ್ಯಗಳ ಕೂಲಂಕಷ ವಿಶ್ಲೇಷಣೆ, 2 ಪ್ರತಿ ಛೇದಕ ಘಟಕಾಂಶಕ್ಕೂ ಸಮಂಜಸವಾದ ಪ್ರಶ್ನೆಗಳ ರಚನೆ, 3 ಪ್ರಶ್ನೆಗಳ ಮೂಲಕದ ಸಾಮಥ್ರ್ಯವನ್ನು ಪರೀಕ್ಷಿಸಲಾಗುವಂತೆ ಅವುಗಳ ಜೋಡಣೆ, 4 ಅದರ ಪ್ರಯೋಗ, 5 ಉತ್ತರಿಸಿದ ಪತ್ರಿಕೆಗಳ ವಿಶ್ಲೇಷಣೆ, 6 ಅವರವರ ದೌರ್ಬಲ್ಯಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಗುಂಪು ಮಾಡುವುದು (ರೆಮಿಡಿಯಲ್ ಗ್ರೂಪಿಂಗ್), 7 ಅನಂತರ ಆಯಾ ಗುಂಪಿಗೆ ತಕ್ಕ ನಿವಾರಕ ಬೋಧನೆ ನೀಡುವುದು.

ನೈದಾನಿಕ ಪರೀಕ್ಷಣಗಳು ಇತರ ಸಾಧಾರಣ ಪರೀಕ್ಷೆಗಳಿಗಿಂತ ವಿಭಿನ್ನವಾಗಿವೆ. ಅದರಲ್ಲೂ ಅವೆರಡರ ಉದ್ದೇಶಗಳು ಬೇರೆಬೇರೆಯಾಗುತ್ತವೆ. ಸಾಧಾರಣ ಪರೀಕ್ಷೆಗಳು ಒಂದು ವಿಷಯಕ್ಕೆ ಸಂಬಂಧಿಸಿದ ಎಲ್ಲ ಘಟಕಗಳ ಪ್ರಶ್ನೆಗಳನ್ನೊಳಗೊಂಡಿರಬಹುದು. ಆದರೆ ನೈದಾನಿಕ ಪರೀಕ್ಷಣಗಳು ಒಂದೇ ಘಟಕದ ಪ್ರತಿ ಅಂಶವನ್ನೂ ಕೂಲಂಕಷವಾಗಿ ಪರೀಕ್ಷಿಸುತ್ತವೆ. ಅವು ಸಾಮಾನ್ಯವಾಗಿ ವಿದ್ಯಾರ್ಥಿಗಳು ಮಾಡುವಂಥ ತಪ್ಪುಗಳನ್ನು ವಿಶ್ಲೇಷಿಸುತ್ತವೆ. ನೈದಾನಿಕ ಪರೀಕ್ಷಣಗಳ ಎರಡನೆಯ ಉದ್ದೇಶ ಕೇವಲ ವ್ಯಕ್ತಿಯ ಬಲಾಬಲಗಳನ್ನು ಗುರುತಿಸುವುದೇ ಹೊರತು ವ್ಯಕ್ತಿ ವ್ಯಕ್ತಿಗೆ ಹೋಲಿಸುವುದಾಗಲಿ ಅಥವಾ ಒಬ್ಬ ಎಷ್ಟು ವೇಗವಾಗಿ ಉತ್ತರಿಸಬಲ್ಲನೆಂಬುದನ್ನಾಗಲೀ ಪರೀಕ್ಷಿಸುವುದಲ್ಲ.

ಕಲಿಕೆಯ ಯಾವುದೇ ಒಂದು ಅನುಭವದಲ್ಲಿ ಕುಂದುಂಟಾದರೂ ಅಥವಾ ದೌರ್ಬಲ್ಯ ತಲೆದೋರಿದರೂ ಅದು ಶಿಕ್ಷಣದ ಪರಿಪೂರ್ಣತೆಯೆಡೆಗೆ ಸಾಗುವುದಿಲ್ಲವೆಂಬ ತತ್ತ್ವವೇ ಈ ನೈದಾನಿಕ ಪರೀಕ್ಷೆಗಳ ಅಸ್ತಿತ್ವಕ್ಕೆ ಆಧಾರ. ಈ ಪರೀಕ್ಷಣಗಳು, ವಿವಿಧ ಕಲಿಕೆಯ ಅನುಭವಗಳ ಪರಸ್ಪರ ಹೋಲಿಕೆಗೆ ಪ್ರಾಮುಖ್ಯ ಕೊಡುವುದಿಲ್ಲ. ಕಲಿಕೆಯ ಅನುಭವಗಳಿಗೆಲ್ಲ ಒಂದೇ ರೀತಿಯ ಭಾರ (ವೇಟ್) ಕಲ್ಪಿಸಲಾಗುತ್ತದೆ. ಒಂದರಿಂದ ಮತ್ತೊಂದಕ್ಕೆ ಸಾಮರಸ್ಯ ಮತ್ತು ನಿರಂತರತೆ ಇರುತ್ತದೆ. ಎಲ್ಲ ಅನುಭವಗಳನ್ನೂ ಸಮಂಜಸವಾಗಿ ನಿರೂಪಸಿರುತ್ತದೆ. ನೈದಾನಿಕ ಪರೀಕ್ಷಾ ವಿಧಾನದಲ್ಲಿ ವೈಯಕ್ತಿಕತೆಗೆ ಪ್ರಥಮ ಸ್ಥಾನ. ಎಂದರೆ ಪ್ರತಿ ವ್ಯಕ್ತಿಗೂ ತನ್ನದೇ ಅದ ಶೈಲಿಯಲ್ಲಿ ಸ್ಥಾಯಿಯಲ್ಲಿ ಹಾಗೂ ವೇಗದಲ್ಲಿ ಉತ್ತರಿಸಲು ಅವಕಾಶವಿರುತ್ತದೆ. ಇದು ಹೆಚ್ಚಿನದಾಗಿ ಶೈಕ್ಷಣಿಕ ಹಾಗು ಬೋಧನೋದ್ದೇಶಕ್ಕಾಗಿ ಇದೆಯಾದ್ದರಿಂದ ಇದು ಆಡಳಿತದ ಕಟ್ಟುಪಾಡಿಗೆ ಅಷ್ಟಾಗಿ ಒಳಗಾಗುವುದಿಲ್ಲ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಕಲಿಕೆಯ ಶೈಲಿಯನ್ನು ನಿಷ್ಕøಷ್ಟವಾಗಿ ಗುರುತಿಸಿ ಅದಕ್ಕೆ ತಕ್ಕ ಬೋಧನ ಕಾರ್ಯಕ್ರಮವನ್ನು ರೂಪಿಸಲು ಅನುವಾಗುವುದೇ ಇದರ ಏಕೈಕ ಉದ್ದೇಶ. ವಿದ್ಯಾರ್ಥಿಗಳ ಶಿಕ್ಷಣದ ನ್ಯೂನತೆಗಳನ್ನು ಎಂದರೆ ಯಾವುದೇ ಕಾರಣದಿಂದ ಮೂಡಿಕೊಂಡಿರಬಹುದಾದ ವಿದ್ಯಾರ್ಥಿಯ ಮಾತಿನ ಶೈಲಿಯ ಬರೆವಣಿಗೆಯ ಕಾರ್ಯಕುಶಲತೆಯ ದೈಹಿಕ ಆರೋಗ್ಯದ ಪರಿಪಾಠದ ಹಾಗೂ ಅವನ ಅನುವಂಶೀಯತೆ ಮತ್ತು ಪರಿಸರದ ದೌರ್ಬಲ್ಯಗಳನ್ನು ತೊಡೆದು ಹಾಕಲು ಸಲಹೆ ನೀಡುತ್ತದೆ; ಒಂದು ವ್ಯಕ್ತಿಯ ಒಂದು ವಿಷಯದಲ್ಲಿರುವ ತೊಡಕಿನ ಅಂಶವನ್ನು ಕಂಡುಹಿಡಿದು ಅದು ಮುಂದುವರಿಯದಂತೆ ಹಾಗೂ ಅದು ಶೀಘ್ರವಾಗಿ ನಿವಾರಣೆಯಾಗುವಂತೆ ಮಾಡುತ್ತದೆ. ಕೊನೆಯದಾಗಿ ಮಕ್ಕಳು ಮೊದಲು, ನೀರಸವಾಗಿ ಅಸಡ್ಡೆಯಿಂದ ಕಲಿತ ಅಂಶಗಳನ್ನು ಹುಡುಕಿ ಅನಂತರ ಅವರು ಅದನ್ನು ಸತತಾಭ್ಯಾಸದಿಂದ ಕರಗತ ಮಾಡಿಕೊಳ್ಳವ ಮಾರ್ಗವನ್ನು ಸೂಚಿಸುತ್ತದೆ.

ಈಚೆಗೆ ನೈದಾನಿಕ ಪರೀಕ್ಷಣಗಳ ಬಳಕೆ ಹೆಚ್ಚುತ್ತಿದೆ. ಮುಖ್ಯವಾಗಿ ಶಿಕ್ಷಣ ಕಾರ್ಯರಂಗದಲ್ಲಿ ಹೊಸ ಹೊಸ ಕ್ರಮಗಳನ್ನು ಅನುಸರಿಸುವಾಗಲೂ ಇವನ್ನು ಬಳಸಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಯ ಕಡೆ ಗಮನ ಕೊಡುತ್ತಿರುವ ಎಲ್ಲ ಕಾರ್ಯಚಟುವಟಿಕೆಗಳನ್ನು ರೂಪಿಸುವಾಗಲೂ ಬೋಧನ ವಿಧಾನಗಳ ಪರಿಣಾಮವನ್ನು ನಿಷ್ಕರ್ಷಿಸುವಾಗಲೂ ಇವನ್ನು ಬಳಸುಬಹುದು.

ಪ್ರತಿ ಪ್ರಮಾಣೀಕೃತ ಪರೀಕ್ಷಣಗಳ ಮಹತ್ತ್ವವನ್ನು ಅದರ ನೈದಾನಿಕತೆಯ ಮೌಲ್ಯದ ಮೇಲೆ ನಿರ್ಧರಿಸಲಾಗುತ್ತದೆ. ಇದು ಒಂದು ವಿಷಯದ ಅಥವಾ ಒಬ್ಬ ವ್ಯಕ್ತಿಯ ಬಲಾಬಲಗಳನ್ನು ಅಳೆಯುವ ಸಾಧನವೂ ಆಗಿದೆ. ಇದರ ಆಧಾರದ ಮೇಲೆ ಕಲಿಕೆಯ ಫಲ ನಿಂತಿದೆ. ಇದರಿಂದ ಒಂದೊಂದು ಸಣ್ಣ ಘಟಕಗಳನ್ನೂ ನಿರ್ದಿಷ್ಟವಾಗಿ ಸ್ಪಷ್ಟೀಕರಿಸಬಹುದು.

ಮುಖ್ಯವಾಗಿ ನೈದಾನಿಕ ಪರೀಕ್ಷಣಗಳನ್ನು ಭಾಷೆ, ಗಣಿತ, ದೈಹಿಕ ಶಿಕ್ಷಣ ಮುಂತಾದ ವಿಷಯಗಳ ಶಿಕ್ಷಣದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ವಿಜ್ಞಾನ, ಭೂಗೋಳ, ಸಮಾಜಪಾಠ ಮುಂತಾದ ವಿಷಯಗಳ ಬೋಧನೆಯಲ್ಲೂ ಅವುಗಳನ್ನು ಬಳಸುವ ಯತ್ನ ನಡೆಯುತ್ತಿದೆ. ಯಾವ ವಿಷಯಗಳಲ್ಲಿ ವಿಷಯ ವಿಭಾಗಗಳನ್ನು ಪ್ರತ್ಯೇಕವೂ ಸ್ಪಷ್ಟವೂ ಆದ ಅಂಗಭಾಗಗಳನ್ನಾಗಿ ವಿಂಗಡಿಸಬಹುದೋ ಆ ವಿಷಯಗಳ ಬೋಧನೆಯಲ್ಲಿ ಅವು ಅತ್ಯಂತ ಪರಿಣಾಮಕಾರಿಯಾದ ಬೋಧನ ಸಾಧನವೆನಿಸಬಲ್ಲವು. (ಟಿ.ಜಿ.ಎಸ್.ಎಚ್.)