ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈದಾನಿಕ ಪರೀಕ್ಷಣ

ವಿಕಿಸೋರ್ಸ್ದಿಂದ

ನೈದಾನಿಕ ಪರೀಕ್ಷೆ : - ಮಗುವಿನ ಸರ್ವತೋಮುಖ ಬೆಳೆವಣಿಗೆಯ ದಿಶೆಯಲ್ಲಿ ಶಿಕ್ಷಣದ ಪ್ರತಿಹಂತದಲ್ಲೂ ವಿದ್ಯಾರ್ಥಿಗಳಿಗಿರುವ ಸಾಮರ್ಥ್ಯ ಮತ್ತು ವಿಶಿಷ್ಟ ದೌರ್ಬಲ್ಯಗಳನ್ನು ತಿಳಿದು ನಿರ್ದಿಷ್ಟ ವಿಷಯಾಂಶದಲ್ಲಿರುವ ಅವರ ದೌರ್ಬಲ್ಯಗಳ ಆಧಾರದ ಮೇಲೆ ಅವರಿಗೆ ಅಗತ್ಯವೆನಿಸುವಂತೆ ಮಾರ್ಗದರ್ಶನ ಮಾಡಲು ಸಹಾಯಕವಾಗುವ ಪರೀಕ್ಷೆ (ಡಯಾಗ್ನೋಸ್ಟಿಕ್ ಟೆಸ್ಟ್).

ನೈದಾನಿಕ ಪರೀಕ್ಷಣಗಳ ರಚನೆಯಲ್ಲಿ ಹಲವು ಹಂತಗಳಿರುತ್ತವೆ : 1 ಕಲಿಕೆಯ ಅನುಭವದ ಜ್ಞಾನ ಮತ್ತು ಕೌಶಲ್ಯಗಳ ಕೂಲಂಕಷ ವಿಶ್ಲೇಷಣೆ. 2 ಪ್ರತಿ ಛೇದಕ ಘಟಕಾಂಶಕ್ಕೂ ಸಮಂಜಸವಾದ ಪ್ರಶ್ನೆಗಳ ರಚನೆ, 3 ಪ್ರಶ್ನೆಗಳ ಮೂಲಕದ ಸಾಮಥ್ರ್ಯವನ್ನು ಪರೀಕ್ಷಿಸಲಾಗುವಂತೆ ಅವುಗಳ ಜೋಡಣೆ, 4 ಅದರ ಪ್ರಯೋಗ, 5 ಉತ್ತರಿಸಿದ ಪತ್ರಿಕೆಗಳ ವಿಶ್ಲೇಷಣೆ, 6 ಅವರವರ ದೌರ್ಬಲ್ಯಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಗುಂಪು ಮಾಡುವುದು (ರೆಮಿಡಿಯಲ್ ಗ್ರೂಪಿಂಗ್), 7 ಅನಂತರ ಆಯಾ ಗುಂಪಿಗೆ ತಕ್ಕ ನಿವಾರಕ ಬೋಧನೆ ನೀಡುವುದು.

ನೈದಾನಿಕ ಪರೀಕ್ಷಣಗಳು ಇತರ ಸಾಧಾರಣ ಪರೀಕ್ಷೆಗಳಿಗಿಂತ ವಿಭಿನ್ನವಾಗಿವೆ. ಅದರಲ್ಲೂ ಅವೆರಡರ ಉದ್ದೇಶಗಳು ಬೇರೆಬೇರೆಯಾಗುತ್ತವೆ. ಸಾಧಾರಣ ಪರೀಕ್ಷೆಗಳು ಒಂದು ವಿಷಯಕ್ಕೆ ಸಂಬಂಧಿಸಿದ ಎಲ್ಲ ಘಟಕಗಳ ಪ್ರಶ್ನೆಗಳನ್ನೊಳಗೊಂಡಿರಬಹುದು. ಆದರೆ ನೈದಾನಿಕ ಪರೀಕ್ಷಣಗಳು ಒಂದೇ ಘಟಕದ ಪ್ರತಿ ಅಂಶವನ್ನೂ ಕೂಲಂಕಷವಾಗಿ ಪರೀಕ್ಷಿಸುತ್ತವೆ. ಅವು ಸಾಮಾನ್ಯವಾಗಿ ವಿದ್ಯಾರ್ಥಿಗಳು ಮಾಡುವಂಥ ತಪ್ಪುಗಳನ್ನು ವಿಶ್ಲೇಷಿಸುತ್ತವೆ. ನೈದಾನಿಕ ಪರೀಕ್ಷಣಗಳ ಎರಡನೆಯ ಉದ್ದೇಶ ಕೇವಲ ವ್ಯಕ್ತಿಯ ಬಲಾಬಲಗಳನ್ನು ಗುರುತಿಸುವುದೇ ಹೊರತು ವ್ಯಕ್ತಿ ವ್ಯಕ್ತಿಗೆ ಹೋಲಿಸುವುದಾಗಲಿ ಅಥವಾ ಒಬ್ಬ ಎಷ್ಟು ವೇಗವಾಗಿ ಉತ್ತರಿಸಬಲ್ಲನೆಂಬುದನ್ನಾಗಲೀ ಪರೀಕ್ಷಿಸುವುದಲ್ಲ.

ಕಲಿಕೆಯ ಯಾವುದೇ ಒಂದು ಅನುಭವದಲ್ಲಿ ಕುಂದುಂಟಾದರೂ ಅಥವಾ ದೌರ್ಬಲ್ಯ ತಲೆದೋರಿದರೂ ಅದು ಶಿಕ್ಷಣದ ಪರಿಪೂರ್ಣತೆಯೆಡೆಗೆ ಸಾಗುವುದಿಲ್ಲವೆಂಬ ತತ್ತ್ವವೇ ಈ ನೈದಾನಿಕ ಪರೀಕ್ಷೆಗಳ ಅಸ್ತಿತ್ವಕ್ಕೆ ಆಧಾರ. ಈ ಪರೀಕ್ಷಣಗಳು, ವಿವಿಧ ಕಲಿಕೆಯ ಅನುಭವಗಳ ಪರಸ್ಪರ ಹೋಲಿಕೆಗೆ ಪ್ರಾಮುಖ್ಯ ಕೊಡುವುದಿಲ್ಲ. ಕಲಿಕೆಯ ಅನುಭವಗಳಿಗೆಲ್ಲ ಒಂದೇ ರೀತಿಯ ಭಾರ (ವೇಟ್) ಕಲ್ಪಿಸಲಾಗುತ್ತದೆ. ಒಂದರಿಂದ ಮತ್ತೊಂದಕ್ಕೆ ಸಾಮರಸ್ಯ ಮತ್ತು ನಿರಂತರತೆ ಇರುತ್ತದೆ. ಎಲ್ಲ ಅನುಭವಗಳನ್ನೂ ಸಮಂಜಸವಾಗಿ ನಿರೂಪಸಿರುತ್ತದೆ. ನೈದಾನಿಕ ಪರೀಕ್ಷಾ ವಿಧಾನದಲ್ಲಿ ವೈಯಕ್ತಿಕತೆಗೆ ಪ್ರಥಮ ಸ್ಥಾನ. ಎಂದರೆ ಪ್ರತಿ ವ್ಯಕ್ತಿಗೂ ತನ್ನದೇ ಆದ ಶೈಲಿಯಲ್ಲಿ, ಸ್ಥಾಯಿಯಲ್ಲಿ ಹಾಗೂ ವೇಗದಲ್ಲಿ ಉತ್ತರಿಸಲು ಅವಕಾಶವಿರುತ್ತದೆ. ಇದು ಹೆಚ್ಚಿನದಾಗಿ ಶೈಕ್ಷಣಿಕ ಹಾಗು ಬೋಧನೋದ್ದೇಶಕ್ಕಾಗಿ ಇದೆಯಾದ್ದರಿಂದ ಇದು ಆಡಳಿತದ ಕಟ್ಟುಪಾಡಿಗೆ ಅಷ್ಟಾಗಿ ಒಳಗಾಗುವುದಿಲ್ಲ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಕಲಿಕೆಯ ಶೈಲಿಯನ್ನು ನಿಷ್ಕøಷ್ಟವಾಗಿ ಗುರುತಿಸಿ ಅದಕ್ಕೆ ತಕ್ಕ ಬೋಧನ ಕಾರ್ಯಕ್ರಮವನ್ನು ರೂಪಿಸಲು ಅನುವಾಗುವುದೇ ಇದರ ಏಕೈಕ ಉದ್ದೇಶ. ವಿದ್ಯಾರ್ಥಿಗಳ ಶಿಕ್ಷಣದ ನ್ಯೂನತೆಗಳನ್ನು ಎಂದರೆ ಯಾವುದೇ ಕಾರಣದಿಂದ ಮೂಡಿಕೊಂಡಿರಬಹುದಾದ ವಿದ್ಯಾರ್ಥಿಯ ಮಾತಿನ ಶೈಲಿಯ ಬರೆವಣಿಗೆಯ ಕಾರ್ಯಕುಶಲತೆಯ ದೈಹಿಕ ಆರೋಗ್ಯದ ಪರಿಪಾಠದ ಹಾಗೂ ಅವನ ಅನುವಂಶೀಯತೆ ಮತ್ತು ಪರಿಸರದ ದೌರ್ಬಲ್ಯಗಳನ್ನು ತೊಡೆದು ಹಾಕಲು ಸಲಹೆ ನೀಡತ್ತದೆ; ಒಂದು ವ್ಯಕ್ತಿಯ ಒಂದು ವಿಷಯದಲ್ಲಿರುವ ತೊಡಕಿನ ಅಂಶವನ್ನು ಕಂಡುಹಿಡಿದು ಅದು ಮುಂದುವರಿಯದಂತೆ ಹಾಗೂ ಅದು ಶೀಘ್ರವಾಗಿ ನಿವಾರಣೆಯಾಗುವಂತೆ ಮಾಡುತ್ತದೆ. ಕೊನೆಯದಾಗಿ ಮಕ್ಕಳು ಮೊದಲು, ನೀರಸವಾಗಿ ಅಸಡ್ಡೆಯಿಂದ ಕಲಿತ ಅಂಶಗಳನ್ನು ಹುಡುಕಿ ಅನಂತರ ಅವರು ಅದನ್ನು ಸತತಾಭ್ಯಾಸದಿಂದ ಕರಗತ ಮಾಡಿಕೊಳ್ಳವ ಮಾರ್ಗವನ್ನು ಸೂಚಿಸುತ್ತದೆ.

ಈಚೆಗೆ ನೈದಾನಿಕ ಪರೀಕ್ಷಣಗಳ ಬಳಕೆ ಹೆಚ್ಚುತ್ತಿದೆ. ಮುಖ್ಯವಾಗಿ ಶಿಕ್ಷಣ ಕಾರ್ಯರಂಗದಲ್ಲಿ ಹೊಸ ಹೊಸ ಕ್ರಮಗಳನ್ನು ಅನುಸರಿಸುವಾಗಲೂ ಇವನ್ನು ಬಳಸಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಯ ಕಡೆ ಗಮನ ಕೊಡುತ್ತಿರುವ ಎಲ್ಲ ಕಾರ್ಯಚಟುವಟಿಕೆಗಳನ್ನು ರೂಪಿಸುವಾಗಲೂ ಬೋಧನ ವಿಧಾನಗಳ ಪರಿಣಾಮವನ್ನು ನಿಷ್ಕರ್ಷಿಸುವಾಗಲೂ ಇವನ್ನು ಬಳಸಬಹುದು. ಪ್ರತಿ ಪ್ರಮಾಣೀಕೃತ ಪರೀಕ್ಷಣಗಳ ಮಹತ್ತ್ವವನ್ನು ಅದರ ನೈದಾನಿಕತೆಯ ಮೌಲ್ಯದ ಮೇಲೆ ನಿರ್ಧರಿಸಲಾಗುತ್ತದೆ. ಇದು ಒಂದು ವಿಷಯದ ಅಥವಾ ಒಬ್ಬ ವ್ಯಕ್ತಿಯ ಬಲಾಬಲಗಳನ್ನು ಅಳೆಯುವ ಸಾಧನವೂ ಆಗಿದೆ. ಇದರ ಆಧಾರದ ಮೇಲೆ ಕಲಿಕೆಯ ಫಲ ನಿಂತಿದೆ. ಇದರಿಂದ ಒಂದೊಂದು ಸಣ್ಣ ಘಟಕಗಳನ್ನೂ ನಿರ್ದಿಷ್ಟವಾಗಿ ಸ್ಪಷ್ಟೀಕರಿಸಬಹುದು.

ಮುಖ್ಯವಾಗಿ ನೈದಾನಿಕ ಪರೀಕ್ಷಣಗಳನ್ನು ಭಾಷೆ, ಗಣಿತ, ದೈಹಿಕ ಶಿಕ್ಷಣ ಮುಂತಾದ ವಿಷಯಗಳ ಶಿಕ್ಷಣದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ವಿಜ್ಞಾನ, ಭೂಗೋಳ, ಸಮಾಜಪಾಠ ಮುಂತಾದ ವಿಷಯಗಳ ಬೋಧನೆಯಲ್ಲೂ ಅವುಗಳನ್ನು ಬಳಸುವ ಯತ್ನ ನಡೆಯುತ್ತಿದೆ. ಯಾವ ವಿಷಯಗಳಲ್ಲಿ ವಿಷಯ ವಿಭಾಗಗಳನ್ನು ಪ್ರತ್ಯೇಕವೂ ಸ್ಪಷ್ಟವೂ ಅದ ಅಂಗಭಾಗಗಳನ್ನಾಗಿ ವಿಂಗಡಿಸಬಹುದೋ ಆ ವಿಷಯಗಳ ಬೋಧನೆಯಲ್ಲಿ ಅವು ಅತ್ಯಂತ ಪರಿಣಾಮಕಾರಿಯಾದ ಬೋಧನ ಸಾಧನವೆನಿಸಬಲ್ಲವು. (ಟಿ.ಜಿ.ಎಸ್.ಎಚ್.)