ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈದಿಲೆ

ವಿಕಿಸೋರ್ಸ್ದಿಂದ

ನೈದಿಲೆ - ನಿಂಫಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸುಂದರ ಜಲಸಸ್ಯ (ವಾಟರ್ ಲಿಲಿ). ಕನ್ನೈದಿಲೆ, ತಾವರೆ ಪರ್ಯಾಯ ನಾಮಗಳು, ನಿಂಫಿಯ ನೌಚಾಲಿ ಇದರ ವೈಜ್ಞಾನಿಕ ಹೆಸರು. ಬಿಳಿತಾವರೆ (ನಿಂಫಿಯ ಆಲ್ಬ), ನೀಲಿ ತಾವರೆ (ನಿಂಫಿಯ ಸ್ಟೆಲೇಟ) ಇದರ ಹತ್ತಿರ ಸಂಬಂಧಿಗಳು. ಭಾರತಾದ್ಯಂತ ಕೆರೆ, ಕೊಳ, ಸರೋವರಗಳಲ್ಲಿ ಕಾಣಬರುತ್ತದೆ. ಮೋಟಾದ ಹಾಗೂ ಗುಂಡನೆಯ ಪ್ರಕಂದದ ನೆರವಿನಿಂದ ಇದು ಕೆರೆ, ಕೊಳಗಳ ತಳದಲ್ಲಿ ಹುದುಗಿ ಬೆಳೆಯುತ್ತದೆ. ಎಲೆಗಳಿಗೆ ಉದ್ದನೆಯ ತೊಟ್ಟು ಉಂಟು, ಎಲೆಗಳ ಆಗಲ 15-25 ಸೆಂ.ಮೀ; ಆಕಾರ ಅಂಡದಂತೆ ಇಲ್ಲವೆ ಅವರೆಕಾಳಿನಂತೆ. ಎಲೆ ಅಂಚು ಗರಗಸದಂತೆ. ಹೂಗಳು ಒಂಟೊಂಟಿಯಾಗಿ ಅರಳುವುವು. ಪ್ರತಿಹೂವಿಗೆ ಉದ್ದವಾದ ತೊಟ್ಟು ಉಂಟು. ಹೂಗಳ ಬಣ್ಣ ಕಗ್ಗೆಂಪಿನಿಂದ ಶುದ್ಧಬಿಳಿಯವರೆಗೆ ವ್ಯತ್ಯಾಸವಾಗುವುದಿದೆ. ಫಲ ಬೆರಿ ಮಾದರಿಯದು; ಸ್ಪಂಜಿನಂತಿದೆ. ರೊಯಲ್ ಎಂಬಾತನ ಪ್ರಕಾರ ನೈದಿಲೆಗಳ ತವರು ಭಾರತ.

ನೈದಿಲೆ ಬರಿಯ ಅಲಂಕಾರ ಸಸ್ಯ ಮಾತ್ರವಲ್ಲ. ಇದಕ್ಕೆ ಆಹಾರಪ್ರಾಮುಖ್ಯವೂ ಉಂಟು. ಪ್ರಕಂದಗಳಲ್ಲಿ ಪಿಷ್ಟವಿದ್ದು ಇದು ಆಹಾರವಾಗಿ ಬಳಕೆಯಲ್ಲಿದೆ. ಕೆಲವು ಸಲ ಬೇರು, ದಿಂಡು ಮತ್ತು ಹೂತೊಟ್ಟುಗಳನ್ನು ಬರಗಾಲದಲ್ಲಿ ಆಹಾರವಾಗಿ ಬಳಸುವುದಿದೆ. ಬೀಜಗಳೂ ತಿನ್ನಲು ಯೋಗ್ಯ. ಇದನ್ನು ಹಾಗೆಯೇ ಇಲ್ಲವೆ ಸುಟ್ಟು ತಿನ್ನುವರಲ್ಲದೆ ಹಿಟ್ಟು ಮಾಡಿ ಅದರಿಂದ ಗಂಜಿ ತಯಾರಿಸಿ ಕುಡಿಯುವುದುಂಟು. ಇದರ ಪ್ರಕಂದಗಳ ಹುಡಿ ಭೇದಿ, ಅಜೀರ್ಣ ಮತ್ತು ಮೂಲವ್ಯಾಧಿಗಳಿಗೆ ಔಷಧಿಯಾಗಿದೆ. ಇದರ ಬೀಜಗಳಿಂದ ತಯಾರಿಸಿದ ಮುಲಾಮನ್ನು ಚರ್ಮರೋಗಕ್ಕೆ ಉಪಯೋಗಿಸುವರು. (ವಿ.ಎಸ್.ವೈ.)