ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈನೀತಾಲ್

ವಿಕಿಸೋರ್ಸ್ದಿಂದ

ನೈನೀತಾಲ್ ಉತ್ತರ ಪ್ರದೇಶ ರಾಜ್ಯದ ಕುಮಾರನ್ ವಿಭಾಗದ ಪಟ್ಟಣ ಮತ್ತು ಜಿಲ್ಲೆ. ಪಟ್ಟಣ ಕುಮಾಂವ್ ವಿಭಾಗ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ, ಗಿರಿಧಾಮ. ಹಿಮಾಲಯ ಶಿವಾಲಿಕ್ ಶ್ರೇಣಿಯ ಕಣಿವೆಯಲ್ಲಿ ಉ.ಅ. 29(24 ಪೂ.ರೇ. 79(28 ಮೇಲೆ ಇದೆ. ಸಮುದ್ರಮಟ್ಟದಿಂದ ಇದರ ಎತ್ತರ 1,934 ಮೀ. ಸುಂದರವಾದ ಸರೋವರದ ಸುತ್ತಲೂ ಈ ಪಟ್ಟಣ ಹಬ್ಬಿದೆ. ಹಿನ್ನಲೆಯಲ್ಲಿ ಬೆಟ್ಟಗಳೂ ಅರಣ್ಯವೂ ಇದೆ. ನೈನೀತಾಲ್ ಸರೋವರ 1.6 ಕಿಮೀ. ಉದ್ದವಾಗಿಯೂ 366 ಮೀ. ಅಗಲವಾಗಿಯೂ ಇದೆ. ಸರೋವರದ ದಕ್ಷಿಣದಲ್ಲಿ ತಿಳಿನೀರಿನ ಚಿಲುಮೆಗಳಿವೆ.

ನೈನೀತಾಲ್ ಬೇಸಗೆಯ ವಾಸಕ್ಕೆ ಯೋಗ್ಯವೆಂದು ಬ್ರಿಟಿಷ್ ಅಧಿಕಾರಿ ಬ್ಯಾರನ್ ಮಾಡಿದ ಶಿಫಾರಸಿನಂತೆ 1841ರಲ್ಲಿ ಈ ಪಟ್ಟಣವನ್ನು ಸ್ಥಾಪಿಸಲಾಯಿತು. 1862ರಲ್ಲಿ ಬ್ರಿಟಿಷ್ ಇಂಡಿಯ ಸರ್ಕಾರ ಇದನ್ನು ಸಂಯುಕ್ತ ಪ್ರಾಂತ್ಯದ (ಈಗಿನ ಉತ್ತರ ಪ್ರದೇಶ) ಬೇಸಿಗೆಯ ರಾಜಧಾನಿಯಾಗಿ ಮಾಡಿತು. 1881ರ ಭೂಕುಸಿತದಿಂದ ಪಟ್ಟಣಕ್ಕೆ ನಷ್ಟ ಸಂಭವಿಸಿತು. ಈ ಅನಾಹುತದ ತರುವಾಯ ಸರೋವರದ ಮೇಲ್ಡಡದ ಕಡೆ ಹೊಸ ಪಟ್ಟಣವನ್ನು ನಿರ್ಮಿಸಲಾಯಿತು. ಪಟ್ಟಣದಲ್ಲಿ ತಲ್ಲಿತಾಲ್ ಮತ್ತು ಮಾಲ್ಲಿ ತಾಲ್ ಪ್ರಸಿದ್ಧ ವ್ಯಾಪಾರಸ್ಥಳಗಳು. ಮಾಲ್‍ನ (ಆಗಿನ ಪಂತ್ ಮಾರ್ಗ) ಉದ್ದಕ್ಕೂ ಅಂಗಡಿಗಳಿವೆ. ತಲ್ಲಿ ತಾಲ್ ಪ್ರದೇಶದಲ್ಲಿ ಸರ್ಕಾರಿ ಕಛೇರಿಗಳಿವೆ. ಮಲ್ಲಿ ತಲ್ ಭಾಗದಲ್ಲಿ ಪೌರಸಭಾ ಕಛೇರಿ, ಆರಕ್ಷಕ ಠಾಣೆ, ಅಂಚೆ ಕಚೇರಿ ಇವೆ. ಪಟ್ಟಣದಲ್ಲಿ ಆಗ್ರ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜುಗಳಿವೆ. ಪಟ್ಟಣದ ಜನಸಂಖ್ಯೆ 24,544 (1971). ನೈನೀತಾಲ್ ಬೇಸಿಗೆಯ ಪ್ರವಾಸಿ ಕ್ಷೇತ್ರ. ಈ ಪಟ್ಟಣದಿಂದ 37 ಕಿ.ಮೀ. ದೂರದಲ್ಲಿರುವ ಕಾತ್‍ಗೋದಾಮ್ ರೈಲು ನಿಲ್ದಾಣಕ್ಕೆ ರಸ್ತೆ ಇದೆ. ರೈಲ್ವೆ ಸಂಪರ್ಕ ಏರ್ಪಟ್ಟ ಮೇಲೆ ಪಟ್ಟಣ ಬೇಗ ಬೆಳೆಯಿತು. ನೈನೀತಾಲ್ ಸರೋವರದಲ್ಲಿ ದೋಣಿಯ ಸಂಚಾರವಿದೆ.


ನೈನೀತಾಲ್ ಜಿಲ್ಲೆಯ ವಿಸ್ತೀರ್ಣ 6.285 ಚ.ಕಿಮೀ. ಜಿಲ್ಲೆಯ ಉತ್ತರದಲ್ಲಿ ಶಿವಾಲಿಕ್ ಪರ್ವತ ಶ್ರೇಣಿಗಳಿವೆ. ದಕ್ಷಿಣದಲ್ಲಿ ಗಂಗಾನದಿ ಬಯಲಿನ ಪ್ರದೇಶವಿದೆ. ಪೂರ್ವ ಭಾಗದಲ್ಲಿ ಈ ಜಿಲ್ಲೆ ನೇಪಾಲ ರಾಜ್ಯ ಗಡಿಯನ್ನು ಮುಟ್ಟುತ್ತದೆ. ಜಿಲ್ಲೆಯಲ್ಲಿ ಬೆಟ್ಟಗಳು ಹಾಗೂ ಅರಣ್ಯಗಳು ಹೆಚ್ಚು. ಗಂಗಾ ಬಯಲಿಗೆ ತರಾಯ್ ಎಂದು ಹೆಸರು. ಅದು ತೇವದಿಂದ ಕೂಡಿದ ಅನಾರೋಗ್ಯಕರ ಪ್ರದೇಶ. ಜಿಲ್ಲೆಯ ಬೆಟ್ಟಗಳು ಸಮುದ್ರಮಟ್ಟದಿಂದ ಸರಾಸರಿ 2,743 ಮೀ. ಎತ್ತರದಲ್ಲಿವೆ, ಜಿಲ್ಲೆಯ ಬೆಳೆಗಳು ಬತ್ತ, ಕಬ್ಬು, ಗೋಧಿ, ಚಹ ಮತ್ತು ಹಣ್ಣು, ನೈನೀತಾಲ್‍ನ ಈಶಾನ್ಯಕ್ಕೆ 48 ಕಿಮೀ. ದೂರದಲ್ಲಿರುವ ಮುಕ್ತೇಶ್ವರದಲ್ಲಿ (2,286 ಮೀ.) ರಾಷ್ಟ್ರೀಯ ಪಶುವೈದ್ಯ ಸಂಶೋಧನ ಸಂಸ್ಥೆಯಿದೆ. ಪಟ್ಟಣಕ್ಕೆ 11 ಕಿಮೀ. ದೂರದಲ್ಲಿ ಭೀಮ್‍ತಾಲ್ ಮತ್ತು ನೌಕುಚಿಯಾತಾಲ್ ಸರೋವರಗಳಿವೆ. ಉತ್ತರ ಪ್ರದೇಶ ವ್ಯವಸಾಯ ವಿಶ್ವವಿದ್ಯಾಲಯ ಪಂತ್‍ನಗರದಲ್ಲಿ ಸ್ಥಾಪಿತವಾಗಿದೆ (1960). ಜಿಲ್ಲೆಯ ಜನಸಂಖ್ಯೆ 7,90,120 (1971). (ವಿ.ಜಿ.ಕೆ.)