ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಮಿಷ

ವಿಕಿಸೋರ್ಸ್ದಿಂದ

ನೈಮಿಷ - ಪುರಾಣಗಳಲ್ಲಿ ಬರುವ ಒಂದು ಪ್ರಸಿದ್ಧ ವನ. ಶೌನಕಾದಿ ಮುನಿಗಳು ಇಲ್ಲಿ ಯಾಗಗಳನ್ನು ಮಾಡುತ್ತಿದ್ದರೆಂದೂ ತಮ್ಮ ಬಿಡುವಿನ ವೇಳೆಯಲ್ಲಿ ಧರ್ಮಕಥೆಗಳನ್ನು (ಪುರಾಣ) ಸೂತಪುರಾಣಿಕರಿಂದ ಕೇಳುತ್ತಿದ್ದರೆಂದೂ ಹೇಳಲಾಗಿದೆ. ಮೊದಲಿಗೆ ವಿಶ್ವಸೃಷ್ಟಿ ಮಾಡಲು ಹೊರಟ ದೇವತೆಗಳು ಇಲ್ಲಿ 1000 ವರ್ಷಗಳ ಸತ್ರಯಾಗ ನಡೆಸಿದರು ಎನ್ನಲಾಗಿದೆ. ವಸಿಷ್ಕ ಮೊದಲಾದ ಮುನಿಗಳೂ ಇಲ್ಲಿ ಸತ್ರಾದಿ ಯಾಗಗಳನ್ನು ನಡೆಸುತ್ತಿದ್ದರು. ಆ ಕಾರಣದಿಂದಾಗಿ ಅವರಿಗೆ ನೈಮಿಷೇಯರೆಂದೇ ಹೆಸರಾಯಿತು. ಪುರೂರವನ್ ಆಳುತ್ತಿದ್ದಾಗ ಇಲ್ಲಿ 12 ವರ್ಷಗಳ ಸತ್ರಯಾಗ ನಡೆಯಿತೆಂದು ಹೇಳಲಾಗಿದೆ.

ನೈಮಿಷ ಎಂಬ ಪದದ ವಿವರಣೆ ವಾಯು ಮತ್ತು ಕಾಲಿಕಾ ಪುರಾಣಗಳಲ್ಲಿ ಹೀಗಿದೆ. ಒಮ್ಮೆ ಋಷಿಗಳು ಬ್ರಹ್ಮನ ಬಳಿಸಾರಿ ತಪಸ್ಸಿಗೆ ಯೋಗ್ಯವಾದ ಪ್ರದೇಶವನ್ನು ಸೂಚಿಸಲು ಕೇಳಿಕೊಂಡರು. ಆಗ ಬ್ರಹ್ಮ ಒಂದು ಮನೋಮಯ ಚಕ್ರವನ್ನು ಸೃಷ್ಟಿಮಾಡಿ ಉರುಳಿ ಬಿಟ್ಟು, ಅದು ಎಲ್ಲಿ ನಿಲ್ಲುವುದೋ ಅದೇ ಯೋಗ್ಯ ಪ್ರದೇಶ ಎಂದು ತಿಳಿಯಿರಿ ಎಂದು ಅವರಿಗೆ ಹೇಳಿದ. ಅದರಂತೆ ಋಷಿಗಳು ಆ ಚಕ್ರವನ್ನು ಹಿಂಬಾಲಿಸಿ ಈ ಪ್ರದೇಶವನ್ನು ತಲುಪಿದರು. ಈ ಕಾರಣದಿಂದ ಈ ವನ ನೈಮಿಷ ಎಂದು ಪ್ರಸಿದ್ದಿ ಪಡೆಯಿತು. ಚಕ್ರನೇಮಿ ನಿಂತ ಸ್ಥಳ ಎಂದು ಇದರ ಅರ್ಥ.

ವರಾಹ ಪುರಾಣದ ಪ್ರಕಾರ ಸುಪ್ರತೀಕನ ಮಗ ದುರ್ಜಯನೆಂಬ ದೊರೆ 5 ಆಕ್ಷೋಹಿಣಿ ಸೇನೆಯೊಂದಿಗೆ ಸಂಚರಿಸುತ್ತ ಗೌರಮುಖನೆಂಬ ಮುನಿಯ ಆಶ್ರಮಕ್ಕೆ ಬಂದ. ಅವರೆಲ್ಲರನ್ನೂ ಮುನಿ ಸ್ವಾಗತಿಸಿದ. ಅವರುಗಳಿಗೆಲ್ಲ ಉಪಚಾರ ಮಾಡಲು ಸ್ವಯಂ ಆಶಕ್ತನಾದ ಕಾರಣ ಮಹಾವಿಷ್ಣುವನ್ನು ಪ್ರಾರ್ಥಿಸಿ, ಅವನಿಂದ ಒಂದು ಮಣಿಯನ್ನು ಪಡೆದು ಅದರ ಸಹಾಯದಿಂದ ದೊರೆಗೂ ಅವನ ಸಿಬ್ಬಂದಿಯವರಿಗೂ ಅದ್ಭುತವಾದ ಉಪಚಾರ ಮಾಡಿದ. ಈ ಗುಟ್ಟನ್ನು ತಿಳಿದ ರಾಜ ಮಣಿಯನ್ನು ತಾನು ಪಡೆಯಲು ಇಚ್ಛಿಸಿದ. ಮಂತ್ರಿ ಮುನಿ ಬಳಿ ಹೋಗಿ ಮಣಿ ಕೇಳಿ ತಿರಸ್ಕøತನಾದ. ಆಗ ರಾಜ ಆಶ್ರಮದಲ್ಲಿ ಮುನಿ ಇಲ್ಲದೆ ಸಮಯದಲ್ಲಿ ಮಣಿಯನ್ನು ಎತ್ತಿಕೊಂಡು ಬರಲು ಜನರನ್ನು ಅಟ್ಟಿದ. ಆಗ 15 ಜನ ಯೋಧರು ಮಣಿಯಿಂದ ಉದ್ಭವಿಸಿ ಬಂದು ರಾಜನ ಸೈನಿಕರೊಡನೆ ಹೋರಾಡತೊಡಗಿದರು. ಹೊರಗೆ ಹೋಗಿದ್ದ ಮುನಿ ಹಿಂತಿರುಗಿದಾಗ ಆಶ್ರಮದಲ್ಲಿ ನಡೆಯುತ್ತಿದ್ದ ಘಟನೆಗಳನ್ನು ನೋಡಿ ಇದು ಮಣಿಗೆ ಸಂಬಂಧಿಸಿದುದು ಎಂದು ತಿಳಿದು, ಮಹಾವಿಷ್ಣುವನ್ನು ಸ್ತುತಿಸಿ ದುರ್ಜಯನನ್ನು ಸಂಹರಿಸುವಂತೆ ಪ್ರಾರ್ಥಿಸಿದ. ಆಗ ಮಹಾವಿಷ್ಟುವಿನ ಸುದರ್ಶನಚಕ್ರ ದುರ್ಜಯ ಮತ್ತು ಅವನ ಎಲ್ಲ ಸೇನೆಯನ್ನು ನಿಮಿಷ ಮಾತ್ರದಲ್ಲಿ ಸುಟ್ಟುಹಾಕಿತು. ಆಗ ವಿಷ್ಣು ಮುನಿಯನ್ನು ಕುರಿತು ಮುನಿಯೇ, ನಿಮಿಷ ಮಾತ್ರದಲ್ಲಿ ಈ ದಾನವಕುಲ ಇಲ್ಲಿ ಬೂದಿಯಾಯಿತಾದ್ದರಿಂದ, ಈ ಆರಣ್ಯ ನೈಮಿಷಾರಣ್ಯ ಎಂದೇ ಪ್ರಸಿದ್ಧವಾಗಲಿ ಎಂದು ಹರಸಿ ಅಲ್ಲಿ ನಡೆಯುವ ಯಜ್ಞಯಾಗಾದಿಗಳಲ್ಲಿ ನಾನು ಯಜ್ಞಪುರಷನಾಗಿ ಇರುತ್ತೇನೆ ಎಂದು ಹೇಳಿದ.

ಗೋಮತೀ ನದೀ ತೀರದಲ್ಲಿರುವ ಈ ಪವಿತ್ರವನಕ್ಕೆ ಈಗಿನ ಹೆಸರು ನಿಮ್ಸಾರ. (ಆರ್.ಎಸ್.ಎಸ್.)