ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಮೀನು

ವಿಕಿಸೋರ್ಸ್ದಿಂದ

ನೈಮೀನು - ಹಿನ್ನೀರು, ಚೌಳುನೀರು ಹಾಗೂ ನದಿ ನೀರಿನಲ್ಲಿ ವಾಸಿಸುವ ಒಂದು ಬಗೆಯ ಮೀನು. ಪರ್ಸಿಫಾರ್ಮೀಸ್ ವರ್ಗದ ಪರ್‍ಕಾಯ್ಡಿ ಉಪವರ್ಗದ ಸ್ಕ್ಯಾಟೋಫೇಗಿಡೀ ಕುಟುಂಬಕ್ಕೆ ಸೇರಿದೆ. ಇದರ ಶಾಸ್ತ್ರೀಯ ಹೆಸರು ಸ್ಕ್ಯಾಟೋಫೇಗಸ್ ಆರ್ಗಸ್. ಭಾರತದಿಂದ ಚೀನ ಸಮುದ್ರ ಹಾಗೂ ಆಸ್ಟ್ರೇಲಿಯಗಳವರೆಗೆ ಪಸರಿಸಿರುವ ಈ ಮೀನು ಆಹಾರಕ್ಕಾಗಿ ಅಳಿವೆಗಳನ್ನು ಪ್ರವೇಶಿಸುತ್ತದೆ. ಹೊಲಸು ಪದಾರ್ಥಗಳನ್ನು ತಿನ್ನುವ ಇದು ಹೆಚ್ಚು ಕಡಿಮೆ 35 ಸೆಂ.ಮೀ. ಉದ್ದ ಬೆಳೆಯುವುದುಂಟು.

ಇದರ ದೇಹ ಕೊಂಚಮಟ್ಟಿಗೆ ಚತುರ್ಭುಜಾಕೃತಿಯದು. ಮೇಲುದವಡೆಯ ಎಲುಬು. ಮೂತಿಯ ತುದಿ ಹಾಗೂ ಕಣ್ಣು ಕುಳಿಯ ಮುಂದಿನ ಅಂಚಿನ ಸುಮಾರು ಅರ್ಧದಷ್ಟು ದೂರಕ್ಕೆ ಚಾಚುತ್ತದೆ. ಮುಂಕಣ್ಣು ಕುಳಿಯ ಎಲುಬಿನ ಕೆಳಅಂಚಿನ ಕೊನೆಯ ಅರ್ಧ ಭಾಗ ಸೂಕ್ಷ್ಮವಾದ ಗರಗಸದಂಥ ಹಲ್ಲುಳ್ಳದ್ದು. ಕೆಲವು ವೇಳೆ ಮುಂಕಿವಿರು ಮುಚ್ಚಳದ ಎಲುಬಿನ ಮೂಲೆಯಲ್ಲೂ ಅದರ ಕೆಳಗಿನ ಅಂಚಿನುದ್ದಕ್ಕೂ ಹಲ್ಲುಗಳಿರುವುದುಂಟು. ಅದರೆ ಕಿವಿರು ಮುಚ್ಚಳದ ಕೆಳಗಿನ ಮತ್ತು ಕಿವಿರು ಮುಚ್ಚಳದ ಎಲುಬುಗಳ ಮಧ್ಯದ ಎಲುಬುಗಳು ಅಖಂಡವಾಗಿವೆ. ಕಿವಿರು ಮುಚ್ಚಳದ ಎಲುಬಿನಲ್ಲಿ ಒಂದು ದುರ್ಬಲ ಮುಳ್ಳಿದೆ. ದವಡೆಗಳಲ್ಲಿ ಲೋಮಾಕಾರದ ಹಲ್ಲುಗಳಿವೆ.

ಬೆನ್ನಿನ ಮುಳ್ಳುಗಳು ಬಹಳ ಬಲಯುತವಾದವು. ಮುಳ್ಳಿನ ಮಧ್ಯದ ಪೊರೆ ಕಚ್ಚಾಗಿರುವುದು ಕಂಡು ಬರುತ್ತದೆ. ನಾಲ್ಕನೆಯ ಮುಳ್ಳು ಉಳಿದವಕ್ಕಿಂತ ಅತ್ಯಂತ ಎತ್ತರವಾಗಿದೆ. ಗುದದ್ವಾರದ ಮುಳ್ಳುಗಳೆಲ್ಲವೂ ಒಂದೇ ಸಮನಾಗಿದ್ದು, ಪ್ರತಿಯೊಂದು ಪರ್ಯಾಯ ಮುಳ್ಳೂ ಬಲಿಷ್ಠವಾಗಿದೆ. ಬಾಲದ ಈಜುರೆಕ್ಕೆ ಬೀಸಣಿಗೆಯ ಆಕಾರದ್ದು. ಅದರ ಮಧ್ಯದ ಅಂತಸ್ಥ ಭಾಗಗಳು ಬೇರೆಯವಕ್ಕಿಂತ ತಕ್ಕಮಟ್ಟಿಗೆ ಉದ್ದವಾಗಿವೆ.

ದೇಹದ ಮೇಲೆ ಬಲುಸಣ್ಣ ಶಲ್ಕಗಳ ಹೊದಿಕೆಯಿದೆ. ಇವು ಅವ್ಯವಸ್ಥಿತವಾದ 110 ಪಂಕ್ತಿಗಳಲ್ಲಿವೆ. ಬೆನ್ನಿನ, ಗುದದ್ವಾರದ ಮತ್ತು ಬಾಲದ ಈಜುರೆಕ್ಕೆಗಳ ಮೃದು ಭಾಗಗಳ ಮೇಲೂ ತಲೆಯ ಮತ್ತು ಕಿವಿರು ಮುಚ್ಚಳದ ಎಲುಬುಗಳ ಮೇಲೂ ಈ ಶಲ್ಕಗಳು ಹರಡಿವೆ.

ನೈಮೀನಿನ ದೇಹದ ಬಣ್ಣ ಊದಾ. ಹೊಟ್ಟೆ ಮಾತ್ರ ಬಿಳಿ ಬಣ್ಣದ್ದು. ಹೆಚ್ಚು ಕಡಿಮೆ ದುಂಡಾದ ಕಪ್ಪು ಬಣ್ಣದ ಅಥವಾ ಹಸಿರು ಬಣ್ಣದ ಚುಕ್ಕೆಗಳು ಶರೀರದ ಮೇಲೆ ಇರುವುದುಂಟು. ಇವು ಬೆನ್ನಿನುದ್ದಕ್ಕೂ ಅಧಿಕ ಸಂಖ್ಯೆಯಲ್ಲಿವೆ. ಇವುಗಳ ಗಾತ್ರ ಹಾಗೂ ಬಣ್ಣದ ಛಾಯೆಯಲ್ಲಿ ವೈವಿಧ್ಯವುಂಟು. ಬೆನ್ನಿನ ಮೊದಲನೆಯ ಈಜುರೆಕ್ಕೆ ಕಂದು ನೀಲಿ ಬಣ್ಣದ್ದಾಗಿದ್ದು, ಕೆಲವು ಸಣ್ಣ ಚುಕ್ಕೆಗಳಿಂದೊಡಗೂಡಿದೆ. ಅದರೆ ಬೆನ್ನಿನ ಎರಡನೆಯ ಈಜುರೆಕ್ಕೆ ಹಳದಿ ಬಣ್ಣವುಳ್ಳದ್ದಾಗಿ, ಅಂತಸ್ಥ ಭಾಗಗಳ ಮಧ್ಯೆ ತುಸು ಕಂದುಬಣ್ಣದ ವರ್ಣ ವಿನ್ಯಾಸಗಳನ್ನು ಪಡೆದಿದೆ.

ಆಹಾರ ಮೀನಾಗಿ ಇದಕ್ಕೆ ಸಾಧಾರಣವಾದ ಬೇಡಿಕೆಯಿದೆ. ಅದರೆ ಸುಲಭವಾಗಿ ಸಿಹಿ ನೀರಿಗೆ ಹೊಂದಿಕೊಳ್ಳುವುದರಿಂದ ಇದು ಜಲಸಂಗ್ರಹಾಲಯದ ಜನಪ್ರಿಯ ಮೀನು ಎನಿಸಿದೆ.

ದಕ್ಷಿಣ ಕನ್ನಡಜಿಲ್ಲೆ ಹಾಗೂ ದಕ್ಷಿಣ ಕರಾವಳಿಯಲ್ಲಿ ಈ ಮೀನಿಗೆ ಹುಚ್ಚು ಪೈಯೆ ಎಂಬ ಹೆಸರಿದೆ. (ಬಿ.ಎಚ್.ಎಂ.)