ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಲ್

ವಿಕಿಸೋರ್ಸ್ದಿಂದ

ನೈಲ್ ಉತ್ರರ ಆಫ್ರಿಕದ ಪೂರ್ವಾರ್ಧದಲ್ಲಿ ಹರಿಯುವ, ಜಗತ್ತಿನಲ್ಲಿ ಬಹುಶಃ ಅತ್ಯಂತ ಉದ್ದವಾದ, ನದಿ. ಇದರ ಉದ್ದ ಸುಮಾರು 6,648 ಕಿಮೀ. ಇದು ಟ್ಯಾಂಗನೀಕ ಸರೋವರದ ಪೂರ್ವಕ್ಕೆ ಸುಮಾರು 48 ಕಿಮೀ. ದೂರದಲ್ಲಿ ದ.ಅ. 3(40' ನಲ್ಲಿ ಉಗಮಿಸುತ್ತದೆ. ನೈಲ್ ನದಿಗೆ ಈಜಿಪ್ಟ್ ಮತ್ತು ಉತ್ತರ ಸೂಡಾನ್‍ನಲ್ಲಿ ಎನ್ ನೀಲ್, ಆಲ್ ಬಾರ್ ಎಂಬ ಹೆಸರುಗಳಿವೆ. ಈ ನದಿಯ ಜಲೋತ್ಸಾರಣ ಪ್ರದೇಶದ ವಿಸ್ತೀರ್ಣ ಸುಮಾರು 33.49,000 ಚ.ಕಿಮೀ. ನೈಲ್‍ನದೀ ಕಣಿವೆ ಆಫ್ರಿಕದ ಸುಮಾರು ಹತ್ತನೆಯ ಒಂದರಷ್ಟು ಪ್ರದೇಶವನ್ನು ಅವರಿಸಿದೆ. ಇದು ಟಾನ್eóÁನಿಯ, ಬುರುಂಡಿ, ರವಾಂಡ, ಜಾಯಿರ್, ಕೀನ್ಯ, ಉಗಾಂಡ ದೇಶಗಳ ಭಾಗಗಳನ್ನಲ್ಲದೆ ಸೂಡಾನ್ ಈತಿಯೋಪಿಗಳ ಬಹುಭಾಗವನ್ನೂ ಈಜಿಪ್ಟಿನಲ್ಲಿ ಸಾಗುವಳಿಯಾಗುತ್ತಿರುವ ಭಾಗವನ್ನೂ ಒಳಗೊಂಡಿದೆ. ಈ ನದಿಯ ತಲೆ ತೊರೆಗಳು ಉತ್ತರ ಟಾನ್ ಜಾನಿಯ, ನೈಋತ್ಯ ಕೀನ್ಯ ಮತ್ತು ಕಾಂಗೋ ನದಿ ಕಣಿವೆಯ ಈಶಾನ್ಯ ಭಾಗದ ಎತ್ತರದ ನೆಲದ ನೀರನ್ನು ಬಸಿದುಕೊಂಡು ಹರಿದ ವಿಕ್ಟೋರಿಯ ಸರೋವರವನ್ನು ಸೇರುತ್ತವೆ. ವಾಸ್ತವವಾಗಿ ನೈಲ್‍ನದಿ ಎನ್ನಬಹುದಾದ್ದು ವಿಕ್ಟೋರಿಯ ನೈಲ್ ಅಥವಾ ಸಾಮರ್‍ಸೆಟ್ ನೈಲನ್ನು. ಇದು ವಿಕ್ಟೋರಿಯ ಸರೋವರದ ಉತ್ತರದಲ್ಲಿ ಜಿಂಜದ ಬಳಿ ಉಗಮಿಸುತ್ತದೆ. ಇದರ ಉಗಮಸ್ಥಾನ ಸಮಭಾಜಕ ವೃತ್ತಕ್ಕೆ 48 ಕಿಮೀ. ಉತ್ತರದಲ್ಲಿದೆ. ಇದು ಉತ್ತರಾಭಿಮುಖವಾಗಿ. ಕ್ಯೋಗ ಸರೋವರದ ಮೂಲಕ ಹರಿದು, ವಾಯುವ್ಯಕ್ಕೆ ತಿರುಗಿ, ಮರ್ಚಿಸನ್ ಜಲಪಾತದಲ್ಲಿ ಇಳಿದು, ಆಲ್ಬರ್ಟ್ ಸರೋವರವನ್ನು ಅದರ ಈಶಾನ್ಯ ತುದಿಯಲ್ಲಿ ಸೇರುತ್ತದೆ ; ಆ ಸರೋವರದ ಉತ್ತರದ ತುದಿಯಲ್ಲಿ ಹೊರಬಂದು ವಾಯುವ್ಯ ಉಗಾಂಡದಲ್ಲಿ ಉತ್ತರ ದಿಕ್ಕಿಗೆ ಹರಿಯುತ್ತದೆ. ಅಲ್ಲಿ ಅದಕ್ಕೆ ಆಲ್ಬರ್ಟ್ ನೈಲ್ ಎಂದು ಹೆಸರು. ಅನಂತರ ಇದು ಸೂಡಾನಿಗೆ ಹರಿಯುತ್ತದೆ. ಸೂಡಾನಿನಲ್ಲಿ ಪಶ್ಚಿಮದ ಕಡೆಯಿಂದ ಬಾರ್ ಆಲ್-ಗಜûಲ್ ನದಿ ಕೂಡುತ್ತದೆ. ಅಲ್ಲಿಂದ ಮುಂದಕ್ಕೆ ಇದರ ಹೆಸರು ಬಿಳಿಯ ನೈಲ್ (ಬಾರ್ ಆ-ಆಬ್ಯಾದ್). ಪೂರ್ವ ದಿಕ್ಕಿಗೆ ಹರಿಯುವ ಈ ನದಿ ನೈಋತ್ಯ ಈತಿಯೋಪಿಯದಿಂದ ಹರಿದು ಬರುವ ಸೋಬಾತ್ ನದಿಯೊಂದಿಗೆ ಸಂಗಮಿಸುತ್ತದೆ. ಸೂಡಾನಿನಲ್ಲಿ ಉತ್ತರಕ್ಕೆ ಹರಿಯುವ ಈ ನದಿಗೆ ಖಾರ್ಟೂಮಿನ ಬಳಿ ನೀಲ ನೈಲ್ (ಬಾರ್ ಆಲ್ ಆeóÁ್ರಕ್) ಸೇರುತ್ತದೆ. ನೀಲ ನೈಲ್ ಹುಟ್ಟುವುದು ಈತಿಯೋಪಿಯದಲ್ಲಿ. ಅನಂತರ ಮುಂದುವರಿಯುವ ಈ ನದಿಯನ್ನು ಅಟ್ಬಾರ ಬಳಿ ಅಟ್ಬಾರ ನದಿ ಕೂಡುತ್ತದೆ. ಅಲ್ಲಿಂದ ಮುಂದೆ ನೈಲ್‍ಗೆ ಯಾವ ಉಪನದಿಗಳು ಇಲ್ಲ. ಇದು S ಆಕಾರದಲ್ಲಿ ತಿರುಗಿ ವಾಡಿ ಹಾಲ್ಫಕ್ಕೆ ಸುಮಾರು 5 ಕಿಮೀ. ಉತ್ತರದಲ್ಲಿ ಈಜಿಪ್ಟನ್ನು ಪ್ರವೇಶಿಸುತ್ತದೆ. ಅನಂತರ ಉತ್ತರಾಭಿಮುಖವಾಗಿ ಸುಮಾರು 640 ಕಿಮೀ. ಹರಿದು ಮೆಡಿಟರೇನಿಯನ್ ಸಮುದ್ರದಲ್ಲಿ ಸಂಗಮಿಸುತ್ತದೆ. ಕೈರೋ ನಗರದಿಂದ ಸುಮಾರು 9 ಕಿಮೀ. ಕೆಳಗೆ ನೈಲ್ ನದಿಯ ಮುಖಜಭೂಮಿ ಆರಂಭವಾಗುತ್ತದೆ. ಇದರ ಅಗಲ ಸುಮಾರು 192 ಕಿಮೀ. ಪ್ರಾಚೀನ ಕಾಲದಲ್ಲಿ ನೈಲ್ ನದಿಗೆ ಇಲ್ಲಿ 7 ಕವಲುಗಳಿದ್ದುವು. ಈಗ ಇರುವವು ಎರಡು ಮಾತ್ರ. ಒಂದೊಂದು ಕವಲೂ ಸುಮಾರು 234 ಕಿಮೀ. ಉದ್ದವಾಗಿದೆ. ಪಶ್ಚಿಮದ ರೋಸೆಟ ಕವಲು ಅಲೆಗ್ಸಾಂಡ್ರಿಯಕ್ಕೆ ಪೂರ್ವದಲ್ಲೂ ಪೂರ್ವದ ಡ್ಯಾಮಿಯೆಟ ಕವಲು ಪೋರ್ಟ್ ಸೈದ್‍ಗೆ ಪಶ್ಚಿಮದಲ್ಲೂ ಕಡಲನ್ನು ಸೇರುತ್ತವೆ.

ನೈಲ್ ನದಿಯ ಮೇಲೆ ಸಮುದ್ರದಿಂದ ಮರ್ಚಿಸನ್ ಜಲಪಾದ ವರೆಗೆ ನೌಕಾಯಾನ ಸಾಮಾನ್ಯವಾಗಿ ಸಾಧ್ಯ. ಪ್ರವಾಹ ಕಡಿಮೆಯಿದ್ದಾಗ ಅದರ ಆರು ಜಲಪಾತಗಳಿರುವ ಭಾಗದಲ್ಲಿ ಯಾನ ಸಾಧ್ಯವಿಲ್ಲ. ವಾಸ್ತವವಾಗಿ ಅವು ಜಲಪಾತಗಳಲ್ಲ. ಅಲ್ಲಿ ನೀರು ವೇಗವಾಗಿ ಹರಿಯುತ್ತದೆ. ಅವುಗಳಲ್ಲಿ ಮೊದಲನೆಯದು ಈಜಿಪ್ಟಿನಲ್ಲಿ. ನೈಲ್ ನದಿಗೆ ಅಡ್ಡಲಾಗಿ ಕಟ್ಟಿರುವ ಆಸ್ವಾನ್ ಕಟ್ಟೆಗೆ ಮೇಲೆ (ಉ.ಅ. 24() ಇದೆ. ಪ್ರಾಚೀನ ಮೆಡಿಟರೇನಿಯನ್ ನಾಗರೀಕತೆ ಇಲ್ಲಿಯವರೆಗೆ ಹಬ್ಬಿತ್ತು. ಎರಡನೆಯದು ಇರುವುದು ಸೂಡಾನಿನಲ್ಲಿ, ವಾಡಿ ಹಾಲ್ಫಕ್ಕೆ ಪಶ್ಚಿಮದಲ್ಲಿ (ಉ.ಅ. 21(50'), ಇದು ಈಗ ನೀರಿನಲ್ಲಿ ಮುಳುಗಿದೆ. ಪ್ರಾಚೀನ ಕುಷ್ ನಾಗರಿಕತೆಯ ಉತ್ತರದ ಅಂಚು ಇದು. ಮೂರನೆಯ ಜಲಪಾತ ಡಂಕುಲಾಗೆ ಕೆಳಗಡೆ, ಖಾರ್ಟೂಮ್ ನಿಂದ 1,120 ಕಿಮೀ. ಕೆಳಗೆ (ಉ.ಅ. 19(50') ಇದೆ. ಇದು ಪ್ರಾಚೀನ ನೂಬಿಯ ಪ್ರದೇಶದಲ್ಲಿದೆ. ನಾಲ್ಕನೆಯದು ಮರಾವಿ ಪಟ್ಟಣದ ಬಳಿ ನೈಲ್ ನದಿ ತಿರುಗುವ ಸ್ಥಳದಲ್ಲಿ (ಉ.ಅ.18(36') ಇದೆ. ಇದು ಜಲಯಾನಕ್ಕೆ ಅತ್ಯಂತ ಕಠಿಣವಾದ ಭಾಗ. ಐದನೆಯದು ಬರ್ಬರ್‍ನ ಕೆಳಗೆ 64 ಕಿಮೀ. ದೂರದಲ್ಲೂ (ಉ.ಅ. 16(10') ಇವೆ.

ನೈಲ್ ನದಿಗೆ ಅಡ್ಡಲಾಗಿ ಮೂರು ದೊಡ್ಡ ಕಟ್ಟೆಗಳನ್ನು ಕಟ್ಟಲಾಗಿದೆ. ಈಜಿಪ್ಟಿನಲ್ಲಿರುವ ಆಸ್ವಾನ್ ಎತ್ತರಕಟ್ಟೆ ಒಂದು. ಇನ್ನೊಂದನ್ನು ಖಾರ್ಟೂಮ್‍ಗೆ 32 ಕಿಮೀ. ದಕ್ಷಿಣದಲ್ಲಿ ಕಟ್ಟಲಾಗಿದೆ. ಇದರ ಹೆಸರು ಜಬಾಲ್ ಆಲ್ ಆಲಿಯಾ ಕಟ್ಟೆ. ಮೂರನೆಯದು ಮಾಕ್ವಾರ್ ಕಟ್ಟೆ. ಇದನ್ನು ನೀಲ ನೈಲ್ ಮೇಲೆ ಸೆನ್ನಾರ್ ಪಟ್ಟಣದ ಬಳಿ ನಿರ್ಮಿಸಲಾಗಿದೆ. ಆಸ್ವಾನ್ ಎತ್ತರಕಟ್ಟೆಯಿಂದ ಉ. ಅ. 20(40' ವರೆಗೆ ಹರಡಿರುವ ಜಲಾಶಯವನ್ನು ನಾಸೆರ್ ಸರೋವರ ಎಂದು ಕರೆಯಲಾಗಿದೆ. ಈಜಿಪ್ಟಿನಲ್ಲಿ ನೈಲ್ ನದಿಯ ದಂಡೆಗಳ ಮೇಲೆ ಪ್ರಾಚೀನ ರಾಜವಂಶಗಳ ಹಲವಾರು ಸ್ಮಾರಕಗಳು ಸಾಲಾಗಿ ಹಬ್ಬಿವೆ. ನೈಲ್ ನದಿಯ ಉಗಮದ ಬಗ್ಗೆ ಹಲವಾರು ಐತಿಹ್ಯಗಳು ಹಿಂದಿನಿಂದಲೂ ಬಂದಿವೆ. ಇದು ಚಂದ್ರಪರ್ವತದಲ್ಲಿ ಹುಟ್ಟುವುದೆಂದು ಕಥೆ. ಬಹುಶಃ ಇದು ರೂವೆಂಜೋರಿ ಶಿಖರವಿರಬೇಕು. 15ನೆಯ ಶತಮಾನದ ವರೆಗು ಇದರ ಉಗಮದ ಬಗ್ಗೆ ಹೆಚ್ಚು ತಿಳಿದಿರವಿಲ್ಲ. 15-17ನೆಯ ಶತಮಾನಗಳಲ್ಲಿ ಇದರ ಉಗಮದ ಪ್ರದೇಶಕ್ಕೆ ಇಟಾಲಿಯನ್ ಮತ್ತು ಪೋರ್ಚುಗೀಸ್ ಪ್ರವಾಸಿಗಳು ಬಂದಿದ್ದರು. ನೀಲ ನೈಲಿನ ಉಗಮವನ್ನು ಜೇಮ್ಸ್ ಬ್ರೂಸ್ ಕಂಡುಹಿಡಿದು ಅದರ ಹರಿವನ್ನು ಗುರುತಿಸಿದ. (1768-73). ನೈಲ್ ನದಿಯ ಮೂಲ ವಿಕ್ಟೋರಿಯ ಸರೋವರವೆಂದು ನಿರ್ಧರಿಸಿದವನು (1858) ಜೆ. ಎಚ್. ಸ್ಪೀಕ್. ಅವನೂ ಜೆ. ಎ. ಗ್ಯ್ರಾಂಟನೂ 1860-62ರಲ್ಲಿ ಈ ಸರೋವರವನ್ನು ಪರಿಶೋಧಿಸಿ, ರಿಪನ್ ಜಲಪಾತದ ಮೂಲಕ ನೈಲ್ ನದಿ ಆ ಸರೋವರದಿಂದ ಹೊರಬರುತ್ತದೆಂದು ಹೇಳಿದರು. ಓವೆನ್ ಜಲಪಾತದ ಬಳಿ ಕಟ್ಟೆ ಕಟ್ಟಿರುವುದರಿಂದ ರಿಪನ್ ಜಲಪಾತ ಈಗ ಮುಚ್ಚಿಹೋಗಿದೆ. ಆಲ್ಬರ್ಟ್ ಸರೋವರ ಮತ್ತು ಮರ್ಚಿಸನ್ ಜಲಪಾತವನ್ನು ಕಂಡುಹಿಡಿದವನು ಸ್ಯಾಮ್ಯುಯೆಲ್ ಬೇಕರ್, ಅವನು ಇಲ್ಲಿ 1861-62 ಮತ್ತು 1863-65ರಲ್ಲ ಪ್ರವಾಸ ಮಾಡಿದ. (ವಿ.ಎಸ್.ಬಿಎಎನ್.)