ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಲ್ ಕದನ

ವಿಕಿಸೋರ್ಸ್ದಿಂದ

ನೈಲ್ ಕದನ - 1798ರ ಆಗಸ್ಟ್ 1ರಂದು ಬ್ರಿಟಿಷ್ ಮತ್ತು ಫ್ರೆಂಚ್ ನೌಕಾಪಡೆಗಳ ನಡುವೆ ಅಲೆಗ್ಸಾಂಡ್ರಿಯದ ಬಳಿಯ ಅಬು ಕಿರ್‍ಕೊಲ್ಲಿಯಲ್ಲಿ ನಡೆದ ಕದನ. ಫ್ರಾನ್ಸ್ ನೆಪೋಲಿಯನ್ ಬೋನಪಾರ್ಟನ ನಾಯಕತ್ವದಲ್ಲಿ ಬಹುದೊಡ್ಡ ದಂಡಯಾತ್ರೆಯೊಂದನ್ನು ನಿಯೋಜಿಸಿ ಮೆಡಿಟರೇನಿಯನ್ ತೀರಪ್ರದೇಶದ ಬಂದರುಗಳಿಗೆ ಪಡೆಯನ್ನು ಕಳುಹಿಸಿದ್ದುದು ಬ್ರಿಟನ್ನಿಗೆ ಗೊತ್ತಾಯಿತು. ರಿಯರ್ ಅಡ್ಮಿರಲ್ ಹೊರೇಷಿಯೊ ನೆಲ್ಸನನ ನೇತೃತ್ವದಲ್ಲಿದ್ದ ಹಡಗುಗಳನ್ನು ಟೂಲಾನ್‍ಗೆ ಕಳುಹಿಸಬೇಕೆಂದೂ ಅಲ್ಲಿ ಅವು ಶತ್ರುವಿನ ಮೇಲೆ ಕಣ್ಣಿಡಬೇಕೆಂದೂ. ಬೀಡುಬಿಟ್ಟಿದ್ದ ಬ್ರಿಟಿಷ್ ನೌಕಾಪಡೆಯ ನಾಯಕ ಸೇಂಟ್ ಆರ್ಲಾಗೆ ಅದು ಆಜ್ಞೆ ನೀಡಿತು. ಆದರೆ ನೆಲ್ಸನನ ಸ್ವಂತ ಹಡಗಾದ ವ್ಯಾನ್‍ಗಾರ್ಡ್‍ನ ಪಟಸ್ತಂಭ ಮುರಿದುಹೋದ್ದರಿಂದ ಅವನು ವಿಧಿಯಲ್ಲವೆ ಜಿಬ್ರಾಲ್ಟರ್ ಕಡೆಗೆ ಹಿಂದಿರುಗಬೇಕಾಯಿತು. ಈ ನಡುವೆ ಸೇಂಟ್‍ವಿನ್ಸೆಂಟ್‍ನ ಅರ್ಲ್ ಮತ್ತೊಂದು ದೊಡ್ಡ ನೌಕಾದಳವನ್ನು ಕಳುಹಿಸಿದ. ಈ ನೌಕಾದಳ ನೆಲ್ಸನನನ್ನು ಜೂನ್ 7ರಂದು ಸೇರಿಕೊಂಡಿತು.

ಆದರೆ ಫ್ರೆಂಚ್ ಪಡೆ ಬ್ರಿಟಿಷ್ ನೌಕಾ ಪಡೆಯ ಕಣ್ಣು ತಪ್ಪಿಸಿ ಜೂನ್ ತಿಂಗಳ ಮೊದಲ ಭಾಗದಲ್ಲಿ ಮಾಲ್ಟದ ಕಡೆ ಮೊದಲು ಪ್ರಯಾಣ ಬೆಳೆಸಿ ಅದನ್ನು ಮುತ್ತಿತು. ಈಜಿಪ್ಟಿನ ಮೇಲೆ ಆಕ್ರಮಣ ಮಾಡಬೇಕೆಂಬುದು ನೆಪೋಲಿಯನ್ನನ ಮುಖ್ಯಗುರಿಯಾಗಿತ್ತು. ಆತ ಒಂದು ವಾರದ ಮೇಲೆ ಆತ್ತ ಸಾಗಿದ. ಟೂಲಾನ್ ಖಾಲಿಯಾಗಿತ್ತು. ಫ್ರೆಂಚರ ಉದ್ದೇಶವನ್ನು ನೆಲ್ಸನ್ ಊಹಿಸಿಕೊಂಡ. ಅಲೆಗ್ಸಾಂಡ್ರಿಯಕ್ಕೆ ಹೋದ. ಅಲ್ಲಿಯ ಬಂದರು ಖಾಲಿಯಾಗಿತ್ತು. ಅವನು ಸಿಸಿಲಿಗೆ ಹಿಂದಿರುಗಿದ. ಮತ್ತು ಈಜಿಪ್ಟಿಗೆ ಯಾನ ಮಾಡಿದ. ಅಬು ಕಿರ್ ಕೊಲ್ಲಿಯಲ್ಲಿ ಫ್ರೆಂಚ್ ನೌಕೆಗಳನ್ನು ಪತ್ತೆ ಹಚ್ಚಿದ.

ಆಗ ರಾತ್ರಿ ಸಮೀಪಿಸುತ್ತಿತ್ತು. ಫ್ರೆಂಚರು ಭದ್ರವಾಗಿ ನೆಲೆಯೂರಿದ್ದರು. ಅವರ ರಕ್ಷಣಾ ವ್ಯೂಹ ಭದ್ರವಾಗಿತ್ತು. ಆದರೂ ನೆಲ್ಸನ್ ಅವರ ಮೇಲೆ ದಾಳಿ ಮಾಡಲು ಕ್ಯಾಪ್ಟನ್ ತಾಮಸ್ ಫೋಲಿ ಆದೇಶ ನೀಡಿ, ತನ್ನ ನೌಕೆಯೊಂದಿಗೆ ಫ್ರೆಂಚ್ ಸೇನಾ ಮುಂಚೂಣಿಯನ್ನು ಬಳಸಿ ಅದರ ಹಿಂಬದಿಗೆ ಸಾಗಿದ. ಅವನೊಂದಿಗೆ ಇತರ ನೌಕೆಗಳು ಸೇರಿದುವು. ಫ್ರೆಂಚ್ ಸೇನೆಯ ಮೇಲೆ ಸಮುದ್ರದ ಕಡೆಯಿಂದ ಮೊದಲು ದಾಳಿ ಮಾಡಿದವನು ನೆಲ್ಸನ್. ಬ್ರಿಟಿಷರ ಕಡೆ ಒಂದು ನೌಕೆ ಮಾತ್ರ ಮರಳು ದಿಬ್ಬಕ್ಕೆ ತಾಕಿತು. ಉಳಿದ ನೌಕೆಗಳು ದಾಳಿಯಲ್ಲಿ ಸೇರಿಕೊಂಡುವು.

ಕದನ ಭೀಕರವಾಗಿತ್ತು. ನೆಲ್ಸನನ ತಲೆಗೆ ಪೆಟ್ಟು ಬಿತ್ತು. ಒಂದು ಹಡಗು ಸಿಡಿಯಿತು. ಮತ್ತೆ ಕದನ ಮುಂದುವರಿದು ಬೆಳೆಗಿನವರೆಗೂ ನಡೆಯಿತು. ಫ್ರೆಂಚರ ಕಡೆ ನಾಶವಾಗದೆ ಅಥವಾ ಸೆರೆ ಸಿಗದೆ ಉಳಿದ ಹಡಗುಗಳು ಎರಡು ಮಾತ್ರ. ಮರುದಿನ ಮುಂಜಾನೆ ಅಳಿದುಳಿದ ಫ್ರೆಂಚ್ ನೌಕಾ ಸೇನೆ ಅಲ್ಲಿಂದ ಪಲಾಯನ ಮಾಡಿತು. ಅದನ್ನು ಪಡೆಯುವ ಸ್ಥಿತಿಯಲ್ಲಿ ಬ್ರಿಟಿಷ್ ಸೇನೆ ಇರಲಿಲ್ಲ. ನೆಲ್ಸನನ ಕಡೆ 218 ಜನ ಸತ್ತು 677 ಮಂದಿ ಗಾಯಗೊಂಡಿದ್ದರು. ಫ್ರೆಂಚರು ಇದಕ್ಕೆ ಹತ್ತು ಪಟ್ಟು ನಷ್ಟ ಅನುಭವಿಸಿದ್ದರು.

ನೈಲ್ ಕದನದ ಪರಿಣಾಮವಾಗಿ ಫ್ರೆಂಚರ ವಿಸ್ತರಣೆಯನ್ನು ಎದುರಿಸಲು ಯೂರೋಪಿಗೆ ಧೈರ್ಯ ಬಂತು. ಈಜಿಪ್ಟಿನಲ್ಲಿ ನೆಪೋಲಿಯನನ ಸೇನೆ ಪ್ರತ್ಯೇಕಿಸಲ್ಪಟ್ಟು ಕೊನೆಗೆ ಒಡೆಯಿತು. (ಆರ್.ಜೆ.ಎಸ್.)