ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈವಾಷ

ವಿಕಿಸೋರ್ಸ್ದಿಂದ

ನೈವಾಷ - ಪೂರ್ವ ಆಫ್ರಿಕಾದ ಕೀನ್ಯದ ನೈಋತ್ಯ ಭಾಗದ ಮಧ್ಯದಲ್ಲಿ ದ.ಅ.0( 46' ಮತ್ತು ಪೂ.ರೇ. 36( 21' ಮೇಲೆ ಇರುವ ಒಂದು ಸರೋವರ. ನೈರೋಬಿಗೆ ನೈಋತ್ಯದಲ್ಲಿ ಸುಮಾರು 64 ಕಿಮೀ. ದೂರದಲ್ಲಿದೆ. ರಿಫ್ಟ್ ಕಣಿವೆಯ ಪೂರ್ವ ಶಾಖೆಯಲ್ಲಿ ಮೆಕ್ಕಲು ಮಣ್ಣಿನ ಪ್ರದೇಶದಲ್ಲಿದೆ. ಸರೋವರದ ಪೂರ್ವದಲ್ಲಿ ಕಿನನ್‍ಗಾಫ್ ಪ್ರಸ್ಥಭೂಮಿ, ಪಶ್ಚಿಮದಲ್ಲಿ ಮಾವ್ ಇಳಿಜಾರು ನೆಲ, ಉತ್ತರದಲ್ಲಿ ಪಪೈರಸ್ ಜೊಂಡು ಒತ್ತಾಗಿ ಬೆಳೆದ ನಿಂತಿರುವ ವಿಶಾಲ ಜೌಗುಭೂಮಿ ಇವೆ. 1917-1970ರಲ್ಲಿ ಸರೋವರದ ನೀರು ಬಹಳ ಮಟ್ಟಿಗೆ ಇಂಗಿಹೋಯಿತು ಈಗ ಇದರ ವಿಸ್ತೀರ್ಣ 277 ಚ.ಕಿಮೀ. ಇದರ ಗರಿಷ್ಠ ಆಳ 18.3. ಮೀ. ಸಮುದ್ರ ಮಟ್ಟಕ್ಕೆ ಇದು 1,884 ಮೀ ಎತ್ತರದಲ್ಲಿದೆ. ಸರೋವರಕ್ಕೆ ಬಂದು ಬೀಳುವ ನದಿಗಳು ಎಂಗಾರ್, ಮೆಲಾವ್ ಮತ್ತು ಜಿಲ್‍ಜಿಲ್. ಸರೋವರದಿಂದ ಹೊರಕ್ಕೆ ನೀರು ಹರಿಯುವುದಿಲ್ಲವಾದರೂ ಇದರ ನೀರು ಹೊಸತಾಗಿದೆ. ವ್ಯಾಪಾರ ಇಲ್ಲವೇ ವಿನೋದೋದ್ದೇಶದಿಂದ ಇಲ್ಲಿ ಅನೇಕರು ಮೀನು ಹಿಡಿಯುತ್ತಾರೆ. ನೈರೋಬಿಯ ಜನಕ್ಕೆ ನೈವಾಷ ವಾರಾಂತ್ಯದ ಪ್ರವಾಸ ಕೇಂದ್ರ. (ವಿ.ಜಿ.ಕೆ.)