ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈವೇಲಿ ಲಿಗ್ನೈಟ್

ವಿಕಿಸೋರ್ಸ್ದಿಂದ

ನೈವೇಲಿ ಲಿಗ್ನೈಟ್ - ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ನೈವೇಲಿ ಗ್ರಾಮದ ಸುತ್ತಮುತ್ತ ಇರುವ ಟರ್ಷಿಯರಿ ಯುಗದ ಶಿಲೆಗಳಲ್ಲಿ ದೊರೆಯುವ ಲಿಗ್ನೈಟ್, ಪರಿಪೂರ್ಣವಾಗಿ ರೂಪಾಂತರಣಗೊಳ್ಳದ ಕಲ್ಲಿದ್ದಲೇ ಲಿಗ್ನೈಟ್, ಇದನ್ನು ಕಂದು ಕಲ್ಲಿದ್ದಲು ಎನ್ನುವುದುಂಟ. ಸುಮಾರು 240 ಚದರ ಕಿಲೊಮೀಟರ್ ವಿಸ್ತಾರದ ಪ್ರದೇಶದಲ್ಲಿ 170 ಕೋಟಿ ಟನ್ ಲಿಗ್ನೈಟ್ ದೊರೆಯಬಹುದೆಂದು ಭೂವಿಜ್ಞಾನಿಗಳ ಅಂದಾಜು. ಸದ್ಯ (1973) ಕೇವಲ 14 ಚದರ ಕಿಮೀ ಪ್ರದೇಶದಲ್ಲಿ ತೀವ್ರ ರೀತಿಯ ಗಣಿಯ ಕೆಲಸ ನಡೆಯುತ್ತಿದ್ದು ಸುಮಾರು 20 ಕೋಟಿ ಟನ್ ಲಿಗ್ನೈಟ್ ಅತ್ಯಂತ ಉಪಯುಕ್ತ ರೀತಿಯಲ್ಲಿ ರೂಢಿಸುವ ಪ್ರಯತ್ನ ನಡೆಯುತ್ತಿದೆ. ಈ ಗಣಿಯ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿ 33 ಚದರ ಕಿಮೀ ವಿಸ್ತಾರದ ಮತ್ತೊಂದು ಉತ್ತಮ ಲಿಗ್ನೈಟ್ ಪ್ರದೇಶವನ್ನು ಭೂತಜ್ಞರು ಗುರುತಿಸಿ ಅಲ್ಲಿ ಸುಮಾರು 38 ಕೋಟಿ ಟನ್ನುಗಳನ್ನು ಲಿಗ್ನೈಟ್ ದೊರೆಯಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಅತಿ ಹೆಚ್ಚೆಂದರೆ ಸುಮಾರು 1,500 ಮೀ ಆಳದಲ್ಲಿ ಲಿಗ್ನೈಟ್ ದೊರೆಯುವುದು. ಮೇಲ್ಭಾಗದಲ್ಲಿ ನೆಲಮಟ್ಟದವರೆಗೆ ಕಡಲೂರು ಮರಳುಶಿಲೆಗಳು ಮುಚ್ಚಿಕೊಂಡಿವೆ. ಆದರೆ ಈಗ ಗಣಿಕೆಲಸ ನಡೆಯುತ್ತಿರುವ ಕಡೆ ಈ ಮರಳು ಶಿಲೆಗಳು ಸುಮಾರು 55 ಮೀಟರುಗಳಷ್ಟೂ ಅದರ ದಕ್ಷಿಣಕ್ಕೆ ಎರಡನೆಯ ಗಣಿಗಾಗಿ ಗುರುತಿಸಿರುವ ಕಡೆ ಸುಮಾರು 75 ಮೀಟರುಗಳಷ್ಟೂ ಮಂದವಾಗಿವೆ. ಲಿಗ್ನೈಟಿನ ಮುಖ್ಯ ಸಿರ ಸುಮಾರು 15 ಮೀಟರುಗಳಷ್ಟು ಮಂದವಾಗಿದ್ದು ಇಡೀ ಸಿರದುದ್ದಕ್ಕೂ ಒಂದೇ ಬಗೆಯ ಅಡಕವಾದ ವಿನ್ಯಾಸವನ್ನು ತೋರಿಸುತ್ತದೆ. ಅದರ ಭೌತಗುಣಗಳಲ್ಲಿ ಸಹ ಯಾವ ಬಗೆಯ ವ್ಯತ್ಯಾಸಗಳೂ ಕಂಡುಬಂದಿಲ್ಲ. ಪ್ರಸ್ತರೀ ರಚನೆಯಾಗಲಿ ಇತರ ಬಗೆಯ ಸೀಳು ಅಥವಾ ಬಿರುಕುಗಳಾಗಲಿ ಎಲ್ಲೂ ತೋರಿಬಂದಿಲ್ಲ. ಸಿರದ ಕೆಲವು ಭಾಗಗಳು ಸುಟ್ಟು ಕರಿಕಾದಮರದಂತೆ ಇವೆ. ಎಲೆ ಮತ್ತು ಮರದ ಕಾಂಡಗಳ, ಆಕೃತಿ ಅಚ್ಚಳಿಯದೆ ಉತ್ತಮರೀತಿಯಲ್ಲಿದ್ದು ಸುಲಭವಾಗಿ ಗುರುತಿಸಲು ಸಾಧ್ಯವಾಗಿದೆ. ಎಲೆಗಳು ಭರ್ಜಿಯಾಕಾರದವು. ಅವುಗಳ ಗಾತ್ರದಲ್ಲಿ ಏರುಪೇರುಗಳನ್ನು ಕಾಣಬಹುದು. ಬಲು ದೊಡ್ಡದಾದ ಎಲೆಯ ಅವಶೇಷ 15 ಸೆಂಮೀ ಉದ್ದ, 6 ಸೆಂಮೀ ಅಗಲವಿದೆ. ಅಲ್ಲದೆ ಎಲೆಯ ಒಳರಚನೆಯನ್ನೂ ಸುಲಭವಾಗಿ ನೋಡಬಹುದು. ಇವು ಈಗಿನ ತಾಳೆಯ ಜಾತಿಯ ವೃಕ್ಷಗಳ ಗುಂಪಿಗೆ ಸೇರಿವೆ. ಸಿರದ ಕೆಲವು ಭಾಗಗಳಲ್ಲಿ ಹಳದಿಬಣ್ಣದ ಸೂಕ್ಷ್ಮಪುಡಿಯೋಪಾದಿಯಲ್ಲಿರುವ ಬೀಜಕಣಗಳು. ಪರಾಗಧೂಳಿ ಮತ್ತು ರಾಳ ಹುದುಗಿವೆ. ವಿಶೇಷಾಂಶವೆಂದರೆ ಈ ರಾಳಕ್ಕೆ ಇಂದಿಗೂ ವಿಶಿಷ್ಟವಾಸನೆ ಇರುವುದು. ಮತ್ತೆ ಕೆಲವು ಕಡೆ ಮಾರ್ಕಸೈಟ್ ಖನಿಜದಿಂದ ಕೂಡಿದ ನರಗಳ ವಿನ್ಯಾಸ ಕಂಡುಬರುವುದು. ಇನ್ನು ಕೆಲವು ಭಾಗಗಳಲ್ಲಿ ಅಷ್ಟೇ ಕಿರಿದಾದ ಮರಳಿನಿಂದ ಕೂಡಿದ ಬಿರುಕುಗಳನ್ನೂ ಕಾಣಬಹುದು.

ಗಣಿಯಿಂದ ಹೊರತೆಗೆದಾಗ ಲಿಗ್ನೈಟ್ ಅಚ್ಚ ಕಂದು ಅಥವಾ ಕಪ್ಪಗಿದ್ದು ಕ್ರಮೇಣ ತನ್ನಲ್ಲಿರುವ ನೀರಿನ ಆಂಶವನ್ನು ಕಳೆದುಕೊಂಡು ಒಂದು ಬಗೆಯ ತಿಳಿ ಕಂದುಬಣ್ಣವನ್ನು ತಳೆಯುತ್ತದೆ. ಅಲ್ಲದೆ ಕೈಯಲ್ಲಿ ಹಿಡಿದು ಅಮುಕಿದಾಗ ಚೂರು ಚೂರಾಗಿ ಒಡೆದು ಪುಡಿಯಾಗುತ್ತದೆ. ಇಂಧನ ಸಾಮಥ್ರ್ಯ ಗುಣದಲ್ಲಿ ನೈವೇಲಿ ಲಿಗ್ನೈಟನ್ನು ಪ್ರಪಂಚದ ಅತ್ಯುತ್ತಮ ಲಿಗ್ನೈಟ್ ಶ್ರೇಣಿಗೆ ಸೇರಿಸಲಾಗಿದೆ. ಇದರ ಸಂಯೋಜನೆ ಹೀಗಿದೆ : ನೀರಿನ ಆವಿ 53.5%, ಅನಿಲಾಂಶ 24%, ಸ್ಥಿರೀಕೃತಇಂಗಾಲ 20%, ಇಂದನ ಸಾಮಥ್ರ್ಯ 2720 ಏಕಮಾನಗಳು (ಞe/ಞgm). ಸಾಂದ್ರತೆ 1,161, ದಹನ ಸಾಮಥ್ರ್ಯ 5,500 ಬ್ರಿಟಿಷ್ ಜೌಷ್ಣೀಯ ಏಕಮಾನಗಳು, ಒಪ್ಪಮಾಡಿದಾಗ ದಹನ ಸಾಮಥ್ರ್ಯ 12,500 ಬ್ರಿಟಿಷ್ ಜೌಷ್ಣೀಯ ಏಕಮಾನಗಳು. ಸಾಮಥ್ರ್ಯದಲ್ಲಿ ಸುಮಾರು 2.5 ಟನ್ ಲಿಗ್ನೈಟ್ 1 ಟನ್ ಉತ್ತಮ ಕಲ್ಲಿದ್ದಲಿಗೆ ಸಮಾನವಾಗಿದೆ.

ನೈವೇಲಿಯಲ್ಲಿ ಲಿಗ್ನೈಟ್ ದೊರೆಯುವುದೆಂಬ ಅಂಶ 1920ರಲ್ಲೇ ತಿಳಿದು ಬಂದಿದ್ದರೂ ಗಣಿಯ ಕೆಲಸ ಕಷ್ಟಕರವೆಂದು ಅದರ ಗೋಜಿಗೇ ಹೋಗಿರಲಿಲ್ಲ. ತಮಿಳುನಾಡಿನಲ್ಲಿ ವಿದ್ಯುಚ್ಛಕ್ತಿಗೆ ಪೂರೈಕೆಗೆ ಇರುವ ಕೊರತೆಗಳನ್ನು ಗಮನಿಸಿ 1953-54ರಲ್ಲಿ ಭಾರತ ಸರ್ಕಾರ ವಿದ್ಯುದುತ್ಪಾದನೆಗೆ ಲಿಗ್ನೈಟನ್ನು ರೂಢಿಸಿಕೊಳ್ಳಲು ಯೋಚಿಸಿ ವಿಶೇಷ ರೀತಿಯ ಅಧ್ಯಯನವನ್ನು ಪ್ರಾರಂಭಿಸಿತು. ಇದಕ್ಕಾಗಿ ವಿದೇಶೀತಜ್ಞರ ನೆರವನ್ನೂ ಕೋರಲಾಯಿತು. ಅವರ ಅಭಿಪ್ರಾಯದಂತೆ ಪ್ರಸಕ್ತ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವನ್ನು ಆಯಲಾಯಿತು. ಇಲ್ಲಿಯ 14.25 ಚಕಿಮೀ ವಿಸ್ತಾರದ ಪ್ರದೇಶದಲ್ಲಿ ಸುಮಾರು 20 ಕೋಟಿ ಟನ್ ಲಿಗ್ನೈಟ್ ದೊರೆಯಬಹುದೆಂದು ಅಂದಾಜು ಮಾಡಲಾಗಿದೆ. ಇಲ್ಲಿನ ಲಿಗ್ನೈಟನ್ನು ಒಪ್ಪಮಾಡಿ ವಿದ್ಯುತ್ತಿನ ತಯಾರಿಕೆ ಮಾತ್ರವಲ್ಲ ನಿತ್ಯಬಳಕೆಗೆ ಬೇಕಾದ ಉರವಲಾಗಿ ಕೂಡ ಉಪಯೋಗಿಸಬಹುದೆಂದು ಅಂದಾಜು ಮಾಡಲಾಗಿದೆ. ಇಲ್ಲಿನ ಲಿಗ್ನೈಟನ್ನು ಒಪ್ಪಮಾಡಿ ವಿದ್ಯುತ್ತಿನ ತಯಾರಿಕೆ ಮಾತ್ರವಲ್ಲ ನಿತ್ಯಬಳಕೆಗೆ ಬೇಕಾದ ಉರವಲಾಗಿ ಕೂಡ ಉಪಯೋಗಿಸಬಹುದೆಂದೂ ಒಪ್ಪ ಮಾಡುವಾಗ ಉತ್ಪನ್ನವಾಗುವ ಉಪವಸ್ತುಗಳ ಬಳಕೆಯಿಂದ ರಾಸಾಯನಿಕ ಗೊಬ್ಬರ ಮತ್ತು ಪ್ಲಾಸ್ಟಿಕುಗಳ ತಯಾರಿಕೆಗೆ ಬೇಕಾದ ಕಚ್ಚಾವಸ್ತು ಮುಂತಾದವನ್ನು ಪಡೆಯಬಹುದೆಂದೂ ತಜ್ಞರು ಸೂಚಿಸಿದರು. ಇಷ್ಟೇ ಅಲ್ಲದೆ ಇಲ್ಲಿ ಈಗ ಇತರ ಉಪಯುಕ್ತ ಪದಾರ್ಥಗಳಾದ ಕಾರ್ಬಾಲಿಕ್ ಆಮ್ಲ. ಟಾರೆಣ್ಣೆ, ಫಿನಾಲ್ ಇತ್ಯಾದಿ ರಾಸಾಯನಿಕ ವಸ್ತುಗಳನ್ನೂ ಪಡೆಯಲಾಗುತ್ತಿದೆ. ಈ ಇಡೀ ಯೋಜನೆಗೆ ಸುಮಾರು 120 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಕೆಲವು ಸಂದರ್ಭಗಳಲ್ಲಿ ರಷ್ಯ ಮತ್ತು ಪಶ್ಚಿಮ ಜರ್ಮನಿಯ ತಾಂತ್ರಿಕ ನೆರವನ್ನು ಪಡೆದದ್ದೂ ಉಂಟು. ಗಣಿಗಾರಿಕೆಗೆ ಕಡಿಮೆ ಎಂದರೆ 25 ಕೋಟಿ ರೂಪಾಯಿಗಳ ವೆಚ್ಚ ತಗುಲಿದೆ. ಸದ್ಯಕ್ಕೆ ವಾರ್ಷಿಕ ಉತ್ಪನ್ನ 35 ಲಕ್ಷ ಟನ್ ಲಿಗ್ನೈಟ್. ಇದರಲ್ಲಿ 15 ಲಕ್ಷ ಟನ್ನುಗಳನ್ನು 250 ಮೆಗಾವಾಟ್ ವಿದ್ಯುತ್ತಿನ ತಯಾರಿಕೆಗೂ 6 ಲಕ್ಷ ಟನ್ ರಾಸಾಯನಿಕ ಗೊಬ್ಬರದ ತಯಾರಿಕೆಗೂ ಉಳಿದದ್ದನ್ನು 3,80,000 ಟನ್ ಲಿಕೋ ಎಂಬ ನಿತ್ಯಬಳಕೆಯ ಉರುವಲ ತಯಾರಿಕೆಗೂ ಬಳಸಲಾಗುತ್ತಿದೆ. (ಬಿ.ವಿ.ಜಿ.)