ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಸರ್ಗಿಕಾನಿಲ

ವಿಕಿಸೋರ್ಸ್ದಿಂದ

ನೈಸರ್ಗಿಕಾನಿಲ - ಸರಂಧ್ರ ಶಿಲೆಗಳಲ್ಲಿ ಅಡಕವಾಗಿರುವ ನೈಸರ್ಗಿಕ ತೈಲದೊಡನೆ ಹುದುಗಿರುವ ಅನಿಲ (ನ್ಯಾಚುರಲ್ ಗ್ಯಾಸ್). ಶಿಲಾನಿಕ್ಷೇಪದಲ್ಲಿ ಹರಡಿರುವ ತೈಲಬಿಂದುಗಳು ಒಂದೆಡೆ ಶೇಖರವಾಗಲು ಅಗತ್ಯವಾದ ಪ್ರೇರಕಶಕ್ತಿಯನ್ನು ನೈಸರ್ಗಿಕಾನಿಲ ಒದಗಿಸುತ್ತದೆ. ಒಮ್ಮೊಮ್ಮೆ ಕೊಳವೆಬಾವಿಯಿಂದ ನೈಸರ್ಗಿಕ ತೈಲವನ್ನು ಹೊರತೆಗೆಯಲು ಇದರಿಂದ ತೊಂದರೆ ಆಗುವುದೂ ಉಂಟು. ಹಲವು ಪ್ರದೇಶಗಳಲ್ಲಿ ಈ ಅನಿಲ ಅಧಿಕ ಗಾತ್ರದಲ್ಲಿ ಶೇಖರವಾಗಿದ್ದು ರಂಧ್ರವನ್ನು ಕೊರೆದಾಗ ಹೊರಬರುತ್ತದೆ. ಅಲ್ಲದೆ ಭೂಮಿಯ ಒಳಗೆ ಹುದುಗಿರುವ ತೈಲನಿಕ್ಷೇಪವನ್ನು ಪತ್ತೆಹಚ್ಚಲು ಇದು ಬಲು ಸಹಕಾರಿ, ಕೈದೀವಿಗೆಯಂತೆ. ಆ ಪ್ರದೇಶದಲ್ಲಿರುವ ಬಾವಿ, ತೊರೆ, ಚಿಲುಮೆಗಳಲ್ಲಿ ಅನಿಲದ ಗುಳ್ಳೆಗಳು ಸತತವಾಗಿ ಹೊರಹೊಮ್ಮುತ್ತಿರುತ್ತವೆ. ಹೀಗೆಯೇ ಜೌಗುಪ್ರದೇಶಗಳಲ್ಲಿ ನಿಂತು ಹೆಪ್ಪುಗಟ್ಟಿರುವ ಕೆಸರಿನಲ್ಲೂ ಅನಿಲ ನೊರೆಗಟ್ಟುತ್ತದೆ.

ಬಾಕುತೈಲಪ್ರದೇಶದ ಬಳಿ ಇರುವ ಕ್ಯಾಸ್ಟಿಯನ್ ಸಮುದ್ರತೀರದಲ್ಲಿ ಬಿರುಕುಗಳ ಮೂಲಕ ಧಗಧಗನೆ ಉರಿಯುತ್ತಿರುವ ಅನಿಲಜ್ವಾಲೆಗಳನ್ನು ಇಂದಿಗೂ ಗುರುತಿಸಬಹುದು. ಪುರಾತನ ಅಗ್ನಿಪೂಜಕರು ಇದರ ಆರಾಧಕರಾಗಿದ್ದರು ಎನ್ನಬಹುದು. ಇರಾಕ್ ದೇಶದ ಮೆಸಪೊಟೇಮಿಯಾ ಪ್ರದೇಶದಲ್ಲಿ ಇಂದಿಗೂ ಜಾಜ್ವಲ್ಯಮಾನವಾಗಿ ಉರಿಯುತ್ತಿರುವ ಜ್ವಾಲೆಯನ್ನು ಬಲು ಹಿಂದಿನಿಂದಲೂ ಆಂದರೆ ನೆಬುಚಾಡ್ನೆಸಾರ್ (ಕ್ರಿ.ಪೂ. ಆರನೆಯ ಶತಮಾನ) ಎಂಬಾತನ ಕಾಲದಿಂದಲೂ ಗುರುತಿಸಲಾಗಿದೆ. ನೈಸರ್ಗಿಕಾನಿಲದಲ್ಲಿ ಹಲವಾರು ಅನಿಲಗಳು ವಿವಿಧಪ್ರಮಾಣಗಳಲ್ಲಿರುತ್ತವೆ. ಇವುಗಳ ಪೈಕಿ ಮೀಥೇನ್‍ಪ್ಯಾರಫಿನ್ನುಗಳು, ಹೈಡ್ರೊಜನ್ ಸಲ್ಪೈಡ್, ಹೀಲಿಯಮ್, ನೈಟ್ರೂಜನ್ ಹಾಗೂ ಕಾರ್ಬನ್‍ಡೈಆಕ್ಸೈಡ್ ಇವು ಅತಿ ಸಾಮಾನ್ಯವಾಗಿದ್ದು ಮೀಥೇನ್ ಅಧಿಕಗಾತ್ರದಲ್ಲಿರುತ್ತದೆ. ನೈಸರ್ಗಿಕಾನಿಲದಲ್ಲಿ ಹೈಡ್ರೊಕಾರ್ಬನ್ ಅಂಶ ಅಧಿಕವಾಗಿದ್ದಲ್ಲಿ ಅದು ಉತ್ತಮ ಇಂಧನವೆನಿಸುತ್ತದೆ. ಪೆಟ್ರೋಲಿಯಮ್ ಗಣಿ ಉದ್ಯಮದ ಪ್ರಾರಂಭದಲ್ಲಿ ಕಚ್ಚಾಎಣ್ಣೆಯೊಡನೆ ಹೊರಬರುತ್ತಿದ್ದ ನೈಸರ್ಗಿಕಾನಿಲವನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಆದರೆ ಈಚಿನ ವರ್ಷಗಳಲ್ಲಿ ಇದನ್ನು ಪೋಲುಮಾಡದೆ ಬಳಸಿಕೊಳ್ಳಲಾಗುತ್ತಿದೆ.

ಹೆಚ್ಚು ಒತ್ತಡದ ಪ್ರಭಾವಕ್ಕೆ ಒಳಗಾಗಿರುವ ಅನಿಲ ಜಲಪೂರಿತ ಪ್ರಸ್ತರಗಳ ಮುಖಾಂತರ ಪ್ರವಹಿಸಿದಾಗ ಅದರ ರಭಸಕ್ಕೆ ಕೆಸರೂ ಹೊರಚಿಮ್ಮುತ್ತದೆ. ಇದೇ ಮಡ್‍ವಾಲ್ಕೇನೂ (ಮೃತ್ತಿಕಾಗ್ನಿ ಪರ್ವತ). ಬರ್ಮ, ಕ್ಯಾಲಿಪೋರ್ನಿಯಾ ಮತ್ತು ಟ್ರಿನಿಡಾಡ್ ದೇಶಗಳ ತೈಲ ಜಾಡುಗಳಲ್ಲಿ ಈ ಬಗೆಯ ಕೆಸರು ಚಿಮ್ಮುವ ಸಣ್ಣಪುಟ್ಟ ಗುಡ್ಡಗಳಿವೆ. ಇವುಗಳ ಪೈಕಿ ಕೆಲವು ಒಂದೇ ಸಮನೆ ಕೆಸರನ್ನು ಹೊರಚಿಮ್ಮಿಸುತ್ತವೆ; ಮತ್ತೆ ಕೆಲವು ನಿರ್ದಿಷ್ಟ ವೇಳೆಯಲ್ಲಿ ಮಾತ್ರ ಈ ಕಾರ್ಯಾಚರಣೆಯನ್ನು ನಡೆಸುತ್ತವೆ. ಇದಕ್ಕೆ ಮುಖ್ಯ ಕಾರಣ ಅನಿಲದ ಸರಬರಾಜು. ಅದು ಒಂದೇಸಮನೆ ಹೊಮ್ಮುತ್ತಿದ್ದಲ್ಲಿ ಕೆಸರಿನ ಚಿಮ್ಮಿಕೆಯೂ ಸತತವಾಗಿರುತ್ತದೆ. ಹಾಗಿಲ್ಲದೆ ಅನಿಲ ಶೇಖರವಾಗಿ ಸಾಕಷ್ಟು ಒತ್ತಡ ಉಂಟಾದಾಗ ಮಾತ್ರ ಕೆಸರಿನ ಚಿಮ್ಮಿಕೆಯನ್ನು ಕಾಣಬಹುದು. ಹೀಗಾಗಲು ಕೊಂಚಕಾಲವೂ ಬೇಕಾದೀತು.

ಭಾರತ ಉಪಖಂಡದ ಬಲೂಚಿಸ್ತಾನದ ಆಗ್ನೇಯ ಭಾಗದಲ್ಲಿರುವ ಲಾಕಿ ಸುಣ್ಣ ಶಿಲಾ ನಿಕ್ಷೇಪಗಳಲ್ಲಿ ನೈಸರ್ಗಿಕಾನಿಲದ ಅತ್ಯುತ್ತಮ ನಿಕ್ಷೇಪವಿದೆ. ಜಾಕೊಬಾಬಾದಿನ ಬಳಿ ಇರುವ ಸುಯ್ ಎಂಬಲ್ಲಿ ಇದನ್ನು ತೋಡುರಂಧ್ರಗಳ ಮೂಲಕ ಹೊರತೆಗೆದು ಬಳಸಲಾಗುತ್ತಿದೆ. 1956ರಿಂದೀಚೆಗೆ ದಿನಂಪ್ರತಿ ಸುಮಾರು 9,91,000 ಘನ ಮೀಟರುಗಳಷ್ಟು ಅನಿಲ ಇಲ್ಲಿ ದೊರೆಯುತ್ತಿದೆ. ಇಷ್ಟು ಉತ್ತಮ ನಿಕ್ಷೇಪ ಭಾರತದಲ್ಲಿ ಇಲ್ಲವಾದರೂ ಅಸ್ಸಾಮಿನ ನಹಾರ್‍ಕಟಿಯಾ, ಗುಜರಾತಿನ ಕ್ಯಾಂಬೆ ಮತ್ತು ಅಂಕಲೇಶ್ವರ ಮತ್ತು ಹಿಮಾಲಯದ ತಪ್ಪಲಿನ ಜ್ವಾಲಾಮುಖಿ ಈ ಪ್ರದೇಶಗಳಲ್ಲಿ ಸಾಕಷ್ಟು ನೈಸರ್ಗಿಕಾನಿಲ ದೊರೆಯುತ್ತಿದೆ. ಅದನ್ನು ಹಲವಾರು ಕೈಗಾರಿಕೆಗಳಲ್ಲಿಯೂ ಗೃಹಬಳಕೆಯಲ್ಲಿಯೂ ಇಂಧನವಾಗಿ ಉಪಯೋಗಿಸಲಾಗುತ್ತಿದೆ. ಈಚಿನ ವರ್ಷಗಳಲ್ಲಿ ರಾಸಾಯನಿಕ ಗೊಬ್ಬರಗಳು, ಕೃತಕ ರಬ್ಬರ್ ಹಾಗೂ ಹಲವಾರು ರಾಸಾಯನಿಕ ವಸ್ತುಗಳ ತಯಾರಿಕೆಯಲ್ಲಿ ನೈಸರ್ಗಿಕಾನಿಲವನ್ನು ಬಳಸಲಾಗುತ್ತಿದೆ. (ಬಿ.ವಿ.ಜಿ.)