ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೈಸರ್, ಆಲ್ಬರ್ಟ್ ಲಡ್ವಿಗ್ ಸಿಗ್ಮಂಡ್

ವಿಕಿಸೋರ್ಸ್ದಿಂದ

ನೈಸರ್, ಆಲ್ಬರ್ಟ್ ಲಡ್ವಿಗ್ ಸಿಗ್ಮಂಡ್ 1856-1916. ಪೋಲೆಂಡಿನ (ಹಿಂದೆ ಜರ್ಮನಿಗೆ ಸೇರಿದ್ದ) ಬ್ರೆಸ್ಲೊ ನಗರದಲ್ಲಿದ್ದ ಪ್ರಸಿದ್ದ ಚರ್ಮ ಹಾಗೂ ಲೈಂಗಿಕ ರೋಗಗಳ ತಜ್ಞ. ಇದೇ ಪ್ರಾಂತ್ಯದ ಶ್ವೆಯಿಡ್‍ಮಿಟ್ಸಿನಲ್ಲಿ 1855 ಜನವರಿ 22ರಂದು ಇವನ ಜನನ. ತಂದೆಯೂ ಜನರ ಗೌರವ ಆದರಗಳಿಗೆ ಪಾತ್ರನಾಗಿದ್ದ ವೈದ್ಯ. ವರ್ಷ ತುಂಬುವುದರೊಳಗೆ ನೈಸರ್ ತಾಯಿಯನ್ನು ಕಳೆದುಕೊಂಡು ಬಲತಾಯಿಯ ಕೈಕೆಳಗೆ ಬೆಳೆದ. ಮಸ್ಟರ್‍ಬರ್ಗಿನ ಸಾರ್ವಜನಿಕ ಶಾಲೆಯಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮಾಡಿದ ಬಳಿಕ ಬ್ರೆಸ್ಲೊವಿನ ಸೇಂಟ್‍ಮೇರಿಯ ಮ್ಯಾಗ್ಡೊಲೀನ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ. ಹೀಡನ್‍ಹೈಮ್, ಕೋನ್‍ಹೀಮ್, ವೀಗರ್ಟ್ ಮುಂತಾದ ಪ್ರಸಿದ್ಧ ವೈದ್ಯವಿಜ್ಞಾನಿಗಳ ಕೈಕೆಳಗೆ 1872ರಿಂದ 1877ರ ತನಕ ವೈದ್ಯವ್ಯಾಸಂಗ ಮಾಡಿದ. ಆ ಕಾಲದಲ್ಲಿ ಇವನ ಸಹ ವಿದ್ಯಾರ್ಥಿಯಾಗಿದ್ದ ಪಾಲ್ ಏರ್‍ಲಿಕ್ ಅನಂತರವೂ ಇವನ ವ್ಯಾಸಂಗ ಪರಿಶೋಧನೆಗಳಲ್ಲಿ ಸಹಕಾರಿಯಾಗಿದ್ದ. ಕಾಯಚಿಕಿತ್ಸೆಯಲ್ಲಿ ಪರಿಣತನಾಗಬೇಕೆಂದು ನೈಸರ್ ಬಯಸಿದ್ದರೂ ಅವಕಾಶವಾಗದೆ, ಉನ್ನತ ವ್ಯಾಸಂಗಕ್ಕಾಗಿ ಚರ್ಮರೋಗ ವಿಷಯವನ್ನು ಆಯ್ದುಕೊಳ್ಳಬೇಕಾಯಿತು. ಈ ಆಕಸ್ಮಿಕ ಆಯ್ಕೆ ಚರ್ಮರೋಗವಿಜ್ಞಾನದ ಮುನ್ನಡೆಗೂ ನೈಸರನ ಯಶಸ್ಸಿಗೂ ಕಾರಣವಾಯಿತು. ಸಂದರ್ಭವೇ ಹಾಗಿತ್ತು. ವೈದ್ಯಕ್ಷೇತ್ರದಲ್ಲಿ ಆಗ ಏಕಾಣುಗಳ ವಿಷಯವಾಗಿ ಆಸಕ್ತಿ ಸರ್ವತ್ರವಾಗಿತ್ತು. ನೈಸರನ ಸ್ನೇಹಿತನಾದ ಫರ್ಡಿನೆಂಡ್ ಕಾಹ್ನ ಎಂಬ ಸಸ್ಯಶಾಸ್ತ್ರಜ್ಞ ಅವನಿಗೆ ಸೂಕ್ಷ್ಮ ದರ್ಶಕದಲ್ಲಿ ಏಕಾಣುಗಳ ಪರೀಕ್ಷೆಯ ವಿಧಾನವನ್ನು ಹೇಳಿಕೊಟ್ಟಿದ್ದ. ಅಧ್ಯಾಪಕರಾಗಿದ್ದ ವೀಗರ್ಟ್, ಕೋನ್‍ಹೀಮ್ ಮುಂತಾದವರಿಂದ ಏಕಾಣುಗಳಿಗೆ ಯುಕ್ತರಂಗುಬಳಿವ ವಿಧಾನ ತಿಳಿದುಬಂದಿತ್ತು. ಜರ್ಮನಿಯ ಜೈಸ್ ಕಂಪೆನಿಯವರು ಎಣ್ಣೆಮುಳುಗಡೆ ವಿಧಾನವನ್ನು (ಆಯಿಲ್ ಇಮ್ಮರ್ಶನ್) ಬಳಸಿಕೊಂಡು ಎಂದಿಗಿಂತ ಹೆಚ್ಚಾಗಿ ಆಕಾರವನ್ನು ಹಿಗ್ಗಿಸಿ ತೋರಿಸಬಲ್ಲ ಸೂಕ್ಷ್ಮದರ್ಶಕವನ್ನು ತಯಾರಿಸಿದ್ದರು. ಇಂಥ ಸನ್ನಿವೇಶದಲ್ಲಿ ನೈಸರ್ ಚರ್ಮರೋಗತಜ್ಞ ಆಸ್ಕೆನ್ ಸೈಮನ್ನನ ಕೈಕೆಳಗೆ ಸಹಾಯಕನಾಗಿ ಕೆಲಸಮಾಡುತ್ತಿದ್ದಾಗಲೇ 1879ರಲ್ಲಿ ಪ್ರಮೇಹ ರೋಗಾಣುವನ್ನು ಗುರುತಿಸಿದ್ದ. ಆ ಏಕಾಣುವನ್ನು ಮೈಕ್ರೊಕಾಕಸ್ ಎಂದು ಇವನು ಹೆಸರಿಸಿದ. ಆದರೆ ಏರ್‍ಲಿಕ್ ಅದನ್ನು ಗಾನೋಕಾಕಸ್ ಎಂದು ಬದಲಿಸಿದ. ಈಗಲೂ ಅದೇ ಹೆಸರೇ ಉಳಿದಿದ್ದರೂ ನೈಸರನ ಗೌರವಾರ್ಥವಾಗಿ ಆ ಏಕಾಣುವನ್ನು ನೈಸೀರಿಯಾ ಎಂದು ಕರೆಯುವುದೂ ಉಂಟು. ಗಾನೋಕಾಕಸ್ಸಿನ ಪತ್ತೆ ಲೈಂಗಿಕರೋಗ ವ್ಯಾಸಂಗದಲ್ಲಿ ಒಂದು ಮೈಲಿಗಲ್ಲು ಎಂದು ಗಣಿಸಲ್ಪಟ್ಟಿದೆ. ಅದೇ ವರ್ಷ (1879) ನೈಸರ್ ನಾರ್ವೆಗೆ ತೆರಳಿ ಅಲ್ಲಿ ನೂರು ಜನ ಕುಷ್ಠರೋಗಿಗಳ ವ್ರಣಗಳಿಂದ ಗಾಜಿನ ಫಲಕಗಳ ಮೇಲೆ ಪಡೆದ ಬಳಿತಗಳನ್ನು ತಂದು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ಮಾನವರಕ್ತಕಣದ ಅರ್ಧದಷ್ಟು ಉದ್ದವಾಗಿಯೂ ಉದ್ದದ ಕಾಲುಭಾಗ ದಪ್ಪವಾಗಿಯೂ ಇದ್ದ ಏಕಾಣುವನ್ನು ಕುಷ್ಠರೋಗಕಾರಕ ಎಂದು ಗುರುತಿಸಿದ. ಈ ಶೋಧನೆಯನ್ನು ನೈಸರ್ 1880ರಲ್ಲಿ ಪ್ರಕಟಿಸಿದಾಗ ನಾರ್ವೆಯ ಏಕಾಣುಜ್ಞ ಹ್ಯಾನ್‍ಸನ್ ತಾನು ಈ ಏಕಾಣುಗಳನ್ನು 1873ರಲ್ಲೇ ಗುರುತಿಸಿದ್ದೆನೆಂಬುದಾಗಿ ಲೇಖನವನ್ನು ಬರೆದು ಅದನ್ನು ನಾಲ್ಕು ಭಾಷೆಗಳಲ್ಲಿ ಪ್ರಚಾರಮಾಡಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದ. ಅದು ನಿಜವೇ ಆಗಿದ್ದರೂ ಕುಷ್ಠರೋಗಕಾರಕ ಏಕಾಣು ಅದೇ ಎಂಬುದು ದೃಢವಾದದ್ದು ನೈಸರನ ಪ್ರಕಟಣೆಯ ತರುವಾಯವೇ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಅಲ್ಲದೆ ಮುಂದೆ ತನ್ನ ಜೀವಮಾನ ಪರ್ಯಂತ ನೈಸರ್ ಕುಷ್ಠರೋಗ ವ್ಯಾಸಂಗದಲ್ಲಿ ನಿರತನಾಗಿದ್ದುದನ್ನೂ ಗಮನಿಸಿ ಈ ವಿಷಯದಲ್ಲಿ ನೈಸರನ ಪಾತ್ರವನ್ನು ತುಲನೆ ಮಾಡಬೇಕು.

ನಾರ್ವೆಯಿಂದ ಹಿಂತಿರುಗಿದ ಬಳಿಕ ನೈಸರ್ ಚರ್ಮರೋಗ ವಿಷಯದಲ್ಲಿ ಉನ್ನತ ತರಬೇತಿಯನ್ನು ಪಡೆದು ಚರ್ಮರೋಗ ಅಧ್ಯಾಪಕನಾಗಿ 1880ರಲ್ಲಿ ನೇಮಕಗೊಂಡ. 1882ರಲ್ಲಿ ಸೈಮನ್ ನಿಧನವಾದ ತರುವಾಯ ನೈಸರನೇ ಚರ್ಮರೋಗ ಪ್ರಾಧ್ಯಾಪಕವಾಗಿ ಬಡತಿ ಹೊಂದಿದ. 1883ರಲ್ಲಿ ವಿವಾಹಾನಂತರ ನೈಸರ್‍ನ ಪತ್ನಿ ಆತನ ಸಮಸ್ತ ವ್ಯಾಸಂಗಪ್ರವಾಸಗಳಲ್ಲೂ ಪ್ರಯೋಗಗಳಲ್ಲೂ ಸಹಭಾಗಿಯಾಗಿದ್ದಳು. ಕುಷ್ಠರೋಗ ವ್ಯಾಸಂಗ ಮಾಡುವಾಗಲೇ ಲೂಪಸ್ ಎಂಬ ಚರ್ಮರೋಗ ನೈಸರನ ಗಮನವನ್ನು ಸೆಳೆಯಿತು. ಅಂಗಾಂಶಗಳಲ್ಲಿ ಕಿರುಗಂಟುಗಳನ್ನು ಉಂಟುಮಾಡದಿರುವ (ಕ್ಷಯಾಣುಗಳು ಹೀಗಲ್ಲ) ಆದರೆ ಕ್ಷಯಾಣುಗಳಂತೆಯೇ ಕಾಣಬರುವ ರೋಗಾಣುಗಳ ಲೂಪಸ್ ಬಗ್ಗೆ ರೋಗಕ್ಕೆ ಲೈಸರ್ ತೋರಿಸಿಕೊಟ್ಟ. ಪರಂಗಿ ರೋಗದ ಸಾಂಕ್ರಾಮಿಕತೆಯ ವಿಷಯವಾಗಿ ನೈಸರ್ ಕೈಗೊಂಡ ಪ್ರಯೋಗಗಳಿಂದ ಅವನಿಗೆ ಅಪಖ್ಯಾತಿಯೇ ಬಂದಂತಾಯಿತು. ಆದರೆ ಅಷ್ಟರಲ್ಲೇ ಸೂಜಿಮದ್ದಿನಿಂದ ಸೋಂಕನ್ನು ಅಂಟಿಸಿ ವಾನರಜಾತಿಯಲ್ಲಿ ಪರಂಗಿರೋಗವನ್ನು ಉಂಟುಮಾಡಬಹುದೆಂದು ರೌಕ್ಸ್, ಶೌಡನ್‍ಹಾಫ್‍ಮನ್ ಮುಂತಾದವರು. ತೋರಿಸಿಕೊಟ್ಟರು. ಇದರಿಂದ ನೈಸರ್ ಪರಂಗಿ ರೋಗದ ಮರುಸೋಂಕಿನ ಬಗ್ಗೆ ಪ್ರಯೋಗ ನಡೆಸಲು ಅನುಕೂಲವಾಯಿತು. ರೋಗಕಾರಕವನ್ನು ಪತ್ತೆಮಾಡಲು ಇವನು 1905ರಲ್ಲಿ ಜಾವಾದ್ವೀಪಕ್ಕೆ ಪ್ರವಾಸಹೋಗಿ ಶೇಖರಿಸಿದ ಸಾಮಗ್ರಿಗಳನ್ನು ವ್ಯಾಸಂಗಿಸುತ್ತಿದ್ದಾಗಲೇ ಶೌಡಿನ್ನನಿಂದ ರೋಗಕಾರಕದ ಪತ್ತೆಯಾಯಿತು ಎಂಬ ಸಮಾಚಾರ ತಿಳಿದು ಇವನಿಗೆ ಬಲು ಮಟ್ಟಿಗೆ ಆಶಾಭಂಗವಾಯಿತು. 1906ರಲ್ಲಿ ವಾಸರ್‍ಮನ್ ಮತ್ತು ಬ್ರೂಕ್ ಎಂಬ ವಿಜ್ಞಾನಿಗಳೊಡನೆ ಸೇರಿ ಪರಂಗಿರೋಗನಿದಾನಕ್ಕಾಗಿ ವಿಶಿಷ್ಟವಾದ ಒಂದು ರಕ್ತ ಪರೀಕ್ಷೆಯನ್ನು ನೈಸರ್ ಶೋಧಿಸಿದ (ಮುಖ್ಯ ಕರ್ತೃವಾದ ವಾಸರ್‍ಮನ್ನನ ಗೌರವಾರ್ಥ ಇದಕ್ಕೆ ವಾಸರ್‍ಮನ್‍ಪ್ರತಿಕ್ರಿಯೆ-ಡಬ್ಲ್ಯು.ಆರ್. ಎಂದು ಹೆಸರಿದೆ). ಅಲ್ಲದೆ ಏರ್‍ಲಿಕ್ ಪರಂಗಿರೋಗಕ್ಕೆ ರಾಮಬಾಣವೆಂದು ಸಂಯೋಜಿಸಿದ (1910) ಸ್ಯಾಲ್‍ವರ್‍ಸಾನ್ ಎಂಬ ಔಷಧಿಯನ್ನು ಪ್ರಚಾರಕ್ಕೆ ತರಲು ಸಹಾಯಕನಾಗಿದ್ದ. ಲೈಂಗಿಕ ರೋಗಗಳ ಹತೋಟಿಗಾಗಿ ವೇಶ್ಯೆಯರ ಮೇಲೆ ಕಠಿಣ ಪ್ರತಿಬಂಧಕಗಳನ್ನೂ ಕಡ್ಡಾಯ ಆರೋಗ್ಯ ಕ್ರಮಗಳನ್ನೂ ಹೇರಬೇಕಲ್ಲದೆ ಪೊಲೀಸರಿಗೆ ತಿಳಿಸಿ ಕಾನೂನು ಕ್ರಮಗಳನ್ನು ಜರುಗಿಸುವುದು ಸರಿಯಲ್ಲ. ಎಂದು ಇವನು ಒತ್ತಿ ಹೇಳುತ್ತಿದ್ದ. ಲೈಂಗಿಕರೋಗ ಚಿಕಿತ್ಸೆಗಾಗಿ ಬಂದ ವ್ಯಕ್ತಿಯ ವಿಚಾರವನ್ನೂ ಅವರಿಂದ ತಿಳಿದುಬಂದ ವಿಚಾರವನ್ನೂ ವೈದ್ಯರು ಪೊಲೀಸರಿಗೆ ತಿಳಿಸುವುದು ತಪ್ಪು; ರೋಗಿಯ ಗುಟ್ಟನ್ನು ವೈದ್ಯ ಕಾಪಾಡಬೇಕಾದ ನೈತಿಕ ಧರ್ಮಕ್ಕೆ ಇದು ವಿರುದ್ಧ ಎಂಬುದನ್ನು ಆಡಳಿತ ಗಣಿಸುವಂತೆ ಮಾಡುವುದಕ್ಕಾಗಿ ಇವನು ಶ್ರಮಿಸಿದ. ಲೈಂಗಿಕ ರೋಗಗಳ ಬಗ್ಗೆ ಇವನು ವಹಿಸಿದ್ದ ಪಾತ್ರಗಳನ್ನು ಗಮನಿಸಿ ಸರ್ಕಾರ ಇವನನ್ನು ಇಂಪೀರಿಯಲ್ ಹೆಲ್ತ್ ಕೌನ್ಸಿಲ್ ಎಂಬ ಸಂಸ್ಥೆಯ ಸದಸ್ಯನಾಗಿ 1916ರಲ್ಲಿ ನೇಮಿಸಿತು. ಆದರೆ 1913ರಲ್ಲಿ ಇವನ ಹೆಂಡತಿ ಕಾಲವಾದಾಗಿನಿಂದ ಚಿಂತೆ ಅನಾರೋಗ್ಯದಿಂದ ನರಳುತ್ತಿದ್ದ ನೈಸರ್ ಕೆಲವು ತಿಂಗಳುಗಳು ಮಾತ್ರ ಈ ಸ್ಥಾನದಲ್ಲಿದ್ದು 1916 ಜುಲೈ 30ರಂದು ನಿಧನನಾದ. ಬ್ರೆಸ್ಲೋವಿನಲ್ಲಿ ಇವನು ವಾಸವಾಗಿದ್ದ ಮನೆಯನ್ನು 1920ರಲ್ಲಿ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಯಿತು. 1933ರಲ್ಲಿ ನಾಟ್ಸಿಗಳು ಇದನ್ನು ಆಕ್ರಮಿಸಿ ವಸತಿಗೃಹವನ್ನಾಗಿ ಮಾಡಿದರು. ನೈಸರನ ಪತ್ರಗಳೂ ಲೇಖನಗಳೂ ಗೈರುವಿಲೆಯಾದುವು. ಶ್ವೆಯಿನ್‍ಫರ್ಟಿನ ವೈದ್ಯ ಬ್ರಾಕ್ ಎಂಬಾತ ಅವನ್ನು ಪತ್ತೆಮಾಡಿ ಹೊರತಂದ ಮೇಲೆ ನೈಸರನ ವಿಷಯವಾಗಿ ನೂತನ ಲೇಖನಗಳು ಸಾಧ್ಯವಾದುವು.

ಬ್ರೆಸ್ಲೋವಿನಲ್ಲಿ ಚರ್ಮರೋಗ ಪ್ರಾಧ್ಯಾಪಕನಾದ ಬಳಕೆ ಅಲ್ಲಿ ಆ ರೋಗದ ಚಿಕಿತ್ಸೆಗೇ ಮೀಸಲಾದ ಒಂದು ಚಿಕಿತ್ಸಾಲಯವನ್ನು ಸ್ಥಾಪಿಸಬೇಕೆಂಬ ನೈಸರನ ಸಲಹೆಯ ಪ್ರಕಾರ ಚಿಕಿತ್ಸಾಲಯವನ್ನು ಕಟ್ಟಲಾಯಿತು. 1892ರಲ್ಲಿ ಸಿದ್ಧವಾದ ಸಂಸ್ಥೆಯ ಪ್ರಥಮ ನಿರ್ದೇಶಕ ನೈಸರನೇ ಆಗಿದ್ದು ಆದಕ್ಕೆ ಅಂತಾರಾಷ್ಟ್ರೀಯ ಪ್ರಸಿದ್ಧಿ ದೊರೆಯಿತು. (ಎಸ್.ಆರ್.ಆರ್.; ಡಿ.ಎಸ್.ಎಸ್.)