ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೊಣ

ವಿಕಿಸೋರ್ಸ್ದಿಂದ

ನೊಣ- ಆತ್ರ್ರಾಪೊಡ ವಿಭಾಗ, ಕೀಟ ವರ್ಗ, ಡಿಪ್ಟಿರ ಗಣ. ಮಸಿಡೀ ಕುಟುಂಬಕ್ಕೆ ಸೇರಿದ ಕೀಟ (ಹೌಸ್‍ಫ್ಲೈ). ಮಸ್ಕ ಡೊಮೆಸ್ಟಿಕ ಇದರ ವೈಜ್ಞಾನಿಕ ಹೆಸರು. ವಿಷಮಶೀತಜ್ವರ, ವಾಂತಿಭೇದಿ, ಅತಿಸಾರ, ಕ್ಷಯ, ಆಮಶಂಕೆ ಮುಂತಾದ ಸಾಂಸರ್ಗಿಕ ರೋಗಗಳಿಗೆ ನೊಣವೇ ಕಾರಣವಾಗಿದ್ದು ಮಾನವನ ಪಿಡುಗುಗಳಲ್ಲಿ ಬಲು ಮುಖ್ಯ ಎನಿಸಿದೆ. ಇದು ಬಹಳ ಚೂಟಿಯಾದ ಕೀಟವಾದ್ದರಿಂದ, ಒಂದು ಸ್ಧಳದಿಂದ ಮತ್ತೊಂದು ಸ್ಧಳಕ್ಕೆ ಹಾರುತ್ತ, ಆಹಾರದ ಮೇಲೂ, ಚರಂಡಿಗಳು, ಗೊಬ್ಬರದ ಗುಂಡಿ ಹೀಗೆ ಯಾವುದೇ ಕೊಳಕು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವುವು.

ನೊಣ ಚಿಕ್ಕ ಗಾತ್ರ ಕೀಟ: ಇದರ ಉದ್ದ ಸುಮಾರು 6 ಮಿಮೀ. ದೇಹ ಬಣ್ಣ ಕಂದು. ದೇಹವನ್ನು ತಲೆ, ವಕ್ಷ ಮತ್ತು ಉದರ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಬಹುದು. ನೊಣದ ತಲೆ ಚಿಕ್ಕದಾಗಿ ಅರ್ಧಚಂದ್ರಾಕಾರದಲ್ಲಿದೆ. ಇದರಲ್ಲಿ ಒಂದು ಜೊತೆ ಸಂಯುಕ್ತಾಕ್ಷಿಗಳಿವೆ. ಒಂದೊಂದು ಕಣ್ಣಿನಲ್ಲೂ ಸುಮಾರು 4,000 ಅಮ್ಮಟಿಡಿಯಮ್‍ಗಳಿವೆ. ಜೊತೆಗೆ 3 ಸರಳಾಕ್ಷಿಗಳೂ ಉಂಟು. ಒಂದು ಜೊತೆ ಸ್ವರ್ಶಾಂಗಗಳಿವೆ. ವದನಾಂಗಗಳು ಬಹಳ ಚೆನ್ನಾಗಿ ಬೆಳೆದಿವೆ. ವದನಾಂಗದಲ್ಲಿ ಸೊಂಡಿಲು ಮತ್ತು ಆಹಾರ ಜಾಡು ಎಂಬ ಭಾಗಗಳುಂಟು. ಇಂಥ ವದನಾಂಗವನ್ನು ಸ್ಪಾಂಜಿಂನ್ ರೀತಿಯದು ಎನ್ನಲಾಗುತ್ತದೆ. ಲೇಬ್ರಮ್, ಎಪಿಫ್ಯಾರಿಂಕ್ ಮತ್ತು ಹೈಪೊಫ್ಯಾರಿಂಕ್ಸ್‍ಗಳು ಸೇರಿ ಆಹಾರ ಜಾಡು ಆಗಿದೆ. ಸಾಮಾನ್ಯವಾಗಿ ಇತರ ಕೀಟಗಳ ವದನಾಂಗಗಳಲ್ಲಿ ಕಂಡುಬರುವ ಮ್ಯಾಂಡಿಬಲ್ ಎಂಬುದು ನೊಣದ ವದನಾಂಗದಲ್ಲಿ ಇಲ್ಲ. ಬದಲಿಗೆ, ಗರಗಸದ ಹಲ್ಲುಗಳಂತಿರುವ ರಚನೆಗಳು ಕಂಡುಬರುತ್ತವೆ. ನೊಣಕ್ಕೆ ಮೂರು ಜೊತೆ ಕಾಲುಗಳುಂಟು. ಇವು ವಕ್ಷದ ಖಂಡಗಳಿಗೆ ಸೇರಿಕೊಂಡಿವೆ. ಕಾಲುಗಳ ಮೇಲೆ ಕೂದಲುಗಳಿವೆ. ಈ ಕೂದಲುಗಳ ಮೂಲಕ ಒಂದು ಬಗೆಯ ಅಂಟುಪದಾರ್ಥ ಹೊರಬಂದು, ಆಧಾರವಸ್ತುವಿಗೆ ಅಂಟಿಕೊಳ್ಳಲು ಸಹಾಯಕವಾಗುತ್ತದೆ. ಪ್ರತಿಯೊಂದು ಕಾಲಿನ ಟಾರ್ಸಸ್ ತುದಿಯಲ್ಲಿ ವಿಶೇಷ ರೀತಿಯ ಸಂವೇದನಾಂಗಗಳುಂಟು. ಇವಕ್ಕೆ ಹಾಲ್ಟರುಗಳೆಂದು ಹೆಸರು. ಹೆಣ್ಣು ನೊಣದ ಉದರ ಭಾಗದಲ್ಲಿ 9 ಖಂಡಗಳೂ, ಗಂಡಿನ ಉದರಲ್ಲಿ 8 ಖಂಡಗಳೂ ಉಂಟು. ಹೆಣ್ಣಿನ ಉದರದ ಕೊನೆಯ 4 ಖಂಡಗಳು ಅಂಡನಿಕ್ಷೇಪಕ ರಚನೆಗಳಾಗಿ ಮಾರ್ಪಟ್ಟಿವೆ. ಅಂತೆಯೇ ಇವು ಗಂಡುಗಳಲ್ಲಿ ಜನನೇಂದ್ರಿಯ ಪಾಲಿಗಳಾಗಿವೆ. ನೊಣದ ಅನ್ನನಾಳ ಬಹಳ ಉದ್ದ. ನೊಣಗಳು ದ್ರವರೂಪದ ಆಹಾರವನ್ನು ಸೇವಿಸುತ್ತವೆ. ಆಹಾರ ಸೇವನೆಯ ಕಾಲದಲ್ಲಿ ಸೊಂಡಿಲು, ಲಬೆಲ, ಫ್ಯಾರಿಂಕ್ಸ್ ಮತ್ತು ಆಹಾರ ಜಾಡು ಸಹಾಯ ಮಾಡುತ್ತವೆ.

ಗಂಡು ಮತ್ತು ಹೆಣ್ಣು ನೊಣಗಳ ಸಂಭೋಗ ನಡೆದ ಒಂದು ವಾರದ ಮೇಲೆ ಹೆಣ್ಣು 5 ಅಥವಾ 6 ಸಲ ಒಂದು ಸಲಕ್ಕೆ ಸುಮಾರು 100ರಿಂದ 200ರಂತೆ ಪ್ರತಿ ಬಾರಿಯೂ ಮೊಟ್ಟೆಗಳನ್ನಿಡುತ್ತದೆ. ಗೊಬ್ಬರ, ಕೊಳೆಯುತ್ತಿರುವ ಹಣ್ಣು ಮತ್ತು ತರಕಾರಿಗಳು ಮೊಟ್ಟೆಯಿಡುವ ತಾಣ. ನೊಣದ ಮೊಟ್ಟೆ ನೀಳವಾಗಿ, ಬೆಳ್ಳಗಿರುತ್ತವೆ. 8-24 ಗಂಟೆಗಳ ತರುವಾಯ ಮೊಟ್ಟೆಯಿಂದ ಮ್ಯಾಗಟ್ ಎಂಬ ಡಿಂಬ ಹೊರಬರುತ್ತದೆ. ಇದು ಎರಡು ಸಲ ಚರ್ಮವನ್ನು ಕಳಚಿ ಕೋಶಾವಸ್ಧೆಯನ್ನು ಸೇರುತ್ತದೆ. ಆಗ ಇದರ ಸುತ್ತ ಗಟ್ಟಿಯಾದ ಹೊದಿಕೆ ಬೆಳೆಯುತ್ತದೆ. ಅನಂತರ ಕೋಶದಿಂದ ಮರಿನೊಣ ಹೊರಬರುತ್ತದೆ.

ಬಯಲಲ್ಲಿ ಮಲಭೋಜನ ಮಾಡಿ, ಬಾಯಿ, ಕಾಲುಗಳಿಗೆ ಮಲವನ್ನು ಮೆತ್ತಿಕೊಂಡು ಬಂದು ಅಡಿಗೆ ಪದಾರ್ಥಗಳ ಮೇಲೆ ಕುಳಿತು. ರೋಗಾಣುಮಿಶ್ರಿತ ಲಾಲಾರಸವನ್ನು ವಾಂತಿ ಮಾಡಿ, ತನ್ನ ಕಾಲುಗಳಿಗೆ ಮೆತ್ತಿಕೊಂಡ ಮಲವನ್ನು ನಮ್ಮ ಆಹಾರಕ್ಕೆ ಬಳಿದು ಹಾರಿಹೋಗುವುದು ಇದರ ಕ್ರಮ.

ಹೀಗೆ ಅಪಾಯಕಾರಿಗಳಾದ ನೊಣಗಳನ್ನು ನಾಶಮಾಡಲು ಅನೇಕ ವಿಧಾನಗಳಿವೆ. ಮೊದಲನೆಯದಾಗಿ ನೊಣ ಮೊಟ್ಟೆಯಿಂದ ಸ್ಥಳಗಳನ್ನು ಆದಷ್ಟು ಸ್ವಚ್ಛಗೊಳಿಸಿ ಮೊಟ್ಟೆಗಳನ್ನೆಲ್ಲ ನಾಶಪಡಿಸುವುದು. ಅಡಿಗೆ ಮನೆ, ಬೀದಿ, ಮಾರುಕಟ್ಟೆ ಮತ್ತು ಕೊಠಡಿಗಳನ್ನು ಯಾವಾಗಲೂ ಗುಡಿಸಿ, ಚೊಕ್ಕಟವಾಗಿಡುವುದು, ಗೊಬ್ಬರದ ಗುಂಡಿಗಳನ್ನು ವಾರಕ್ಕೊಮ್ಮೆ ರಾಸಾಯನಿಕ ಕೀಟನಾಶಕಗಳಿಂದ ಸಿಂಪಡಿಸುವುದು, ಮನೆಯಲ್ಲಿ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮುಚ್ಚಿಡುವುದು, ಅಕಸ್ಮಾತ್ತಾಗಿ ಸಿಹಿ ತಿಂಡಿ, ಹಾಲು ಹಣ್ಣು ಮತ್ತಿತರ ಭಕ್ಷ್ಯಗಳ ಮೇಲೆ ನೊಣಕೂತರೆ, ಅವನ್ನು ಉಪಯೋಗಿಸದಿರುವುದು, ಸಗಣಿ, ಗೊಬ್ಬರಗಳನ್ನು ಮನೆಯ ಮುಂದೆ ಹಾಕದೆ ಅವನ್ನು ದೂರ ಸಾಗಿಸಿ ಮಣ್ಣು ಮುಚ್ಚುವುದು-ಇಂತಹ ಕೆಲವು ವಿಧಾನಗಳು. (ಎಂ.ಎನ್.ವಿ.ಐ.)