ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೊಣಹಿಡುಕ

ವಿಕಿಸೋರ್ಸ್ದಿಂದ

ನೊಣಹಿಡುಕ - ಪ್ಯಾಸೆರಿಫಾರ್ಮೀಸ್ ಗಣದ ಮಸಿಕ್ಯಾಪಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಪಕ್ಷಿಗಳ ಸಾಮಾನ್ಯ ಹೆಸರು (ಫ್ಲೈಕ್ಯಾಚರ್). ಹಲವಾರು ತೆರನ ಕೀಟಗಳನ್ನು ತಿಂದು ಬದುಕುವುದರಿಂದ ಇವಕ್ಕೆ ಈ ಹೆಸರು ಬಂದಿದೆ. ಇವುಗಳಲ್ಲಿ ಸುಮಾರು 379 ಪ್ರಭೇದಗಳುಂಟು. ಇವನ್ನು ನಾಲ್ಕು ಉಪಕುಟುಂಬಗಳಿಗೆ ಸೇರಿಸಲಾಗಿದೆ. ಭಾರತದಲ್ಲಿ ಪ್ಯಾರಡೈಸ್ ನೊಣಹಿಡುಕ (ಟಪ್ರ್ಸಿಪೋನ್ ಪ್ಯಾರಡಿಸಿ), ಟಿಕಲ್ಸ್ ನೊಣಹಿಡುಕ (ಮಸಿಕ್ಯಾಪ ಟಿಕೆಲಿಯೆ). ವರ್ಡಿಟರ್ ನೊಣ ಹಿಡುಕ (ಮಸಿಕ್ಯಾಪ ತ್ಯಾಲಸಿನ) ಮತ್ತು ಬಿಳಿಚುಕ್ಕೆಯ ಬೀಸಣಿಗೆ ಬಾಲದ ನೊಣ ಹಿಡುಕ (ರಿಪಿಡ್ಯೂರ ಆಲೊಲ್ಯಾರಿಸ್) ಎಂಬ ನಾಲ್ಕು ಪ್ರಭೇದಗಳುಂಟು. ಬಹುಪಾಲು ನೊಣಹಿಡುಕಗಳು ಸಣ್ಣಗಾತ್ರದ ಹಕ್ಕಿಗಳು. ದೇಹದ ಉದ್ದ 12.5-25 ಸೆಂ ಮೀ. ಇರುವುದುಂಟು. ಭಾರತದ ಪ್ಯಾರಡೈಸ್ ನೊಣಹಿಡುಕದ ಗಂಡುಹಕ್ಕಿಯಲ್ಲಿ ದೇಹದ ಮೂರರಷ್ಟು ಉದ್ದದ ಬಾಲವುಂಟು. ಅಗಲ ಹಾಗೂ ಚಪ್ಪಟೆಯಾದ ಕೊಕ್ಕು, ಕೊಕ್ಕಿನ ತುದಿ ನಸು ಬಾಗಿರುವುದು. ಮೂಗಿನ ರಂಧ್ರ್ರಗಳ ಬಳಿ ಬಿರುಗೂದಲುಗಳಿರುವುದು. ನೊಣಹಿಡುಕಗಳ ಲಕ್ಷಣಗಳಲ್ಲಿ ಶರೀರದ ಬಣ್ಣದಲ್ಲೂ ವ್ಯತ್ಯಾಸವುಂಟು. ಕೆಲವು ಪ್ರಭೇದಗಳು ಸಾದಾ ಬಣ್ಣವಾಗಿದ್ದರೆ ಇನ್ನು ಕೆಲವು ಕಪ್ಪು, ಬಿಳಿ, ನೀಲಿ, ಹಳದಿ, ಕೆಂಪು ಬಣ್ಣಗಳ ವಿವಿಧ ಮಿಶ್ರಣಗಳಿಂದ ಆಕರ್ಷಕವಾಗಿ ಕಾಣವುದುಂಟು. ಕೆಲವಕ್ಕೆ ನೆತ್ತಿಯ ಮೇಲೆ ಶಿಖೆಯೂ ಇದೆ. ಕೆಲವು ಬಗೆಯ ನೊಣಹಿಡುಕುಗಳ ಮುಖದ ಮೇಲೆ ಹೊಳೆಯುವ ಮಾಂಸಲ ರಚನೆಗಳಿವೆ (ವ್ಯಾಟಲ್). ಇವು ಹಾಡುವ ಹಕ್ಕಿಗಳಲ್ಲ.

ಬಹುಪಾಲು ನೊಣಹಿಡುಕಗಳು ಹಾವಸೆ, ಎಲೆ, ಜೇಡರಬಲೆ ಮುಂತಾದವನ್ನು ಬಳಸಿ ಗೂಡು ರಚಿಸುವುವು. ಕೆಲವು ಬಗೆಗಳು ಮರಗಳ ರೆಂಬೆ ಪೊದೆಗಳಲ್ಲಿ ಗೂಡು ಕಟ್ಟುವುದಾದರೆ, ಇನ್ನು ಕೆಲವು ಮರಗಳ ಪೊಟರೆ, ನದಿದಂಡೆಗಳು, ಕಲ್ಲಿನ ಬೆಟ್ಟಗಳ ಬಿರುಕುಗಳಲ್ಲಿ ಗೂಡು ನಿರ್ಮಿಸುತ್ತವೆ. ಒಂದು ಸಲಕ್ಕೆ 2-7 ಮೊಟ್ಟೆಗಳನ್ನಿಡುವುವು. ಮೊಟ್ಟೆಗಳು ಬಿಳಿ, ಹಸಿರು ಇಲ್ಲವೆ ಮಾಸಲು ಬಣ್ಣದ್ದಾಗಿರುವುವು.

ಮೊಟ್ಟೆಗಳಿಗೆ ಕಾವು ಕೊಡುವ ಕೆಲಸವನ್ನು ಗಂಡು ಹೆಣ್ಣುಗಳೆರಡೂ ಮಾಡುವುದಾದರೂ ಹೆಣ್ಣೇ ಸಾಧಾರಣವಾಗಿ ಈ ಕಾರ್ಯವೆಸಗುತ್ತದೆ. ಕಾವು ಕೊಡುವ ಅವಧಿ 12-14 ದಿನಗಳು.

ನೊಣಹಿಡುಕಗಳ ವ್ಯಾಪ್ತಿ ಆಫ್ರಿಕ, ಏಷ್ಯ ಹಾಗೂ ಇಂಡೊ-ಆಸ್ಟ್ರೇಲಿಯ ವಲಯ.

(ಎಂ.ಎನ್.ಎಚ್‍ಇ.) (ಪರಿಷ್ಕರಣೆ : ಕೆ ಎಸ್ ನವೀನ್)