ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೊಬಲಿ, ಲಿಯೊಪಾಲ್ಡೊ

ವಿಕಿಸೋರ್ಸ್ದಿಂದ

ನೊಬಲಿ, ಲಿಯೊಪಾಲ್ಡೊ 1784-1835. ಇಟಲಿಯ ಭೌತವಿಜ್ಞಾನಿ. ವಿಶ್ವವಿದ್ಯಾಲಯ ಶಿಕ್ಷಣ ದೊರೆತರೂ ನೇರ ಭೌತವಿಜ್ಞಾನಿ ಆಗಲಿಲ್ಲ. ಆರಂಭದಲ್ಲಿ ಸೇನೆಯ ಫಿರಂಗಿ ದಳದಲ್ಲಿ ಅಧಿಕಾರಿಯಾಗಿದ್ದು ಮುಂದೆ ಅದಕ್ಕೆ ರಾಜೀನಾಮೆ ಇತ್ತು ಫ್ಲಾರೆನ್ಸಿನ ವಸ್ತುಸಂಗ್ರಹಾಲಯದಲ್ಲಿ ಭೌತವಿಜ್ಞಾನದ ಪ್ರಾಚಾರ್ಯನಾದ. ವಿಜ್ಞಾನಕ್ಕೆ ಈತನ ಅತಿ ಮುಖ್ಯ ಕೊಡುಗೆಗಳ ಪೈಕಿ ಒಂದೆಂದರೆ ಅಸ್ಥಾಯಿ ವಿದ್ಯುತ್ ಗ್ಯಾಲ್ವನೊಮೀಟರ್ (ಅಸ್ಟ್ಯಾಟಿಕ್ ಗ್ಯಾಲ್ವನೊಮೀಟರ್) ರಚನೆಯನ್ನು ಕುರಿತ ಸೂಚನೆ: ಚಲಿಸುವ ಕಾಂತಮಾದರಿ ವಿದ್ಯುತ್‍ಪ್ರವಾಹದರ್ಶಕಗಳ ಸಂವೇದನಶೀಲತೆಯನ್ನು ಹೆಚ್ಚಿಸಲು ಮತ್ತು ನಿಯಂತ್ರಿಸುವ ಕಾಂತದ ತ್ರಾಣವನ್ನು ಕುಗ್ಗಿಸಲು ಅಸ್ಥಾಯೀ ಯುಗ್ಮವೊಂದರಲ್ಲಿ ಒಂದೇ ಕಾಂತ ಭ್ರಮಣಾಂಕವಿರುವ ಎರಡು ಕಾಂತಗಳನ್ನು ಅವುಗಳ ಅಕ್ಷಗಳು ಸಮಾಂತರವಾಗಿದ್ದು ಅವುಗಳ ಧ್ರುವಗಳು ವಿರುದ್ಧವಾಗಿರುವಂತೆ ಯೋಗ್ಯ ಆಧಾರದ ಮೇಲೆ ನೆಲೆಗೊಳಿಸಲಾಗುವುದು.

ಉಷ್ಣಗುಣಕಾರಿ (ಥರ್ಮೊಮಲ್ಟಿಪ್ಲ್ಯಯರ್) ಉಷ್ಣಪುಂಜವನ್ನು (ಥರ್ಮೊಪೈಲ್) ಮೊತ್ತ ಮೊದಲಿಗೆ ರಚಿಸಿದಾತ ನೊಬಿಲಿ. ಈತನ ಈ ಉಪಕರಣ 1821ರಲ್ಲಿ ಸೀಬೆಕ್ ಶೋಧಿಸಿದ್ದ ಉಷ್ಣವಿದ್ಯುತ್ ಪರಿಣಾಮದ ಮೇಲೆ ಆಧಾರಿತವಾಗಿತ್ತು. ಆ್ಯಂಟಿಮನಿ ಮತ್ತು ಬಿಸ್ಮತ್ ಲೋಹಗಳ ಪಟ್ಟಿಗಳನ್ನು ನೊಬಿಲಿ ಪರ್ಯಾಯವಾಗಿ ಸರಪಣಿಯಂತೆ ಜೋಡಿಸಿ ಅದರ ತುದಿಗಳನ್ನು ಸಂವೇದನಶೀಲ ವಿದ್ಯುತ್‍ಪ್ರವಾಹ ದರ್ಶಕಕ್ಕೆ ಜೋಡಿಸಿದ. ಸಂಧಿಗಳ ಒಂದು ಜೋಡಣೆಯನ್ನು ಬಿಸಿಯಾಗಿಯೂ ಇನ್ನೊಂದು ಜೋಡಣೆಯನ್ನು ತಣ್ಣನಾಗಿಯೂ ಇರಿಸಿದಾಗ ವಿದ್ಯುತ್ ಆ್ಯಂಟಿಮನಿಯಿಂದ ಬಿಸ್ಮತ್ತಿಗೆ ತಣ್ಣಗಿನಕ ಸಂಧಿಯ ಮೂಲಕ ಹಾಯುವುದು. ಮುಂದಕ್ಕೆ ಮೆಲ್ಲೋನಿ ಈ ಉಪಕರಣವನ್ನು ಸುಧಾರಿಸಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ.

ಇಂದು ನೊಬಿಲಿ ವರ್ತುಳಗಳು ಎಂಬ ಹೆಸರಿರುವ ಮತ್ತು ಅಶ್ರಗ ರೋಹಿತದಂತೆ ವರ್ಣಗಳಿರುವ ವರ್ಣಮಯ ತೆಳು ಲೋಹಪೊರೆಗಳನ್ನು ಕುರಿತಂತೆ ನೊಬಿಲಿ 1826ರಲ್ಲಿ ವಿವರಣೆ ನೀಡಿದ ವಿದ್ಯುದ್ರಾಸಾಯನಿಕ ವಿಧಾನಗಳಿಂದ ಈ ಪೊರೆಗಳನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಈತ ಮಾಹಿತಿಗಳನ್ನು ನೀಡಿದ. (ಐ.ವಿ.) ಪರಿಷ್ಕರಣೆ: ಹೆಚ್.ಆರ್.ಆರ್.