ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೊಬೆಲ್, ಆಲ್ಫ್ರೆಡ್ ಬೆರ್ನಾರ್ಡ್

ವಿಕಿಸೋರ್ಸ್ದಿಂದ

ನೊಬೆಲ್, ಆಲ್ಫ್ರೆಡ್ ಬೆರ್ನಾರ್ಡ್ 1833-1896. ಸ್ವೀಡನ್ನಿನ ಉಪಜ್ಞೆಕಾರ, ಮಹಾದಾನಿ, ನೊಬೆಲ್ ಪ್ರತಿಷ್ಠಾನದ ಸ್ಥಾಪಕ. ಶಾಂತಿ, ಸಾಹಿತ್ಯ, ಭೌತವಿಜ್ಞಾನ, ರಸಾಯನವಿಜ್ಞಾನ, ಮತ್ತು ವೈದ್ಯ ಈ ಐದು ಪ್ರಕಾರಗಳಲ್ಲಿ ಪರಮ ಸಿದ್ಧಿಪಡೆದ ಪ್ರತಿಭಾನ್ವಿತರನ್ನು ಪ್ರಪಂಚಾದ್ಯಂತ ಅವರು ಎಲ್ಲೇ ಇದ್ದರೂ ವಾರ್ಷಿಕವಾಗಿ ಆಯ್ದು ಅವರಿಗೆ ನೊಬೆಲ್ ಪಾರಿತೋಷಿಕ ನೀಡಿ ಗೌರವಿಸುವ ಸತ್ಸಂಪ್ರದಾಯದ ಪ್ರವರ್ತಕ. ನೊಬೆಲ್ ಪ್ರಶಸ್ತಿವಿಜೇತ (ಓಐ) ಎಂಬ ಬಿರುದು ಪ್ರತಿಷ್ಠೆಯ ಪ್ರತೀಕ ಎಂದು ವಿದ್ವಜ್ಜನ ಭಾವಿಸಿದ್ದಾರೆ. ಇಂಥ ಬಿರುದನ್ನು ಗಳಿಸಿದ ಮಹಾವ್ಯಕ್ತಿಗಳ ಪೈಕಿ ಈ ಮುಂದಿನವರಿರುವರು; ಎಕ್ಸ್‍ಕಿರಣಗಳ ಆವಿಷ್ಕರ್ತೃ ರಂಟ್‍ಜನ್ (1901), ಪ್ರಥಮ ವಿಜೇತನಿವ; ಗೀತಾಂಜಲಿಯ ಕವಿ ರವೀಂದ್ರನಾಥ ಠಾಕೂರ್ (1913); ರಿಲೆಟಿವಿಟಿ ಸಿದ್ಧಾಂತದ ಮಂಡನಕಾರ ಐನ್‍ಸ್ಟೈನ್ (1921); ರಾಮನ್ ಪರಿಣಾಮದ ಆವಿಷ್ಕರ್ತೃ ಸಿ.ವಿ. ರಾಮನ್ (1930); ಕೃತಕ ಜೀನ್ ಸಂಶ್ಲೇಷಣೆಯನ್ನು ಸಾಧಿಸಿದ ಹರ್‍ಗೋಬಿಂದ್ ಖೊರಾನಾ (1968).

ಆಲ್ಫ್ಪ್ರೆಡ್ಡನ ತಂದೆ ಇಮಾನ್ಯುಯಲ್ ನೊಬೆಲ್ ಸ್ವತ: ಪ್ರಸಿದ್ಧ ಉಪಜ್ಞೆಕಾರ. ಜಲಾಂತರ್ಗಾಮಿಯನ್ನು ನಾಶಪಡಿಸಬಲ್ಲ ಮದ್ದು ಗುಂಡನ್ನು ಇವನು ತಯಾರಿಸಿದ್ದ, ಈತನ ಮೂರನೆಯ ಮಗ ಆಲ್ಫ್ಪ್ರೆಡ್ ಸ್ಟಾಕ್‍ಹೋಮಿನಲ್ಲಿ 1833 ಅಕ್ಟೋಬರ್ 21ರಂದು ಜನಿಸಿದ. 1842ರ ವೇಳೆಗೆ ಇಮಾನ್ಯುಯಲ್ ಸಂಸಾರ ಸಮೇತ ರಷ್ಯಕ್ಕೆ ವಲಸೆ ಹೋದ್ದರಿಂದ ಆಲ್ಫ್ಪ್ರೆಡನ ಬಾಲ್ಯ ವಿದ್ಯಾಭ್ಯಾಸ ಆ ದೇಶದಲ್ಲಿ ಖಾಸಗಿ ಉಪಾಧ್ಯಾಯರ ಮೂಲಕ ನಡೆಯಿತು. ಪ್ರೌಢ ಅಧ್ಯಯನಕ್ಕಾಗಿ ಇವನನ್ನು ಅಮೆರಿಕಕ್ಕೆ ಕಳಿಸಲಾಯಿತು (1850).

ಸ್ವೀಡನ್ ಸಂಜಾತ ಎರಿಕ್‍ಸನ್ (1803-1889) ಎಂಬ ಪ್ರಸಿದ್ದ ನೌಕೋಪಜ್ಞೆಕಾರನ ಶಿಷ್ಯನಾಗಿ ಅಲ್ಫ್ರೆಡ್ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಿ ರಷ್ಯಕ್ಕೆ ಮರಳಿದ. ಆ ವೇಳೆಗೆ ಇವನ ತಂದೆ ತೀವ್ರ ಸ್ಫೋಟಕಗಳನ್ನು ಕುರಿತ ಹೆಚ್ಚಿನ ಸಂಶೋಧನೆಯಲ್ಲಿ ನಿರತನಾಗಿದ್ದ. ನೈಟ್ರಿಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣಕ್ಕೆ ಗ್ಲಿಸರೀನನ್ನು ನಿಧಾನವಾಗಿ ಸೇರಿಸಿದಾಗ ದೊರೆಯುವ ನೈಟ್ರೂಗ್ಲಿಸರೀನ್ ಎಂಬ ಪದಾರ್ಥಕ್ಕೆ ವಿಶೇಷ ಸ್ಫೋಟಕ ಗುಣವಿದೆಯೆಂದು ಆ ಮೊದಲೇ ಪ್ರಯೋಗ ಮಂದಿರ ತಪಾಸಣೆಗಳಿಂದ ರುಜುವಾತಾಗಿತ್ತು. ನೈಟ್ರೊಗ್ಲಿಸರೀನನ್ನು ಭೂರಿಗಾತ್ರದಲ್ಲಿ ತಯಾರಿಸುವುದು ಹಿರಿಯ ನೊಬೆಲನ ಆಶಯ. ಇದನ್ನು ಗಮನಿಸಿದ ಕಿರಿಯ ನೊಬೆಲನ ಮುಂದೆ ಹಲವಾರು ಹೊಸ ಕನಸುಗಳು ಸುಳಿದುವು. ಅವನು ಅಮೆರಿಕದಲ್ಲಿ ಇದ್ದಾಗ ಅಗಾಧವಾಗಿ ಹರಡಿಹೋಗಿದ್ದ ಕನ್ನೆನೆಲವನ್ನು ಕಂಡಿದ್ದ; ಅದರಲ್ಲಿ ಹುದುಗಿದ್ದ ಸಂಪನ್ಮೂಲಗಳಿಗೆ ಮಿತಿ ಇರಲಿಲ್ಲ; ಅವನ್ನು ಜನೋಪಯೋಗಕ್ಕಾಗಿ ಹಚ್ಚಲು ಅಲ್ಲಿದ್ದ ವಿರಳ ಜನಸಂಖ್ಯೆ ಅಪಾರ ಸ್ನಾಯುತ್ರಾಣವನ್ನು ವೆಚ್ಚಮಾಡಬೇಕಾಗಿತ್ತು: ಅಂದರೆ ಜನ ದೈಹಿಕವಾಗಿ ಶ್ರಮಿಸಿದ ವಿನಾ ನಿಸರ್ಗದ ಸಮೃದ್ಧಿ ಅವರ ಉಪಯೋಗಕ್ಕೆ ಒದಗುವಂತಿರಲಿಲ್ಲ. ಇಂಥಲ್ಲಿ ತಂತ್ರವಿದ್ಯೆಯ ಫಲಗಳನ್ನು ವ್ಯವಸ್ಥಿತವಾಗಿ ನಿಸರ್ಗಕ್ಕೆ ಅನ್ವಯಿಸುವುದು ಸಾಧ್ಯವಾದರೆ ಕಡಿಮೆ ಸ್ನಾಯುತ್ರಾಣ ವೆಚ್ಚದಲ್ಲಿ ಅಧಿಕಲಾಭ ಪಡೆದು ತನ್ಮೂಲಕ ಜನಹಿತಸಾಧಿಸಬಹುದೆಂದು ಅವನು ನಂಬಿದ. ಬೆಟ್ಟಗುಡ್ಡಗಳನ್ನು ಮಟ್ಟಮಾಡಿ ಹೊಸ ಹರವನ್ನು ಪಡೆಯಬಹುದು, ಸುರಂಗಮಾರ್ಗಗಳನ್ನು ನಿರ್ಮಿಸಿ ಊರಿಂದ ಊರಿಗೆ ಪ್ರಯಾಣವನ್ನು ನೇರಗೊಳಿಸಬಹುದು, ಹೊಸಕಾಲುವೆ ಸರೋವರಗಳನ್ನು ನಿರ್ಮಿಸಿ ನೀರನ್ನು ಬೇಕೆಂದಲ್ಲಿಗೆ ಒಯ್ಯಬಹುದು. ಇವೆಲ್ಲ ಕಾಯಗಳಲ್ಲಿ ಸ್ಪೋಟಕಗಳು ಕ್ಷಿಪ್ರವಾಗಿಯೂ ಪರಿಣಾಮಕಾರಿಯಾಗಿಯೂ ಉದ್ದೇಶನಿರ್ವಹಿಸಬಲ್ಲವು.

ಈ ತೆರನಾದ ಪ್ರೇರಣೆಯಿಂದ ಉದ್ದೀಪಿತವಾದ ಕಿರಿಯ ನೊಬೆಲ್ 1859ರಲ್ಲಿ ಸ್ವೀಡನ್ನಿಗೆ ಮರಳಿ ನೈಟ್ರೂಗ್ಲಿಸರೀನಿನ ಭೂರಿ ತಯಾರಿಕೆಗೆ ಕೈಹಾಕಿದ. ಕಾಳ್ಗಿಚ್ಚಿನ ಹುಚ್ಚು ಬಲದೊಡನೆ ನಡೆಸಿದ ಸೆಣಸಾಟವಿದು: ಆ ತನಕ ಅರಿಯದಿದ್ದ ಅಗಾಧ ಶಕ್ತಿ ಅತಿಕ್ಷಿಪ್ರ ವೇಳೆಯಲ್ಲಿ ಸ್ಫೋಟಿಸುವಾಗ ಅದರ ಸನಿಹದಲ್ಲಿರುವ ಕೆಲಸಗಾರರಿಗೆ ರಕ್ಷಣೆ ಒದಗಿಸುವುದು ಹೇಗೆ? ಈ ಶಕ್ತಿಯನ್ನು ತಡೆಹಿಡಿದು ಬೇಕೆಂದಾಗ ಅಪಾಯ ರಹಿತವಾಗಿ ಬಿಡುಗಡೆ ಮಾಡುವುದು ಹೇಗೆ? ನೊಬೆಲ್ ಎದುರಿಸಬೇಕಾದದ್ದು ಇಂಥ ಬದುಕು-ಸಾವು ನಡುವಿನ ಸವಾಲುಗಳನ್ನು. ಅವನ ಪ್ರಯೋಗಗಳ ವೇಳೆ ಘಟಿಸಿದ ಸಣ್ಣ ಪುಟ್ಟ ಅವಗಡಗಳಿಗೆ ಮಿತಿ ಇರಲಿಲ್ಲ. 1864ರಲ್ಲಿ ಸಂಭವಿಸಿದ ಭೀಕರಾಪಘಾತ ಅವನ ಕಾರ್ಖಾನೆಯನ್ನೇ ನಿರ್ನಾಮಗೊಳಿಸಿತು. ನೊಬೆಲನ ಸಹೋದರನನ್ನೂ ಆಹುತಿ ತೆಗೆದುಕೊಂಡಿತು. ಸ್ವೀಡನ್ನಿನ ಸರ್ಕಾರ ಕಾರ್ಖಾನೆಯ ಪುನರುತ್ಥಾನಕ್ಕೆ ಪರವಾನಿಗೆ ಕೊಡಲಿಲ್ಲ. ಇವನೊಬ್ಬ ತಲೆಹೋಕ ವಿಜ್ಞಾನಿ, ಯಮದೂತ ಎಂಬುದಾಗಿ ಜನ ನೊಬೆಲನನ್ನು ತಿರಸ್ಕರಿಸಿದರು. ನೊಬೆಲ್ ಮಾತ್ರ ಧೃತಿಗೆಡಲಿಲ್ಲ. ಉದ್ದೇಶದಿಂದ ವಿಚಲಿತನೂ ಆಗಲಿಲ್ಲ. ನೈಟ್ರೂಗ್ಲಿಸರೀನನ್ನು ಪಳಗಿಸುವುದು ಹೇಗೆ ಎಂಬುದೇ ಆಗ ಅವನ ಮುಂದಿದ್ದ ದಿಟ್ಟ ಸವಾಲು. ಅವನ ಪ್ರಯೋಗಮಂದಿರವಾಗ ವಿಶಾಲ ಸರೋವರದ ನಡುವೆ ತೇಲುತ್ತಿದ್ದ ಓಡ. ಸ್ಫೋಟನೆಯಿಂದ ಸಂಭವಿಸಬಹುದಾದ ಅಪಾಯವನ್ನು ಕನಿಷ್ಠಮಿತಿಯಲ್ಲಿ ಇಡಲು ಈ ಉಪಾಯ. ಪ್ರಯೋಗ ಸಾಗಿದಂತೆ. 1866ರಲ್ಲಿ, ಆಕಸ್ಮಿಕವೊಂದು ಘಟಿಸಿತು. ನೈಟ್ರೂಗ್ಲಿಸರೀನ್‍ಭರಿತ ಪೀಪಾಯಿ ಒಂದರಿಂದ ಆ ದ್ರವ ಒಸರಿತ್ತು; ಆದರೆ ಇದನ್ನು ಪೀಪಾಯಿಯ ಕಟ್ಟುವಸ್ತು (ಪ್ಯಾಕಿಂಗ್) ಹೀರಿಕೊಂಡಿತ್ತು. ಸ್ಫೋಟವಾಗದೆ ಎಲ್ಲವೂ ಶಾಂತವಾಗಿದ್ದುದನ್ನು ಕಂಡು ಆಶ್ಚರ್ಯಚಕಿತನಾದ ನೊಬೆಲ್ ಕಟ್ಟು ವಸ್ತುವನ್ನು ವಿಶ್ಲೇಷಿಸಿ ನೋಡಿದ. ಅದು ಶೈವಲ ಮೃತ್ತಿಕೆ (ಡೈ ಆ್ಯಟೋಮೇಷಸ್ ಅರ್ತ್) ಆಗಿತ್ತು. ನೈಟ್ರೋಗ್ಲಿಸರೀನ್ ಒಸರಿ ಇದರ ಮೇಲೆ ಪಸರಿಸಿದ್ದರೂ ಈ ಶೈವಲ ಮೃತ್ತಿಕೆ ಒಣಗಿಕೊಂಡೇ ಇದ್ದುದು ನೊಬೆಲನ ಲಕ್ಷ್ಯಕ್ಕೆ ಬಂತು.

ಭೀಕರ ವಿನಾಶಕರ ಶಕ್ತಿಗೆ ಕಡಿವಾಣ ತೊಡಿಸಿ ಪಳಗಿಸುವ ವಿಧಾನ ನೊಬೆಲನಿಗೆ ಆಗ ಸ್ಫುರಿಸಿತು: ನೈಟ್ರೂಗ್ಲಿಸರೀನ್/ಶೈವಲಮೃತ್ತಿಕೆ ಸಂಯೋಜನೆಯ ಮೇಲೆ ಅವನು ಪ್ರಯೋಗ ನಡೆಸಿ ನೈಟ್ರೊಗ್ಲಿಸರೀನ್ ಸ್ಫೋಟನೆಯನ್ನು ವಿಸ್ಫೋಟ ತೊಪ್ಪಿಯೊಂದರಿಂದ (ಡಿಟೋನೇಟಿಂಗ್ ಕ್ಯಾಪ್) ಯಶ್ವಸ್ವಿಯಾಗಿ ತಡೆಹಿಡಿದಿಡಬಹುದೆಂದು ಕಂಡುಕೊಂಡ. ಅಂದರೆ ವಿಸ್ಫೋಟ ತೊಪ್ಪಿಯಿಂದ ರಕ್ಷಿತವಾದ ನೈಟ್ರೊಗ್ಲಿಸರೀನಿನೊಡನೆ ಎಂಥ ನಿರ್ಲಕ್ಷ್ಯ ವರ್ತನೆಯೂ ಅಪಾಯಕಾರಿ ಆಗದು. ಒಮ್ಮೆ ಈ ತೊಪ್ಪಿಯನ್ನು ಕಳಚಿಹಾಕಿತೋ ಆ ದೈತ್ಯಶಕ್ತಿ ಆ ಕ್ಷಣವೇ ಆಸ್ಫೋಟಿಸಬಲ್ಲದು ಎಂದಾಯಿತು. ಈ ಹೊಸ ಸಂಯೋಜನೆಯನ್ನು ನೊಬೆಲ್ ಡೈನಮೈಟ್ ಎಂದು ಹೆಸರಿಸಿದ. ಮುಂದೆ ಸುರಕ್ಷಿತ ಡೈನಮೈಟಿನ ಕಡ್ಡಿಗಳು ಬಳಕೆಗೆ ಬಂದು ಅಪಾಯಕಾರೀ ನೈಟ್ರೋಗ್ಲಿಸರೀನನ್ನು ನೇಪಥ್ಯಕ್ಕೆ ಸರಿಸಿದುವು.

ಸ್ಫೋಟಿಸಬಲ್ಲ ಜಿಲಾಟಿನನ್ನು ಸಹ ನೊಬೆಲ್ ಉಪಜ್ಞಿಸಿದ. ಸ್ಫೋಟಕಗಳ ಮಾರುಕಟ್ಟೆ ವ್ಯವಹಾರದಿಂದ ಅವನ ಅದೃಷ್ಟ ಕುದುರಿ ಅವನು ಕ್ಷಿಪ್ರ ಕಾಲದಲ್ಲೇ ಅಪಾರ ಸಂಪತ್ತನ್ನುಗಳಿಸಿದ. ರಷ್ಯಾದೇಶದಲ್ಲಿಯ ಬಾಕು ಖನಿಜ ತೈಲಬಾವಿಗಳನ್ನು ತೋಡುವ ಉದ್ಯಮದಲ್ಲಿ ನೊಬೆಲನ ಕನಸು ನಿಜಕ್ಕೂ ನನಸಾಯಿತು. ಅಮೆರಿಕದ ವ್ಯಾಪಕ ಅಭಿವರ್ಧನೆಯಲ್ಲಿ ಕೂಡ ಡೈನಮೈಟುಗಳ ಬಳಕೆ ಲಾಭದಾಯಕವಾಗಿತ್ತು.

ಡೈನಮೈಟಿನ ವಿನಾಶಕರ ಸಾಮಥ್ರ್ಯ ಶಾಂತಿವಲಯಕ್ಕೆ ಮಾತ್ರ ಸೀಮಿತವಾಗಿದ್ದರೆ ಆದರ್ಶಪ್ರಿಯ ಸಾತ್ತ್ವಿಕ ನೊಬೆಲನಿಗೆ ಪರಮ ಸಂತೃಪ್ತಿ ಲಭಿಸಿರುತ್ತಿತ್ತು. ಆದರೆ ಗುಟುಕುಗೂಳಿ ರಾಜಕಾರಣಿಗಳ ಹಾಗೂ ಕಾಳೆಗಡೇಗೆ ಸೇನಾನಾಯಕರ ಸ್ನಾಯುಗಳಿಗೆ ಡೈನಮೈಟ್ ನವತ್ರಾಣವನ್ನೂ ಅರ್ಥವನ್ನೂ ಒದಗಿಸಿತ್ತು; ಮಾನವ ವಿನಾಶಕ ಮಾರಣ ಹೋಮಕ್ಕೆ ಹೊಸ ಆಯಾಮವನ್ನು ನೀಡಿತ್ತು. ಯುದ್ಧವೀಗ ಸ್ಫೋಟಕಗಳ ಆಡುಂಬೊಲವಾಗಿ ಅಪಾರ ಜನ ಧನ ನಾಶವಾಗಿ ಪ್ರಪಂಚ ಶಾಂತಿಪ್ರಿಯ ನೊಬೆಲನ್ನು ಈ ಹರಾಕಿರಿಯ ಪ್ರವರ್ತಕನೆಂದು ಸಂಶಯ ಹಾಗೂ ತಿರಸ್ಕಾರ ದೃಷ್ಟಿಯಿಂದ ನೋಡುವಂತಾಯಿತು. ಯುದ್ಧದಲ್ಲಿ ಸ್ಫೋಟಕಗಳ ಬಳಕೆಯಿಂದ ಆಗುವ ಸರ್ವನಾಶವನ್ನು ಗಮನಿಸಿದ ರಾಜಕಾರಣಿಗಳು ವ್ಯಾಜ್ಯಗಳ ಪರಿಹಾರಕ್ಕಾಗಿ ಯುದ್ಧವನ್ನು ಪಣವಾಗಿ ಒಡ್ಡುವ ಪರಿಪಾಟವನ್ನೇ ತೊರೆದಾರು ಎಂದು ಭಾವಿಸಿದ್ದ ನೊಬೆಲ್ ಈಗ ತದ್ವಿರುದ್ಧ ಪರಿಸ್ಧಿತಿ ತಲೆದೋರಿದ್ದನ್ನು ಕಂಡು ವಿಹ್ವಲನಾದ. ಆದರೆ ಡೈನಮೈಟ್ ಸಿಡಿತ ಈಗ ಅವನ ಹಿಡಿತದಲ್ಲಿ ಇರಲಿಲ್ಲ. ಏಕೆಂದರೆ ಅದರ ಸುರುಸುರು ಬತ್ತಿಯ ಹಿಡಿತ ಅವನ ಕೈಯಿಂದ ಜಗುಳಿ ಹೋಗಿತ್ತು.

ಅಗಾಧ ಶ್ರೀಮಂತನಾಗಿದ್ದ ಏಕಾಂಗಿ ನೊಬೆಲ್ ಸಾಯುವಾಗ 92 ಲಕ್ಷ ಡಾಲರುಗಳ ಅಪಾರ ನಿಧಿಯನ್ನು ಬಿಟ್ಟುಹೋದ. ಆತನ ಉಯಿಲಿನ ಪ್ರಕಾರ ಈ ಮೂಲಧನದಿಂದ ನೊಬೆಲ್ ಪ್ರತಿಷ್ಠಾನವನ್ನು ಸ್ಧಾಪಿಸಲಾಯಿತು. 1896 ಡಿಸೆಂಬರ್ 10ರಂದು ನೊಬೆಲ್ ಇಟಲಿಯಲ್ಲಿ ಮರಣಹೊಂದಿದ. ಅವನ ಉಯಿಲು ಕಾರ್ಯರೂಪಕ್ಕೆ ಬರಲು ಮತ್ತೆ ಐದು ವರ್ಷಗಳು ಬೇಕಾದುವು. ಹೀಗಾಗಿ ಮೊದಲ ನೊಬೆಲ್ ಪಾರಿತೋಷಿಕ 1901ರಲ್ಲಿ ವಿತರಣೆ ಆಯಿತು. (ಕೆ.ಎಲ್.ಎಂಎ.)