ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೊರೈಟ್

ವಿಕಿಸೋರ್ಸ್ದಿಂದ

ನೊರೈಟ್ - ಗ್ಯಾಬ್ರೋ ಶ್ರೇಣಿಗಳ ಒಂದು ಅಗ್ನಿಶಿಲೆ, ಸಾಮಾನ್ಯವಾಗಿ ಡೈಕ್ ರೂಪದಲ್ಲಿ ದೊರೆಯುವುದು. ಇದರಲ್ಲಿ ಕ್ಲೈನೊಪೈರಾಕ್ಸಿನ್ ಖನಿಜಗಳಿಗಿಂತ ಅಧಿಕ ಮೊತ್ತದಲ್ಲಿ ಹೈಪರ್‍ಸ್ತೀನ್ ಖನಿಜ ಉಂಟು. ಸಾಧಾರಣ ಗ್ಯಾಬ್ರೊ ಶಿಲೆಯಲ್ಲಿ ಪ್ರಮುಖವಾಗಿ ಲ್ಯಾಬ್ರಡೊರೈಟ್ ಮತ್ತು ಅಗೈಟ್ ಅಥವಾ ಡಯೋಲೇಜ್ ಖನಿಜ ಇರುವುದು. ನೊರೈಟ್ ಶಿಲೆಯಲ್ಲಿ ಬೆಣಚಿನ ಅಂಶ (ಸಿಲಿಕಾ) ಶೇಕಡ 10 ಭಾಗಕ್ಕಿಂತ ಅಧಿಕವಾಗಿದ್ದರೆ ಅದನ್ನು ಬೆಣಚು ನೊರೈಟ್ ಎನ್ನಲಾಗುವುದು. ಸಿಲಿಕಾ ಅಂಶ ಕಡಿಮೆ ಇರುವ ಶಿಲೆಗಳನ್ನು ಗ್ಯಾಬ್ರೊಶ್ರೇಣಿಯ ಬೆಣಚುಳ್ಳು ಶಿಲೆ ಎಂಬ ಸಾಮಾನ್ಯ ಹೆಸರಿನಿಂದ ಕರೆಯಲಾಗುವುದು. ಬಣ್ಣವನ್ನು ಅವಲಂಬಿಸಿ ನೊರೈಟ್ ಶಿಲೆಯನ್ನು ಕಪ್ಪು, ಮಧ್ಯಮ ಹಾಗೂ ಬಿಳಿ ನೊರೈಟ್ ಎಂದು ವರ್ಗೀಕರಿಸಲಾಗಿದೆ. ಅಗ್ನಿಶಿಲೆಗಳ ವರ್ಗೀಕರಣದಲ್ಲಿ ವರ್ಣಭೇದವೂ ಒಂದು ಪ್ರಮುಖ ಅಂಶ. ನೊರೈಟಿನ ವರ್ಣಸೂಚಿ 70ಕ್ಕೆ ತಲಪಿದರೆ ಅಂಥ ನೊರೈಟ್ ಕಪ್ಪು ವರ್ಣದ ಗುಂಪಿಗೆ ಸೇರುತ್ತದೆ. (ಟಿ.ಆರ್.ಎ.)