ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೋಮ್ ಚಾಮ್ಸ್ಕಿ

ವಿಕಿಸೋರ್ಸ್ದಿಂದ

ನೋಮ್ ಚಾಮ್‍ಸ್ಕಿ:- 1928- ಭಾಷಾಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಮನಃಶಾಸ್ತ್ರ ಕ್ಷೇತ್ರಗಳಲ್ಲಿ ವಿಶಿಷ್ಟ ಕೆಲಸ ಮಾಡಿರುವ ವಿದ್ವಾಂಸ. ಹುಟ್ಟಿದ್ದು ಫಿಲಿಡೆಲ್ಫಿಯದಲ್ಲಿ. ಅಲ್ಲಿನ ಸೆಂಟ್ರಲ್ ಹೈನಲ್ಲಿ ಸ್ನಾತಕ ಪದವಿಗಳಿಸಿ (1945) ಪೆನ್ಸಿಲ್‍ವೇನಿಯ ವಿಶ್ವವಿದ್ಯಾನಿಲಯದಲ್ಲಿ ಭಾಷಾಶಾಸ್ತ್ರ, ಗಣಿತ ಮತ್ತು ತತ್ತ್ವಶಾಸ್ತ್ರಗಳನ್ನು ಅಭ್ಯಾಸ ಮಾಡಿ ಪಿ.ಎಚ್‍ಡಿ. ಪದವಿಯನ್ನು ಅದೇ ವಿಶ್ವವಿದ್ಯಾನಿಲಯದಲ್ಲಿ ಪಡೆದ. ಪೆನ್ಸಿಲ್‍ವೇನಿಯದಲ್ಲಿ ಬ್ಲೂಮ್‍ಫೀಲ್ಡ್‍ನ ಅನಂತರ ಮೇಧಾವಿ ರಚನಾತ್ಮಕ ಭಾಷಾತಜ್ಞ ಮತ್ತು ಕ್ರಿಯಾತ್ಮಕ ವಿಚಾರವಾದಿ ಎನಿಸಿಕೊಂಡ ಜೆಲಿಗ್ ಹ್ಯಾರಿಸ್ಸನ ಪ್ರಭಾವಕ್ಕೆ ಒಳಗಾದ. 1965ರಿಂದ ಎಂಐಟಿಯಲ್ಲಿ ಅಧ್ಯಾಪಕನಾಗಿದ್ದನಲ್ಲದೆ ಅಲ್ಲಿ ಆಧುನಿಕ ಭಾಷೆಗಳ ಮತ್ತು ಭಾಷಾಶಾಸ್ತ್ರಗಳ ವಿಭಾಗದ ಮುಖ್ಯಸ್ಥನಾಗಿದ್ದಾನೆ.

ಚಾಮ್‍ಸ್ಕಿ ಒಬ್ಬ ಸಂಪ್ರದಾಯ ರಚನಾತ್ಮಕ ಭಾಷಾತಜ್ಞನಂತೆ ತನ್ನ ಭಾಷಾಶಾಸ್ತ್ರ ಜೀವನವನ್ನು ಪ್ರಾರಂಭಿಸಿದನಾದರೂ ಕ್ಷಿಪ್ರದಲ್ಲಿಯೆ ಅದರ ವಿರುದ್ಧ ಬಂಡಾಯವೆದ್ದು ಅದಕ್ಕೆ ಪ್ರತಿಯಾಗಿ ತನ್ನ ರೂಪಾಂತರಣ ಉತ್ಪಾದನಾತ್ಮಕ ವ್ಯಾಕರಣ ಎಂಬ ಬೇರೆ ಒಂದು ಸಿದ್ಧಾಂತವನ್ನು ಮುಂದಿಟ್ಟು ವಾಕ್ಯಾತ್ಮಕ ರಚನೆಗಳು (1957) ಎಂಬ ಪುಸ್ತಕವನ್ನು ಪ್ರಕಟಿಸಿದ. ವಾಕ್ಯ ಸಿದ್ಧಾಂತದ ಹಲವು ಮುಖಗಳು (1965) ಎಂಬ ಇವನ ಗ್ರಂಥ ಇವನ ಸಿದ್ಧಾಂತಕ್ಕೆ ಒಂದು ಚೌಕಟ್ಟನ್ನು ಒದಗಿಸಿತು. ರೂಪಾಂತರಣ ಉತ್ಪಾದನಾತ್ಮಕ ವ್ಯಾಕರಣದ (ಚಾಮ್‍ಸ್ಕಿ, 1971) ವಾಕ್ಯಾತ್ಮಕ ಮತ್ತು ಅರ್ಧಘಟಕಗಳ ನಡುವಿನ ಸಂಬಂಧವನ್ನು ಪುನಃ ನಿರೂಪಿಸಲು ಪ್ರೌಢಸಿದ್ಧಾಂತ ಮತ್ತಷ್ಟು ಬದಲಾವಣೆಗೊಳಗಾಯಿತು.

ಚಾಮ್‍ಸ್ಕಿ ಸಿದ್ಧಾಂತ ಭಾಷೆಯ ಸೃಜನಾತ್ಮಕ ಉಪಯೋಗವನ್ನು ಕುರಿತದ್ದಾಗಿದೆ. ಹೀಗೆ ಭಾಷೆಯ ಸೃಜನಶೀಲತೆಯ ಬಗ್ಗೆ ಹೇಳುವ ನಿಯಮಕ್ಕೆ ಸಿದ್ದಾಂತದಲ್ಲಿ ಆಧ್ಯಾತ್ಮೀಯ ಸ್ತರವನ್ನು ನೀಡಲಾಗಿದೆ.

ಇವನ ಪ್ರೌಢ ಸಿದ್ಧಾಂತದ ಪ್ರಕಾರ ವ್ಯಾಕರಣ ಮೂರು ಘಟಕಗಳಿಂದ ಕೂಡಿರುತ್ತದೆ: ವಾಕ್ಯಾತ್ಮಕ ಘಟಕ, ಅರ್ಥಘಟಕ ಮತ್ತು ಧ್ವನಿಮಾತ್ಮಕ ಘಟಕ.

ಪರಿಶೋಧನೆ, ನಿರೂಪಣೆ, ವಿವರಣೆ-ಈ ಮೂರು ಅನುರೂಪ ಸ್ತರಗಳಲ್ಲಿ ವ್ಯಾಕರಣ ಮೌಲ್ಯಮಾಪನ ಮಾಡಬಹುದು ಎಂದು ಚಾಮ್‍ಸ್ಕಿ ಸಿದ್ಧಾಂತ ತಿಳಿಸುತ್ತದೆ. ಇಲ್ಲಿ ಪ್ರತಿಯೊಂದು ಸ್ತರವೂ ಹಿಂದಿನ ಸ್ತರದ ಮುಂದುವರಿಕೆಯೇ ಆಗಿದೆ.

ಈಗ ಚಾಮ್‍ಸ್ಕಿಯ ಭಾಷಾಶಾಸ್ತ್ರ ಸಿದ್ಧಾಂತವನ್ನು ಅಧರಿಸಿ ನಿಂತಿರುವ ಕೆಲವು ತಾತ್ತ್ವಿಕ ಚಿಂತನೆಗಳನ್ನು ಗಮನಿಸಬಹುದು. ಡೇಕಾರ್ಟ್, ಕಾಂಟ್, ವೂಂಟ್, ಲೈಬ್ನಿಟ್ಸ್ ಮತ್ತು ಹಂಬೋಟ್ಟ್ಸ್ ಅವರ ವೈಚಾರಿಕ ಸಂಪ್ರದಾಯ ಚಾಮ್‍ಸ್ಕಿ ಮತ್ತು ಅವರ ಸಹೋದ್ಯೋಗಿಗಳಿಂದ ಮುಂದುವರಿಸಲ್ಪಟ್ಟಿತು. ತನ್ನ ಕಾರ್ಟೀಸಿಯನ್ ಭಾಷಾಶಾಸ್ತ್ರ ಎಂಬ ಗ್ರಂಥದಲ್ಲಿ ಚಾಮ್‍ಸ್ಕಿ ಅಧುನಿಕ ಭಾಷಾಶಾಸ್ತ್ರವನ್ನು 17 ಮತ್ತು 18ನೆಯ ಶತಮಾನದ ವೈಚಾರಿಕ ತತ್ತ್ವಜ್ಞಾನದೊಂದಿಗೆ ಬೆಸೆದಿದ್ದಾನೆ. ಚಾಮ್‍ಸ್ಕಿ ತೀವ್ರ ಮನಸ್ಸಿನ ಸ್ಥಿತಿಗೆ (ಪರಂಪರಾಗತ ಅಭಿಪ್ರಾಯಗಳಿಗೆ) ಬದ್ಧವಾಗಿದ್ದಾನೆ. ವ್ಯಕ್ತಿಯೊಬ್ಬನ ಪರಿಸರದ ಪರಿಣಾಮದಿಂದಾಗಿ, ಬಹುಪಾಲು, ಆಕಸ್ಮಿಕವಾಗಿ ಭಾಷೆ ಹುಟ್ಟಿತೆಂಬುದಕ್ಕಿಂತ, ಭಾಷೆಯ ಅನಿರ್ವಚನೀಯ ಲಕ್ಪ್ಷಣಗಳು ಮನುಷ್ಯಸ್ವಭಾವದ ಒಂದು ಅಂಗವೆಂದು ವಿವರಿಸಲು ಸಾಧ್ಯವೆಂದು ಅಭಿಪ್ರಾಯಪಡುತ್ತಾನೆ. ಭಾಷಾಸಿದ್ಧಾಂತ ಮನುಷ್ಯನ ಮನಸ್ಸಿನ ಒಂದು ಭಾಗವಾಗಿರಬೇಕೆಂದು ಬಲವಾಗಿ ವಾದಿಸುತ್ತಾನೆ. ಎಲ್ಲ ದೃಷ್ಟಿಗಳಿಂದಲೂ ಭಾಷೆಯ ನಿಜವಾದ ಹಕ್ಕುದಾರರಾದ ಮನುಷ್ಯರು ಭಾಷಾ ಸಿದ್ಧಾಂತದ ವಿವರಣಾತ್ಮಕವಾದ ಮತ್ತು ಇಂದ್ರಿಯಾನುಭವದ ಕ್ಷೇತ್ರವನ್ನು ರಚಿಸಬೇಕಾಗುತ್ತದೆ. ಅವನ ಅಭಿಪ್ರಾಯದ ಪ್ರಕಾರ ಮಾನಸಿಕ ತಳಹದಿಯಿಲ್ಲದ ಭಾಷಾ ಸಿದ್ಧಾಂತಗಳು ಅಂತಿಮವಾಗಿ ಯಾದೃಚ್ಛಿಕವಾಗೇ ಉಳಿಯುತ್ತವೆ. ಯಾಕೆಂದರೆ ಅವು ಮಾತನಾಡುವವನ ಭಾಷಾಸಾಮಥ್ರ್ಯವನ್ನು ವಿವರಿಸಲಾರವು. ಈ ರೀತಿ ಚಾಮ್‍ಸ್ಕಿಯ ತಾತ್ತ್ವಿಕ ನಿಲುವು (ಮಾನಸಿಕ ಮತ್ತು ವೈಚಾರಿಕ) ಅವನ ಸಿದ್ಧಾಂತದ ಭಾಷಾಪ್ರಮಾಣಶಾಸ್ತ್ರವನ್ನು ಸ್ಥಿರಪಡಿಸುತ್ತದೆ.

ಈ ಸಂದರ್ಭದಲ್ಲಿಯೇ ಇವನ ರಾಜಕೀಯ ತತ್ತ್ವವನ್ನು ಕುರಿತು ಹೇಳಲೇ ಬೇಕಾಗಿದೆ. ಇವು ಇವನ ರಾಜಕೀಯ ತತ್ತ್ವ, ಇವನ ವಿಜ್ಞಾನ ತತ್ತ್ವ ಮತ್ತು ಭಾಷಾತತ್ತ್ವದೊಂದಿಗೆ ಸಂಪೂರ್ಣವಾಗಿ ತಾದಾತ್ಮ್ಯ ಹೊಂದಿವೆ.

ದಿ ಪ್ರಾಬ್ಲಮ್ಸ್ ಆಫ್ ನಾಲೆಜ್ ಅಂಡ್ ಫ್ರೀಡಂ (1971), ಅಮೆರಿಕನ್ ವಲ್ರ್ಡ್ ಅಂಡ್ ದಿ ನ್ಯೂಮ್ಯಾನ್ಡರೈನ್ಸ್ (1969) ಈ ಮೊದಲಾದ ಈತನ ಪುಸ್ತಕಗಳು ಈ ಕ್ಷೇತ್ರದಲ್ಲಿ ಮುಖ್ಯವೆನಿಸಿವೆ.

ಚಾರಿತ್ರಿಕ ದೃಷ್ಟಿಯಿಂದ ಚಾಮ್‍ಸ್ಕಿಯ ಕೊಡುಗೆಗಳನ್ನು ಪರೀಕ್ಷಿಸಿದರೆ, ಚಾಮ್‍ಸ್ಕಿ ತತ್ತ್ವಶಾಸ್ತ್ರಜ್ಞರ ಮುಂದೆ ಇರಿಸಿದ ನಿಜವಾದ ಕಾರ್ಯವನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಬಂದ ಎಂದು ಹೇಳಬೇಕಾಗುತ್ತದೆ. ಭಾಷಾಶಾಸ್ತ್ರ ಮತ್ತು ಮನಶ್ಯಾಸ್ತ್ರಕ್ಕೆ ಇವನ ಕೊಡುಗೆಗಳು ಈ ಎರಡು ಶಿಸ್ತುಗಳನ್ನು ಕುರಿತು ಚಿಂತನೆಯ ಮಾರ್ಗವನ್ನೇ ಬದಲಾಯಿಸಿದುವು.

ಚಾಮ್‍ಸ್ಕಿ ಬಿ. ಎಫ್. ಸ್ಕಿನ್ನರನ ಕ್ರಿಯಾರ್ಥಕ ವರ್ತನೆ (ವರ್ಬಲ್ ಬಿಹೇವಿಯರ್) ಬಗ್ಗೆ ಮಾಡಿದ ವಿಮರ್ಶೆ, ಮನಃಶ್ಶಾಸ್ತ್ರದ ಚರಿತ್ರೆಯಲ್ಲಿ ಒಂದು ಮಹತ್ತ್ವದ ಸಂಗತಿಯಾಗಿದೆ. ಮಹತ್ತ್ವ ಪರಿಣಾಮವುಳ್ಳ ಈ ವಿಮರ್ಶೆ ಮಾತ್ರವಲ್ಲದೆ ಚಾಮ್‍ಸ್ಕಿ ವಿಶೇಷವಾಗಿ ವಿಕಾಸಾತ್ಮಕ ಮತ್ತು ಸಂಜ್ಞಾನಾತ್ಮಕ ಮನಶ್ಯಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಕೊಡುಗೆಗಳನ್ನು ಕೊಟ್ಟಿದ್ದಾನೆ.

ತೀವ್ರಮನಸ್ಸಿನ ಸ್ತರ ಮನುಷ್ಯನ ಮನಸ್ಸಿನ ಕಾರ್ಯಗಳಿಗೆ ಬಹಳಷ್ಟು ಅನುಕೂಲಕರವಾದ ದೃಷ್ಟಿಯಲ್ಲಿರುವುದಾದರೆ ಭಾಷೆಯನ್ನು ಅಭ್ಯಾಸ ಮಾಡುವುದು ಒಳ್ಳೆಯದು, ಸಾಮಾನ್ಯ ಮನಶ್ಯಾಸ್ತ್ರದಲ್ಲಿ ಒಂದು ಭಾಷೆಯ ಅಭ್ಯಾಸ ಕೇಂದ್ರ ಸ್ಥಾನದಲ್ಲಿರಬೇಕು-ಎಂದು ಚಾಮ್‍ಸ್ಕಿ ಸೂಚಿಸುತ್ತಾನೆ. ಇವನ ಅಭಿಪ್ರಾಯದ ಪ್ರಕಾರ ಮನಸ್ಸಿನ ಪರಂಪರಾಗತವಾದ ಒಂದು ಗುಣವಾದ ಭಾಷೆಯನ್ನು ಅಭ್ಯಾಸ ಮಾಡುವುದು ಸಂಜ್ಞಾನಾತ್ಮಕ ಮನಶ್ಯಾಸ್ತ್ರದ ಒಂದು ಶಾಖೆಯಾಗುತ್ತದೆ.

ಮನಃಶ್ಶಾಸ್ತ್ರದ ಕ್ಷೇತ್ರದೊಳಗೆ ಮನುಷ್ಯನ ವರ್ತನೆಯ ಕಲಿಕೆ ಮತ್ತು ನಿರ್ವಹಣೆ ಇವುಗಳನ್ನು ಅಭ್ಯಾಸ ಮಾಡಲು ಬರುತ್ತದೆ ಎಂಬುದನ್ನು ಬೇರೆಯಾಗೇನು ಹೇಳಬೇಕಾಗಿಲ್ಲ. ಭಾಷಾವರ್ತನೆಯನ್ನು ಅರಿತುಕೊಳ್ಳುವುದಕ್ಕೆ ವರ್ತನವಾದಿಗಳು ಸಂಜ್ಞಾನಾತ್ಮಕ ಮನಶಾಸ್ತ್ರಜ್ಞರು ಬೇರೆ ಬೇರೆ ಸಿದ್ಧಾಂತಗಳನ್ನು ರೂಪಿಸಿದ್ದಾರೆ. ವೈಚಾರಿಕವಾದಂಥ ಮತ್ತು ಸಾಕಷ್ಟು ಸಾಮಗ್ರಿಗಳಿಂದ ತುಂಬಿರುವ ಹೊಸದೊಂದು ಸಿದ್ಧಾಂತವನ್ನೇ ಚಾಮ್‍ಸ್ಕಿ ಬೆಳಕಿಗೆ ತಂದಿದ್ದಾನೆ. (ವಿ.ಬಿ.ಎಸ್.) (ಪರಿಷ್ಕರಣೆ: ಹೆಚ್.ಆರ್.ಆರ್.)