ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೋವೊಕೆಯ್ನ್‌

ವಿಕಿಸೋರ್ಸ್ದಿಂದ

ನೋವೊಕೆಯ್ನ್- ಪ್ರೊಕೇನ್ ಹೈಡ್ರೊಕ್ಲೋರೈಡನ್ನು ಮೊತ್ತಮೊದಲು ಮಾರಾಟಕ್ಕೆ ಒದಗಿಸಿದಾಗ ಇಟ್ಟ ಹೆಸರಿನ ಅರಿವಳಿಕ. ಸ್ಥಳೀಯ ಅರಿವಳಿಕವಾಗಿ (ಲೋಕಲ್ ಅನೀಸ್ತೆಟಿಕ್). 1884 ರಿಂದಲೂ ಬಳಕೆಯಲ್ಲಿದ್ದು ಬೇಡದ ಅನೇಕ ಪರಿಣಾಮಗಳ ತೊಂದರೆಗಳಿಗೆ ಕಾರಣವಾಗಿದ್ದ ಕೊಕೇನಿಗÉ ಮೊದಲು (1905) ಬದಲಿಯಾಗಿ ಬಂದ. ಅಗ್ಗದ ಬೆಲೆಯ ಕೃತಕ ರಾಸಾಯನಿಕವಿದು. ಸಣ್ಣ ಹರಳಿನ ರೂಪದಲ್ಲಿದೆ. ನೀರಿನಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಕುದಿಸಿದರೆ ಹಾಳಾಗದು. ಇದರ ಪ್ರಭಾವ ಕೇವಲ ಒಂದೆರೆಡು ತಾಸುಗಳಲ್ಲಿ ಇಳಿದು ಹೋಗುವುದೊಂದು ಅನುಕೂಲ. ಲೋಳೆ ಪೊರೆಗಳ ಮೇಲೆ ಇದರ ಪ್ರಭಾವವೇನೂ ಇಲ್ಲ. ಕೊಂಚಕಾಲ ನೋವು ಅರಿವಿಗೆ ಬರದಂತೆ ಮಾಡಲು ಇದನ್ನು ನರಗಳ ಬಳಿ ಚುಚ್ಚಬೇಕು. ಆಗ ಆ ನರಕ್ಕೆ ಸಂಬಂಧಿಸಿದ ಭಾಗದಲ್ಲೆಲ್ಲ ನೋವಿಲ್ಲದಂತಾಗುತ್ತದೆ. ಮುಟ್ಟಿದರೆ ಮರಗಟ್ಟಿದಂತೆ ಇರುವುದು. ಚುಚ್ಚಿದೆಡೆಯಲ್ಲೆಲ್ಲ ಯಾವ ಅರಿವೂ ಗೊತ್ತಾಗದಂತೆ ಮಾಡುವುದು. ಹಲ್ಲು ಕೀಳುವಾಗ ಮತ್ತು ಸಣ್ಣ ಶಸ್ತ್ರಕ್ರಿಯೆ ನಡೆಸುವಾಗ ಇದನ್ನು ಬಳಸುತ್ತಿದ್ದುದ್ದುಂಟು. ಇದಕ್ಕಿಂತಲೂ ಪ್ರಭಾವಯುತ ನಿರಪಾಯಕರ ಬದಲಿಗಳು ಈಗ ಚಾಲ್ತಿಯಲ್ಲಿವೆ. ಅಪರೂಪವಾಗಿ ಆದರೂ ನೋವೂಕೇನಿನ ದುಷ್ಪರಿಣಾಮಗಳು ತೋರುವುದುಂಟು. ಚರ್ಮದ ಅಡಿಯಲ್ಲಿ ಚುಚ್ಚಿದಾಗ ಆಕಸ್ಮಾತ್ತಾಗಿ ಇದು ಸಿರದ ಮೂಲಕ ರಕ್ತದ ಹರಿವನ್ನು ಸೇರಿದರೆ ಮಿದುಳನ್ನು ಬಲವಾಗಿ ಚೋದಿಸುತ್ತದೆ. ಈ ಚೋದನೆ ಅತಿಯಾಗುವುದರಿಂದ. ಕೂಡಲೇ ರೋಗಿಗೆ ಅರಿವು ತಪ್ಪಿ ಬಿದ್ದು ಸೆಳವುಬಂದು ಒದ್ದಾಡುತ್ತಾನೆ. ಅವಯವಗಳ ಚಲನೆ ತೀವ್ರವಾಗಿರುತ್ತದೆ. ಮಿದುಳಿನಲ್ಲಿರುವ, ಗುಂಡಿಗೆಯ ರಕ್ತಪ್ರವಾಹ ನಿಯಂತ್ರಣ ಕೇಂದ್ರಕ್ಕಿಂತ ಮೊದಲೇ, ಉಸಿರಾಟದ ಕೇಂದ್ರ ಸೋಲುವುದು ದೊಡ್ಡ ಅಪಾಯ.

ಚುಚ್ಚಿದ ಮೇಲೆ ಕೇಪಲ 3 ತಾಸುಗಳ ಕಾಲ ಪ್ರಭಾವ ತೋರುವ ಚೊಕ್ಕಪೆನಿಸಿಲಿನ್ನಿನೊಂದಿಗೆ ನೋವೂಕೇನನ್ನು ಸೇರಿಸಿ ಸಂಯುಕ್ತವಾಗಿ ತಯಾರಿಸಿದ ಪ್ರೋಕೇನ್‍ಪೆನಿಸಿಲಿನ್ನನ್ನು ಚುಚ್ಚಿದಾಗ ಸುಮಾರು 8 ತಾಸುಗಳಷ್ಟು ಹೆಚ್ಚು ಹೊತ್ತು ಪೆನಿಸಿಲಿನ್ನಿನ ಪ್ರಭಾವವಿರುವುದು. ಈ ಸಂಯುಕ್ತ ನೀರಿನಲ್ಲಿ ಸುಲಭವಾಗಿ ವಿಲೀನವಾಗದಿರುವುದೇ ಈ ದೀರ್ಘ ಪ್ರಭಾವದ ಕಾರಣ. ನೋವೂಕೇನಿನಿಂದ ಕೆಲವರ ಮೈಗೆ ಒಗ್ಗದ ಪ್ರತಿಕ್ರಿಯೆಗಳು ಕಂಡುಬರಬಹುದು. ಇದು ಗುಂಡಿಗೆಯ ಮೇಲೆ ಕ್ವಿನಿಡೀನಿನಂಥ ಪ್ರಭಾವ ತೋರುವುದರಿಂದ ಗುಂಡಿಗೆಯ ಬಡಿತ ಕ್ರಮಗತಿಯಲ್ಲಿನ ವ್ಯತ್ಯಾಸಗಳಲ್ಲಿ ಇದನ್ನು ಮದ್ದಾಗಿ ಬಳಸಲಾಯಿತು. ಆದರೆ, ಈ ಪ್ರಭಾವ ಕೊಂಚ ಹೊತ್ತು ಮಾತ್ರ ಇರುವುದರಿಂದ, ಇದರ ಬದಲಾಗಿ ಪ್ರೋಕೇನೇಮೈಡ್ ಈಗ ಬಳಕೆಯಲ್ಲಿದೆ, ನೋವೊಕೇನ್ ಜೊತೆಗೆ ಸ್ವಲ್ಪಮದ್ದುಗಳನ್ನು ಬಳಸಿದರೆ ಸ್ವಲ್ಪಮದ್ದು ಕೆಲಸಕ್ಕೆ ಬಾರದಂತಾಗುವುದು, ಇವೆರಡರ ರಾಸಾಯನಿಕ ರಚನೆಯಲ್ಲಿ ಸಾಮ್ಯ ಇರುವುದೇ ಇದರ ಕಾರಣ. (ಡಿ.ಎಸ್.ಎಸ್.)