ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೋವ ಸ್ಕೋಷಿಯ

ವಿಕಿಸೋರ್ಸ್ದಿಂದ

ನೋವ ಸ್ಕೋಷಿಯ - ಕೆನಡ ದೇಶದ ನಾಲ್ಕು ಅಟ್ಲಾಂಟಿಕ್ ತೀರ ಪ್ರಾಂತ್ಯಗಳಲ್ಲಿ ಒಂದು. ಅಟ್ಲಾಂಟಿಕ್ ಸಾಗರದೊಳಕ್ಕೆ ಚಾಚಿಕೊಂಡಿರುವ ಕೆನಡದ ಮುಖ್ಯ ಭೂಭಾಗವೂ ಕೇಪ್ ಬ್ರೆಟನ್ ದ್ವೀಪ ಮತ್ತು ಅಕ್ಕಪಕ್ಕದ ಕೆಲವು ದ್ವೀಪಗಳೂ ಈ ಪ್ರಾಂತ್ಯದಲ್ಲಿ ಸೇರಿವೆ. ಈ ಪ್ರಾಂತ್ಯದ ಯಾವ ಭಾಗವೂ ಸಾಗರದಿಂದ 80 ಕಿಮೀ. ಗಿಂತ ದೊರದಲ್ಲಿಲ್ಲ. ಅಟ್ಲಾಂಟಿಕ್ ಸಾಗರ, ಸೇಂಟ್ ಲಾರೆನ್ಸ್ ಖಾರಿ ಹಾಗೂ ಫಂಡೀ ಕೊಲ್ಲಿಗಳು ಈ ಪ್ರಾಂತ್ಯವನ್ನು ಸುತ್ತುವರಿದಿವೆ. ಕೆನಡದ ಮುಖ್ಯ ಭೂಪ್ರದೇಶದೊಂದಿಗೆ ನೋವ ಸ್ಕೋಷಿಯವನ್ನು ಸೇರಿಸುವ 27 ಕಿಮೀ. ಅಗಲದ ಶಿಗ್ನೆಕ್ಟೋ ಭೂಸಂಧಿ ಒಂದೇ ಈ ಪ್ರಾಂತ್ಯದ ಏಕೈಕ ಭೂ ಎಲ್ಲೆ. ನೋವ ಸ್ಕೋಷಿಯದ ಪಶ್ಚಿಮಕ್ಕೆ ನ್ಯೂ ಬ್ರನ್ಸ್ವಿಕ ಪ್ರಾಂತ್ಯ. ಈಶಾನ್ಯಕ್ಕೆ ನ್ಯೂ ಫೌಂಡ್‍ಲೆಂಡ್ ಪ್ರಾಂತ್ಯ. ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ. ನೈಋತ್ಯಕ್ಕೆ ಫಂಡೀ ಕೊಲ್ಲಿ ಇವೆ. ಇದರ ವಿಸ್ತೀರ್ಣ 55.490 ಚ.ಕಿ.ಮೀ. ಜನಸಂಖ್ಯೆ 7.88.960 (1971). ಪ್ರಾಂತ್ಯದ ಜನಸಂಖ್ಯೆಯ ಮೂರನೆಯ ಒಂದು ಭಾಗದಷ್ಟು ಜನರು ಪ್ರಾಂತ್ಯದ ರಾಜಧಾನಿಯಾದ ಹ್ಯಾಲಿಫಾಕ್ಸ್ ಹಾಗೂ ಸಿಡ್ನಿ ನಗರ ಪ್ರದೇಶಗಳಲ್ಲಿ ನೆಲಸಿದ್ದಾರೆ. ಜನಸಂಖ್ಯೆಯ ದೃಷ್ಟಿಯಿಂದ ಈ ಪ್ರಾಂತ್ಯಕ್ಕೆ ಕೆನಡದಲ್ಲಿ ಏಳನೆಯ ಸ್ಥಾನ, ಜನಸಾಂದ್ರತೆ ಚ.ಕಿಮೀ. ಗೆ ಸುಮಾರು 14.

ಮೇಲ್ಮೈ ಲಕ್ಷಣ : ನೋವ ಸ್ಕೋಷಿಯದ ಭೂಭಾಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು : 1. ಪ್ರಸ್ಥಭೂಮಿ ಪ್ರದೇಶಗಳು. 2. ಕರಾವಳಿಯ ತಗ್ಗುನೆಲ. ಇಲ್ಲಿಯ ಐದು ಪ್ರಸ್ಥಭೂಮಿ ಪ್ರದೇಶಗಳೂ ಸಾಗರಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿವೆ. ಕೇಪ್ ಬ್ರಿಟನ್‍ನ ನೆಲ ಸಮುದ್ರಮಟ್ಟಕ್ಕಿಂತ 520ಮೀ. ಎತ್ತರದಲ್ಲಿದೆ. ಫಂಡೀಕೊಲ್ಲಿ, ಮೈನಸ್ ಕಣಿವೆ ಮತ್ತು ನಾರ್ತಂಬರ್‍ಲೆಂಡ್ ಜಲ ಸಂಧಿಯ ಉದ್ದಕ್ಕೂ ಇರುವ ಪ್ರದೇಶಗಳು ತಗ್ಗಾಗಿವೆ. ಫಂಡೀ ಕೊಲ್ಲಿಯ ಅಗಾಧ ಉಬ್ಬರಗಳಿಂದ ಸಂಭವಿಸಿರುವ ಸಾವಿರಗಟ್ಟಲೆ ಎಕರೆಗಳಷ್ಟು ವಿಸ್ತಾರವಾದ ಜೌಗು ಪ್ರದೇಶಗಳಿಗೆ ದಿಂಡುಗಳನ್ನು ಕಟ್ಟಿ ಆ ನೆಲವನ್ನು ವ್ಯವಸಾಯಕ್ಕೆ ಬಳಸಿ ಕೊಳ್ಳಲಾಗುತ್ತಿದೆ. ನೋವ ಸ್ಕೋಷಿಯದಲ್ಲಿ 3.000ಕ್ಕೂ ಹೆಚ್ಚು ಸರೋವರಗಳೂ ನೂರಾರು ಸಣ್ಣನದಿ ತೊರೆಗಳೂ ಇವೆ. ಪ್ರಸಿದ್ದ ಸರೋವರವೆಂದರೆ ಕೇಪ್ಬ್ರೆಟನ್ ಪ್ರಾಂತ್ಯದಲ್ಲಿನ ಬ್ರಾಡರ್. ಇದಕ್ಕೂ ಅಟ್ಲಾಂಟಿಕ್ ಸಾಗರಕ್ಕೂ ಮೂರು ಸಣ್ಣ ನಾಲೆಗಳಿಂದ ಸಂಪರ್ಕ ಏರ್ಪಟ್ಟಿದೆ. ಸುತ್ತಣ ಭೂಭಾಗಳ್ಲಲ್ಲಿ ಚಾಚಿಕೊಂಡಿರುವ ಈ ಸರೋವರ 932 ಚ.ಕಿ.ಮೀ.ಗಳಷ್ಟು ವಿಸ್ತಾರವಾಗಿದೆ. ಭೌಗೋಳಿಕವಾಗಿ ಈ ಪ್ರದೇಶ ಒಂದು ಸಂಕೀರ್ಣ ವಲಯ. ಇದರ ಸುತ್ತ ಕಡಿದಾದ ಬೆಟ್ಟಗಳೂ ಕಣಿವೆಗಳೂ ಇವೆ.

ಈ ಪ್ರಾಂತ್ಯದ ನದಿಗಳೆಲ್ಲವೂ ಚಿಕ್ಕವು. 80ಕಿಮೀ.ಗಿಂತ ಉದ್ದವಿರುವ ನದಿಗಳು ಕಡಿಮೆ. ಪ್ರಾಂತ್ಯದ ದೊಡ್ಡ ನದಿಗಳು ಮರ್ಸಿ ಮತ್ತು ಸೆಂಟ್ ಮೇರಿ. ಇತರೆ ಪ್ರಮುಖ ನದಿಗಳು ಹಾವೆ, ಮುಸ್ಕೊದುಬಾ, ಮಿರಾ, ನೋವ ಸ್ಕೋಷಿಯಕ್ಕೆ 1.600.ಕಿಮೀ. ಉದ್ದದ ಕರಾವಳಿ ಇದೆ.

ವಾಯುಗುಣ : ಸುತ್ತಲೂ ಸಾಗವಿರುವುದರಿಂದ ಇಲ್ಲಿಯ ವಾಯುಗುಣ ತೀರ ಬಿಸಿಯೂ ಆಗುವುದಿಲ್ಲ. ತೀರ ತಂಪೂ ಆಗುವುದಿಲ್ಲ. ಜನವರಿ ತಿಂಗಳಲ್ಲಿ ಸರಾಸರಿ-4ಛಿ ಉಷ್ಣತೆ ಇದ್ದರೆ. ಜುಲೈಯಲ್ಲಿ ಸರಾಸರಿ 18(ಛಿ ಉಷ್ಣತೆ ಇರುತ್ತದೆ. ಉತ್ತರದ ಅಟ್ಲಾಂಟಕ್ ಕರಾವಳಿ ಪ್ರದೇಶ ಅತ್ಯಂತ ಶೀತದ ವಲಯ. ಚಳಿಗಾಲದಲ್ಲಿ ಹಿಮಾಚ್ಚಾದಿತ ಪ್ರದೇಶಗಳ ಮೇಲಿಂದ ಬೀಸುವ ಮಾರುತಗಳಿಂದ ಕೆಲವು ಪ್ರದೇಶಗಳೂ ಬಹಳ ತಣ್ಣಗಾಗುತ್ತವೆ. ವಾರ್ಷಿಕ ಹಿಮಪಾತ ಸರಾಸರಿ 216 ಸೆಂ.ಮೀ. ಹಿಮರಹಿತ ದಿನಗಳು ಫಂಡೀ ಕೊಲ್ಲಿಯ ಪ್ರದೇಶದಲ್ಲಿ ವರ್ಷಕ್ಕೆ 140 ದಿನ ಗಳಿದ್ದರೆ, ಯೂರ್‍ಮೌತ್ ಸುತ್ತಮುತ್ತ 160 ದಿನಗಳು. ಒಳನಾಡಿನಲ್ಲಿ 100 ದಿನಗಳು. ಅಟ್ಲಾಂಟಿಕ್ ಕರಾವಳಿಯಲ್ಲಿ ವಿಪರೀತ ಮಳೆ ಬೀಳುತ್ತದೆ. ಪ್ರಾಂತ್ಯದ ದಕ್ಷಿಣದಲ್ಲಿ 140ಸೆಂ. ಮೀ. ಇತರಡೆ 102 ಸೆಂ.ಮೀ. ಮಳೆ ಆಗುತ್ತದೆ.

ಸಸ್ಯ ಪ್ರಾನಿಜೀವನ : ಈ ಪ್ರಾಂತ್ಯದ ಶೇಕಡ 75 ಭಾಗವನ್ನು ಅರಣ್ಯಗಳು ಆಕ್ರಮಿಸಿಕೊಂಡಿವೆ, ಬರ್ಚ, ಫರ್, ಮೇಪಲ್, ಪೈನ್, ಸ್ಟ್ರೊಸ್ ಅತ್ಯಂತ ಸಾಮಾನ್ಯ ವೃಕ್ಷಗಳು, ಇವು ಸೌದೆ, ಮರದ ತಿಳ್ಳು ಹಾಗು ಕಾಗದ ತಯಾರಿಕೆ ಸಾಮಗ್ರಿಯ ಆಕರಗಳು ಇತರ ಸಸ್ಯಗಳು ಬ್ಲೂ ಬೆರಿ, ಬ್ರ್ಯಾಕನ್, ಮೇಫ್ಲವರ್, ಬೆಟ್ಟದ ಲಾರೆಲ್, ಡಾಸ್ಬೆರಿ, ರೋಡೆರ, ಸ್ವೀಟ್ ಫರ್ನ, ವಿಂಟರ್‍ಗ್ರೀನ್,

ಬಿಳಿಬಾಲದ ಜಿಂಕೆ ಸಾಮಾನ್ಯವಾಗಿ ಕಾಣುವ ಪ್ರಾಣಿ, ಇತರ ಪ್ರಮುಖ ಪ್ರಾಣಿಗಳೆಂದರೆ ಕಪ್ಪು ಕರಡಿ. ಕಡವೆ. ಕಾಡುಬೆಕ್ಕು. ಸಣ್ಣ ಪ್ರಾಣಿಗಳಾದ ಮಿಂಕ್, ಕಸ್ತೂರಿಇಲಿ, ನೀರುನಾಯಿ, ಮುಳ್ಳುಹಂದಿ, ಕೆಂಪುನರಿ, ಸ್ಕಂಕ್ ಮೊದಲಾದವು ಪ್ರಾಂತ್ಯದಲ್ಲಿ ಹರಡಿಕೊಂಡಿವೆ. ಹಲವು ಬಗೆಯ ಹೆಬ್ಬಾತು. ಬಾತು, ಫೆಸೆಂಟ್, ಗ್ರೌಸ್, ಮರಕುಟಿಕ ಹಕ್ಕಿಗಳಿವೆ. ಅಲ್ಲದೆ ಕಾರ್ಮೊರಂಟ್, ಗಲ್, ಟರ್ನ ಮತ್ತಿತರ ಸಾಗರ ಹಕ್ಕಿಗಳು ಕರಾವಳಿಯ ಉದ್ದಕ್ಕೂ ಕಂಡುಬರುತ್ತವೆ. ನೋವ ಸ್ಕೋಷಿಯದವರಿಗೆ ಹಾಗೂ ಇಲ್ಲಿಗೆ ಬರುವ ಪ್ರವಾಸಿಗಳಿಗೆ ಬೇಟೆ ಒಂದು ಪ್ರಿಯವಾದ ಹವ್ಯಾಸ. ಸ್ಯಾಲ್ಮನ್ ಮತ್ತು ಟ್ರೌಟ್ ಮೀನುಗಳು ಸಿಹಿನೀರಿನಲ್ಲಿ ಕಂಡುಬರುತ್ತದೆ.

ಜನ : ನೋವ ಸ್ಕೋಷಿಯದವರು ಮೂಲತಃ ಸಾಮಾನ್ಯವಾಗಿ ಬ್ರಿಟನ್ ಇಲ್ಲವೇ ಫ್ರಾನ್ಸಿನಿಂದ ಬಂದವರು. ಜನಸಂಖ್ಯೆಯ ಎಂಟನೆಯ ಒಂದು ಭಾಗ ಅಕೆಡಿಯನ್ ಫ್ರೆಂಚ್ ಮೂಲದವರು. ನ್ಯೂ ಇಂಗ್ಲೆಂಡಿನಿಂದ ಬಂದ ವಲಸೆಗಾರರ, ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಹೊರಬಿದ್ದ ಬ್ರಿಟನ್ ಸಾಮ್ರಾಜ್ಯದ ನಿಷ್ಟಾವಂತ ಪ್ರಜೆಗಳ ವಂಶಸ್ಥರೂ ಇಲ್ಲಿ ಇದ್ದಾರೆ. ಜರ್ಮನ್ ವಲಸೆಗಾರರ ತಂಡವೂ ಇದೆ. ಇತರ ಅಲ್ಪ ಸಂಖ್ಯಾತರೆಂದರೆ ಎರಡನೆಯ ಮಹಾಯುದ್ದದ ಅನಂತರ ಬಂದ ಡಚ್, ಇಟಾಲಿಯನ್, ಹಂಗೇರಿಯನ್ ಮೂಲದವರು. ನಗರ ಪ್ರದೇಶಗಳ ಬಳಿ ನೀಗ್ರೋ ಸಮುದಾಯಗಳು ಇವೆ. ಅಲ್ಲದೆ ಈ ಪ್ರಾಂತ್ಯದಲ್ಲಿ 3.000ಕ್ಕೂ ಹೆಚ್ಚುಮಂದಿ ಮಿಕ್ಮಾಕ್ ರೆಡ್ ಇಂಡಿಯನರಿದ್ದಾರೆ.

ಇಲ್ಲಿಯ ಜನರಲ್ಲಿ ಮೂರನೆಯ ಒಂದು ಭಾಗಕ್ಕಿಂತ ಹೆಚ್ಚುಮಂದಿ ರೋಮನ್ ಕ್ಯಾತೊಲಿಕರು. ಪ್ರಾಟೆಸ್ಟಂಟರಲ್ಲಿ ಯುನೈಟೆಡ್ ಚರ್ಚ್ ಆಫ್ ಕೆನಡದ ಅನುಯಾಯಿಗಳು ಹೆಚ್ಚು ಮಂದಿ. ಅಲ್ಲದೆ ಆಂಗ್ಲಿಕನ್ ಚರ್ಚ್ ಆಫ್ ಕೆನಡ, ಬ್ಯಾಪ್ಟಿಸ್ಟ್‍ಚರ್ಚ್ ಹಾಗೂ ಪ್ರಿಸ್ಟಿಟೇರಿಯನ್ ಚರ್ಚ್‍ಗಳ ಅನುಯಾಯಿಗಳೂ ಇದ್ದಾರೆ.

1960ರಿಂದ ಈಚೆಗೆ ನೋವ ಸ್ಕೋಷಿಯಕ್ಕೆ ವಲಸೆ ಬರುವವರ ಸಂಖ್ಯೆ ಬಹಳ ಕಡಿಮೆ. ಆದರೆ ವಿದ್ಯಾವಂತ ಹಾಗು ಅಶಿಕ್ಷಿತ ನೋವ ಸ್ಕೋಷಿಯನರು ಹೊರ ದೇಶಗಳಿಗೆ ಹೋಗುವುದು ಹೆಚ್ಚುತ್ತಿದೆ. 1969ರಲ್ಲಿದ್ದಂತೆ ಜನನ ದರ 1,000ಕ್ಕೆ 17.5; ಮರಣ ದರ 7.3. ಈ ಪ್ರಾತ್ಯ ಕೆನಡದ ಸಮಗ್ರ ಜನಜೀವನ ಗತಿಯಿಂದ ದೂರವಾದಂತಿದೆ. ಭೌಗೋಳಿಕವಾಗಿ ಈ ಪ್ರಾಂತ್ಯ ಕೆನಡದ ಯಳಿದ ಭಾಗದಿಂದ ಪ್ರತ್ಯೇಕವಾದಂತೆ ಇರುವುದು ಇದಕ್ಕೆ ಕಾರಣ. ಇತ್ತೀಚೆಗೆ ಸಂಚಾರ ಸುಲಭವಾಗಿರುವುದರಿಂದ. ರಾಷ್ಟ್ರೀಯ ಸಂಪರ್ಕ ಸಾಧನಗಳು ಬೆಳೆದಿರುವುದರಿಂದ ಈ ಪ್ರಾಂತ್ಯವೂ ಕೆನಡದ ಮುಖ್ಯ ಜೀವನ ಪ್ರವಾಹದೊಂದಿಗೆ ಹೆಚ್ಚು ಹೆಚ್ಚಾಗಿ ಬೆರೆತುಕೊಳ್ಳುತ್ತಿದೆ. ಆಧುನಿಕ ಜೀವನ ಶೈಲಿ ಇಲ್ಲೂ ಮೊಳೆಯುತ್ತಿದೆ. ಆದರೂ ಪರ್ಯಾಯದ್ವೀಪದ ಮುಖ್ಯಭಾಗಗಳಲ್ಲಿ ಹಾಗೂ ಕೇಪ್ ಬ್ರೆಟನ್ ದ್ವೀಪದಲ್ಲಿ ಪ್ರಾಚೀನ ಪರಂಪರೆಯ ಜೀವನ ಈಗಲೂ ನಿಚ್ಚಳವಾಗಿ ಉಳಿದಿರುವುದನ್ನು ಕಾಣಬಹುದು. ನೋವ ಸ್ಕೋಷಿಯದಲ್ಲಿ ಸ್ಕಾಟ್ ಸಂಸ್ಕøತಿ ಎದ್ದುಕಾಣುತ್ತದೆ. ಸಂಗೀತ, ನೃತ್ಯ, ಹಾಗು ಕುಶಲ ಕೈಗಾರಿಕೆಗಳಲ್ಲಿ ಇದರ ಪ್ರಭಾವ ಹೆಚ್ಚುತ್ತಿದೆ. ಪ್ರಾಂತ್ಯದ ಕೆಲವು ಜನರು ಈಗಲೂ ತಮ್ಮ ಸ್ಕಾಟ್ ಮೂಲಜರ ಗಾಲಿಕ್ ಭಾಷೆ ಆಡುತ್ತಾರೆ.

ಆರ್ಥಿಕತೆ: ನೋವ ಸ್ಕೋಷಿಯದಲ್ಲಿ ಕೈಗಾರಿಕೆಯೇ ಪ್ರಧಾನ. ವ್ಯವಸಾಯ ಮತ್ತು ಮೀನುಗಾರಿಕೆ ಅನಂತರದ ಪ್ರಮುಖ ಕಸಬುಗಳು. ಪ್ರಾಂತ್ಯದ ನೆಲದ ಶೇಕಡ 5 ಭಾಗ ಮಾತ್ರ ಸಾಗುವಳಿಗೆ ಯೋಗ್ಯವಾಗಿದೆ. ಆದ್ದರಿಂದ ಜಾನುವಾರು ಸಾಕಣೆ. ಕೋಳಿಸಾಕಣೆ ಮತ್ತು ವಿವಿಧ ಹೈನು ಉತ್ಪಾದನೆಗಳಿಗೆ ವ್ಯವಸಾಯ ಮೀಸಲಾಗಿದೆ. ಈ ಪ್ರಾಂತ್ಯದ ಅತ್ಯಂತ ಮೌಲಿಕ ಸಂಪನ್ಮೂಲಗಳೆಂದರೆ ವ್ಯಾಪಕ ಖನಿಜ ನಿಕ್ಷೇಪಗಳು. ಫಲವತ್ತಾದ ತಗ್ಗುಭೂಮಿ ಹಾಗೂ ಸಂಪದ್ಬರಿತ ಮತ್ಸ್ಯ ವಲಯಗಳು. ಅನಾಪೊಲಿಸ್ ಕಣಿವೆ ಉತ್ತಮ ಉಳುಮೆ ನೆಲ. ಫಂಡೀ ಕೊಲ್ಲಿಯ ಉದ್ದಕ್ಕೂ ಇರುವ ಜೌಗು ನೆಲವೂ ನಾರ್ತಂಬರ್ಲೆಂಡ್ ಜಲಸಂಧಿಯ ಮಗ್ಗುಲ ಬಯಲೂ ಇತರ ವ್ಯವಸಾಯ ಯೋಗ್ಯ ಪ್ರದೇಶಗಳು. ಹುಲ್ಲು ಇಲ್ಲಿಯ ಮುಖ್ಯ ಬೆಳೆ. ಇತರ ಬೆಳೆಗಳು ಬಾರ್ಲಿ. ಗೋಧಿ. ಓಟ್ಸ್.

ಉತ್ತರ ಅಮೆರಿಕದಲ್ಲಿಯೇ ಭಾರಿಯಾದ ಜಿಪ್ಸಮ್ ನಿಕ್ಷೇಪ ಹ್ಯಾಲಿಫಾಕ್ಸ್ ಬಳಿ ಇದೆ. ಶಿಗ್ನೆಕ್ವೊ ಭೂಸಂಧಿಯಿಂದ ಕೇಪ್ ಬ್ರೆಟನ್ ದ್ವೀಪದ ಗ್ಲೇಸ್ ಕೊಲ್ಲಿಯವರೆಗಿನ ನೆಲದಲ್ಲಿ ಕಲ್ಲಿದ್ದಲು ನಿಕ್ಷೇಪವಿದೆ. ಇತರ ಪ್ರಮುಖ ಖನಿಜಗಳು ಬ್ಯಾರೈಟ್, ಸೀಸ, ಲವಣ, ಮರಳು, ಮರಳುಗಲ್ಲು. ಬೆಳ್ಳಿ. ತಾಮ್ರ. ಸತು. ಹೊರತೆಗೆಯುವ ಕಲ್ಲದ್ದಲಿನ ಬಹುಭಾಗವನ್ನು ಪ್ರಾಂತ್ಯದ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬ್ಯಾರೈಟ್ ನಕ್ಷೇಪಿರುವ ಪ್ರಾಂತ್ಯ ನೋವಸ್ಕೋಷಿಯ. ಆಹಾರ ಸಂಸ್ಕರಣ ಇಲ್ಲಿಯ ಪ್ರಮುಖ ಕೈಗಾರಿಕೆ. ಕರಾವಳಿಯ ಉದ್ದಕ್ಕೂ ಮೀನು ಸಂಸ್ಕರಣ ಸ್ಥಾವರಗಳಿವೆ. ಕ್ಷೀರೊತ್ಪನ್ನ ಕೇಂದ್ರಗಳು ಮೈನಸ್ ಕಣಿವೆಯ ಪ್ರದೇಶದಲ್ಲೂ ಫಂಡೀಕೊಲ್ಲಿಯ ತೀರದಲ್ಲೂ ಇವೆ.

ಕಾಗದ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳ ಉತ್ಪಾದನೆ ಎರಡನೆಯ ಪ್ರಮುಖ ಕೈಗಾರಿಕೆ. ಇದಕ್ಕೆ ಆಧಾರವಾಗಿ ಅರಣ್ಯಕೈಗಾರಿಕೆ. ಮರದ ತಿಳ್ಳಿನ ಉದ್ಯಮ ಇವೂ

ಚಿತ್ರ : ಬಿಟ್ಟಿದೆ.

ಬೆಳೆದಿವೆ, ಶಿಲೆ, ಜೇಡಿ ಹಾಗೂ ಗಾಜಿನ ಸರಕು ಮತ್ತು ಮರಮುಟ್ಟು ತಯಾರಿಕೆ, ಲೋಹಗಾರಿಕೆ - ಇವು ಇತರ ಉದ್ಯಮಗಳು. ಕಬ್ಬಿಣ ಮತ್ತು ಉಕ್ಕಿನ ಕಾರ್ಖನೆಗಳು ಬಹುತೇಕ ಸಿಡ್ನಿ ಹಾಗೂ ಟ್ರೆಂಟನ್‍ಗಳಲ್ಲಿವೆ. ಡಾರ್‍ಮೌತ್ ಹಾಗೂ ಪೋರ್ಟ ಹಾಕ್ಸ್‍ಬರಿಗಳ ತೈಲಾಗಾರಗಳು ಗ್ಯಾಸೊಲಿನ್ ಮತ್ತು ಇತರ ಪೆಟ್ರೋಲಿಯಂ ಪದಾರ್ಥಗಳನ್ನು ಉತ್ಪಾದಿಸುತ್ತವೆ. ನೋವ ಸ್ಕೋಷಿಯ ಕೆನಡಾದ ಪ್ರಮುಖ ಮೀನುಗಾರಿಕೆ ಪ್ರಾಂತ್ಯ, ನಳ್ಳಿಯನ್ನೂ ಹಿಡಿಯಲಾಗುತ್ತದೆ, ಕಾದ್, ಹ್ಯಾಡರ್, ಹೆರಿಂಗ್, ಸ್ಕ್ಯಾಲತ್, ಸ್ವೋರ್ಡಫಿಷ್ ಮುಂತಾದ ಮೀನುಗಳನ್ನು ಹಿಡಿಯಲಾಗುತ್ತಿದೆ. ಸಮುದ್ರ ಮೀನುಗಳ ವಾರ್ಷಿಕ ಮೌಲ್ಯ 5.65 ಕೋಟಿಡಾಲರ್. ಇವನ್ನು ಸಂಸ್ಕರಣ ಕೇಂದ್ರಗಳಿಗೆ ಸಾಗಿಸಿ. ಅಲ್ಲಿಂದ ಮಾರುಕಟ್ಟೆಗೆ ರವಾನಿಸಲಾಗುತ್ತದೆ.

ಆಡಳಿತ : ನೋವ ಸ್ಕೋಷಿಯ ಪ್ರಾಂತ್ಯದ ಸರ್ಕಾರದ ರಚನೆ ಕೆನಡದ ಇತರ ಪ್ರಾಂತ್ಯಗಳ ಸರ್ಕಾರಗಳ ರಚನೆಯಂತೆಯೇ ಇದೆ. ಕೇಂದ್ರ ಸರ್ಕಾರದಿಂದ ಸಾರ್ವಭೌಮತ್ವದ, ಅಂದರೆ ರಾಣಿ ಎಲಿಜಬೆತರ, ಪ್ರತಿನಿಧಿಯಾಗಿ ಲೆಫ್ಟೆನಂಟ್ ಗವರ್ನರನ್ನು ಐದು ವರ್ಷಗಳ ಅವಧಿಗೆ ನೀಮಿಸಲಾಗುತ್ತದೆ. ಇದು ಕೇವಲ ಗೌರವ ಸೂಚಕ ಪದವಿ. ಪ್ರಾಂತ್ಯದ ವಿಧಾನ ಸಭೆಯಲ್ಲಿ ಬಹುಮತ ಪಕ್ಷದ ನಾಯಕ ತನ್ನ ಪಕ್ಷದ ಇತರ ಸಹೋದ್ಯೋಗಿಗಳಿಂದ ಕೂಡಿದ ಸಂಪುಟವನ್ನು ರಚಿಸುತ್ತಾನೆ. ಸಭೆಯಲ್ಲಿ ಜನರಿಂದ ಚುನಾಯಿತರಾದ 46 ಮಂದಿ ಸದಸ್ಯರಿರುತ್ತಾರೆ. ಐದು ವರ್ಷಗಳಿಗೊಮ್ಮೆ ಇದಕ್ಕೆ ಚುನಾವಣೆ ನಡೆಯುತ್ತದೆ. ಪ್ರಾಂತೀಯ ಅಧಿ ನಿಯಮಗಳನ್ನು ರಚಿಸುವ ಅಧಿಕಾರ ಈ ಸಭೆಗೆ ಇದೆ. ನ್ಯಾಯವ್ಯವಸ್ಥೆ ಕೇಂದ್ರಕ್ಕೆ ಸೇರಿದ್ದು. ಸ್ಥಳೀಯ ಪ್ರಾಧಿಕಾರ ಘಟಕಗಳೆಂದರೆ ಹ್ಯಾಲಿಫಾಕ್ಸ್, ಡಾರ್ಟಮೌತ್ ಮತ್ತು ಸಿಡ್ನಿ ನಗರಸಭೆಗಳು, 39 ಪುರಸಭೆಗಳು ಮತ್ತು 24 ಗ್ರಾಮಪಂಚಾಯಿತಿಗಳು, ಕೇಂದ್ರ ಸರ್ಕಾರದ ಸಹಾಯಧನ ಮತ್ತು ವಿವಿಧ ಪ್ರಾಂತೀಯ ತೆರಿಗೆಗಳು ಮತ್ತು ಶುಲ್ಕಗಳು ಪ್ರಾಂತ್ಯದ ಆದಾಯ ಮೂಲಗಳು.

ನೋವ ಸ್ಕೋಷಿಯದಲ್ಲಿ ಲಿಬರಲ್, ಪ್ರೊಗ್ರೆಸಿವ್ ಕನ್‍ಸರ್ವೇಟಿವ್ ಎಂಬ ಎರಡು ಪ್ರಮುಖ ರಾಜಕೀಯ ಪಕ್ಷಗಳಿವೆ. ಇನ್ನೊಂದು ಪಕ್ಷ ನ್ಯೂ ಡೊಮೊಕ್ರಾಟಿಕ್ ಪಾರ್ಟಿ.

ಆರೋಗ್ಯ ಮತ್ತು ಸಮಾಜಕಲ್ಯಾಣ : ನೋವಸ್ಕೋಷಿಯ 1969 ರಿಂದಲೂ ಫೆಡರಲ್ ಮೆಡಿಕಲ್ ಕೇರ್ ಇನ್‍ಷ್ಯೂರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ. ಇದಕ್ಕೆ ವಂತಿಗೆಯನ್ನು ಪ್ರಾಂತ್ಯದ ಬೊಕ್ಕಸದಿಂದ ನೀಡಲಾಗುತ್ತಿದೆ. ಪ್ರಾಂತ್ಯಾದ್ಯಂತ ಆಸ್ಪತ್ರೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ ಮಾನಸಿಕ ಆರೋಗ್ಯ, ದಂತ ಚಿಕಿತ್ಸೆ, ಕ್ಷಯ ನಿಯಂತ್ರಣ ಮತ್ತು ಇತರೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೂ ಗಮನ ನೀಡಲಾಗಿದೆ. 1970ರ ದಶಕದ ಆರಂಭದಲ್ಲಿ ಪ್ರಾಂತ್ಯದಲ್ಲಿ 54 ಆಸ್ಪತ್ರೆಗಳಿದ್ದವು. ವೃದ್ದಾಪ್ಯವೇತನ, ಕುರುಡರೇ ಮುಂತಾದ ಅಂಗವಿಕಲರಿಗೆ ಭತ್ಯ. ಸಾಮಾಜಿಕ ಸಂತ್ರಸ್ತರಿಗೆ ನೆರವು, ಮಕ್ಕಳ ಕಲ್ಯಾಣ, ಅವಿವಾಹಿತ ತಾಯಂದಿರ ಮತ್ತು ಬಾಲಾಪರಾಧಿಗಳ ಪೋಷಣೆ ಮುಂತಾದ ಸಮಾಜಕಲ್ಯಾಣ ವ್ಯವಸ್ಥೆಗಳಿವೆ. ಮಾನಸಿಕವಾಗಿ ದುರ್ಬಲ ಮಕ್ಕಳು ಹಾಗೂ ಅಪರಾಧಿ ಯುವಕರಿಗಾಗಿ ಸಂಸ್ಥೆಗಳನ್ನು ಸಾರ್ವಜನಿಕ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತದೆ. ಧನಸಹಾಯ ಪಡೆಯುವ ಅನೇಕ ಶಿಶುಸಂಸ್ಥೆಗಳ ಮತ್ತಿತರ ಖಾಸಗಿ ಸಂಸ್ಥೆಗಳ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳುತ್ತದೆ.

ಈ ಪ್ರಾಂತ್ಯದ ಜೀವನಮಟ್ಟ ರಾಷ್ಟ್ರದಲ್ಲಿಯ ಜೀವನಮಟ್ಟಕ್ಕೆ ಸಮನಾಗಿದೆ. ಆದರೆ ವೆಚ್ಚ ದುಬಾರಿ, ಸರಾಸರಿ ವರಮಾನ ಕಡಿಮೆ, ಉದ್ಯೋಗ, ಔದ್ಯೋಗಿಕ ವೇತನ, ವೃತ್ತಿ ಮತ್ತು ವಸತಿ ಸೌಕರ್ಯ ಇವುಗಳಲ್ಲಿ ನೋವ ಸ್ಕೋಷಿಯ ಇಡೀ ಕೆನಡಕ್ಕಿಂತ ಕೆಳಗೆ ಇದೆ.

ನೋವ ಸ್ಕೋಷಿಯದಲ್ಲಿ 800ಕ್ಕೂ ಹಚ್ಚು ಶಾಲೆಗಳಿವೆ. 13 ವೃತ್ತಿ ತರಬೇತು ಶಾಲೆಗಳು. 11 ಪ್ರೌಢವಿದ್ಯಾಸಂಸ್ಥೆಗಳು, ಎರಡು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಇವೆ. ಪದವಿ ಪ್ರಧಾನಮಾಡುವ 7 ವಿಶ್ವವಿದ್ಯಾನಿಲಯಗಳಿವೆ. ಪ್ರಾಂತೀಯ ಕಾನೂನಿನ ಪ್ರಕಾರ 6 ರಿಂದ 16 ವರ್ಷ ವಯಸ್ಸಿನ ವರೆಗೆ ಶಿಕ್ಷಣ ಕಡ್ಡಾಯ.

ಇತಿಹಾಸ : 1500ರ ಸುಮಾರಿಗೆ ಐರೋಪ್ಯರು ನೋವ ಸ್ಕೋಷಿಯ ಪ್ರದೇಶಕ್ಕೆ ಬರುವ ಮುನ್ನ ಮಿಕ್‍ಮ್ಯಾಕ್ ಇಂಡಿಯನ್ನರು ಇಲ್ಲಿ ನೆಲಸಿದ್ದರು. ಈ ಪ್ರದೇಶದ ಮೂಲನಿವಾಸಿಗಳಾದ ಇವರು ಬೇಸಗೆಯಲ್ಲಿ ಮೀನುಗಾರಿಕೆಯಿಂದಲೂ ಚಳಿಗಾಲದಲ್ಲಿ ಬೇಟೆಯಿಂದಲೂ ಜೀವಿಸುತ್ತಿದ್ದರು. ಇಂಗ್ಲಿಷ್ ಅನ್ವೇಷಕ ಜಾನ್ ಕ್ಯಾಬಟ್ 1497ರಲ್ಲಿ ಇಲ್ಲಿ ಬಂದಿಳಿದ. ಈ ಪ್ರದೇಶವನ್ನು ಅವನು ಏಷ್ಯ ಎಂದು ಭಾವಿಸಿದ್ದ. ಏಷ್ಯಕ್ಕೆ ಪಶ್ಚಿಮಭಿಮುಖ ಮಾರ್ಗ ಹುಡುಕ ಹೊರಟ ಇತರ ಅನ್ವೇಷಕರು 1520-1524ರ ಅವಧಿಯಲ್ಲಿ ನೋವ ಸ್ಕೋಷಿಯಕ್ಕೆ ಬಂದರು. ಅವರಲ್ಲಿ ಪ್ರಮುಖರಾದವರು ಇಟಾಲಿಯನ್ ನಾವಿಕ ಜಿಯೊಫಾನಿದ ಪೆರಜಾನೊ ಮತ್ತು ಫ್ರೆಂಚ್ ನಾವಿಕರಾದ ಜೋಮೊ ಅಲ್ವರಜ್ ಫಗುಂಡೆಸ್ ಮತ್ತು ಎಸ್ಟಫಾನ್ ಗೊಮೇಜ್. 1600ರ ಹೊತ್ತಿಗೆ ಫ್ರೆಂಚ್ ಮೀನುಗಾರರು ತಾವು ಹಿಡಿದ ಕಾಡ್ ಮೀನನ್ನು ಒಣಗಿಸಲು ಈ ಪ್ರದೇಶವನ್ನು ಬಳಸಿಕೊಳ್ಳುತ್ತಿದ್ದರು.

1603ರಲ್ಲಿ ಫ್ರಾನ್ಸಿನ ದೊರೆ 4ನೇ ಹೆನ್ರಿ ನೋವ ಸ್ಕೋಷಿಯವನ್ನು ಒಳಗೊಂಡಂತೆ ಸುತ್ತಣ ಪ್ರದೇಶವನ್ನು ಫ್ರೆಂಚ್ ಅನ್ವೇಷಕ ಪಿಯರಿಡು ಗಾಸ್ಟ್ ಸಿಯರ್ದ ಮೋಟ್ಗೆ ಕೊಟ್ಟ. ದ ಮೋಟನೊಂದಿಗೆ ನೋವ ಸ್ಕೋಷಿಯ 1604ರಲ್ಲಿ ಬಂದ ಮತ್ತೊಬ್ಬ ಅನ್ವೇಷಕ ಸ್ಯಾಮ್ಯುಯಲ್ ದ ಚಾಂಪ್ಲೇನ್. ಇವನು ನೋವ ಸ್ಕೋಷಿಯ ಕರಾವಳಿಯ ಮೊಟ್ಟಮೊದಲು ನಿಖರ ನಕ್ಷೆಯನ್ನು ತಯಾರಿಸಿದ. ಇವರಿಬ್ಬರೂ ನ್ಯೂಬ್ರನ್ಸ್‍ವಿಕ್ ಪ್ರದೇಶದಲ್ಲಿ ವಸಾಹತನ್ನು ಸ್ಥಾಪಿಸಿದರು. ಈಗಿನ ನೋವ ಸ್ಕೋಷಿಯ ಮತ್ತು ಇದರ ಸುತ್ತಣ ಪ್ರದೇಶವನ್ನು ಅಕೆಡಿಯ ಎಂದು ಕರೆದರು. 1605ರಲ್ಲಿ ನೋವ ಸ್ಕೋಷಿಯಕ್ಕೆ ವರ್ಗಾಯಿಸಲಾದ ಈ ವಸಾಹತನ್ನು ಪೋರ್ಟ ರಾಯಲ್ ಎಂದು ಹೆಸರಿಸಲಾಯಿತು. 1613ರಲ್ಲಿ ಈ ಫ್ರೆಂಚ್ ವಸಾಹತಿನ ಮೇಲೆ ವರ್ಜಿನಿಯೆದ ಇಂಗ್ಲಿಷರು ದಾಳಿಮಾಡಿ ಇದನ್ನು ಸುಟ್ಟುಹಾಕಿದರು. ಅಕೆಡಿಯಕ್ಕಾಗಿ ಇಂಗ್ಲಿಷ್ ಮತ್ತು ಫ್ರೆಂಚರ ನಡುವೆ ನೂರಕ್ಕೂ ಹೆಚ್ಚು ವರ್ಷಗಳ ಕಾಲ ಹೋರಾಟ ನಡೆಯಿತು.

1621ರಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೊರೆ 1ನೆಯ ಜೇಮ್ಸ್ ಅಕೆಡಿಯವನ್ನು ಸರ್ ವಿಲಿಯಂ ಅಲೆಗ್ಸಾಂಡರ್‍ಗೆ ದತ್ತಿ ಕೊಟ್ಟ. ಈ ಸನ್ನದಿನಲ್ಲಿ ಈಗಿನ ನೋವ ಸ್ಕೋಷಿಯ, ನ್ಯೂ ಬ್ರನ್ಸ್‍ವಿಕ್, ಪ್ರಿನ್ಸ್ ಇಡ್ವರ್ಡ ಐಲೆಂಡ್, ಕ್ವಿಬೆಕ್ನ ಸ್ವಲ್ಪ ಭಾಗ ಸೇರಿದ್ದುವು. ಅಲೆಗ್ಸಾಂಡರ್ ಈ ಪ್ರದೇಶವನ್ನು ನೋವ ಸ್ಕೋಷಿಯ (ಹೊಸ ಸ್ಕಾಟ್ಲೆಂಡ್) ಎಂದು ಕರೆದ. 1632 ರಲ್ಲಿ ಇಂಗ್ಲಿಷರು ಪೋರ್ಟ ರಾಯಲನ್ನು ಸೇಂಟ್ ಜರ್ಮೇನ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಕೊಟ್ಟರು. ಬ್ರಿಟಿಷರು 1690ರಲ್ಲಿ ಮತ್ತೆ ಈ ವಸಾಹತನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ 1697ರಲ್ಲಿ ರಿಸ್ವಿಕ್ ಒಪ್ಪಂದದ ಪ್ರಕಾರ ಮತ್ತೆ ಇದನ್ನು ಬಿಟ್ಟುಕೊಡಬೇಕಾಯಿತು. ಇಂಗ್ಲೆಂಡ್ ಮತ್ತು ನ್ಯೂ ಇಂಗ್ಲೆಂಡ್‍ಗಳ ಸಂಯುಕ್ತ ಬಲ ಪೋರ್ಟ ರಾಯಲನ್ನು ಮತ್ತೆ 1710ರಲ್ಲಿ ಸ್ವಾಧೀನಪಡಿಸಿಕೊಂಡಿತು. ಬ್ರಿಟಿಷರು ಪೋರ್ಟರಾಯಲ್ ದುರ್ಗದ ಹೆಸರನ್ನು ಅನಾಪೊಲಿಸ್ ರಾಯಲ್ ಎಂದು ಬದಲಿಸಿದರು.

ಕೊನೆಗೆ ಫ್ರೆಂಚರು 1713ರಲ್ಲಿ ಯುಟ್ರೆಕ್ ಶಾಂತಿ ಒಪ್ಪಂದದ ಪ್ರಕಾರ ನೋವ ಸ್ಕೋಷಿಯದ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟರು. ಆದರೆ ಕೇಪ್ ಬ್ರೆಟನ್ ಮತ್ತು ಪ್ರಿನ್ಸ್ ಎಡ್ವರ್ಡ ದ್ವೀಪಗಳು ಫ್ರಾನ್ಸಿಗೆ ಹೋದವು. ಅನಂತರ ಏಳು ವರ್ಷಗಳ ಯುದ್ದದ ಕಾಲದಲ್ಲಿ (1756-1763) ಈ ದ್ವೀಪಗಳು ಮತ್ತೆ ಬ್ರಿಟಿಷರಿಗೆ ಸೇರಿದವು.

ಹ್ಯಾಲಿಫಾಕ್ಸ್ ನಗರವನ್ನು ಬ್ರಿಟಿಷ್ ವಲಸೆಗಾರರು 1749ರಲ್ಲಿ ಸ್ಥಾಪಿಸಿದರು. ಅದೇ ವರ್ಷ ಇದು ನೋವ ಸ್ಕೋಷಿಯದ ರಾಜಧಾನಿಯಾಯಿತು. 1750ರ ದಶಕದ ಆರಂಭದಲ್ಲಿ ಅನೇಕ ಫ್ರೆಂಚ್, ಜರ್ಮನ್ ಮತ್ತು ಸ್ವಿಸ್ ಪ್ರಾಟೆಸ್ಟಂಟರು ಯುರೋಪಿನಿಂದ ಇಲ್ಲಿಗೆ ಧಾವಿಸಿ ಬಂದರು. 1755ರಲ್ಲಿ ಬ್ರಿಟನ್ನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳದ ಅಕೆಡಿಯನರನ್ನು ಈ ಪ್ರದೇಶದಿಂದ ಉಚ್ಚಾಟನೆಗೊಳಿಸಲಾಯಿತು.

ನೋವ ಸ್ಕೋಷಿಯದ ವಲಸೆಗಾರರು ತಮ್ಮ ಪ್ರತಿನಿಧಿ ಸಭೆಯನ್ನು ಚುನಾಯಿಸಿಕೊಳ್ಳಲು ಬ್ರಿಟಿಷ್ ಸರ್ಕಾರ 1758ರಲ್ಲಿ ಅನುಮತಿ ನೀಡಿತು. ಆದರೂ ಬ್ರಿಟಿಷ್ ದೊರೆ ನೇಮಿಸುವ ಗವರ್ನರ್ ಹಾಗೂ ಮಂಡಲಿಯೇ ನಿಜವಾಗಿ ಈ ಪ್ರಾಂತ್ಯವನ್ನು ಆಳುತ್ತಿತ್ತು. 1760ರಲ್ಲಿ 20ಕ್ಕೂ ಹೆಚ್ಚು ಹಡಗುಗಳಲ್ಲಿ ನ್ಯೂ ಇಂಗ್ಲೆಂಡಿನ ವಲಸೆಗಾರರು ಇಲ್ಲಿಗೆ ಬಂದು ನೆಲೆಯೂರಿದರು. ಅಮೆರಿಕನ್ ಕ್ರಾಂತಿಯ ಕಾಲದಲ್ಲಿ ಮತ್ತು ಅನಂತರದ ಅವಧಿಯಲ್ಲಿ (1775-1783) ಕ್ರಾಂತಿಯನ್ನು ವಿರೋಧಿಸಿದ ಸುಮಾರು 35.000ಮಂದಿ ಬ್ರಿಟಿಷರು ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ತೊರೆದು ಇಲ್ಲಿಗೆ ಬಂದು ನೆಲಸಿದರು. 1773ರಲ್ಲಿ ಸ್ಕಾಟ್ಲೆಂಡಿನಿಂದ ವಲಸೆಗಾರರು ಬರತೊಡಗಿದರು. 1815-1850ರಲ್ಲಿ ಇವರು ನೋವ ಸ್ಕೋಷಿಯದ ಪೂರ್ವಭಾಗದಲ್ಲಿ ನೆಲೆಸಿದರು. ಐರ್ಲೆಂಡಿನಲ್ಲಿ 1845ರಲ್ಲಿ ಆಲೂಗಡ್ಡೆ ಕ್ಷಾಮ ಬಂದಾಗ ಐರಿಷ್ ವಲಸೆಗಾರರೂ ಇಲ್ಲಿಗೆ ಬಂದರು. 1769ರಲ್ಲಿ ಪ್ರಿನ್ಸ್ ಎಡ್ವರ್ಡ ದ್ವೀಪವೂ 1784ರಲ್ಲಿ ನ್ಯೂ ಬ್ರನ್ಸ್ವಿಕ್ ಪ್ರಾಂತ್ಯವೂ ಇದರಿಂದ ಪ್ರತ್ಯೇಕಗೊಂಡವು.

1848ರ ಆರಂಭದಲ್ಲಿ ಉದ್ಯಮ ಕ್ಷೇತ್ರ ಹಾಗೂ ವಿಶ್ವವಾಣಿಜ್ಯ ರಂಗದಲ್ಲಿ ಇದು ಪ್ರವರ್ಧನೆ ಹೊಂದಿತು. ಪ್ರಾಂತ್ಯದ ಅರಣ್ಯಗಳಿಂದ ಹೇರಳ ಮರಮುಟ್ಟುಗಳನ್ನು ತಂದು ವಾಣಿಜ್ಯ ನೌಕೆಗಳ ನಿರ್ಮಾಣವನ್ನು ಕೈಗೊಳ್ಳಲಾಯಿತು. 1860ರ ವೇಳೆಗೆ ಇದು ದೊಡ್ಡ ವಾಣಿಜ್ಯ ನೌಕಾಸಮೂಹ ಹೊಂದಿತ್ತು. ಸ್ವಲ್ಪ ಕಾಲದ ವರೆಗೆ ಇದು ಅತ್ಯಂತ ಶ್ರೀಮಂತವಾಗಿತ್ತು. ಆದರೆ ಹಬೆ ಹಡಗುಗಳು ಬಂದು ಹಾಯಿ ಹಡಗುಗಳಿಗೆ ಬೇಡಿಕೆ ತಗ್ಗಿದಾಗ ನೌಕಾವ್ಯಾಪಾರ ಕುಸಿಯಿತು. ಸ್ವೇಚ್ಚೆಯಾಗಿ ಮರಗಳನ್ನು ಕಡಿದದ್ದರಿಂದ ಮರಮುಟ್ಟು ವ್ಯಾಪಾರಕ್ಕೂ ಧಕ್ಕೆ ಉಂಟಾಯಿತು.

1867ರಲ್ಲಿ ನೋವ ಸ್ಕೋಷಿಯವೂ ನ್ಯೂ ಬ್ರನ್ಸ್ವಿಕ, ಆಂಟೇರಿಯೊ ಮತ್ತು ಕ್ವಿಬೆಕ್ ಪ್ರಾಂತ್ಯಗಳೂ ಸೇರಿ ಕೆನಡ ಒಕ್ಕೂಟ ರೂಪುಗೊಂಡಿತು. 1890ರ ದಶಕದ ಕೊನೆಯ ವೇಳೆಗೆ ನೋವ ಸ್ಕೋಷಿಯ ಆರ್ಥಿಕ ಕುಸಿತದಿಂದ ಚೇತರಿಸಿಕೊಂಡಿತು. ಇಲ್ಲಿ ವ್ಯವಸಾಯೋತ್ಪಾದನೆ ಹಾಗೂ ಕಬ್ಬಿಣ ಉಕ್ಕು ಉದ್ಯಮ ಬೆಳೆಯತೊಡಗಿದವು.

ಚಿತ್ರ : ಬಿಟ್ಟಿದೆ.

ಒಂದನೆಯ ಮಹಾಯುದ್ದದಲ್ಲಿ ಇಲ್ಲಿಯ ಹ್ಯಾಲಿಫಾಕ್ಸ್ ಬಂದರು ಮಿತ್ರರಾಷ್ಟ್ರಗಳ ನೌಕೆಗಳ ತಂತುದಾಣವಾಗಿತ್ತು. 1917ರಲ್ಲಿ ಈ ಬಂದರಿನಲ್ಲಿ ಮದ್ದು ಗುಂಡುಗಳಿದ್ದ ಫ್ರೆಂಚ್ ಸೈನಿಕ ಹಡಗೊಂದು ಸ್ಪೋಟಗೊಂಡು ಸುಮಾರು 2.000 ಮಂದಿ ಸತ್ತರು; ನಗರ ಬಹುತೇಕ ನಷ್ಟಕ್ಕೊಳಗಾಯಿತು.

1933ರಿಂದ 1954ರವರೆಗೆ (ನಡುವೆ ಎರಡನೆಯ ಮಹಾಯುದ್ದದ ಅವಧಿಯನ್ನು ಬಿಟ್ಟು) ಇಲ್ಲಿಯ ಪ್ರಧಾನಿಯಾಗಿದ್ದ ಎ, ಎಲ್, ಮ್ಯಾಕ್‍ಡೊನಾಲ್ಡರ ಅಧಿಕಾರದ ಕಾಲದಲ್ಲಿ ಅನೇಕ ಸುಧಾರಣೆಗಳಾದವು. ಹೊಸ ತೆರಿಗೆ ಅಧಿನಿಯಮ. ಪೌರಸೇವಾ ಅಧಿನಿಯಮಗಳಲ್ಲದೆ ಆರ್ಥಿಕ, ನ್ಯಯಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ಅಧಿನಿಯಮಗಳು ಬಂದುವು.

1950 ಮತ್ತು 1960ರ ದಶಕಗಳಲ್ಲಿ ಶಿಕ್ಷಣ, ಸಂಚಾರ, ಸಾರಿಗೆ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ತೀವ್ರ ಬೆಳವಣಿಗೆಯಾಯಿತು.

ಸಾರಿಗೆ ಸಂಪರ್ಕ: ನೋವ ಸ್ಕೋಷಿಯದಲ್ಲಿ ಸುಮಾರು. 24.100ಕಿಮೀ. ರಸ್ತೆಗಳೂ ಸುಮಾರು 2,740ಕಿಮೀ. ರೈಲುಮಾರ್ಗಗಳು ಇವೆ. ವಿಮಾನ ಸೌಲಭ್ಯವುಂಟು. ಹ್ಯಾಲಿಫಾಕ್ಸ್ ವಿಮಾನಸಾರಿಗೆ ಕೇಂದ್ರ. ಇದೊಂದು ದೊಡ್ಡ ಬಂದರೂ ಹೌದು.

ಇಲ್ಲಿ 30ಕ್ಕೂ ಹೆಚ್ಚು ಪತ್ರಿಕೆಗಳಿವೆ. ಇವುಗಳ ಪೈಕಿ 6 ದೈನಿಕಗಳು. ಪ್ರಾಂತ್ಯದಲ್ಲಿ 20ರೇಡಿಯೋ ಪ್ರಸಾರ ಕೇಂದ್ರಗಳೂ, 4 ದೂರದರ್ಶನ ಪ್ರಸಾರ ಕೇಂದ್ರಗಳೂ ಇವೆ.

ಲೂಯಿಬರ್ಗ ಕೋಟೆ, ಪೋರ್ಟ ರಾಯಲ್‍ನಲ್ಲಿ ಚಾಂಪ್ಲೇನನ ವಸತಿ, ಹ್ಯಾಲಿಫಾಕ್ಸಿನ ದುರ್ಗ, ಅನಾಪೊಲಿಸ್ ಕಣಿವೆಯಲ್ಲಿನ ಅಲೆಗ್ಸಾಂಡರ್ ಗ್ರಹಾಂಬೆಲ್ ರಾಷ್ಟ್ರೀಯ ಇತಿಹಾಸ ಉದ್ಯಾನ. ಗ್ರಾನ್ ಪ್ರಿಸ್ಮಾರಕ ಇವು ಪ್ರೇಕ್ಷಣೀಯ. (ಎಸ್.ಎಸ್.ಎಂ.ಯು.)