ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೌಕಾಶಿಲ್ಪ

ವಿಕಿಸೋರ್ಸ್ದಿಂದ

ನೌಕಾಶಿಲ್ಪ - ಗ್ರಾಹಕರು ಬೇಡುವ ಆವಶ್ಯಕತೆಗಳನ್ನು ಒಳಗೊಂಡು ಅವರು ನಿಯೋಜಿಸುವ ಕರ್ತವ್ಯಗಳನ್ನು ನಿರ್ವಹಿಸಬಲ್ಲ ದೋಣಿ ಹಾಗೂ ಹಡಗುಗಳ ಆಲೇಖ್ಯ ನಿರ್ಮಾಣದ ಕಲೆ ಮತ್ತು ವಿಜ್ಞಾನ (ನೇವಲ್ ಆರ್ಕಿಟೆಕ್ಚರ್). ಬಲವಿಜ್ಞಾನ, ಜಲಗತಿವಿಜ್ಞಾನ ಮೊದಲಾದ ಅಸ್ವಿತ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ನೌಕಾಶಿಲ್ಪಿ ಪರಿಣತನಾಗಿರಬೇಕು. ಅಲ್ಲದೇ ಅವನೊಬ್ಬ ಕಲಾಪ್ರಜ್ಞೆ ಇರುವ ವ್ಯಕ್ತಿಯೂ ಆಗಿರುವುದು ಅವಶ್ಯ. ಏಕೆಂದರೆ ಕ್ರಿಯಾಶೀಲ ನೌಕೆ ವಿವಿಧ ವಿಜ್ಞಾನ ವಿಭಾಗಗಳ ಮೂರ್ತರೂಪವೊಂದೇ ಅಲ್ಲ, ಒಂದು ಸುಂದರ ಕಲಾಕೃತಿಯೂ ಹೌದು.

ಹಡಗಿನ ಉದ್ದೇಶವನ್ನು ಅವಲಂಬಿಸಿ ಅದರ ಬಿಡಿವಿವರಗಳನ್ನು ನಿರ್ಧರಿಸಲಾಗುವುದು. ಅದು ಯುದ್ಧ ನೌಕೆಯೇ, ಸವಾರಿ ಹಡಗೇ, ಸಾಮಾನು ಸರಂಜಾಮುಗಳನ್ನು ಒಯ್ಯುವ ಜಹಜೇ, ಹಿಮಗಡ್ಡೆಗಳನ್ನು ಭೇದಿಸಿ ಸಾಗಬೇಕಾದ ಮಾರ್ಗ ನಿರ್ಮಾಪಕ ನೌಕೆಯೇ ಇತ್ಯಾದಿ. ಇನ್ನು ಹಡಗು ಯಾನಮಾಡುವ ಸಮುದ್ರದ ಸ್ಥಿತಿಗತಿಗಳು, ನಿಲ್ಲಬೇಕಾದ ರೇವುಗಳಲ್ಲಿ ಒದಗುವ ಸೌಕರ್ಯಗಳು ಮುಂತಾದವನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕಾಗುವುದು. ಸ್ವಯಂಚಾಲಿತವಾಗಿ ನೌಕೆ ನೀರಮೇಲೆ ಹಾಯುವುದರಿಂದ ಹಡಗಿನ ನೋದನ (ಪ್ರೊಪಲ್ಷನ್), ಯುಕ್ತಿಚಾಲನೆ (ಮನೂವ್ರೆಬಲಿಟಿ) ಸ್ಥಿರತೆ (ಸ್ಟೆಬಿಲಿಟಿ). ನೀರಿನ ರೋಧ (ರೆಸಿಸ್ಟೆನ್ಸ್), ಸಮಗ್ರವಾಗಿ ಹಡಗಿನ ತ್ರಾಣ ಮೊದಲಾದವನ್ನು ವಿಶೇಷವಾಗಿ ಪರಿಗಣಿಸುವುದು ಅವಶ್ಯ. ನೆಲದ ಮೇಲಿನ ವಾಹನಗಳ ನಿರ್ಮಾಣಕ್ಕಿಂತ ಹೆಚ್ಚಿನ ಪರಿಶ್ರಮ ಹಾಗು ಕೌಶಲವನ್ನು ಈ ನೀರ ಮೇಲಿನ ತೇಲುವ ನಗರಗಳ ನಿರ್ಮಾಣ ಬೇಡುತ್ತದೆ.