ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೌಕಾ ಪವನವಿಜ್ಞಾನ

ವಿಕಿಸೋರ್ಸ್ದಿಂದ

ನೌಕಾ ಪವನವಿಜ್ಞಾನ - ಸಾಗರಗಳ ಮೇಲೆ ಜರಗುವ ವಾಯುಮಂಡಲದ ವಿವಿಧ ವಿದ್ಯಮಾನಗಳು, ತೆಟ್ಟೆ ಹಾಗೂ ಆಳ ಕಡಲನೀರಿನ ಮೇಲೆ ಅವುಗಳ ಪ್ರಭಾವ ಹಾಗೂ ವಾಯುಮಂಡಲದ ವಿದ್ಯಮಾನಗಳ ಮೇಲೆ ಸಮುದ್ರದ ಮೇಲ್ಮೈಯ ಪ್ರಭಾವ ಇವುಗಳ ಅಧ್ಯಯನ (ನೇವಲ್ ಮೀಟಿಯರಾಲಜಿ). ಇದು ಪವನ ವಿಜ್ಞಾನದ ಒಂದು ವಿಭಾಗ. ಸಾಗರ ಮತ್ತು ಅದರ ಮೇಲೆ ಹರಡಿರುವ ವಾಯುರಾಶಿ ಇವುಗಳ ನಡುವಿನ ಅಂತರಕ್ರಿಯೆ ಇಲ್ಲಿಯ ಪ್ರಧಾನ ಲಕ್ಷ್ಯ. ನೆಲರಾಶಿಯೂ ಜಲರಾಶಿಯೂ ಸೂರ್ಯ ವಿಕಿರಣಗಳಿಗೆ ಪ್ರತಿಸ್ಪಂದಿಸುವ ಬಗೆಗಳು ಬೇರೆ ಬೇರೆ. ಆದ್ದರಿಂದ ಒಂದೊಂದು ಕಡೆ ನಡೆಯುವ ಶಕ್ತಿ ವಿನಿಮಯ ಒಂದೊಂದು ತೆರನಾದದ್ದು. ಎಂದೇ ನೌಕಾಪವನವಿಜ್ಞಾನ ಪವನವಿಜ್ಞಾನದ ಒಂದು ಮುಖ್ಯ ವಿಭಾಗವಾಗಿ ಮೈದಳೆದಿದೆ. ಕಡಲ ಮೇಲೆ ಬೀಸುವ ಗಾಳಿ, ಉದಾಹರಣೆಗೆ, ನೆಲದ ಮೇಲೆ ಬೀಸುವ ಗಾಳಿಯಷ್ಟು ಸಂಕೀರ್ಣ ಪ್ರಭಾವಗಳಿಗೆ ಒಳಗಾಗುವುದಿಲ್ಲ. ಏಕೆಂದರೆ ನೆಲದ ಮೇಲೆ ಗುಂಡಿ ಗುಳುಪುಗಳು ಏರು ಏಣುಗಳು ಜಾಸ್ತಿ. ಕಡಲ ಮೇಲ್ಮೈ ಸಪಾಯವಾಗಿರುತ್ತದೆ. ನೆಲದಲ್ಲಿ ಉಷ್ಣತಾವ್ಯಾಪ್ತಿ ತೀವ್ರ ಏರಿಳಿತಗಳಿಗೆ ಈಡಾಗುವುದು-ಒಂದೇ ಎಡೆಯಲ್ಲಿ ವರ್ಷದ ಬೇರೆ ಬೇರೆ ದಿನಗಳಲ್ಲಿ ಅಥವಾ ಒಂದೇ ದಿನದಲ್ಲಿ ನೆಲದ ಬೇರೆ ಬೇರೆ ಎಡೆಗಳಲ್ಲಿ ಇದು ಸಂಭವಿಸಬಹುದು. ಉದಾಹರಣೆಗೆ 40oಅ ಉಷ್ಣತಾವ್ಯತ್ಯಾಸ ನೆಲದ ಮೇಲೆ ಅಪರೂಪವಿಲ್ಲ. ಕಡಲ ಹರವಿನ ಮೇಲೆ ಈ ತೆರನಾದ ತೀವ್ರ ಬದಲಾವಣೆಗಳು ಸಂಭವಿಸುವುದಿಲ್ಲವಾದ್ದರಿಂದ (ಅಲ್ಲಿ 10oಅ ಉಷ್ಣತಾ ವ್ಯತ್ಯಾಸವಾದರೆ ಹೆಚ್ಚು) ಜಲಾವಾಯುಮಂಡಲ ಶಕ್ತಿವಿನಿಮಯ ಸಹಜವಾಗಿ ಸ್ತಿಮಿತಸ್ಥಿತಿಯಲ್ಲಿರುವುದು. ಆದರೆ ತೀವ್ರ ಚಕ್ರವಾತ ಮತ್ತು ಜಂಝಾವಾತಗಳು ಸಮುದ್ರದ ಮೇಲೆ ಏಳುತ್ತವೆ. ಇವುಗಳಿಗೆ ಸಮವಾಗುವ ಇಂಥ ವಾತಗಳು ನೆಲದ ಮೇಲೆ ಎಂದೂ ಏಳುವುದಿಲ್ಲ.

ಸಾಗರಿಕ ಪವನವಿಜ್ಞಾನದಲ್ಲಿ ವಾಯುಮಂಡಲಕ್ಕೂ ಕಡಲಿಗೂ ನಡುವೆ ಸಾಕಷ್ಟು ವ್ಯುತ್ಕ್ರಮ ಸಂಬಂಧಗಳಿವೆ. ಇವು ನೌಕಾಚಲನೆಗಳ ಮೇಲೆ ಪ್ರಭಾವ ಬೀರುತ್ತವೆ. ಗಾಳಿ, ಅಲೆ ಮತ್ತು ಮೇಲ್ಮೈ ನೀರಿನ ಶಾಖರಚನೆ ಇವುಗಳ ನಡುವೆ ವಿಶೇಷವಾದ ಸಂಬಂಧ ಉಂಟು. ಇವುಗಳ ಸಂಯುಕ್ತ ಪರಿಣಾಮವಾಗಿ ವಿಭಿನ್ನ ಪಾರಗಳಿರುವ ಅಲೆಗಳು ಉದ್ಭವವಾಗುತ್ತವೆ. ಅಲೆಯ ಪಾರ ಏರಿದಂತೆ ಕಡಲು ಕದಡುವ ಆಳವೂ ಹೆಚ್ಚುತ್ತದೆ. ಇದರಿಂದ ಸುತ್ತಲಿನ ಉಷ್ಣತೆಯ ಮೇಲೆ ಆಗುವ ಪರಿಣಾಮವೂ ಹೆಚ್ಚು ಇದರ ಅಧ್ಯಯನ ಹವಾಮುನ್ಸೂಚನೆಗೆ ಸಹಾಯಕ. ನೌಕೆಗಳು ಸುಗಮ ಸಂಚಾರಕ್ಕೆ ಇದು ಅವಶ್ಯವಾದ ಮಾಹಿತಿ.