ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾನ್ಟ್ಸ್‌

ವಿಕಿಸೋರ್ಸ್ದಿಂದ

ನ್ಯಾನ್‍ಟ್ಸ್ - ಪಶ್ಚಿಮ ಫ್ರಾನ್ಸಿನಲ್‍ವಾರ್-ಅಟ್ಲಾಂಟೀಕ್ ಡಿಪಾರ್ಟ್‍ಮೆಂಟಿನ (ಆಡಳಿತ ವಿಭಾಗ) ಆಡಳಿತ ಕೇಂದ್ರ. ಲ್‍ವಾರ್ ನದಿಯ ಅಳಿವೆಯ ಶಿರೋಭಾಗದ ಬಳಿ, ಸಮುದ್ರದಿಂದ 56ಕಿಮೀ ದೂರದಲ್ಲಿ, ಪ್ಯಾರಿಸಿನ ನೈಋತ್ಯಕ್ಕೆ, ಉ.ಅ. 47º13 ಮತ್ತು ಪ.ರೇ.1º33, ಮೇಲೆ ಇದೆ. 20ನೆಯ ಶತಮಾನದಲ್ಲಿ ಬಹಳ ಮಟ್ಟಿಗೆ ಬದಲಾವಣೆಗೆ ಒಳಗಾದ ಈ ನಗರದ ಜನಸಂಖ್ಯೆ 2,69,400 (1971 ಅಂ.). ಈ ಸ್ಥಳವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡ ನೆಟಿಸ್ ಎಂಬ ಪ್ರಾಚೀನ ಗಾಲಿಕ್ ಜನಾಂಗದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ.

ರೋಮನರ ಕಾಲದಲ್ಲಿ ಇದೊಂದು ವಾಣಿಜ್ಯ ಕೇಂದ್ರವಾಯಿತು. ನಾರ್ಮನರು ಈ ಪಟ್ಟಣವನ್ನು ಕೊಳ್ಳೆಹೊಡೆದು 834 ರಿಂದ 936ರ ವರೆಗೂ ಆಕ್ರಮಿಸಿಕೊಂಡಿದ್ದರು. 1560ರಲ್ಲಿ ಫ್ರೆಂಚ್ ದೊರೆ 2ನೆಯ ಫ್ರಾನ್ಸಿಸ್ ಇದಕ್ಕೆ ಸಾಮುದಾಯಿಕ ಸಂವಿಧಾನವೊಂದನ್ನು ನೀಡಿದ. ಧರ್ಮ ಯುದ್ಧದ ಕಾಲದಲ್ಲಿ (1562-98) ಇದು ಕ್ಯಾತೊಲಿಕ್ ಲೀಗ್ ಸೇರಿತು. 1598ರಲ್ಲಿ 4ನೆಯ ಹೆನ್ರಿ ಇಲ್ಲಿಯ ಪ್ರಾಟಿಸ್ಟೆಂಟ್ ಜನಕ್ಕೆ ಧಾರ್ಮಿಕ ಹಾಗೂ ನಾಗರಿಕ ಸ್ವಾತಂತ್ರ ನೀಡುವ ಶಾಸನ ಹೊರಡಿಸಿದ. ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಇದು ದಬ್ಬಾಳಿಕೆಗೆ ಒಳಗಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಇದನ್ನು ಜರ್ಮನರು ಆಕ್ರಮಿಸಿಕೊಂಡಿದ್ದರು.

ನ್ಯಾನ್‍ಟ್ಸ್ ನಗರದ ಆಧುನೀಕರಣ ಯೋಜನೆ 1920ರಲ್ಲಿ ಜಾರಿಗೆ ಬಂತು. ಎರಡನೆಯ ಮಹಾಯುದ್ಧದಲ್ಲಿ ಈ ನಗರ ಭಾಗಶಃ ನಾಶಗೊಂಡಾಗ ಈ ನಗರವನ್ನು ಇನ್ನೂ ನವೀಕರಿಸಲಾಯಿತು. ನದಿಯ ಕವಲುಗಳನ್ನು ಭರ್ತಿಮಾಡಿ ರಸ್ತೆಗಳಾಗಿ ಪರಿವರ್ತಿಸಲಾಗಿದೆ. ನಗರದ ನಡುವೆ ಸಾಗುತ್ತಿದ್ದ ರೈಲುಹಾದಿ ಈಗ ಬಹುತೇಕ ಸುರಂಗಮಾರ್ಗದಲ್ಲಿ ಸಾಗುತ್ತದೆ. ಬಂದರು ವ್ಯಾಪಕವಾಗಿ ಪುನರ್ನಿರ್ಮಿತವಾಗಿದೆ. ರಸ್ತೆ, ವಿಮಾನ ಮತ್ತು ರೈಲು ಸಂಪರ್ಕಗಳು ಬೆಳೆದಿವೆ. ಕೈಗಾರಿಕಾ ವಲಯಗಳನ್ನು ನಿರ್ಮಿಸಲಾಗಿದೆ. ಬಂದರನ್ನು ವಿಸ್ತರಿಸಲಾಗಿದೆ. ದೊಡ್ಡ ಹಡಗುಗಳ ಯಾನ ಸಾಧ್ಯವಾಗುವಂತೆ ನದಿಯ ಪಾತ್ರವನ್ನು ತೋಡಲಾಗಿದೆ. ನೌಕಾಂಗಣ, ರಾಸಾಯನಿಕ, ರೈಲು ಮತ್ತು ವಿಮಾನ ಸಲಕರಣೆಯ ಕೈಗಾರಿಕೆಗಳು ಬೆಳೆದಿವೆ. 1460ರಲ್ಲಿ ಇಲ್ಲಿ ಸ್ಥಾಪಿತವಾಗಿದ್ದ ವಿಶ್ವವಿದ್ಯಾಲಯ ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ರದ್ದಾಯಿತು. 1961ರಲ್ಲಿ ಹೊಸ ವಿಶ್ವವಿದ್ಯಾಲಯವೊಂದು ಸ್ಥಾಪಿತವಾಯಿತು.

ಇಲ್ಲಿರುವ ಸೇಂಟ್ ಪಿಯರ್ ಕತೀಡ್ರಲ್ 15ರಿಂದ 20ನೆಯ ಶತಮಾನದ ಅವಧಿಯಲ್ಲಿ ಕಟ್ಟಲಾದ ಕಟ್ಟಡವಾದರೂ ಗಾತಿಕ್ ಲಕ್ಷಣವನ್ನು ಉಳಿಸಿಕೊಂಡಿದೆ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಬಾಂಬುಗಳಿಗೆ ಗುರಿಯಾದ ಈ ಕಟ್ಟಡವನ್ನು 1972ರ ವೇಳೆಗೆ ಬಹುತೇಕ ಪುನರ್ನಿಮಿಸಲಾಗಿತ್ತು. ಆಗ ಬೆಂಕಿ ಹೊತ್ತಿಕೊಂಡು ಅದರ ಚಾವಣಿ ಬಹಳ ಮಟ್ಟಿಗೆ ನಾಶವಾಯಿತು. 1458-88ರಲ್ಲಿ ಆಳುತ್ತಿದ್ದ ಬ್ರಿಟನಿಯ ಡ್ಯೂಕ್ 2ನೆಯ ಫ್ರಾನ್ಸಿಸನ ಪುನರುಜ್ಜೀವನ ಶೈಲಿಯ ಗೋರಿ ಸುಂದರವಾಗಿದೆ. ಯುದ್ಧದ ಕಾಲದಲ್ಲಿ ಇದು ನಾಶವಾಗಲಿಲ್ಲ. ಮಧ್ಯಯುಗದ ದುರ್ಗದ ಮನೆಯನ್ನು 1466ರಲ್ಲಿ 2ನೆಯ ಫ್ರಾನ್ಸಿಸ್ ಪುನರ್ನಿರ್ಮಿಸಿದ್ದ. ಹೊರಗಡೆಗೆ ಇದು ಕೋವಿಗಂಡಿಗಳಿರುವ ಗೋಪುರಗಳಿಂದ ಕೂಡಿದ ಕೋಟೆಯಂತೆ ಕಂಡರೂ ಇದರ ಒಳಾಂಗಣ ಪುನರುಜ್ಜೀವನ ಕಾಲದ ಅರಮನೆಯಂತೆ ನಿರ್ಮಿತವಾಗಿದೆ. ಮಸೀ ಡೆ ಬ್ಯೂ ಆಟ್ರ್ಸ್ ಫ್ರಾನ್ಸಿನ ಅತ್ಯಂತ ಪ್ರಮುಖ ಹಾಗೂ ವೈವಿಧ್ಯಮಯವಾದ ಕೃತಿಗಳನ್ನೊಳಗೊಂಡ ಕಲಾ ವಸ್ತು ಸಂಗ್ರಹಾಲಯ. (ಡಿ.ಎಸ್.ಜೆ.)