ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾನ - ಚೂಂಗ್

ವಿಕಿಸೋರ್ಸ್ದಿಂದ

ನ್ಯಾನ - ಚೂಂಗ - ಚೀನ ಜನತಾ ಗಣರಾಜ್ಯದ ಸೆಚ್ವವಾನ್ ಪ್ರಾಂತ್ಯದ ಒಂದು ನಗರ. ನ್ಯಾನ್-ಚೂಂಗ್ ಪ್ರದೇಶದ ಆಡಳಿತ ಕೇಂದ್ರ. ಉ.ಅ. 30-- ಮತ್ತು ಪೂ. ರೇ. 106 ನಲ್ಲಿ, ಯಾಂಗ್‍ಟ್ಸಿಯ ಉಪನದಿಯಾದ ಜಿಯಾ-ಲಿಂಗ್‍ನ ಪಶ್ಚಿಮ ದಡದ ಮೇಲೆ ಇದೆ. ನ್ಯಾನ್-ಚುಂಗ್ ಪ್ರದೇಶಕ್ಕೆ ಜಿಯಾ-ಲಿಂಗ್ ನದೀ ಬಯಲಿನ 11 ಕೌಂಟಿಗಳು ಸೇರಿವೆ. ನ್ಯಾನ್-ಚೂಂಗ್‍ನಿಂದ 150 ಕಿಮೀ ದೂರದಲ್ಲಿ ಯಾಂಗ್‍ಟ್ಸೀ ನದಿಯ ದಂಡೆಯ ಮೇಲಿರುವ ಚಂಗ್‍ಕಿಂಗ್‍ಗೆ ಇಲ್ಲಿಂದ ನೌಕಾಯಾನ ಸೌಲಭ್ಯವಿದೆ. ಉತ್ತರದ ಕಡೆ ರಸ್ತೆಗಳ ಮೂಲಕ ದಕ್ಷಿಣ ಷೆನ್ಸಿ ಪ್ರಾಂತ್ಯಕ್ಕೆ ಸಂಪರ್ಕವಿದೆ.

ಚೀನದ ಸುಯಿ ರಾಜಸಂತತಿಯ ಆಳ್ವಿಕೆಯಲ್ಲಿ (581-618) ನ್ಯಾನ್-ಚೂಂಗ್ ಅಸ್ತಿತ್ವದಲ್ಲಿತ್ತು. ಹಳೆಯ ಪಟ್ಟಣ ಜಿಯಾ-ಲಿಂಗ್ ನದಿಯ ಮೇಲ್ದಂದಡೆಯಲ್ಲಿ ಈಗಿನ ನಗರದ ಸ್ಥಳದಿಂದ 20 ಕಿಮೀ.ದೂರದಲ್ಲಿತ್ತು. ಈಗಿನ ಪಟ್ಟಣ ಮಿಂಗ್ ಸಂತತಿಯ ಅರಸರ ಕಾಲದಿಂದ (1368-1644) ಉಳಿದುಬಂದಿದೆ. ಸುತ್ತಣ ವ್ಯವಸಾಯ ಪ್ರದೇಶಗಳಿಗೆ ನ್ಯಾನ್-ಚೂಂಗ್ ಮುಖ್ಯ ಮಾರುಕಟ್ಟೆ. ಚಂಗ್‍ಕಿಂಗ್ ಪಟ್ಟಣಕ್ಕೆ ಇಲ್ಲಿಂದ ಬತ್ತ, ಗೆಣಸು, ಹತ್ತಿ, ಸಣಬು ಮತ್ತು ಹೊಗೆಸೊಪ್ಪು ಸಾಗುತ್ತದೆ. ರೇಷ್ಮೆ ಕೈಗಾರಿಕೆಯಲ್ಲಿ ಸೆಚ್‍ವಾನ್ ಪ್ರಾಂತ್ಯದ ಪಟ್ಟಣಗಳಲ್ಲಿ ನ್ಯಾನ್-ಚೂಂಗ್ ಪ್ರಮುಖ. ಇಲ್ಲಿ ಅರಗಿನ ಸರಕುಗಳ ತಯಾರಿಕೆಯಾಗುತ್ತದೆ. 1958ರಲ್ಲಿ ನ್ಯಾನ್-ಚೂಂಗ್ ಪ್ರದೇಶದಲ್ಲಿ ಪೆಟ್ರೋಲ್ ಪತ್ತೆಯಾಯಿತು. ಈಗ ಇದನ್ನು ಅಧಿಕವಾಗಿ ಉತ್ಪಾದಿಸಲಾಗುತ್ತಿದೆ. ನಗರದ ದಕ್ಷಿಣದಲ್ಲಿ ಕಲ್ಲಿದ್ದಲ ನಿಕ್ಷೇಪಗಳಿವೆ. ನರಗರದ ಜನಸಂಖ್ಯೆ 2,06,000. (ವಿ.ಜಿ.ಕೆ.)